Connect with us

ದಿನದ ಸುದ್ದಿ

ಕೊರೋನಾ – ಕೈಚೆಲ್ಲಿ ಕೂರುವುದು ಹೊಣೆಗೇಡಿತನವಾದೀತು

Published

on

  • ನಾ ದಿವಾಕರ

ರ್ನಾಟಕದಲ್ಲಿ ಮತ್ತು ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಮೇ 1 ರಂದು ಎರಡನೆ ಹಂತದ ಲಾಕ್ ಡೌನ್ ಅಂತ್ಯವಾದಾಗ ವಿಶ್ವದಲ್ಲಿ ಎರಡನೆ ಸ್ಥಾನದಲ್ಲಿದ್ದ ಭಾರತ ಈಗ ಅಮೆರಿಕ ನಂತರ ಎರಡನೆ ಸ್ಥಾನದಲ್ಲಿದೆ. ಕರ್ನಾಟಕದಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ನಾಲ್ಕು ಲಕ್ಷ ದಾಟಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಅಂಕಿಅಂಶಗಳನ್ನು ನೀಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಏನೇ ಕಸರತ್ತು ಮಾಡಿದರೂ ರಾಜ್ಯದಲ್ಲಿ ಕೊರೋನಾ ವ್ಯಾಪಿಸುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ, ಸಾವಿನ ಪ್ರಮಾಣ ಶೇಕಡಾವಾರು ಕಡಿಮೆ ಇದೆ ಎಂದ ಮಾತ್ರಕ್ಕೆ ಹೆಚ್ಚುತ್ತಿರುವ ಸೋಂಕು ನಗಣ್ಯ ಎಂದು ಭಾವಿಸಲಾಗುವುದಿಲ್ಲ. ಸೋಂಕನ್ನು ತಡೆಗಟ್ಟುವುದು ಹೇಗೆ ಎಂದು ಯೋಚಿಸುವುದಲ್ಲದೆ, ರಾಜ್ಯದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಪರಿಸ್ಥಿತಿ ಹೇಗಿದೆ ಎಂದು ಅವಲೋಕನ ಮಾಡುವುದು ಇಂದಿನ ತುರ್ತು.

ಕೇಂದ್ರ ನೀತಿ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಇದೇ ಎಚ್ಚರಿಕೆಯನ್ನು ನೀಡಿದೆ. ಕೊರೋನಾ ವೈರಾಣು ದೊಡ್ಡ ನಗರಗಳಿಗಿಂತಲೂ ಸಣ್ಣ ಪುಟ್ಟ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೀಘ್ರವಾಗಿ ಹರಡುತ್ತಿದೆ, ದೇಶದ ಹೆಚ್ಚಿನ ಭಾಗ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗ ಅಧಿಕಾರಿ ವಿ ಕೆ ಪಾಲ್ ಎಚ್ಚರಿಸಿದ್ದಾರೆ. ಕೊರೋನಾ ಸೋಂಕಿನ ಪರೀಕ್ಷೆಗಳ ಪ್ರಮಾಣ ಹೆಚ್ಚಿಸಬೇಕು ಎಂದು ನೀತಿ ಆಯೋಗವೂ ಸಲಹೆ ನೀಡಿದೆ.

ಶೇಕಡಾವಾರು ಸಾವಿನ ಪ್ರಮಾಣ ಕಡಿಮೆ ಇದೆ ಎಂದ ಮಾತ್ರಕ್ಕೆ ಸಾವಿನ ಸಂಖ್ಯೆಯನ್ನು ಕಡೆಗಣಿಸಲಾಗುವುದಿಲ್ಲ. ವೆಂಟಿಲೇಟರ್ ಇಲ್ಲದೆ, ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸೋಂಕಿತರು ಮೃತಪಟ್ಟರೆ ಅದು ಪ್ರಭುತ್ವ ಮಾಡುವ ಕೊಲೆ ಎಂದೇ ಭಾವಿಸಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದು ಜೀವವೂ ಅಮೂಲ್ಯ. ಮತ್ತೊಂದೆಡೆ ದಾಖಲೆಗಳ ಸಂಗ್ರಹದಲ್ಲಿರುವ ವ್ಯತ್ಯಯಗಳ ಪರಿಣಾಮ ಈ ಅಂಕಿ ಅಂಶಗಳೂ ಸಹ ಪರಿಪೂರ್ಣವಲ್ಲ ಎನ್ನುವುದು ಸಾರ್ವತ್ರಿಕ ಸತ್ಯ.

ಈ ಸಂದರ್ಭದಲ್ಲೇ ಕರ್ನಾಟಕದಲ್ಲಿ ಕೋವಿದ್ 19 ನಿಂದ ಸತ್ತವರ ಸಂಖ್ಯೆ 6937. ಒಟ್ಟು ಸೋಂಕಿತರ ಸಂಖ್ಯೆ 4.30 ಲಕ್ಷ. ಸೆಪ್ಟಂಬರ್ ತಿಂಗಳ 10 ದಿನಗಳಲ್ಲಿ 1235 ಮಂದಿ ಮೃತಪಟ್ಟಿದ್ದಾರೆ ಅಂದರೆ ಪ್ರತಿದಿನ ಕನಿಷ್ಟ ಸರಾಸರಿ 123 ಹೆಚ್ಚು ಮಂದಿ ಸಾಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕೋವಿದ್ ಪರೀಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲಾಗಿದ್ದು ಸೋಂಕಿತರ ಸಂಖ್ಯೆಯೂ ಕಡಿಮೆ ಎನಿಸುತ್ತಿದೆ. ಆರು ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ 34.61 ಲಕ್ಷ ಜನರು ಪರೀಕ್ಷೆಗೊಳಪಟ್ಟಿದ್ದಾರೆ.

ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಇದು ನಗಣ್ಯ ಎನ್ನಬಹುದು. 3.22 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ ಹೆಚ್ಚಾಗಿದೆ ಎಂದರೆ ಕೊರೋನಾ ನಿಯಂತ್ರಣದಲ್ಲಿದೆ ಎಂದರ್ಥವಲ್ಲ. ಸೋಂಕಿತರ ಪ್ರಮಾಣ ಏರುತ್ತಿರುವುದು ಸರ್ಕಾರವನ್ನು ಎಚ್ಚರಿಸಬೇಕಿದೆ. ಈ ಮುನ್ನ ಸೋಂಕಿತ ವ್ಯಕ್ತಿಗಳ ಮನೆಗಳನ್ನು, ಅಥವಾ ಮನೆ ಇರುವ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಇದರ ಪೂರ್ಣ ವಿವರಗಳನ್ನು ಮಾಧ್ಯಮಗಳಿಗೆ ನೀಡಲಾಗುತ್ತಿತ್ತು.

ಈಗ ಸೋಂಕಿತ ವ್ಯಕ್ತಿಯ ಮನೆಗಳನ್ನು ಮಾತ್ರವೇ ಸೀಲ್ ಡೌನ್ ಮಾಡಲಾಗುತ್ತಿದೆ. ಒಂದು ಊರಿನ ಯಾವ ರಸ್ತೆ ಅಥವಾ ಯಾವ ಬಡಾವಣೆಯಲ್ಲಿ ಸೋಂಕಿತರಿದ್ದಾರೆ ಎನ್ನುವ ಮಾಹಿತಿಯನ್ನು ಎಲ್ಲಿಯೂ ನೀಡಲಾಗುತ್ತಿಲ್ಲ. ಹಾಗಾಗಿ ಸೋಂಕಿತರು ಇರುವ ರಸ್ತೆಗಳಲ್ಲಿ, ಸೋಂಕಿನ ಅರಿವು ಇಲ್ಲದೆ ಓಡಾಡುವವರೂ ಸಹ ಯಾವುದೋ ಒಂದು ರೀತಿಯಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ ಅಲ್ಲವೇ ? ಈಗ ಸರ್ಕಾರದ ಗಮನ ಮಾರುಕಟ್ಟೆ ಮತ್ತು ಆರ್ಥಿಕತೆಯತ್ತ ಹೊರಳಿದೆ. ಚಿತ್ರಮಂದಿರಗಳು ಮತ್ತು ಶಾಲೆಗಳನ್ನು ತೆರೆದುಬಿಟ್ಟರೆ ಸಂಪೂರ್ಣ ಸಹಜ ಸ್ಥಿತಿಗೆ ಬಂದಂತಾಗುತ್ತದೆ. ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯ ದೃಷ್ಟಿಯಿಂದ ಇದು ಅನಿವಾರ್ಯ ಇರಬಹುದು. ಆದರೆ ಇದರೊಟ್ಟಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದೂ ಮುಖ್ಯ ಅಲ್ಲವೇ ?

ಕೊರೋನಾ ಸದ್ದೇ ಮಾಡದಿದ್ದ ಸಂದರ್ಭದಲ್ಲಿ ಸೂರ ಕುಸಿಯುವಂತೆ ಅರಚಾಡುತ್ತಿದ್ದ ಸುದ್ದಿಮನೆಯ ಕೂಗುಮಾರಿಗಳಿಗೆ ಈಗ, ಕೊರೋನಾ ಮನೆಮನೆಗೂ ಹಬ್ಬುತ್ತಿರುವಾಗ ಕಂಗನಾ, ರಿಯಾ, ಕವಿತಾ, ಸಂಜನಾ, ಸುಶಾಂತ್ ಟಿ ಆರ್ ಪಿ ಸಾಧನಗಳಾಗಿಬಿಟ್ಟಿದ್ದಾರೆ. ಸುದ್ದಿಮನೆಗಳು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿ ಹಾಳಾಗಿ ಹೋಗಿವೆ. ಸುದ್ದಿಮನೆಯ ಕೂಗುಮಾರಿಗಳಿಗೆ ತಬ್ಲೀಗಿಗಳು ಒಂದು ಘಟ್ಟದಲ್ಲಿ ಲಾಭದಾಯಕವಾಗಿ ಕಾಣುತ್ತಿದ್ದರು.

ಕೊರೋನಾ ರಣಕೇಕೆ ಹಾಕುತ್ತಾ ಹಣ ತರುತ್ತಿತ್ತು. ಈಗ ಡ್ರಗ್ಗಿಣಿ, ಢಾಕಿಣಿ ಬಲೆಗೆ ಸಿಲುಕಿದ್ದಾರೆ. ಅಂದೂ ಸುದ್ದಿ ನೀಡಿರಲಿಲ್ಲ ಇಂದೂ ನೀಡುತ್ತಿಲ್ಲ. ಈಗ ಡ್ರಗ್ ಪೀಡಿತರಾಗಿರುವುದರಿಂದ ಹೆಚ್ಚಿನದೇನೂ ನಿರೀಕ್ಷಿಸಲೂ ಆಗುವುದಿಲ್ಲ. ಮುದ್ರಣ ಮಾಧ್ಯಮಗಳಲ್ಲಿ ಕೊರೋನಾ ಈಗ ಚಿನ್ನ-ಬೆಳ್ಳಿ, ಈರುಳ್ಳಿ-ಬೆಳ್ಳುಳ್ಳಿ, ಮಾಂಸ-ಮೊಟ್ಟೆಯ ಹಾಗೆ ಪೇಟೆ ಧಾರಣೆಯ ಅಂಕಿಅಂಶಗಳಾಗಿ ಕಾಣುತ್ತಿದ್ದು ಎಲ್ಲೋ ಮೂಲೆಯಲ್ಲಿ ಜಾಗ ಪಡೆಯುತ್ತಿವೆ.

ಕೊರೋನಾದೊಂದಿಗೆ ಬದುಕುವುದನ್ನು ಜನರು ಕಲಿತಿದ್ದಾರೆ. ಸತ್ತವರಿಗೆ ಏನು ಹೇಳುವುದು ? ಆರ್ಥಿಕವಾಗಿ ಜರ್ಝರಿತವಾಗಿರುವ ಅನೇಕ ಕುಟುಂಬಗಳು ತಮ್ಮ ಆಧಾರ ಕಳೆದುಕೊಳ್ಳುತ್ತಿವೆ. ಒಂದು ಲಕ್ಷಕ್ಕೂ ಹೆಚ್ಚು ಅಂಗಡಿ ಮುಗ್ಗಟ್ಟುಗಳು ಮುಚ್ಚಲ್ಪಟ್ಟಿವೆ. ಹಲವಾರು ಸ್ಟೇಷನರಿ ಅಂಗಡಿಗಳು ಮುಚ್ಚಲ್ಪಟ್ಟಿವೆ, ದಿನಸಿ ಅಂಗಡಿಗಳು ಮುಚ್ಚಲ್ಪಟ್ಟಿವೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ನಾಳಿನ ಚಿಂತೆಯಲ್ಲಿದ್ದಾರೆ.

ಈ ನಡುವೆಯೇ ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳನ್ನೂ ಅನ್ ಲಾಕ್ ಮಾಡುವ ಮೂಲಕ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿದೆ. ಸೆಪ್ಟಂಬರ್ 21 ರಿಂದ ಸಭೆ ಸಮಾರಂಭಗಳಲ್ಲಿ 100 ಜನರಿಗೆ ಅವಕಾಶ ನೀಡಲಾಗುತ್ತಿದೆ. 9 ರಿಂದ 12ನೆಯ ತರಗತಿಯವರೆಗೆ ಶಾಲೆಗಳನ್ನು ತೆರೆಯಲಾಗುತ್ತಿದೆ. ಬಾರ್ ರೆಸ್ಟೋರೆಂಟ್ ಪಬ್ ಈಗಾಗಲೇ ತೆರೆದಿವೆ. ಅಕ್ಟೋಬರ್ 1ರಿಂದ ಚಿತ್ರಮಂದಿರಗಳನ್ನೂ ತೆರೆಯಲಾಗುತ್ತದೆ. ಇದು ಅನಿವಾರ್ಯ ಎಂದಾದರೆ ಇರಲಿ, ಕೊರೋನಾ ಸೋಂಕಿತರ ಸೌಖ್ಯವೂ ಅನಿವಾರ್ಯವೇ ಅಲ್ಲವೇ ?

ನೀತಿ ಆಯೋಗದ ಒಂದು ಎಚ್ಚರಿಕೆಯ ಮಾತನ್ನು ಜನರೂ ಅರ್ಥಮಾಡಿಕೊಳ್ಳಬೇಕು, ಸರ್ಕಾರವೂ ಯೋಚಿಸಬೇಕು. ಜನರ ನಿರ್ಲಕ್ಷ್ಯವೇ ಸೋಂಕು ಹೆಚ್ಚುವುದಕ್ಕೆ ಕಾರಣ ಎಂದು ನೀತಿ ಆಯೋಗ ಹೇಳಿರುವುದು ವಾಸ್ತವ ಸಂಗತಿ. ಯಾವುದೇ ಸಭೆ ಸಮಾರಂಭಗಳಲ್ಲೂ ಸರ್ಕಾರ ರೂಪಿಸಿರುವ ನಿರ್ದಿಷ್ಟ ಮಾನದಂಡಗಳನ್ನು ಪಾಲಿಸಲಾಗುತ್ತಿಲ್ಲ.

ಸಚಿವರು, ಸರ್ಕಾರಿ ಅಧಿಕಾರಿಗಳೇ ಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಬಿಟ್ಟರೆ ಮತ್ತಾವ ನಿಯಮಗಳೂ ಪಾಲನೆಯಾಗುತ್ತಿಲ್ಲ. ಆರು ಅಡಿ ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮ ಶತಮಾನದ ಜೋಕ್ ಆಗಿ ಕಾಣುತ್ತಿದೆ. ಜನಸಾಮಾನ್ಯರ ನಿತ್ಯ ಜೀವನದಲ್ಲಿ, ಜನನಿಬಿಡ ಮಾರುಕಟ್ಟೆಗಳಲ್ಲಿ ಇದನ್ನು ಅನುಸರಿಸುವುದೂ ಕಷ್ಟ ಎನ್ನುವುದು ವಾಸ್ತವ.

ಆದರೆ ಸರ್ಕಾರದ ವತಿಯಿಂದ ಯಾವ ರೀತಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ ? ಎಷ್ಟು ಸಭೆ ಸಮಾರಂಭಗಳಲ್ಲಿ, ಮದುವೆ ಮುಂತಾದ ಸಮಾರಂಭಗಳಲ್ಲಿ ನಿಯಮ ಪಾಲನೆಯ ಬಗ್ಗೆ ಪರಿವೀಕ್ಷಣೆ ಮಾಡಲಾಗುತ್ತಿದೆ ? ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದೂ ಸಹ ವಿರಳ ಎನಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಹೇಗಿದೆ, ಆರೋಗ್ಯ ಸೌಲಭ್ಯಗಳು ಹೇಗಿವೆ, ಶುಚಿತ್ವ ಕಾಪಾಡಲಾಗಿದೆಯೇ, ಆಸ್ಪತ್ರೆಗಳಲ್ಲಿ ಎಲ್ಲವೂ ಸುಸೂತ್ರವಾಗಿ ಇದೆಯೇ ಇವೇ ಮುಂತಾದ ವಿಚಾರಗಳ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಸೂಕ್ಷ್ಮ ಸಂವೇದನೆ ಇರುವವರು ಆರೋಗ್ಯ ಇಲಾಖೆಯ ಉಸ್ತುವಾರಿ ವಹಿಸಿದ್ದರೆ ಬಹುಶಃ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು ಎನಿಸುತ್ತದೆ.

ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಅಕ್ಷರಶಃ ಹರಾಜು ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ. ವಿಮಾನದಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಎಲ್ಲವನ್ನೂ ಹರಾಜು ಮಾಡಲು ಮಾರುಕಟ್ಟೆ ಕೂಗುಮಾರಿಗಳು ಸಜ್ಜಾಗುತ್ತಿದ್ದಾರೆ. ಇವರನ್ನು ನಾವೇ ಆಯ್ಕೆ ಮಾಡಿರುವುದು ನಮ್ಮ ದುರದೃಷ್ಟ. ಕೊರೋನಾ ಇರಲಿ ಇಲ್ಲದಿರಲಿ ಜನಸಾಮಾನ್ಯರು ಹೇಗೋ ಒಂದು ಬದುಕುತ್ತಾರೆ ಆದರೆ ತಮಗೆ ಅರಿವಿಲ್ಲದೆಯೇ ಸಾಯುವುದೂ ಸತ್ಯ.

ಬದುಕು ಮತ್ತು ಸಾವು ಜನರ ಕೈಯ್ಯಲ್ಲೇ ಇದೆ ಆದರೆ ಬದುಕುವ ಪರಿಸರ ನಿರ್ಮಿಸಿ ಸಾಯುವುದನ್ನು ತಡೆಗಟ್ಟುವ ಹೊಣೆ ಚುನಾಯಿತ ಸರ್ಕಾರದ ಮೇಲಿರುತ್ತದೆ ಅಲ್ಲವೇ ? ಕೊರೋನಾ ಈ ಪರಿಸರವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ವೈರಾಣು ನಿಯಂತ್ರಣಕ್ಕೆ ಬರುವುದಿಲ್ಲ, ಲಾಕ್ ಡೌನ್ ಉಪಯುಕ್ತವಲ್ಲ, ಗಂಟೆ, ಜಾಗಟೆ, ಶಂಖನಾದ, ಚಪ್ಪಾಳೆ, ಗೋ ಕೊರೋನಾ ಇವೆಲ್ಲವೂ ತಮಾಷೆಯ ಸರಕುಗಳಾಗಿವೆ.

ಹಾಗಾದರೆ ಏನು ಮಾಡಬೇಕು ? ಆರೋಗ್ಯ ಸೇವೆಯನ್ನು ವಿಸ್ತರಿಸಬೇಕು, ಎಲ್ಲರಿಗೂ ಸಮನಾಗಿ ದೊರೆಯುವಂತೆ ಮಾಡಬೇಕು, ಚಿಕಿತ್ಸೆ ಗಗನಕುಸುಮವಾದರೆ ಸೋಂಕಿತರು ಸಾಯುವ ಸಿದ್ಧತೆಯೊಂದಿಗೇ ಆಸ್ಪತ್ರೆಗೆ ಬರಬೇಕಾಗುತ್ತದೆ. ಎಷ್ಟು ಕುಟುಂಬಗಳು ಈ ಸಂದರ್ಭದಲ್ಲಿ ಅನಾಥವಾಗಿವೆ ಎಂದು ಸರ್ಕಾರ ಯೋಚಿಸಬೇಕು. ವೈದ್ಯರ ಕೊರತೆ ಇದೆ ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಖಾಸಗಿ ವೈದ್ಯರನ್ನು, ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಪುನಃ ಮಾರುಕಟ್ಟೆ ಲೆಕ್ಕಾಚಾರ ಅಡ್ಡಿಯಾಗುತ್ತದೆ. ಸುದ್ದಿಮನೆಯ ಕೂಗುಮಾರಿ ನಿರೂಪಕರಿಗೆ ಟಿ ಆರ್ ಪಿ ಚಿಂತೆಯಾದರೆ, ಚುನಾಯಿತ ಮಾರುಕಟ್ಟೆ ಕೂಗುಮಾರಿಗಳಿಗೆ ಮುಂದಿನ ಚುನಾವಣೆ ಮತ್ತು ನಿಧಿಯ ಚಿಂತೆ. ಇಷ್ಟರ ನಡುವೆ ಬಡಪಾಯಿ ಪ್ರಜೆ ಬದುಕಲು ಕಲಿಯುತ್ತಿದ್ದಾನೆ, ಸಾಯುತ್ತಿರುವವರನ್ನು ನೋಡುತ್ತಲೇ ತನ್ನ ಚಿತೆಯ ಚಿಂತೆಯಲ್ಲೇ ಕಾಲ ಕಳೆಯುತ್ತಿರುತ್ತಾನೆ. ಇಷ್ಟನ್ನು ಅರ್ಥಮಾಡಿಕೊಳ್ಳುವ ಸಂವೇದನೆ, ಪರಿಜ್ಞಾನ ಸರ್ಕಾರಕ್ಕೆ ಇರಬೇಕು. “ಹಣೆಬರಹವಿದ್ದಂತೆ ಆಗುತ್ತದೆ ” ಎನ್ನುವ ಪ್ರಾಚೀನ ಬೌದ್ಧಿಕ ದಾರಿದ್ರ್ಯವನ್ನೇ ಪ್ರದರ್ಶಿಸುತ್ತಾ ಕೈಚೆಲ್ಲಿ ಕುಳಿತುಕೊಳ್ಳುವುದು ಹೊಣೆಗೇಡಿತನವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

Published

on

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

Published

on

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.

ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

Published

on

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending