Connect with us

ದಿನದ ಸುದ್ದಿ

ಹೋರಾಟಕ್ಕೆ ಮಸಿ ಬಳಿಯಲು ವಿರೋಧಿಗಳಿಗೆ ಅವಕಾಶ ಮಾಡಿಕೊಟ್ಟಿದೆ ಅಮೂಲ್ಯಳ‌ ಆ ಮಾತು..!

Published

on

  • ಹರ್ಷಕುಮಾರ್ ಕುಗ್ವೆ

ಮೂಲ್ಯ ಎಂಬ ಈ ಸಹೋದರಿ ತನ್ನ ಯಾವ ಮಾತುಗಳಿಂದ ಏನು ಪರಿಣಾಮ ಆಗಬಹುದು ಎಂಬುದನ್ನು ಯೋಚಿಸದೇ ಸಾರ್ವಜನಿಕ ಸಭೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿ CAA ವಿರುದ್ಧದ ಹೋರಾಟದ ಮೇಲೆ ಎಲ್ಲಾ ವಿರೋಧಿಗಳು ದಾಳಿ ನಡೆಸಲು ಅವಕಾಶ ಮಾಡಿಕೊಡ್ಡಿದ್ದಾಳೆ. ಬಿಜೆಪಿ ಸಚಿವರು ‘CAA ವಿರುದ್ಧ ಹೋರಾಟಗಾರರೆಲ್ಲರೂ ಪಾಕಿಸ್ತಾನದ ಪರ’ ಎಂದು ಬಿಂಬಿಸಲು ಈ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಯಾವ ಸಭೆಯಲ್ಲಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾಳೋ ಅದರ ಮರುಕ್ಷಣವೇ ಸಂಸದ ಓವೈಸಿ ಮತ್ತು ಕಾರ್ಯಕ್ರಮದ ಆಯೋಜಕರು ಅವಳಿಂದ ಮೈಕ್ ಕಿತ್ತುಕೊಂಡು ಅವಳ ಘೋಷಣೆಯನ್ನು ಖಂಡಿಸಿದ್ದಾರೆ. ನಾವು ‘ಪಾಕಿಸ್ತಾನ್ ಜಿಂದಾಬಾದ್’ ನಂತಹ ಘೋಷಣೆಗೆ ಬೆಂಬಲ ನೀಡುವುದಿಲ್ಲ, ನಾವು ಎಂದಿಗೂ ಹಿಂದೂಸ್ತಾನ್ ಜಿಂದಾಬಾದ್ ಎಂದು ಹೇಳುವವರು, ಈ ಹುಡುಗಿಯ ಮಾತಿಗೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಘಟನೆಯ ನಂತರದಲ್ಲಿ ಹಲವಾರು ರೀತಿಯ ಅಭಿಪ್ರಾಯಗಳನ್ನು ವಿರೋಧಿಗಳು, ಸ್ನೇಹಿತರು ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹಿರಿಯ ಜೀವ ಬಾನು ಮುಷ್ತಾಕ್ ಅವರು ನನಗೆ ಕರೆ ಮಾಡಿ ‘ಹರ್ಷಾ ಆ ಎಳಸು ಹುಡುಗಿ ಎಂತ ಕೆಲಸ ಮಾಡಿದ್ದಾಳೆ ನೋಡು, ಇಡೀ ಹೋರಾಟ ಒಂದು ಒಳ್ಳೇ ರೀತಿಯಲ್ಲಿ ನಡೀತಾ ಇತ್ತು, ನೆನ್ನೆ ಮಾಜಿ ಸಿಎಂ ಕುಮಾರಸ್ವಾಮಿ ಸಹ ಸಮ್ಮ ಪರವಾಗಿ ಸದನದಲ್ಲಿ ಮಾತಾಡಿದ್ರು, ಈಗ ನೋಡಿದ್ರೆ ಈ ಹುಡುಗಿಯಿಂದಾಗಿ ಎಲ್ಲಾ ಹಾಳಾಯ್ತು, ಅವಳಿಗೇನು ತಲೆ ಕೆಟ್ಟಿದೆಯಾ?” ಎಂದು ಹೇಳಿಕೊಂಡು ತೀವ್ರ ಬೇಸರ ವ್ಯಕ್ತಪಡಿಸಿದರು.

ಇನ್ನು ಕೆಲವು ಸ್ನೇಹಿತರು ಮತ್ತೊಂದು ಅತಿರೇಕದಲ್ಲಿ ‘ಅಮೂಲ್ಯ ಒಬ್ಬ ದೇಶದ್ರೋಹಿ” ಎಂದು ಕರೆಯತೊಡಗಿದ್ದಾರೆ. ‘ನೋಡಿ ಇಂತಾ ಹುಡುಗಿಯರಿಗೆಲ್ಲಾ ವೇದಿಕೆ ಕೊಟ್ಟವರು ಈಗ ಏನು ಹೇಳ್ತೀರಾ’ ಎಂದು ಅಬ್ಬರಿಸಲು ತೊಡಗಿದ್ದಾರೆ. ಅವರಿಗೆ ಬೇಕಿದ್ದುದೂ ಇದೇ ಆಗಿತ್ತು ಎನ್ನುವ ರೀತಿಯಲ್ಲಿ!
CAA ವಿರುದ್ಧದ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡವನಾಗಿ ಈ ಸಂದರ್ಭದಲ್ಲಿ ಇಂದಿನ ಈ ಘಟನೆಯ ಕುರಿತು ನನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸುವುದು ನನ್ನ ಜವಾಬ್ದಾರಿ ಎಂದುಕೊಂಡಿದ್ದೇನೆ.

1. ಮೊದಲಿಗೆ ಸ್ಪಷ್ಟಪಡಿಸಿಕೊಳ್ಳಬೇಕಾದ ವಿಚಾರ ಎಂದರೆ ಅಮೂಲ್ಯ ಒಂದು ವೇದಿಕೆಯ ಮೇಲೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿರುವುದಕ್ಕ ನನ್ನ ಒಪ್ಪಿಗೆ ಖಂಡಿತಾ ಇಲ್ಲ. ಅವಳು ಮುಂದೆ ಏನು ಹೇಳಲು ಹೊರಟಿದ್ದಳೋ ಗೊತ್ತಿಲ್ಲ, ಹಾಗೆ ಹೇಳುವಾಗ ಅವಳ ಉದ್ದೇಶವೂ ತಿಳಿದಿಲ್ಲ. ಆದರೆ ಏನೇ ಇದ್ದರೂ ಸಹ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿಕೊಂಡು ಭಾಷಣ ಶುರು ಮಾಡುವುದು ಅತ್ಯಂತ ಅವಿವೇಕತನದ ವರ್ತನೆ ಮಾತ್ರವಲ್ಲ ಅತ್ಯಂತ ಹೊಣೆಗೇಡಿತನದ ವರ್ತನೆ ಸಹ. ಯಾವುದೇ ಮುಲಾಜಿಲ್ಲದೇ ಇದಕ್ಕೆ ನನ್ನ ಖಂಡನೆಯಿದೆ.

2. ಮೊನ್ನೆ ಫೆಬ್ರವರಿ 16ರಂದು ತನ್ನ ಫೇಸ್ಬುಕ್ ಪೋಸ್ಟಿನಲ್ಲಿ ಪಾಕಿಸ್ತಾನವೂ ಸೇರಿದಂತೆ ಹಿಂದೂಸ್ತಾನ್, ಬಾಂಗ್ಲಾದೇಶ್, ಶ್ರೀಲಂಕಾ, ನೇಪಾಳ, ಅಫಘಾನಿಸ್ತಾನ್, ಚೈನಾ ಭೂತಾನ್ ದೇಶಗಳಿಗೂ ಜಿಂದಾಬಾದ್ ಎಂದು ಬರೆದು ಯಾವುದೇ ದೇಶ ಇರಲಿ ಎಲ್ಲ ದೇಶಗಳಿಗೂ ಜಿಂದಾಬಾದ್ ಎಂದು ಬರೆದು ತನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾಳೆ. ಇದರ ಮೂಲಕ ಅಮೂಲ್ಯ ತನಗೆ ಹಲವರು ಹೇಳುವ’ ರಾಷ್ಟ್ರವಾದ’ ಮತ್ತು ದೇಶಭಕ್ತಿಯ ಪರಿಕಲ್ಪನೆಗೆ ಒಪ್ಪಿಗೆ ಇಲ್ಲವೆಂದು ಪರೋಕ್ಷವಾಗಿ ತಿಳಿಸಿದ್ದಾಳೆ.

3. ಸೋದರಿ ಅಮೂಲ್ಯಳ ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ಅವಳ ಇಂದಿನ ವರ್ತನೆ ಮತ್ತು ನಡೆದ ಘಟನೆಗಳು CAA ವಿರುದ್ಧದ ಹೋರಾಟಕ್ಕೆ ಮಸಿ ಬಳಿಯಲು ನಮ್ಮ ವಿರೋಧಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹೋರಾಟಗಾರರಿಗೆ ಮುಜುಗರದ ಸನ್ನಿವೇಶವನ್ನು ತಂದಿದೆ.

4. ಅಮೂಲ್ಯಳ ನಡವಳಿಕೆಯ ಕುರಿತು ತೀವ್ರ ಅಸಮಧಾನ ಮತ್ತು ಖಂಡನೆ ವ್ಯಕ್ತಪಡಿಸುತ್ತಲೇ ಈಗ ನಡೆಯುತ್ತಿರುವಂತೆ ಅವಳ ಮೇಲೆ ಹಲವರು ದಾಳಿ ನಡೆಸುತ್ತಿರುವುದನ್ನು ಸಹ ನಾನು ಖಂಡಿಸುತ್ತೇನೆ. ಹೀಗೆಂದ ಮಾತ್ರಕ್ಕೆ ಅವಳ ಅಭಿಪ್ರಾಯವನ್ನು ಬೆಂಬಸುತ್ತೇನೆ ಎಂದಲ್ಲ. ಇಂತಹ ಸಂದರ್ಭದಲ್ಲಿ ನನಗೆ ನೆನಪಾಗುವುದು ಫ್ರಾನ್ಸಿನ ಪ್ರಜಾಪ್ರಭುತ್ವ ಕ್ರಾಂತಿಯ ಬುದ್ಧಿಜೀವಿ ವಾಲ್ಟೇರ್ನ ಮಾತು- ‘ನಾನು ನಿನ್ನ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಆದರೆ ಆ ಅಭಿಪ್ರಾಯವನ್ನು ವ್ಯಕ್ತಿಪಡಿಸುವ ನಿನ್ನ ಹಕ್ಕು, ಸ್ವಾತಂತ್ರ್ಯವನ್ನು ಉಳಿಸಲು ಬೇಕಾದರೆ ನನ್ನ ಪ್ರಾಣವನ್ನಾದರೂ ಒತ್ತೆ ಇಡುತ್ತೇನೆ”.

ನಮ್ಮ ಕಡು ವಿರೋಧಿಗಳಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇರಬೇಕು ಎನ್ನುವುದು ಇದರ ಆಶಯ. ಮೊನ್ನೆ ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಸೈನ್ಯದ ಹಾಡಿಗೆ ದನಿಗೂಡಿಸಿ ತಾವೂ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೋರಸ್ ನೀಡಿದ್ದ ಕಾಶ್ಮೀರದ ಹುಡುಗರ ವಿಷಯದಲ್ಲಿ ಸಹ ನಾನು ಇದನ್ನೇ ಹೇಳಿದ್ದೆ. ಆ ಹುಡುಗರನ್ನು ಏಕ್ ದಂ ನೀವು ಪಾಕಿಸ್ತಾನದ ಪರ ಎಂದು ದೂಷಿಸಿ ಶತ್ರುಗಳ ರೀತಿಯಲ್ಲಿ ನೋಡುವುದಲ್ಲ. ಹಿರಿಯರಾದವರು ಅವರೊಂದಿಗೆ ಕುಳಿತು ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು. ಈ ಅಮೂಲ್ಯಳ ವಿಷಯದಲ್ಲಿ ಸಹ ನನ್ನ ಸಲಹೆ ಇದೇ ಆಗಿದೆ.

5. ನಮ್ಮ ನಾಡಿನ ಇತಿಹಾಸದಲ್ಲಿ ದೊಡ್ಡ ದೊಡ್ಡ ಚಳವಳಿಗಳು ನಡೆದಿವೆ. ಎಷ್ಟೋ ಮಹಾನ್ ಹೋರಾಟಗಾರರು ತಮ್ಮ ಜೀವನಗಳನ್ನೇ ಸಮರ್ಪಿಸಿಕೊಂಡು ಚಳವಳಿಗಳನ್ನು ಕಟ್ಟಿದ್ದಾರೆ. ಇಂದಿಗೂ ಬದ್ಧತೆಯಿಂದ ದೇಶದ ಒಳಿತು ಮತ್ತು ಜನರ ಹಿತವನ್ನು ಕಾಪಾಡಲು ತಮ್ಮನ್ನು ತೊಡಗಿಸಿಕೊಂಡಿರುವ ಸಾವಿರಾರು ಹಿರಿಯ ಜೀವಗಳು ನಮ್ಮ ಕಣ್ಣಮುಂದೇಯೇ ಇವೆ. ಆದರೆ ಕಾಲದ ಮಹಿಮೆಯೇ ಏನೋ, ಹೋರಾಟ ಚಳವಳಿಗಳಲ್ಲಿ ಭಾಗವಹಿಸುವ ಇಂದಿನ ಪೀಳಿಗೆಯ ಎಳೆಯರಿಗೆ ಇರುವ ಸೌಲಭ್ಯ, ಅವಕಾಶಗಳೇ ಬೇರೆ.

ತಿಳುವಳಿಕೆ, ಅನುಭವಗಳನ್ನು ಹಿಂದೆ ಹಾಕಿ ಕೇವಲ ಮಾತುಗಾರಿಕೆಯ ಕಲೆಯಿಂದಲೇ ಸಾಕಷ್ಟು ಐಡೆಂಟಿಟಿ ಪಡೆಯಲು ಇಂದಿನ ಸಾಮಾಜಿಕ ಮಾಧ್ಯಮಗಳು ಸಹಾಯ ಮಾಡಿವೆ. ಇಂದು ನಮ್ಮೆದುರಿಗಿರುವ ಕನ್ಹಯ್ಯ ಕುಮಾರ್, ಶೆಹ್ಲಾ ರಶೀದ್, ಜಿಗ್ನೇಶ್ ಮೇವಾನಿ ಮೊದಲಾದವರೆಲ್ಲ ದಿಡೀರನೆಂದು ದೇಶದ ಜನರ ಗಮನ ಸೆಳೆಯಲು ಸಾಧ್ಯವಾದದ್ದು, ನಾಯಕರೆಂದು ಬಿಂಬಿಸಿಕೊಳ್ಳಲು ಸಾಧ್ಯವಾದದ್ದು ಈ ಹೊಸಕಾಲದ ಅವಕಾಶಗಳಿಂದ, ಇದೇ ಅವಕಾಶಗಳಿಂದ ಅನೇಕ ಬಲಪಂಥೀಯರೂ ಪ್ರಖ್ಯಾತರೂ ಕುಖ್ಯಾತರೂ ಆಗಿರುವುದನ್ನು ನೋಡಬಹುದು. ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಇಂತವರೂ ಇದ್ದಾರೆ.

6. CAA ವಿರುದ್ಧವಾಗಿ ಇಡೀ ದೇಶದಾಧ್ಯಂತ ಜನಾಂದೋಲನಗಳು ಶುರುವಾದಂತೆ ಆರಂಭದಲ್ಲಿ ನಡೆದ ಕೆಲವು ಸಭೆ ಪ್ರತಿಭಟನೆಗಳಲ್ಲಿ ವಾಕ್ಚಾತುರ್ಯ ತೋರಿದ ಹಲವರು ಈ ಹೋರಾಟದ Iconಗಳಾಗಿ ಮುಂದೆ ಬಂದರು. ರಾಷ್ಟ್ರಮಟ್ಟದಲ್ಲಿ ಕಣ್ಣನ್ ಗೋಪಿನಾಥನ್, ಯೋಗೇಂದ್ರ ಯಾದವ್, ಕನ್ಹಯ್ಯ, ಹರ್ಷ ಮಂದರ್, ರಾಜ್ಯದಲ್ಲಿ ಶಿವಸುಂದರ್, ಸಸಿಕಾಂತ್ ಸೆಂಥಿಲ್, ಸುಧೀರ್ ಕುಮಾರ್ ಮುರೊಳ್ಳಿ, ಮಹೇಂದ್ರ ಕುಮಾರ್, ಭಾಸ್ಕರ್ ಪ್ರಸಾದ್, ನಜ್ಮಾ ನಜೀರ್, ರಾ ಚಿಂತನ್, ಭವ್ಯ ನರಸಿಂಹಮೂರ್ತಿ, ಅಮೂಲ್ಯ ಲಿಯೋನ ಇವರೆಲ್ಲಾ ರಾಜ್ಯದ ಬೇರೆ ಬೇರೆ ಕಡೆಗಳಿಗೆ ಹೋಗಿ CAA-NRC-NPR ವಿರುದ್ಧ ತಮ್ಮ ಧ್ವನಿ ಎತ್ತತೊಡಗಿದರು.

ನಾನೂ ಕೆಲವೆಡೆಗಳಲ್ಲಿ ಭಾಗವಹಿಸಿದ್ದೇನೆ. ಈ ಕಾಯ್ದೆಯಿಂದ ಆತಂಕಕ್ಕೆ ಒಳಗಾಗಿರುವ ಮುಸ್ಲಿಂ ಸಮುದಾಯಿಂದ ಸಾವಿರಾರು ಕೆಲವೊಮ್ಮೆ ಲಕ್ಷಾಂತರ ಜನರು ನೆರೆಯತೊಡಗಿದರು. ಇಂತಹ ಬೃಹತ್ ಸಭೆಗಳಲ್ಲಿ ಆಹ್ವಾನಿತರಾಗುವಾಗ ಸಹಜವಾಗಿ ಒಂದು ಐಡೆಂಟಿಟಿ ಸುಲಭವಾಗಿ ಬರುತ್ತದೆ. ಮತ್ತದು ಸಹಜವೇ. ಹಾಗಂತ ಈ ಎಲ್ಲರಿಗೂ ಎಲ್ಲಾ ವಿಷಗಳಲ್ಲಿಯೂ ಒಂದೇ ಅಭಿಪ್ರಾಯವಿದೆ ಎಂದಲ್ಲ. ಈಗಲೂ CAA-NRCಗಳಿಗೆ ಕುರಿತಂತೆ ಕೆಲವು ವಿಷಯಗಳಲ್ಲಿ ಎಲ್ಲರಿಗೂ ಒಪ್ಪಿಗೆ ಇರಬಹುದಾದರೂ ಅನೇಕ ವಿಷಯಗಳಲ್ಲಿ ಹಲವಾರು ಭಿನ್ನಾಭಿಪ್ರಾಯಗಳಿವೆ. ಯಾವುದೇ ಚಳವಳಿಯಾದರೂ ಇದು ಸಹಜ.

ಇಡೀ JNU ಕೇಂದ್ರ ಸರ್ಕಾರದ ವಿರುದ್ಧ ನಿಂತಾಗಲೂ ಅಲ್ಲಿರುವ ಹಲವಾರು ಸಂಘಟನೆಗಳ ನಡುವೆ ತೀವ್ರ ಸ್ವರೂಪದ ಭಿನ್ನಾಭಿಪ್ರಾಯಗಳು ಈಗಲೂ ಇವೆ. ನಮ್ಮ ನಡುವಿನ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಸೆಲೆಬ್ರೇಟ್ ಮಾಡುತ್ತಲೇ ಸಮಾನ ಒಪ್ಪಿಗೆ ಇರುವ ಅಂಶಗಳ ಮೇಲೆ ಚಳವಳಿ ಮುನ್ನಡೆಸಿಕೊಂಡು ಹೋಗುವು ಪ್ರಬುದ್ಧತೆ ಎಲ್ಲರಿಗೂ ಅತ್ಯವಶ್ಯಕ. ಹೀಗಾಗಿ ಅಮೂಲ್ಯ ಹೇಳುವ ಎಲ್ಲಾ ಮಾತುಗಳೂ ಮಹೇಂದ್ರ ಕುಮಾರ್ ಮಾತುಗಳಾಗಿರುವುದು, ಹಾಗೆಯೇ ಮಹೇಂದ್ರ ಕುಮಾರ್ ಹೇಳುವ ಎಲ್ಲಾ ಮಾತುಗಳೂ ಶಿವಸುಂದರ್ ಮಾತುಗಳಾಗಿರಲು ಸಾಧ್ಯವಿಲ್ಲ.

7. ಈ ಅವಧಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವವರೆಂದರೆ ಅಮೂಲ್ಯ, ನಜ್ಮಾ ನಜೀರ್ , ಭವ್ಯ ನರಸಿಂಹಮೂರ್ತಿ. ಮತ್ತು ಕೆಲವರು. ತಿಳುವಳಿಕೆ, ವಿಷಯಗಳನ್ನು ನೋಡುವ ದೃಷ್ಟಿಕೋನ ಮತ್ತು ಪ್ರೆಸೆಂಟೇಶನ್ ಶೈಲಿಯಲ್ಲಿ ಇವರೆಲ್ಲಾ ಒಬ್ಬರಿಗೊಬ್ಬರು ಸಂಪೂರ್ಣವಾಗಿ ಭಿನ್ನ ಭಿನ್ನ. ಆದರೆ ಸಭೆಗಳಲ್ಲಿ ನೆರೆದ ಸಾವಿರಾರು ಜನರು ಇವರು ಮಾತುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದು ಸತ್ಯ. ನಾನು ಗಮನಿಸಿರುವಂತೆ ಕೆಲವು ಕಡೆಗಳಲ್ಲಿ ಮಾತಾಡುವಾಗ ತನ್ನ ವಯಸ್ಸು ಮತ್ತು ತಿಳುವಳಿಕೆಯನ್ನೂ ಮೀರಿ ಮಾತಾಡುತ್ತಿದುದು ಮಾತ್ರ ಅಮೂಲ್ಯ.

ಅವಳ ಮೇಲೆ ಸಾಕಷ್ಟು ಟ್ರೋಲ್ ಆಗುತ್ತಿದ್ದಾಗಲೂ ಅದಕ್ಕೆಲ್ಲಾ ತಲೆಕೆಡಿಸಿಕೊಳ‍್ಳದೇ ತಾನು ಹೀಗೆಯೇ ಎಂದು ತೋರಿಸಿಕೊಳ್ಳುತ್ತಿದ್ದ ಅಮೂಲ್ಯಳನ್ನ ನೋಡಿ ಯಾವತ್ತಾದರೂ ಒಮ್ಮೆ ಕೂರಿಸಿಕೊಂಡು ಹೋರಾಟ-ಚಳವಳಿಗಳ ಕೆಲವು ಸೂಕ್ಷ್ಮತೆಗಳನ್ನು ಹೇಳಬೇಕು ಎಂದು ನನಗೂ ಅನಿಸಿತ್ತು. ಅಕಸ್ಮಾತ್ ನಾನು ಮಾತಾಡಿದ್ದರೂ ಅವಳು ಕೇಳಿಬಿಡುತ್ತಿದ್ದಳು ಎಂದೂ ಅಲ್ಲ. ಅವಳ ಸ್ಪೀಡ್ ನೋಡಿ ಸ್ವತಃ ಅವರ ತಂದೆ ಆತಂಕಗೊಂಡು ತಮ್ಮ ಮಗಳು ತಮ್ಮಿಂದ ಎಲ್ಲಿ ದೂರಾಗುತ್ತಾರೋ ಎಂದು ಆಪ್ತರ ಬಳಿ ತೋಡಿಕೊಂಡಿದ್ದ ಬಗ್ಗೆ ನನಗೆ ತಿಳಿದಿತ್ತು. ಮಾತ್ರವಲ್ಲ ಹೋರಾಟದ ಕೆಲವು ಹಿರಿಯ ಸ್ನೇಹಿತರು ಗಂಟೆಗಳ ಕಾಲ ಅವಳನ್ನು ಕೂರಿಸಿಕೊಂಡು ಕೆಲವು ವಿಷಯಗಳಲ್ಲಿ ಬುದ್ಧಿ ಹೇಳಿರುವ ವಿಷಯವೂ ನಂತರ ತಿಳಿಯಿತು.

ಟ್ವಿಟರ್ ನಲ್ಲಿ ಯಾರಾದರೂ ಏನಾದರೂ ಕೇಳಿದರೆ ಅಮೂಲ್ಯ ಹಿಂದೆ ಮುಂದೆ ಯೋಚಿಸದೇ ಮನಸಿಗೆ ಬಂದಂತೆ ಮಾತಾಡುವುದು ಕಂಡು ಕೆಲವು ಸಂದರ್ಭದಲ್ಲಿ ಕಮೆಂಟ್ ರೂಪದಲ್ಲಿ ಬುದ್ಧಿಯನ್ನೂ ಹೇಳಿದ್ದೆ. ‘ನಾಯಕತ್ವ ಇರುವುದು ಮಾತಾಡುವುದರಲ್ಲಿ ಅಲ್ಲ, ಇತರರ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುವುದರಲ್ಲಿ, ಬಾಯಿಗಿಂತ ಹೆಚ್ಚಾಗಿ ನಮ್ಮ ಕಿವಿ ಕೆಲಸ ಮಾಡಬೇಕಾಗುತ್ತದೆ” ಎಂಬ ಕಿವಿಮಾತನ್ನೂ ಹೇಳಿದ್ದೆ. ಈ ವಿಷಯದಲ್ಲಿ ನಜ್ಮಾ ಬೆಟರ್ ಅನಿಸಿತ್ತು.

8. ಈಗ ಅಮೂಲ್ಯ ತಪ್ಪು ಮಾಡಿದ್ದಾಳೆ. ಇದನ್ನೇ ಇಟ್ಟುಕೊಂಡು ನಮ್ಮ ವಿರೋಧಿ ಪಡೆ, ಅಮೂಲ್ಯಳ ಮೇಲೆ, ಇಡೀ CAA ವಿರೋಧಿ ಹೋರಾಟದ ಮೇಲೆ ತೀವ್ರವಾಗಿ ದಾಳಿ ನಡೆಸತೊಡಗಿದೆ. ಅವರು ಅದನ್ನು ಮಾಡಲೇಬೇಕು ಬಿಡಿ. ಹಾಗಂತ ನಾವೂ ಅದನ್ನೇ ಮಾಡತೊಡಗಿದರೆ ನಮಗೂ ಅವರಿಗೂ ವ್ಯತ್ಯಾಸವೇನಿರುತ್ತದೆ? ಅಮೂಲ್ಯಳ ನಡವಳಿಕೆಯನ್ನು ಖಂಡಿಸಬೇಕು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ತನ್ನ ಭಾಷಣದ ಆರಂಭಿಸುವಾಗ ಕೂಗಿದ್ದರ ಹಿಂದಿನ ಉದ್ದೇಶ ಏನಿತ್ತು ಎಂದು ವಿಚಾರಣೆ ನಡೆಸಬೇಕು. ಅವಳ ಉದ್ದೇಶ ಸದುದ್ದೇಶವಾಗಿದ್ದರೆ, ದೇಶದ ಸಂವಿಧಾನಕ್ಕೆ ವಿರುದ್ಧವಾಗಿ ಇರದಿದ್ದರೆ ಅವಳಿಗೆ ಬುದ್ದಿ ಹೇಳಿ ಅವಳು ಮಾಡಿರುವ ತಪ್ಪನ್ನು ಕ್ಷಮಿಸಬಹುದು. ಆದರೆ ಅವಳ ಉದ್ದೇಶವೇ ಕೆಟ್ಟದ್ದಾಗಿದ್ದರೆ (Malafide), ನಮ್ಮ ಸಂವಿಧಾನದ ಕಣ್ಣಿನಲ್ಲಿ ಅಪರಾಧ ಎನಿಸುವ ಉದ್ದೇಶ ಆಕೆಗೆ ಇದ್ದಿದ್ದೇ ಆಗಿದ್ದರೆ ಕಾನೂನಿನ ಪ್ರಕಾರ ಅವಳ ಮೇಲೆ ಕ್ರಮ ತೆಗೆದುಕೊಳ್ಳಿ ಎನ್ನಬಹುದು.

ಆದರೆ ಅಷ್ಟರೊಳಗಾಗಿ ಯಾವುದೇ ಫತ್ವಾ ಹೊರಡಿಸುವುದನ್ನು ನಾವು ಮಾಡುವುದು ಸರಿಯಲ್ಲ. ಅಮೂಲ್ಯ ಕೂಡಾ ದೇಶದ ನಾಗರಿಕಳು ಮತ್ತು ಆಕೆಯ ಅಭಿಪ್ರಾಯ ಏನೇ ಇರಲಿ ಒಬ್ಬ ನಾಗರಿಕಳಾಗಿ ಅವಳಿಗೂ ಸಂವಿಧಾನದ ಹಕ್ಕುಗಳು, ನ್ಯಾಯಾಲಯದಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಹಕ್ಕು ಇರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

9. ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಪಾಕಿಸ್ತಾನಿಯರು ಹೇಳುತ್ತಾರೆ, ಪಾಕಿಸ್ತಾನದ ಮತಾಂಧ ಉಗ್ರರೂ ಹೇಳುತ್ತಾರೆ, ಕಾಶ್ಮೀರದಲ್ಲಿದ್ದುಕೊಂಡು ಪಾಕಿಸ್ತಾನವನ್ನು ಬೆಂಬಲಿಸುವವರು ಹೇಳುತ್ತಾರೆ, ಕೆಲವು ಅಮಾಯಕ ಅವಿವೇಕಿ ಕಾಶ್ಮೀರಿಗಳೂ ಹೇಳುತ್ತಾರೆ. ಮಾತ್ರವಲ್ಲ ಶ‍್ರೀಶ್ರೀ ರವಿಶಂಕರ್ ಗುರೂಜಿ ಸಹ ಹೇಳಿದ್ದರು. ಹಾಗೆಯೇ ಅಮೂಲ್ಯ ಕೂಡಾ ಹೇಳಿದ್ದಾಳೆ. ಇವರಲ್ಲಿ ಒಬ್ಬಬ್ಬರೂ ಒಂದೊಂದು ಉದ್ದೇಶದಿಂದ ಹೇಳಿದ್ದಾರೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದಲ್ಲ. ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವುದು ದೇಶದ ಮೇಲೆ ಸಹಜ ಪ್ರೀತಿ, ಅಭಿಮಾನ ಇರುವು ಎಲ್ಲರಿಗೂ ಸಿಟ್ಟು, ಆಕ್ರೋಶ ತರಿಸುತ್ತದೆ, ನಮ್ಮ ತಂಗಿಯಂತಿರುವ ಅಮೂಲ್ಯ ತನ್ನ ಅವಿವೇಕತನದಿಂದ ಹಾಗೆ ಹೇಳಿ ಆಡುವವರ ಬಾಯಿಗೆ ತುತ್ತಾದಾಗ ದುಪ್ಪಟ್ಟು ನೋವಾಗುತ್ತದೆ.

ಇಂತಹ ಸಂದರ್ಭದಲ್ಲಿ ಎಲ್ಲರ ಜೊತೆ ಸೇರಿಕೊಂಡು ಅಮೂಲ್ಯಳನ್ನು ಬೈದುಬಿಡುವುದು ಸುಲಭ. ಅವಳನ್ನೂ ಒಂದು ಅಭಿಪ್ರಾಯ ಇರುವ ನಾಗರಿಕಳು ಎಂದು ನೋಡುವುದು ಬಹಳ ಜನರಿಗೆ ಕಷ್ಟವಾಗುತ್ತದೆ. ಹಾಗೆ ಯಾವುದೋ ಒಂದು ರೀತಿಯಲ್ಲಿ ಅವಳ ನಾಗರಿಕ ಹಕ್ಕಿನ ಪರವಾಗಿ ಮಾತಾಡಿದಾಗ ನಾವೂ ತೊಂದರೆಗೆ ಸಿಲುಕುವ ಸಾಧ್ಯತೆಯೂ ಇರುತ್ತದೆ. ‘ನಿಮ್ಮಂತವರ ಕುಮ್ಮಕ್ಕಿನಿಂದಲೇ ಇಂತಹವರು ಹೀಗಾಡುವುದು’ ಸಪೋರ್ಟ್ ಮಾಡಬೇಡಿ’ ಎಂಬ ಸಲಹೆಗಳೂ ನಮಗೆ ಬರಬಹುದು.

ಆದರೂ ಸಹ ನನ್ನ ಅಭಿಪ್ರಾಯದಲ್ಲಿ ಇಂದು ಅಮೂಲ್ಯ ತೋರಿರುವ eccentric ನಡವಳಿಕೆಯನ್ನು ಟೀಕಿಸುತ್ತಲೇ, ಅದಕ್ಕೆ ತೀವ್ರ ಅಸಮ್ಮತಿ ವ್ಯಕ್ತಪಡಿಸುತ್ತಲೇ ಅಮೂಲ್ಯಳಿಗೆ ಕೂರಿಸಿ ಬುದ್ಧಿ ಹೇಳುವ ಅಗತ್ಯವಿದೆಯೇ ಹೊರತು ಆಕೆಯನ್ನು ‘ದೇಶದ್ರೋಹಿ’ ಏಕಾಏಕಿಯಾಗಿ ತೀರ್ಮಾನಿಸಿ ಆಕೆಯ ಮೇಲೆ ಯದ್ವಾತದ್ವಾ ಅಕ್ಷರದಾಳಿ ನಡೆಸುವುದನ್ನೂ ಖಂಡಿಸುತ್ತೇನೆ. ಹೀಗೆ ಮಾಡುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ಇದೇ ಸಂದರ್ಭದಲ್ಲಿ CAA ವಿರುದ್ಧದ ಇಡೀ ಹೋರಾಟವನ್ನು ‘ಅಮೂಲ್ಯಳ ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗೆ ಸೀಮಿತಗೊಳಿಸಿ ಇಡೀ ಹೋರಾಟದ ಮೇಲೆ ದಾಳಿ ನಡೆಸುತ್ತಿರುವವರ ಹುನ್ನಾರವನ್ನೂ ಖಂಡಿಸುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending