Connect with us

ದಿನದ ಸುದ್ದಿ

ಹಸುರು ಹೋಗಿ ಕೆಂಪಾಗುವವರೆಗೆ ಕಾಯಬಾರದು ಬನ್ನಿ !

Published

on

  • ನಾಗೇಶ್ ಹೆಗಡೆ

ಐತಿಹಾಸಿಕ ರೈತ ಜಾಥಾಕ್ಕೆ ಇಲ್ಲಿವೆ ದೊಡ್ಡ ಕಾರಣಗಳು

ಹಿಂದೆಂದೂ ಕಂಡಿರದಷ್ಟುದೊಡ್ಡ ಸಂಖ್ಯೆಯಲ್ಲಿ ನಾಳೆ ರೈತರು ಮುನ್ನೆಲೆಗೆ ಬರಲಿದ್ದಾರೆ. ಹೊಟ್ಟೆಗೆ ಹಿಟ್ಟು/ಅನ್ನ ತಿನ್ನುವವರೆಲ್ಲ ಜಾತಿ/ಧರ್ಮ/ರಾಜಕೀಯ ಪಕ್ಷಭೇದ ಮರೆತು ರೈತರನ್ನು ಬೆಂಬಲಿಸಬೇಕು. ಏಕೆ ಬೆಂಬಲಿಸಬೇಕು ಎಂಬುದಕ್ಕೆ ಮುಖ್ಯ ಕಾರಣಗಳು ಇಂತಿವೆ:

1. ಎಲ್ಲ ಸುಧಾರಿತ ದೇಶಗಳಲ್ಲೂ ರೈತರ ಶ್ರಮಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಅಮೆರಿಕದಲ್ಲಿ ರೈತರ ಉತ್ಪಾದನಾ ವೆಚ್ಚದ ಶೇ 12ರಷ್ಟು, ಐರೋಪ್ಯ ಸಂಘದವರು ಶೇ. 20ರಷ್ಟು ಮತ್ತು ಜಪಾನ್‌, ದ.ಕೊರಿಯಾ, ನಾರ್ವೆ, ಐಸ್ಲಾಂಡ್‌ ದೇಶಗಳಲ್ಲಿ ಶೇಕಡಾ 40-60ರಷ್ಟು ಸಬ್ಸಿಡಿ ನೀಡಿವೆ (2019ರಲ್ಲಿ). ಆದರೆ ಭಾರತ ದೇಶದಲ್ಲಿ ಶೂನ್ಯಕ್ಕಿಂತ ಶೇ 5ರಷ್ಟು ಕೆಳಗೆ! ಅಂದರೆ ರೈತರೇ ಬಳಕೆದಾರರಿಗೆ ಶೇಕಡಾ 5ರಷ್ಟು ಸಬ್ಸಿಡಿ ಕೊಡುತ್ತಾರೆ. ಜಗತ್ತಿನ ಅತಿ ಬಡ ಕೃಷಿಕರ ಬೆವರಿನ ದುಡಿಮೆಯ ಫಲ ಪಡೆಯುವ ನಾವು ಅದರ ಮೌಲ್ಯದಲ್ಲೂ ವಿನಾಯ್ತಿ ಕೇಳುತ್ತೇವೆ. ಅಷ್ಟೇ ಅಲ್ಲ;

2. ಅನುಕೂಲಸ್ಥ ದೇಶಗಳು ಹೊಸ ಹೊಸ ಮಾರ್ಗಗಳ ಮೂಲಕ ರೈತರಿಗೆ ಇನ್ನಷ್ಟು ವಿನಾಯ್ತಿ ಕೊಡುವ ಯೋಜನೆ ಹಾಕಿವೆ. ಅಂದರೆ ಉತ್ಪಾದನೆಗೆ ಅಷ್ಟೇ ಅಲ್ಲ; ಭೂಮಿಯ ಒಟ್ಟಾರೆ ಒಳಿತಿಗೆ (ಭೂತಾಪವನ್ನು ಕಡಿಮೆ ಮಾಡುವತ್ತ ರೈತರು ನೀಡುವ ಕೊಡುಗೆಗೆ) ಬೆಲೆ ಕಟ್ಟಿ ಅದಕ್ಕೂ ಪರಿಹಾರ ನೀಡತೊಡಗಿವೆ. ಅದನ್ನ ಪರಿಸರ ಕಲ್ಯಾಣ ಕೊಡುಗೆ ಎಂದು ಹೆಸರಿಸಿ ರೈತರ ಕೈಗೆ ಇನ್ನೂ ತುಸು ಹಣ ಸೇರುವಂತೆ ಮಾಡುತ್ತಿದ್ದಾರೆ.

3. ಸುಧಾರಿತ ದೇಶಗಳ ಆ ಅನುಕೂಲಸ್ಥ ರೈತರೊಂದಿಗೆ ನಮ್ಮ ಬಹುತೇಕ ಬಡ, ಹಿಂದುಳಿದ, ಅನಕ್ಷರಸ್ಥ ಕೃಷಿಕರು ಪೈಪೋಟಿ ಮಾಡಬೇಕು. ವಿಶೇಷವಾಗಿ ಬರ, ನೆರೆ ಹಾವಳಿಗೆ ತುತ್ತಾಗಿ ಯಾವುದೇ ಫಸಲಿನ ಬೆಲೆ (ಉದಾ ಈರುಳ್ಳಿಯ ಬೆಲೆ) ಜಾಸ್ತಿಯಾದಾಗ ಅದನ್ನು ತಗ್ಗಿಸಲೆಂದು ಸರಕಾರ ವಿದೇಶದಿಂದ ಅದನ್ನು ಆಮದು ಮಾಡಿಕೊಳ್ಳುತ್ತದೆ. ಮಳೆಯಲ್ಲಿ ನೆನೆದ ಈರುಳ್ಳಿಯನ್ನು ರೈತ ಮಹಿಳೆ ಕಷ್ಟಪಟ್ಟು ಹೆಕ್ಕಿ ಹೇಗೋ ಒಣಗಿಸಿ ಮಾರುಕಟ್ಟೆಗೆ ಸಾಗಿಸಿ, ತುಸು ಜಾಸ್ತಿ ಬೆಲೆ ಕೇಳಿದರೆ “ಇಲ್ಲ! ಈಜಿಪ್ತಿನಿಂದ ಈರುಳ್ಳಿ ಕಮ್ಮಿ ಬೆಲೆಗೆ ಬಂದಿದೆ, ನಿಮ್ಮದು ಬೇಡ” ಎನ್ನುತ್ತಾರೆ ವರ್ತಕರು.

4. ಈ ಕಾರಣಕ್ಕಾಗಿಯೇ ರೈತರು ತಮ್ಮ ಫಸಲಿಗೆ ಕನಿಷ್ಟ ಬೆಂಬಲ ಬೆಲೆಯನ್ನಾದರೂ (ಕಬೆಂಬೆ) ಕೊಡಿ ಎಂದು ಕೇಳುತ್ತಿದ್ದಾರೆ. ಅಂಥ 22 ಬೆಳೆಗಳಿಗೆ ಕಬೆಂಬೆ ಇದೆ ಹೌದು; ಆದರೆ ಅಕ್ಕಿ-ಗೋಧಿ ಬಿಟ್ಟರೆ ಇನ್ನುಳಿದವು ಹೆಸರಿಗಷ್ಟೆ. ಸರಕಾರ ಅವನ್ನು ಖರೀದಿ ಮಾಡುವುದಿಲ್ಲ. ಸರಕಾರದ್ದೇ ದಾಖಲೆಗಳ ಪ್ರಕಾರ ಹತ್ತು ಬೆಳೆಗಳ ಶೇ 70ರಷ್ಟು ಭಾಗ ಕಬೆಂಬೆಗಿಂತ ಕಡಿಮೆ ದರದಲ್ಲಿ ಮಾರಾಟವಾಗಿವೆ. ಅಕ್ಕಿ-ಗೋಧಿಗಿದ್ದ ಕಬೆಂಬೆಯನ್ನೂ ಸರಕಾರ ಹಿಂತೆಗೆದುಕೊಂಡೀತೆಂದು ಪಂಜಾಬ್‌ ರೈತರು ಭೀತರಾಗಿದ್ದಾರೆ.

5. ಕೃಷಿಯ ಕೂಲಿ ವೆಚ್ಚ, ಒಳಸುರಿಗಳ ಬೆಲೆ ವರ್ಷವರ್ಷಕ್ಕೂ ಹೆಚ್ಚುತ್ತಿದೆ. ಜೊತೆಗೆ ಹವಾಗುಣ ಸಂಕಷ್ಟಗಳಿಂದಾಗಿ ರೈತನ ಬೆಳೆ ಪ್ರಮಾಣ ಅನಿಶ್ಚಿತವಾಗುತ್ತಿದೆ. ಸರಕಾರಿ ನೌಕರರ ಸಂಬಳ ಕಳೆದ ಇಪ್ಪತ್ತು ವರ್ಷಗಳಲ್ಲಿ ಆರು ಪಟ್ಟು ಹೆಚ್ಚಾಗಿದೆ. ರೈತರು ಮಾತ್ರ ಮೇಲೇಳುವ ಬದಲು ನಿಂತಲ್ಲೇ ಕುಸಿಯುತ್ತಿದ್ದಾರೆ.

6. ರೈತರು ಅನಿವಾರ್ಯವಾಗಿ ಖಾಸಗಿ ಧನಿಕರಿಂದ ಸಾಲ ಪಡೆಯುತ್ತಾರೆ. ಉದ್ಯಮಿಗಳು ಸರಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದು, ಮರುಪಾವ್ತಿ ಮಾಡಲಾಗದಿದ್ದರೆ ಸರಕಾರ ಅಂಥ ಸಾಲವನ್ನು ರೈಟ್‌ ಆಫ್‌ (ಮನ್ನಾ) ಮಾಡಿಬಿಡುತ್ತದೆ. 2019ರಲ್ಲಿ ಉದ್ಯಮಿಗಳು ಪಡೆದ 254 ಸಾವಿರ ಕೋಟಿ ರೂಪಾಯಿಗಳಷ್ಟು ಇಂಥ ಕೆಟ್ಟ ಸಾಲಗಳನ್ನು ಸರಕಾರ ಮನ್ನಾ ಮಾಡಿದೆ.ರೈತರಿಗೆ ಸರಕಾರ ಆಗೊಮ್ಮೆ ಈಗೊಮ್ಮೆ ನೆರವನ್ನು ಘೋಷಿಸುತ್ತದೆ. ಆದರೆ ಅದರ ವೈಖರಿ ಹೇಗಿರುತ್ತದೆ ಎಂದರೆ (ಇಂದಿನ ಡೆಕ್ಕನ್‌ ಹೆರಾಲ್ಡ್‌ ವರದಿಯ ಪ್ರಕಾರ) 2019ರಲ್ಲಿ ಘೋಷಿಸಿದ್ದ ನೆರೆ ಪರಿಹಾರ ಧನದಲ್ಲಿ ಶೇ. 10ಕ್ಕಿಂತ ಕಡಿಮೆ ಹಣವನ್ನು ಸರಕಾರ ಬಿಡುಗಡೆ ಮಾಡಿದೆ. (ಘೋಷಿಸಿದ್ದು 427 ಕೋಟಿ; ಬಿಡುಗಡೆ ಮಾಡಿದ್ದು 41ಕೋಟಿ. ಅದರಲ್ಲೂ ಎಷ್ಟು ಅಂಶ ರೈತರಿಗೆ ತಲುಪಿದೆ ಲೆಕ್ಕಕ್ಕೆ ಸಿಗಲಿಕ್ಕಿಲ್ಲ).

ಇದುವರೆಗಿನ ಎಲ್ಲ ಸರಕಾರಗಳೂ ರೈತರ ಹಿತವನ್ನು ಕಡೆಗಣಿಸಿದ್ದಕ್ಕೇ ಈಗ ಸ್ಫೋಟಕ ಸ್ಥಿತಿ ಬಂದಿದೆ. ದನಿ ಇಲ್ಲದ ಜನರು ಈ ಬಾರಿ ಹೇಗೋ ದೇಶಾದ್ಯಂತ ಒಗ್ಗಟ್ಟಾಗಿ ದನಿ ಎತ್ತಿದ್ದಾರೆ. ಅವರು ಆಹಾರವನ್ನಷ್ಟೇ ಅಲ್ಲ, ತಮ್ಮ ನಿತ್ಯದ ಶ್ರಮದ ಮೂಲಕ ಕ್ಲೈಮೇಟ್‌ ವಿಪತ್ತುಗಳಿಗೆ ಕೈಲಾದ ಪರಿಹಾರವನ್ನೂ ನಮಗಾಗಿ ಕಲ್ಪಿಸುತ್ತಿದ್ದಾರೆ.

ಅವರ ದನಿಗೆ ನಮ್ಮ ದನಿಯನ್ನೂ ಸೇರಿಸೋಣ ಬನ್ನಿ.
ಅಷ್ಟಾದರೂ ಅನ್ನದ ಋಣ ತೀರಿಸೋಣ. ನಮ್ಮ ಬೆಂಬಲವನ್ನು ತೋರಿಸೋಣ.

(ಈ ಪೋಸ್ಟ್‌ನ ಮೊದಲರ್ಧದ ಮಾಹಿತಿ ಮೂಲ: ಡೌನ್‌ ಟು ಅರ್ಥ್‌ ಪಾಕ್ಷಿಕ 15-31, ಜನವರಿ 2021 ಸುನಿತಾ ನರೇನ್‌ ಸಂಪಾದಕೀಯ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending