Connect with us

ದಿನದ ಸುದ್ದಿ

ಭ್ರಷ್ಟಾಚಾರದ ವಿರುದ್ಧ ಶಂಕರ್ ಇನ್ನೊಂದು ಹೋರಾಟ!

Published

on

  • ಚೇತನ್ ನಾಡಿಗೇರ್

ಣಿರತ್ನಂ ಏನೇ ಮಾಡಲಿ, ಯಾವುದೇ ಚಿತ್ರ ತೆಗೆಯಲಿ, ಅದರ ಮೂಲ ಸೆಲೆ ಪ್ರೀತಿಯಾಗಿರುತ್ತದೆ. ಪ್ರೀತಿಯ ಬೇರೆಬೇರೆ ವ್ಯಾಖ್ಯಾನಗಳನ್ನು, ಬೇರೆಬೇರೆ ಹಿನ್ನೆಲೆಯಲ್ಲಿ ಮಣಿರತ್ನಂ ಪ್ರತಿಚಿತ್ರದಲ್ಲೂ ಹೇಳುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅದೇ ರೀತಿ, ರಾಮ್‍ಗೋಪಾಲ್‍ ವರ್ಮ ಏನೇ ಚಿತ್ರ ಮಾಡಿದರೂ, ಕ್ರೈಮ್‍ ಹಿನ್ನೆಲೆಯಲ್ಲೇ ಮಾಡುತ್ತಾರೆ. ಹೀಗೆ ಬೇರೆಬೇರೆ ನಿರ್ದೇಶಕರು ಒಂದೇ ವಿಷಯವನ್ನಿಟ್ಟುಕೊಂಡು ಬೇರೆಬೇರೆ ರೀತಿ ವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಈಗ್ಯಾಕಪ್ಪಾ ಈ ಮಾತು ಎಂದರೆ, ಶಂಕರ್ ನಿರ್ದೇಶನದ ‘ಇಂಡಿಯನ್‍ 2’ ನಾಳೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ತಮ್ಮದೇ ಯಶಸ್ವಿ ಚಿತ್ರ ‘ಇಂಡಿಯನ್‍’ನ ಮುಂದುವರೆದ ಭಾಗ ಇದು. ಆ ಚಿತ್ರ ಬಿಡುಗಡೆಯಾಗಿ 26 ವರ್ಷಗಳ ನಂತರ ‘ಇಂಡಿಯನ್‍ 2’ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿಷಯವನ್ನಿಟ್ಟುಕೊಂಡು ಶಂಕರ್‍ ನಿರ್ದೇಶಿಸುತ್ತಿರುವ ಏಳನೇ ಚಿತ್ರ ಇದು.

ಶಂಕರ್‍ ಚಿತ್ರಗಳೆಂದರೆ ಅದ್ಧೂರಿತನ, ಹಿಟ್‍ ಹಾಡುಗಳು, ದೊಡ್ಡ ಕ್ಯಾನ್ವಾಸ್‍, ಮಾಸ್ ಅಂಶಗಳು ಇವೆಲ್ಲವೂ ಕಾಣುತ್ತದೆ. ಅದೇ ರೀತಿ ಗಮನಸೆಳೆಯುವ ಒಂದು ವಿಷಯವೆಂದರೆ, ಅದು ಭ್ರಷ್ಟಾಚಾರದ ವಿರುದ್ಧ ಶಂಕರ್‍ ನಿರಂತರ ಹೋರಾಟ. ತಮ್ಮ ನಿರ್ದೇಶನದ ಮೊದಲ ಚಿತ್ರದಿಂದಲೂ ಶಂಕರ್‍ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ. ಶಂಕರ್‍ ಈ 31 ವರ್ಷಗಳಲ್ಲಿ ನಿರ್ದೇಶಿಸಿರುವುದು ಕೇವಲ 14 ಚಿತ್ರಗಳನ್ನು. ಆ ಪೈಕಿ ಏಳು ಚಿತ್ರಗಳು ಭ್ರಷ್ಟಾಚಾರ ಎಂಬ ವಿಷಯವನ್ನಿಟ್ಟುಕೊಂಡು ಮೂಲವಾಗಿಟ್ಟುಕೊಂಡು ಮಾಡಲಾಗಿದೆ.

ಈ ಪ್ರಯಾಣ ಶುರುವಾಗಿದ್ದು 1993ರಲ್ಲಿ ಬಿಡುಗಡೆಯಾದ ‘ಜಂಟಲ್‍ಮ್ಯಾನ್’ ಚಿತ್ರದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಕಥೆ ಮಾಡಿದ್ದರು. ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಲಂಚಾವತಾರದಿಂದ ಹೇಗೆ ಪ್ರತಿಭಾವಂತ ಯುವಕರು ಅವಕಾಶವಂಚಿತರಾಗುತ್ತಿದ್ದಾರೆ ಎಂದು ಹೇಳಿದರು. ಒಬ್ಬ ಸಾಮಾನ್ಯ ಮನುಷ್ಯ ಹೇಗೆ ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ ಎಂದು ತೋರಿಸಿದ್ದರು. ಆ ನಂತರ ‘ಇಂಡಿಯನ್‍’, ‘ಮುದಲ್ವನ್‍’, ‘ಅನ್ನಿಯನ್‍’, ‘ಶಿವಾಜಿ: ದಿ ಬಾಸ್‍’ ಮತ್ತು ‘ಇಂಡಿಯನ್‍ 2’ ಚಿತ್ರಗಳ ಮೂಲಕ ಅವರು ಇದೇ ವಿಷಯವನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

ವಿಷಯ ಅದೇ ಭ್ರಷ್ಟಾಚಾರ ಅಥವಾ ಲಂಚಾವತಾರವಿರಬಹುದು. ಅದೇ ವಿಷಯವನ್ನಿಟ್ಟುಕೊಂಡು ಶಂಕರ್‍ ಬೇರೆಬೇರೆ ರೀತಿಯಲ್ಲಿ ಕಮರ್ಷಿಯಲ್‍ ಆಗಿ ಚಿತ್ರಗಳನ್ನು ರೂಪಿಸಿರುವುದಿದೆಯಲ್ಲಾ ಅದು ವಿಶೇಷ ಎನಿಸುತ್ತದೆ. ‘ಇಂಡಿಯನ್‍’ನಲ್ಲಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ. ತನ್ನ ಮಗನೇ ದೊಡ್ಡ ಭ್ರಷ್ಟ ಎಂದು ಗೊತ್ತಾದಾಗ ಅವನನ್ನೇ ಸಾಯಿಸುತ್ತಾನೆ. ‘ಮುದಲ್ವನ್’ ಎಂಬ ಚಿತ್ರದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಒಂದು ದಿನದ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ತಡೆಯುವ ಪ್ರಯತ್ನವನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಾನೆ. ‘ಅನ್ನಿಯನ್‍’ನಲ್ಲಿ ಭ್ರಷ್ಟಾಚಾರ, Multiple Personality Disorder ಮತ್ತು ಗರುಡ ಪುರಾಣವನ್ನು ಶಂಕರ್‍ ಸೇರಿಸಿ ಕಥೆ ಮಾಡಿರುವ ರೀತಿಯೇ ವಿಶಿಷ್ಟ. ‘ಶಿವಾಜಿ’ಯಲ್ಲಿ ನೂರಾರು ಕೋಟಿ ಆಸ್ತಿ ಇರುವ ಶ್ರೀಮಂತನೊಬ್ಬ ಈ ವ್ಯವಸ್ಥೆಯಿಂದ ಬೇಸತ್ತು ಹೋರಾಟಕ್ಕೆ ಇಳಿಯುತ್ತಾನೆ. ಈಗ ‘ಇಂಡಿಯನ್‍ 2’ ಚಿತ್ರದಲ್ಲಂತೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಎಂದು Second War of Independence ಬಣ್ಣಿಸಿದ್ದಾರೆ. ಅಲ್ಲಿಗೆ ಭ್ರಷ್ಟಾಚಾರದ ವಿರುದ್ಧ ಶಂಕರ್‍ ಮತ್ತೊಂದು ಹೋರಾಟ ಶುರು ಮಾಡಿದ್ದಾರೆ.

ಇಷ್ಟಕ್ಕೂ ಶಂಕರ್‍ ಯಾಕೆ ಈ ವಿಷಯದ ಮೇಲೆ ಮೇಲಿಂದ ಮೇಲೆ ಸಿನಿಮಾ ಮಾಡುತ್ತಾರೆ? ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಯಾವುದೇ ವಿಷಯ ನನ್ನನ್ನು ಕಾಡಿದರೂ, ಆ ಕುರಿತು ಕಥೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಈ ಭ್ರಷ್ಟಾಚಾರ ನನ್ನನ್ನು ಪದೇಪದೇ ಕಾಡಿದೆ. ಅದನ್ನು ಕಮರ್ಷಿಯಲ್‍ ರೂಪದಲ್ಲಿ, ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಒಂದು ವಿಷಯ ಸ್ಪಷ್ಟವಾದ ಮೇಲೆ, ಅದನ್ನು ಹೇಗೆ ತರಬೇಕು ಎಂದು ಯೋಚಿಸುತ್ತೇನೆ. ಪ್ರೇಕ್ಷಕರ ದೃಷ್ಟಿಕೋನದಿಂದ ಯೋಚಿಸುವುದಕ್ಕೆ ಪ್ರಯತ್ನಿಸುತ್ತೇನೆ. ಅವರಿಗೆ ಬೋರ್‍ ಆಗಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮಾಡುತ್ತಾ ಹೋಗುತ್ತೇನೆ’ ಎಂದು ಹೇಳಿಕೊಂಡಿದ್ದಾರೆ ಶಂಕರ್.

ಬಹುಶಃ ಅದೇ ಅವರ ಯಶಸ್ಸು ಎನ್ನಬಹುದೇನೋ? ಶಂಕರ್‍ ಒಂದು ಚಿತ್ರದ ಕಥೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ, ಮನರಂಜನಾತ್ಮಕ ಅಂಶಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಕೆಲವೊಮ್ಮೆ ಶಂಕರ್‍ ಪಾತ್ರಗಳು Larger than life ಎಂದನಿಸಬಹುದು. ಕೆಲವೊಮ್ಮೆ ತುಂಬಾ exaggeration ಅಂತನಿಸಬಹುದು. ಒಂದು ದಿನಕ್ಕೆ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾ? ಪಾರ್ಥಸಾರಥಿ ರಾಮಾನುಜ ಅಯ್ಯಂಗಾರ್‍ಗೆ ಅನ್ನಿಯನ್‍ ಆಗುವುದಕ್ಕೆ ಸಾಧ್ಯವಾ? 78ರ ವೃದ್ಧನೊಬ್ಬ ಸೇನಾಪತಿಯಾಗಿ ಹಾಗೆ ಹೊಡೆದಾಡುವುದಕ್ಕೆ ಸಾಧ್ಯವೇ? ಈ ಪ್ರಶ್ನೆಗಳು ಬರಬಹುದು. ತಾರ್ಕಿಕವಾಗಿ ನೋಡಿದರೆ ಇದು ಕಷ್ಟ. ಆದರೆ, ಶಂಕರ್ ಲಾಜಿಕ್‍ಗಿಂತ ಮ್ಯಾಜಿಕ್‍ನಲ್ಲಿ ನಂಬಿಕೆ ಇಟ್ಟವರು. ಏನೇನೋ ಮ್ಯಾಜಿಕ್‍ ಮಾಡಿ ಪ್ರೇಕ್ಷಕರನ್ನು ನಂಬಿಸುತ್ತಾರೆ. ತಮ್ಮ ಪ್ರಪಂಚದಲ್ಲಿ ಎಳೆದುಕೊಳ್ಳುತ್ತಾರೆ.

ಈಗೆಲ್ಲಾ Cinematic Universeಗಳ ಕಾಲ. ಯಶ್‍ರಾಜ್‍ ಸ್ಪೈ ಯೂನಿವರ್ಸ್‍, ಲೋಕೇಶ್‍ ಕನಕರಾಜ್‍ ಯೂನಿವರ್ಸ್, ರೋಹಿತ್‍ ಶೆಟ್ಟಿ ಪೊಲೀಸ್‍ ಯೂನಿವರ್ಸ್‍ಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ, ಕೆಲವು ವರ್ಷಗಳ ಹಿಂದೆಯೇ ‘ಇಂಡಿಯನ್‍’ನ ಸೇತುಪತಿ, ‘ಶಿವಾಜಿ: ದಿ ಬಾಸ್‍’ನ ಶಿವಾಜಿ ಮತ್ತು ‘ಮುದಲ್ವನ್‍’ನ ಪುಗಳೇಂದಿಯನ್ನಿಟ್ಟುಕೊಂಡು ಏಕೆ ಒಂದು ಚಿತ್ರ ಮಾಡಬಾರದು ಎಂದು ಅವರು ಕೆಲವು ವರ್ಷಗಳ ಹಿಂದೆಯೇ ಯೋಚಿಸಿದ್ದರಂತೆ. ಆದರೆ, ಸೂಕ್ತ ಪ್ರೋತ್ಸಾಹ ಸಿಗದ ಕಾರಣ ಸುಮ್ಮನಾದರಂತೆ.

ಈ ಕುರಿತು ಮಾತನಾಡಿರುವ ಅವರು, ‘2008ರಲ್ಲಿ ‘ಎಂದಿರನ್‍’ ಚಿತ್ರ ಮಾಡುವಾಗ, ಯಾಕೆ ನಾನೇ ಸೃಷ್ಟಿಸಿದ ಮೂರು ಪಾತ್ರಗಳನ್ನು ಒಂದೇ ಚಿತ್ರದಲ್ಲಿ ಯಾಕೆ ತರಬಾರದು ಎಂದನಿಸಿತು. ಒಂದು ಕ್ಷಣ ರೋಮಾಂಚನವಾಯ್ತು. ಖುಷಿಯಿಂದ ನನ್ನ ಸಹಾಯಕ ನಿರ್ದೇಕರನ್ನು ಕರೆದು ಐಡಿಯಾ ಹೇಳಿದೆ. ಅವರೆಲ್ಲರೂ ಇದು ಸಾಧ್ಯವಾ? ಎಂದು ಅನುಮಾನದಿಂದ ನೋಡಿದರು. ನಂತರ ಕೆಲವು ಹಿರಿಯ ತಂತ್ರಜ್ಞರಿಗೆ ಮತ್ತು ನನ್ನ ಸ್ನೇಹಿತರಿಗೆ ಹೇಳಿದೆ. ನನ್ನ ಮನಸ್ಸಿಗೆ ನೋವಾಗಬಹುದು ಎಂದು ಚೆನ್ನಾಗಿದೆ ಎಂದಷ್ಟೇ ಹೇಳಿ ಹೊರಟು ಹೋದರು. ಬಹುಶಃ ನನಗೆ ಆಗ ಪ್ರೋತ್ಸಾಹ ಸಿಕ್ಕಿದ್ದರೆ ಚಿತ್ರ ಮಾಡಿಬಿಟ್ಟಿರುತ್ತಿದ್ದೆನೇನೋ? ಕೆಲವು ವರ್ಷಗಳ ನಂತರ ‘ಅವೆಂಜರ್ಸ್’ ಚಿತ್ರ ನೋಡಿದಾಗ, ಅದು ಸಹ Marvel Cinematic Universeನ ಒಂದು ಭಾಗ ಆಗಿತ್ತು. ಒಂದು ಒಳ್ಳೆಯ ಐಡಿಯಾ ಇದ್ದರೆ, ತಕ್ಷಣವೇ ಅದನ್ನು ಕಾರ್ಯರೂಪಕ್ಕೆ ಇಳಿಸಬೇಕು ಎಂದು ನನಗೆ ಆಗ ಅರ್ಥವಾಯ್ತು. ಏಕೆಂದರೆ, ನಮ್ಮ ತರಹವೇ ಜಗತ್ತಿನಾದ್ಯಂತ ಹಲವರು ಹೊಸ ವಿಷಯಗಳ ಬಗ್ಗೆ ಯೋಚಿಸುತ್ತಿರುತ್ತಾರೆ. ಅವರು ಅದನ್ನು ಕಾರ್ಯರೂಪಕ್ಕೆ ತರುವ ಮುನ್ನ, ಮೊದಲು ನಾವು ಆ ಕೆಲಸ ಮಾಡಬೇಕು’ ಎಂದು ಹೇಳಿಕೊಂಡಿದ್ದಾರೆ ಶಂಕರ್‍.

Shankar Cinematic Universe ಯಾವತ್ತು ಕಾರ್ಯರೂಪಕ್ಕೆ ಬರುತ್ತದೋ ಗೊತ್ತಿಲ್ಲ. ಸೇತುಪತಿ, ಶಿವಾಜಿ ಮತ್ತು ಪುಗಳೇಂದಿಯನ್ನು ಒಟ್ಟಿಗೆ ಮುಂದಿಟ್ಟುಕೊಂಡು ಯಾವಾಗ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಭ್ರಷ್ಟಾಚಾರದ ವಿರುದ್ಧ ಶಂಕರ್ ತಮ್ಮ ಹೋರಾಟ ಮುಂದುವರೆಸಿದ್ದಾರೆ. ‘ಇಂಡಿಯನ್‍ 2’ ಬಿಡುಗಡೆಯಾಗಿ ಆರು ತಿಂಗಳಲ್ಲೇ ಅದೇ ಸೇತುಪತಿ, ‘ಇಂಡಿಯನ್‍ 3’ ಆಗಿ ಮತ್ತೆ ಬರಲಿದ್ದಾರೆ. ಅದಾಗಿ ಸ್ವಲ್ಪ ದಿನಗಳಿಗೆ ‘ಗೇಮ್‍ ಚೇಂಜರ್‍’ ಎಂಬ ರಾಮ್‍ಚರಣ್‍ ತೇಜ ಅಭಿನಯದ ಇನ್ನೊಂದು ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸಲಿದ್ದಾರೆ. ಪಾತ್ರಗಳು ಬದಲಾಗಬಹುದು, ಶಂಕರ್‍ ಹೋರಾಟ ಮಾತ್ರ ನಿರಂತರವಾಗಿ ಮುಂದುವರೆಯುತ್ತಿರುವುದು ವಿಶೇಷ. (ಬರಹ : ಚೇತನ್ ನಾಡಿಗೇರ್, ಫೇಸ್‌ಬುಕ್‌ ಬರಹ)ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ

Published

on

ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗಬಾರದು ಹಾಗೂ ಆನ್‌ಲೈನ್ ಪೇಮೆಂಟ್ ಬಳಸದವರ ಅನಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಹೇಳಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂಪಾಯಿ ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಗೃಹ ಜ್ಯೋತಿಯೋಜನೆ ಅಡಿ ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರ ಹಿಂಬಾಕಿ ಶೂನ್ಯವಿದ್ದಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳಲು ಸೆಪ್ಟೆಂಬರ್ 17ಕ್ಕೆ ಸಂಪುಟ ಸಭೆ ನಡೆಯಲಿದೆ.

ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ 2014ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

Published

on

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending