Connect with us

ಲೈಫ್ ಸ್ಟೈಲ್

‘ಕೊರೋನ ವೈರಸ್’ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು ; ಮಿಸ್ ಮಾಡ್ದೆ ಈ ಲೇಖನ ಓದಿ..!

Published

on

  • ಡಾ. ಸಂತೋಷ್. ಕೆ. ಬಿ.

ಲ್ಲರ ಬಾಯಲ್ಲೂ ಕೊರೋನಾದೇ ಸುದ್ದಿ. 2019ರ ವಿದಾಯದಲ್ಲಿ ಚೀನಾ ದೇಶವನ್ನು ಮಾತ್ರವೇ ಕಾಡಿದ ಕೊರೋನ, ಇದೀಗ ಭಾರತವನ್ನೂ ಹಬ್ಬಿದೆ. ಅದರಲ್ಲೂ ನಮ್ಮ ಸುತ್ತಮುತ್ತಲಿನವರಲ್ಲಿಯೇ ಎನಾದರೂ ಕೊರೋನ ಇದ್ದರೆ ಎಂಬ ಭಯ ಎಲ್ಲರಲ್ಲೂ ಮನೆ ಮಾಡಿದೆ. ಕಾರಣ ಅದರ ಅಸಾಮಾನ್ಯ ಸಾಂಕ್ರಾಮಿಕ ಗುಣ.

ಕೊರೋನ ವೈರಸ್ ಡಿಸೀಸ್ 2019, ಕೋವಿಡ್-19, ನೋವೆಲ್ ಕೊರೋನ ವೈರಸ್,
SARS CoV-2 ಎಂದೆಲ್ಲಾ ಕರೆಯಲ್ಪಡುವ ಈ ಸಾಂಕ್ರಾಮಿಕ ಖಾಯಿಲೆ, 2019ರ ಅಂತ್ಯ ಮತ್ತು 2020ರ ಆರಂಭದಲ್ಲಿ ದೇಶ – ವಿದೇಶಗಳಲ್ಲಿ ಹರಡಿಕೊಂಡಿರುವ ಒಂದು ವೈರಸ್ ಸೋಂಕು. ಚೀನಾ ದೇಶದಲ್ಲಿ ಒಂದು ಸಣ್ಣ ಅವಧಿಯಲ್ಲಿ ಸಾಕಷ್ಟು ಜನರಿಗೆ ಹಬ್ಬಿದ ನಂತರ ಚೀನಾ ದೇಶವು ವಿಶ್ವ ಆರೋಗ್ಯ ಸಂಸ್ಥೆಗೆ ನೋಟಿಫಿಕೇಶನ್ ಸಲ್ಲಿಸಿತು.

ನಂತರ, ಅಮೇರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಅದೇ ವೈರಸ್ ಸೋಂಕು ತಗುಲಿದ್ದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ಕೊರೋನ ವೈರಸ್ ಡಿಸೀಸ್ 2019 ನ್ನು ಒಂದು ಪ್ಯಾಂಡೆಮಿಕ್ ಖಾಯಿಲೆ ಅಂದರೆ, ದೇಶದಾದ್ಯಂತ ಅಥವಾ ವಿಶ್ವದಾದ್ಯಂತ ಹರಡಬಹುದಾದ ಸೋಂಕು ಎಂದು ಘೋಷಿಸಿತು. ಇದೊಂದು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಸೋಂಕಾಗಿದೆ.

ವೈರಸ್ ಹರಡಬಹುದಾದ ಜಾಗಗಳು

  • ಸಾರ್ವಜನಿಕ ಪ್ರಯಾಣ, ಸಾಮಾಜಿಕ ಕಾರ್ಯಕ್ರಮಗಳು, ಜನಸಂದಣಿಯಿಂದ ಕೂಡಿರುವ ಪ್ರದೇಶಗಳು.

ಯಾರಲ್ಲಿ ಕಂಡುಬರಬಹುದು?

  • ಇತ್ತೀಚಿನ ಯಾವುದಾದರೂ ಕೊರೋನ ಹರಡಿರುವ ಪ್ರದೇಶಕ್ಕೆ ಕಳೆದ 14 ದಿನಗಳಲ್ಲಿ ಪ್ರಯಾಣ ಬೆಳೆಸಿದವರು.
  • ಕೊರೋನ ಎಂದು ಖಾತ್ರಿಯಾದ ಅಥವಾ ಸಂಶಯಾಸ್ಪದ ಯಾವುದೇ ವ್ಯಕ್ತಿಯ ಜೊತೆ ಕಳೆದ 14 ದಿನಗಳಲ್ಲಿ ಸಂಪರ್ಕ ಹೊಂದಿದವರು.
  • ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರು.

ಸೋಂಕಿನ ಲಕ್ಷಣಗಳು

  1. ಜ್ವರ(83%), ಕೆಮ್ಮು(82%), ಉಸಿರಾಟದ ತೊಂದರೆ (31%), ಗಂಟಲು ಕಡಿತ(5%), ಶೀತ(4%), ಭೇದಿ(2%)
    ಇವೆಲ್ಲವೂ ಸಾಮಾನ್ಯವಾಗಿ ಕಂಡುಬರುವ ಗುಣಲಕ್ಷಣಗಳೇ ಆದರೂ ಇವುಗಳೊಂದಿಗೆ ಯಾವುದಾದರೂ ಊರಿಗೆ ಪ್ರಯಾಣ ಬೆಳೆಸಿದವರು ಅಥವಾ ಕೊರೋನ ಶಂಕಿತ ವ್ಯಕ್ತಿಯೊಂದಿಗಿನ ಸಂಪರ್ಕ ಇದ್ದಲ್ಲಿ ಕೊರೋನ ಇರುವ ಸಾಧ್ಯತೆಗಳು ಹೆಚ್ಚು ಎಂದು ಪರಿಗಣಿಸಬಹುದು.ಸೋಂಕಿನ ಲಕ್ಷಣಗಳು ಕಂಡುಬರಲು ವೈರಸ್ ದೇಹದೊಳಗೆ ಸೇರಿ ಸುಮಾರು14 ದಿನಗಳವರೆಗೂ ಸಮಯ ಬೇಕಾಗಬಹುದು.
  2. ಅತೀ ಚಿಕ್ಕ ವಯಸ್ಸಿನವರಲ್ಲಿ, ವಯಸ್ಸಾದವರಲ್ಲಿ, ಮೊದಲೇ ಮಧುಮೇಹ ಅಥವಾ ಶ್ವಾಸಕೋಶದ ತೊಂದರೆ ಅಥವಾ ಹೃದಯ ಸಂಬಂಧಿತ ರೋಗ ಉಳ್ಳವರಲ್ಲಿ ಈ ಸೋಂಕು ಅತೀ ತೀವ್ರವಾಗಿ ಕಾಣಿಸಿಕೊಳ್ಳಬಹುದು.

ಸೋಂಕು ನಿರ್ಣಯ

  1. ರಕ್ತಪರೀಕ್ಷೆ : ಬಿಳಿ ರಕ್ತಕಣಗಳು ಕಡಿಮೆಯಾಗುವುದು, ಮೂತ್ರಪಿಂಡ ಹಾಗೂ ಲಿವರ್ ನ ಕಾರ್ಯಕ್ಷಮತೆ ಕಡಿಮೆಯಿರುವ ಅಂಶಗಳು ಮತ್ತು ರಕ್ತದಲ್ಲಿ ಸೋಂಕಿನ ಮೂಲ ಮತ್ತು ಪ್ರಮಾಣವನ್ನು ತಿಳಿಯಲು ಬೇಕಾದ ಸಿ.ಆರ್.ಪಿ., ಪ್ರೊಕ್ಯಾಲ್ಸಿಟೊನಿನ್, ಎಲ್.ಡಿ.ಎಚ್ ಗಳಂತಹ ಪರೀಕ್ಷೆಗಳು.
  2. ಎಕ್ಸ್ರೇ: ಸೋಂಕಿನ ಪ್ರಭಾವದಿಂದ ಹಾನಿಗೊಳಗಾದ ಶ್ವಾಸಕೋಶಗಳ ಅಂಗಾಂಶಗಳನ್ನು ಕಾಣಬಹುದು.
  3. ಶ್ವಾಸಕೋಶಗಳ ಪರಿಸ್ಥಿತಿಯನ್ನು ತಿಳಿಯಲು ಕೆಲವೊಮ್ಮೆ ಇನ್ನೂ ಹೆಚ್ಚಿನ ಪರೀಕ್ಷೆಗಳು ಅಂದರೆ ಸಿ.ಟಿ.ಸ್ಕ್ಯಾನ್ ಕೂಡ ಅವಶ್ಯಕವಾಗಬಹುದು.
  4. ಇದೆಲ್ಲವೂ ಕೇವಲ ಸೋಂಕಿನ ಪ್ರಭಾವದಿಂದ ದೇಹದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ತಿಳಿಯುವ ಪರೀಕ್ಷೆಗಳು ಮಾತ್ರ. ಆದರೆ, ಸೋಂಕನ್ನು ನಿರ್ಣಾಯಕ ತಿಳಿದುಕೊಳ್ಳಬೇಕೆಂದರೆ ಕೊರೋನ ವೈರಸ್‌ನ ಪಿ. ಸಿ. ಆರ್. ಎಂಬ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಕೆಲವೇ ಪ್ರಯೋಗಾಲಯಗಳಲ್ಲಿ ಮಾಡಲಾಗುತ್ತಿದೆ.

ಕೊರೋನಾ ಲಕ್ಷಣಗಳು

ಚಿಕಿತ್ಸೆ

  • ಕೊರೋನ ಎಂದು ಶಂಕಿತ ಅಥವಾ ಸೋಂಕಿತನೆಂದು ತಿಳಿದ ಕೂಡಲೇ ಚಿಕಿತ್ಸೆಯ ಮೊಟ್ಟಮೊದಲನೇ ಹೆಜ್ಜೆ ಆ ವ್ಯಕ್ತಿಯನ್ನು ಪ್ರತ್ಯೇಕಿಸುವುದು. ಮತ್ತು ಇದೊಂದು ಸಾಂಕ್ರಾಮಿಕ ಸೋಂಕಾಗಿರುವುದರಿಂದ ವೈದ್ಯರು ನೀಡುವ ಚಿಕಿತ್ಸೆ ಅಥವಾ ಪರೀಕ್ಷೆಗಳಿಗೆ ಸಹಕರಿಸುವುದು.
  • ಕೊರೋನ ವೈರಸ್‌ನ ಪಿ. ಸಿ. ಆರ್. ಪರೀಕ್ಷೆಗಾಗಿ ಮೂಗು, ಗಂಟಲು ಅಥವಾ ಶ್ವಾಸಕೋಶದ ಮಾದರಿಯನ್ನು ಪಿ.ಸಿ.ಆರ್. ವ್ಯವಸ್ಥಿತ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ. ಇದರ ಫಲಿತಾಂಶಕ್ಕಾಗಿ ಕೆಲವು ದಿನಗಳವರಗೆ ಕಾಯಬೇಕಾಗಬಹುದು.
  • ರೋಗಿಯ ಪರಿಸ್ಥತಿಗೆ ತಕ್ಕ ಹಾಗೆ ಆಮ್ಲಜನಕದ ಜೊತೆಗೆ ಇನ್ನೂ ಉಸಿರಾಟದ ತೊಂದರೆಯನ್ನು ನೀಗಿಸಲು ಉಸಿರಾಟದ ಯಂತ್ರಗಳ ಚಿಕಿತ್ಸೆಯೂ ಬೇಕಾಗಬಹುದು. ಆಗ ರೋಗಿ ಪರಿಸ್ಥಿತಿ ಗಂಭೀರವಾಗಿರುತ್ತದೆ.
  • ವೈರಸ್ ಅನ್ನು ಹೋಗಲಾಡಿಸುವ ಪ್ರಯತ್ನದ ಸಲುವಾಗಿ ವಿವಿಧ ಆಂಟಿವೈರಲ್ ಚಿಕಿತ್ಸೆಯೂ ಬೇಕಾಗಬಹುದು. ಆದರೆ ಕೋರೋನ ವೈರಸ್ ಬಾರದಂತೆ ತಡೆಯುವುದಕ್ಕೆ ಅಥವಾ ಚಿಕಿತ್ಸೆಗೆ ಬೇಕಾದ ಅಧಿಕೃತ ಯಾವುದೇ ಆಂಟಿವೈರಲ್ ಧಾತುವನ್ನು ಈವರೆಗೂ ಸಂಶೋಧಿಸಲಾಗಿಲ್ಲ ಮತ್ತು ಸಂಶೋಧನೆ ಇನ್ನೂ ಪ್ರಗತಿಯಲ್ಲಿದೆ.

ಮುಂಜಗ್ರತಾ ಕ್ರಮಗಳು

  1. ಈ ಮೇಲೆ ತಿಳಿಸಿರುವ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯುವುದು. ಕೆಮ್ಮುವ, ಸೀನುವ, ಅಥವಾ ಮಾತನಾಡುವ ವೇಳೆ ವೈಜ್ಞಾನಿಕವಾಗಿ ಕನಿಷ್ಟ 0.5ರಿಂದ 2 ಮೀಟರ್‌ನಷ್ಟು ಅಂತರ ಕಾಪಾಡಿಕೊಳ್ಳುವುದು. ಮತ್ತು ಇನ್ನೊಬ್ಬರಿಗೆ ಹರಡದಂತೆ ಕ್ರಮ ವಹಿಸುವುದು. ಮೂಗು, ಬಾಯಿಗಳನ್ನು ಕರ್ಚಿಫ್, ಮಾಸ್ಕ್ ಗಳಿಂದ ಮುಚ್ಚಿಕೊಳ್ಳುವುದು. ಮತ್ತು ಮನೆಯಿಂದ ಹೊರಗೆ ಬಾರದಂತೆ ಮನೆಯೊಳಗೇ ಸ್ವ ಇಚ್ಚೆಯಿಂದ ಪ್ರತ್ಯೇಕ  (Home Quarantine)ವಾಗುವುದು.
  2. ಕೈಗಳನ್ನು ಸರಿಯಾಗಿ ಸಾಬೂನು, ಇನ್ನಿತರ ಅದಕ್ಕೆಂದೇ ತಯಾರಿಸಿರುವ ಸಲ್ಯೂಷನ್ ಗಳಿಂದ ತೊಳೆದುಕೊಳ್ಳುವುದು.
  3. ಈ ಮಧ್ಯದಲ್ಲಿ ಯಾವುದಾದರೂ ಊರಿಗೆ ಪ್ರಯಾಣ ಬೆಳೆಸಿದ್ದರೆ ಶಂಕಿತ ಅಥವಾ ಸೋಂಕಿತನೆಂದು ತಿಳಿದ ವ್ಯಕ್ತಿಯೊಂದಿಗಿನ ಸಂಪರ್ಕವಿದ್ದರೆ ವೈದ್ಯರಿಗೆ ಅಥವಾ ಆರೋಗ್ಯ ಇಲಾಖೆಯ ಯಾವುದೇ ಅಧಿಕಾರಿಗೆ ಮೊದಲೇ ತಿಳಿಸುವುದು.
  4. ಮದುವೆಗಳು, ಸಾಮಾಜಿಕ ಕಾರ್ಯಕ್ರಮಗಳು, ದೂರದೂರಿಗೆ ಪ್ರಯಾಣಗಳಿಗೆ ಆದಷ್ಟು ಕಡಿವಾಣ ಹಾಕುವುದು.

(ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಡಾ. ಸಂತೋಷ್ ಅವರ ಈ  ಇಮೇಲ್ ಗೆ ಕಳಿಸಿ. santhosh.achar15892@gmail.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025

Published

on

Photo Gallery: ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025'

ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.

ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.

ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
 

ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.

ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.

ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿ‌ಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.

 

ವಸ್ತು ಪ್ರದರ್ಶನ

 

ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.

 

ದೇಸೀ ಆಟಗಳು

 

ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.

ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

Janapada Utsava Channagiri Govt collage (24)
Continue Reading

ದಿನದ ಸುದ್ದಿ

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

Published

on

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending