ದಿನದ ಸುದ್ದಿ
ಸಂವಿಧಾನ ಪ್ರಜಾತಂತ್ರ ಮತ್ತು ಸಾರ್ವಭೌಮ ಪ್ರಜೆಗಳು
- ನಾ ದಿವಾಕರ
ಸಂವಿಧಾನ ಈ ದೇಶದ ಆತ್ಮ ಪ್ರಜಾತಂತ್ರ ನಮ್ಮ ಉಸಿರು ಎಂದು ಹೇಳುತ್ತಲೇ ಬಂದಿರುವ ನಾವು, ಅಂದರೆ ಈ ದೇಶದ ಸಾರ್ವಭೌಮ ಪ್ರಜೆಗಳು ಈಗ ಉಸಿರುಗಟ್ಟಿ ಕೊನೆಯುಸಿರೆಳೆಯುವ ಹಂತ ತಲುಪುತ್ತಿದ್ದೇವೆ. ಪರಿಶುದ್ಧ ಆತ್ಮ ಇರುವವರೆಗೂ ಜೀವ ನಶಿಸುವುದಿಲ್ಲ ದೇಹ ಕೃಶವಾಗಿ ಅಳಿದರೂ ಆತ್ಮ ಸದಾ ಜೀವಾವಸ್ಥೆಯಲ್ಲಿರುತ್ತದೆ ಎನ್ನುವ ನಂಬಿಕೆಯೂ ನಮ್ಮ ನಡುವೆ ಇದೆ. ಅದಕ್ಕೇ ನಾವು ಆತ್ಮ ಎಂದ ಕೂಡಲೇ ಆಳಕ್ಕಿಳಿದು ನೋಡುವ ಒಂದು ಸೃಷ್ಟಿಕ್ರಿಯೆ ಎಂದು ಭಾವಿಸಿಬಿಡುತ್ತೇವೆ. ವೈಚಾರಿಕ ನೆಲೆಯಲ್ಲಿ, ವೈಜ್ಞಾನಿಕ ತಳಹದಿಯ ಮೇಲೆ ನಿಂತು ನೋಡಿದಾಗ ಆತ್ಮ ಎನ್ನುವುದು ಜೈವಿಕ ಅಸ್ತಿತ್ವವಿಲ್ಲದ ಮಾನವನ ಕಲ್ಪನೆ ಎನ್ನುವುದು ಸ್ಪಷ್ಟವಾಗುತ್ತದೆ.
ಆದರೂ ಒಂದು ಭೌಗೋಳಿಕ ದೇಶವನ್ನು ಮಾನವನ ದೇಹಕ್ಕೆ ಹೋಲಿಸಿದಾಗ ಸಂವಿಧಾನ ಎನ್ನುವುದು ಈ ಕಲ್ಪಿತ ಆತ್ಮ ಎನಿಸಿಕೊಳ್ಳುತ್ತದೆ. ಪ್ರಜಾತಂತ್ರ ಉಸಿರು ಎನಿಸಿಕೊಳ್ಳುತ್ತದೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ದೇಹದ ಅವಯವಗಳಂತೆ ಕಾರ್ಯ ನಿರ್ವಹಿಸುತ್ತವೆ. ಮಾಧ್ಯಮ ಎನ್ನಲಾಗುವ ಸುದ್ದಿ ಪ್ರಸರಣ ಸಂಸ್ಥೆಗಳು ಈ ದೇಹವನ್ನು ಬಾಧಿಸುವ ರೋಗ ರುಜಿನಗಳ ಮೂಲ ಲಕ್ಷಣಗಳನ್ನು ಗ್ರಹಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವಂತೆ ಮಾರ್ಗದರ್ಶನ ನೀಡುವ ಮತ್ತೊಂದು ಆಧಾರಸ್ತಂಭದಂತೆ ಕಾರ್ಯನಿರ್ವಹಿಸುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ಫೋರ್ತ್ ಎಸ್ಟೇಟ್ ಎನ್ನಲಾಗುತ್ತದೆ.
ನಾವು ಸಂವಿಧಾನ ಎಂಬ ಆತ್ಮವನ್ನು ಪೂಜಿಸುತ್ತಾ, ಆರಾಧಿಸುತ್ತಾ, ಗೌರವಿಸುತ್ತಾ ಗ್ರಾಂಥಿಕವಾಗಿ ಕಿಂಚಿತ್ತೂ ಧಕ್ಕೆಯಾಗದಂತೆ ಕಾಪಾಡಿಕೊಂಡು ಬಂದಿದ್ದೇವೆ. ಸಂವಿಧಾನವನ್ನು ಬದಲಿಸುವ ಪ್ರಸ್ತಾಪ ಎದುರಾದ ಕೂಡಲೇ ಪ್ರತಿರೋಧದ ದನಿಗಳು ಮುಗಿಲುಮುಟ್ಟುತ್ತವೆ. ಸಂವಿಧಾನದ ಮೂಲ ಆಶಯಗಳನ್ನು ಸಂರಕ್ಷಿಸಲು ಪಣ ತೊಟ್ಟಿರುವ ಅಸಂಖ್ಯಾತ ದನಿಗಳು ನಮ್ಮ ನಡುವೆ ಇವೆ. ಸಾಮಾಜಿಕ ನ್ಯಾಯ, ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಪ್ರಗತಿ ಈ ಧ್ಯೇಯಗಳನ್ನು ಸಾಧಿಸಲು ಕಳೆದ 73 ವರ್ಷಗಳಲ್ಲಿ ಅನೇಕ ರೀತಿಯ ಹೋರಾಟಗಳೂ ನಡೆದಿವೆ.
ಈ ಆಶಯಗಳನ್ನು ಭಾರತೀಯ ಪ್ರಭುತ್ವ ಸಾಧಿಸಲು ಸಾಧ್ಯವಾಗಿದೆಯೇ? ಈ ಪ್ರಶ್ನೆ ಎದುರಾದ ಕೂಡಲೇ ಅಂಕಿಅಂಶಗಳು ನಮ್ಮೆದುರು ನಿಲ್ಲುತ್ತವೆ. 70 ವರ್ಷಗಳಲ್ಲಿ ಏನೂ ಸಾಧನೆಯಾಗಿಲ್ಲ ಎಂದು ಹೇಳುತ್ತಾ ಆರು ವರ್ಷಗಳ ಕನ್ನಡಿ ಹಿಡಿದರೂ , ಸಾಧನೆಯ ಹೆಜ್ಜೆಗಳು ಮತ್ತು ಮುನ್ನಡೆಯ ಕೋಷ್ಟಕಗಳು ನಮ್ಮೆದುರು ನಿಲ್ಲುತ್ತವೆ. ಈ ಸಾಧನೆಗಳೇನಾದರೂ ಸಾಧ್ಯವಾಗಿದ್ದರೆ ಅದು ಸ್ವಾತಂತ್ರ್ಯೋತ್ತರ ಭಾರತದ ಆರಂಭಿಕ ವರ್ಷಗಳಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಮತ್ತು ಜಾರಿಗೊಳಿಸಿದ ಯೋಜನೆಗಳ ಫಲ ಎಂದಷ್ಟೇ ಹೇಳಬಹುದು.
ಆದರೆ ಸಾಧನೆಯ ಮೆಟ್ಟಿಲುಗಳನ್ನು ಪರಿಶೀಲಿಸುತ್ತಾ ಹೋದಂತೆಲ್ಲಾ ನಮಗೆ ತಾರತಮ್ಯದ ಕಂದಕಗಳು ಕಾಣುತ್ತಲೇ ಹೋಗುತ್ತವೆ. ಸಾಮಾಜಿಕ ನೆಲೆಯಲ್ಲಾಗಲೀ, ಆರ್ಥಿಕ ನೆಲೆಯಲ್ಲಾಗಲೀ ಈ ಕಂದಕಗಳು ಹೆಜ್ಜೆ ಹೆಜ್ಜೆಗೂ ಗೋಚರಿಸುವಷ್ಟು ಮಟ್ಟಿಗೆ ಮುನ್ನಡೆಯ ಹೆಜ್ಜೆಗಳಲ್ಲಿ ಲೋಪಗಳನ್ನು ಗುರುತಿಸಬಹುದು. ನಾವು ಸಾಮಾಜಿಕ ನ್ಯಾಯ ಸಾಧಿಸುವ ಮಾರ್ಗದಲ್ಲಿ ಸಾಕಷ್ಟು ಮುನ್ನಡೆದಿದ್ದೇವೆ.
ಆದರೆ ಜಾತಿ ದೌರ್ಜನ್ಯ , ಜಾತಿ ತಾರತಮ್ಯ , ಜಾತಿ ವೈಷಮ್ಯ ಇಂದಿಗೂ ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದನ್ನೇ ಸಾಮಾಜಿಕ ನ್ಯಾಯದ ಉನ್ನತ ಹಂತ ಎಂಬ ಭಾವನೆ ಆಳುವ ವರ್ಗಗಳಲ್ಲಿದೆ. ಅಲ್ಲಿಯೂ ಸಹ ಶೋಷಿತ ಸಮುದಾಯದ ಒಂದು ವರ್ಗ ಅವಕಾಶವಂಚಿತವಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.
ಮೀಸಲಾತಿ ಸಾಮಾಜಿಕ ನ್ಯಾಯ ಸಾಧಿಸುವ ಒಂದು ಆಯಾಮವಷ್ಟೇ. ಶೋಷಿತ ಸಮುದಾಯಗಳ ಆರ್ಥಿಕ ಸಬಲೀಕರಣ ಕೇವಲ ಮೀಸಲಾತಿಯಿಂದ ಸಾಧ್ಯವಾಗುವುದಿಲ್ಲ ಎನ್ನುವುದು ಅಂಬೇಡ್ಕರರಿಗೂ ತಿಳಿದಿತ್ತು. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ, ಆರ್ಥಿಕ ಸಬಲೀಕರಣದ ನೀತಿಗಳು ಮತ್ತು ಅರ್ಥವ್ಯವಸ್ಥೆಯಲ್ಲಿ ಸಮಾನ ನೆಲೆಯ ಪ್ರಾತಿನಿಧ್ಯ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪರಿಪೂರ್ಣ ಸಾಮಾಜಿಕ ನ್ಯಾಯ ಸಾಧಿಸುವುದು ಅಸಾಧ್ಯ ಎಂದು ಅರಿತಿದ್ದರಿಂದಲೇ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು, ಭೂ ರಾಷ್ಟ್ರೀಕರಣಕ್ಕಾಗಿ ಆಗ್ರಹಿಸಿದ್ದರು. ಕಾರ್ಮಿಕರ ರಕ್ಷಣೆಗಾಗಿ ಹಲವು ಸುಧಾರಣಾ ಕ್ರಮಗಳನ್ನು ಪ್ರಸ್ತಾಪಿಸಿದ್ದರು. ಇದು ತಾತ್ವಿಕವಾಗಿ ಮಾಕ್ರ್ಸ್ ವಾದಿಗಳ ಆಗ್ರಹಗಳಿಗಿಂತಲೂ ಭಿನ್ನವಾಗಿರಲಿಲ್ಲ.
ಆದರೆ ಭಾರತದ ಪ್ರಭುತ್ವ ಈ ಸಾಂವಿಧಾನಿಕ ಆಶಯಗಳನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಅನುಸರಿಸುತ್ತಿರುವುದನ್ನೂ, ಅಧಿಕಾರ ರಾಜಕಾರಣದ ಒಂದು ಅಸ್ತ್ರದಂತೆ ಬಳಸುತ್ತಿರುವುದನ್ನೂ ಗಮನಿಸುತ್ತಲೇ ಬಂದಿದ್ದೇವೆ. ಹಾಗೆಯೇ ಸಾಮಾಜಿಕ ನ್ಯಾಯ ಸಾಧಿಸುವ ಮೂಲಕ, ಸಮಾಜೋ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲೂ ಭಾರತದ ಪ್ರಭುತ್ವ ಸೋತಿದೆ.
73 ವರ್ಷಗಳ ನಂತರ ಈ ಸಮಾನತೆಯ ಕನಸು ಕನಸಾಗಿಯೇ ಉಳಿದಿರುವುದನ್ನು ಗಮನಿಸಬಹುದು. ಸಾರ್ವಜನಿಕರ ದೃಷ್ಟಿಯಲ್ಲಿ ಇದು ಪ್ರಭುತ್ವದ ಸೋಲು ಎನಿಸಿದರೂ, ಅಧಿಕಾರ ಮತ್ತು ಅಧಿಪತ್ಯ ರಾಜಕಾರಣದ ದೃಷ್ಟಿಯಲ್ಲಿ ಇದು ಭಾರತೀಯ ಪ್ರಭುತ್ವದ ಗೆಲುವು ಎನ್ನಬಹುದು. ಏಕೆಂದರೆ ಈ ದೇಶದ ಪ್ರಭುತ್ವ ಯಾವುದೇ ಕಾಲಘಟ್ಟದಲ್ಲೂ ಶೋಷಿತರ ಪರವಾಗಿ ಇರಲಿಲ್ಲ.
ಪ್ರಭುತ್ವದ ಈ ವೈಫಲ್ಯವನ್ನು ನಾವು ಸರ್ಕಾರಗಳ ವೈಫಲ್ಯವೆಂದೋ, ರಾಜಕೀಯ ಪಕ್ಷಗಳ ವೈಫಲ್ಯವೆಂದೋ ಭಾವಿಸುತ್ತೇವೆ. ವೈಫಲ್ಯದ ಪ್ರತಿಯೊಂದು ಹೆಜ್ಜೆಯಲ್ಲೂ ಸಂವಿಧಾನದ ಉಲ್ಲಂಘನೆಯನ್ನು ಕಾಣಬಹುದಾದರೂ ನಾವು ಅದನ್ನು ಆಡಳಿತಾತ್ಮಕ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಿದ್ದೇವೆಯೇ ಹೊರತು ಸಂವಿಧಾನದ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಿಲ್ಲ.
ಮೂಲ ಸಾಂವಿಧಾನಿಕ ಆಶಯಗಳಾದ ಸಮ ಸಮಾಜ ಮತ್ತು ಶೋಷಣೆ ರಹಿತ ಸಮಾಜದ ನಿರ್ಮಾಣಕ್ಕಾಗಿ ಹಾತೊರೆಯುವ ಮನಸುಗಳು ಈ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಲವು ಮಾರ್ಗಗಳನ್ನು ಕಂಡುಕೊಂಡಿವೆ. ಶಾಂತಿಯುತ ಪ್ರತಿಭಟನೆ, ಹಕ್ಕೊತ್ತಾಯಗಳು, ಮುಷ್ಕರಗಳು, ಚಳುವಳಿ, ಆಂದೋಲನ, ತೀವ್ರವಾದಿ ಹೋರಾಟ, ಸಶಸ್ತ್ರ ಹೋರಾಟ ಹೀಗೆ ಹಲವು ಮಾರ್ಗಗಳಲ್ಲಿ ಶೋಷಣೆಯಿಲ್ಲದ ಸಮಾಜಕ್ಕಾಗಿ ಹೋರಾಟಗಳು ನಡೆದಿವೆ, ನಡೆಯುತ್ತಿವೆ.
ದುರಂತ ಎಂದರೆ ಈ ಹೋರಾಟಗಳನ್ನು ನಾವೇ ಹಿಂಸಾತ್ಮಕ ಮತ್ತು ಅಹಿಂಸಾತ್ಮಕ, ಸಾಂವಿಧಾನಿಕ ಮತ್ತು ಅಸಾಂವಿಧಾನಿಕ, ಕಾನೂನುಬದ್ಧ ಮತ್ತು ಕಾನೂನುಬಾಹಿರ ಎಂದು ವಿಂಗಡಿಸಿಬಿಟ್ಟಿದ್ದೇವೆ. ತನ್ನ ಅಧಿಕಾರ ಕೇಂದ್ರವನ್ನು ಅಲುಗಾಡಿಸುವ ಯಾವುದೇ ಚಳುವಳಿ ಅಥವಾ ಹೋರಾಟಗಳು ಪ್ರಭುತ್ವದ ದೃಷ್ಟಿಯಲ್ಲಿ ಸಹನೀಯ ಎನಿಸುವುದಿಲ್ಲ , ಕಾನೂನುಬಾಹಿರ ಎನಿಸಿಬಿಡುತ್ತದೆ.
ಆದರೆ ಶೋಷಿತರ ದೃಷ್ಟಿಯಲ್ಲಿ ಎಲ್ಲ ರೀತಿಯ ಹೋರಾಟಗಳಿಗೂ ಒಂದು ತಾರ್ಕಿಕ ನೆಲೆ ಇರುತ್ತದೆ. ಎಲ್ಲ ಹೋರಾಟಗಳ ಗುರಿ ಸಮಾನತೆ ಮತ್ತು ಸಾಮಾಜಿಕ ಘನತೆಯನ್ನು ಸಾಧಿಸುವುದೇ ಆಗಿರುತ್ತದೆ. ಹಾಗಾಗಿಯೇ ಪ್ರಭುತ್ವ ಸಂವಿಧಾನದ ಚೌಕಟ್ಟಿನಲ್ಲೇ ಸಂವಿಧಾನ ಬಾಹಿರ ಕಾನೂನುಗಳನ್ನು ರಚಿಸುವ ಮೂಲಕ ಈ ಪ್ರಜಾಂದೋಲನಗಳ ವಿಘಟನೆಗೆ ಮಾರ್ಗಗಳನ್ನು ಹುಡುಕುತ್ತಿರುತ್ತದೆ.
1960ರ ದಶಕದಿಂದ ಇವತ್ತಿನವರೆಗೂ ಪ್ರಭುತ್ವ ಈ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಇಂದು ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ಸಿಡಿದೆದ್ದಿರುವ ನಾವು, ಕಳೆದ ನಾಲ್ಕು ದಶಕಗಳಲ್ಲಿ ಭೂ ಸುಧಾರಣೆ ಮತ್ತು ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುವುದನ್ನೇ ಮರೆತಿದ್ದೇವೆ ಎನ್ನುವುದನ್ನೂ ಗಮನಿಸಬೇಕು.
ಭೂ ಹೋರಾಟಗಳಿಗೆ ಅಂತ್ಯ ಹಾಡಲೆಂದೇ ಪ್ರಭುತ್ವ ನಕ್ಸಲ್ ಭೂತವನ್ನೂ ಸೃಷ್ಟಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಆದರೆ ಭೂಮಿ ಇಲ್ಲದವರಿಗೆ ಭೂಮಿ ಹಂಚುವುದು, ಭೂ ಒಡೆತನದ ಮಿತಿಯನ್ನು ಹೇರುವುದು, ಭೂಮಾಲೀಕರ ದೌರ್ಜನ್ಯ ಮತ್ತು ಅಟ್ಟಹಾಸದಿಂದ ಗ್ರಾಮೀಣ ಬಡಜನತೆಯನ್ನು, ಶೋಷಿತ ಸಮುದಾಯಗಳನ್ನು ರಕ್ಷಿಸುವುದು ಕೇವಲ ನಕ್ಸಲರ ಕಾರ್ಯಸೂಚಿಯಾಗಬೇಕಿಲ್ಲ ಅಲ್ಲವೇ ?
ಪ್ರಜಾತಂತ್ರದ ಮಾರ್ಗದಲ್ಲಿಯೇ ಈ ಹೋರಾಟಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ನಾವು ಯೋಚಿಸುವುದನ್ನೇ ಬಿಟ್ಟಿದ್ದೇವೆ ಅಲ್ಲವೇ ? ಭೂ ಸ್ವಾಧೀನ ಒತ್ತಟ್ಟಿಗಿರಲಿ, ಭೂ ಸುಧಾರಣೆಯ ಕ್ರಮಗಳನ್ನು ಚಾಲ್ತಿಯಲ್ಲಿರುವ ಕಾನೂನುಗಳ ಅನ್ವಯವೇ ಜಾರಿಗೊಳಿಸಲೂ ಒತ್ತಾಯಿಸಲಾಗಿಲ್ಲ. ಪರಿಣಾಮಕಾರಿಯಾಗಿ ಅನುಷ್ಟಾನವಾಗಿದ್ದ ಭೂ ಸುಧಾರಣಾ ಕ್ರಮಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲೂ ಸಹ ಯಾವುದೇ ಪರಿಣಾಮಕಾರಿ ಆಂದೋಲನಗಳು ರೂಪುಗೊಂಡಿಲ್ಲ.
ಬಹುಶಃ ಉತ್ಪಾದನಾ ಪ್ರಕ್ರಿಯೆಯಲ್ಲಿನ ಶ್ರಮ ವಿಭಜನೆಯಂತೆ ಇಲ್ಲಿಯೂ ಸಹ ವಿಭಜನೆಯ ಸೂತ್ರಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಹಾಗಾಗಿಯೇ ಭೂಮಾಲೀಕರಿಂದ ಭೂಮಿಯನ್ನು ಕಸಿದುಕೊಳ್ಳುವುದು, ನಕ್ಸಲ್ ಪರಿಕಲ್ಪನೆಯಲ್ಲಿ, ಹಿಂಸಾತ್ಮಕ ಎನಿಸಿಬಿಟ್ಟಿತು. ಅಹಿಂಸಾತ್ಮಕವಾದ ಪ್ರಯತ್ನಗಳು ನಡೆಯಲೂ ಇಲ್ಲ.
ಏಕೆ ನಡೆಯಲಿಲ್ಲ ? ಕಾರಣ ಸ್ಪಷ್ಟ. ಈ ದೇಶದ ಭೂಮಾಲೀಕ ವರ್ಗಗಳು ಅಧಿಪತ್ಯ ರಾಜಕಾರಣದ ಕೇಂದ್ರ ಬಿಂದು ಆಗಿವೆ. ಔದ್ಯಮಿಕ ಬಂಡವಾಳಗಾರರಷ್ಟೇ ಪ್ರಬಲವಾಗಿ ಈ ಭೂಮಾಲೀಕ ವರ್ಗ ಈ ದೇಶದ ಅಧಿಕಾರ ರಾಜಕಾರಣವನ್ನು ಪಕ್ಷಗಳ ಹೆಸರಿನಲ್ಲಿ ನಿರ್ವಹಿಸುತ್ತಿವೆ. ಈ ವರ್ಗಗಳ ಯಥಾಸ್ಥಿತಿವಾದ ಮತ್ತು ಅಧಿಕಾರದಾಹಕ್ಕೆ ಬಲಿಯಾಗಿರುವುದು ಜನಪರ ಹೋರಾಟಗಳು ಮತ್ತು ಈ ಹೋರಾಟಗಳನ್ನು ಪ್ರತಿನಿಧಿಸುವ ಅಸಂಖ್ಯಾತ ಸಂಘಟನೆಗಳು.
ಕಾರ್ಮಿಕ ಸಂಘಟನೆಗಳ ಹೋರಾಟವನ್ನೇ ಗಮನಿಸಿದರೆ, ಮುಷ್ಕರ ಹೋರಾಟಗಳ ಮೂಲಕ ಹಕ್ಕೊತ್ತಾಯಗಳನ್ನು ಮಂಡಿಸುವುದನ್ನು “ ಕಮ್ಯುನಿಸ್ಟ್ ” ಎಂದು ಹೀಗಳೆದು, ರಾಜಿ ಸಂಧಾನಗಳ ಮಾರ್ಗವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡ ನಿದರ್ಶನಗಳು ಹೇರಳವಾಗಿವೆ. ಈಗ ಒಂದೊಂದೇ ಸಂಸ್ಥೆಗಳು ಖಾಸಗಿ ಪಾಲಾಗುತ್ತಿರುವಾಗ ರಾಜಿ ಸಂಧಾನ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತವೆ ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಏಕೆಂದರೆ ಹೋರಾಟದ ಮಾರ್ಗಗಳಲ್ಲಿ ನಾವೇ ತಡೆಗೋಡೆಗಳನ್ನು ನಿರ್ಮಿಸಿಬಿಟ್ಟಿದ್ದೇವೆ ಅಥವಾ ಪ್ರಭುತ್ವ ನಿರ್ಮಿಸಿರುವ ದಿಬ್ಬಗಳಿಗೆ ಆಸರೆಯಾಗಿ ನಿಂತಿದ್ದೇವೆ.
ನಾವೇ ನಿರ್ಮಿಸಿರುವ ಬೌದ್ಧಿಕ ತಡೆಗೋಡೆಗಳನ್ನು ಕಿತ್ತೊಗೆಯುವುದು ಕಷ್ಟವೇನಲ್ಲ. ಆದರೆ ನಾಲ್ಕು ದಶಕಗಳ ಅವಧಿಯಲ್ಲಿ ಈ ಪ್ರಕ್ರಿಯೆಗೆ ಪ್ರಭುತ್ವ ತನ್ನದೇ ಆದ ನೆಲೆಗಳನ್ನು ಒದಗಿಸಿದೆ. ಶೋಷಣೆಗೊಳಗಾಗಿರುವ ಕೋಟ್ಯಂತರ ಜನತೆಯನ್ನು ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸಿ, ಜಾತಿ ಧರ್ಮ ಮತ್ತು ಪ್ರಾದೇಶಿಕ ನೆಲೆಗಳಲ್ಲಿ ವಿಭಜಿಸಿರುವ ಪ್ರಭುತ್ವ ಶೋಷಿತ ಸಮುದಾಯಗಳ ಐಕಮತ್ಯ ಅಸಾಧ್ಯ ಎನ್ನುವಷ್ಟು ಮಟ್ಟಿಗೆ ಅಸ್ಮಿತೆಗಳ ಗೋಡೆಗಳನ್ನು ನಿರ್ಮಿಸಿಬಿಟ್ಟಿದೆ.
ಈ ಬೆಳವಣಿಗೆಗಳು ಹಠಾತ್ತನೆ ಸಂಭವಿಸಿದ್ದಲ್ಲ ಎನ್ನುವುದನ್ನೂ ಗಮನಿಸಬೇಕಿದೆ. 1980ರ ದಶಕದ ನವ ಉದಾರವಾದ ಮತ್ತು ಜಾತಿ ರಾಜಕಾರಣ, 1990ರ ದಶಕದ ಮತೀಯವಾದ ಮತ್ತು ಸಾಂಸ್ಕøತಿಕ ರಾಷ್ಟ್ರೀಯತೆ, 2000ದ ನಂತರದ ನಾಲ್ಕನೆಯ ಔದ್ಯಮಿಕ ಕ್ರಾಂತಿ ಮತ್ತು ಡಿಜಿಟಲೀಕರಣ ಈ ಎಲ್ಲ ಪ್ರಕ್ರಿಯೆಯ ಗರ್ಭದಲ್ಲಿ ಶೋಷಿತ ಸಮುದಾಯಗಳ ವಿಘಟನೆಯ ಬೀಜಗಳು ಅಡಗಿವೆ.
ದಲಿತ ಸಮುದಾಯಗಳ ಭೂಮಿಯ ಹಕ್ಕು ಮತ್ತು ಅಲ್ಪ ಪ್ರಮಾಣದಲ್ಲಿ ಹೊಂದಿರುವ ಭೂಮಿಯ ರಕ್ಷಣೆಗಾಗಿ ಈಗ ಒಕ್ಕೊರಲಿನ ದನಿ ಕೇಳಿಬರುತ್ತಿದೆ. ಏಕೆಂದರೆ ಕೇಂದ್ರ ಸರ್ಕಾರದ ಕೃಷಿ ಮಸೂದೆ ಭೂಮಿಯ ಖಾಸಗೀಕರಣಕ್ಕೆ ಹಾದಿಯನ್ನು ಸುಗಮವಾಗಿಸಿದೆ. ಆದರೆ ನವ ಉದಾರವಾದ ಮತ್ತು ಸಾಂಸ್ಕøತಿಕ ರಾಷ್ಟ್ರೀಯತೆಯ ಜಂಟಿ ಕಾರ್ಯಾಚರಣೆಯಲ್ಲಿ ಈ ಎರಡೂ ಅಂಶಗಳನ್ನು ನಾವೇ ನೇಪಥ್ಯಕ್ಕೆ ಸರಿಸಿದ್ದೇವೆ ಎನ್ನುವುದನ್ನೂ ಗಮನಿಸಬೇಕಲ್ಲವೇ ? ಈಗ ಅಲ್ಪಸ್ವಲ್ಪ ಭೂಮಿ ಇರುವವರೂ ತಮ್ಮ ನೆಲೆ ಕಳೆದುಕೊಳ್ಳಲಿದ್ದಾರೆ, ಭೂಮಿ ನಮ್ಮ ಹಕ್ಕು ಎಂದು ಭಾವಿಸುವವರು ಅಸಹಾಯಕ ಸ್ಥಿತಿ ತಲುಪುವಂತಾಗಿದೆ. ಈ ಸಂದಿಗ್ಧತೆಯ ಮೂಲವನ್ನು ಅಯೋಧ್ಯೆಯ ಕಾಲಾಳುಗಳ ಸದ್ದಿನಲ್ಲಿ ಕೇಳಿಸಿಕೊಳ್ಳಲು ಈಗಲಾದರೂ ಸಾಧ್ಯವೇ ? ಯೋಚಿಸೋಣ.
ಬಂಡವಾಳ ವ್ಯವಸ್ಥೆ ಪ್ರಬಲವಾದಂತೆಲ್ಲಾ ಹೋರಾಟದ ನೆಲೆಗಳನ್ನು ನಾಶಪಡಿಸುತ್ತಲೇ ಮುನ್ನಡೆಯುತ್ತದೆ. ಈ ಮುನ್ನಡೆಗೆ ಬಲಪಂಥೀಯ ರಾಜಕಾರಣದ ಹೆಗಲು ದೊರೆತರೆ ಏನಾಗುತ್ತದೆ ಎನ್ನುವುದನ್ನು ಮೂರು ದಶಕಗಳ ಭಾರತದ ರಾಜಕೀಯ ಬೆಳವಣಿಗೆಗಳು ನಿರೂಪಿಸಿವೆ. ಭಾರತದಂತಹ ಜಾತಿವ್ಯವಸ್ಥೆಯಲ್ಲಿ ಈ ವಿಘಟನೆ ಎಷ್ಟು ಸುಲಭಸಾಧ್ಯ ಎನ್ನುವುದನ್ನೂ ಪ್ರಭುತ್ವ ನಿರೂಪಿಸಿದೆ. ಮಂಡಲ-ಕಮಂಡಲ ರಾಜಕಾರಣದ ಕೂಪದಲ್ಲಿ ಎಷ್ಟೋ ಹೋರಾಟಗಳು ಇಂದಿಗೂ ಅಡಗಿ ಕುಳಿತಿವೆ. ಬಂಡವಾಳ ಮತ್ತು ಶ್ರಮಜೀವಿಗಳ ನಡುವಿನ ಸಂಘರ್ಷದ ನೆಲೆಯಲ್ಲಿ ಎಷ್ಟೋ ಜೀವಗಳು ನಲುಗಿಹೋಗಿವೆ. ಈ ಬಲಿಯಾದ ಜೀವಗಳು ಆಳುವ ವರ್ಗಗಳಿಗೆ ಬಂಡವಾಳವಾಗುತ್ತಿವೆ ನಮಗೆ ಕೇವಲ ಸ್ಮಾರಕಗಳಾಗುತ್ತಿವೆ.
ಭೀಮ ಕೊರೆಗಾಂವ್ ಸಂದರ್ಭದಲ್ಲಿ ಈ ದ್ವಂದ್ವವನ್ನು ನಾವು ಸ್ಪಷ್ಟವಾಗಿ ಗಮನಿಸಬಹುದು. ಅಥವಾ ಊನ, ದಾದ್ರಿ , ಜೆ ಎನ್ ಯು ಘಟನೆಗಳ ಸಂದರ್ಭದಲ್ಲಿ ಈ ವಿರೋಧಾಭಾಸಗಳನ್ನು ಗಮನಿಸಬಹುದು. ಮಾನವ ಹಕ್ಕುಗಳಿಗಾಗಿ, ಪರಿಸರ ರಕ್ಷಣೆಗಾಗಿ, ಆದಿವಾಸಿಗಳ ಮೂಲ ಸಂಸ್ಕøತಿ ಮತ್ತು ಜೀವನೆಲೆಗಳ ರಕ್ಷಣೆಗಾಗಿ ನಡೆಯುವ ಹೋರಾಟಗಳಿಗೆ ವಿಮುಖವಾಗುವ ಮೂಲಕ ಅನೇಕಾನೇಕ ಹೋರಾಟಗಳು ಪ್ರಭುತ್ವದ ಕಬಂಧ ಬಾಹುಗಳಿಗೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಇನ್ನು ಕೆಲವು ತಟಸ್ಥ ನೀತಿ ಅನುಸರಿಸಿ ಯಥಾಸ್ಥಿತಿವಾದಕ್ಕೆ ಶರಣಾಗಿ ನಿಷ್ಕ್ರಿಯವಾಗಿವೆ, ನಿಸ್ತೇಜವಾಗಿವೆ.
ಈ ನಿಷ್ಕ್ರಿಯತೆಯಿಂದ ಹೊರಬರುವ ಕಾಲ ಸನ್ನಿಹಿತವಾಗುತ್ತಿದೆ. ಏಕೆಂದರೆ ಬಂಡವಾಳ ವ್ಯವಸ್ಥೆ ನವ ಉದಾರವಾದದ ಸಂಪೂರ್ಣ ಸಾರ್ಥಕತೆಯತ್ತ ದಾಪುಗಾಲು ಹಾಕುತ್ತಿದೆ. ಭಾರತದ ಪ್ರಭುತ್ವವೂ ಈ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಸಮಸಮಾಜ , ಸಮಾನತೆ, ಸೌಹಾರ್ದತೆಯನ್ನು ಸಾಧಿಸುವ ಮತ್ತು ಶೋಷಣೆ ಹಾಗೂ ದೌರ್ಜನ್ಯರಹಿತ ಸಮಾಜದ ನಿರ್ಮಾಣದ ಕನಸುಗಳು ಸಂಪೂರ್ಣವಾಗಿ ಭಗ್ನವಾಗುವ ಸಂದರ್ಭದಲ್ಲಿ ನಾವಿದ್ದೇವೆ. ಈ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟವೂ ಸಂವಿಧಾನಬಾಹಿರವಾಗಲಾರದು ಎನ್ನುವ ವಾಸ್ತವವನ್ನು ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಿದೆ.
ಏಕೆಂದರೆ ಪ್ರಭುತ್ವ ಸಂವಿಧಾನಬಾಹಿರವಾಗಿಯೇ ಪ್ರಜೆಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ಕೃಷಿ ಕಾಯ್ದೆಗಳ ತಿದ್ದುಪಡಿ, ಹಣಕಾಸು ಮಸೂದೆಗಳು ಈ ದೇಶದ ಶೋಷಿತ ಸಮುದಾಯಗಳನ್ನು ಮತ್ತಷ್ಟು ಶೋಷಣೆಗೊಳಪಡಿಸುವ ನಿಟ್ಟಿನಲ್ಲಿ ಸಾಗುತ್ತಿವೆ. ಹಿತವಲಯದಲ್ಲಿರುವ ಸುಶಿಕ್ಷಿತ-ಸುರಕ್ಷಿತ ವರ್ಗಗಳಿಗೂ ಇದರ ಬಿಸಿ ತಟ್ಟಲಿದೆ. ಆದರೆ ಆ ವೇಳೆಗೆ ಅರ್ಧದೇಹ ಸುಟ್ಟುಹೋಗಿರಬಹುದು. ಏನೇ ಆದರೂ ತಾವು ನಿಂತ ನೆಲೆ ಕುಸಿಯುತ್ತಿದೆ ಎಂದಾಗ ಮನುಕುಲ ಒಮ್ಮೆಲೆ ಚಿಮ್ಮಿ ಹೊರಬರುತ್ತದೆ. ಇದು ಇತಿಹಾಸ ನಿರೂಪಿಸಿರುವ ಸತ್ಯ. ಈ ಸಂದರ್ಭದಲ್ಲೇ ಭಾರತದ ಶೋಷಿತ ಸಮುದಾಯಗಳು, ಅವಕಾಶವಂಚಿತರು, ದೌರ್ಜನ್ಯ ಮತ್ತು ತುಳಿತಕ್ಕೊಳಗಾದವರು ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.
ಅರಣ್ಯ , ಜಲ ಮತ್ತು ಭೂಮಿಯ ಒಡಲಲ್ಲಿರುವ ಸಮಸ್ತ ನೈಸರ್ಗಿಕ ಸಂಪತ್ತು ಕಾರ್ಪೋರೇಟ್ ಮಾರುಕಟ್ಟೆಯ ವಶಕ್ಕೊಳಪಟ್ಟಾಗ ಅಸ್ಮಿತೆಗಳ ಲೋಕವೂ ಕುಸಿಯುತ್ತದೆ. ಏಕೆಂದರೆ ಹಣಕಾಸು ಬಂಡವಾಳ ಯುಗದಲ್ಲಿ ಶೋಷಕರು ಮತ್ತು ಶೋಷಿತರು ಎನ್ನುವ ಎರಡೇ ವರ್ಗಗಳು ಉಳಿಯುತ್ತವೆ. ಇಂದು ಪ್ರತಿರೋಧದ ದನಿಗಳನ್ನು ದಮನಿಸುವ ಕ್ರೌರ್ಯವನ್ನು ಸಮರ್ಥಿಸಲು ಸಾಕಷ್ಟು ದನಿಗಳು ಕೇಳಿಬರುತ್ತಿವೆ. ಏಕೆಂದರೆ ಈ ದನಿಗಳು ಅಸಮಾನತೆಯನ್ನೇ ಪೋಷಿಸುವ ಒಂದು ಕ್ರೂರ ವ್ಯವಸ್ಥೆಯ ಫಲಾನುಭವಿಗಳಾಗಿವೆ. ಈ ಫಲಾನುಭವಿಗಳು ಇರುವ ಹಿತವಲಯಗಳು ಹಂತಹಂತವಾಗಿ ಇದೇ ಕ್ರೌರ್ಯಕ್ಕೆ ಬಲಿಯಾಗುತ್ತವೆ.
ಶೋಷಿತರಲ್ಲಿ ಅಸ್ಮಿತೆಗಳ ಚೌಕಟ್ಟುಗಳಿರುತ್ತವೆ. ಆದರೆ ಶೋಷಕರಿಗೆ ಇರುವುದಿಲ್ಲ. ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ಈ ಶೋಷಕ ವರ್ಗದೊಡನೆ ಒಂದಾದಾಗ ಶೋಷಿತರ ದನಿಗಳು ಒಂದಾಗುತ್ತವೆ. ಭೂಮಿಯ ಪ್ರಶ್ನೆ ಈ ದನಿಗಳನ್ನು ಒಂದುಗೂಡಿಸುವ ನೆಲೆಯಾಗಿರುತ್ತದೆ. ನಾವು ಸಂವಿಧಾನವನ್ನು ಗ್ರಾಂಥಿಕವಾಗಿ ಮಾತ್ರ ಸಂರಕ್ಷಿಸುತ್ತಿದ್ದೇವೆ ಎನ್ನುವ ಪ್ರಜ್ಞೆ ನಮ್ಮಲ್ಲಿದ್ದರೆ, ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಲು ಸಾಧ್ಯ . ಪ್ರತಿರೋಧದ ದನಿಗಳೇ ಸಂವಿಧಾನ ವಿರೋಧಿ ಎನ್ನುವಂತಹ ಕಾಯ್ದೆ ಕಾನೂನುಗಳನ್ನು ನಮ್ಮ ಕಣ್ಣೆದುರಿನಲ್ಲೇ ಜಾರಿಗೊಳಿಸಲಾಗುತ್ತಿದೆ. ಈ ಕಾನೂನುಗಳ ವಿರುದ್ಧ ಹೋರಾಡುವುದೇ ಸಂವಿಧಾನ ರಕ್ಷಣೆಯ ಪ್ರಥಮ ಹೆಜ್ಜೆಯಾಗಬೇಕಿದೆ.
ಇದು ಎಡ-ಬಲದ ನಡುವಿನ ಸಂಘರ್ಷ ಮಾತ್ರವಲ್ಲ. ಶೋಷಕರು ಮತ್ತು ಶೋಷಿತರು, ಬಂಡವಾಳ ಮತ್ತು ಶ್ರಮ, ಬಂಡವಾಳಿಗ ಮತ್ತು ಶ್ರಮಿಕ, ಭೂಮಾಲೀಕ ಮತ್ತು ಭೂಹೀನ, ಮೇಲ್ಜಾತಿ ಮತ್ತು ದಲಿತರು, ಪುರುಷ ಪ್ರಧಾನ ವ್ಯವಸ್ಥೆ ಮತ್ತು ಮಹಿಳೆಯರು, ಶ್ರೀಮಂತರು ಮತ್ತು ಬಡಜನತೆ ಹೀಗೆ ಹಲವು ಆಯಾಮಗಳ ಸಂಘರ್ಷ. ಈ ಸಂಘರ್ಷ ತನ್ನ ತಾರ್ಕಿಕ ಅಂತ್ಯ ತಲುಪಬೇಕಾದರೆ ನಾವು ನಮ್ಮ ಹೋರಾಟದ ನೆಲೆಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕು. ಜಾತಿ, ಮತ ಮತ್ತು ಸಮುದಾಯಗಳ ಅಸ್ಮಿತೆಗಳಿಂದಾಚೆಗೆ ಯೋಚಿಸಬೇಕು.
ಅಲ್ಲಿ ನಮಗೆ ಅಂಬೇಡ್ಕರ್ ಮತ್ತು ಮಾಕ್ರ್ಸ್ ಒಂದೇ ನೆಲೆಯಲ್ಲಿ ಕಾಣಲು ಸಾಧ್ಯ. ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣ ನಮಗೆ ಈ ಅವಕಾಶವನ್ನು ಕಲ್ಪಿಸಿದೆ. ಎಲ್ಲವನ್ನೂ ಕಳೆದುಕೊಳ್ಳುವ ಮುನ್ನ ಜಾಗೃತರಾಗಬೇಕಿದೆ. ಭಾರತದ ಸಂವಿಧಾನವನ್ನು ಬದಲಿಸದೆಯೇ ಸಂವಿಧಾನದ ಮೂಲ ಆಶಯಗಳನ್ನು ಕೈಬಿಟ್ಟು ದೇಶದ ಸಾರ್ವಭೌಮ ಪ್ರಜೆಗಳ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳಲಾಗುತ್ತಿದೆ.
ರೈತಾಪಿಯ ಪರ ದನಿ ಎತ್ತುವ, ಕಾರ್ಮಿಕರೊಡನೆ ದನಿಗೂಡಿಸುವ, ಶೋಷಿತರ ದನಿಗಳಿಗೆ ಒತ್ತಾಸೆಯಾಗಿ ನಿಲ್ಲುವ ಪ್ರತಿರೋಧದ ದನಿಗಳೆಲ್ಲವೂ ಮುಂಬರುವ ದಿನಗಳಲ್ಲಿ ನಗರ ನಕ್ಸಲರ ಅಥವಾ ಭಯೋತ್ಪಾದಕರ ದನಿಗಳಂತೆ ಕಾಣುತ್ತವೆ. ಕೊರೋನಾ ಸೋಂಕು ನಮಗೆ ತಗಲುವುದಿಲ್ಲ ಎಂಬ ಭಂಡ ಧೈರ್ಯ ಇದ್ದವರು ನಂತರ ಸೋಂಕಿಗೆ ಒಳಗಾದಂತೆ ಇಂದಿನ ವಂದಿಮಾಗಧರು, ಭಟ್ಟಂಗಿಗಳು ನಾಳೆ ನಗರ ನಕ್ಸಲರಾಗಿಬಿಡುತ್ತಾರೆ. ಇದು ಪ್ರಭುತ್ವದ ಚಾಣಕ್ಯ ನೀತಿಯ ಫಲ.
ದೇಶಾದ್ಯಂತ ಭುಗಿಲೆದ್ದಿರುವ ಆಕ್ರೋಶದ ಜ್ವಾಲೆಗಳ ಒಂದೊಂದು ಕಿಡಿಯೂ ಈ ವಾಸ್ತವವನ್ನು ಬಿಂಬಿಸುತ್ತಿದೆ. ಈ ಕಿಡಿಗಳಲ್ಲಿರುವ ಸಂದೇಶವನ್ನು ಗ್ರಹಿಸುವುದು ನಮ್ಮ ಆದ್ಯತೆಯೂ ಹೌದು ಕರ್ತವ್ಯವೂ ಹೌದು. ಗ್ರಾಂಥಿಕವಾಗಿ ಸಂವಿಧಾನ ಸುರಕ್ಷಿತವಾಗಿದೆ. ಆದರೆ ಸ್ವತಃ ಅಂಬೇಡ್ಕರರೇ ಹೇಳಿರುವಂತೆ ಈ ಸಂವಿಧಾನದ ಮೂಲ ಆಶಯಗಳಿಗೆ ಚ್ಯುತಿ ಬರುವಂತಹ ಆಡಳಿತ ನೀತಿಗಳು ಜಾರಿಯಾಗುತ್ತಾ ಹೋದರೆ ಸಂವಿಧಾನ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಸಾರ್ವಭೌಮತ್ವಕ್ಕೇ ಧಕ್ಕೆ ಉಂಟಾಗುವ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಸಂವಿಧಾನದ ರಕ್ಷಣೆಗಾಗಿ ಗ್ರಾಂಥಿಕ ಪರಿಮಿತಿಯನ್ನು ಮೀರಿ ದೃಷ್ಟಿ ಹಾಯಿಸಬೇಕಿದೆ. ಇಲ್ಲವಾದರೆ ಇತಿಹಾಸದ ಪುಟಗಳಲ್ಲಿ ಶಾಶ್ವತ ಅಪರಾಧಿಗಳಾಗಿಯೇ ಉಳಿದುಬಿಡುತ್ತೇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚಿಗಟೇರಿ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳ ನೂತನ ಕಟ್ಟಡದ ಲೋಕಾರ್ಪಣೆ ; ಗ್ರೂಪ್ ಡಿ ಹುದ್ದೆಗಳಿಗೆ ನೇರಪಾವತಿಯಡಿ ನೇಮಕಕ್ಕೆ ಕಾನೂನು ಇಲಾಖೆಗೆ ಪ್ರಸ್ತಾವನೆ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ,ದಾವಣಗೆರೆ:ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕ್ಲಿನಿಕಲ್ ವಿಭಾಗದಲ್ಲಿ ಗ್ರೂಪ್ ಡಿ ಸೇವೆ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇರ ಪಾವತಿಯಡಿ ನೇಮಕ ಮಾಡಿಕೊಳ್ಳಲು ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಸಾಧಕ, ಬಾದಕಗಳ ಪರಿಶೀಲನೆ ನಂತರ ಹೊರಗುತ್ತಿಗೆಯ ಎಲ್ಲಾ ಗ್ರೂಪ್ ಡಿ ಸಿಬ್ಬಂದಿಗಳನ್ನು ನೇರಪಾವತಿಯಡಿ ಪಡೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ಬುಧವಾರ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಮಾಡಿರುವ 200 ಹಾಸಿಗೆಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ನ್ನು ಲೋಕಾರ್ಪಣೆ ಮಾಡಿ ಸಮಾರಂಭದಲ್ಲಿ ಮಾತನಾಡಿದರು.
ದಾವಣಗೆರೆಯಲ್ಲಿನ ಚಿಗಟೇರಿ ಆಸ್ಪತ್ರೆ ವಿಶಾಲವಾದ ಸ್ಥಳದಲ್ಲಿದ್ದು 70 ವರ್ಷದ ಹಳೆಯದಾಗಿದೆ. ಇಲ್ಲಿ ಹೊಸ ಕಟ್ಟಡ, ದುರಸ್ಥಿಯಾಗಬೇಕಾಗಿದ್ದು ಮಧ್ಯ ಕರ್ನಾಟಕದಲ್ಲಿನ ಈ ಆಸ್ಪತ್ರೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವ ಮೂಲಕ ಈ ಭಾಗದಲ್ಲಿನ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ ಇಲ್ಲಿನ ಮೂಲಭೂತ ಸೌಕರ್ಯಕ್ಕೆ ಮತ್ತು ಹೊಸ ಬ್ಲಾಕ್ ನಿರ್ಮಾಣಕ್ಕೆ ರೂ.17 ಕೋಟಿ ಬಿಡುಗಡೆ ಮಾಡಲಾಗಿದ್ದು ಭವಿಷ್ಯದ ದೃಷ್ಟಿಯಿಂದ ನೂತನ ಯೋಜನೆಯನ್ನು ಸಿದ್ದಪಡಿಸಿ ಅದರಂತೆ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ರೂ. 30 ಕೋಟಿಯಲ್ಲಿ ನಿರ್ಮಿಸಲಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 200 ಹಾಸಿಗೆ ಸಾಮಥ್ರ್ಯವಿದ್ದು ಇಲ್ಲಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಮಂಜೂರು ಮಾಡಲು ಸರ್ಕಾರದ ಮುಂದೆ ಪ್ರಸ್ತಾವನೆ ಇದ್ದು ಇಲ್ಲಿಗೆ ಬೇಕಾಗಿರುವ ವೈದ್ಯರು ಹಾಗೂ ಸಿಬ್ಬಂದಿಗಳ ಹುದ್ದೆಗಳಿಗೆ ಮಂಜೂರಾತಿಯನ್ನು ನೀಡಲಾಗುತ್ತದೆ. ಟ್ರಾಮಾ ಕೇರ್ ಸೆಂಟರ್ಗೂ ಸಿಬ್ಬಂದಿಗಳ ಅಗತ್ಯವಿದ್ದು ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತದೆ. ಆಸ್ಪತ್ರೆ ಕಟ್ಟಿದರೆ ಸಾಲದು, ಇಲ್ಲಿ ಅಗತ್ಯವಿರುವ ಪರಿಕರ, ಸಿಬ್ಬಂದಿಗಳು ಇದ್ದಾಗ ಮಾತ್ರ ಜನರಿಗೆ ಆರೋಗ್ಯ ಸೇವೆ ಸಿಗಲು ಸಾಧ್ಯವಿದೆ ಎಂದರು.
ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಆದರೆ ಇವುಗಳಿಗೆ ಸಿಗಬೇಕಾದ ಆದ್ಯತೆ ಸಾಕಾಗುತ್ತಿಲ್ಲ. ಜನರ ಆರೋಗ್ಯ ಸಂರಕ್ಷಣೆ ಮಾಡಿದಾಗ ಆರೋಗ್ಯವಂತ ನಾಗರಿಕನಾಗಲು ಸಾಧ್ಯ, ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆರೋಗ್ಯವು ಗ್ಯಾರಂಟಿ ಯೋಜನೆಯಾಗಬೇಕು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕಾಗಿದೆ ಎಂದರು.
ಮಾಯಕೊಂಡ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದರೂ ಸಮುದಾಯ ಆರೋಗ್ಯ ಕೇಂದ್ರವಿರುವುದಿಲ್ಲ. ಮುಂದಿನ ದಿನಗಳಲ್ಲಿ ಮಾಯಕೊಂಡಕ್ಕೆ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಲಾಗುತ್ತದೆ. ಮೂಲಭೂತ ಸೌಕರ್ಯ ಕೊಟ್ಟರೆ ಸಾಕಾಗುವುದಿಲ್ಲ, ವೈದ್ಯರು ಜನರ ಸೇವೆ ಮಾಡಬೇಕು. ವೈದ್ಯಕೀಯ ಸೇವಾ ಕ್ಷೇತ್ರವಾಗಿದ್ದು ಸಹಾನುಭೂತಿಯಿಂದ ಎಲ್ಲಾ ವೈದ್ಯರು ಕೆಲಸ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ವೈದ್ಯರು, ಸಿಬ್ಬಂದಿಗಳ ಸೇವೆ ಜನರಿಗೆ ಸಿಗುವಂತಾಗಬೇಕೆಂದರು.
ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಆಸ್ಪತ್ರೆ ಕಟ್ಟಡದ ಜೊತೆಗೆ ಸಲಕರಣೆಗಳು ಇರಬೇಕಾಗುತ್ತದೆ, ಜೊತೆಗೆ ಸಿಬ್ಬಂದಿಗಳು ಇರಬೇಕು, ಇಲ್ಲವಾದಲ್ಲಿ ವ್ಯರ್ಥವಾಗುತ್ತದೆ. ಚಿಗಟೇರಿ ಆಸ್ಪತ್ರೆಯಿಂದ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದೆ. ಇಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ಜನರಿಗೆ ಸಿಗುವಂತಾಗಬೇಕು. ಇಲ್ಲಿ ನರ್ಸ್, ಆಯಾಗಳ ಕೊರತೆ ಇದೆ ಎಂದು ತಿಳಿದುಬಂದಿದ್ದು ವ್ಯವಸ್ಥೆ ಸರಿಪಡಿಸಬೇಕು. ಹೊರಗುತ್ತಿಗೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರಪವಾತಿಯಡಿ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿಗಳನ್ನು ಪಡೆಯುವಂತಾಗಬೇಕು. ಸಾರ್ವಜನಿಕ ಸೇವೆ ಮಾಡುವಾಗ ಬಹಳ ಪಾರದರ್ಶಕವಾಗಿ ಕೆಲಸ ಮಾಡಬೇಕಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಖಾಸಗಿಯಾಗಿ 8 ಕೋಟಿವರೆಗೆ ವೆಚ್ಚ ಮಾಡಲಾಗಿದೆ ಎಂದರು.
ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಯಾಗಿದ್ದ ಸಮಯದಿಂದಲೂ ಚಿಗಟೇರಿ ಆಸ್ಪತ್ರೆಯ ಸ್ಥಿತಿಗತಿ ಗೊತ್ತಿದೆ. ಇಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಜೊತೆಗೆ ಸುಧಾರಣೆಯಾಗಬೇಕಿದೆ. ಮಾಸ್ಟರ್ ಪ್ಲಾನ್ ತಯಾರಿಸುವ ಮೂಲಕ ಹಂತ ಹಂತವಾಗಿ ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಮಾನವ ಹಾಲು ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ಇನ್ನಷ್ಟು ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿದೆ, ಇದಕ್ಕೆ ಮಾನವ ಸಂಪನ್ಮೂಲ ಕಲ್ಪಿಸಬೇಕು. ಸಿಬ್ಬಂದಿಗಳು ಸಹ ಉಪಕರಣಗಳನ್ನು ನಿಷ್ಕ್ರಿಯೆಗೊಳಿಸದೇ ಉಪಯುಕ್ತ ಮಾಡಿಕೊಳ್ಳಬೇಕು. ಐಸಿಯು ಬೆಡ್ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಶವಗಾರಕ್ಕೆ ಕಾಯಕಲ್ಪ ಮಾಡಬೇಕಾಗಿದ್ದು ಅತ್ಯುತ್ತಮವಾಗಿ ಕೆಲಸ ಮಾಡುವ ಡಾ; ಮೋಹನ್ ರವರನ್ನು ಸನ್ಮಾನಿಸಿ ಗೌರವಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮೇಯರ್ ಕೆ.ಚಮನ್ಸಾಬ್, ದೂಡಾ ಆಧ್ಯಕ್ಷ ಕೆ.ದಿನೇಶ್ ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶಿವಕುಮಾರ್ ಕೆ.ಬಿ, ಅಭಿಯಾನ ನಿರ್ದೇಶಕರಾದ ಡಾ; ನವೀನ್ ಭಟ್ ರೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಬಿರ್ಸಾ ಮುಂಡಾ ಜನ್ಮ ದಿನಾಚರಣೆ ; ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳ ಸಮರ್ಪಕ ಬಳಕೆಗೆ ಸೂಚನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹಾಗೂ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಬಿರ್ಸಾ ಮುಂಡಾ ಅವರಾಗಿದ್ದು ಕೇಂದ್ರ ಸರ್ಕಾರ ಬುಡಕಟ್ಟು ಜನರ ಅಭಿವೃದ್ದಿಗಾಗಿ ಅನುಷ್ಟಾನ ಮಾಡುತ್ತಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಜನರ ಅಭಿವೃದ್ದಿ ಮಾಡಲು ಕ್ರಮವಹಿಸಲಾಗುತ್ತದೆ ಎಂದು ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನವಂಬರ್ 15 ರಂದು ನಡೆದ ಜನಜಾತಿಯ ಗೌರವ್ ದಿವಾಸ್ ಆಚರಣೆ ಸಮಾರಂಭದಲ್ಲಿ ಆದಿವಾಸಿ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಆದಿವಾಸಿ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಅಂಗವಾಗಿ ಜನಜಾತಿಯ ಗೌರವ್ ದಿವಸ್ ಎಂದು ಪ್ರತಿ ವರ್ಷ ನವಂಬರ್ 15 ರಂದು ಆಚರಿಸಲಾಗುತ್ತದೆ.
ಜನಜಾತಿಯ ಗೌರವ್ ದಿವಸದಂದು ದೇಶದ ಜನಜಾತಿಯ ಜನರ ಸಾಧನೆಗಳು, ಸಂಸ್ಕøತಿಗಳು, ಐತಿಹ್ಯಗಳು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಅಡಿಯಲ್ಲಿ ಕೇಂದ್ರ ಸರ್ಕಾರವು ಆದಿವಾಸಿಗಳ ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ ಹಾಗೂ ಧರ್ತಿ ಆಬಾ ಜನಜಾತಿಯ ಉತ್ಕರ್ಷ ಅಭಿಯಾನ ಕಾರ್ಯಕ್ರಮಗಳ ಅಡಿಯಲ್ಲಿ ಆದಿವಾಸಿಗಳಿಗೆ ಹಾಗೂ ಎಸ್ಟಿ ಜನರ ಸ್ವಸಹಾಯ ಗುಂಪುಗಳಿಗೆ ಜಿಲ್ಲಾ ಪಂಚಾಯತ್ನಿಂದ ಎನ್ಆರ್ಎಲ್ಎಂ ರಡಿ ಪ್ರಧಾನ ಮಂತ್ರಿ ವನಧನ್ ಯೋಜನೆಯಡಿ ಜಿಲ್ಲೆಯಲ್ಲಿನ 5 ವನಧನ್ ವಿಕಾಸ ಕೇಂದ್ರಗಳ ಸ್ವಸಹಾಯ ಸಂಘದ ಮಹಿಳಾ ಗುಂಪುಗಳಿಗೆ 37 ಲಕ್ಷದ ವೆಚ್ಚದಲ್ಲಿ 22 ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ ಸ್ವ ಉದ್ಯೋಗ ನೀಡುವ ಅಗರಬತ್ತಿ ತಯಾರಿಸುವ ಯಂತ್ರ, ಅಡಿಕೆ ಕತ್ತರಿಸುವ ಯಂತ್ರ, ಎಣ್ಣೆ ಗಾಣ, ಹಿಟ್ಟಿನ ಗಿರಣಿ, ಅಡಿಕೆ ತಟ್ಟೆ ಯಂತ್ರ, ರೊಟ್ಟಿ ಮಾಡುವ ಯಂತ್ರಗಳನ್ನು ವಿತರಣೆ ಮಾಡಲಾಗಿದೆ.
ವನಧನ್ ಯೋಜನೆ ಐದು ವರ್ಷಗಳ ಕಾರ್ಯಕ್ರಮವಾಗಿದ್ದು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನ ಮಾಡಿ ಅತ್ಯುತ್ತಮ ಜಿಲ್ಲೆ ಎಂದು ಹೆಸರು ಗಳಿಸುವ ಮೂಲಕ ಕೇಂದ್ರದ ಹೆಚ್ಚಿನ ಅನುದಾನ ದಾವಣಗೆರೆಗೆ ಪಡೆದು ಕ್ಷೇತ್ರದಲ್ಲಿನ ಬುಡಕಟ್ಟು ಹಾಗೂ ಪ.ಪಂಗಡದ ಜನರ ಆರ್ಥಿಕಾಭಿವೃದ್ದಿ ಮತ್ತು ಇವರು ವಾಸಿಸುವ ಕಡೆ ಮೂಲಭೂತ ಸೌಕರ್ಯ, ಆಶ್ರಮ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸಬೇಕೆಂದು ತಿಳಿಸಿ ಸ್ವ ಉದ್ಯೋಗ ಕೈಗೊಂಡ ಮಹಿಳೆಯರು ಮುಂದಿನ ದಿನಗಳಲ್ಲಿ ತಮ್ಮ ಆರ್ಥಿಕ ಅನುಕೂಲತೆಗಳ ಮತ್ತು ಅಭಿವೃದ್ದಿ ಕುರಿತು ಯಶೋಗಾಥೆಗಳನ್ನು ಇಲಾಖೆಯೊಂದಿಗೆ ಹಂಚಿಕೆ ಮಾಡಿಕೊಳ್ಳುವಂತಾಗಬೇಕೆಂದು ಆಶಿಸಿದರು.
ಬಿರ್ಸಾ ಮುಂಡಾ ಜನ್ಮ ದಿನಾಚರಣೆ ಹಾಗೂ ಧರ್ತಿ ಆಬಾ ಜನ್ಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ ಬುಡಕಟ್ಟು ಗುಂಪುಗಳಿಗೆ ಸ್ವ ಉದ್ಯೋಗದ ವಿವಿಧ ಯಂತ್ರೋಪಕರಣಗಳನ್ನು ವಿತರಣೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಯೋಜನಾ ನಿರ್ದೇಶಕರಾದ ರೇಷ್ಮಕೌಸರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಒಳಮೀಸಲಾತಿ ಜಾರಿಗೆ ಚಾಲನೆ ; ಜಾತಿಗಣತಿ ವರದಿ ವಿರೋಧಕ್ಕೆ ಬೇಡ ಮನ್ನಣೆ : ಮಾಜಿ ಸಚಿವ ಎಚ್.ಆಂಜನೇಯ
ಸುದ್ದಿದಿನ,ದಾವಣಗೆರೆ:ಅಸ್ಪೃಶ್ಯತೆ ನೋವು, ಸೌಲಭ್ಯಗಳ ಮರಿಚೀಕೆ, ಕೈಗೆಟುಕದ ಮೀಸಲಾತಿ ಹೀಗೆ ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ ಮತ್ತು ಸಹೋದರ ಜಾತಿಗಳಿಗೆ ಒಳಮೀಸಲಾತಿ ವರವಾಗಿ ಪರಿಣಮಿಸಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ಹೋರಾಟದ ಫಲ ಹಾಗೂ ಎಲ್ಲ ಪಕ್ಷಗಳ ಸರ್ಕಾರಗಳ ಸಹಕಾರ-ಬದ್ಧತೆ ಕಾರಣಕ್ಕೆ ಪರಿಶಿಷ್ಟ ಜಾತಿ ಗುಂಪಿನಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಂದರ್ಭ ಎದುರಾಗಿದೆ. ಅದರಲ್ಲೂ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಸುಪ್ರೀಂ ಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ ಆಗಿದೆ ಎಂದರು.
ಈಗ ಕೋರ್ಟ್ ತೀರ್ಪು ಬಳಿಕ ರಾಜ್ಯ ಸರ್ಕಾರದ ಅಂಗಳಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಅಧಿಕಾರದ ಚೆಂಡು ಬಂದಿದೆ.ಅದರಲ್ಲೂ ಅಹಿಂದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರವೆಂಬ ಹೆಗ್ಗಳಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಒಳಮೀಸಲಾತಿ ಜಾರಿಗೊಳಿಸಿ, ದಲಿತರ ಕಣ್ಮಣಿ ಆಗುವ ಅವಕಾಶ ನೀಡಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಈ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯದೆ ಒಳಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡಿದ್ದು, ಅದರ ಮೊದಲ ಹೆಜ್ಜೆಯಾಗಿ ದತ್ತಾಂಶ (ಎಂಪಿರಿಕಲ್ ಡಾಟ) ಸಂಗ್ರಹಕ್ಕೆ ಆಯೋಗ ರಚಿಸಿ, ಅಧ್ಯಕ್ಷರನ್ನಾಗಿ ನ್ಯಾ.ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಪರಿಶಿಷ್ಟ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದೆ ಎಂದು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಹೋರಾಟದ ಪರಿಣಾಮ ಈ ಹಿಂದೆ ರಚನೆಗೊಂಡಿದ್ದ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಎಸ್ಸಿಗೆ 15ರಿಂದ 17, ಎಸ್ಟಿಗೆ 3ರಿಂದ ಶೇ.7 ಒಟ್ಟು 18ರಿಂದ ಶೇ.24ಕ್ಕೆ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಏರಿಕೆಗೊಂಡಿತು. ಆದ್ದರಿಂದ ಸಾಮಾಜಿಕ, ಜಾತಿ ವ್ಯವಸ್ಥೆ, ಹಿಂದುಳಿದ ವರ್ಗದ ಜನರ ಕುರಿತು ಹೆಚ್ಚು ಕಾಳಜಿ ಹೊಂದಿರುವ ನಾಗಮೋಹನ್ ದಾಸ್ ನೇಮಕ ಅತ್ಯಂತ ಉತ್ತಮ ನಿರ್ಧಾರವಾಗಿದೆ ಎಂದರು.
ರಾಜ್ಯದ ಎಲ್ಲೆಡೆಯೂ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲವು ಜಿಲ್ಲೆಗಳಲ್ಲಿ ಮಾದಿಗ ಹಾಗೂ ಛಲವಾದಿ ಸಮುದಾಯದವರು ಆದಿಕರ್ನಾಟಕ ಎಂದು ಗುರುತಿಸಿಕೊಂಡಿದ್ದು, ಗೊಂದಲ ಉಂಟು ಮಾಡಿದೆ. ಆದ್ದರಿಂದ ನಾಗಮೋಹನ್ದಾಸ್ ಅವರು ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿ, ಮಾದಿಗ ಮತ್ತು ಅದರ ಉಪ ಜಾತಿಗಳನ್ನು ಗುರುತಿಸುವ ಕೆಲಸ ಮಾಡುವ ಮೂಲಕ ನೊಂದ ಜನರಿಗೆ ನ್ಯಾಯ ಒದಗಿಸುವ ವಿಶ್ವಾಸ ಇದೆ ಎಂದು ಹೇಳಿದರು.
2011ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಜನಗಣತಿ ಅಂಕಿ ಅಂಶ ಹಾಗೂ ಎಲ್.ಜಿ.ಹಾವನೂರು, ನ್ಯಾ.ಸದಾಶಿವ, ಕಾಂತರಾಜ್ ಆಯೋಗದ ವರದಿಗಳನ್ನು ಅಧ್ಯಯನ ನಡೆಸಿದರೆ ದತ್ತಾಂಶ ಮಾಹಿತಿ ದೊರೆಯಲಿದೆ. ಜತೆಗೆ ಒಳಮೀಸಲಾತಿ ಜಾರಿಗೆ ಇರುವ ಸಣ್ಣಪುಟ್ಟ ಅಡ್ಡಿಗಳನ್ನು ತಕ್ಷಣ ನಿವಾರಿಸಬಹುದು ಎಂದರು.
ಬ್ರಿಟಿಷರ ಕಾಲದಲ್ಲಿ ಆಗಿದ್ದ ಹಾಗೂ 100 ವರ್ಷದ ನಂತರ ಸ್ವತಂತ್ರ ಭಾರತದಲ್ಲಿಯೇ ಮೊದಲ ಬಾರಿಗೆ ಸಿದ್ದರಾಮಯ್ಯ ಸರ್ಕಾರ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ನಿರ್ಧಾರ ಅಂದು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ನಾನು ಹೆಚ್ಚು ಕಾಳಜಿಯಿಂದ ವರದಿ ತಯಾರಿಸಲಾಗಿತ್ತು. ಇದು ದೇಶದಲ್ಲಿಯೇ ಐತಿಹಾಸಿಕ ನಿರ್ಧಾರವಾಗಿದೆ ಎಂದರು.
ಈ ನಿಟ್ಟಿನಲ್ಲಿ ಕಾಂತರಾಜ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ 1 ಲಕ್ಷದ 50 ಸಾವಿರ ಶಿಕ್ಷಕರು ಪಾಲ್ಗೊಂಡಿದ್ದು, ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಅನೇಕ ಐಎಎಸ್ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಅಂದಾಜು 180 ಕೋಟಿ ರೂ. ವೆಚ್ಚ ಮಾಡಿ ಅತ್ಯಂತ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ.
ಈ ವರದಿ ಎಲ್ಲ ವರ್ಗದಲ್ಲಿನ ನೊಂದ ಜನರಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸಲು ಬುನಾದಿ ಆಗಲಿದೆ. ಅದರಲ್ಲೂ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಲು ಸಹಕಾರಿ ಆಗಲಿದೆ. ಮೀಸಲಾತಿ, ಸೌಲಭ್ಯ ಹಂಚಿಕೆ ವೇಳೆ ಯಾವ ಆಧಾರದ ಮೇಲೆ ಇದನ್ನು ಜಾರಿಗೊಳಿಸಿದ್ದೀರಾ, ನಿಮ್ಮಲ್ಲಿ ಏನಾದ್ರೂ ಅಂಕಿ-ಅAಶಗಳು ಇವೆಯೇ ಎಂದು ಪದೇ ಪದೆ ಕೋರ್ಟ್ ಪ್ರಶ್ನೇಗೆ ಕಾಂತರಾಜ್ ಆಯೋಗದ ವರದಿ ಉತ್ತರವಾಗಲಿದೆ ಎಂದರು.
ಕಾಂತರಾಜ್ ಆಯೋಗ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಕುರಿತು ಯಾವುದೇ ರೀತಿ ಟೀಕೆ, ಆರೋಪ, ಬೆದರಿಕೆ, ವಿರೋಧ ವ್ಯಕ್ತವಾದರೂ ಸಿದ್ದರಾಮಯ್ಯ ಜಗ್ಗಬಾರದು. ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಚರ್ಚಿಸಿ ವರದಿಯನ್ನು ಬಹಿರಂಗಪಡಿಮಂಡಿಸಬೇಕು. ಬಳಿಕ ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಬಹುದು. ಈ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನೂರಾರು ವರ್ಷಗಳಿಂದಲೂ ಸಾಮಾಜಿಕ ನ್ಯಾಯ ಕಲ್ಪಿಸುವ ಸಂದರ್ಭ ಆಡಳಿತದ ವಿರುದ್ಧ ಕೆಲವರು ತಿರುಗಿಬಿದ್ದಿದ್ದಾರೆ. ಸಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ವಿ.ಪಿ.ಸಿಂಗ್, ದೇವರಾಜ ಅರಸು ಸೇರಿ ಅನೇಕರ ಕಾಲದಲ್ಲಿ ನೊಂದ ಜನರಿಗೆ ಮೀಸಲಾತಿ ಕೊಡಲು ಅಡ್ಡಿಗಳು ಎದುರಾಗಿವೆ. ಆದರೂ ಅವರು ಯಾವುದೇ ಒತ್ತಡ, ಪ್ರತಿಭಟನೆಗಳಿಗೆ ಬೆದರದೆ ಹಕ್ಕು ಕಲ್ಪಿಸಿದ್ದಾರೆ ಎಂದರು.
ಅದೇ ಹಾದಿಯಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಸಾಗುತ್ತಾರೆಂಬ ವಿಶ್ವಾಸ ಇದೆ. ಈಗಾಗಲೇ ಹಲವರು ಬಾರಿ ಅವರು ತಮ್ಮ ಮಾತು, ನಡೆ ಮೂಲಕ ದೃಢಪಡಿಸಿದ್ದು, ನಾನೇ ಒಳಮೀಸಲಾತಿ ಜಾರಿಗೊಳಿಸುವುದು ಹಾಗೂ ಯಾವುದೇ ಟೀಕೆ ಬಂದರೂ ಜಾತಿಗಣತಿ ವರದಿ ಜಾರಿ ಸಿದ್ಧವೆಂಬ ಹೇಳಿಕೆ ಎಲ್ಲ ವರ್ಗದ ಜನರಲ್ಲಿ ಅದಮ್ಯ ವಿಶ್ವಾಸ ಮೂಡಿಸಿದೆ. ಜತೆಗೆ ಒಳಮೀಸಲಾತಿ ಜಾರಿಗೆ ನ್ಯಾ.ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಅತ್ಯಂತ ಗಟ್ಟಿ ನಿರ್ಧಾರವಾಗಿದೆ ಎಂದರು.
ವಿರೋಧ ಮಾಡುವವರು ಕಾರಣ ಕೊಡಬೇಕು
ಅನಗತ್ಯವಾಗಿ ಟೀಕೆ, ಆರೋಪ ಮಾಡುವುದು ಸರಿಯಲ್ಲ. ಸರ್ಕಾರದ ಅಡಿಯಲ್ಲಿ ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು, ಶಿಕ್ಷಕರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್ಗಳು ಸೇರಿ ಅನೇಕರು ಕಾರ್ಯನಿರ್ವಹಿಸಿದ್ದಾರೆ. ಅವರ ಶ್ರಮವನ್ನು ಗೌರವಿಸಬೇಕು ಎಂದು ಎಚ್.ಆಂಜನೇಯ ಒತ್ತಾಯಿಸಿದರು.
ವರದಿ ಬಹಿರಂಗಗೊಂಡ ಬಳಿಕ ವಿರೋಧ ಮಾಡುವವರು ತಪ್ಪುಗಳನ್ನು ಗುರುತಿಸಿ ಹೇಳಲಿ. ಇಂತಹ ಪ್ರದೇಶದಲ್ಲಿ ಸರ್ವೇ ಆಗಿಲ್ಲ ಎಂದು ಹೇಳಲಿ. ಆಗ ಅದು ಸತ್ಯವೇ ಅಗಿದ್ದರೇ ಆ ಪ್ರದೇಶದಲ್ಲಿ ಮರು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕೋಣಾ. ಈ ಸಂಬಂಧ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ವರದಿ ಬಹಿರಂಗಕ್ಕೆ ಮುನ್ನವೇ ಅನಗತ್ಯವಾಗಿ ವಿರೋಧ ಮಾಡಿದರೇ ನಾವು ಸಹಿಸುವುದಿಲ್ಲ. ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಸ್ವೀಕಾರ, ಮಂಡನೆ, ಬಹಿರಂಗೊಳಿಸುವುದು ತುರ್ತು ಅಗತ್ಯವಿದೆ. ಅದರಲ್ಲೂ ಈ ವಿಷಯದಲ್ಲಿ ಕೋರ್ಟ್ ಕೇಳುತ್ತಿದ್ದ ಅನೇಕ ಪ್ರಶ್ನೇಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಮಹಾನಗರಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ದಲಿತ ಮುಖಂಡ ಹೀರಣ್ಣಯ್ಯ, ಅಂಜಿನಪ್ಪ ಮತ್ತಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ರಸ್ತೆ ಸುರಕ್ಷತಾ ಸಮಿತಿ ಸಭೆ | ಅಪಘಾತ ಪ್ರಮಾಣ ತಗ್ಗಿಸಲು ಜಿಲ್ಲೆಯ ರಸ್ತೆಗಳ ದುರಸ್ತಿ ಹಾಗೂ ಸುಧಾರಣೆಗೆ ವಿಶೇಷ ಗಮನ ನೀಡಿ : ಡಿಸಿ ಗಂಗಾಧರಸ್ವಾಮಿ ಜಿ.ಎಂ.
-
ದಿನದ ಸುದ್ದಿ7 days ago
ಒಳಮೀಸಲಾತಿ ಜಾರಿಗೆ ಚಾಲನೆ ; ಜಾತಿಗಣತಿ ವರದಿ ವಿರೋಧಕ್ಕೆ ಬೇಡ ಮನ್ನಣೆ : ಮಾಜಿ ಸಚಿವ ಎಚ್.ಆಂಜನೇಯ
-
ದಿನದ ಸುದ್ದಿ2 days ago
ಚಿಗಟೇರಿ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳ ನೂತನ ಕಟ್ಟಡದ ಲೋಕಾರ್ಪಣೆ ; ಗ್ರೂಪ್ ಡಿ ಹುದ್ದೆಗಳಿಗೆ ನೇರಪಾವತಿಯಡಿ ನೇಮಕಕ್ಕೆ ಕಾನೂನು ಇಲಾಖೆಗೆ ಪ್ರಸ್ತಾವನೆ : ಸಚಿವ ದಿನೇಶ್ ಗುಂಡೂರಾವ್
-
ದಿನದ ಸುದ್ದಿ7 days ago
ದಾವಣಗೆರೆ | ಬಿರ್ಸಾ ಮುಂಡಾ ಜನ್ಮ ದಿನಾಚರಣೆ ; ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳ ಸಮರ್ಪಕ ಬಳಕೆಗೆ ಸೂಚನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್