ಭಾವ ಭೈರಾಗಿ
ಅಮ್ಮನಿಗೂ ಚೂರು ಅಟೆನ್ಷನ್ ಕೊಡಬಹುದಾ?
ನಿನಗ್ಯಾಕಮ್ಮ? ಇದೆಲ್ಲ ನಿನಗೆ ಅರ್ಥವಾಗಲ್ಲ ಸುಮ್ಮನಿರು… ನಾವು ನೀವು ಸೇರಿದಂತೆ ಬಹುತೇಕ ಮಕ್ಕಳು ಅವರಮ್ಮ ಕೇಳುವ ಎಲ್ಲಾ ಪ್ರಶ್ನೆಗಳಿಗೆ ನೀಡುವ ಕಾಮನ್ ಉತ್ತರ ಇದು.
ಹೌದು ಅವಳಿಗೇನು ತಿಳಿಯುತ್ತೆ ಅಲ್ವಾ, ಟೈಮ್ ಟು ಟೈಮ್ ಅಡುಗೆ ಮಾಡೋದು, ಮನೆಯವರನ್ನೆಲ್ಲ ಕರೆದು ಬಡಿಸೋದು ನೀವು ಬೇಡ ಅಂದ್ರು ನಿಮ್ಮಿಂದ ಬೈಸಿಕೊಂಡಾದರೂ ನಿಮಗೆ ತಿನ್ನಿಸೋದು ಇಷ್ಟೆ ತಾನೆ ಅವಳಿಗೆ ಗೊತ್ತಿರೋದು. ಮನೆಯವರೆಲ್ಲ ಹಬ್ಬ ಮಾಡ್ತಿದ್ರೆ ಅವಳು ಅದೇನು ಮಾಡ್ತಿರ್ತಾಳೋ ಯಾರು ಗಮನಿಸಿರಲ್ಲ, ಅಸಲಿಗೆ ಅವಳು ಅಡುಗೆಗೆ ತರಕಾರಿ ಹೆಚ್ಚೋದು ಒಬ್ಬಳೆ ಕಷ್ಟ ಪಟ್ಟು ಅಡುಗೆ ಮಾಡೋದು ಕೊನೆಗೆ ಸರಿಯಾದ ಸಮಯಕ್ಕೆ ನಮಗೆಲ್ಲ ತಂದು ಬಡಿಸೋದು ಮಾಡ್ತಿರ್ತಾಳೆ.
ಅದಾದ ನಂತರ ಮತ್ತೆ ನಾವು ಎಂಜಾಯ್ ಮಾಡೋ ದಾರಿ ಯಾವುದು ಅಂತ ಹುಡುಕುವ ಸಮಯಕ್ಕೆ ಅವಳು ಪಾತ್ರೆ ತೊಳೆದು ನೀರು ತುಂಬಿಸಲು ಓಡಾಡ್ತಿರ್ತಾಳೆ. ಅವಳಿಗೆ ಹಬ್ಬಕ್ಕಾಗಿ ಕಾಯಲು ಇರುವ ಒಂದೇ ದಾರಿ ಅಂದ್ರೆ ಮಕ್ಕಳನ್ನೆಲ್ಲಾ ಒಮ್ಮೆ ನೋಡಿಬಿಡಬಹುದಲ್ಲ ಎಂಬ ಆಸೆ ಅಷ್ಟೆ.
ನೆನಪಿದ್ಯಾ ನಿಮಗೆ ಅವತ್ತು ನಾವಿನ್ನು ಚಿಕ್ಕವರಾಗಿದ್ವಿ, ಇದೇ ಹಬ್ಬಗಳು ಆಗ ಬಂದ್ರೆ ಅಮ್ಮ ಹೊಸ ಬಟ್ಟೆ ತರಲು ಹಣ ಹೊಂದಿಸುವ ಬಗ್ಗೆ ಚಿಂತಿಸ್ತಿದ್ಲು. ಅದು ಅವಳಿಗಾಗಿ ಅಲ್ಲ ನಮಗಾಗಿ. ಅವತ್ತು ನೀನು ಹೊಸ ಬಟ್ಟೆ ತಗೊಳಮ್ಮಾ ಅಂತ ಹೇಳುವಷ್ಟು ನಾವಿನ್ನು ಬೆಳದಿರಲಿಲ್ಲ. ಇವತ್ತು ಬೆಳೆದಿದ್ರೂ ಹೇಳಲ್ಲ. ಒಂದು ವೇಳೆ ನಾವು ಹಾಗೆ ಕೇಳಿದ್ರು ಅವಳು ಹೇಳ್ತಿದ್ದ ಉತ್ತರ ನನಗ್ಯಾಕಪ್ಪಾ ತುಂಬಾ ಇದಾವೆ, ನೀನು ಚೆನ್ನಾಗಿರ್ಬೇಕು ಅಷ್ಟೆ ಅಂತ ಹೇಳ್ತಿದ್ಲು. ಹೀಗೆ ಅವಳು ನಂದಿನ್ನೇನು ನನ್ನ ಮಗ ಚೆನ್ನಾಗಿರಬೇಕು ಅಂತ ನಮಗಾಗಿ ತನ್ನ ಖುಷಿಗಳನ್ನ ತ್ಯಾಗ ಮಾಡುವಾಗ ಅವಳಿಗೆ ವಯಸ್ಸೆಷ್ಟಾಗಿತ್ತು ಗೊತ್ತಾ, ಕೇವಲ ಇಪ್ಪತ್ತೈದರಿಂದ ಮುವತ್ತು. ಅಂದರೆ ಯಾವ ವಯ್ಯಸ್ಸನ್ನ ನಾವೆಲ್ಲ ಎಂಜಾಯ್ ಮಾಡೋಕೆ ಸರಿಯಾದ ವಯಸ್ಸು ಅಂತ ಸುತ್ತುತ್ತಿದ್ದೇವೋ ಅದೇ ವಯಸ್ಸು.
ಹೌದು ಅವಳಿಗೇನು ಗೊತ್ತಾಗುತ್ತೆ ಅಲ್ವಾ,,, ಓದಿರೋದು ಅಷ್ಟಕ್ಕಷ್ಟೆ, ಫೀಲಿಂಗ್ಸ್ ಅಂತು ಅರ್ಥವಾಗೋ ವಯಸ್ಸಲ್ಲ. ಆದರೆ ಇದೇ ಇಪ್ಪತ್ತೈದು , ಮೂವತ್ತು ವರ್ಷಗಳ ಹಿಂದೆ ನಮಗೇನು ಗೊತ್ತಾಗ್ತಿತ್ತು. ತೀರಾ ಮರ,ಗಿಡ, ಬಸ್ಸು, ವಿಮಾನಗಳನ್ನ ನೋಡಿ ಅಮ್ಮ ಅದೇನು ಅಂತ ಕೇಳುವ ಮಟ್ಟದಲ್ಲಿದ್ವಿ. ಅಮ್ಮ ನಮಗೆ ಊಟ ಮಾಡು ಅಂದಾಗ ಮಾಡದೇ ಇದ್ರೆ ಏನಾಗುತ್ತೆ ಅಂತ ಕೇಳುವಷ್ಟು ದಡ್ಡರಾಗಿದ್ವಿ. ಗೊತ್ತಿರಲಿ ಗೆಳೆಯರೆ ಅವತ್ತೆಲ್ಲ ಅಮ್ಮ ಅದನ್ನು ನಮಗೆ ವಿವರಿಸ್ಲಿಕ್ಕೆ ಬೇಜಾರೇ ಮಾಡಿಕೊಂಡಿರಲಿಲ್ಲ. ಇದಕ್ಕೆ ಕೆರೆ ಅಂತಾರೆ ಇಲ್ಲಿ ತಗ್ಗಿರೋದರಿಂದ ಇಲ್ಲಿ ನೀರು ತುಂಬಿಕೊಳ್ಳುತ್ತೆ, ಮಳೆಯಲ್ಲಿ ನೆನೆದರೆ ನಿನಗೆ ಹುಷಾರು ತಪ್ಪತ್ತೆ.
ದೀಪ ಮುಟ್ಟಿದರೆ ಕೈಸುಡುತ್ತೆ ಅಂತೆಲ್ಲ ತಾಳ್ಮೆಯಿಂದ ಹೇಳಿಕೊಟ್ಟ ಅವಳಿಗೆ ನಾವು ಇವತ್ತು ಹೇಳೋ ಒಂದೇ ಮಾತು ನಿನಗೇನು ಗೊತ್ತಾಗಲ್ಲಮ್ಮ ಅಂತ.
ಅಸಲಿಗೆ ನಮಗೆ ಅಂತನೇ ಕೆಲವು ದಿನಗಳಿವೆ. ನಮ್ಮ ಹುಟ್ಟುಹಬ್ಬದ ದಿನ, ಮದುವೆ ದಿನ, ಹೊಸವರ್ಷದ ದಿನ, ಹಬ್ಬ-ಜಾತ್ರೆಗಳಲ್ಲಿ ನಾವೆ ಸೆಂಟರ್ ಆಫ್ ಅಟ್ರಾಕ್ಷನ್. ಅಮ್ಮ ಯಾವಾಗಲೂ ಸೈಡ್‍ಲೈನ್. ಅವಳು ಹುಟ್ಟಿರೋದೇ ಸೈಡ್ ಲೈನ್ ನಲ್ಲಿರೋಕೆ ಅಂದುಕೊಂಡಿದ್ದೇವೆ, ಅವಳಿಗೂ ಒಂದು ಮನಸಿದೆ. ಆಸೆ ಆಕಾಂಕ್ಷೆಗಳು ಅವಳಲ್ಲೂ ಇರಬಹುದು ಅನ್ನೋ ಸಣ್ಣ ಯೋಚನೆಯನ್ನೂ ನಾವು ಯಾವತ್ತೂ ಮಾಡಿಲ್ಲ.
ಅವಳ ಹುಟ್ಟು ಹಬ್ಬ ಯಾರಿಗಾದರೂ ನೆನಪಿದ್ಯಾ,,, ಅಜ್ಜಿ ಹತ್ರ ಕೇಳಿದ್ರೆ ಅದೇ ನಮ್ಮೂರಲ್ಲಿ ದೊಡ್ಡ ಕಾಲರ ಬಂದಿತ್ತಲ್ಲ ಅವಾಗ ಹುಟ್ಟಿದ್ಲು, ಇಂದಿರಾಗಾಂಧಿ ಚಿಕ್ಕಮಗಳೂರಲ್ಲಿ ಎಲೆಕ್ಷನ್ ನಿಂತಾಗ ನಿಮ್ಮಮ್ಮ ಹುಟ್ಟಿದ್ದು, ಪ್ಲೇಗ್ ಬಂದು ಊರಿಗೂರೆ ಸತ್ತಾಗ ನಿಮ್ಮಮ್ಮನ ಬಾಣಂತಿ ನಾನು ಅಂತ ಬೇರೆ ಬೇರೆ ಕತೆ ಹೇಳ್ತಾರೆ. ಅಲ್ಲಿಗೆ ಅಮ್ಮನ ಬರ್ತಡೆ ಕತೆ ಮುಗಿದೋಯ್ತು. ಮದುವೆಯಂತು ಆ ಬಡತನದಲ್ಲಿ ಹೇಗೆ ಆಯ್ತು ಅಂತ ಯಾರಿಗೂ ಗೊತ್ತಿಲ್ಲ. ಅಲ್ಲಿಗೆ ನಾವು ಹುಟ್ಟಿದ್ವಿ, ಅಲ್ಲಿಂದ ಅವರ ಜೀವನ ಜೀವ ಎರಡೂ ನಾವೆ. ಅವಳ ಕನಸುಗಳೆಲ್ಲ ನಮ್ಮ ಮೇಲೆಯೇ ಕಟ್ಟಿದವಾಗಿವೆ, ಆದರೆ ಇವತ್ತು ನಾವು ಏನಾದರೂ ಸಾಧಿಸಿದ್ರೆ ಹೇಳೋ ಮಾತು ನಮಗ್ಯಾರು ಸಪೋರ್ಟ್ ಮಾಡೋರಿರಲಿಲ್ಲ, ನಮ್ಮಪ್ಪ ಅಮ್ಮನಿಗೆ ಏನು ತಿಳಿಯಲ್ಲ ಅಂತ. ನಮ್ಮನ್ನ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸೇರಿಸಿಲ್ಲ ನಿಜ ಆದರೆ ನಾವು ಹೋಗೋ ಸರ್ಕಾರಿ ಶಾಲೆಗೆ ಬಿಷಪ್ ಕಾಟನ್ ಲೆವೆಲ್ ಗೆ ಕನಸು ಕಾಣ ್ತದ್ಲು. ಅಸಲಿಗೆ ಜಗತ್ತಿನ ಶಿಕ್ಷಣ ಪದ್ದತಿಗಳೆಲ್ಲ ಹೀಗೇ ಇರೋದು ಅಂತ ಅವಳು ನಂಬಿದ್ಲು.
ಇಷ್ಟೆಲ್ಲ ಮಾಡಿದ ನಂತರವೂ ಅವಳು ಕನಸು ಕಂಡ ಆ ದಿನಗಳು ಬಾರಲೇ ಇಲ್ಲ. ಮಕ್ಕಳು ದೊಡ್ಡವರಾದ್ರೆ ಕಷ್ಟ ಎಲ್ಲಾ ತೀರುತ್ತೆ ಅನ್ನೋ ಅವಳ ಕನಸು ಮಣ್ಣಾಯ್ತು ಯಾಕಂದ್ರೆ ನಾವು ಟ್ರಿಪ್ ಹೋಗುವಾಗ ಅವಳಿದ್ರೆ ನಮಗೆ ಕಿರಿಕಿರಿ, ಎಂಜಾಯ್ ಮಾಡೋಕೆ ಬರಲ್ಲ ಅವಳಿಗೆ. ಮನೆಯಲ್ಲೋ ಅವಳಿದ್ರೆ ನಮ್ಮ ಪ್ರೈವೆಸಿಗೆ ಧಕ್ಕೆಯಾಗಬಹುದು. ಅವಳಿಗೆ ಏನಾದ್ರು ಕೊಡಿಸೋಣ ಅಂದ್ರೆ ನಮಗೆ ಗೆಳೆಯರಿಗೆ ಕೊಡೋಕೆ ಟೈಮಿಲ್ಲ ಅವಳಿಗ್ಯಾವಾಗ ಕೊಡೋದು. ನಿನ್ನೆ ಮೊನ್ನೆ ಪರಿಚಯವಾದ ಗೆಳೆಯನಿಗೆ ದಿನಕ್ಕೆ ಮೂರುಬಾರಿ ಕರೆ ಮಾಡ್ಲೇಬೇಕು, ಅವಳೊಬ್ಬಳು ಪದೇ ಪದೇ ನೆನಪಾಗ್ತಾಳೆ ಅವಳ ಮಾತು ಕೇಳದಿದ್ರೆ ನಿದ್ರೆ ಬರಲ್ಲ ಅದಕ್ಕೆ ಗೆಳತಿಯೊಬ್ಬಳಿಗೆ ಕರೆ ಮಾಡದೇ ನಾವು ಮಲಗೋದೆ ಇಲ್ಲ. ಆದರೆ ಇಷ್ಟೆಲ್ಲದರ ನಡುವೆ ಅಮ್ಮನಿಗೆ ಯಾವಾಗ ಕಾಲ್ ಮಾಡೋದು. ಯಾವಾಗ ಗಿಫ್ಟ್ ಕೊಡಿಸೋದು.
ಎಂಥಾ ಪಾಪ ಅಲ್ವ ಅವಳು. ಒಮ್ಮೆ ಮನಸಾರೆ ಹೇಗಿದ್ದೀಯಮ್ಮಾ ಅಂದ್ರೆ ಕರಗಿಬಿಡ್ತಾಳೆ. ತೊಡೆಮೇಲೆ ಮಲಗಿದ್ರೆ ಅತ್ತೇಬಿಡ್ತಾಳೆ. ಗಿಫ್ಟ್ ಕೊಟ್ರೆ ಹೇಗೆ ರಿಸೀವ್ ಮಾಡ್ತಾಳೋ ನಮಗೆ ಗೊತ್ತೇ ಇಲ್ಲ. ಯಾಕಂದ್ರೆ ನಾವು ಯಾವತ್ತು ಕೊಟ್ಟೆ ಇಲ್ಲ. ಒಮ್ಮೆ ಟ್ರೈ ಮಾಡಿ ನೋಡಿ ಅಲ್ವಾ ಪಾಪ ಆ ಜೀವ ಅದು ಹೇಗೆ ರಿಯಾಕ್ಟ್ ಮಾಡುತ್ತೋ ನೋಡೇಬಿಡೋಣ.
ಮರ್ಯಾದೆ ಕಡಿಮೆಯಾದ್ರೂ ಪರವಾಗಿಲ್ಲ ಅಮ್ಮನಿಗೆ ಒಂದು ಸಾರಿ ಕೇಳಿ, ನಮ್ಮ ದೊಡ್ಡತನ ಬಿಟ್ಟು ಅಮ್ಮಾ ಐ ಲವ್ ಯೂ ಅಂದುಬಿಡೋಣ ಅಲ್ವಾ,,,,
(ಲೇಖಕರು : ದರ್ಶನ್ ಆರಾಧ್ಯ. ಮೊಬೈಲ್-8495980857)


ಅಂಕಣ
ಕವಿತೆ | ಚಳಿಗಾಲದ ಎರಡು ಜೀವರಸಗಳು

- ಜಿ. ದೇವೂ ಮಾಕೊಂಡ
ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.
ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!
ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.
ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?
ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?
ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ನಟಿಸುತ್ತೇನೆ ಈ ಚಿತ್ರಶಾಲೆಯಲ್ಲಿ

- ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು
ದುಗುಡದ ದನಿಗಳೆಲ್ಲ
ಹುದುಗಿ ಹೋಗಲಿ
ನನ್ನೊಳಗೆ
ದುಃಖದ ನದಿಗಳೆಲ್ಲ
ಹಾದು ಹೋಗಲಿ..
ನಾನು ಕೂಡ ನಿನ್ನಂತೆ
ನಗೆಯ ನಟಿಸುತ್ತೇನೆ..
ನಿರಾಕಾರ ಕ್ಯಾನ್ವಾಸಿನ ಮೇಲೆ
ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ
ಒಮ್ಮೊಮ್ಮೆ ಬೇಡದ್ದೂ..
ಯಾರ್ಯಾರದ್ದೊ ಇಷ್ಟಾನಿಷ್ಟದಂತೆ!
ಗತದ ಘೋರ ಪಾತಕವನ್ನು
ತರಚು ಗಾಯವೆಂದು ಕರೆದು,
ಹೋದಲ್ಲಿ, ಬಂದಲ್ಲಿ
ಅದನ್ನೇ ಜಪಿಸಿ ತಳವೂರುತ್ತೇನೆ…
ಹುಸಿ ನೆಮ್ಮದಿಯ ನಿಟ್ಟುಸಿರ
ಹೊರಸೂಸಿ..
ಅತ್ಯಾಸೆಯ ರೆಕ್ಕೆಗಳ
ಮುರಿದುಕೊಳ್ಳುತ್ತೇನೆ
ದಿಗಂತದೆಡೆಗೆ ಹಾರುವ
ಕನಸುಗಳ ಸುಟ್ಟು,
ಅದರ ಬೂದಿಯನ್ನೆ
ವಿಭೂತಿಯಾಗಿ ಬಳಿದು,
ವೈರಾಗ್ಯದ
ಮಾತುಗಳನುದುರಿಸುತ್ತಾ..
ಸುತ್ತಲಿನ ಸತ್ತ ಮೆದುಳುಗಳೊಳಗೆ ನಿರಾಕಾರವಾದವುಗಳೆನೇನೋ ಮೊಳೆತು,
ಬೇರು ಬಿಟ್ಟು, ಆಳಕ್ಕಿಳಿದು
ಕೈಕೊಡಲಿಗಳಾಗಿ
ಕತ್ತು ಕತ್ತರಿಸುವ ಫರ್ಮಾನು
ಹೊರಡಿಸುವಾಗಲೂ
ನಿಶ್ಚಿಂತೆಯ ನಟಿಸುತ್ತೇನೆ!
ಮಹನೀಯನ ಚಿತ್ರಗಳು
ಬೇಕಾದಂತೆ ಬರೆಯಲ್ಪಡುವ,
ಬಿಕರಿಯಾಗುವ, ಚಿತ್ರಶಾಲೆಯಲ್ಲಿ;
ಜೀ..ಹುಜೂರ್..ಉಸುರುತ್ತಾ,
ನಿಂತ ಮೂಢರ ಗುಂಪುಗಳೊಳಗೆ
ಕಾಲ ಸವೆಸುತ್ತೇನೆ. (ಕವಿ:ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅಲರ್ಟ್..!

- ಸುನೀತ ಕುಶಾಲನಗರ
ನದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.
ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .
ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.
ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.
ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು
ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!
ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.
ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ದಾವಣಗೆರೆ | ನಾಳೆ ಡಾ.ಬಾಬು ಜಗಜೀವನ ರಾಂ 118ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ6 days ago
ಹಂಪಿ ವಿಶ್ವವಿದ್ಯಾಲಯದ 33 ನೇ ನುಡಿಹಬ್ಬ ; ನಾಡೋಜ ಗೌರವ ಪದವಿ ಪ್ರದಾನ
-
ದಿನದ ಸುದ್ದಿ5 days ago
ಮೇ11 ರಂದು ಗ್ರಾಮ ಪಂಚಾಯತಿ ಚುನಾವಣೆ
-
ದಿನದ ಸುದ್ದಿ6 days ago
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
-
ಅಂಕಣ3 days ago
ಕವಿತೆ | ಚಳಿಗಾಲದ ಎರಡು ಜೀವರಸಗಳು
-
ದಿನದ ಸುದ್ದಿ3 days ago
ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತದೊಂದಿಗೆ ‘ಉಮ್ಮೀದ್ -2024’ ಕಾಯ್ದೆಯಾಗಿ ಜಾರಿ
-
ದಿನದ ಸುದ್ದಿ3 days ago
ಕನಗೊಂಡನಹಳ್ಳಿಗೆ 24/7 ನೀರು ಪೂರೈಕೆ | ಮಿತವಾಗಿ ಬಳಸಿ, ಭವಿಷ್ಯಕ್ಕೆ ಉಳಿಸಿ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ3 days ago
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ : ಅನುದಾನ ಬಿಡುಗಡೆಗೆ ಆರ್. ಅಶೋಕ್ ಒತ್ತಾಯ