Connect with us

ನೆಲದನಿ

ಸಾಧನೆಯ ಹಾದಿಯಲ್ಲಿ ಯುವ ನಿರ್ದೇಶಕ ‘ಡಿ.ಸತ್ಯಪ್ರಕಾಶ್’

Published

on

  • ಡಾ.ಕೆ.ಎ.ಓಬಳೇಶ್

ಗತ್ತಿನ ಸಾಂಸ್ಕೃತಿಕ ವಲಯದಲ್ಲಿ ಯುವಪ್ರತಿಭೆಗಳು ಸೃಜನಾತ್ಮಕ ನೆಲೆಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳುವತ್ತ ದಾಪುಗಾಲಿಡುತ್ತಿವೆ. ಇಂತಹ ಯುವಪ್ರತಿಭೆಗಳಿಗೆ ಕಲಾಲೋಕವು ಸೂಕ್ತ ವೇದಿಕೆಯೊಂದನ್ನು ನಿರಂತರವಾಗಿ ಕಲ್ಪಿಸಿಕೊಡುತ್ತ ಬಂದಿದೆ.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದಲ್ಲಾ ಒಂದು ವಿಶಿಷ್ಟವಾದ ಕಲಾಪ್ರತಿಭೆಗೆ ಅಂತರ್ಗತವಾಗಿರುತ್ತದೆ. ಆದರೆ ಅದು ಬೆಳಕಿಗೆ ಬರುವುದು ಮಾತ್ರ ಪ್ರದರ್ಶನಾತ್ಮಕ ನೆಲೆಯಲ್ಲಿ. ಇಂತಹ ಯುವಪ್ರತಿಭೆಗೆಳಲ್ಲಿ ಕನ್ನಡ ಚಿತ್ರರಂಗ ಕಂಡ ಯುವ ನಿರ್ದೇಶಕ ಡಿ.ಸತ್ಯಪ್ರಕಾಶ್ ಅವರು ಒಬ್ಬರಾಗಿದ್ದಾರೆ. ಬಹುತೇಕ ಯುವ ಪೀಳಿಗೆ ಹೆಚ್ಚು ಆಕರ್ಷಿತವಾಗುವುದು ಸಿನಿಮಾ ರಂಗದ ಮೇಲೆ.

ನಾವು ಸಿನಿಮಾ ಕ್ಷೇತ್ರದಲ್ಲಿ ನಟರಾಗಿಯೋ, ನಿರ್ದೇಶಕರಾಗಿಯೋ, ಸಾಹಿತಿಯಾಗಿಯೋ ಇಲ್ಲವೇ ಸಿನಿಮಾ ರಂಗದ ವಿವಿಧ ಕ್ಷೇತ್ರಗಳ ಮೂಲಕ ಗುರುತಿಸಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಈ ನಿಟ್ಟಿನಲ್ಲಿ ಸಿನಿಮಾ ಲೋಕವನ್ನು ಹರಸಿಕೊಂಡು ಹೊರಟ ಎಷ್ಟೋ ಪ್ರತಿಭೆಗಳಿಗೆ ಅವಕಾಶಗಳ ಕೊರತೆಯಿಂದಲೋ, ಸೂಕ್ತವಾದ ಮಾರ್ಗದರ್ಶನದ ಕೊರತೆಯಿಂದಲೋ ಸಾಕಷ್ಟು ಏಳು ಬೀಳುಗಳನ್ನು ಕಂಡು ಕೈ ಸುಟ್ಟುಕೊಂಡು ದೂರ ಸರಿದವರು ಇದ್ದಾರೆ.

ಆದರೆ ಯುವ ಪ್ರತಿಭೆಯಾದ ಸತ್ಯಪ್ರಕಾಶ್ ಅವರು ಸೋಲೆ ಬರಲಿ, ಗೆಲುವೆ ಬರಲಿ ನಾನು ಆಯ್ದುಕೊಂಡಿರುವ ಸಿನಿಮಾ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂಬ ಹಠದಿಂದಾಗಿ ಇಂದು ಹಲವಾರು ಸಿನಿಮಾಗಳ ಮೂಲಕ ಸದ್ದಿಲ್ಲದೆ ಸುದ್ಧಿಯಾಗಿ ಸಿನಿಪ್ರಿಯರ ಮನ ಗೆದ್ದಿದ್ದಾರೆ. ಅವರ ಸಿನಿಯಾನದ ಮೇಲೆ ಬೆಳಕು ಚೆಲ್ಲುವ ಒಂದು ಸಣ್ಣ ಆಶಯವು ಪ್ರಸ್ತುತ ಲೇಖನದ ಉದ್ದೇಶವಾಗಿದೆ.

ಶ್ರೀಯುತ ಡಿ.ಸತ್ಯಪ್ರಕಾಶ್ ಅವರು ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಕೆ.ಸಿ.ದತ್ತಾತ್ರೇಯ ಹಾಗೂ ಗೀತಾ ದಂಪತಿಗಳ ಮಗನಾಗಿ ದಿನಾಂಕ 20 ಏಪ್ರಿಲ್ 1984ರಂದು ಜನಿಸಿದರು. ಇವರು ತಮ್ಮ ಶಿಕ್ಷಣವನ್ನು ಕಡೂರು, ಹಾಸನ, ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ಪೂರೈಸಿದರು. ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್ ಮುಗಿಸಿದ ತರುವಾಯದಲ್ಲಿ ಸಿನಿಮಾ ಲೋಕದತ್ತ ತಮ್ಮ ಆಸಕ್ತಿಯನ್ನು ಕೇಂದ್ರಿಕರಿಸಿದರು.

ಸತ್ಯಪ್ರಕಾಶ್ ಅವರು ಬಾಲ್ಯದ ದಿನಗಳಿಂದಲೂ ಸಾಂಸ್ಕøತಿಕ ಚಟುವಟಿಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಇವರ ತಾತ ಎಚ್.ಸಿ.ಸುಬ್ಬರಾವ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ನ್ಯಾಷನಲ್ ಅವಾರ್ಡ್ ಗಳಿಸಿದ್ದರು. ಇವರು ರಂಗಭೂಮಿ ಹಾಗೂ ನಾಟಕ ಕ್ಷೇತ್ರದಲ್ಲಿ ವಿಶೇಷವಾದ ಪರಿಣಿತಿ ಹೊಂದಿದ್ದರು. ಸತ್ಯಪ್ರಕಾಶ್ ಅವರು ಬಾಲ್ಯದ ಶಿಕ್ಷಣ ಪಡೆಯುವ ಹಂತದಲ್ಲಿಯೇ ತಾತನಿಂದ ಪ್ರೇರಿತರಾಗಿ ಹಲವಾರು ರೇಡಿಯೋ ನಾಟಕಗಳು ಹಾಗೂ ಏಕಪಾತ್ರಾಭಿನಯದಲ್ಲಿ ಪರಿಣಿತಿಯನ್ನು ಗಳಿಸಿದ್ದರು.

ಹೀಗಾಗಿ ಕಲಾಲೋಕದ ನಂಟು ಇವರಿಗೆ ಬಾಲ್ಯದಿಂದಲೇ ಬೆಸೆದುಕೊಂಡಿತ್ತು. ಹಾಗೆಯೇ ಸತ್ಯಪ್ರಕಾಶ್ ಅವರ ತಾಯಿಯವರು ಕೂಡ ಶಾಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷವಾದ ವೇಶಭೂಷಣಗಳ ಮೂಲಕ ತಮ್ಮ ಮುದ್ಧಿನ ಕಂದನಲ್ಲಿ ಸೃಜನಶೀಲತೆಯನ್ನು ಮೈಗೂಡಿಸುತ್ತ ಬಂದಿದ್ದರು. ಇದು ಕೂಡ ಇವರ ಆಂತರ್ಯದಲ್ಲಿ ಕಲಾತ್ಮಕ ಪ್ರತಿಭೆಯೊಂದು ರೂಪುತಳೆಯಲು ಪ್ರಮುಖ ಕಾರಣವಾಯಿತು.

ಇವೆಲ್ಲದರ ನಡುವೆ ಇವರ ತಂದೆ ದತ್ತಾತ್ರೇಯ ಅವರು ಸಾಹಿತ್ಯಾಸಕ್ತರಾಗಿದ್ದು, ಹಲವಾರು ಕತೆ, ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡಿದ್ದರು. ಆದ ಕಾರಣ ಸತ್ಯಪ್ರಕಾಶ್ ಅವರಿಗೆ ಸಾಹಿತ್ಯದಲ್ಲಿ ವಿಶೇಷವಾದ ಅಭಿರುಚಿ ಮೂಡಿತ್ತು. ಈ ಕಾರಣದಿಂದಾಗಿಯೇ ಇವರು ಕಂಪ್ಯೂಟರ್ ಸೈನ್ಸ್ ಶಿಕ್ಷಣ ಪಡೆದರು ಕೂಡ ಆ ಕ್ಷೇತ್ರಕ್ಕೆ ವಿದಾಯ ಹೇಳಿ, ತಮ್ಮಲ್ಲಿ ಬಾಲ್ಯದ ದಿನಮಾನಗಳಿಂದಲೂ ಅಂತರ್ಗತವಾಗಿ ಬೇರೂರಿದ್ದ ಕಲಾಲೋಕದತ್ತ ಮುಖ ಮಾಡಿದರು.
ಸತ್ಯಪ್ರಕಾಶ್ ಅವರು ಸಿನಿಮಾ ಲೋಕದಲ್ಲಿ ಕೆಲಸ ಮಾಡುವ ಉದ್ದೇಶದಿಂದಾಗಿ ಬೆಂಗಳೂರಿಗೆ ತೆರಳಿದ ಸಂದರ್ಭದಲ್ಲಿ ಅವಕಾಶಗಳ ಕೊರತೆ ಇತ್ತು. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಟಿ.ಎಸ್.ನಾಗಾಭರಣ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಆಸಕ್ತಿಯಿಂದ ಅರ್ಜಿಯೊಂದನ್ನು ಸಲ್ಲಿಸಿದ್ದರು. ಆದರೆ ಎಂಟು ತಿಂಗಳುಗಳ ಕಾಲ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.

ಈ ಸಂದರ್ಭದಲ್ಲಿ ಸತ್ಯಪ್ರಕಾಶ್ ಅವರು ಅವಕಾಶಗಳಿಗಾಗಿ ಕೈಕಟ್ಟಿ ಕೂರದೆ ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಕಿರುಚಿತ್ರಗಳ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ನಾಗಾಭರಣ ಅವರ ಬಳಿ ಅರ್ಜಿ ಸಲ್ಲಿಸಿದ ಎಂಟು ತಿಂಗಳ ತರುವಾಯ ಪ್ರಾಜೆಕ್ಟ್ ಒಂದಕ್ಕೆ ಸಹಾಯಕ ನಿರ್ದೇಶಕರ ಅವಶ್ಯಕತೆ ಇದೆ ಎಂಬ ಆಹ್ವಾನ ಬರುತ್ತದೆ.

ಈ ಸಂದರ್ಭದಲ್ಲಿ ಸತ್ಯಪ್ರಕಾಶ್ ಅವರನ್ನು ಸಂದರ್ಶನ ಮಾಡಿ ಇವರಲ್ಲಿರುವ ಕ್ರಿಯಾಶೀಲ ವ್ಯಕ್ತಿತ್ವ, ನಿರ್ದೇಶನದ ಬಗ್ಗೆ ಇವರು ಹೊಂದಿರುವ ಕಾಳಜಿ ಹಾಗೂ ಬದ್ಧತೆಯಿಂದಾಗಿ ಸಹಾಯಕ ನಿರ್ದೇಶಕರಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆರಂಭಿಕ ಹಂತದಲ್ಲಿ ನಿರ್ದೇಶನದ ಬಗೆಗಿನ ತಾಂತ್ರಿಕತೆಯ ಕುರಿತು ಅಷ್ಟೊಂದು ತಿಳಿವು ಹೊಂದಿರದ ಸತ್ಯಪ್ರಕಾಶ್ ಅವರು ತಮ್ಮ ಪ್ರಾಮಾಣಿಕ ಪ್ರಯತ್ನದ ಮೂಲಕವಾಗಿ ಪ್ರಬುದ್ಧತೆಯನ್ನು ಗಳಿಸುತ್ತ ಮುನ್ನಡೆಯುತ್ತಾರೆ.

ಮುಂದೆ ಟಿ.ಎಸ್.ನಾಗಾಭರಣ ಅವರ ನೆಚ್ಚಿನ ಶಿಷ್ಯರಾಗಿ, ಅವರ ಗರಡಿಯೊಳಗೆ ಕ್ರಿಯಾಶೀಲ ನಿರ್ದೇಶಕರಾಗಿ ಬೆಳೆದು ನಿಲ್ಲುತ್ತಾರೆ. ಸಹಾಯಕ ನಿರ್ದೇಶಕರಾಗಿ ಹಲವಾರು ಸಿನಿಮಾಗಳನ್ನು ನಿರ್ವಹಿಸಿದ ಇವರು, ಇದೇ ಹಂತದಲ್ಲಿ ಕೆಲವೊಂದು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆಗಳನ್ನು ಸಿದ್ಧಪಡಿಸುವಷ್ಟು ಆತ್ಮಸ್ಥೈರ್ಯವನ್ನು ಗಳಿಸುತ್ತಾರೆ.

ನಂತರದಲ್ಲಿ ಸ್ವತಃ ನಿರ್ದೇಶಕರಾಗಿ ಒಂದು ಸಿನಿಮಾವನ್ನು ಯಶಸ್ವಿಯಾಗಿ ಕಟ್ಟಬಲ್ಲೆ ಎಂಬ ಆತ್ಮವಿಶ್ವಾಸವನ್ನು ಪಡೆಯುತ್ತಾರೆ. ಇಷ್ಟೆಲ್ಲಾ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ಅವರಲ್ಲಿನ ಪ್ರಾಮಾಣಿಕ ವ್ಯಕ್ತಿತ್ವ ಹಾಗೂ ಯಾವುದೇ ಕೆಲಸವನ್ನಾದರೂ ಯಶಸ್ವಿಯಾಗಿ ನಿಭಾಯಿಸಬಲ್ಲೆ ಎನ್ನುವ ಎದೆಗಾರಿಕೆ ಅವರನ್ನು ಕನ್ನಡ ಚಿತ್ರರಂಗ ಗುರುತಿಸುವಂತೆ ರೂಪಿಸಿದೆ.

ಸತ್ಯಪ್ರಕಾಶ್ ಅವರು ನಿರ್ದೇಶಕರಾಗಿ ಸಿನಿಮಾವನ್ನು ಆರಂಭಿಸುವುದಕ್ಕೆ ಮುಂದಾದ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಬಹುಮುಖ್ಯವಾದ ಸಮಸ್ಯೆಯೆಂದರೆ ಇವರ ಸಿನಿಮಾಗಳಿಗೆ ಇರುವ ನಿರ್ಮಾಪಕರ ಕೊರತೆ. ಯಾವ ನಿರ್ಮಾಪಕರು ಮುಂದೆ ಬರದಿದ್ದ ಸಂದರ್ಭದಲ್ಲಿ ಕೈಕಟ್ಟಿ ಕೂರದೆ ಇವರು ತಮ್ಮ ಸಮಾನ ಮನಸ್ಕರೊಂದಿಗೆ ಸೇರಿ, ಒಂದು ತಂಡವನ್ನು ರಚಿಸಿಕೊಂಡು ಎಲ್ಲರೂ ಸ್ವಲ್ಪ ಸ್ವಲ್ಪ ಹಣವನ್ನು ಸಂಗ್ರಹಿಸಿಕೊಂಡು ಸಿನಿಮಾ ಯಾನವನ್ನು ಮುಂದುವರೆಸುತ್ತಾರೆ.

ಇಂತಹ ಸಮಾನ ಮನಸ್ಕರ ಸಿನಿಯಾನದ ಫಲವಾಗಿ ಮೂಡಿಬಂದ ಸಿನಿಮಾಗಳಲ್ಲಿ ಮೊದಲು ಆರಂಭಿಸಿದ ಕಿರುಚಿತ್ರ ‘ಜಯನಗರ 4th ಬ್ಲಾಕ್’. ಆ ನಂತರದ ಸಿನಿಮಾ ‘ರಾಮ ರಾಮ ರೇ’. ಇಲ್ಲಿ ಯುವಪ್ರತಿಭೆಗಳನ್ನೇ ಕೇಂದ್ರವಾಗಿಟ್ಟುಕೊಂಡು ವಿಶಿಷ್ಟ ದೃಷ್ಟಿಕೋನದ ಅಡಿಯಲ್ಲಿ ಸಿನಿಮಾವೊಂದನ್ನು ರೂಪಿಸಿದರು. ಈ ಸಿನಿಮಾ ಕನ್ನಡ ಚಿತ್ರರಂಗವು ಸತ್ಯಪ್ರಕಾಶ್ ಅವರನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು.

ಸತ್ಯಪ್ರಕಾಶ್ ಅವರು ಕೂಡ ತಮ್ಮಲ್ಲಿ ಅಂತರ್ಗತವಾಗಿರುವ ವಿಶಿಷ್ಟ ಪ್ರತಿಭೆಯೊಂದನ್ನು ಈ ಸಿನಿಮಾದ ಮೂಲಕ ಹೊರಹಾಕಿದ್ದರು. ಹೀಗಾಗಿಯೇ ಈ ಸಿನಿಮಾ ಸಾಕಷ್ಟು ಸುದ್ದು ಮಾಡಿತು. ಈ ಸಿನಿಮಾದ ಅತ್ಯುತ್ತಮ ನಿರ್ದೇಶನಕ್ಕಾಗಿ 2016ರ ‘ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್’ ಲಭಿಸಿತು. ಬೆಂಗಳೂರಿನಲ್ಲಿ ನಡೆದ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ‘ಕನ್ನಡದ ಅತ್ಯುತ್ತಮ ಸಿನಿಮಾ’ ಎಂಬ ಕೀರ್ತಿಗೆ ಇದು ಪಾತ್ರವಾಯಿತು.

ಹಾಗೆಯೇ 64ನೇ ‘ಫಿಲ್ಮ್‍ಫೇರ್ ಅವಾರ್ಡ್ ಸೌತ್’ನಲ್ಲಿ ಅತ್ಯುತ್ತಮ ಸಿನಿಮಾವಾಗಿ ಪ್ರತಿನಿಧಿಸಲ್ಪಟ್ಟಿತು. ಇದು ಸತ್ಯಪ್ರಕಾಶ್ ಅವರಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ಮೂಡಿಸಿತು. ಇದೇ ಆತ್ಮಸ್ಥೈರ್ಯದೊಂದಿಗೆ ಸಮಕಾಲೀನ ಸಾಮಾಜಿಕ ತಲ್ಲಣ್ಣಗಳನ್ನು ಆಧಾರವಾಗಿಟ್ಟುಕೊಂಡು ‘ಒಂದಲ್ಲಾ ಎರಡಲ್ಲಾ’ ಸಿನಿಮಾವನ್ನು ನಿರ್ದೇಶಿಸಿದರು.

ಈ ಸಿನಿಮಾ ಕೂಡ ಸತ್ಯಪ್ರಕಾಶ್ ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಯಿತು. ಈ ಸಿನಿಮಾಗೆ 66ನೇ ‘ನ್ಯಾಷನಲ್ ಅವಾರ್ಡ್’, 2018ರ ‘ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಹಾಗೂ ಅತ್ಯುತ್ತಮ ಸಿನಿಮಾ ಎಂಬ ಹೆಚ್ಚಳಿಕೆ ಪಾತ್ರವಾಗಿ ‘ಕ್ರಿಟಿಕ್ ಚಾಯ್ಸ್ ಫಿಲ್ಮ್ ಅವಾರ್ಡ್’ ಕೂಡ ಲಭಿಸಿದೆ.

ಸತ್ಯಪ್ರಕಾಶ್ ಅವರು ತಮ್ಮ ಸರಳ ವ್ಯಕ್ತಿತ್ವದಿಂದಾಗಿ ಎಲ್ಲರೊಳಗೊಂದಾಗಿ ಬೆರೆತು, ವಿಶಿಷ್ಟ ಮಾದರಿಯೊಂದನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರ ಇಲ್ಲಿವರೆಗಿನ ಸಿನಿಮಾಗಳಲ್ಲಿ ಯುವಪ್ರತಿಭೆಗಳೇ ಮುಂಚೂಣಿಯಲ್ಲಿದ್ದಾರೆ. ಹೊಸ ಹೊಸ ಪ್ರತಿಭೆಗಳು, ಹೊಸ ಹೊಸ ಬಗೆಯಲ್ಲಿ ಸಿನಿಮಾ ಕಟ್ಟುವ ಕಲೆಯೇ ಸತ್ಯಪ್ರಕಾಶ್ ಅವರ ವಿಶಿಷ್ಟತೆ.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ವಿಶೇಷವಾದ ಒಲವು ಹೊಂದಿರುವ ಇವರು, ಕನ್ನಡ ಸಿನಿಮಾಗಳು ಅನ್ಯಭಾಷೆ ಸಿನಿಮಾಗಳ ಎದುರು ಕೈಕಟ್ಟಿ ನಿಲ್ಲುವಂತಾಗದೆ ತನ್ನ ನೆಲದ ಸೊಗಡನ್ನೇ ಬಳಸಿಕೊಂಡು ವಿಶಿಷ್ಟವಾಗಿ ಬೆಳೆದು ನಿಲ್ಲಬೇಕು ಎಂಬ ಹಂಬಲವುಳ್ಳವರಾಗಿದ್ದಾರೆ. ಹೀಗಾಗಿಯೇ ಇವರು ಕಥೆ ಕಟ್ಟುವ ಪರಿ ಹಾಗೂ ಅದನ್ನು ವಿಶಿಷ್ಟ ಆಯಾಮದ ಮೂಲಕ ಅಭಿವ್ಯಕ್ತಿಸುವ ಕ್ರಮವು ಇವರನ್ನು ಇತರ ನಿರ್ದೇಶಕರಿಗಿಂತ ಭಿನ್ನವಾಗಿಸುತ್ತದೆ.

ಒಂದೊ, ಎರಡೋ ಸಿನಿಮಾವನ್ನು ಮಾಡಿದ ಕೆಲವು ಯುವಪ್ರತಿಭೆಗಳು ತಾವು ಏನನ್ನೋ ಸಾಧಿಸಿದ ಮಹಾನ್ ಸಾಧಕರಂತೆ ಹಬ್ಬರಿಸುವ ಸಂದರ್ಭದಲ್ಲಿ ಸತ್ಯಪ್ರಕಾಶ್ ಅವರು ತಮ್ಮ ಮೃದು ಸ್ವಭಾವದ ಮೂಲಕ ತಮ್ಮ ಸೇವೆಯನ್ನು ಪ್ರಾಮಾಣಿಕ ನೆಲೆಯಲ್ಲಿ ಮುಂದುವರೆಸಿಕೊಂಡು ಸಾಗುತ್ತಿದ್ದಾರೆ. ಇವರಲ್ಲಿ ಅಂತರ್ಗತವಾಗಿರುವ ಪ್ರತಿಭೆಯ ಮೂಲಕ ಹೊರಬಂದ ಸಿನಿಮಾಗಳು ಇವರ ಕ್ರಿಯಾಶೀಲ ವ್ಯಕ್ತಿತ್ವವನ್ನು ಸದ್ದಿಲ್ಲದೆ ಸುದ್ಧಿ ಮಾಡುತ್ತಿವೆ.

ಇವರ ಈ ಪ್ರಾಮಾಣಿಕ ಕಾರ್ಯದಕ್ಷತೆಯ ಫಲವಾಗಿಯೇ ಇಂದು ಪುನಿತ್ ರಾಜ್‍ಕುಮಾರ್ ಅವರ ನಿರ್ಮಾಣ ಮತ್ತು ನಟನೆಯ ಸಿನಿಮಾಗೆ ನಿರ್ದೇಶನ ಮಾಡುವಷ್ಟು ದೊಡ್ಡ ಅವಕಾಶಗಳು ಲಭಿಸಿದೆ. ಇದು ನಿಜವಾದ ಕಲಾಪ್ರತಿಭೆಯೊಂದಕ್ಕೆ ಸಿಕ್ಕ ಜಯ. ಕನ್ನಡ ಚಿತ್ರರಂಗದಲ್ಲಿ ಯುವ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸತ್ಯಪ್ರಕಾಶ್ ಅವರು ‘ಕ್ರಿಯಾಶೀಲ ನಿರ್ದೇಶಕ’ ಎಂದು ಹಲವರ ಪ್ರಶಂಸೆಗೂ ಪಾತ್ರವಾಗಿದ್ದಾರೆ.

ಇವರ ಸಿನಿಯಾನವು ಸದಾ ಯಶಸ್ವಿನಿಂದ ಕೂಡಿರಲಿ ಹಾಗೂ ಇವರಿಗೆ ಮತ್ತಷ್ಟು ಹೆಸರು, ಕೀರ್ತಿ ಲಭಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಬೆಳಗುವಂತಾಗಲಿ ಎಂದು ಸುದ್ದಿದಿನ ಪತ್ರಿಕಾ ಬಳಗದ ವತಿಯಿಂದ ಹಾರೈಸುತ್ತೇವೆ.

ಡಾ.ಕೆ.ಎ.ಓಬಳೇಶ್
9591420216

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ

Published

on

  • ರುದ್ರಪ್ಪ ಹನಗವಾಡಿ

ಅಪ್ಪ ಮೊದಲಿನಿಂದಲೂ ಎಲೆ ತೋಟ ಮಾಡಿಕೊಂಡು ಬರುತ್ತಿದ್ದ ಬಗ್ಗೆ ಆಗಲೇ ಬರೆದಿದ್ದೇನೆ. ಅದರಿಂದಲೇ ನಮ್ಮೆಲ್ಲರ ಜೀವನ ಕೊರತೆ ಕಾಣದಂತೆ ನಡೆಯುತ್ತಿತ್ತು. ನಮಗೆ ಸ್ವಂತ ತೋಟದ ಜಮೀನು ಇಲ್ಲದ್ದರಿಂದ ಕಪ್ಪಲಿ ಮಾಡಿ ಬೇರೆಯವರ ಜಮೀನನ್ನು ಕೋರಿಗೆ ಮಾಡುತ್ತಿದ್ದರು.

ಕರ್ನಾಟಕದಲ್ಲಿ ಈ ಪದ್ಧತಿ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿರುವುದನ್ನು ನೋಡುತ್ತೇವೆ. ಭೂಮಾಲೀಕನು ಮತ್ತು ಅದರಲ್ಲಿ ದುಡಿಯುವವ, ಬರುವ ಒಟ್ಟು ಆದಾಯದಲ್ಲಿ ಸಮನಾಗಿ ಹಂಚಿಕೊಳ್ಳುವ ವ್ಯವಸ್ಥೆ ಇರುತ್ತಿತ್ತು. ಹೀಗೆ ಕೋರಿಗೆ ಮಾಡಿಕೊಳ್ಳುತ್ತಿದ್ದ ಮಾಲೀಕ ಮತ್ತು ಶ್ರಮಿಕರಿಬ್ಬರಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ಅನ್ಯೋನ್ಯ ಸಂಬಂಧಗಳಿರುತ್ತಿದ್ದವು. ಹಬ್ಬ ಹರಿದಿನ, ಮದುವೆ ಮುಂಜಿಗಳಲ್ಲಿ, ಸಾವು ನೋವುಗಳಲ್ಲಿ ಬಂಧುಗಳಂತೆ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು.

ಹೀಗೆ ಹೆಚ್ಚಿನ ಜಮೀನುಗಳು ಇದ್ದ ಮನೆತನದವರು ಕೋರಿಗೆ ನೀಡಿದ ಜನರೊಡನೆ ಅನೇಕ ತಲೆಮಾರುಗಳಿಂದ ಕೋರಿನ ವ್ಯವಸ್ಥೆಯಲ್ಲಿ ತೋಟ, ಹೊಲಗಳನ್ನು ಮಾಡಿಕೊಂಡು ಬರುತ್ತಿದ್ದರು. ಕೆಲವು ಭೂಮಾಲೀಕರು, ತೋಟದಲ್ಲಿ ದುಡಿಯುತ್ತಿದ್ದ ಕೋರಿನವರಿಗೆ ಬರುವ ಆದಾಯದಲ್ಲಿ ಸರಿಯಾಗಿ ಹಂಚಿಕೊಡದೆ ಮೋಸ ಕೂಡ ಮಾಡುತ್ತಿರುವ ವಿಚಾರಗಳನ್ನು ಕೂಡ ಊರಲ್ಲಿ ಜನರು ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದರು. ಏಕೆಂದರೆ ಬೆಳೆದ ಎಲೆ ಪೆಂಡಿಗಳನ್ನು ಹುಬ್ಬಳ್ಳಿ, ಧಾರವಾಡ, ಹೊಸಪೇಟೆ, ಕಂಪ್ಲಿಗಳಿಗೆ ಭೂಮಾಲೀಕರುಗಳೇ ಮಾರಾಟ ಮಾಡಲು ಹೋಗುತ್ತಿದ್ದರು.

ಅಲ್ಲಿನ ದಲಾಲರು ಹರಾಜು ಹಾಕಿ ನೀಡಿದ ಪಟ್ಟಿಯನ್ನು ಕೋರಿನವರಿಗೆ ಸರಿಯಾಗಿ ತೋರಿಸದೆ ಮತ್ತು ಓದಲು ಬಾರದೆ ಇರುವ ಕೋರಿನವರಿಗೆ ಮೋಸ ಮಾಡುತ್ತಿದ್ದರು. ಆದರೆ ಅಪ್ಪ ಮಾಡಿಕೊಂಡು ಬರುತ್ತಿದ್ದ ಕೋರಿನ ತೋಟದ ಯಜಮಾನರುಗಳು ನಾನು ಚಿಕ್ಕಂದಿನಿಂದಲೂ ನೋಡಿದ ದೊಡ್ಡಮನಿ ಬಸಣ್ಣ, ಸಣ್ಣಮನಿ ರುದ್ರಜ್ಜ, ಬಣಕಾರ್ ನಾಗಪ್ಪ ಎಂಬ ಭೂಮಾಲೀಕರುಗಳು ಎಂದೂ ಆ ರೀತಿ ಮಾಡಿದವರಲ್ಲ.

ದೊಡ್ಡಮನಿ ಬಸಣ್ಣನದು ವರ್ಣರಂಜಿತ ವ್ಯಕ್ತಿತ್ವ. ಇವರ ಹಿಂದಿನ ವಂಶಕ್ಕೆ ಹೋದರೆ ಶಿವಪ್ಪಜ್ಜ ಎಂಬ ಹಿರಿಯ, ಅಪ್ಪನನ್ನು `ಹನುಮಂತು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನಾನು 13-14ನೇ ವಯಸ್ಸಿನಲ್ಲಿ ಇದ್ದಾಗ ಅಪ್ಪನನ್ನು ಹಾಗೆ ಕರೆಯುತ್ತಿದ್ದವರನ್ನು ನಾನು ಎಲ್ಲೂ ಕೇಳಿರಲಿಲ್ಲ. ಶಿವಪ್ಪಜ್ಜನ ತಂಗಿಯಾಗಿದ್ದ ಸಿದ್ದಜ್ಜಿ ತನ್ನ ಗಂಡನ ಕಾಲಾನಂತರ ತವರು ಮನೆಗೆ ಬಂದು ಅಣ್ಣ ಶಿವಪ್ಪಜ್ಜನ ಮನೆಯಲ್ಲೇ ಇದ್ದು ತೋಟ ಮನೆಗಳಲ್ಲಿ ಎರಡಾಳಿನ ಕೆಲಸ ಮಾಡುತ್ತಿದ್ದರು. ಶಿವಪ್ಪಜ್ಜನ ಅಣ್ಣ ತಮ್ಮಂದಿರು ದೊಡ್ಡ ಮನೆತನ ಮತ್ತು ದೊಡ್ಡ ನಡವಳಿಕೆ ಕೂಡ.

ಊರಲ್ಲಿನ ದೇವರ ಕೆಲಸವಾಗಲೀ, ಮದುವೆ ಮುಂಜಿಗಳಲ್ಲಿ ಅವರಿಲ್ಲದೆ ನಡೆಯುತ್ತಿರಲಿಲ್ಲ. ಅದೇನೋ ಮಕ್ಕಳಾಗಲಿಲ್ಲ ಎಂದು ಒಂದೆರಡು ಮದುವೆಯಾಗಿ ಕೊನೆಯಲ್ಲಿ ಚಿಕ್ಕ ಹೆಂಡತಿಗೆ ಗಂಡು ಮಕ್ಕಳಾಗದೇ ಒಂದು ಹೆಣ್ಣು ಮಗಳಿದ್ದು, ಅವರು ನಮ್ಮ ದೊಡ್ಡಕ್ಕ ಕೊಟ್ರಕ್ಕನ ಸಹಪಾಠಿಯಾಗಿ ಶಾಲೆಗೆ ಹೋಗುತ್ತಿದ್ದುದನ್ನು ಅಕ್ಕ ಈಗಲೂ ನೆನಸಿಕೊಳ್ಳುತ್ತಾಳೆ. ಅಪ್ಪ ಇವರ ತೋಟ ಮಾಡುತ್ತಿದ್ದ ಸಮಯದಲ್ಲಿ ನಾನು ತೋಟಕ್ಕೆ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದೆ. ಎಲ್ಲಾ ಒಟ್ಟಿಗೆ ಕೂತು ಉಣ್ಣುವಾಗ, ಶಿವಪ್ಪಜ್ಜ, ಸಿದ್ದಜ್ಜಿ ಅಪ್ಪನೊಡನೆ ಆತ್ಮೀಯರಾಗಿ ಮಾತಾಡುತ್ತಿದ್ದು ಅವರ ಮನೆತನದಲ್ಲಿನ ಬಂಗಾರದ ಹಂಚಿಕೆಯಲ್ಲಿ ಆಗಿರುವ ತಾರತಮ್ಯಗಳನ್ನು ಮಾತಾಡುತ್ತಿದ್ದರೆ ನಾನೂ ಕೇಳಿಸಿಕೊಳ್ಳುತ್ತಿದ್ದೆ. ಅಪ್ಪನ ಜೊತೆ ಶಿವಪ್ಪಜ್ಜ, ಸಿದ್ದಜ್ಜಿ ಅವರ ಸಂಬಂಧಗಳು ತುಂಬಾ ಆತ್ಮೀಯವಾಗಿರುತ್ತಿದ್ದವು. ಇಂತಹ ಮನೆತನದ ಕುಡಿಯಾಗಿದ್ದ ಬಸಣ್ಣ ಚಿಕ್ಕ ವಯಸ್ಸಿನವರಾಗಿದ್ದು ಅವರ ಪಾಲಿನ ತೋಟದಲ್ಲಿ ಅಪ್ಪ ಕೋರಿಗೆ ಮಾಡುತ್ತಿದ್ದ.

ಅಪ್ಪನನ್ನು ಆತ ಅಣ್ಣಾ ಎಂದು ಯಾವಾಗಲೂ ಕೂಗಿ ಕರೆಯುತ್ತಿದ್ದ. ಎಂದೂ ಏಕವಚನದಲ್ಲಿ ಮಾತಾಡಿದ್ದು ನಾನು ಕೇಳಿರಲಿಲ್ಲ. ಮತ್ತು ಬೆಳೆದ ಬೆಲೆಯಲ್ಲಿ ಸಮಾನ ಹಂಚಿಕೆಯಲ್ಲೂ ಏನೂ ಮೋಸ ಇರುತ್ತಿರಲಿಲ್ಲ. ಆದರೆ ಆತ ಹೊಸ ತಲೆಮಾರಿನ ಶೋಕಿಗೆ ಮಾರುಹೋಗಿದ್ದ. ಊರಿನಲ್ಲಿ ಮೊದಲು ರ‍್ಯಾಲಿ ಬೈಸಿಕಲ್ ನಂತರ ಸೈಕಲ್ ಮೋಟಾರ್ ತಂದು ಓಡಾಡಿಸಿದ! ಲಿಂಗಾಯತರಲ್ಲಿ ನಿಷಿದ್ಧವಾದ ಕುಡಿತ ಮತ್ತು ಮಾಂಸಾಹಾರವನ್ನು ಯಥೇಚ್ಛವಾಗಿ ಸೇವಿಸುತ್ತಿದ್ದ. ಅದಕ್ಕಾಗಿ ಯಾರಿಗೂ ಕೇರ್ ಮಾಡುತ್ತಿರಲಿಲ್ಲ. ಆದರೂ ಅವರಿವರು ಅವನ ಹಿಂದು ಮುಂದೆ ಮಾತಾಡಿಕೊಳ್ಳುವುದನ್ನು ಬಾಲಕನಾಗಿದ್ದ ನಾನು ಕೇಳಿಸಿಕೊಳ್ಳುತ್ತಿದ್ದೆ. ಯಾವಾಗಲಾದರೂ ನಮ್ಮ ಮನೆ ಕಡೆಗೆ ಬಂದಾಗ ಹೊರಕಟ್ಟೆಯಲ್ಲಿ ಕೂತು ಅವನ ಮೂಗಿಗೆ ಮಾಂಸದ ಸಾರಿನದೋ, ಕೋಳಿ ಸಾರಿನದೋ ಘಂ ವಾಸನೆ ಬಡಿದರೆ, ಎದ್ದು ಹೋಗದೆ ತಡರಾತ್ರಿವರೆಗೆ ಕೂತು ಅಪ್ಪನೊಟ್ಟಿಗೆ ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದ.

ಹೀಗಿದ್ದ ಬಸಣ್ಣನಿಗೆ ಊರಲ್ಲಿದ್ದ ಸುಂದರಿಯೊಬ್ಬಳ ಸಹವಾಸವಾಗಿ ಆಕೆ ನಾವು ಮಾಡುತ್ತಿದ್ದ ಕೋರಿನ ತೋಟಕ್ಕೆ ಬರುತ್ತಿದ್ದಳು. ಅದ್ಯಾವ ವಿಷಯದಲ್ಲಿ ವಿವಾದವಾಯಿತೋ ಅಪ್ಪ ಬೆಳೆದು ನಿಂತಿದ್ದ ತೋಟವನ್ನು ನಿಂತ ಕಾಲಲ್ಲಿ ಬಿಟ್ಟು ಹೊರ ಬಂದು, ಬಣಕಾರ ನಾಗಪ್ಪ ಎನ್ನುವವರ ಬೇರೊಂದು ಕೋರಿನ ತೋಟವನ್ನು ಹಿಡಿದಿದ್ದ. ಇಲ್ಲಿ ಕಪ್ಪಲಿಯನ್ನು ಹೂಡಿ ನೀರು ಹಾಯಿಸುವುದು, ಅದರಿಂದ ಶ್ರಮ ಜಾಸ್ತಿಯಾಗಿರುತ್ತಿತ್ತೇ ಹೊರತು ಆದಾಯದಲ್ಲಿ ಅಂತಹದೇನೂ ಹೆಚ್ಚುವರಿ ಕಾಣುತ್ತಿರಲಿಲ್ಲ. ಆಗ ನಾನು ನೀರು ಹಾಯಿಸುವ, ಎಲೆ ಕೊಯ್ಯುವ, ಬಳ್ಳಿಯನ್ನು ಬೆಳೆದ ಮುಂಡಗಳಿಗೆ ಕಟ್ಟುವ ಕೆಲಸವನ್ನು ಅಪ್ಪ, ಅಣ್ಣನ ಜೊತೆ ಸೇರಿ ಮಾಡುತ್ತಿದ್ದೆ. ಆಗ ಏಳನೆ ತರಗತಿ ಪಾಸುಮಾಡಿ ಸಾಗರದಲ್ಲಿ ಹೈಸ್ಕೂಲಿಗೆ ಸೇರಿದ್ದೆ. ಕೋರಿನ ತೋಟದ ಮಾಲೀಕರಾಗಿದ್ದ ಬಣಕಾರ್ ನಾಗಪ್ಪ ಅವರ ಮಗ ಜಯಣ್ಣ ನನ್ನ ಕಿರಿಯ ಸಹಪಾಠಿಯಾಗಿ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ.

ನಾಗಪ್ಪಜ್ಜನೂ ದೊಡ್ಡ ಮನುಷ್ಯ. ಆಸೆಯವನಾಗಿರಲಿಲ್ಲ. ಬಂದ ಹಣವನ್ನು ಸರಿಯಾಗಿ ಹಂಚಿ ಕೊಡುತ್ತಿದ್ದ. ಅವರ ಮನೆಯವರೆಲ್ಲ ಇಂದಿಗೂ ಅದೇ ಆತ್ಮೀಯತೆಯನ್ನು ತೋರುವ ಬಂಧುಗಳಾಗಿದ್ದಾರೆ. ನಾಗಜ್ಜನ ಹೆಂಡತಿ ಗಿರಿಜಕ್ಕ, ತಾಯಿ ಹೃದಯದವರು. ನಾನು ಯಾವುದೇ ಕೆಲಸಕ್ಕೆ ಅವರ ಮನೆಗೆ ಹೋದಾಗ ರೊಟ್ಟಿ ಉಣ್ಣೆಂದು ಜುಲುಮೆ ಮಾಡಿ ಉಣಿಸುತ್ತಿದ್ದರು. ಅದೇಕೋ ಕಪ್ಪಲಿಯಿಂದ ದುಡಿಮೆ ಉಚಾಯಿಸದ ಕಾರಣ ಅಪ್ಪ ಬೇರೊಬ್ಬ ಭೂಮಾಲೀಕರಾದ ಸಣ್ಣಮನಿ ರುದ್ರಜ್ಜ, ಹಾಲಸಿದ್ದಪ್ಪ ಎಂಬುವರು ಹರಾಜಿನಲ್ಲಿ ಎಂಟು ವರ್ಷಗಳಿಗೆ ಹಣ ಗುತ್ತಿಗೆ ಪಡೆದ ಊರ ದೇವರ ಜಮೀನನ್ನು, ಕೋರಿಗೆ ಮಾಡಲು ಅಪ್ಪ ತೀರ್ಮಾನಿಸಿದ್ದರು.

ಅದೇನು ಅದೃಷ್ಟವೋ ಎಂಬಂತೆ ತೋಟವೊಂದು ನಂದನವನದಂತೆ ಬೆಳೆದು ಸಾಕಷ್ಟು ಆದಾಯ ಬರುತ್ತಿತ್ತು. ಈ ಸಂದರ್ಭದಲ್ಲಿಯೇ ಅಪ್ಪ ಇಡೀ ಉತ್ಪನ್ನವನ್ನು ನಾಲ್ಕು ಸಾವಿರ ರೂಪಾಯಿಗಳಿಗೆ ಗುತ್ತಿಗೆಗೆ ಒಪ್ಪಿಕೊಂಡು 100 ರೂಗಳಿಗೆ ಏಳೂವರೆ ಪೆಂಡಿಯಂತೆ ಎಲೆ ಪೆಂಡಿ ನೀಡಬೇಕಾಗಿದ್ದ ಕರಾರಿಗೆ ಒಪ್ಪಿ ಕೊಟ್ಟಿದ್ದರು.

ಈ ರೀತಿ ಎಲೆ ಕೊಯ್ದುಕೊಂಡು ಹೋಗುತ್ತಿದ್ದ ಕೇಣಿದಾರರು ಉಳಿಯುತ್ತಿದ್ದ ಅರ್ಧ ಅಥವಾ ಕಾಲು ಪೆಂಡಿಯ ಎಲೆಯನ್ನು ತೆಗೆದುಕೊಳ್ಳದೆ ತೋಟದವರಿಗೆ ಬಿಟ್ಟುಬಿಡುತ್ತಿದ್ದರು. ಅದನ್ನು ಸಾಮಾನ್ಯವಾಗಿ ಕೋರಿಗೆ ಮಾಡಿದವರೇ ಕೊಯ್ದುಕೊಂಡು ಮಾರಿ ಕೊಳ್ಳುತ್ತಿದ್ದರು. ಅದು ತೋಟದ ಮಾಲೀಕನಿಗೆ ಗೊತ್ತಿದ್ದರೂ ಸಾಮಾನ್ಯವಾಗಿ ಕೇಳುತ್ತಿರಲಿಲ್ಲ.ಇಂತಹದೊಂದು ಎಲೆ ಕೊಯ್ಯುವ ಸಮಯದಲ್ಲಿ ಕರಾರುದಾರನಿಗೆ ಕೊಟ್ಟು ಉಳಿದ ಸುಮಾರು ಕಾಲು ಪೆಂಡಿಯಷ್ಟು ಎಲೆ ಉಳಿದಿತ್ತು. ನಾನೇ ಕೊಯ್ದೆನೋ ನಮ್ಮ ಅಣ್ಣ ಹೇಳಿದನೋ ಅಪ್ಪನಿಗೆ ಗೊತ್ತಿಲ್ಲದಂತೆ ನಾನು ಬಂದು ಬೆಳಿಗ್ಗೇನೆ ಎಲೆ ಕೊಯ್ಯುತ್ತಿದ್ದೆ. ಆಗ ಒಳ್ಳೆಯ ರೇಟು ಬೇರೆ ಇದ್ದುದರಿಂದ ಮಾರಿದ ನಂತರ ಖರ್ಚಿಗೆ ದುಡ್ಡು ಸಿಗುವುದೆಂಬ ಯೋಚನೆಯಲ್ಲಿದ್ದೆ. ಆಗ ಬಹುಶಃ ನಾನು ಆಗಷ್ಟೇ ಹೈಸ್ಕೂಲಿಗೆ ಸೇರಿ ರಜೆಯಲ್ಲಿ ಊರಿಗೆ ಬಂದಿದ್ದೆ.

ನನ್ನ ಪಾಡಿಗೆ ನಾನು ಎಲೆ ಕೊಯ್ಯುವ ಸಮಯಕ್ಕೆ ಮಾಲೀಕ ರುದ್ರಪ್ಪಜ್ಜನ ತಮ್ಮ ಹಾಲಸಿದ್ದಪ್ಪ ಬಂದವನೇ ನಾನು ಎಲೆ ಕೊಯ್ಯುತ್ತಿರುವುದನ್ನ ನೋಡಿ, ಇದೇನು ಕಳ್ಳತನದಿಂದ ಎಲೆ ಕೊಯ್ಯುತ್ತಿಯಲ್ಲ ಎಂದು ಪ್ರಾರಂಭಿಸಿದವ ನಾನೊಂದು ಮಹಾಪರಾಧ ಮಾಡಿರುವುದಾಗಿ ಬೈಯುತ್ತಾ ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿ ಎಲೆ ಕೊಯ್ಯು ವುದನ್ನ ನಿಲ್ಲಿಸಿದ. ಆಗ ಅದೇನೇನೊ ಮಾತಾಡಿದವನೋ ನನಗಂತೂ ಸಹಿಸಿಕೊಳ್ಳಲಾಗದೆ ಅವಮಾನದಲ್ಲಿ ಕುಸಿದು ಹೋಗಿದ್ದೆ. ಬಡತನದ ಕ್ರೌರ್ಯವೆಂದರೆ ಏನೆಂಬುದನ್ನ ಅವನ ಬೈಗುಳಗಳಲ್ಲಿ ದಾಖಲಿಸುತ್ತಾ, ಕೊಯ್ದಿದ್ದ ಎಲೆ ಬುಟ್ಟಿಯನ್ನು ನನ್ನ ಮೇಲೆ ಹೊರಿಸಿಕೊಂಡು ಊರಲ್ಲಿ ಪಂಚಾಯ್ತಿ ಮಾಡಬೇಕೆಂದು ಉದ್ದಕ್ಕೂ ಬೈಯುತ್ತಾ ಊರ ವೀರಭದ್ರ ದೇವರ ಗುಡಿಗೆ ತಂದಿರಿಸಿದ್ದ.

ನಾನು ಅವಮಾನದಲ್ಲಿ ಕುಸಿದು ಹೋಗಿದ್ದೆ. ಅದ್ಯರ‍್ಯಾರು ಪಂಚಾಯ್ತಿ ಸೇರಿದ್ದಾರೋ ವಿವರ ಮರೆತು ಹೋಗಿದೆ. ನನ್ನ ಹೆಸರಿನವರೇ ಆಗಿದ್ದ ಬಣಕಾರ್ ರುದ್ರಜ್ಜ `ಇದೇನು ದೊಡ್ಡ ವಿಷ್ಯಾ ಅಂತ ಇಲ್ಲಿಗೆ ತಂದಿದಿಯಾ’ ಕೋರಿನ ತೋಟ ಮಾಡೋ ಹುಡುಗ, ಉಳಿದ ಎಲೆ ಕೊಯ್ಯತಾನ, ಅದೇನು ಅಪರಾಧನಾ ಎಂದು ಅವನಿಗೆ ಗದರಿಸಿದರು. ಕಡೆಗೆ `ಉಳಿದ ಎಲೆಯಲ್ಲೂ ಪಾಲು ಬೇಕಂತೆ ಕೊಡಪ್ಪ’ ಅವನಿಗೆ ಎಂದು ತೀರ್ಮಾನ ಹೇಳಿ ಮುಗಿಸಿದ್ದರು. ಅಲ್ಲಿ ಅಪ್ಪ ಮತ್ತು ಅಣ್ಣ ಇದ್ದರೋ ಇಲ್ಲವೋ ಗೊತ್ತಿಲ್ಲ. ಕೋರಿನ ತೋಟದಲ್ಲಿ ಬೆಳೆದ ಎಲ್ಲದರಲ್ಲೂ ನಮ್ಮ ದುಡಿಮೆಯ ಅರ್ಧ ಭಾಗ ಇರುತ್ತದೆ. ಇನ್ನರ್ಧಕ್ಕೆ ಯಾಕೆ ನಾವು ಬೇಡುವ ಕೆಲಸ ಮಾಡಬೇಕು.

ಇನ್ನು ಮೇಲೆ ಏನೇ ಉಳಿದರೂ ನಮ್ಮದೆಂದು ಆಸೆ ಪಡಬಾರದೆಂದು ಅಪ್ಪ ಹೇಳಿದ ಮಾತು ಇಂದಿಗೂ ಮರೆತಿಲ್ಲ. ತೋಟದಿಂದ ಗುಡಿವರೆಗೆ ಎಲೆಪುಟ್ಟಿಯ ಹೊತ್ತು ತಂದು ಪಂಚಾಯ್ತಿ ನಡೆಸಿದ ದಿನವನ್ನು ನನಗೆ ಈಗಲೂ ಮರೆಯಲಾಗುತ್ತಿಲ್ಲ. ಸದ್ಯ ಪಂಚಾಯಿತಿಯವರ ದೃಷ್ಟಿಯಲ್ಲಾದರೂ ಅದೊಂದು ದೊಡ್ಡ ಅಪರಾಧವಲ್ಲವೆಂಬಂತೆ ಮಾತಾಡಿದ್ದು ನನಗೆ ಸಮಾಧಾನ ತಂದಿತ್ತು. ನಂತರ ರಜೆ ಮುಗಿದ ಮೇಲೆ ಸಾಗರಕ್ಕೆ ಹೋಗಿ, ನನ್ನ ಅಭ್ಯಾಸ ಮುಂದುವರಿಸಿದೆ.

ಅಕ್ಕ ಭಾವ ನನ್ನ ಓದು ಬರಹಕ್ಕೆ ಸಹಕಾರಿಯಾಗಿದ್ದರು. ಸರಿಯಾದ ಕುಟುಂಬ ಯೋಜನೆಯ ಅರಿವು ಇರದೆ, ನಾನು ಸಾಗರಕ್ಕೆ ಬಂದಾಗ ಇದ್ದ ಒಬ್ಬಳೇ ಮಗಳ ಜೊತೆ ಮತ್ತೆ ಮೂರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಜನಿಸಿ ಅವರ ಕುಟುಂಬ ಹಿಗ್ಗುತ್ತಾ ಹೋಯಿತು. ನಾನು ಮನೆಯವನಾಗಿ ಸಾಮಾನ್ಯ ಕೆಲಸಗಳಾದ ನೀರು ತರುವುದು, ಕಸ ಗುಡಿಸುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು, ಅಂಗಡಿಯಿAದ ಮನೆಗೆ ಬೇಕಾದ ದಿನಸಿ ತರುವುದು ಎಲ್ಲ ಕೆಲಸ ಮಾಡುತ್ತಿದ್ದೆ. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ ನನಗೆ ಬಕ್ಷೀಸು ಸಹ ನೀಡುತ್ತಿದ್ದಳು.

ಹೈಸ್ಕೂಲು ಅಭ್ಯಾಸ ಮಾಡುತ್ತಾ ಎಸ್.ಎಸ್.ಎಲ್.ಸಿ.ಗೆ ಬಂದಾಗ ಮನೆಯಲ್ಲಿ ಮಕ್ಕಳ ಗಲಾಟೆಯಿಂದ ಓದಲು ಕಷ್ಟ ಎನ್ನೋ ಕಾರಣದಿಂದ ಸಾಗರದಲ್ಲಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುತ್ತಿದ್ದ ಹಾಸ್ಟೆಲ್‌ಗೆ ಸೇರಿಕೊಂಡೆ. ಆಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಸ್ಟೆಲ್‌ನಿಂದ ರ‍್ಮ ಶೇಖರ್ ಮತ್ತು ಅವರ ಅಣ್ಣ ಹನುಮಂತಪ್ಪ ಹಾಗೂ ಯಶವಂತಪ್ಪ ಒಟ್ಟು ನಾಲ್ಕು ಜನ ಎಸ್‌ಎಸ್‌ಎಲ್‌ಸಿ ತರಗತಿಗೆ ಹೋಗುತ್ತಿದ್ದೆವು. ಪರೀಕ್ಷೆ ಮುಗಿದು ರಿಸಲ್ಟ್ ಬಂದಾಗ ಸಾರ್ವಜನಿಕ ಹಾಸ್ಟೆಲ್‌ನಿಂದ ಪರೀಕ್ಷೆ ಬರೆದವರಲ್ಲಿ ನಾನೊಬ್ಬ ಮಾತ್ರ ಪಾಸಾಗಿದ್ದೆ. ಉಳಿದವರು ಒಂದೊಂದು ವಿಷಯದಲ್ಲಿ ಫೇಲಾಗಿದ್ದರು. ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಸ್ಟೆಲ್‌ನಿಂದ ಬರುತ್ತಿದ್ದ ಹುಡುಗರಲ್ಲಿ ನಾನೊಬ್ಬ ಪಾಸಾಗಿರುವ ಬಗ್ಗೆ ತಿಳಿದು ಸಂಸ್ಕೃತ ಅಧ್ಯಾಪಕರು ನನಗೆ ಕರೆದು ಪ್ರೋತ್ಸಾಹದ ಮಾತಾಡಿದ್ದನ್ನು ನಾನಿನ್ನೂ ಕೂಡ ಮರೆತಿಲ್ಲ.

ನಾನು ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಬಂದಾಗ ಊರಿನಲ್ಲಿದ್ದೆ. ನನ್ನ ರಿಜಿಸ್ಟ್ರೇಷನ್ ನಂ. 64960. ಆಗ ಫಲಿತಾಂಶಗಳು ದಿನಪತ್ರಿಕೆಗಳಲ್ಲಿ ಬರುತ್ತಿದ್ದವು. ಅಣ್ಣ ತಿಪ್ಪಣ್ಣ ಬೆಳಗಿನ ಜಾವ ಹೊಸಪೇಟೆಗೆ ವೀಳ್ಯದೆಲೆ ಮಾರಾಟ ಮಾಡಲು ಹೋಗುತ್ತಿದ್ದವನು ಹರಿಹರದಲ್ಲಿ ಪ್ರಜಾವಾಣಿ ಪೇಪರ್‌ನಲ್ಲಿ ನನ್ನ ಫಲಿತಾಂಶವನ್ನು ನೋಡಿ, ನನ್ನ ನಂಬರನ್ನು ಗುರ್ತು ಮಾಡಿ ನನ್ನೂರಿಗೆ ದಿನವೂ ಬರುತ್ತಿದ್ದ ಕ್ಷೌರಿಕ ನರಸಿಂಹಣ್ಣನ ಮುಖಾಂತರ ಪೇಪರ್ ಕಳಿಸಿದ್ದ. ನಾನು ಪೇಪರ್ ನೋಡಲು ಹರಿಹರಕ್ಕೆ ಹೋಗೋ ದಾರಿಯಲ್ಲಿ ನರಸಿಂಹಣ್ಣ ಸಿಕ್ಕು ನಾನು ಪಾಸಾಗಿರುವ ಬಗ್ಗೆ ನನ್ನ ಅಣ್ಣ ತಿಪ್ಪಣ್ಣ ನಂಬರ್ ಗುರ್ತು ಮಾಡಿ ಕೊಟ್ಟದ್ದನ್ನು ನನಗೆ ತೋರಿಸಿ ಸಂತೋಷಪಟ್ಟಿದ್ದ.

ಹನಗವಾಡಿಯಲ್ಲೇ ಹಲವು ವರ್ಷಗಳಿಂದ ಎಸ್.ಎಸ್.ಎಲ್.ಸಿಯಲ್ಲಿ ಸಂಶೋಧನೆ ಮಾಡುತ್ತಾ ಉಳಿದಿದ್ದ ಸ್ನೇಹಿತರೊಡನೆ ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆ ಪಾಸಾದ ವಿಷಯ ಹೇಳಿದೆ. ಅರ‍್ಯಾರಿಗೂ ನಾನು ಪಾಸಾದ ಬಗ್ಗೆ ನಂಬಿಕೆ ಬರಲಿಲ್ಲ. ಅದರಲ್ಲಿ ಈಗಾಗಲೇ ನಾಲ್ಕು ವರ್ಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲೇ ಉಳಿದಿದ್ದ ಹಿರಿಯ ಮಿತ್ರರಲ್ಲೊಬ್ಬ `ಇಲ್ಲಪ್ಪಾ, ಪೇರ‍್ನಲ್ಲಿ ಬಂದಿರೋದು ನಂಬಕ್ಕಾಗಲ್ಲ, ಫಲಿತಾಂಶ ಸ್ಕೂಲಿಗೆ ಬರೋ ತನಕ ಏನು ಹೇಳುವುದಕ್ಕಾಗಲ್ಲ’ ಎಂದು ಬಾಣ ಬಿಟ್ಟು – ಪಾಸಾಗಿದ್ದೇನೆ ಎಂಬ ಅಸಾಧ್ಯ ಸಂತೋಷದ ಮೂಡಿನಲ್ಲಿದ್ದ ನನಗೆ ಅನುಮಾನದ ಕಿಚ್ಚು ಹಚ್ಚಿದ್ದ. ಆದರೂ ಇದ್ದ ಐದು ಮನೆಯ ಚಲುವಾದಿಗರ ಜೊತೆ ಊರ ಅನೇಕ ಜನರಿಗೆ ನಾನು ಎಸ್.ಎಸ್.ಎಲ್.ಸಿ. ಪಾಸಾದ ಸುದ್ದಿ ಸಂತೋಷ ನೀಡಿತ್ತು.

ನಮ್ಮೂರ ಹಿರಿಯ ರಾಜಕಾರಣಿ ಹೆಚ್. ಸಿದ್ದವೀರಪ್ಪ ನವರ ನಂತರ ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲನೇ ಅಟೆಂಪ್ಟ್ನಲ್ಲಿ ಪಾಸಾದವನು ನಾನೇ ಎಂದು ಮಾತಾಡಿ ಕೊಳ್ಳುತ್ತಿದ್ದರು. ನಮ್ಮ ಚಿಕ್ಕಪ್ಪ ಮಹದೇವಪ್ಪನಂತೂ ತಮ್ಮ ಎರಡೂ ಕೈಮುಗಿದುಕೊಂಡು ‘ವಾಲಗದ ಸಮೇತ ವೀರಭದ್ರ ದೇವರಿಗೆ ಹಣ್ಣುಕಾಯಿ ಮಾಡಿಸೋಣ’ ಎಂದು ಸಂತೋಷದಲ್ಲಿ ಹೇಳಿದನಾದರೂ ಹಾಗೇನು ನಾನು ಮಾಡಲಿಲ್ಲ. ನನ್ನ ಎಸ್.ಎಸ್.ಎಲ್.ಸಿ. ವರೆಗಿನ ಓದಿನ ಜೊತೆ ಊರಲ್ಲಿ ರಜಾ ದಿನಗಳಲ್ಲಿ ಹಲವು ಕೆಲಸ ಮಾಡುತ್ತಿದ್ದೆ. ಚಲುವಾದಿಗಳಿಗೆ ವಿಶೇಷವಾದ ಬ್ಯಾಂಡ್‌ಸೆಟ್‌ವೊಂದನ್ನು ರೂಪಿಸಿಕೊಂಡಿದ್ದರು. ಊರ ದೇವರ ಚಾಕರಿಗೆಂದು ಅಪ್ಪ ಚಿಕ್ಕಪ್ಪಂದಿರು ಹಳೆಯ ಮೇಳ ಹೊಂದಿದ್ದರು. ಮೇಳದಲ್ಲಿ ಸುತಿ, (ಶ್ರುತಿ) ಸೊನಾಯಿ, (ಶಹನಾಯಿ) ಸಮಾಳ ಹಾಗೂ ಚೌಗಡ (ಚರ್ಮದ ವಾದ್ಯ) ಊರ ದೇವರ ಚಾಕರಿ ಜೊತೆಗೆ ಊರಲ್ಲಿನ ಮದುವೆ ಮತ್ತು ಸಾವುಗಳ ಸಮಯದಲ್ಲಿ ವಾದ್ಯಮಾಡಿ ಹಣ ಸಂಪಾದಿಸುತ್ತಿದ್ದರು. ಈ ಮ್ಯಾಳದಲ್ಲಿ ಹೋಗುವ ಸಂದರ್ಭದಲ್ಲಿ ಸಾಮೂಹಿಕವಾಗಿ ಎಲ್ಲರೂ ಶುಭ್ರವಾದ ಅಂಗಿ ಪಂಚೆ ಮತ್ತೊಂದು ಟವಲ್ ಜೊತೆಗೆ ತಮ್ಮ ಮ್ಯಾಳದ ಸಾಮಾನು ಮುಚ್ಚಲು ಬೇಕಾದ ಚೀಲಗಳನ್ನು ಅಚ್ಚುಕಟ್ಟಾಗಿ ಶುಚಿಗೊಳಿಸಿಕೊಂಡು ಹೋಗುತ್ತಿದ್ದರು. ಮದುವೆ ಸಮಯಗಳಲ್ಲಿ ಸಂಪಾದನೆ ಜೊತೆಗೆ ಖುಷಿಗಾಗಿ ಕೆಲವರು ನೀಡುವ ಹಣದ ರೂಪದ ಶಭಾಷ್‌ಗಿರಿಯಿಂದಾಗಿ ಸಾಮಾನ್ಯವಾಗಿ ಬಿರುಸಿನ ಹೊಲಮನಿ ಕೆಲಸಗಳು ರುಚಿಸುತ್ತಿರಲಿಲ್ಲ. ಆದರೆ ನಮ್ಮ ಊರಿನವರು ಇದಕ್ಕೆ ಅಪವಾದವೆಂಬಂತೆ ಹೊಲ ಮತ್ತು ತೋಟಗಳಲ್ಲಿ ಮುತುವರ್ಜಿಯಿಂದ ದುಡಿಯುತ್ತಿದ್ದರು. ಆದರೂ ನಮ್ಮ ಅಪ್ಪ ಅಗಾಗ `ಅರಿಶಿಣ ಕೂಳಿಗೋಗಿ ವರ್ಷದ ಕೂಳು ಕಳೆದು ಕೊಳ್ಳಬೇಡಿರೆಂದು’ ಎಚ್ಚರಿಸುತ್ತಿದ್ದರು.

ಊರಿನಲ್ಲಿ ಅಪ್ಪ ಚಿಕ್ಕಪ್ಪಂದಿರ ಮ್ಯಾಳ ಹಳೆಯದಾಯಿತೆಂದು ನಮ್ಮಣ್ಣನೂ ಸೇರಿದಂತೆ ಹೊಸಬರನ್ನು ಸೇರಿಸಿಕೊಂಡು ಹೊಸ ಬ್ಯಾಂಡ್ ಸೆಟ್ ತರಿಸಿ, ಅದಕ್ಕೊಬ್ಬ ಬ್ಯಾಂಡ್ ಮಾಸ್ತರರನ್ನು ನೇಮಿಸಿಕೊಂಡಿದ್ದರು. ಬರಿ ಐದಾರು ಜನರಿದ್ದ ಮ್ಯಾಳವು ಹೊಸ ಹುಡುಗರನ್ನೆಲ್ಲಾ ಸೇರಿಸಿ ಹತ್ತು ಜನರ ಗುಂಪೇ ಆಯಿತು. ನಾನು ಕೂಡ ತರಬೇತಿ ನೀಡುವ ಸಮಯದಲ್ಲಿ ಡೋಲು ಬಾರಿಸಲು ಪ್ರಯತ್ನಪಟ್ಟೆ. ಆದರೆ ಅದು ಯಾಕೋ ನನಗೆ ಕರಗತವಾಗಲಿಲ್ಲ. ಅದೇ ಸಮಯದಲ್ಲಿ ಅಪ್ಪ `ಏನು ಕಲಿತು ಏನು ಬಾರಿಸಿದರೂ ಕೆರ ಬಿಡುವಲ್ಲಿ ಕೂಳು ತಿನ್ನೋ ವಿದ್ಯೆ ಇದು. ನಿನಗೆ ಯಾಕೆ ಬೇಕು ಮಗನೇ’ ಎಂದು ನನ್ನ ಉತ್ಸಾಹಕ್ಕೆ ನೀರೆರಚಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಹಿಂದಿರುಗಿ ನೋಡುತ್ತಾಽ……

Published

on

  • ರುದ್ರಪ್ಪ ಹನಗವಾಡಿ

ಮ್ಮೂರು ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮ. ಈಗ ಸುಮಾರು 5000 ಜನಸಂಖ್ಯೆ ಇದ್ದು, ಲಿಂಗಾಯತರು, ಕುರುಬರು, ಬಾರಿಕರು, ತಳವಾರರು, ಬೋವಿಗಳು, ಚಲುವಾದಿಗಳು, ಮಾದಿಗರು ಹಾಗೂ ಮುಸ್ಲಿಮರು ಇದ್ದಾರೆ.

ಲಿಂಗಾಯತರೇ ಬಹುಸಂಖ್ಯಾತರಿರುವ ಈ ಊರಿನಲ್ಲಿ ವೀರಭದ್ರ ದೇವರು, ಹನುಮಂತ ದೇವರು ಮತ್ತು ಗುರಪ್ಪ ದೇವರ ಗುಡಿಗಳು ಇವೆ. ಊರಿಂದಾಚೆ ಉಡಸಲಾಂಭಿಕೆ ಮತ್ತು ಬೇವಿನ ಮರದ ಹತ್ತಿರ ತುಂಬಿದ ಕುಡಿಕೆ ಇಟ್ಟು ಪೂಜಿಸುವ ಹಲವಾರು ದೇವರಿಗೆ `ಅಜ್ಜಿ’, `ಅಜ್ಜಿ ಹಬ್ಬ’ದ ದೇವರು ಎಂದು ಕರೆಯುತ್ತಿದ್ದುದು ನೆನಪು.

ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ವೀರಭದ್ರ ದೇವರ ರಥೋತ್ಸವ. ಆಗ ಊರವರೆಲ್ಲ ತಮ್ಮ ಬಂಧು-ಬಳಗದವರನ್ನೆಲ್ಲಾ ಕರೆದು ಎರಡು ಮೂರು ದಿನಗಳು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ದಿನಗಳಲ್ಲಿ ಪ್ರತಿ ಜಾತಿಕರೂ ತಮ್ಮತಮ್ಮ ಕೆಲಸ ಅಂದರೆ ಚಲುವಾದಿಗಳು ಮ್ಯಾಳ ಮಾಡುವುದು, ಅಗಸರು ಮಡಿ ಹಾಸುವುದು, ತಳವಾರರರು ಊರಿನ ಇತರೆಲ್ಲರನ್ನೂ, ಕರೆದು ಕಳಿಸುವವರನ್ನು ನೋಡಿಕೊಳ್ಳುವುದು ಮಾಡುತ್ತಾರೆ. ಲಿಂಗಾಯತರು ಗರ್ಭಗುಡಿಯ ದೇವರ ಪೂಜೆ, ಪಲ್ಲಕ್ಕಿ ಹೊರುವುದು, ಬೇರೆ ಊರಿಂದ ದೇವರನ್ನು ಹೊತ್ತು ತರುವವರನ್ನು ಇದಿರುಗೊಂಡು ಪುನಃ ಹಬ್ಬ ಮುಗಿದು ಕಳಿಸುವವರೆಗೆ ನೋಡಿಕೊಳ್ಳುವುದು ಇವೇ ಮೊದಲಾದ ಕೆಲಸ ಅವರದಾಗಿತ್ತು.

ಹೀಗೆ ಹಬ್ಬ ನಡೆಯುವುದರ ಜೊತೆಗೆ ಆಸಕ್ತರೆಲ್ಲ ಸೇರಿ ಪೌರಾಣಿಕ ನಾಟಕಗಳಾದ ಕುರುಕ್ಷೇತ್ರ, ರಕ್ತ ರಾತ್ರಿ, ಜಗಜ್ಯೋತಿ ಬಸವೇಶ್ವರ ಮತ್ತು ಖಾದಿ ಸೀರೆ ಹೀಗೆ ಅನೇಕ ಸಾಮಾಜಿಕ ನಾಟಕಗಳನ್ನೂ ಆಡುತ್ತಿದ್ದರು. ಊರ ಜನರೂ ಶಕ್ತಾನುಸಾರ ಪಟ್ಟಿ ನೀಡಿ ಕಲಿಸಿದ ಮಾಸ್ತರನಿಗೂ, ಭಾಗವಹಿಸಿದ ಕಲಾವಿದರಿಗೆ, ವಾದ್ಯಗೋಷ್ಠಿಯವರಿಗೆ ಯಥೋಚಿತ ಸನ್ಮಾನ ಮಾಡುತ್ತಿದ್ದರು. ಇದಕ್ಕೆಲ್ಲ ಪ್ರೋತ್ಸಾಹದ ಮೀಟುಗೋಲಾಗಿ ನಮ್ಮೂರಿನವರೇ ಆಗಿದ್ದ ಕ್ಯಾತನಹಳ್ಳಿ ರುದ್ರಪ್ಪ ಮಾಸ್ತರು ಕಾರಣರಾಗಿದ್ದರು. ಅವರೀಗ ತೀರಿ ಹೋಗಿ, ಟಿ.ವಿ. ಭರಾಟೆಯಲ್ಲಿ ನಾಟಕಗಳ ಗೀಳು ಕಡಿಮೆಯಾಗಿದ್ದರೂ, ನಮ್ಮೂರಲ್ಲಿ ಪ್ರತಿವರ್ಷದಲ್ಲಿ ಎರಡು ಮೂರು ನಾಟಕಗಳನ್ನು ಆಡುವುದು ಮಾತ್ರ ನಿಂತಿಲ್ಲ.
ನಮ್ಮೂರ ಸುತ್ತಮುತ್ತೆಲ್ಲಾ ವೀಳ್ಯದ ಎಲೆ ತೋಟಗಳೇ ತುಂಬಿಕೊಂಡಿವೆ.

ಈ ಊರಲ್ಲೇ ನಮ್ಮ ಅಪ್ಪ ಅವ್ವ ಕೂಡ ಒಂದು ಕೋರಿನ ತೋಟ ಮಾಡಿಕೊಂಡಿದ್ದರು. ಕೋರಿನ ತೋಟವೆಂದರೆ ಭೂಮಾಲೀಕನೊಬ್ಬನಿಂದ ಭೂಮಿ ಪಡೆದು, ಅದರಲ್ಲಿ ವೀಳ್ಯದೆಲೆಯೋ, ಇನ್ನಿತರ ಬೆಳೆಯನ್ನೋ ತೆಗೆದರೆ ಅದರ ಉತ್ಪನ್ನದ ಲಾಭವನ್ನು ಸಮನಾಗಿ ಹಂಚಿಕೊಳ್ಳುವುದು. ಅಂತಹದೊಂದು ತೋಟದಲ್ಲಿ ಅಪ್ಪ ಅವ್ವ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಅಪ್ಪ ಅವ್ವನಿಗೆ ನಾವು ಆರು ಜನ ಮಕ್ಕಳು. ನಮ್ಮೊಟ್ಟಿಗೆ ಇರಬೇಕಾಗಿದ್ದ ಇನ್ನೂ 3-4 ಮಕ್ಕಳು ನಮ್ಮವ್ವನಿಗೆ ಉಳಿದಿರಲಿಲ್ಲ.

ಅಪ್ಪನಿಗೆ ನಮ್ಮವ್ವನನ್ನು ಮದುವೆಯಾಗುವ ಮುಂಚೆಯೇ ಮೊದಲೊಂದು ಮದುವೆಯಾಗಿದ್ದು, ಅವರಿಗೂ 5-6 ಮಕ್ಕಳು ಹುಟ್ಟಿ ಮಕ್ಕಳ್ಯಾರು ಬದುಕದೆ ಕೊನೆ ಹೆರಿಗೆಯಲ್ಲಿ ಮಗು ಮತ್ತು ಬಾಣಂತಿ ಇಬ್ಬರೂ ನಿಧನರಾದರೆಂದೂ, ಆನಂತರ ಅಪ್ಪ ಮರು ಮದುವೆಯ ಮಾತು ಬಂದಾಗ ಆಸಕ್ತಿ ತೋರದೆ ತನ್ನ ಅಣ್ಣನ ಮಗನನ್ನೇ ತನ್ನ ಮಗನೆಂದು ಕಕ್ಕುಲತೆಯಲ್ಲಿ ಮದುವೆಯಾಗುವ ಬಗ್ಗೆ ಚಿಂತಿಸದೆ ತೋಟ ಹೊಲಮನೆಗಳಲ್ಲಿ ದುಡಿಯುತ್ತಾ ಬದುಕು ಸಾಗಿಸುತ್ತಿದ್ದನಂತೆ.

ಇಂತಿಪ್ಪ ಸಂದರ್ಭದಲ್ಲಿ ನಮ್ಮವ್ವನ ಚಿಕ್ಕಪ್ಪ ಮುರಿಗೆಪ್ಪಜ್ಜ ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದಿಂದ ಯಾವುದೋ ಕಾರಣಕ್ಕೆ ನಮ್ಮ ಊರಿಗೆ ಬಂದಾಗ ನಮ್ಮಪ್ಪನ ಶ್ರಮ ಮತ್ತು ವಾಗತ್ಯದ ಬದುಕು ನೋಡಿ, ಮಾರುಹೋಗಿ ಅಣ್ಣನ ಮಗಳನ್ನು ಈತನಿಗೆ ಕೊಟ್ಟು ಮದುವೆ ಮಾಡಬೇಕೆಂದು ಚಿಂತಿಸಿ, ತನ್ನ ಊರಿಗೆ ಹೋದ ಮೇಲೆ ಅವರಣ್ಣನಿಗೆ ಒಪ್ಪಿಸಿ ನಮ್ಮಪ್ಪನೊಡನೆ ಎರಡನೇ ಸಂಬಂಧವಾಗಿ ಅವ್ವನನ್ನು ಕೊಟ್ಟು ಮದುವೆಯಾಗುವಂತೆ ಮಾಡಿದನೆಂದು ಅವರಿಂದಾಗಿಯೇ ಅಪ್ಪನ ಎರಡನೇ ಮದುವೆ ಆಯಿತೆಂದು ಆಗಾಗ ಮಾತಾಡಿಕೊಳ್ಳುತ್ತಿದ್ದರು.

ನಾನು 1951ರ ಮಾರ್ಚ್ 15ರಂದು ಹುಟ್ಟಿದ್ದೆಂದು ಸರ್ಕಾರಿ ದಾಖಲೆಯಲ್ಲಿದೆ. ಅವ್ವ ನಾನು ಹುಟ್ಟಿದ ಬಗ್ಗೆ ಕೇಳಿದರೆ ಯುಗಾದಿ ಹಬ್ಬ ಮುಂದೆ ಒಂದು ವಾರವೋ ಏನೋ ಇರುವಾಗ ಬ್ರೇಸ್ತವಾರ (ಗುರುವಾರ) ಹುಟ್ಟಿದ್ದೆಂದು ಹೇಳುತ್ತಿದ್ದಳು. ಅಂತೂ ಅದು ಸರಿ ಸುಮಾರು ಮಾರ್ಚ್ ತಿಂಗಳು ಎಂಬುದಾಗಿ ನನ್ನ ಶಾಲಾ ದಾಖಲೆಯಲ್ಲಿರುವುದು ಹುಟ್ಟಿದ ದಿನಕ್ಕೆ ತೀರಾ ದೂರವಾಗಿಲ್ಲವೆನಿಸುತ್ತದೆ.

ನಮ್ಮೂರ ಸಾಮಾಜಿಕ ಸಂಬಂಧಗಳು 1950ರ ದಶಕದಲ್ಲಿನ ನನ್ನ ಬಾಲ್ಯದ ದಿನಗಳಿಂದಲೂ ಅಸಮಾನತೆಯ ಸಂಬಂಧಗಳು ಎಲ್ಲರಿಂದ ಒಪ್ಪಿತವಾಗಿಯೇ ಬಂದವುಗಳು. ಜಾತಿಯ ತಾರತಮ್ಯ ನೀತಿಗಳನ್ನು ಯಾರೂ ಪ್ರಶ್ನಿಸುವ ಪ್ರಶ್ನೆಯೇ ಬರುತ್ತಿರಲಿಲ್ಲ! ಹಳ್ಳಿಯೇ ಒಂದು ಸರ್ಕಾರದಂತೆ ಇದ್ದು ಅಲ್ಲಿನ ಕೊಡುಕೊಳ್ಳುವ ಪ್ರಕ್ರಿಯೆಯು ಸಾಮಾಜಿಕ ಕಟ್ಟುಪಾಡುಗಳಲ್ಲಿಯೇ ನಡೆಯುತ್ತಿದ್ದವು.

ನಮ್ಮೂರಿನ ಚಲುವಾದಿಗಳ ಐದು ಕುಟುಂಬಗಳು ಒಬ್ಬರಿಗೊಬ್ಬರು ಸಂಬಂಧಿಕರಾಗಿದ್ದರು. ಅವರೆಲ್ಲರಿಗೂ ನಮ್ಮ ಅಪ್ಪನೇ ಯಜಮಾನನಾಗಿದ್ದ. ಅದ್ಯಾವುದೋ ಮಾಯದಲ್ಲಿ ಅಪ್ಪ ಅಕ್ಷರಸ್ಥನಾಗಿ ಓದಲು ಬರೆಯಲು ಕಲಿತು ಸಾಮಾನ್ಯ ಲೆಕ್ಕದ ಜ್ಞಾನ ಅವನಿಗಿತ್ತು. ಈ ಕುಟುಂಬದ ಐದೂ ಜನರು ಸೇರಿ ಊರ ಚಾಕರಿ (ಮ್ಯಾಳ) ಮಾಡುತ್ತಿದ್ದರು. ಪ್ರತಿ ಮಂಗಳವಾರ ವೀರಭದ್ರನ ಗುಡಿಗೆ ಹೋಗಿ ಮ್ಯಾಳ ಮಾಡುವುದು. ಅದಕ್ಕೆಲ್ಲ ಪ್ರತಿಯಾಗಿ ಊರ ದೇವಸ್ಥಾನದ ಯಜಮಾನರು, ಕಲ್ಲ ಮರಡಿಯಂತಿದ್ದ ದೇವರ ಹೆಸರಿನಲ್ಲಿದ್ದ ಜಮೀನನ್ನು ಐದೂ ಜನರಿಗೂ ಸುಮಾರು 17 ಎಕರೆ ಹಂಚಿಕೊಟ್ಟಿದ್ದರು. ಅದರಲ್ಲಿ ಮುಕ್ಕಾಲು ಭಾಗ ಉಳುಮೆ ಮಾಡಲು ಮಾತ್ರ ಸಾಧ್ಯವಾಗಿತ್ತು. ಉಳಿದದ್ದು ಕಲ್ಲು ಮರಡಿಯಾಗಿದ್ದು ಕೇವಲ ದನ ಮೇಯಿಸುತ್ತಿದ್ದೆವು. ಅಪ್ಪ ನಮ್ಮ ಪಾಲಿನ ಮೂರು ಎಕರೆಯಷ್ಟನ್ನು ಉಳುಮೆ ಮಾಡಿಕೊಂಡು ಜೋಳ, ಅಲಸಂದೆ, ಸಜ್ಜೆ, ನವಣೆ, ಮೆಣಸಿನಕಾಯಿ, ಟಮೋಟ, ಹುರಳಿ ಇತ್ಯಾದಿಗಳನ್ನು ಒಂದು ಜೊತೆ ಸಣ್ಣ ಎತ್ತಿನ ಜೋಡಿ ಇಟ್ಟುಕೊಂಡು ವ್ಯವಸಾಯ ಮಾಡುತ್ತಿದ್ದನು. ಮನೆಯಲ್ಲಿ ಎಮ್ಮೆ ಕಟ್ಟಿದ್ದನು. ಬಾಲ್ಯದಲ್ಲಿ ನಮಗೆ ಹಾಲು ಮೊಸರಿನ ಊಟ ಇರುತ್ತಿತ್ತು. ಯಾವಾಗಲಾದರೂ ಎಮ್ಮೆ ಗಬ್ಬಾದರೆ (ಗರ್ಭ ಧರಿಸಿದರೆ) ಹಾಲಿನ ಕೊರತೆಯಾಗದಿರಲೆಂದು ಅಪ್ಪ ಆಡುಗಳನ್ನು ಕೂಡ ಸಾಕಿದ್ದನು. ಅವುಗಳ ಹಾಲನ್ನು ದಿನ ಬೆಳಿಗ್ಗೆ ಚಾ ಮಾಡಲು ಮತ್ತು ಉಳಿದದ್ದು ಮೊಸರು ಮಾಡಿ ಉಣ್ಣುತ್ತಿದ್ದೆವು.
ಸ್ವಂತಕ್ಕಿದ್ದ ಸ್ವಲ್ಪ ಒಣಭೂಮಿಯ ಜೊತೆಗೆ ಊರಲ್ಲಿ ಕೋರಿನ ತೋಟ ಮಾಡಿಕೊಂಡು ನಮ್ಮನ್ನೆಲ್ಲ ಹಸಿವಿನ ಬಾಧೆ ತಟ್ಟದಂತೆ ಬೆಳಸುತ್ತಿದ್ದನು. ಜೊತೆಗೆ ಸರ್ಕಾರ 1934ರಲ್ಲಿಯೇ ನಮ್ಮೂರಲ್ಲಿ ಸ್ಥಾಪಿಸಿದ್ದ ಶಾಲೆಗೆ ಮಕ್ಕಳೆಲ್ಲರನ್ನು ಹಾಕಿದ್ದನು.
ಅವ್ವ ನಮ್ಮೂರಿಗೆ ಬಂದು ಅಪ್ಪನೊಂದಿಗೆ ಹೊಂದಿಕೊಳ್ಳಲು ಕಷ್ಟ
ಪಡಬೇಕಾಯಿತು. ಅವ್ವನದು ಅಪ್ಪನಿಗಿಂತ ಸ್ವಲ್ವ ಹೆಚ್ಚು ಅನುಕೂಲವಿದ್ದ ಕುಟುಂಬ. ಅವ್ವನಿಗೆ ಹೊಲ, ಮನಿ, ಕಣ, ಎತ್ತು ಬಂಡಿಗಳಿದ್ದ ಮನೆತನ. ಅವ್ವನ ಅಪ್ಪ ಆಗಿನ ಈಚಲು ಹೆಂಡ ಕುಡಿಯುತ್ತಾ ಪ್ರತಿ ಸಂಜೆ ಜಬರದಸ್ತ್ ಅಡಿಗೆಗಳನ್ನು ಮಾಡಿಸಿಕೊಂಡು ಉಣ್ಣುತ್ತಿದ್ದ ಎಂದು ಅವ್ವ ತೌರಮನೆಯ ಶ್ರೀಮಂತಿಕೆಯನ್ನು ಕೊಚ್ಚುತ್ತಾ ಆಗಾಗ ಮನೆಯಲ್ಲಿ ಜಂಭ ಕೊಚ್ಚಿಕೊಳ್ಳುತ್ತಿದ್ದಳು.

ಅವ್ವ ಮದುವೆಯಾಗಿ ನಮ್ಮೂರಿಗೆ ಬಂದಾಗ ಅಪ್ಪನ ಜೊತೆ ಅಪ್ಪನ ಅಣ್ಣ ರಂಗಪ್ಪಜ್ಜನ ಮಗ ಹಾಲಣ್ಣನಿದ್ದ. ಅಪ್ಪನ ಸಾಂಸಾರಿಕ ನೋವುಗಳ ಸಮಯದಲ್ಲಿ ಮದುವೆ ಬೇಡ, ಅಣ್ಣನ ಮಗನೇ ತನ್ನ ಮಗನೆಂದು ಅವನೊಟ್ಟಿಗೆ ಇದ್ದ. ಮದುವೆಯ ನಂತರ ಹಾಲಣ್ಣನಿಗೂ ಮದುವೆಯಾಗಿದ್ದರಿಂದ ಹೊಂದಾಣಿಕೆ ಕಷ್ಟವಾಗಿರಬೇಕು. ಅಪ್ಪ ಇದ್ದ ಮನೆಯನ್ನು ಹಾಲಣ್ಣನಿಗೆ ಬಿಟ್ಟು, ಓಬಜ್ಜನೆಂಬ ದೂರದ ಸಂಬಂಧಿ ನಮ್ಮೆಲ್ಲರ ಅಚ್ಚುಮೆಚ್ಚಿನ ಅಜ್ಜನ ಮನೆಗೆ ಬಂದಿದ್ದಾರೆ. ಅವಾಗ ಏನೇನು ನಡೆಯಿತೋ ಅಂತೂ ಓಬಜ್ಜನ ಮಾಳಿಗೆ ಮನೆ ನಮ್ಮ ಮನೆಯೆಂಬಂತೆ ಅಪ್ಪ ಅವ್ವ ಜೀವನ ಮಾಡಿ ನಮ್ಮಕ್ಕ ಕೊಟ್ರಮ್ಮ, ಅಣ್ಣ ತಿಪ್ಪಣ್ಣ ಇನ್ನುಳಿದ ತಂಗಿಯರಾದ ರೇವಕ್ಕ, ರತ್ನಕ್ಕ ಮತ್ತು ಮಂಜಕ್ಕ ಇವರು ನನ್ನೊಡನೆ ಹುಟ್ಟಿದವರು. ನನಗೀಗ 70 ವರ್ಷಗಳಾಗಿದ್ದು ಅವರೆಲ್ಲರೂ ಅಲ್ಲಿಂದ ಬೆಳೆದು ಅವರವರ ಗಂಡನ ಮನೆಯಲ್ಲಿ ಹಲವು ಟಿಸಿಲುಗಳಾಗಿ ಬೆಳೆದಿದ್ದಾರೆ. ಅಣ್ಣ ತಿಪ್ಪಣ್ಣ ಊರಿನಲ್ಲಿ ತನ್ನ ಮೂರು ಮಕ್ಕಳು ಮತ್ತು ಮೊಮ್ಮಕ್ಕಳೊಡನೆ ಇದ್ದಾನೆ. ನಾನೂ ಊರನ್ನು 10ನೇ ವಯಸ್ಸಿನಲ್ಲಿಯೇ ಓದಿನ ಕಾರಣದಿಂದ ಬಿಟ್ಟಿದ್ದರೂ ಇಂದಿಗೂ ಅಳಿಸಲಾಗದ ನಂಟಾಗಿ ಉಳಿದುಕೊಂಡು ಬಂದಿದೆ. ಊರ ಎಲೆ ಬಳ್ಳಿ ತೋಟ, ಜೊತೆಗೆ ಬಾಲ್ಯದ ಗೆಳೆಯರ ಒಡನಾಟ ಮತ್ತು ನಾನಲ್ಲಿ ಸ್ಥಾಪಿಸಿರುವ ಕೃಷ್ಣಪ್ಪ ಟ್ರಸ್ಟ್, ನನ್ನೆಲ್ಲಾ ಚಟುವಟಿಕೆಗಳನ್ನು ಊರಿನಿಂದ ರಾಜ್ಯವ್ಯಾಪಿ ವಿಸ್ತಾರಗೊಳಿಸಿದೆ.
ನನ್ನ ಬಾಲ್ಯದಲ್ಲಿನ ನೆನಪುಗಳನ್ನು ಕೆದಕಿದರೆ ನಾನು ನಾಲ್ಕನೇ ತರಗತಿಯವರೆಗೆ ಹನಗವಾಡಿಯಲ್ಲಿಯೇ ಇದ್ದ ಪ್ರಾಥಮಿಕ ಶಾಲೆಯಲ್ಲಿ ಓದಿದೆ. ಆಗಿನ ಅಧ್ಯಾಪಕರುಗಳ ಹೆಸರು ಮತ್ತು ಅವರು ತೋರುತ್ತಿದ್ದ ಪ್ರೀತಿ ಇನ್ನೂ ನನಗೆ ಹಸಿರಾಗಿದೆ. ನಮ್ಮೂರಿನ ಪಕ್ಕದ ಊರು ಬಿಳಸನೂರಿನಿಂದ ಬರುತ್ತಿದ್ದ ಹಾಲಪ್ಪ ಮಾಸ್ತರು, ಬೆಳ್ಳೂಡಿಯಿಂದ ಬರುತ್ತಿದ್ದ ಗುಡ್ಡೆಪ್ಪ ಮಾಸ್ತರು, ಇನ್ನೊಬ್ಬರು ರಾಮತೀರ್ಥದಿಂದ ಬರುತ್ತಿದ್ದ ರಾಮಶೇಷ ಮತ್ತು ಹರಿಹರ ಟೌನ್‌ನಿಂದ ಬರುತ್ತಿದ್ದ ವೆಂಕೋಬರಾವ್ ಅವರುಗಳು ನಮ್ಮ ಬಾಲ್ಯದ ಅಭಿಮಾನದ ಮಾಸ್ತರುಗಳು. ಅವರು ತೊಡುತ್ತಿದ್ದ ಶುಭ್ರವಾದ ಕಚ್ಚೆ ಪಂಚೆ ಮತ್ತು ಅಂಗಿಗಳು ನಮಗೆ ಅಸಾಮಾನ್ಯವಾಗಿ ಕಾಣುತ್ತಿದ್ದವು. ಮಗ್ಗಿ ಹೇಳುವುದು, ತಪ್ಪಿಲ್ಲದೇ ಉಕ್ತ ಲೇಖನ ಬರೆಯುವುದು, ಇವುಗಳಲ್ಲೆಲ್ಲಾ ನಾನು ಸ್ವಲ್ಪ ಚುರುಕಾಗಿದ್ದರಿಂದಲೇ ಏನೋ ಏಟು ತಿನ್ನದೆ, ತಪ್ಪು ಮಾಡಿದ ನನ್ನ ಸಹಪಾಟಿಗಳಿಗೆ ಕಪಾಳಕ್ಕೆ ನನ್ನಿಂದ ಹೊಡೆಸುತ್ತಿದ್ದರು. ನಾನು ಸ್ವಲ್ಪ ಚೌಕಾಸಿಯಿಂದ ಮೆತ್ತಗೆ ಹೊಡೆದಾಗ, ಆಗ ಅವರು ಕಪಾಳಕ್ಕೆ ನನಗೇ ಬಾರಿಸಿ ತೋರಿಸಿದ ಕಾರಣ ಮುಂದಿನವರಿಗೆ ಜೋರಾಗಿ ಏಟು ಕೊಟ್ಟು ಅವರ ಮೂಗಿನಿಂದ ರಕ್ತ ಒಸರಿ ಭಯವಾದ ನೆನಪು ಈಗಲೂ ಹಸಿರಾಗಿದೆ.

ಓದಿನ ಜೊತೆಗೆ ಶಾಲೆಯ ಆವರಣದಲ್ಲಿದ್ದ ಜಾಗದಲ್ಲಿ ಮಡಿಗಳನ್ನು ಮಾಡಿ, ಹತ್ತಿರದಲ್ಲಿದ್ದ ನಮ್ಮೂರ ಹೊಂಡದಿAದ ನೀರು ತಂದು ಸೊಪ್ಪು, ಮೂಲಂಗಿ ಮತ್ತಿತರ ತರಕಾರಿ ಬೆಳೆಯುತ್ತಿದ್ದೆವು. ಅವುಗಳನ್ನು ಕಿತ್ತು ಊರಲ್ಲಿ ಮಾರಿ ಬಂದ ಹಣದಲ್ಲಿ ಶಾಲೆಗೆ ಬೇಕಾದ ಅಟ್ಲಾಸ್, ಗೆರೆ ಹಾಕಲು ಬೇಕಾಗುವ ರೂಲು ದೊಣ್ಣೆ ಮತ್ತು ಶಾಲೆಗೆ ಬೇಕಾದ ವಸ್ತುಗಳನ್ನು ಅಧ್ಯಾಪಕರು ತರುತ್ತಿದ್ದರು. ನಮ್ಮಲ್ಲೆ ಎರಡು ಗುಂಪು ಮಾಡಿ, ಯಾರು ಚೆನ್ನಾಗಿ ತರಕಾರಿ ಬೆಳೆಯುತ್ತಾರೆ ಎಂಬ ಸ್ಪರ್ಧೆ ಕೂಡಾ ಇರುತ್ತಿತ್ತು. ಆಗಿನ ಮೇಷ್ಟರನ್ನು ನೆನಪಿಸಿಕೊಂಡರೆ, ಕೃತಜ್ಞತೆಯ ಭಾವ ಒಸರುತ್ತದೆ. ಶಾಲೆಗೆ ಬರುವ ಮುನ್ನ ಸ್ವಚ್ಛತೆಯ ಬಗ್ಗೆ ಅವರು ನೀಡುತ್ತಿದ್ದ ಆಜ್ಞೆಗಳನ್ನು ಉಲ್ಲಂಘಿಸಿದರೆ ಏಟು ಬೀಳುತ್ತಿದ್ದವು. ಕೈ ಬೆರಳಿನ ಉಗುರು, ಮುಖ ತೊಳೆದು ವಿಭೂತಿ ಧರಿಸುವುದು, ತಲೆ ಮೇಲೆ ಸ್ವಚ್ಚವಾದ ಟೋಪಿ ಇವೆಲ್ಲದರ ಬಗ್ಗೆ ಗಮನಿಸುತ್ತಿದ್ದರು. ಬೆಳಿಗ್ಗೆ 8 ರಿಂದ 10 ಘಂಟೆಯವರೆಗೆ ಮತ್ತೆ ಮಧ್ಯಾಹ್ನ
3 ರಿಂದ ನಡೆಯುತ್ತಿದ್ದ ತರಗತಿಯ ಮಧ್ಯೆ ನಮ್ಮೂರ ಹತ್ತಿರದಲ್ಲಿಯೇ ಹರಿಯುತ್ತಿದ್ದ ಸೂಳೆಕೆರೆ ಹಳ್ಳದಲ್ಲಿ ಗುಂಪಾಗಿ ಹೋಗಿ ಈಜುತ್ತಿದ್ದೆವು. ಮತ್ತೆ ದಂಡೆಯಲ್ಲಿರುತ್ತಿದ್ದ ಬಿಸಿ ಮರಳಲ್ಲಿಗೆ ಬಂದು ಎದೆಗೆ ಮರಳವಚಿಕೊಂಡು ಕಾಲ ಕಳೆಯುತ್ತಿದ್ದೆವು. ಈ ರೀತಿಯಲ್ಲಿ ದಿನವೂ ಹಳ್ಳದಲ್ಲಿ ನಮಗೆ ಈಜಾಡುವುದರ ಬಗ್ಗೆ ಆಕ್ಷೇಪ ಮಾಡುತ್ತಿದ್ದ ಕೆಲವು ಮಕ್ಕಳ ತಂದೆ ತಾಯಂದಿರು ಶಾಲಾ ಮಾಸ್ತರಿಗೆ ಹೇಳಿ ಗದರಿಸಲು ಹೇಳಿದ ಕಾರಣ ನಾವು ದಿನವೂ ಹಾರಾಡುತ್ತಿದ್ದ ಹಳ್ಳದಲ್ಲಿನ ಆಟಗಳಿಗೆ ಮೇಷ್ಟರಿಂದಲೇ ಆಗಾಗ ಕಡಿವಾಣ ಬೀಳುತ್ತಿತ್ತು.

ಹೀಗೆ ನಡೆದ ಪ್ರಾಥಮಿಕ ಶಿಕ್ಷಣದಲ್ಲಿ ನನ್ನ ಸಹಪಾಠಿಗಳಾಗಿದ್ದ ಕಾಯಕದ ರುದ್ರಪ್ಪ, ಶಿವನಳ್ಳಿ ಗಂಗಾಧರ, ಹಲಸಬಾಳು ಜಟ್ಟಪ್ಪ, ದಾವಣಗೆರೆ ನಾಗರಾಜ, ಸಣ್ಣಮನಿ ಜಟ್ಟಪ್ಪ, ಜೋಗಪ್ಪರ ತಿಪ್ಪಣ್ಣ, ಪೂಜಾರ ರುದ್ರಪ್ಪ ಮತ್ತು ಹಾಗೇ ಮೂರು ನಾಲ್ಕು ಹೆಣ್ಣು ಮಕ್ಕಳಿದ್ದರು. ಅವರಲ್ಲಿ ನಮ್ಮೂರಿನವರನ್ನೇ ಮದುವೆಯಾಗಿ ಉಳಿದಿರುವ ದೊಡ್ಡಮನೆ ರ‍್ಯಾವಕ್ಕನನ್ನ ಬಿಟ್ಟರೆ ಉಳಿದವರು ಬೇರೆ ಊರುಗಳಿಗೆ ಮದುವೆಯಾಗಿ ಹೋಗಿ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ನನ್ನ ಸಹಪಾಠಿಗಳಲ್ಲಿ ನನ್ನ ಹೆಸರಿನ ಒಬ್ಬ ಕಾಯಕದ ರುದ್ರಪ್ಪ ಮಾತ್ರ ನನ್ನ ಜೊತೆ ವಿಶೇಷ ಸ್ನೇಹ ಬೆಳೆದಿತ್ತು. ಅವನೂ ನಾನು ಒಟ್ಟಿಗೆ ಪ್ರಾಥಮಿಕ ಶಾಲೆ ಮುಗಿಸಿದ ನಂತರವೂ ಸ್ನೇಹಿತರಾಗಿ ಉಳಿದಿದ್ದೆವು.

ಕಾಯಕದ ರುದ್ರಪ್ಪ ಮತ್ತು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಗಳಾಗಿದ್ದರೂ ಅವನು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಎರಡು ವರ್ಷಗಳ ಹಿಂದೆ ಬಿದ್ದುದರಿಂದ, ನಾನು ಎಂ.ಎ. ಮಾಡುವಾಗ ಆತನ ಬಿ.ಎ. ಪದವಿಯಲ್ಲಿನ ಒಂದೆರಡು ವಿಷಯಗಳನ್ನು ಇನ್ನೂ ಪೂರ್ಣಗೊಳಿಸಬೇಕಿತ್ತು. ಅವನ ಶ್ರಮ ಮತ್ತು ಶ್ರದ್ಧೆಗಳೆಷ್ಟೇ ಇದ್ದರೂ ಊರಲ್ಲಿದ್ದುಕೊಂಡು ಬಿ.ಎ. ಪೂರ್ಣಗೊಳಿಸಲು ಆಗಿರಲಿಲ್ಲ. ಊರಿಗೆ ಹೋದಾಗ ಅವನನ್ನು ಮೈಸೂರಿಗೆ ಕರೆ ತಂದು ಫೇಲಾದ ವಿಷಯಗಳಿಗೆ ಮನೆ ಪಾಠ ಹೇಳಿಸಿಕೊಂಡು ಪಾಸು ಮಾಡುವ ಬಗ್ಗೆ ಯೋಚಿಸಿದೆ. ಆದರೆ ಅವನನ್ನು ಮೈಸೂರಿಗೆ ಕರೆ ತಂದು ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಅದಕ್ಕಾಗಿ ಖರ್ಚಾಗುವ ಹಣವನ್ನು ಅವನಿಂದ ಭರಿಸಲು ಆಗದ ಮಾತಾಗಿತ್ತು. ಈ ಸಮಸ್ಯೆಯನ್ನು ಪರ‍್ವತಕ್ಕನ ಬಳಿ ಚರ್ಚಿಸಿದಾಗ ಅವರು ಒಂದು ಸಹಾಯದ ಹಸ್ತ ನೀಡಿದರು. ನನ್ನ ಸ್ನೇಹಿತನಿಗೆ ತಿಂಗಳಿಗೆ 300 ರೂಗಳ ಸಂಬಳದಂತೆ ಅವರ ಸಮಾಜಶಾಸ್ತ್ರ ವಿಭಾಗದಲ್ಲಿನ ಪ್ರಾಜೆಕ್ಟ್ನಲ್ಲಿ ಸಹಾಯಕನನ್ನಾಗಿ ನೇಮಿಸಿಕೊಳ್ಳಲು ಒಪ್ಪಿದರು.

ಅದೇನು ಅಷ್ಟು ಹೊರೆಯಾದ ಕೆಲಸವಲ್ಲದ ಕಾರಣ ಅದರ ಜೊತೆಗೆ ಇವರು ಬಿ.ಎ.ಯಲ್ಲಿ ಉಳಿದ ವಿಷಯಗಳ ಬಗ್ಗೆ ತಯಾರಿ ಮಾಡಿಕೊಳ್ಳುವುದು ಎಂದು ತೀರ್ಮಾನಿಸಿ ಅವನನ್ನು ಮೈಸೂರಿಗೆ ಪರ‍್ವತಕ್ಕನ ಮನೆಯ ಹತ್ತಿರದಲ್ಲೇ ರೂಂ ಮಾಡಿ ಉಳಿಸಿದೆನು. ಬಿಡುವಿನ ವೇಳೆಯಲ್ಲಿ ಪರ‍್ವತಕ್ಕನ ಮನೆಯಲ್ಲಿನ ಸಣ್ಣಪುಟ್ಟ ಕೆಲಸ ಕೂಡ ಮಾಡುತ್ತಾ ಪರೀಕ್ಷೆಗೆ ತಯಾರಿ ಮಾಡಿಕೊಂಡು ಫೇಲಾದ ವಿಷಯಗಳನ್ನು ಬರೆದು ಪಾಸು ಮಾಡಿದ. ನನಗೂ ಬಸವಣ್ಯಪ್ಪನಿಗೂ ಪ್ರಾರಂಭದ ದಿನಗಳಲ್ಲಿ ಪರ‍್ವತಕ್ಕನವರ ಮನೆಯಲ್ಲಿ ಹೊಂದಿಕೊಳ್ಳಲು ಹೆಣಗಾಡಿದಂತೆಯೇ ಈ ರುದ್ರಪ್ಪನಿಗೂ ದಿಗಿಲು ಮಾಡಿಕೊಂಡಿದ್ದ ಅವನಿಗೆ `ನಿನ್ನ ಪರೀಕ್ಷೆ ಮುಗಿಯುವ ತನಕ ಇದೆಲ್ಲ ಸಹಿಸಿಕೊಂಡು ಇರಬೇಕು’ ಎಂದು ಸಮಾಧಾನ ಹೇಳುತ್ತಿದ್ದೆ. ಅದರಂತೆ ಮೈಸೂರಲ್ಲಿ ಉಳಿದು ಪರೀಕ್ಷೆ ಬರೆದು ಊರಿಗೆ ಹೋದ.

ನಾನಿನ್ನೂ ನನ್ನ ಅಂತಿಮ ಎಂ.ಎ. ನಲ್ಲಿರುವಾಗಲೇ ಕಾಯಕದ ರುದ್ರಪ್ಪನನ್ನು ಬಿ.ಎ.ಯನ್ನಾದರೂ ಮುಗಿಸಿಕೊಳ್ಳಲಿ ಎಂಬ ಆಸೆ ನನ್ನಲ್ಲಿ ಮೂಡಿತ್ತು. ನಮ್ಮಿಬ್ಬರ ಶಾಲಾ ರಜಾ ದಿನಗಳಲ್ಲಿ ಊರಿನಲ್ಲಿರುವಾಗ ಇಬ್ಬರೂ ಒಟ್ಟಿಗೆ ಇದ್ದು ಅವರಿವರ ತೋಟಗಳಲ್ಲಿ ಕೆಲಸ ಮಾಡುವುದು ನಮಗೆ ಅಭ್ಯಾಸವಾಗಿತ್ತು. ಅದಕ್ಕೆಲ್ಲ ಅವನೇ ನನ್ನ ಗುರುವಾಗಿದ್ದ. ಎಲೆ ಕೊಯ್ಯುವುದು, ಬಳ್ಳಿಕಟ್ಟುವ ಕೆಲಸಗಳಿಗೆ ಮೊದಲಿನಿಂದಲೂ ನಮ್ಮೂರಿನಲ್ಲಿ ಬಹು ಬೇಡಿಕೆಯ ಕೆಲಸಗಳಾಗಿದ್ದವು. ಈಗ್ಯೆ 45-50 ವರ್ಷಗಳ ಹಿಂದೆ ನಾನು ಮತ್ತು ರುದ್ರಪ್ಪ ಇಬ್ಬರೂ ಬೆಳಿಗ್ಗೆ 7 ಘಂಟೆಗೆ ತೋಟಕ್ಕೆ ಹೋಗಿ 10 ಗಂಟೆಯ ವರೆಗೆ ಎಲೆ ಕೊಯ್ದು ಇಬ್ಬರೂ 3 ರೂಗಳನ್ನು ಸಂಪಾದಿಸಿ ನಂತರ 10 ರಿಂದ 5 ರವರೆಗೆ ಬಳ್ಳಿ ಕಟ್ಟಿ ಇಬ್ಬರೂ ತಲಾ 2 ರೂಗಳನ್ನು ಸಂಪಾದಿಸಿ ನಂತರ ಸಂಜೆ ತೆರೆದ ಬಾವಿಯಲ್ಲಿ ಈಜಾಡಿ, ಇಬ್ಬರಲ್ಲೂ ಇದ್ದ ಸೈಕಲ್ ಏರಿ ಮೂರು ಮೈಲು ದೂರದ ಹರಿಹರಕ್ಕೆ ಹೋಗಿ ಕಾರ ಮಂಡಕ್ಕಿ ತಿನ್ನುತ್ತಿದ್ದೆವು. ಅಲ್ಲಿಗೆ ನಮಗೆ ನಾಟಕ ಕಲಿಸುತ್ತಿದ್ದ ರುದ್ರಪ್ಪ ಮಾಸ್ತರು ಕೂಡ ಬರುತ್ತಿದ್ದರು. ಅವರಿಗೆ ನಾವಿಬ್ಬರೂ ಮತ್ತು ಅವರೊಡನೆ ಇದ್ದವರಿಗೆ ಚಾ ಕುಡಿಸಿ ಎಲೆ ಅಡಿಕೆ ಕೊಡಿಸಿ ಕಳಿಸಿದ ನಂತರ ಸಂಜೆ ನಾಟಕ ಕಲಿಯಲು ಊಟ ಮಾಡಿ ಸೇರುತ್ತಿದ್ದೆವು. ಬಹು ಶ್ರಮದಿಂದ ಕಲಿತ ನಾಟಕವನ್ನು ಹೆಚ್.ಎನ್. ಹೂಗಾರ್ ಅವರ `ಕೊಂಡು ತಂದ ಗಂಡ’ವನ್ನು ತಿಂಗಳಾನುಗಟ್ಟಲೆ ಅಭ್ಯಾಸ ಮಾಡಿದ್ದನ್ನು ಬಿಟ್ಟರೆ ಅದನ್ನು ಬಣ್ಣ ಹಚ್ಚಿ ಪ್ರದರ್ಶನ ಮಾಡಲಾಗಲಿಲ್ಲ. ಅದಕ್ಕೆ ಪ್ರಮುಖ ಹೆಣ್ಣು ಪಾತ್ರದಲ್ಲಿದ್ದ ಕೆ. ರುದ್ರಪ್ಪ ಮೈಸೂರಿನಿಂದ ಬಂದು ರಜೆಯಲ್ಲಿ ಊರಲ್ಲಿರುವಾಗಲೇ ಅದಾವ ಮಾಯದ ಕಾಯಿಲೆಯೋ ಬಂದು 2-3 ದಿನಗಳಲ್ಲಿ ತೀರಿಹೋಗಿದ್ದ.

ಬಾಲ್ಯದ ನನ್ನೂರ ಸ್ನೇಹಿತರಲ್ಲಿ ಕಾಯಕದ ರುದ್ರಪ್ಪ ನನಗೆ ಅನೇಕ ವಿಷಯಗಳಲ್ಲಿ ಗುರುವಾಗಿದ್ದ. ಅವನು ತೀರಿಹೋಗಿ 50 ವರ್ಷಗಳೇ ಕಳೆದಿದ್ದರೂ ಅವನೊಡನೆ ಶಾಲೆಯಲ್ಲಿ, ತೋಟಗಳಲ್ಲಿ, ಈಜಾಡುವ ಹಳ್ಳದಲ್ಲಿ ಜೊತೆಗೆ ಇಬ್ಬರೂ ಸೇರಿ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಸ್ವಂತ ಖರ್ಚಿಗಾಗಿ ಬೇರೆಯವರ ತೋಟದಲ್ಲಿ, ಕೂಲಿ ಮಾಡುತ್ತ ಇದ್ದೆವು. ಶಾಲೆಯ ಅವಧಿ ಮುಗಿದು ಬಿಡುವಿನ ಸಮಯದಲ್ಲಿ ಸಗಣಿ ಗುಡ್ಡೆ ಹಾಕಿ, ಸಣ್ಣ ತಿಪ್ಪೆ ಮಾಡಿ ನಂತರ ಬೇರೆಯವರಿಗೆ ಅದನ್ನು ಮಾರಿ ಹಣ ಗಿಟ್ಟಿಸುತ್ತಿದ್ದೆವು. ಇದೆಲ್ಲ ನಾವು ಮುಂದೆ ಹೈಸ್ಕೂಲಿನ ನಂತರ ಓದಿನವರೆಗೆ ಹಾಗೆಯೇ ಮುಂದುವರಿದಿತ್ತು.
ಕಾಯಕದ ರುದ್ರಪ್ಪನ ಬಗ್ಗೆ ನನ್ನ ಮನಸ್ಸಿನಲ್ಲಿ ಆಗಾಗ ಮರೆಯಲಾಗದ ಘಟನೆಗಳು ಮರುಕಳಿಸಿ ಆ ಕಾಲಮಾನಕ್ಕೆ ಹೊತ್ತೊಗೆಯುತ್ತಿರುತ್ತದೆ. ಅವನ ಜಾತಿ ಲಿಂಗಾಯತರಲ್ಲಿನ ಕ್ಷೌರಿಕರದು. ನಮ್ಮೂರಲ್ಲಿಯೇ ಕ್ಷೌರಿಕ ವೃತ್ತಿ ಮಾಡುತ್ತಾ ಅವರ ತಂದೆತಾಯಿ ಮತ್ತು ಸಹೋದರರು ಹಾಯಾಗಿದ್ದವರು. ಅದ್ಯಾವುದೋ ಕಾಲಘಟ್ಟದಲ್ಲಿ ಲಿಂಗಾಯತರಲ್ಲಿನ ಒಳ ಪಂಗಡಗಳ ಜಗಳ ಶುರುವಾಗಿ ಇವನ ತಂದೆ ಮತ್ತು ಹಿರಿಯ ಅಣ್ಣಂದಿರನ್ನು ನಮ್ಮೂರಿನ ಕ್ಷೌರಿಕ ಕೆಲಸದಿಂದ ಬಿಡಿಸಿಬಿಟ್ಟರು. ಆಗ ಅವರ ತಂದೆ ಮತ್ತು ಇಬ್ಬರು ಹಿರಿಯ ಅಣ್ಣಂದಿರು ಪಕ್ಕದ ಊರುಗಳಿಗೆ ಕ್ಷೌರಿಕ ಕೆಲಸ ಮಾಡಲು ಬೆಳಗಿನ ಜಾವದಲ್ಲಿ ಎದ್ದು ಹೋಗುತ್ತಿದ್ದರು. ಊರ ಕೆಲಸ ಮಾಡಿಕೊಂಡು ಹಾಯಾಗಿದ್ದ ಅವರಿಗೆ ಆರ್ಥಿಕ ಮುಗ್ಗಟ್ಟು ಬಂದು ಅವರ ತಾಯಿ ಮತ್ತು ಅಕ್ಕ ತಂಗಿಯರೂ ದಿನ ಕೂಲಿ ಕೆಲಸ ಮಾಡುವಂತಾಗಿತ್ತು. ನನ್ನ ಬಾಲ್ಯದ ಸಹಪಾಠಿ ಅನೇಕರಲ್ಲಿ ಕಾಯಕದ ರುದ್ರಪ್ಪ ಮಾತ್ರ ಪ್ರೈಮರಿಯ ನಂತರವೂ, ನಾನು ಬೇರೆ ಬೇರೆ ಊರುಗಳಲ್ಲಿ ಅಭ್ಯಾಸ ಮಾಡುತ್ತಿದ್ದರೂ ಊರಿಗೆ ಬಂದಾಕ್ಷಣ ಸೇರಿಕೊಂಡು ಊರಿನಲ್ಲಿಯೇ ಕಬಡ್ಡಿ, ಕೀಳಾಪಟ್ಟಿ ಮತ್ತಿತರ ಆಟಗಳಲ್ಲಿ ಊರ ಇತರೆ ಹುಡುಗರ ಜೊತೆ ಆಡುತ್ತಿದ್ದೆವು. ಕಬಡ್ಡಿ ಆಡುವ ಸಮಯದಲ್ಲಿ ಆಡುತ್ತಾ ನಾನು ಕಾಲಿನಿಂದ ಲಿಂಗಾಯತರ ಹುಡುಗನಿಗೆ ತಾಗಿಸಿದ್ದಕ್ಕೆ ಚಲುವಾದಿಯವನು ಲಿಂಗಾಯತ ಹುಡುಗನಿಗೆ ಕಾಲು ತಾಗಿಸಬಹುದೆ ಎಂಬ ತಗಾದೆ ಶುರುವಾಗಿ ಗುಡಿ ಮುಂದೆ ಸಣ್ಣ ಜಗಳವಾಗಿತ್ತು. ಆಗ ಅಪ್ಪ ಬಂದು ಊರ ಮುಂದಿನ ಲಿಂಗಾಯತರ ಜೊತೆ ಆಟವಾಡಲು ಹೋಗಬೇಡವೆಂದೂ ಬೇರೆ ಊರುಗಳಲ್ಲಿ ಎಲ್ಲರ ಜೊತೆ ಇದ್ದಂತೆ ನಮ್ಮ ಊರುಗಳಲ್ಲಿ ಇರಲಾಗುವುದಿಲ್ಲ ಎಂದು ತಿಳಿ ಹೇಳಿದ್ದರು. ಆಗ ನನಗೆ ನನ್ನ ಜಾತಿಯ ಹಿನ್ನೆಲೆ ಅರ್ಥವಾಗುತ್ತಾ ಹೋಯಿತು. ಆದರೂ ನನಗೆ ನಾಲ್ಕನೇ ತರಗತಿಯವರೆಗೆ ಊರಿನಲ್ಲಿಯೇ ಓದಿದ್ದರೂ ನನ್ನ ಸಹಪಾಠಿಗಳೆಲ್ಲರೂ ಲಿಂಗಾಯತರಾಗಿದ್ದು, ಅವರಿಗೂ ಅಂತಹ ತಾರತಮ್ಯ ಬದುಕು ಇನ್ನೂ ಅರ್ಥವಾಗದ ದಿನಗಳಾಗಿದ್ದವು.

ನನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಹರಿಹರದ ಸರ್ಕಾರಿ ಕನ್ನಡ ಬಾಲಕರ ಮಾಧ್ಯಮಿಕ ಶಾಲೆಯಲ್ಲಿ ಐದನೇ ತರಗತಿಗೆ ಸೇರಿದೆ. ನನ್ನ ಇತರೆ ಸಹಪಾಠಿಗಳಲ್ಲಿ ಕೆಲವರು ಪಕ್ಕದ ಗ್ರಾಮ ಬೆಳ್ಳೂಡಿಗೂ ಉಳಿದ ಒಂದಿಬ್ಬರು ಹರಿಹರದಲ್ಲಿ ಇತರೆ ಖಾಸಗಿ ಶಾಲೆಗಳಿಗೆ ಸೇರಿಕೊಂಡಿದ್ದರು. ನನ್ನ ಮಾಧ್ಯಮಿಕ ಶಾಲೆಯ ಓದಿನ ಕಾರಣಕ್ಕಾಗಿ ಊರಿನಿಂದ ಹರಿಹರಕ್ಕೆ ದಿನವೂ ಮೂರು ಮೈಲುಗಳ ಓಡಾಟ ಶುರುವಾಯಿತು. ಹರಿಹರದಲ್ಲಿದ್ದ ಸರ್ಕಾರಿ ಹಾಸ್ಟೆಲ್‌ಗೆ ನಾನು ಹತ್ತಿರದ ಊರಿನವನು ಎನ್ನುವ ಕಾರಣದಿಂದ ಮೊದಲು ಸೀಟು ಸಿಗಲಿಲ್ಲ. ಹಾಗಾಗಿ ದಿನವೂ ರೊಟ್ಟಿಯನ್ನು ಕಟ್ಟಿಕೊಂಡು ಐದನೇ ತರಗತಿಗೆ ಊರಿನಿಂದ ಸುಮಾರು ಮೂರು ತಿಂಗಳು ಓಡಾಡುತ್ತಿದ್ದೆ. ಇದೇ ಸಮಯಕ್ಕೆ ನನ್ನ ಅಕ್ಕನ ಗಂಡ ಭಾವ ಕೆಂಚಪ್ಪನವರಿಗೆ ದಾವಣಗೆರೆಯಲ್ಲಿ ಎರಡನೇ ದರ್ಜೆ ಗುಮಾಸ್ತನ ಕೆಲಸ ಸಿಕ್ಕಿತ್ತು. ಅವರು ಹರಿಹರದವರೇ ಆಗಿದ್ದ, ಮಾಜಿ ಸಚಿವರಾದ ಬಿ. ಬಸವಲಿಂಗಪ್ಪನವರ ಸಹೋದರ. ಹರಿಹರ ಪುರಸಭೆಯ ಕೌನ್ಸಿಲರ್ ಆಗಿದ್ದ ಗುರುಬಸಪ್ಪನವರ ಶಿಫಾರಸಿನಿಂದ ನನಗೆ ಹಾಸ್ಟೆಲ್‌ಗೆ ಸೀಟು ಸಿಕ್ಕಿತ್ತು. ಹಾಸ್ಟೆಲ್ ಜೀವನ ನನಗೆ ಹೊಸ ಪ್ರಪಂಚವನ್ನೇ ತೆರೆದಿಟ್ಟಂತಾಗಿತ್ತು.

ಹರಿಹರದಲ್ಲಿನ ಐದನೇ ತರಗತಿಯ ಓದು ಜೊತೆಗೆ ಅಪ್ಪ ಅವ್ವ ಅಣ್ಣ ತಂಗಿಯರ ಬಿಟ್ಟು ಜೊತೆಗೆ ಊರ ಸಂಪರ್ಕವಿಲ್ಲದೆ ಅಪರಿಚಿತ ಹುಡುಗರ ಜೊತೆ ಒಬ್ಬನೇ ಇರುವುದನ್ನು ನೆನಸಿಕೊಂಡು ಆಗ ಅಳು ಬರುವಂತಾಗಿತ್ತು. ಅದೇನೋ ಅಪ್ಪನ ಪ್ರೀತಿಯ ಮಾತುಗಳು ಓದಿನ ಬಗ್ಗೆ ಅವನಿಗಿದ್ದ ಆಸಕ್ತಿ ನನ್ನನ್ನು ಹಾಸ್ಟೆಲ್‌ನಲ್ಲಿ ಇರುವಂತೆ ಮಾಡಿತ್ತು. ಎಷ್ಟೋ ದೂರದ ಹುಡುಗರೆಲ್ಲ ಇದ್ದಾರೆ. ನಿನಗೆ ಹತ್ತಿರದ ನಮ್ಮೂರೇನು ದೂರವೇ ಎಂದು ಅಪ್ಪ ಸಮಾಧಾನ ಹೇಳಿದ್ದ.

ಆಗ ಹಾಸ್ಟೆಲ್‌ನಲ್ಲಿ ಎರಡೊತ್ತಿನ ಊಟ ಬಿಟ್ಟರೆ ಬೇರೇನೂ ವ್ಯವಸ್ಥೆ ಇರಲಿಲ್ಲ. ಅಲ್ಲಿನ ಅಡಿಗೆ ಭಟ್ಟರಾಗಿದ್ದ ವೆಂಕಣ್ಣನ ಪರಿಚಯವನ್ನು ಅಪ್ಪ ಮಾಡಿಕೊಂಡು ನನ್ನ ಬಗ್ಗೆ `ದೇಕರಿಕೆ’ ಮಾಡಲು ಅವರನ್ನು ಕೋರಿದ್ದ. ವೆಂಕಣ್ಣ ಸೊಗಸಾಗಿ ಅಡುಗೆ ಮಾಡುವುದರ ಜೊತೆ ಅಸಾಧ್ಯ ಎಲೆ ಅಡಿಕೆ ಪ್ರಿಯ. ಅಪ್ಪ ಬಂದಾಗಲೆಲ್ಲ ಎರಡು ಮೂರು ಕವಳಿಗೆ ಸೊಗಸಾದ ಎಲೆ ತಂದು ಕೊಡುತ್ತಿದ್ದ. ನನ್ನ ಖರ್ಚಿಗಾಗಿ ಮೂರು ನಾಲ್ಕು ರೂಪಾಯಿಗಳನ್ನು ಅಡಿಗೆ ವೆಂಕಣ್ಣನಿಗೆ ಕೈಗೆ ಕೊಟ್ಟು ಹಸಿವಾದಾಗ ಏನಾದರು ಕೊಂಡು ತಿನ್ನಲು ನನಗೆ ಕೊಡಲು ಹೇಳಿದ್ದ. ಬೆಳಿಗ್ಗೆ 9ಕ್ಕೆ ಉಂಡು ಶಾಲೆಗೆ ಹೋದರೆ ಸಾಯಂಕಾಲ ನಾಲ್ಕಕ್ಕೆ ವಾಪಸ್ ಬಂದಾಗ ಹಸಿವು ಕಾಡುತ್ತಿತ್ತು. ಆಗ ವೆಂಕಣ್ಣನ ಬಳಿ ಚಿಲ್ಲರೆ ಕಾಸನ್ನು ಪಡೆದು ಕಡ್ಲೆ ಬೆಲ್ಲ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ವೆಂಕಣ್ಣ ಅಪ್ಪ ಕೊಟ್ಟ ಹಣವನ್ನು ಬಳಸಿಕೊಂಡು ದುಡ್ಡಿಲ್ಲದಿದ್ದಾಗ ಹಣ ಕೇಳಿದರೆ ನಾಲ್ಕು ಐದು ಗಂಟೆಗೇನೆ ಅಡುಗೆ ಮಾಡಿಟ್ಟಿದ್ದ ಅವನು ‘ಅನ್ನಸಾರು ಹಾಕಿ ಕೊಡುವೆ, ಅಡುಗೆ ಮನೆಯಲ್ಲಿಯೇ ಕೂತು ಉಣ್ಣು’ ಎಂದು ಹೇಳುತ್ತಿದ್ದ. ಒಂದೆರಡು ಬಾರಿ ಊಟ ಮಾಡಿದ ನಂತರ ನನಗೆ ಎಲ್ಲರ ಕಣ್ಣು ತಪ್ಪಿಸಿ ಉಣ್ಣೋ ಊಟದ ಬಗ್ಗೆ ನನಗೆ ಬೇಸರವಾಗಿ ಅಪ್ಪನಲ್ಲಿ ಹೇಳಿಕೊಂಡೆ. ಆಗ ಅಪ್ಪ ಊರಿನಿಂದ ರೊಟ್ಟಿ ಚಟ್ನಿಪುಡಿಗಳನ್ನು ಗಂಟು ಕಟ್ಟಿ ತಂದು ಕೊಡುತ್ತಿದ್ದ. ತಂದು ಕೊಟ್ಟ ರೊಟ್ಟಿಯಲ್ಲಿ ತಿಂದುಳಿದದ್ದನ್ನು ನನ್ನ ಟ್ರಂಕಿನಲ್ಲಿಟ್ಟರೆ ಹಸಿದ ಹೆಬ್ಬುಲಿಯಂತಿದ್ದ ನನ್ನ ಹಿರಿಯ ಸಹಪಾಠಿಗಳು ಒಂದೇ ದಿನದಲ್ಲಿ ಖಾಲಿ ಮಾಡುತ್ತಿದ್ದರು. ಹಾಗೂ ಹೀಗೂ ಮಾಡಿ ಐದನೇ ತರಗತಿ ಪೂರೈಸೋ ಸಮಯಕ್ಕೆ ನನ್ನ ಅಕ್ಕ ಭಾವ ದಾವಣಗೆರೆಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದವರಿಗೆ ಶಿವಮೊಗ್ಗ ಜಿಲ್ಲೆ ಸಾಗರಕ್ಕೆ ವರ್ಗವಾಗಿತ್ತು. ಅವರಿಗೂ ಮದುವೆಯಾಗಿ ಆಗಷ್ಟೆ ಒಬ್ಬ ಮಗಳು ಹುಟ್ಟಿದ್ದಳು. ಅದು ಯರ‍್ಯಾರು ತೀರ್ಮಾನಿಸಿದರೋ ಅಂತು ನಾನು ನನ್ನ ಆರನೇ ತರಗತಿಯ ಓದು ಮುಂದುವರೆಸಲು ಸಾಗರದಲ್ಲಿನ ಮಾಧ್ಯಮಿಕ ಶಾಲೆಗೆ ಸೇರಿಕೊಂಡೆ. ಅಕ್ಕ ಭಾವನ ಮನೆಯಲ್ಲಿ ಮಾಧ್ಯಮಿಕ, ಹೈಸ್ಕೂಲ್, ಪಿಯುಸಿ ಮತ್ತು ಪ್ರಥಮ ಬಿ.ಎ. ವರೆಗೆ ಅಂದರೆ ಸುದೀರ್ಘ 8 ವರ್ಷಗಳವರೆಗೆ ಸಾಗರದಲ್ಲಿ ಅಕ್ಕನ ಮನೆಯಲ್ಲಿ ನನ್ನ ಓದು ಸರಾಗವಾಗಿ ಮುಂದುವರೆದಿತ್ತು.

ಮುಂದುವರಿಯುವುದು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending