Connect with us

ಭಾವ ಭೈರಾಗಿ

ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಗಡೆ ಅವರ ಭಾಷಣ ; ಮಿಸ್ ಮಾಡ್ದೆ ಓದಿ

Published

on

  • ಶೃಂಗೇರಿಯಲ್ಲಿ ದಿನಾಂಕ 10- 01- 2020 ರಂದು ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರೀ ಕಲ್ಕುಳಿ ವಿಠಲ್ ಹೆಗ್ಗಡೆ ಅವರ ಭಾಷಣದ ಬರಹ ರೂಪ

ನಮ್ಮ ಶೃಂಗೇರಿಯ ಆದಿಕವಿ ಬಾಹುಬಲಿಯನ್ನು ಸ್ಮರಿಸುತ್ತಾ ನನ್ನ ಭಾಷಣವನ್ನು ಪ್ರಾರಂಭಿಸುತ್ತಿದ್ದೇನೆ.

ಜಿಲ್ಲಾ 19ನೇ ಕನ್ನಡ ಸಾ ಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿಯ ಈ ಗೌರವವನ್ನು ನಾನು ಬಯಸಿರಲಿಲ್ಲ; ನಿರೀಕ್ಷಿಸಿಯೂ ಇರಲಿಲ್ಲ. ಆದರೂ ನೀವೆಲ್ಲರೂ ಪ್ರೀತಿಯಿಂದ ಈ ಗೌರವ ನೀಡಿದ್ದೀರಿ. ಇದಕ್ಕಾಗಿ ನಾನು ನಿಮಗೆಲ್ಲರಿಗೂ ಅಭಾರಿಯಾಗಿದ್ದೇನೆ.

ನಾನು ಈ ಮೊದಲು ಸ್ಮರಿಸಿದ ಬಾಹುಬಲಿ ಎಂಬ ಜೈನ ಕವಿಯು, ಶೃಂಗೇರಿಯೂ ಆಡಳಿತಕ್ಕೊಳಪಟ್ಟಿದ್ದ ಕಾರ್ಕಳದ ದೊರೆ ಭೈರವೇಂದ್ರನ ಆಸ್ಥಾನದಲ್ಲಿ ಕವಿಯಾಗಿದ್ದನೆಂದು ಇತಿಹಾಸ ಹೇಳುತ್ತದೆ. ಈತನ ಗ್ರಂಥ ‘ನಾಗಕುಮಾರ ಚರಿತೆ’ಯಲ್ಲಿ ಮುಖ್ಯವಾಗಿ ಕರ್ಮಮಾರ್ಗದ ಪ್ರಸ್ತಾಪ ಬರುತ್ತದೆ. ನನ್ನದೂ ಕರ್ಮಮಾರ್ಗವೇ. ನಮ್ಮ ನೆಲ, ಜಲ ಮತ್ತು ನಮ್ಮ ಜನರಿಗೆ ಸರ್ಕಾರದಿಂದಲೇ ಆಗಲಿ, ಇನ್ಯಾರಿಂದಲೇ ಆಗಲಿ ಸಂಕಷ್ಟ ಬಂದಾಗಲೆ ಧ್ವನಿ ಎತ್ತುವ ಕಾಯಕ ಮಾಡಿದ್ದೇನೆ. ಅಗತ್ಯ ಬಿದ್ದಾಗ ಹೋರಾಟಕ್ಕಿಳಿದಿದ್ದೇನೆ. ಇದು ನನ್ನ ಕರ್ತವ್ಯವಾಗಿದೆ.

ಈ ಅಧ್ಯ ಕ್ಷ ಸ್ಥಾನವು ಈ ಹಿಂದಿನ ನನ್ನ ಹೋರಾಟಕ್ಕೆ ಸಂದ ಗೌರವ ಎಂದು ಭಾವಿಸಿದ್ದೇನೆ. ನನ್ನ ಹೋರಾಟದ ಅನುಭವ ಮತ್ತು ಚಿಂತನೆಗಳು ನನ್ನ ಕೃತಿ, ಪ್ರಬಂಧ, ಲೇಖನಗಳಲ್ಲಿ ಅಭಿವ್ಯಕ್ತಗೊಂಡಿದ್ದು, ಅವೇ ಈ ವೇದಿಕೆಯನ್ನು ತಮ್ಮೆಲ್ಲರ ಅಭಿಮಾನದ ಮೇರೆಗೆ ದೊರಕಿಸಿಕೊಟ್ಟಿತ್ತೆಂದು ಕೊಳ್ಳುತ್ತೇನೆ. ನನ್ನನ್ನು ಆಯ್ಕೆಮಾಡಿದ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಕ್ಷರು, ಪದಾಧಿಕಾರಿಗಳಿಗೆ, ಅಭಿಮಾನಿಗಳಿಗೆ, ಸ್ನೇಹಿತರಿಗೆ, ಸಮಸ್ತರಿಗೆ ಮೊದಲಿಗೆ ಅಂತರಾಳದ ನಮಸ್ಕಾರ ತಿಳಿಸುತ್ತೇನೆ.

ಶೃಂಗೇರಿ ಎಂದರೆ ಹಾವು ಗರ್ಭಿಣಿ ಕಪ್ಪೆಗೆ ನೆರಳು ನೀಡಿದ ಜಾಗ. ಸೌಹಾರ್ದತೆಯ ಪರಂಪರೆಗೆ ಇದಕ್ಕಿಂತ ದೊಡ್ಡ ಉದಾಹರಣೆ ನನಗಂತೂ ಸಿಕ್ಕಿಲ್ಲ. ಈ ಕಾರಣದಿಂದ ನನಗೆ ನನ್ನೂರಿನ ಬಗ್ಗೆ ಹೆಮ್ಮೆ ಎಲ್ಲರಿಗಿಂತಲೂ ಒಂದು ಹಿಡಿ ಹೆಚ್ಚು. ಇಂತಹ ನನ್ನೂರಿನಲ್ಲಿ ನಡೆಯುತ್ತಿರುವ ಈ ಕನ್ನಡ ಹಬ್ಬದಲ್ಲಿ ಈ ಗೌರವ ಪಡೆಯುತ್ತಿರುವುದರಿಂದ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ಹೇಳಲಾರೆ.

ಪ್ರಿಯ ಬಂಧುಗಳೇ,

ಇದೊಂದು ಸಾಹಿತ್ಯ ಸಮ್ಮೇಳನ ಎಂಬುದಕ್ಕಿಂತ ಕನ್ನಡಿಗರ ಸ್ವಾಭಿಮಾನದ ಸಮಾವೇಶವಾಗಿ ಇತಿಹಾಸದಲ್ಲಿ ದಾಖಲಾಗಲಿದೆ.ಇದು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದ್ದರೂ, ಬುದ್ದಿಗೇಡಿಗಳಿಂದಾಗಿ ಅಖಿಲ ಕರ್ನಾಟಕ ಮಟ್ಟದಲ್ಲಿ ಸುದ್ದಿ ಮಾಡಿ ಪ್ರಚಾರ ಪಡೆದಿದೆ. ಎಷ್ಟೇ ಅಡೆ-ತಡೆಗಳು ಎದುರಾದರೂ ಇದರ ಯಶಸ್ಸಿಗಾಗಿ ಹಲವಾರು ಕನ್ನಡ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ದ್ದಾರೆ. ಅನೇಕರು ತಮ್ಮ ಕೈಯಲ್ಲಾದಷ್ಟು ಆರ್ಥಿಕ ನೆರವು ನೀಡಿದ್ದಾರೆ. ಆ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಎಸೆದ ಸವಾಲನ್ನು ದಿಟ್ಟವಾಗಿ ಎದುರಿಸಿದ್ದಾರೆ. ಇದು ನನ್ನಲ್ಲಿ ಹೋರಾಟದ ಕಾವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಷ್ಟೇ ನಾನು ಈ ಸಂದರ್ಭದಲ್ಲಿ ಹೇಳಬಲ್ಲೆ.

ನನ್ನನ್ನು ಈ ಸಮ್ಮೇಳನದ ಅಧ್ಯ ಕ್ಷ ರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯ ಕ್ಷ ರು ಮಾಹಿತಿ ನೀಡಿದ ಕೂಡಲೇ ನನ್ನ ನೆನಪಿಗೆ ಬಂದವರು, ಪರಂಪರೆಯ ಕಥೆಗಳನ್ನು ಮತ್ತು ಜೀವನಾನುಭವದ ಸಂಗತಿಗಳನ್ನು ಧಾರೆ ಎರೆದು ಪೋಷಿಸಿದ ನನ್ನ ಅಪ್ಪ-ಅಮ್ಮ, ಆನಂತರ ನನ್ನನ್ನು ಬೆಳೆಸಿದ ಪ್ರಗತಿಪರ ಚಳವಳಿ ಗಳು, ಸಾರ್ವಜನಿಕ ಬದುಕಿನ ಬವಣೆಗಳ ಮುಖಾಮುಖಿಗೆ ಬೆನ್ನೆಲುಬಾಗಿ ನಿಂತ ಕುಟುಂಬವರ್ಗ ಮತ್ತು ನನ್ನ ಸಂಗಾತಿಗಳು, ಸ್ನೇಹಿತರು.

ಈ ಎಲ್ಲರಿಗೂ ನನ್ನ ನಮನಗಳು ಸಲ್ಲುತ್ತವೆ. ಈ ಆತಂಕದ ಸಂದರ್ಭದಲ್ಲಿಯೂ ದೂರ ದೂರದ ಊರಿನಿಂದ ಬಂದಿರುವ ಮತ್ತು ಇಲ್ಲಿಯ ಕನ್ನಡಾಭಿಮಾನಿಗಳಿಗೆ ನಾನು ಋಣಿ.
ಏನನ್ನಾದರೂ ಬರೆದು ಓದಬೇಕೆಂದರೆ ನನಗೆ ಎಲ್ಲಿಲ್ಲದ ಹಿಂಜರಿಕೆ. ನಾನೆಂದೂ ಜನರೆದುರು ನಿಂತನಿಲುವಿನಲ್ಲಿ ಆಲೋಚಿಸುತ್ತಲೇ ಹೊಳೆದಂತೆ ಮಾತಾಡುವವನು. ಇಲ್ಲಿಯೂ ಹಾಗೆ ಮಾಡಬೇಕೆಂಬ ಆಸೆ ನನ್ನದಾಗಿತ್ತು. ಆದರೆ ಸತ್‌ಸಂಪ್ರದಾಯವನ್ನು ಮೀರಬಾರದೆಂಬ ಕಾರಣಕ್ಕೆ ಭಾಷಣವನ್ನು ಓದುತ್ತಿದ್ದೇನೆ.

ಭಾಷಣ ಮಾಡುವುದಕ್ಕಿಂತ ಭಾಷಣ ಬರೆಯುವುದು ಹೆಚ್ಚು ತ್ರಾಸದ ಕೆಲಸವೆಂಬುದು ನನಗೆ ಕಳೆದ ಒಂದು ತಿಂಗಳಿನಲ್ಲಿ ಅರಿವಾಗಿದೆ. ನಾನು ಈ ಭಾಷಣವನ್ನು ನನ್ನೊಳಗೇ ಅಂದುಕೊಳ್ಳುತ್ತ, ತಿದ್ದಿಕೊಳ್ಳುತ್ತ, ಆಡಬೇಕೆಂದು ಅನ್ನಿಸುವ ಈ ನನ್ನ ಮಾತುಗಳು ಅವಶ್ಯಕವೇ? ಈಗಿನ ವಿದ್ಯಮಾನದಲ್ಲಿ ಎಷ್ಟು ಪ್ರಸ್ತುತವಾದೀತು ಎಂದು ಆಲೋಚಿಸುತ್ತ, ವಿಶ್ಲೇಷಿಸುತ್ತ ಕಾಲಕಳೆದಿದ್ದೇನೆ. ಅಧ್ಯ ಕ್ಷ ನಾಗಿ ಆಯ್ಕೆಯಾದದ್ದನ್ನು ತಿಳಿದ ದಿನದಿಂದಲೂ ಈಗ ಇಲ್ಲಿ ನಿಮ್ಮೆದುರು ಮಾತಾಡಲು ನಿಂತಿರುವ ಕ್ಷ ಣವನ್ನು ಆತಂಕದಿಂದ ಊಹಿಸಿಕೊಳ್ಳುತ್ತ ಕಳೆದಿ ದ್ದೇನೆ. ಈ ಹೊತ್ತಲ್ಲಿ ನಿಮ್ಮ ಮುಂದೆ ಆಡಲೇ ಬೇಕಾಗಿರುವ ಹಲವು ಮಾತುಗಳು ನನ್ನ ಮುಂದಿವೆ. ಅವುಗಳಲ್ಲಿ ಕೆಲವು ವಿಷಯಗಳನ್ನು ಮಾತ್ರ ನಾನಿಲ್ಲಿ ಪ್ರಸ್ತಾಪಿಸುತ್ತೇನೆ.

ಆತ್ಮೀಯ ಕನ್ನಡ ಪ್ರೇಮಿಗಳೇ,

ಸಾಹಿತ್ಯ ಸಮ್ಮೇಳನಗಳು ಕನ್ನಡ ನುಡಿ ಜಾತ್ರೆಗಳಾಗಿವೆಯೇ ಹೊರತು, ಕನ್ನಡಿಗರ ಧ್ವನಿಯಾದ ಉದಾಹರಣೆಗಳು ಬಹಳ ಕಡಿಮೆ. ಇನ್ನು ಸಮ್ಮೆಳನಾಧ್ಯಕ್ಷರ ಭಾಷಣದಲ್ಲಿನ ವಿಷಯಗಳನ್ನು ಮುಂದಿಟ್ಟುಕೊಂಡು ಗಂಭೀರ ಚರ್ಚೆ ನಡೆಸಿದ್ದಿಲ್ಲ. ಅಧ್ಯಕ್ಷೀಯ ಭಾಷಣದಲ್ಲಿನ ಬೇಡಿಕೆ, ಅಹವಾಲುಗಳಾಗಲೀ, ಅಥವಾ ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ ತೀರ್ಮಾನಿಸಿದ ನಿರ್ಣಯಗಳಾಗಲೀ, ಜಾರಿಗೆ ಬಂದಿದ್ದು, ನಾಡು-ನುಡಿಯ ಸಮಸ್ಯೆಗಳು ಬಗೆಹರಿದಿದ್ದು ಅಪರೂಪ.

ನನ್ನ ಹೋರಾಟದ ಅನುಭವದಲ್ಲಿ ಹೇಳುವುದಾದರೆ ನಾನು ತುಮಕೂರಿನಲ್ಲಿ ಮತ್ತು ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ, ರಾಜ್ಯ ಮತ್ತು ಮಲೆನಾಡಿನ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಇವುಗಳನ್ನು ಸಮ್ಮೇಳನದ ನಿರ್ಣಯಗಳಲ್ಲಿ ಸೇರಿಸಬೇಕೆಂದು ಒತ್ತಾಯ ಮಾಡಿ, ಪ್ರತಿಭಟನೆ ಕೂಡ ಮಾಡಿ, ಅದರಲ್ಲಿ ಯಶಸ್ವಿಯೂ ಆಗಿದ್ದೇನೆ. ಆದರೆ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದರೂ ಈ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲವೆಂಬ ಬಹುದೊಡ್ಡ ವಿಷಾದ ನನ್ನಲ್ಲಿದೆ.

ಅಂದ ಮಾತ್ರಕ್ಕೆ ಈ ರೀತಿಯ ಸಮ್ಮೇಳನದಲ್ಲಿ ನ್ಯಾಯಯುತ ಬೇಡಿಕೆಗಳನ್ನು, ಸಮಾಜದ ಸಂಕಟಗಳನ್ನು ಪ್ರಸ್ತಾಪಿಸುವುದು ವ್ಯರ್ಥವೆಂಬುದು ನನ್ನ ಅಭಿಪ್ರಾಯವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮ ಅಹವಾಲನ್ನು, ಬೇಡಿಕೆಗಳನ್ನು ಸಲ್ಲಿಸುವುದು ಸಂವಿಧಾನಾತ್ಮಕ ಹಕ್ಕು. ಜನ ಜಾಗೃತರಾದರೆ ಸರ್ಕಾರಗಳು ಇವುಗಳಿಗೆ ಬೆಲೆ ನೀಡಲೇಬೇಕಾಗುತ್ತದೆ. ಆ ದೃಷ್ಟಿಯಿಂದ ಇಂದು ನಾನಿಲ್ಲಿ ಪ್ರಸ್ತಾಪಿಸುವ ವಿಷಯಗಳು ನಾವೆಲ್ಲರೂ ಸೇರಿ ನೀಡುತ್ತಿರುವ ಆದೇಶವೆಂದೂ, ಇದು ನನ್ನ ಜವಾಬ್ದಾರಿಯೂ ಹೌದೆಂದು ತಿಳಿದು ಈ ಭಾಷಣವನ್ನು ಮುಂದುವರೆಸುತ್ತೇನೆ.

ಈ ಸಾಹಿತ್ಯ ಸಮ್ಮೇಳನದಲ್ಲಿ ನಾನು ವಿನಮ್ರವಾಗಿ ಒಪ್ಪಿಕೊಳ್ಳುವುದೆಂದರೆ ನಾನು ಮೂಲತಃ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಕಲಿತವನಲ್ಲ. ತಮಗೆಲ್ಲರಿಗೂ ಗೊತ್ತಿರುವಂತೆ ನಾನು ಪರಿಸರ ಮತ್ತು ಸಾಮಾಜಿಕ ಹೋರಾಟದ ಕಾರ್ಯಕರ್ತ. ಕಳೆದ ಭರ್ತಿ ನಾಲ್ಕು ದಶಕಗಳಿಂದ ಒಂದಿಂದು ಹೋರಾಟಗಳಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ಹಾಗೆ ಹೇಳುವುದಾದರೆ ಯಾರಾದರೂ ನನ್ನ ಇತ್ತೀಚಿನ ಕೃತಿಗಳನ್ನು ಓದಿ ನನ್ನನ್ನು ಸಾಹಿತಿ ಎಂದು ಗುರುತಿಸುವುದಕ್ಕಿಂತ ಹೋರಾಟಗಾರನೆಂದರೆ ನನಗೆ ಹೆಚ್ಚು ಖುಷಿಯಾಗುತ್ತದೆ.

ವಾಸ್ತವವೆಂದರೆ ರಾಜ್ಯದಾದ್ಯಂತ ನಡೆದ ಹೋರಾಟಗಳಲ್ಲಿ ಭಾಗವಹಿಸಿದ್ದರಿಂದ ನನಗೆ ಸಿಕ್ಕ ಸ್ನೇಹಿತರು, ಅಭಿಮಾನಿಗಳ ಬೆಂಬಲವೆಷ್ಟೋ ಅಷ್ಟೇ ನನ್ನ ಕೃತಿ ‘ಮಂಗನಬ್ಯಾಟೆ’ಗೂ ವಿಸ್ತೃತವಾದ ಸ್ಪಂದನೆ ಸಿಕ್ಕಿದೆ. ಇದರ ಅರಿವೂ ನನಗಿದೆ. ಹೋರಾಟ ಸಾಹಿತ್ಯದಿಂದ ಹೊರತಲ್ಲ. ಸಾಹಿತ್ಯವೂ ಹೋರಾಟದಿಂದ ಹೊರತಲ್ಲ. ಅವು ಒಂದಕ್ಕೊಂದು ಪೂರಕವೇ. ಸೈದ್ಧಾಂತಿಕ ಪ್ರೇರಣೆಯಿಲ್ಲದ ಹೋರಾಟಗಳಾಗಲೀ; ಸಾಮಾಜಿಕ ಬದ್ಧತೆಯಿಲ್ಲದ ಸಾಹಿತ್ಯವಾಗಲೀ- ಎರಡೂ ಜೊಳ್ಳು. ಜನಸಮಾನ್ಯರ ಸಂಕಟಗಳನ್ನು ಪರಿಹರಿಸುವಲ್ಲಿ ಹೋರಾಟಗಳಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಅಷ್ಟೇ ಜವಾಬ್ದಾರಿ ಸಾಹಿತ್ಯಕ್ಕೂ ಇರುತ್ತದೆ.

ಮೌಲ್ಯಯುತ ಸಾಹಿತ್ಯ ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕಾಗುತ್ತದೆ. ಈ ಬದ್ಧತೆಯ ವಿಷಯ ಬಂದಾಗ ನನ್ನ ಆತ್ಮೀಯರಾದ, ಖ್ಯಾತ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅವರ ಮಾತು ನೆನಪಿಗೆ ಬರುತ್ತದೆ, ಅವರು ‘ಸಾಹಿತ್ಯ ಮತ್ತು ಬದ್ಧತೆ’ ಲೇಖನದಲ್ಲಿ ಹೀಗೆ ಬರೆಯುತ್ತಾರೆ;
ಸಾಮಾಜಿಕ ಕಳಕಳಿಯ ಹಿನ್ನೆಲೆಯುಳ್ಳ ಬದ್ಧತೆ ಈ ಕಾಲದ ಅಗತ್ಯ. ಚರಿತ್ರೆ ಇಚ್ಛಿಸುವ ಸ್ಥಿತಿಯೆಂದರೆ ಸರಿಯಾದೀತು’. ಸಾಹಿತ್ಯ ಒಣ ಹರಟೆ, ಪುಂಡರ ಗೋಷ್ಠಿಯಲ್ಲ. ಅದು ಪ್ರತಿಪಾದಿಸುವುದೇನೆಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವುದು, ಮನಸ್ಸನ್ನು ಅರಳಿಸುವುದು. ಅವನಲ್ಲಿ ಹುದುಗಿರುವ ದುರಾಸೆ, ಕ್ರೌರ್ಯ, ಅಸೂಯೆ, ಆಕ್ರಮಣ ಪ್ರವೃತ್ತಿಗಳನ್ನು ತೊಡೆದು ಉದಾತ್ತತೆಯಿಂದ, ಸುಂದರ ಸುಖಮಯ ನೆಮ್ಮದಿಯನ್ನು ಅಭಿವ್ಯಕ್ತಿಸುವುದು. ಹಾಗೆ ನೋಡಿದರೆ ಈ ಮನುಷ್ಯ ಸಮಾಜವನ್ನು ಆಳುತ್ತಿರುವುದು ಸಾಹಿತ್ಯದ ಮೂಲಕವೇ. ಗೀತೆ, ಬೈಬಲ, ಖುರಾನ್ ನಂತಹ ಮಹತ್ ಧರ್ಮಗ್ರಂಥಗಳು ಕೋಟಿ ಕೋಟಿ ಜನರನ್ನು ನಿಯಂತ್ರಿಸುತ್ತಿವೆ.

ಒಂದು ಕಾಲದಲ್ಲಿ ಪ್ರಪಂಚದ ಮೂರನೇ ಎರಡರಷ್ಟು ಜನರನ್ನು ಮಾನವತಾವಾದಿ ಕಾರ್ಲ್ ಮಾರ್ಕ್ಸ್ ಸಮಾಜವಾದ ಸಿದ್ಧಾಂತದ ಕಮ್ಯುನಿಸಂ (ಪ್ರಣಾಳಿಕೆ) ನಿಯಂತ್ರಿಸುತ್ತಿತ್ತು. ಧರ್ಮ- ಸಿದ್ಧಾಂತಗಳು ತಮ್ಮ ತಮ್ಮ ಅನುಯಾಯಿಗಳನ್ನಷ್ಟೇ ನಿಯಂತ್ರಿಸಿದರೆ ಸಾಹಿತ್ಯ ಸಮಾಜದ ಎಲ್ಲರೂ ಮಾನವಂತರಾಗಿ ಬದುಕಲು ಸಹಾಯ ಮಾಡುತ್ತದೆ.

ಹುಟ್ಟಿದವರಿಗೆ ಸಾವಿದೆ; ಆದರೆ ಬರೆದ ಸಾಹಿತ್ಯಕ್ಕೆಂದೂ ಅಳಿವಿಲ್ಲ ಎಂಬ ಮಾತಿದೆ. ಈ ಮಾತಿಗೆ ಪುಷ್ಟಿದಾಯಕವಾದ ವಿಚಾರವೆಂದರೆ ಯುಗದಕವಿ, ಜಗದ ಕವಿ, ಮಲೆನಾಡಿನ ಕವಿ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ. ಕನ್ನಡ ಜೀವಂತವಿರುವವರೆಗೂ ನಮ್ಮ ಈ ಹೆಮ್ಮೆಯ ಕವಿಯ ಸಾಹಿತ್ಯ ಜೀವಂತವಾಗಿರುತ್ತದೆ.

ಕುವೆಂಪು ಎಂದರೆ ಮಲೆನಾಡು. ಅವರು ಈ ನಮ್ಮ ಮಲೆನಾಡಿನ ಪರಿಸರವನ್ನು ರಮ್ಯವಾಗಿ ವರ್ಣಿಸಿ ವಿಜೃಂಭಿಸಿದರು. ‘ಹಕ್ಕಿ ಬಳಗ ಸುತ್ತ ಕೂಡಿ ಬೈಗಂ ಬೆಳಗು ಹಾಡಿ ಹಾಡಿ ಮಲೆನಾಡ ಸಗ್ಗ ಮಾಡಿ’ ಎನ್ನುತ್ತಾ ಅವರು ಬರೆದ ಕವಿತೆ-ಕಾದಂಬರಿಗಳು ನನ್ನನ್ನು, ನನ್ನಂತಹ ಅನೇಕರನ್ನು ಪರಿಸರವಾದಿಯಾಗಿ ರೂಪಿಸಿದೆ ಎಂದರೆ ಸಾಹಿತ್ಯದ ಶಕ್ತಿ ಅಪೂರ್ವವಾದದ್ದು ಎಂದೆನಿಸುವುದಿಲ್ಲವೇ?

ನಾನು ಯಾವುದೇ ಸಾಹಿತ್ಯದ ಕೃತಿಯನ್ನಾದರೂ ವ್ಯಸನಕ್ಕಾಗಿ ಮಾತ್ರ ಓದುವುದಿಲ್ಲ, ಸಂಶೋಧನಾ ದೃಷ್ಟಿಯಿಂದಲೇ ಅಭ್ಯಾಸ ಮಾಡುತ್ತೇನೆ. ಆದ್ದರಿಂದ ನಾನು ಎಂದೆಂದೂ ಸಾಹಿತ್ಯದ ವಿದ್ಯಾರ್ಥಿಯೇ. ನನ್ನ ಹಾಗೂ ನನ್ನಂತಹ ಕೋಟ್ಯಂತರ ಜನರ ಅರಿವನ್ನು ಹೆಚ್ಚಿಸಿದ್ದು, ಹೆಚ್ಚಿಸುತ್ತಿರುವುದು ನಮ್ಮ ಭಾಷೆ ಕನ್ನಡ. ಕನ್ನಡ ಭಾಷೆಯೇ ನಮ್ಮ ಆಸ್ತಿ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಭಾಷೆಯ ಪರಂಪರೆಯೇ ಸೌಹಾದತೆ. ಹತ್ತನೇ ಶತಮಾನದಲ್ಲಿ ಆದಿಕವಿ ಪಂಪ ‘ಮಾನವ ಜಾತಿ ತಾನೊಂದೇ ವಲಂ’ ಎಂದು ಮಾನವತೆಯನ್ನು ಸಾರಿದ. ಸರ್ವಜೀವಿಗಳ ಆತ್ಮದಲ್ಲೂ ಪರಮಾತ್ಮನಿದ್ದಾನೆಂದು ಸಾರಿದ ಶಂಕರಾಚಾರ್ಯರು, ಚಾಂಡಾಲನಲ್ಲಿ ಈಶ್ವರನನ್ನು ಕಂಡರು.

ಕನ್ನಡ ನೆಲದ, ವಿಶ್ವಮಾನ್ಯ ಧಾರ್ಮಿಕ ಹೋರಾಟಗಾರ ಬಸವಣ್ಣ ಮನುಷ್ಯ ಮನುಷ್ಯರಲ್ಲಿ ಬೇಧವು ಸಲ್ಲದು ಎನ್ನುವುದನ್ನು ಸರಳವಾಗಿ ಹೇಳಿದ್ದು ಹೀಗೆ;

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ. ಇಂತಹ ಭವ್ಯ ಪರಂಪರೆ ಕನ್ನಡಕ್ಕಿದೆ.

ಕುವೆಂಪು ಅವರ ವಿಶ್ವದೃಷ್ಠಿ, ವಿಶ್ವಮಾನವ ಸಂದೇಶದ ‘ಅನಿಕೇತನ’ ಕವನ ನಮ್ಮೆಲ್ಲರ ಮಂತ್ರವಾಗಬೇಕು.

ನೂರು ಮತದ ಹೊಟ್ಟ ತೂರಿ,ಎಲ್ಲ ತತ್ವವೆಲ್ಲ ಮೀರಿ,ನಿರ್ದಿಗಂತವಾಗಿ ಏರಿ,ಓ ನನ್ನ ಚೇತನ, ಆಗು ನೀ ಅನಿಕೇತನ

ಈ ಕವನದ ಸಾಲುಗಳು ನಮಗೆ ಬೇಕಾದುದು ಆ ಮತ, ಈ ಮತ ಅಲ್ಲ, ಮನುಜಮತ. ಆ ಪಥ ಈ ಪಥ ಅಲ್ಲ, ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ. ಸರ್ವದ ಸರ್ವಸ್ತರ ಉದಯ ಎಂದು ಸಾರುತ್ತವೆ. ಇದು ಎಂದೆಂದಿಗೂ ಸರ್ವಕಾಲಿಕ ಪ್ರೇರಣೆಯಾಗಿದೆ.

“ಕುವೆಂಪು ಅವರು ವಿಶ್ವಮಾನವನಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವ ಪ್ರಣಾಳಿಕೆಯನ್ನು ಈ ಕವನದಲ್ಲಿ ಕೊಟ್ಟಿ ದ್ದಾರೆ” ಎಂದು ನಮ್ಮ ತಾಲೂಕಿನವರೇ ಆದ ಖ್ಯಾತ ಕವಿ ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ (ಎಸ.ವಿ. ಪರಮೇಶ್ವರ ಭಟ್ಟ) ಹೇಳಿರುವುದನ್ನು ನಾನಿಲ್ಲಿ (ಕೃತಿ: ರಸಋಷಿ ಕುವೆಂಪು) ನೆನಪಿಸುತ್ತೇನೆ. ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದ ನಮ್ಮ ತಾಲೂಕಿನ ಈ ಹೆಮ್ಮೆಯ ಸಾಹಿತಿಯನ್ನು ಸ್ಮರಿಸುತ್ತೇನೆ.

ಕುವೆಂಪು ಅವರು ‘ಹೋಗುವೆನು ನಾ’ ಕವನದಲ್ಲಿ;

ಅಲ್ಲಿ ಇಂತಿರಬೇಕು, ಇಂತಿರಬಾರದೆಂಬುವುದಿಲ್ಲವೈ;
ಅಲ್ಲಿ ಹೊರೆ ಹೊಣೆಯಿಲ್ಲ; ಶಾಸ್ತ್ರದ ವಿಧಿ ನಿಷೇಧಗಳಿಲ್ಲವೈ;
ಜಾತಿಗೀತಿಯ ವೇದಭೇದದ ಕಟ್ಟುಕಟ್ಟಳೆ ನಿಲ್ಲದೈ:
ಅಲ್ಲಿ ಪ್ರೀತಿಯೆ ನೀತಿ; ಧರ್ಮಕೆ ಬೇರೆ ಭೀತಿಯೆ ಸಲ್ಲದೈ!
ಎಂದು ಮಲೆನಾಡಿನಲ್ಲಿನ ಸಾಮರಸ್ಯವನ್ನು ದಾರ್ಶನಿಕತೆಯಿಂದ ಅಭಿವ್ಯಕ್ತಪಡಿಸಿರುವುದು ನಮ್ಮ ಬದುಕಿಗೆ, ಶತಮಾನದುದ್ದಕ್ಕೂ ದಾರಿದೀಪವಾಗಿದೆ.

ಮಾನವತಾ ಪ್ರೇಮಿಗಳೇ,

ಹತ್ತು ಹನ್ನೊಂದನೇ ಶತಮಾನದಲ್ಲಿ ಐರೋಪ್ಯ ರಾಷ್ಟ್ರವೊಂದರಲ್ಲಿ ಒಂದು ಜಾನಪದ ಕಥೆ ಪ್ರಚಲಿತದಲ್ಲಿ ಇತ್ತಂತೆ. ಆ ಕತೆಯಲ್ಲಿ ಬರುವ ಗಿಳಿಯೊಂದು ತಾನು ನೋಡಿದ ಭೂಸ್ವರ್ಗದ ಬಗ್ಗೆ ವರ್ಣಿಸುತ್ತದೆ. ವರ್ಣನೆ ಹೇಗಿತ್ತೆಂದರೆ; ದೇವಲೋಕದಲ್ಲಿರುವ ಸ್ವರ್ಗದಂತಹ ಪ್ರದೇಶವೊಂದು ಭೂಮಿಯಲ್ಲಿ ಒಂದು ಕಡೆ ಇದೆ. ಆ ಭೂಮಿಯ ಸ್ವರ್ಗದಲ್ಲಿ ಹಗಲೆ ಸೂರ್ಯ ಪ್ರಜ್ವಲಿಸುತ್ತಾ ದಿನ ಪೂರ್ತಿ ಬೆಳಕು ಹರಿಸುತ್ತಿರುತ್ತಾನೆ.

ಕಾಲಕಾಲಕ್ಕೆ ಮಳೆ, ಸಮೃದ್ಧವಾದ ಬೆಳೆ, ಬೆಚ್ಚಗಿನ ವಾತಾವರಣ ವಿಶಾಲವಾದ ಹಸಿರು, ಹುಲ್ಲಿನ ಬಯಲು, ಆಕಾಶದೆತ್ತರದ ಮರಗಳು, ಹಸಿರು ಉಕ್ಕಿಸುವ ನಿತ್ಯ ಹರಿದ್ವರ್ಣದ ಕಾಡು, ಆಕಾಶಕ್ಕೂ ಭೂಮಿ ಒಂದು ಮಾಡುವ ಪರ್ವತಗಳು, ಸುಂದರ ಗಿರಿ-ವನಗಳು ಪರ್ವತಗಳ ನೆತ್ತಿಯಿಂದ ನಿರಂತರ ಹರಿಯುವ ಜಲಪಾತ, ಬೆಳ್ಳಿಯ ಬೆಟ್ಟ, ಹಾಲಿನ ಹೊಳೆ, ಜೇನಿನ ಮಳೆ, ಅಲ್ಲಿ ಹಸಿವಿಲ್ಲ, ಭಯವಿಲ್ಲ, ಸಿಹಿನೀರಿನ ಬುಗ್ಗೆಗಳು, ಮರಗಳೆಲ್ಲವೂ ಶ್ರೀಗಂಧ, ಸದಾ ಹೂ-ಹಣ್ಣುಗಳಿದ್ದ ಮೇಳೈಸುವ ಗಿಡ-ಗುಂಟೆಗಳು,ಸಸ್ಯಗಳೆಲ್ಲವೂ ಔಷಧಿಯುಕ್ತ.

ಪ್ರಾಣಿ-ಪಕ್ಷಿ ಮನುಷ್ಯರೆಲ್ಲರ ಸೌಹಾರ್ದ ಒಡನಾಟ, ಶತೃಗಳ ಭಯವಿಲ್ಲದ ಸ್ವಚ್ಛಂದ ಓಡಾಟ, ತೂಗುವ ತೆನೆಗಳು, ಹೂಬಿರಿದ ಮೊಗ್ಗುಗಳು,ಬಣ್ಣ ಬಣ್ಣದ ಜಲಚರಗಳು, ಹೀಗೆ ಎಲ್ಲವೂ ಸಮೃದ್ಧವಾಗಿರುವ ಸುಖ-ಶಾಂತಿಯ ನೆಮ್ಮದಿಯ ಪ್ರದೇಶ ಏಳು ಸಾಗರವ ದಾಟಿ ಹೋದರೆ ಭೂಮಿಯ ಈ ಸ್ವರ್ಗವನ್ನು ತಲುಪಬಹುದು. ಈ ಕತೆ ವರ್ಣನೆಯೊಂದಿಗೆ ಹೀಗೆ ಸಾಗುತ್ತದೆ. ಇದು ಕತೆ, ಆದರೆ ಇದನ್ನು ಓದಿದಾಗಲೆ ನನಗೆ ನಮ್ಮ ಮಲೆನಾಡನ್ನೇ ಈ ಕತೆಯಲ್ಲಿ ಕಟ್ಟಿಕೊಡಲಾಗಿತ್ತೇನೋ ಅನಿಸುತ್ತದೆ.

ಇಂತಹ ಮಲೆನಾಡಿಗೆ ಸಾಂಬಾರ ಪದಾರ್ಥಗಳ ಸುವಾಸನೆ ಹುಡುಕಿಕೊಂಡು 15ನೇ ಶತಮಾನದಲ್ಲಿ ಪಾಶ್ಚ್ಯಾತ್ಯರು ಬಂದು ಇನ್ನೂರು ವರ್ಷ ನಮ್ಮನಾಳಿದ್ದು ಎಲ್ಲರಿಗೂ ಗೊತ್ತಿದೆ. ಬ್ರಿಟೀಷರ ಆಳ್ವಿಕೆಯಲ್ಲಿ ಮಲೆನಾಡಿನ ಕಾಡೆಲ್ಲಾ ‘ಫಾರೆಸ್ಟ್’ ಆಯಿತು. ಅವರು ಕಾಡಿನ ಲೂಟಿಗಾಗಿ ರೈಲು, ಲಾರಿಗಳನ್ನು ಓಡಿಸಿದರು. ದಿವಂಗತ ತ್ಯಾನಂದೂರು ಪುಟ್ಟಣ್ಣಯ್ಯ ‘ನಾ ಕಂಡ ಮಲೆನಾಡು’ ಕೃತಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಕಷಾಯ ಸಂಸ್ಕೃತಿಯ ಮಲೆನಾಡಿಗೆ ‘ಕಾಫಿ ಸಂಸ್ಕೃತಿ’ ತಂದ ಬ್ರಿಟೀಷರು ಕಾಫಿ-ಟೀ ಎಸ್ಟೇಟ್‌ಗಳಿಗಾಗಿ ಗುಡ್ಡ ಗುಡ್ಡಗಳನ್ನೇ ಬೋಳಿಸಿದರು. ಒಂದು ಅಂದಾಜಿನ ಪ್ರಕಾರ ಈ ಭೂಮಿಯಲ್ಲಿ ಕಾಡು ಸೃಷ್ಟಿಯಾದನಂತರ ಬ್ರಿಟೀಷರು ಭಾರತಕ್ಕೆ ಬರುವವರೆಗೆ ಎಷ್ಟು ಕಾಡು ನಾಶವಾಗಿತ್ತೋ ಅಷ್ಟು ಕಾಡನ್ನು ಬ್ರಿಟೀಷರು ಭಾರತಕ್ಕೆ ಬಂದ ನಂತರ ಎರಡು ಶತಮಾನಗಳಲ್ಲಿ ನಾಶ ಮಾಡಿದ್ದರು.

ತಮಗೆ ಬೇಕಾದಂತೆ ಕಾಡನ್ನು ನಾಶ ಮಾಡಿದ ಬ್ರಿಟಿಷರು ತಮ್ಮ ‘ಶಿಕಾರಿ’ ಹುಚ್ಚಿಗಾಗಿ ಕಾಡನ್ನು ‘ಮೀಸಲು ಅರಣ್ಯ’ಗಳೆಂದು ಘೋಷಿಸಿದರು. ‘ಕಾನ್ ದೈವ’ (ಕಾಡನ್ನೇ ದೇವರೆಂದುಕೊಂಡು) ಎಂದು ಕಾಡನ್ನು ಪೂಜಿಸುತ್ತಿದ್ದವರ ನಂಬಿಕೆಗಳನ್ನು ಬುಡಮೇಲು ಮಾಡಿದರು. ಬ್ರಿಟೀಷರು ಹೇಳಿದರೂ ಕಾಡು ಕಡಿಯದ ‘ಗೌಡ್ಲು’ಗಳು, ಹಾಡ್ಯ, ದರಖಾಸ್ತು ಎಂದು ಹೇಳಿಕೊಂಡು ಕಾಡು ಬೆಳೆಸಿಕೊಂಡೇ ಬಂದ ನಮ್ಮ ರೈತ ವರ್ಗ ಈ ನಮ್ಮ ಕಾಡಿನ ನಿಜವಾದ ವಾರಸುದಾರರು.

ಬ್ರಿಟೀಷರು ಕಾಡನ್ನು ಎಷ್ಟೇ ದೋಚಿದ್ದರೂ ಕಾಡಿನ ಜನರನ್ನು ಮಾತ್ರ ಒಕ್ಕಲೆಬ್ಬಿಸಿರಲಿಲ್ಲ! ಆದರೆ ಈಗ ಪರಿಸರದ ಹೆಸರಿನಲ್ಲಿ ಅರಣ್ಯದೊಂದಿಗೆ ಪರಿಸರ ಸ್ನೇಹಿಯಾಗಿ ಬದುಕುವ ಅರಣ್ಯ ನಿವಾಸಿಗಳನ್ನೆ ಹೊರ ಹಾಕುವ ಪರಿಸರ ಸಾಮ್ರಾಜ್ಯಶಾಹಿ ದಾಳಿ ನಡೆಯುತ್ತಿದೆ. ಇದರ ವಿರುದ್ಧ ಕಳೆದ ಎರಡು ದಶಕಗಳಿಂದ ಪರಿಸರ ಹೋರಾಟಗಾರನಾಗಿ ದನಿ ಎತ್ತಿ ದ್ದೇನೆ. ಈ ನಮ್ಮ ಮಲೆನಾಡು, ಇಲ್ಲಿಯ ಪರಿಸರ ನಮ್ಮದು, ಇದನ್ನು ನಮ್ಮದಾಗಿಯೇ ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಹೊರಗಿನವರು ಪರಿಸರ ಸಂರ ಕ್ಷಣೆಯ ಹೆಸರಿನಲ್ಲಿ, ನಮ್ಮ ಕಷ್ಟ-ಸುಖಗಳನ್ನು ಕೇಳದೆ, ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೀಡಿದ ಕಸ್ತೂರಿ ರಂಗನ್ ವರದಿ, ಗಾಡ್ಗೀಳ್ ವರದಿಯನ್ನು ತಿರಸ್ಕರಿಸಬೇಕೆಂದು ನಾನು ಆಗ್ರಹಿಸುತ್ತೇನೆ.

ನಾನು ಪರಿಸರವಾದಿಯಲ್ಲ, ನನ್ನದು ಜನಪರ ಪರಿಸರವಾದ ಎಂದು ಈ ಹಿಂದಿನಿಂದಲೂ ಸ್ಪಷ್ಟಪಡಿಸುತ್ತಾ ಬಂದಿದ್ದೇನೆ. ಮೊದಲಿನಿಂದಲೂ ಜನರನ್ನು ಹೊರಗಿಟ್ಟು ನೋಡುವ ಪರಿಸರವಾದಕ್ಕೆ ನನ್ನ ವಿರೋಧವಿದೆ. ಪಾಶ್ಚಿಮಾತ್ಯ ಚಿಂತನೆಯ ಈ ಪರಿಸರವಾದದಲ್ಲಿ ಒಂದಿಷ್ಟು ಕಾಡನ್ನು ಉಳಿಸಿ, ಉಳಿದವರೆಲ್ಲಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದಕ್ಕೆ ಮಹತ್ವ ನೀಡಲಾಗುತ್ತದೆ. ಈಗ ಈ ರೀತಿಯ ಪರಿಸರವಾದವನ್ನು ಸಮರ್ಥಿಸುವವರು ನಗರಗಳಲ್ಲಿ ಹೆಚ್ಚಾಗಿದ್ದಾರೆ. ಹಾಗೆಯೇ ಈಗ ನಮ್ಮ ನಡುವೆಯೂ ಸೇರಿಕೊಂಡಿದ್ದಾರೆ. ಇವರಿಗೆ ತಾವು ಕಾಡು ಕಾಪಾಡಲಾಗದ ಮುಂದುವರೆದ ದೇಶಗಳು ದಾರಾಳವಾಗಿ ಹಣಕಾಸಿನ ನೆರವು ನೀಡುತ್ತಿವೆ.

ಭೂಮಿಯ ಕಾವು ದಿನದಿಂದ ದಿನಕ್ಕೆ ಹೆಚ್ಚಲು ಈ ಪಾಶ್ಚ್ಯಾತ್ಯ ಕಲ್ಪನೆಯ ಪರಿಸರವಾದವೇ ಕಾರಣ. ಭೂತಾಪಮಾನ ಏರಬಾರದೆಂದರೆ, ಹವಾಮಾನ ವೈಪರಿತ್ಯದ ಪರಿಣಾಮಗಳು ಕಡಿಮೆಯಾಗಬೇಕಾದರೆ, ಈ ಹಿಂದೆ ಭೂಮಿಯ ಮೇಲೆ ಇದ್ದಂತೆ ಎಲ್ಲೆಡೆಯೂ ಹಸಿರು ಹರಡಬೇಕು. ಹಸಿರಿನೊಂದಿಗೆ ಬೆರೆತ ಬದುಕು ಮನುಷ್ಯನದ್ದಾಗಬೇಕು. ಇದನ್ನು ಅರ್ಥಮಾಡಿಕೊಳ್ಳದೇ, ಎಲ್ಲದಕ್ಕೂ ಮಲೆನಾಡಿಗರನ್ನು ದೂರುವವರಿಗೆ ನನ್ನ ಧಿಕ್ಕಾರವಿದೆ.

ಹೀಗೆ ಹೇಳುವಾಗ ನನಗೆ ನೆನಪಾಗುವುದು 2019ರ ನವೆಂಬರ್ 16ರಂದು ನಮ್ಮ ಜಿಲ್ಲೆಯಲ್ಲಿರುವ ವಿದೇಶಿ ಪರಿಸರ ಸಂಘಟನೆಯೊಂದು ಹದಿನಾಲ್ಕು ರಾಜ್ಯಗಳ ಇಪ್ಪತ್ತೊಂದು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಾಡಿನೊಳಗೆ ಬದುಕುವ ಜನರನ್ನು ಹೊರಗೆ ಹಾಕುವುದು ಹೇಗೆಂದು ತರಬೇತಿ ನೀಡಿದ ವಿಷಯ. ಈ ಸಂದರ್ಭದಲ್ಲಿ ಜನರ ಬಳಕೆಯಲ್ಲಿದ್ದ ಒಂದು ಲಕ್ಷ 38ಸಾವಿರ ಎಕರೆ ಕಂದಾಯ ಭೂಮಿಯನ್ನು ರಾತ್ರೋ ರಾತ್ರಿ ಅರಣ್ಯ ಇಲಾಖೆಗೆ ಒಪ್ಪಿಸಿದ ಆಗಿನ ಜಿಲ್ಲಾಧಿಕಾರಿಗಳಿಗೆ ಸನ್ಮಾನವನ್ನೂ ಮಾಡಲಾಗಿದೆಯಂತೆ. ಇವರೆ ಮಲೆನಾಡಿನ ಮೂಲ ನಿವಾಸಿಗಳಾದ ನಮ್ಮನ್ನು ಏನೆಂದು ತಿಳಿದುಕೊಂಡಿದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅರಣ್ಯ ಸಂರ ಕ್ಷಣೆಯ ಹೆಸರಿನಲ್ಲಿ ಎಲ್ಲರನ್ನೂ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆಯೇ?

ನಾವು ಗಿರಿಜನರನ್ನು ಒಕ್ಕಲೆಬ್ಬಿಸುವುದು ಸೇರಿದಂತೆ ಮುಖ್ಯವಾಗಿ ನಾಲ್ಕು ಕಾರಣಗಳನ್ನು ಇಟ್ಟುಕೊಂಡು ಕುದುರೆ ಮುಖ ರಾಷ್ಟ್ರೀಯ ಉದ್ಯಾನಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು. ಆದರೆ ಕರ್ನಾಟಕದಲ್ಲಿರುವ ಕೇವಲ ಶೇ.36ಸಿಂಗಳಿಕ ಮಂಗಗಳು ‘ಭಗವತಿ’ ಅರಣ್ಯದಲ್ಲಿ ಮಾತ್ರ ಇವೆ ಎಂದು ಸುಳ್ಳು ವರದಿ ಕೊಟ್ಟು ಈ ಯೋಜನೆ ಜಾರಿಗೆ ತರಲಾಯಿತು.

ಇಂದ10-12ಸಾವಿರ ಜನರ ಬದುಕನ್ನು ಕಿತ್ತುಕೊಳ್ಳಲಾಗಿದೆ. ಕುದುರೆ ಮುಖ ರಾಷ್ಟ್ರೀಯ ಉದ್ಯಾನದೊಳಗೆ ಸಿಕ್ಕಿಹಾಕಿಕೊಂಡವರಿಗೆ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಕಾಡಿನೊಂದಿಗೆ ಬೆರೆತು ಬದುಕುತ್ತಿರುವ ಅವರಿಗೆ ಅಲ್ಲಿಯೇ ಬದುಕಲು ಬಿಡಿ, ಇಲ್ಲವೇ ಆಸುಪಾಸಿನಲ್ಲಿ ಪುನರ್ವಸತಿ ಯೋಜನೆಯಂತೆ ಬದುಕು ರೂಪಿಸಿಕೊಡಿ ಎಂದು ಆಗ್ರಹಿಸುತ್ತೇನೆ.

ನಮ್ಮ ಮಲೆನಾಡಿನಲ್ಲಿ ಕಳೆದ ಒಂದು ಶತಮಾನದಲ್ಲಿ ಎಷ್ಟು ಕಾಡು ನಾಶವಾಗಿದೆ, ಇದು ಮಳೆಯ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದನ್ನು ನಾನು ದಾಖಲೆ ಸಹಿತ ವಿವರಿಸಬಲ್ಲೆ. ಆದರೆ ಎಲ್ಲದಕ್ಕೂ ಸ್ಥಳಿಯರೇ ಕಾರಣ ಎಂದು ಒಪ್ಪಲಾರೆ. ಈ ರೀತಿಯ ಆರೋಪ ಮಾಡುತ್ತಾ ಇಲ್ಲಿಯ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸದೇ ಇರುವುದು ಘೋರ ಅನ್ಯಾಯ.

ಈ ವಿದೇಶಿ ಪರಿಸರ ವಾದಿಗಳ ಉಪಟಳ ಎಷ್ಟಿದೆಯೆಂದರೆ ಸೊಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಅಗತ್ಯ ಇರುವಲ್ಲಿ ಅಗಲ ಮಾಡಲೂ ಬಿಡುತ್ತಿಲ್ಲ. ಈ ಭಾಗದ ಜನತೆ ಆರೋಗ್ಯ, ವ್ಯವಹಾರಗಳಿಗೆ ಮಂಗಳೂರಿಗೆ ಹೋಗಬೇಕಾದರೆ ಇರುವ ಈ ಹೆದ್ದಾರಿಯಲ್ಲಿ ಬರುವ ಕೆರೆಕಟ್ಟೆ ರಸ್ತೆ, ಈ ರಸ್ತೆಯ ಅಕ್ಕಪಕ್ಕ ನಾಲ್ಕು ಅಡಿ ಮಣ್ಣು ಹಾಕಿ ಅಗಲ ಮಾಡಲು ಪರಿಸರ ಕಾಯ್ದೆಯನ್ನು ಬಳಸಿಕೊಂಡು ಅಡ್ಡಿಪಡಿಸುತ್ತಾರೆ ಅಂದರೆ ಮಲೆನಾಡಿಗರ ಪರಿಸ್ಥಿತಿಯ ಬಗ್ಗೆ ಎಲ್ಲರೂ ಯೋಚಿಸಬೇಕು. ವರ್ಷದಲ್ಲಿ ಈ ಹೆದ್ದಾರಿಯ 21 ಕಿ.ಮೀ. ವ್ಯಾಪ್ತಿಯಲ್ಲಿ ಹತ್ತು- ಇಪ್ಪತ್ತು ಅಪಘಾತಗಳಾಗಿ ಅಮಾಯಕರು ಅಸುನೀಗುತ್ತಿ ದ್ದಾರೆ. ಈ ಬಗ್ಗೆ ಜನ ಎಷ್ಟೇ ಹೋರಾಟ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಅಗತ್ಯ ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸುವವರು ಶೃಂಗೇರಿ -ಕೊಪ್ಪ ಜನರಿಗೆ 150 ಕಿ.ಮೀ. ಬಳಸಿ ಚಾರ್ಮುಡಿ ಮೂಲಕ ಮಂಗಳೂರಿಗೆ ತೆರಳಲು ಮಾರ್ಗವಿದೆ ಎಂದು ದಾರಿತಪ್ಪಿಸುತ್ತಿರುವುದು ಅಮಾನವೀಯವಲ್ಲವೇ? ಇದನ್ನು ಯಾರಾದರೂ ಪರಿಸರವಾದವೆಂದರೆ ಈ ವಾದ ನನ್ನದಂತೂ ಅಲ್ಲ.

ಪ್ರಪಂಚದ ಪರಿಸರ ಸಮತೋಲನದಲ್ಲಿ ಸದಾ ಹಸಿರಿನ ಮಲೆನಾಡಿಗೆ ವಿಶಿಷ್ಟ ಸ್ಥಾನಮಾನವಿದೆ. ನಮ್ಮ ಮಲೆನಾಡು ಜೀವ ವೈವಿಧ್ಯತೆಯ ಕಣಜ. ಪ್ರಪಂಚದ ಮೆಗಾ ಬಯೋ ಡೈವರ್ಸಿಟಿಗಳಲ್ಲಿ ಒಂದು. ಇಲ್ಲಿನ ಔಷಧಿ ಸಸ್ಯಗಳು ಅಮೂಲ್ಯವಾದವು. ತುಂಗಾ-ಭದ್ರಾ ಸೇರಿದಂತೆ ಪ್ರಮುಖ ನದಿಗಳೆಲ್ಲದರ ಉಗಮ ಸ್ಥಾನ ನಮ್ಮ ಪಶ್ಚಿಮಘಟ್ಟಗಳು.

ಇಂದು ಕರ್ನಾಟಕದ ಬಹುತೇಕ ವಿದ್ಯುತ್ ಮತ್ತು ನೀರಿನ ಅಗತ್ಯ ಪೂರೈಸುತ್ತಿರುವುದು ನಮ್ಮ ಮಲೆನಾಡು. ಅಂದರೆ ಮಲೆನಾಡು ಎಲ್ಲರಿಗೂ, ಎಲ್ಲದಕ್ಕೂ ಬೇಕು. ಮಲೆನಾಡನ್ನು ಅವಲಂಬಿಸದೇ ಇರುವವರು ಯಾರೂ ಇಲ್ಲ. ಆದರೆ ಮಲೆನಾಡಿನ ಪರಿಸರದೊಂದಿಗೆ ಸಹಬಾಳ್ವೆ ನಡೆಸಿದ ನರ ಮನುಷ್ಯನ ಬಗ್ಗೆ ಯಾರಿಗೂ ಜವಾಬ್ದಾರಿ ಇಲ್ಲ.

ಮಲೆನಾಡಿನಲ್ಲಿ ನೆರೆ ಬಾರದಿದ್ದರೆ ಬಯಲು ನಾಡಿನಲ್ಲಿ ಬರ ಬರುತ್ತದೆ. ಮಲೆನಾಡಿನಲ್ಲಿ ನೆರೆ ಎಂದರೆ ಕಣ್ಣೀರ ಧಾರೆ. ಈ ಎಲ್ಲ ಸಂಕಷ್ಟದಲ್ಲಿ ಬದುಕುತ್ತಿರುವ ಜನರನ್ನು ಈಗ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಇನ್ನಷ್ಟು ಕಷ್ಟಕ್ಕೆ ದೂರಲಾಗುತ್ತಿದೆ. ಹುಲಿ, ಹಾವು, ಆನೆ, ಮಂಗ ಇತ್ಯಾದಿ ಪ್ರಾಣಿಗಳ ಹೆಸರಿನಲ್ಲಿ ಹೊಸ ಹೊಸ ಯೋಜನೆಗಳನ್ನು, ಹೊಸ ಹೊಸ ಕಾಯ್ದೆ-ಕಾನೂನುಗಳನ್ನು ಜಾರಿಗೆ ತಂದು ಮಲೆನಾಡನ್ನು ಜನರಹಿತವಾಗಿ ಮಾಡಲಾಗುತ್ತಿದೆ.

ಆತ್ಮೀಯ ಬಂಧುಗಳೇ,

ಅರಣ್ಯ ಯೋಜನೆಗಳಿಂದ ಮಲೆನಾಡಿಗರು ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿಯೇ ಇಲ್ಲಿಯ ಕೃಷಿ ಕೂಡ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಂಕಷ್ಟವನ್ನು ಹೇಗೆ ನಿಭಾಯಿಸಿಕೊಳ್ಳುತ್ತಾರೆ ಎಂಬುದೇ ನನಗಿರುವ ಆತಂಕವಾಗಿದೆ.

ಮಲೆನಾಡೆಂದರೆ ಅಡಿಕೆ- ಅಡಿಕೆಯ ಹೊರತಾಗಿ ಮಲೆನಾಡನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಮಹಾಕವಿ ಕಾಳಿದಾಸನ ‘ರಘುವಂಶ’ ಕಾವ್ಯದಲ್ಲಿಯೂ ಮಲೆನಾಡಿನ ಅಡಿಕೆ ತೋಟದ ವರ್ಣನೆಗಳಿವೆ. ಆ ಕಾಲದಿಂದಲೂ ಇಲ್ಲಿ ಅಡಿಕೆ ಬೆಳೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಂದು ಮಲೆನಾಡಿನಲ್ಲಿ ಹಣ ಓಡಾಡುತ್ತಿದ್ದರೆ ಅದು ಅಡಿಕೆಯದು. ನಮ್ಮಲ್ಲಿ ಬೆಳೆಯುವ ಅಡಿಕೆಯನ್ನು ಈ ಹಿಂದೆ ‘ದೇಶಾವರಿ ಅಡಿಕೆ’ ಎಂದು ಹೊರಗಿನವರು ಗುರುತಿಸುತ್ತಿದ್ದರು.

ಅದರ ಮಾರುಕಟ್ಟೆ ಉತ್ತರ ಭಾರತದಿಂದ ಹಿಡಿದು ಪಾಕಿಸ್ತಾನ, ಅಫ್ಘಾನಿಸ್ತಾನದವರೆಗೂ ಹರಡಿತ್ತು. ತಮಿಳುನಾಡು, ಆಂಧ್ರಗಳಲ್ಲಿ ಮಲೆನಾಡಿನ ಅಡಿಕೆಗೆ ಬಂಗಾರಕ್ಕಿಂತಲೂ ಹೆಚ್ಚಿನ ಮರ್ಯಾದೆ ಇದೆ. ಯಾವುದೇ ಪರಸ್ಪರ ಮಾತುಕತೆಯಲ್ಲಿ, ಗಂಡು ಹೆಣ್ಣಿನ ಸಂಬಂಧ ಮಾಡುವಾಗ ಒಂದು ಬಟ್ಟಲು ‘ದೇಶಾವರಿ ಅಡಿಕೆ’ಯನ್ನು ವಿನಿಮಯ ಮಾಡಿಕೊಳ್ಳುವ ಪದ್ಧತಿಯಿದೆ. ಒಪ್ಪಂದ ಮುರಿದರೆ ‘ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಅಲ್ಲಿಯದು.

ಇಂತಹ ಅಡಿಕೆಗೆ ಮಾರಕ ರೋಗವೊಂದು ತಗುಲಿ ಸುಮಾರು ನೂರು ವರ್ಷಗಳಾಗುತ್ತಿವೆ. ಇನ್ನು ಕೆಲವೇ ವರ್ಷದಲ್ಲಿ ಮಲೆನಾಡಿನಲ್ಲಿ ಅಡಿಕೆ ತೋಟ ಸಂಪೂರ್ಣ ನೆಲಸಮವಾಗುವ ಭೀತಿಯಲ್ಲಿದೆ. ಹಾಗಿದ್ದೂ ಇದರ ಸಂಶೋಧನೆಗೆ ಕೋಟಿ ಕೊಟ್ಟು ಸಂಶೋಧನಾ ಕೇಂದ್ರ ತೆರೆದ ಸರ್ಕಾರ ಇಲ್ಲಿಗೆ ವಿಜ್ಞಾನಿಗಳನ್ನೂ ನೇಮಿಸಿಲ್ಲ, ಅವರಿಗೆ ಬೇಕಾದ ಸಲಕರಣೆಗಳನ್ನೂ ಕೊಟ್ಟಿಲ್ಲ.

ನಾನು ಈ ಸಮ್ಮೇಳನದ ಮೂಲಕ ಒತ್ತಾಯಿಸುವುದೇನೆಂದರೆ ಮಲೆನಾಡಿನಿಂದ ಅಡಿಕೆ ಮಾಯವಾಗುವ ಮುಂಚೆ ಈ ರೋಗಕ್ಕೊಂದು ಪರಿಹಾರ ಕಂಡು ಹಿಡಿಯಲೇ ಬೇಕು. ಮಲೆನಾಡಿಗೆ ಅಡಿಕೆಯಂತೆ ಒಪ್ಪುವ ಇನ್ನೊಂದು ಬೆಳೆ ಸದ್ಯಕ್ಕಂತೂ ಇಲ್ಲ. ಮಲೆನಾಡಿನ ಸಂಸ್ಕೃತಿ ಅಡಿಕೆಯೊಂದಿಗೆ ಬೆಸೆದುಕೊಂಡಿದೆ.

ಇನ್ನು ಅಡಿಕೆಗೆ ಮಾರುಕಟ್ಟೆಯ ಸಮಸ್ಯೆಯೂ ಇದೆ. ಈಗಾಗಲೇ ಗುಟ್ಕಾ ಇದರ ಮಾನ ತೆಗೆದಿದೆ. ಈಗ ಅಡಿಕೆಯನ್ನು ಹಾನಿಕಾರಕ ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡಿ, ಅದನ್ನು ನಿಷೇಧಿಸುವ ಹುನ್ನಾರ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಈ ಬೆಳವಣಿಗೆಯನ್ನು ಎದುರಿಸಲು ನಮ್ಮ ಸರ್ಕಾರಗಳು ಸಿದ್ಧತೆಯೇ ನಡೆಸಿಲ್ಲ. ವಿಶ್ಚ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಅಂಗ ಸಂಸ್ಥೆಯಾದ ಐಎಆರ್‌ಸಿ (ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ಕ್ಯಾನ್ಸರ್ ರಿಸರ್ಚ್) ನೀಡಿರುವ ವರದಿ ಅಡಿಕೆಗೆ ಮರಣಶಾಸನವಾಗಿ ಪರಿಣಮಿಸಿದೆ. ಇದನ್ನು ಎದುರಿಸಲು ಸೂಕ್ತ ಸಂಶೋಧನೆಗಳು ನಡೆಯಲೇಬೇಕು ಎಂದು ಎಲ್ಲ ಅಡಿಕೆ ಬೆಳೆಗಾರರ ಪರವಾಗಿ ನಾನು ಈ ಸಮ್ಮೇಳನದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ನಾವು ಭಾಷೆಯ ಬಗ್ಗೆ ಚರ್ಚಿಸುತ್ತೇವೆ. ಭಾಷೆ ಉದ್ಯೋಗ, ಆಹಾರ, ಉತ್ಪನ್ನಗಳನ್ನು ಅವಲಂಬಿಸಿರುತ್ತದೆ. ನಮ್ಮ ಮಲೆನಾಡಿನ ಪ್ರಮುಖ ಬೆಳೆಯಾಗಿದ್ದ ಭತ್ತದ ಕೃಷಿ ಕಣ್ಮರೆಯಾಗುತ್ತಿದೆ. ಭತ್ತ ಬೆಳೆಯುತ್ತಿದ್ದ ಪ್ರದೇಶ ಶೇ.೮೦ ರಷ್ಟು ಕಡಿಮೆಯಾಗಿದೆ ಎಂದರೆ ಪರಿಸ್ಥಿತಿಯ ಗಂಭೀರತೆ ನಿಮಗೆ ಅರ್ಥವಾಗಬಹುದು. ಇದರೊಂದಿಗಿನ ಉಪ ಕಸುಬುಗಳೂ ನಾಶವಾಗಿವೆ.

ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಈ ಕೃಷಿಯೊಂದಿಗೆ ಬಳಕೆಯಾಗುತ್ತಿದ್ದ ಭಾಷೆ, ಆಚರಣೆ, ಸಂಸ್ಕೃತಿಗಳೂ ಮಲೆನಾಡಿನಿಂದ ದೂರವಾಗುತ್ತಿರುವುದನ್ನು ನೋಡಿದಾಗ ಸಂಕಟವಾಗುತ್ತದೆ. ಇದೇ ಪರಿಸ್ಥಿತಿ ಮುಂದೆ ಅಡಿಕೆಗೂ ಬಂದರೆ, ಮಲೆನಾಡಿನ ಸಂಸ್ಕೃತಿಯೇ ನಾಶವಾದಂತೆ, ಅದರೊಂದಿಗೆ ಕನ್ನಡ ಭಾಷೆಯ ಸಾವಿರಾರು ಪದಗಳು, ನೂರಾರು ನುಡಿಗಟ್ಟುಗಳು ಇತಿಹಾಸದ ಪುಟ ಸೇರುತ್ತವೆ. ಹೀಗಾಗಿ ಮಲೆನಾಡಿನಲ್ಲಿ ನಡೆಯುತ್ತಿರುವ ಈ ಸಾಹಿತ್ಯ ಸಮ್ಮೇಳನದಲ್ಲಿ ಈ ಎಲ್ಲ ವಿಷಯಗಳ ಕುರಿತು ಗಂಭೀರ ಚರ್ಚೆಗಳಾಗಬೇಕೆಂದು ನಾನು ಆಶಿಸುತ್ತೇನೆ.

ಇವೆಲ್ಲವೂ ಮಲೆನಾಡಿನ ಸಮಸ್ಯೆ ಮಾತ್ರ ಎಂದು ನನಗನ್ನಿಸುವುದಿಲ್ಲ. ನಮ್ಮ ಜಿಲ್ಲೆಯಲ್ಲಿಯೇ ಮಲೆನಾಡಿನ ತಾಲೂಕುಗಳಿಗೆ ಹೊಂದಿಕೊಂಡಿರುವ ತಾಲೂಕುಗಳಲ್ಲಿಯೂ ಇದೇ ರೀತಿಯಾದ ಹಲವಾರು ಸಮಸ್ಯೆಗಳಿವೆ. ನನ್ನ ಹೋರಾಟದ ಕ್ಷೇತ್ರ ಮಲೆನಾಡಾಗಿದ್ದರಿಂದ ಇಲ್ಲಿಯ ವಿಷಯಗಳು ಹೆಚ್ಚು ಪ್ರಸ್ತಾಪವಾಗಿವೆ ಅಷ್ಟೇ. ಜಾಗತೀಕರಣ, ಬಾಹ್ಯ ಸಂಸ್ಕೃತಿಯ ಒತ್ತಡ, ಅದರಿಂದ ಸೃಷ್ಟಿಯಾಗತ್ತಿರುವ ಬೇಡಿಕೆಗಳು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿದೆ, ನಾವು ಮನುಷ್ಯತ್ವವನ್ನು ಕಳೆದುಕೊಂಡು ಯಾರದ್ದೋ ಸೂತ್ರಕ್ಕೆ ಪಾತ್ರದಾರಿಗಳಾಗಿ ಕುಣಿಯುತ್ತಿ ದ್ದೇವೆ. ಹೀಗಾಗಿಯೇ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ಕೋಮುವಾದ ಭುಗಿಲೆದ್ದಿದೆ.

ಬಂಧುಗಳೇ

ಮಾನವತಾ ವಾದಿಗಳನ್ನು ಆತಂಕಕ್ಕೀಡುಮಾಡುವ ಘಟನೆಗಳು ಇಂದು ಮಲೆನಾಡಿನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಪ್ರತಿದಿನವೂ ನಡೆಯುತ್ತಲೇ ಇದೆ. ಇದೆಲ್ಲದಕ್ಕೆ ನಾವು ಹೆದರಬೇಕಾಗಿಲ್ಲ. ಕುವೆಂಪು ಅವರೇ ‘ರೈತನ ದೃಷ್ಟಿ’ ಕವನದಲ್ಲಿ ಬಡ ರೈತ ಸಾಮ್ರಾಜ್ಯಶಾಹಿಯನ್ನು ಹೇಗೆ ವಿರೋಧಿಸುತ್ತಾನೆ ಎಂಬುದನ್ನು ಕಟ್ಟಿಕೊಟ್ಟಿ ದ್ದಾರೆ. ಆ ಮೂಲಕ ನಮಗೂ ಬೆಳಕಿನ ದಾರಿ ತೋರಿಸಿದ್ದಾರೆ. ನಾವೂ ನಮ್ಮದೇ ಆದ ರೀತಿಯಲ್ಲಿ ಕನಸಿನ ಮಲೆನಾಡನ್ನು ಕಟ್ಟಬೇಕಾಗಿದೆ. ಸೌಹಾರ್ದತೆಯ ಪರಂಪರೆಗೆ ಹೊಸ ಮೆರುಗು ನೀಡಬೇಕಾಗಿದೆ.

ಇಲ್ಲಿಯ ಬಹುತೇಕ ಸಮಸ್ಯೆಗಳಿಗೆ ಮುಖ್ಯ ಕಾರಣಗಳಲ್ಲಿ ಒಂದು, ನಾವು ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗುತ್ತಿರುವುದು ಎಂಬುದು ನನ್ನ ಅಭಿಪ್ರಾಯ. ಶಾಸನ ಸಭಾ ಕ್ಷೇತ್ರಗಳನ್ನು ಜನಸಂಖ್ಯಾಧಾರಿತ ಮಾಡಿರುವುದರಿಂದ ನಮ್ಮ ವಿರಳ ಜನಸಂಖ್ಯೆಯಿಂದಾಗಿ ಶಾಸನ ಸಭೆಗಳಲ್ಲಿ ನಮ್ಮ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಯ ಸಮಸ್ಯೆಗಳು ವಿಧಾನಸಭೆಗಳಲ್ಲಿ ನಿರೀಕ್ಷೆಯಷ್ಟು ಪ್ರಸ್ತಾಪವಾಗುತ್ತಿಲ್ಲ.

ಓರ್ವ ಶಾಸಕರ ಕ್ಷೇತ್ರ ನೂರು ಕಿ.ಮೀ. ಇದ್ದರೆ ಆಕ್ಷೇತ್ರ ಯಾವ ರೀತಿ ಅಭಿವೃದ್ಧಿ ಕಾಣಬಹುದು? ಇದಕ್ಕೆ ಪರಿಹಾರವೆಂದರೆ ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಿಸಬೇಕಾಗಿದೆ. ಅದರ ಜತೆಗೆ ಮಲೆನಾಡಿನ ತಾಲೂಕುಗಳನ್ನು ಮಾತ್ರ ಸೇರಿಸಿ, ಜಿಲ್ಲೆಗಳನ್ನು ಪುನರ್ ರೂಪಿಸಬೇಕಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ನೆಲ, ಜಲದ ಮೇಲೆ ನಮಗೇ ಹಕ್ಕು ಬೇಕಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಇರುವಂತೆ ಮಲೆನಾಡನ್ನು ವಿಶೇಷ ಪ್ರದೇಶವೆಂದು ಘೋಷಿಸಿ, ಮಲೆನಾಡಿನ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರವನ್ನು ರಚಿಸಬೇಕು. ಎಲ್ಲೋ ಕುಳಿತು ರೂಪಿಸಿದ ಕಾನೂನುಗಳ ಜಾರಿಗೆ ತಡೆ ಇರಬೇಕು. ಮಲೆನಾಡಿನ ಸರ್ವತೋಮುಖ ಅಭಿವೃದ್ಧಿಯ ನಿಯಂತ್ರಣವನ್ನು ಪ್ರಾಧಿಕಾರಕ್ಕೆ ನೀಡಿ, ಅದಕ್ಕೆ ಸರ್ವಾಧಿಕಾರ ವಹಿಸಬೇಕೆಂದು ಸಮ್ಮೇಳನದ ಈ ವೇದಿಕೆಯಿಂದ ಆಗ್ರಹಿಸುತ್ತೇನೆ.

ಕೊನೆಯದಾಗಿ ಕುವೆಂಪು ಅವರ ಕವನದ ಮೂಲಕವೇ ನಾನು ನನ್ನ ಈ ಭಾಷಣವನ್ನು ಅಂತ್ಯಗೊಳಿಸುತ್ತೇನೆ.

ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ!

ಎಲ್ಲರಿಗೂ ನಮಸ್ಕಾರ.

ಭಾಷಣದ ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ

https://m.facebook.com/story.php?story_fbid=10206532911638026&id=1727784997&sfnsn=scwspmo&s=100000010897769&w=n

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ಮುರುಕುಂಬಿ

Published

on

  • ಡಾ.ಗಿರೀಶ್ ಮೂಗ್ತಿಹಳ್ಳಿ

ನಮ್ಮ ಒಳಗೆ ಬಿಡಲೆ ಇಲ್ಲ
ಚೌರ ಚಹಾ ಮಾಡಲೆ ಇಲ್ಲ
ಎದೆಗೆ ಒದ್ದರು; ಬದಿ ಬದಿಗು ನಕ್ಕರು

ಜಾತಿಪಂಚೆ ಉಟ್ಟುಕೊಂಡು
ನೀತಿನಂಜು ಇಟ್ಟುಕೊಂಡು
ದ್ವೇಷ ಮೆರೆದರು; ಕಟುಸತ್ಯ ಮರೆತರು

ನೂರ ಒಂದು ಕೂಡಿಕೊಂಡು
ಹಟ್ಟಿತನಕ ಅಟ್ಟಿಬಂದು
ಬೆಂಕಿ ಇಟ್ಟರು ; ಕಣ್ಣೀರು ಕೊಟ್ಟರು

ಮುರುಕುಂಬಿ ಮುರುಕರೆಲ್ಲ
ಕಂಬಿ ಹಿಂದೆ ಬಿದ್ದರಲ್ಲ
ಕೆಟ್ಟ ಮನಗಳು; ಕಡುಕೆಟ್ಟ ಜನಗಳು

ಜಾತಿಗೀತಿ ಏನು ಇಲ್ಲ
ಪ್ರೀತಿ ಪ್ರೇಮ ಇರಲಿ ಎಲ್ಲ
ಬಾಳ್ಮೆ ಮಾಡಲು; ಸಹಬಾಳ್ಮೆ ಮಾಡಲು

ಶಾಂತಿಬೆಳಕು ಬುದ್ಧನಿರಲು
ಕ್ರಾಂತಿಕಹಳೆ ಬಸವನಿರಲು
ಅಳಲುಬಾರದು;’ವಿಧಿದಾತ’ನಿರಲು
ಅಳುಕುಬಾರದು. (ಕವಿತೆ-ಡಾ. ಗಿರೀಶ್ ಮೂಗ್ತಿಹಳ್ಳಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!

Published

on

  • ನವೀನ್ ಸಾಗರ್, ಬೆಂಗಳೂರು

ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!

ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.

ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ‌. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.

ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿ‌ಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ‌. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.

ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ

ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ‌ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.

ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥ‌ನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.

ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ.‌ ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.

ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..

ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”

ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ‌ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.

ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.

ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.

ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.

ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.

ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.

ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.

ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.

ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.

ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.

“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.

ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು

ಆ ಸಾಂಗ್ ಇರೋದು ಹೀಗೆ…

”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”

ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ

ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ

ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರ‍ೇಮಿಗಳ ಹೆಸರು!

ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!

ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!

ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಉಸಿರು

Published

on

ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ

ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ

ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ

ನೆಲದಿಂದುದ್ಭವಿಸಲಿಲ್ಲ, ಸಹಜ ಸೃಷ್ಟಿಯಲ್ಲ, ದೈವಿಕವಲ್ಲ ಪಂಚಭೂತಗಳಿಂದಾದವನಲ್ಲ, ನಾ ಎಂಬುದೇ ಇಲ್ಲ

ಇಹದಲೂ ಪರದಲ್ಲೂ ನನ್ನ ಕುರುಹಿಲ್ಲ ಆಡಂ ಈವರ ವಂಶದ ಕುಡಿಯಲ್ಲ

ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ಕಾಯವಲ್ಲ, ಆತ್ಮವೂ ಅಲ್ಲ, ನಿಶ್ಲೇಷದ ಶೇಷ

ನಾ ಪ್ರೇಮಿಯವ, ಲೋಕವೆರೆಡನೊಂದೇ ಆಗಿ ಕಂಡವ ಕರೆವುದು ಪ್ರೇಮ ನನ್ನ, ಅರಿತುಕೊಳುವುದು ತನ್ನ ತಾ..

ಮೊದಲ, ಕೊನೆಯ, ಹೊರ, ಒಳ
ಎಲ್ಲವೂ ಪ್ರೇಮ, ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು.

ಉಸಿರಾಡು ಮನುಜ.

(ಈ ಕವಿತೆಯನ್ನು ಲಡಾಯಿ ಪ್ರಕಾಶನ ಗದಗ ಇವರು ಪ್ರಕಟಿಸಿರುವ ‘ಉರಿಯ ಕುಡಿಯ ನಟ್ಟ ನಡುವೆ‘ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಜಲಾಲುದ್ದೀನ್ ರೂಮಿಯ ಕವಿತೆಗಳನ್ನು ಕನ್ನಡಕ್ಕೆ ಡಾ.ಎಚ್.ಎಸ್. ಅನುಪಮ ಅವರು ಅನುವಾದಿಸಿರುವ ಕೃತಿ ಇದಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending