Connect with us

ದಿನದ ಸುದ್ದಿ

ಮಕ್ಕಳ ಕೈಗೆ ವಾಹನ ಕೊಡುವ ಮುನ್ನ ನೂರು ಬಾರಿ ಯೋಚಿಸಿ !

Published

on

ಪುಣೆ | ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರ್
  • ಶರೀಫ್ ಎ ಎ, ವಕೀಲರು

ದಿನೆಂಟು ವರ್ಷ ತುಂಬದ ಮತ್ತು ಚಾಲನಾ ಪರವಾನಗಿ ಪಡೆಯದ ಮಕ್ಕಳ ಕೈಗೆ ಮೋಟಾರು ವಾಹನ ಕೊಡುವ ಮತ್ತು ತಮ್ಮ ಮಕ್ಕಳ ವಾಹನ ಚಾಲನಾ ಕೌಶಲ್ಯದ ಬಗ್ಗೆ ಹೆಮ್ಮೆಯಿಂದ ಬೀಗುವ ಪೋಷಕರನ್ನು ಬಹಳ ನೋಡಿದ್ದೇನೆ. ಕೇವಲ ಶ್ರೀಮಂತರ ನಡುವೆ ಮಾತ್ರ ಅಲ್ಲ, ಮಧ್ಯಮ ಮತ್ತು ಬಡ ವರ್ಗದಲ್ಲೂ ಸಹ ಇಂತಹ ಹೊಣೆಗೇಡಿ ಪೋಷಕರು ಇದ್ದಾರೆ. ಇಂತವರ ಬೇಜವಾಬ್ದಾರಿತನ ತಂದೊಡ್ದುವ ಅನಾಹುತ ಮತ್ತು ಪರಿಣಾಮಗಳ ಬಗ್ಗೆ ಸ್ವಲ್ಪ ನೋಡೋಣ.

ಬಾಲ ನ್ಯಾಯ ಮಂಡಳಿಯ ಪ್ರಧಾನ ನ್ಯಾಯಿಕ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಧರ್ಬದಲ್ಲಿ ಹಲವು ರಸ್ತೆ ಅಪಘಾತ ಪ್ರಕರಣಗಳು ನನ್ನ ಮುಂದೆ ವಿಚಾರಣೆಗೆ ಬಂದಿದ್ದವು. ಹದಿನೆಂಟು ವರ್ಷ ತುಂಬದ ಮಕ್ಕಳು ಅಜಾಗರೂಕತೆ ಅಥವಾ ನಿರ್ಲಕ್ಷ್ಯತನದಿಂದ ಬೈಕ್, ಕಾರು ಮುಂತಾದ ವಾಹನ ಚಲಾಯಿಸಿ ಯಾರೋ ನತದೃಷ್ಟರ ಜೀವ ತೆಗೆದ ಅಪರಾಧಕ್ಕೆ ಅಥವಾ ಗಂಭೀರವಾಗಿ ಗಾಯಪಡಿಸಿದಕ್ಕೆ ದಾಖಲಾದ ಪ್ರಕರಣಗಳವು. ಅಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಾಹನ ಚಲಾಯಿಸಿದ ಬಾಲಕನನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಪರಿಗಣಿಸಿ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಲಾಗುತ್ತದೆ. ಬಾಲಕನ ಪೋಷಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ರ ಅಡಿಯಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸ ಬಹುದಾದ ಕಾರಾಗೃಹ ವಾಸದಿಂದ ಮತ್ತು ಇಪ್ಪತೈದು ಸಾವಿರ ರೂಪಾಯಿ ಜುಲ್ಮಾನೆಯ ಶಿಕ್ಷೆಗೆ ಗುರಿಪಡಿಸ ಬಹುದಾದ ಅಪರಾಧಕ್ಕೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ರ ಅಡಿಯಲ್ಲಿ ವಾಹನ ಚಾಲನೆಗೆ ಸಂಬಂಧಿಸಿದಂತೆ ಅಪ್ರಾಪ್ತರು ಎಸಗುವ ಅಪರಾಧಗಳಿಗೆ ಪೋಷಕರೇ ನೇರ ಹೊಣೆಗಾರರು ಎಂದು ಪರಿಭಾವಿಸಲಾಗುತ್ತದೆ. ಹಾಗಾಗಿ ಬಾಲ ನ್ಯಾಯ ಮಂಡಳಿಯ ಮುಂದಿರುವ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ದಂಡ ವಿಧಿಸಿ ಕಳುಹಿಸಿದರೂ ಕಾನೂನು ಕುಣಿಕೆಯಿಂದ ತಪ್ಪಿಸಿ ಕೊಳ್ಳಲು ಪೋಷಕರಿಗೆ ಸಾಧ್ಯವಿರುವುದಿಲ್ಲ. ಜೆ .ಎಂ. ಎಫ್. ಸಿ ನ್ಯಾಯಾಲಯದಲ್ಲಿ ದಂಡ ಮತ್ತು ಜೈಲು ಶಿಕ್ಷೆಯ ತೂಗುಗತ್ತಿ ಒಂದೆಡೆಯಾದರೆ ಮೋಟಾರು ವಾಹನ ಅಪಘಾತ ವಿಮಾ ಪರಿಹಾರ ನ್ಯಾಯಾಧಿಕರಣದ ಮುಂದೆ ಸಂತ್ರಸ್ತರು ಅಥವಾ ಗಾಯಾಳು ವಿಮಾ ಪರಿಹಾರ ಕೋರಿ ದಾಖಲಿಸುವ ಪ್ರಕರಣ ಮತ್ತೊಂದೆಡೆ.

ಅಪ್ರಾಪ್ತ ವಯಸ್ಕರ ಕೈಗೆ ವಾಹನ ಕೊಡುವುದು, ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಇವೆಲ್ಲವೂ ವಿಮಾ ಷರತ್ತಿನ ಉಲ್ಲಂಘನೆ. ಹಾಗಾಗಿ ಅಪಘಾತದಲ್ಲಿ ಮೃತಪಟ್ಟವರ ವಾರಸುದಾರರು ಅಥವಾ ಗಾಯಾಳು ಅಪ್ರಾಪ್ತ ವಯಸ್ಕ ಚಾಲನೆ ಮಾಡಿದ ವಾಹನದ ವಿಮಾ ಕಂಪನಿಯಿಂದ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪ್ರಕರಣಗಳಲ್ಲಿ ಪರಿಹಾರ ನೀಡುವ ಸಂಪೂರ್ಣ ಹೊಣೆ ವಾಹನ ಮಾಲೀಕ ಅಥವಾ ಅಪ್ರಾಪ್ತನ ಪೋಷಕರ ಮೇಲೆ ಬೀಳಲಿದೆ. ನ್ಯಾಯಾಧಿಕರಣ ಆದೇಶಿಸುವ ಪರಿಹಾರದ ಮೊತ್ತ ಮೃತರ ಅಥವಾ ಗಾಯಾಳುಗಳ ವೃತ್ತಿ, ಆದಾಯ ಮತ್ತು ಪ್ರಾಯವನ್ನು ಆಧರಿಸಿ ಲಕ್ಷಾಂತರ ರೂಪಾಯಿಗಳವರೆಗೂ ಬರಬಹುದು, ಕೋಟಿ ರೂಪಾಯಿ ಮೊತ್ತ ದಾಟಲೂ ಬಹುದು.

ಮೋಟಾರು ವಾಹನ ಅಪಘಾತ ವಿಮಾ ಪರಿಹಾರ ನ್ಯಾಯಾಧಿಕರಣದ ಪೀಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನನ್ನ ಮುಂದೆ ಬಂದ ಒಂದು ಪ್ರಕರಣದ ಘಟನೆ ಹೀಗಿತ್ತು. 15 ವರ್ಷದ ಹುಡುಗ ಬೈಕ್ ಚಾಲನೆ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರಿಗೆ ಡಿಕ್ಕಿ ಪಡಿಸಿ ಆ ಸಾಫ್ಟ್ವೇರ್ ಇಂಜಿನಿಯರ್ ಸಾವಿಗೆ ಕಾರಣಕರ್ತನಾಗುತ್ತಾನೆ. ಆ ಪ್ರಕರಣದಲ್ಲಿ ಮೃತನ ವಾರಸುದಾರರಿಗೆ ಎಂಬತ್ತು ಲಕ್ಷ ಹಣ ಪಾವತಿಸಲು ನ್ಯಾಯಾಧಿಕರಣದಿಂದ ಆದೇಶವಾಗುತ್ತದೆ. ಅಪಘಾತಕ್ಕೆ ಕಾರಣಕರ್ತ ನಾದ ಬಾಲಕನ ತಂದೆ ಶಾಲಾ ಶಿಕ್ಷಕ.

ಹಣ ಪಾವತಿಸಲು ಯಾವುದೇ ದಾರಿ ಕಾಣದೆ ಕೊನೆಗೆ ಜೈಲಿಗೆ ಹೋಗುವುದು ಖಚಿತವಾದಾಗ ವಾಸವಿದ್ದ ಮನೆ ಮಾರಿ ಹಣ ತಂದು ನ್ಯಾಯಾಲಯದಲ್ಲಿ ಕಟ್ಟುತ್ತಾರೆ. ಅಪ್ರಾಪ್ತ ಬಾಲಕರು ಮಾಡುವ ತಪ್ಪಿನಿಂದ ಪೋಷಕರು ದಂಡ ತೆರಬೇಕಾಗಿ ಬಂದ ಇಂತಹ ಹಲವು ಪ್ರಕರಣಗಳನ್ನು ನನ್ನ ವೃತ್ತಿ ಜೀವನದಲ್ಲಿ ನೋಡಿದ್ದೇನೆ. ಮೊನ್ನೆ ಮೇ 19 ರಂದು ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮದ್ಯದ ಅಮಲಿನಲ್ಲಿ ಪೋರ್ಷೆ ಕಾರ್ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಎಂಬ ಇಬ್ಬರು ಸಾಫ್ಟ್ವೇರ್ ಉದ್ಯೋಗಿಗಳು ಸಾವನ್ನಪ್ಪಿದ ದುರಂತ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. (ಕೃಪೆ : ಶಫೀರ್ ಎ .ಎ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ರಾಘವೇಂದ್ರ ಎನ್ ಬಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Published

on

ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ..

ದಾವಣಗೆರೆ ನಗರದ ಜಿಎಫ್ ಜಿಸಿ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದಿಂದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಆಯ್ಕೆ ಗಳು ನಡೆದವು, ಕಾಲೇಜಿನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿರುವ ರಾಘವೇಂದ್ರ, ಹಳೇ ಕುಂದುವಾಡದ ಬಸವರಾಜ್, ಲಕ್ಷ್ಮಿದೇವಿ ದಂಪತಿಯ ಪುತ್ರನಾಗಿದ್ದು, ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ದೇಹ ಪ್ರದರ್ಶಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾನೆ.

ಓದಿನ ಜೊತೆಗೆ ತನ್ನ ತಂದೆಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಬಿಡುವಿನ‌ ವೇಳೆಯಲ್ಲಿ ಕೋಚ್ ಮಧು ಪೂಜಾರ್ ಮಾರ್ಗದರ್ಶನದಲ್ಲಿ ದೇಹ ಹುರಿಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾನೆ, ಸ್ಪರ್ಧೆಯಲ್ಲಿ ಬೈಸಿಪ್ಸ್, ಲ್ಯಾಟ್ ಸ್ಟ್ರೈಡ್ ಪೋಸ್ ಕೊಟ್ಟು ನೋಡುಗರನ್ನು, ತೀರ್ಪುಗಾರರನ್ನು ಬೆರಗುಗೊಳಿಸಿದ್ದಾನೆ.

ಇನ್ನೂ ರಾಘವೇಂದ್ರನ ದೇಹ ಪ್ರದರ್ಶನ ವೇಳೆ ಶಿಳ್ಳೆ, ಚಪ್ಪಾಳೆ ಕೇಳಿ ಬಂದವು, ರಾಘವೇಂದ್ರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಬರುವ ಫೆಬ್ರುವರಿಯಲ್ಲಿ ಮಂಗಳೂರಿನಲ್ಲಿ ಸ್ಪರ್ಧೆ ನಡೆಯಲಿದೆ, ಇನ್ನೂ ಚಿನ್ನದ ಪದಕ ಗಳಿಸಿರುವ ರಾಘವೇಂದ್ರನಿಗೆ ಜಿಎಫ್ ಜಿಸಿ ಕಾಲೇಜು ಆಡಳಿತ ಮಂಡಳಿ, ಮಾರ್ಗದರ್ಶಕರು, ಹಳೇ ಕುಂದುವಾಡ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಅದ್ವಿತೀಯ 2024ರಲ್ಲಿ ಜಿಎಂಐಟಿ ಕಾಲೇಜಿನ ಸಿಎಸ್ಇ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನ

Published

on

ಸುದ್ದಿದಿನ,ದಾವಣಗೆರೆ:ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (ಸಿ.ಎಸ್.ಇ) ವಿಭಾಗದ 5ನೇ ಸೆಮಿಸ್ಟರ್ ‘ಎ’ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್ ಯು. ಮತ್ತು ಅಫ್ರಿದ್ ಆರ್.ಕೆ. ಈ ಇಬ್ಬರು ಇತ್ತೀಚಿಗೆ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ಸಂಸ್ಥೆಯಲ್ಲಿ ನಡೆದ ಅದ್ವಿತೀಯ 2024ರಲ್ಲಿ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಬಿ. ಸಂಜಯ್ ಪಾಂಡೆ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎನ್. ವೀರಪ್ಪ, ಇನ್ಫಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ನೀಲಾಂಬಿಕೆ, ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಉಪ ನಿರ್ದೇಶಕರಾದ ಎಂ. ಸಂತೋಷ ಕುಮಾರ್, ಜಿಎಂ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಎಸ್. ಓಂಕಾರಪ್ಪ ಸೇರಿದಂತೆ ಆಡಳಿತ ಮಂಡಳಿ, ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending