Connect with us

ದಿನದ ಸುದ್ದಿ

ಕನ್ನಡ ವಿಶ್ವವಿದ್ಯಾಲಯದ 30ನೇ ನುಡಿಹಬ್ಬ/ಘಟಿಕೋತ್ಸವ | ಗೋರುಚ,ಭಾಷ್ಯಂ,ವೆಂಕಟಾಚಲಶಾಸ್ತ್ರಿಗೆ ನಾಡೋಜ ಪದವಿ ಪ್ರದಾನ : ಮಾನವೀಯತೆ ಮೈಗೂಡಿಸಿಕೊಳ್ಳಲು ಯುವಜನತೆಗೆ ರಾಜ್ಯಪಾಲ ಗೆಹ್ಲೋಟ್ ಕರೆ

Published

on

ಸುದ್ದಿದಿನ,ಹೊಸಪೇಟೆ(ವಿಜಯನಗರ): ಯುವಜನತೆ ದೇಶದ ಆಧಾರಸ್ತಂಭವಾಗಿದ್ದು, ದೇಶದ ಹಿತಕ್ಕಾಗಿ ಮತ್ತು ಜನರ ಹಿತಕ್ಕಾಗಿ ಪದವಿ ಬಳಿಕ ಆಚಾರ,ವಿಚಾರ ಮತ್ತು ಸಂಸ್ಕøತಿಯಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಯುವಜನತೆಗೆ ಕರೆ ನೀಡಿದರು.

ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲುರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಯ 30ನೇ ನುಡಿಹಬ್ಬ/ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮದು ಯುವಕರ ದೇಶ; ಈ ದೇಶಕ್ಕೆ ಯುವಜನತೆಯೇ ಆಧಾರವಾಗಿದ್ದಾರೆ. ಶೇ.60ರಷ್ಟು 35 ವರ್ಷದೊಳಗಿನ ಯುವಜನರು ನಮ್ಮ ದೇಶದಲ್ಲಿದ್ದಾರೆ. ಕಠಿಣ ಪರಿಶ್ರಮ ಮೈಗೂಡಿಸಿಕೊಳ್ಳುವುದರ ಜೊತೆಗೆ ಸನ್ಮಾರ್ಗದಲ್ಲಿ ನಡೆಯಬೇಕು. ಏಕಾಗ್ರತೆಯಿಂದ ಕೆಲಸ ಮಾಡಿದಲ್ಲಿ ಫಲ ಸಿಗುತ್ತದೆ ಎಂದು ಅವರು ವಿವರಿಸಿದರು.

ಇತ್ತೀಚೆಗೆ ಜಾರಿಗೆ ಬಂದ ನೂತನ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಕಲಿಕೆಗೆ ಒತ್ತು ನೀಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ಸರಳವಾಗಿ ಓದುವ ಮತ್ತು ವಿಷಯದ ಮೇಲೆ ಹಿಡಿತ ಸಾಧಿಸಬಹುದಾಗಿದೆ ಎಂದು ವಿವರಿಸಿದ ರಾಜ್ಯಪಾಲ ಗೆಹ್ಲೋಟ್ ಅವರು ಪ್ರಾದೇಶಿಕ ಭಾಷೆಗಳಲ್ಲಿ ಸಮರ್ಪಕ ಶಿಕ್ಷಣ ನೀಡುವುದರ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.

ತಂತ್ರಜ್ಞಾನ,ವೈಜ್ಞಾನಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಜಪಾನ್,ಚೀನಾ,ಜರ್ಮನಿ,ಪ್ರಾನ್ಸ್‍ನಂತ ರಾಷ್ಟ್ರಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿರುವ ಮತ್ತು ಅವರವರ ಭಾಷೆಯಲ್ಲಿಯೇ ಶಿಕ್ಷಣಕ್ಕೆ ಆದ್ಯತೆ ನೀಡಿರುವುದನ್ನು ಪ್ರಸ್ತಾಪಿಸಿದರು.

ಕನ್ನಡ ವಿವಿ ಕಳೆದ ಮೂವತ್ತು ವರ್ಷಗಳಿಂದ ಕನ್ನಡ ಮತ್ತು ಕನ್ನಡ ಅಸ್ಮೀತೆ ವಿಷಯದಲ್ಲಿ ಶ್ಲಾಘನೀಯವಾದ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಪ್ರಸಿದ್ಧ,ಐತಿಹಾಸಿಕ ನಗರಿ ಹಂಪಿಗೆ ಹಾಗೂ ಕನ್ನಡ ವಿವಿಗೆ ಭೇಟಿ ನೀಡಿರುವುದು ಅತ್ಯಂತ ಸಂತಸವಾಗಿದೆ ಎಂದು ಹೇಳಿದ ರಾಜ್ಯಪಾಲರು ಪದವಿ ಪಡೆದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಸರಕಾರದ ವಿವಿಧ ಯೋಜನೆಗಳ ಯಶಸ್ವಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯ;ಅಂದಾಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ.ವಿವಿಧ ಯೋಜನೆಗಳ ಲಾಭ ಪಡೆದುಕೊಂಡು ಆತ್ಮನಿರ್ಭರ್ ಭಾರತ ಕಟ್ಟುವ ಕೆಲಸ ಮಾಡಬೇಕಿದೆ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ಡಾ.ತೇಜಸ್ವಿ ಕಟ್ಟಿಮನಿ ಅವರು ಕನ್ನಡ ಭಾಷೆ, ವಿದ್ಯೆ, ಸಂಶೋಧನೆ, ಕನ್ನಡ ನೆಲ-ಜಲದ ರಕ್ಷಣೆ, ಸಂವರ್ಧನೆಗೋಸ್ಕರ ನಿರ್ಮಾಣವಾಗಿರುವ ಕನ್ನಡ ವಿಶ್ವವಿದ್ಯಾಲಯ ತನ್ನ ಪಾತ್ರವನ್ನು ಇಲ್ಲಿಯವರೆಗೆ ಸಮರ್ಪಕವಾಗಿ ನಿರ್ವಹಿಸಿಕೊಂಡು ಬಂದಿದೆ ಎಂದರು.

ಕನ್ನಡ ಭಾಷಿಕರು ಮತ್ತು ಕನ್ನಡ ಭಾಷೆ ಮತ್ತು ಭಾರತೀಯ ಭಾಷೆಗಳ ಮಧ್ಯೆ ನಡುಗಡ್ಡೆ ನಿರ್ಮಿಸಿಕೊಂಡು ಯಾರೂ ಬದುಕಲು, ಬೆಳೆಯಲು ಸಾಧ್ಯವಿಲ್ಲ. ಎಲ್ಲ ಭಾರತೀಯ ಭಾಷೆಗಳಿಗೂ ಈ ಮಾತು ಸಲ್ಲುತ್ತದೆ. ಕನ್ನಡ ಮತ್ತು ಇತರ ಭಾಷೆಗಳ ಮಧ್ಯೆ ಕೊಡುಕೊಳ್ಳುವಿಕೆ ಏರ್ಪಡಿಸುವುದರಿಂದ ಕನ್ನಡದಲ್ಲಿ ಹೊಸ ಹೊಸ ಜ್ಞಾನಶಾಖೆಗಳ ಪ್ರವೇಶವಾಗಲು ಸಾಧ್ಯವಿದೆ. ಹೊಸ ತಂತ್ರಜ್ಞಾನಗಳನ್ನು ಸ್ವೀಕರಿಸುವ ಮೂಲಕ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಅಪಾರ ಶಕ್ತಿಯನ್ನು ಇನ್ನಷ್ಟ್ಟು ಗಟ್ಟಿಗೊಳಿಸಬೇಕು.

ನಮ್ಮ ಭಾಷಾ ಗ್ರಹಿಕೆಯನ್ನು, ಭಾಷಾ ಸೀಮೆಯನ್ನು ವಿಸ್ತ್ತರಿಸುವ ಮೂಲಕ ನಾವು ಭಾರತೀಯ ಭಾಷೆಗಳಲ್ಲಿರುವ ಪರಸ್ಪರ ಅಪನಂಬಿಕೆಯನ್ನು ಹೋಗಲಾಡಿಸಿ, ಪರಸ್ಪರ ಬೆಳೆಯಲು ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಸಾಧ್ಯವಿದೆ ಎಂದರು. ಇದು ಭಾರತೀಯ ಭಾಷೆಗಳ ಉಳಿಯುವಿಕೆಯ ಪ್ರಶ್ನೆಯೂ ಹೌದು ಎಂದು ಅವರು ಹೇಳಿದರು.

ನಮ್ಮ ಆಸುಪಾಸಿನ ಬದುಕಿನ ಕುರಿತು ತಲಸ್ಪರ್ಶಿ ಸಂಶೋಧನೆ ಮಾಡುವ ಮೂಲಕ ಶೈಕ್ಷಣಿಕ ವಲಯ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟ ಡಾ.ತೇಜಸ್ವಿನಿ ಕಟ್ಟಿಮನಿ ಅವರು ಉತ್ತರ ಕರ್ನಾಟಕದ ಅನೇಕ ಹಳ್ಳಿಗಳು ಇಂದಿಗೂ ಖಾಯಂ ಬರಗಾಲದಿಂದ ನರಳುತ್ತಿವೆ. ನಮ್ಮ ಸಂಶೋಧನೆಗಳು-ಬರಗಾಲ ಕುರಿತ ತಳಮಟ್ಟದ ಅಧ್ಯಯನ, ನಂಬಲರ್ಹ ಅಂಕಿಸಂಖ್ಯೆಯ ಕ್ರೋಡೀಕರಣ ಹಾಗೂ ಸೂಕ್ತ ಪರಿಹಾರದ ಉಪಾಯಗಳನ್ನು ನೀಡಲು ಸಾಧ್ಯವಾದರೆ, ಯೋಗ್ಯ ಪರಿಹಾರ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಸಾಧ್ಯವಾಗಬಲ್ಲದು ಎಂದರು. ಹೀಗೆ ಕನ್ನಡ ವಿಶ್ವವಿದ್ಯಾಲಯ ರಾಜ್ಯದ ಪ್ರಗತಿಯ ಜೊತೆಗಾರನಾಗಲು ಸಾಧ್ಯವಿದೆ ಎಂದು ಹೇಳಿದರು.

ಅಕಾಡೆಮಿಕ್ ವಲಯ ಮೌನ ಕ್ಷೇಮವಲ್ಲ

ಕೊಪ್ಪಳ ಜಿಲ್ಲೆ, ಯಾದಗಿರಿ ಜಿಲ್ಲೆಯ ಬಡವರು ಅನ್ನಮೂಲ ಅರಸುತ್ತ ಗುಳೆ ಹೋಗುವುದು, ಅವರ ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೇ ನಿಲ್ಲುವುದು, ಅವರ ಯುವ ಮಗಳು, ಸೊಸೆ ಕಾಣೆಯಾಗುವುದು ನಿತ್ಯದ ಪಾಡಾದರೂ, ನಮ್ಮ ಅಕಾಡೆಮಿಕ್ ವಲಯ ಈ ಕುರಿತು ಮೌನವಹಿಸಿರುವುದು ಕ್ಷೇಮವಲ್ಲ ಎಂದು ಅವರು ಹೇಳಿದರು.

ಸೂಕ್ತ ಡಾಟಾ ನಿರ್ಮಾಣ, ಕಾರಣಗಳ ದಾಖಲೀಕರಣ, ನಮ್ಮ ಓದಿನ ಅರಿವಿನಲ್ಲಿ ಕಾಣುವ ಪರಿಹಾರ, ಸರಕಾರಕ್ಕೆ ತಕ್ಷಣದ ನಿರ್ಣಯ ಕೈಗೊಳ್ಳಲು ಸಹಾಯಕವಾಗಬಲ್ಲದು. ಗಣಿಗಾರಿಕೆಯ ನಂತರದ ಪುನರ್ವಸತಿ, ಕಾಡಿನ ಮರುಹುಟ್ಟು, ಜಲಮೂಲಗಳ ಸಂರಕ್ಷಣೆ, ಕನ್ನಡ ವಿಶ್ವವಿದ್ಯಾಲಯದ ಕೋರ್ಸುಗಳ ಅವಿಭಾಜ್ಯ ಅಂಗವಾದಾಗ, ಸಮಾಜ ಮತ್ತು ವಿಶ್ವವಿದ್ಯಾಲಯದ ಮಧ್ಯೆ ಇರುವ ಅಂತರ ಕಡಿಮೆಯಾಗಲು ಸಾಧ್ಯ ಎಂದು ಅವರು ಹೇಳಿದರು.

ಹೊಸ ಯುಗಕ್ಕೆ ಬೇಕಾದ ಶಾಸ್ತ್ರ, ಟೆಕ್ನಾಲಜಿಯಲ್ಲಿ ನಾವು ಶಿಕ್ಷಕರು ತರಬೇತಿ ಪಡೆದು, ಯುವ ಪೀಳಿಗೆಯನ್ನು ಸಜ್ಜುಗೊಳಿಸುವುದು ತುರ್ತು ಅವಶ್ಯಕತೆ ಇದೆ. ಜಾಗತಿಕ ಹಕೀಕತ್ತು ಎಂಬುದನ್ನು ನಾವು ತುರ್ತಾಗಿ ತಿಳಿದುಕೊಂಡಷ್ಟೂ ನಮ್ಮ ಭವಿಷ್ಯದ ದಾರಿ ಸ್ಪಷ್ಟವಾಗಲಿದೆ ಎಂದರು.

ವಿಶ್ಲೇಷಣಾತ್ಮಕ ಚಿಂತನೆ ಮತ್ತು ಸಮಾಚಾರ, ಸಕ್ರಿಯ ಕಲಿಕೆ ಮತ್ತು ಕಲಿಕಾ ತಂತ್ರಗಳು,ಸಂಶ್ಲ್ಲಿಷ್ಟ(ಸಂಕೀರ್ಣ) ಸಮಸ್ಯೆ-ಪರಿಹಾರ, ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣೆ, ಸೃಜನಶೀಲತೆ, ಅಸಲೀತನ, ಜವಾಬ್ದಾರಿ ತೆಗೆದುಕೊಳ್ಳುವ ಛಾತಿ,ಮುಂದಾಳುತನ ಮತ್ತು ಸಾಮಾಜಿಕ ಪ್ರಭಾವ,ತಂತ್ರಜ್ಞಾನದ ಉಪಯೋಗ, ಅದರ ಬಲವರ್ಧನೆ ಮತ್ತು ನಿಯಂತ್ರಣ,ತಾಂತ್ರಿಕ ಡಿಸೈನ್ ಮತ್ತು ಪ್ರೋಗ್ರಾಮಿಂಗ್, ಸ್ಥಿತಿಸ್ಥಾಪಕತ್ವ, ಒತ್ತಡ ಸಹಿಸುವಿಕೆ ಮತ್ತು ಹೊಂದಾಣಿಕೆ,ತಾರ್ಕಿಕತೆ, ಸಮಸ್ಯೆ, ಸಮಾಧಾನ ಮತ್ತು ಕಲ್ಪನಾಶಕ್ತಿಯಂತ ಕೌಶಲ್ಯಗಳನ್ನು ನಮ್ಮ ವಿಶ್ವವಿದ್ಯಾಲಯ ಗಂಭೀರವಾಗಿ ಅಧ್ಯಯನ ಮಾಡಬೇಕು ಎಂದರು.

ಜಾಗತಿಕ ಆರ್ಥಿಕ ಪೋರಂ ಗುರುತಿಸಿದ ಭವಿಷ್ಯದ ಕೌಶಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಪಠ್ಯಕ್ರಮಗಳು ನಿರ್ಮಾಣಗೊಂಡಿದ್ದೇ ಆದರೆ, ಕನ್ನಡ ಮಾಧ್ಯಮದಲ್ಲಿ ಓದುವ, ಕನ್ನಡ ವಿಷಯವನ್ನು ಅಭ್ಯಸಿಸುವ ಮಕ್ಕಳು ಆತ್ಮವಿಶ್ವಾಸದಿಂದ ಜಾಗತಿಕ ಸ್ಪರ್ಧೆಯಲ್ಲಿ ಭಾಗವಹಿಸಬಲ್ಲರು ಎಂದರು.

ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಸ್ವಾಗತ ಭಾಷಣ ಮಾಡಿದರು. ಕನ್ನಡ ನಾಡು-ನುಡಿಗೆ ಅನುಪಮ ಸೇವೆ ಸಲ್ಲಿಸಿರುವ ಗೋ.ರು.ಚನ್ನಬಸಪ್ಪ,ಡಾ.ಭಾಷ್ಯಂಸ್ವಾಮಿ ಮತ್ತು ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿಗೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ನಾಡೋಜ ಪದವಿ ನೀಡಿ ಗೌರವಿಸಿದರು.

ಈ ನುಡಿಹಬ್ಬದಲ್ಲಿ 1380 ವಿದ್ಯಾರ್ಥಿಗಳಿಗೆ ಪದವಿ ಪಡೆದರು. ಚಿತ್ರದುರ್ಗದ ಶಿವಮೂರ್ತಿ ಮುರುಘಾಶರಣರು(ವಚನ ಸಂಸ್ಕøತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ), ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ(ಮುದ್ರಣ ಮಾಧ್ಯಮ:ಸಮಕಾಲೀನ ವಿದ್ಯಮಾನಗಳು), ಕಲ್ಕುಳಿ ವಿಠಲ್ ಹೆಗ್ಗಡೆ(ಮಳೆನಾಡು ಅಧ್ಯಯನ), ಬಿ.ಎಸ್.ಪುಟ್ಟಸ್ವಾಮಿ(ಹಳೇ ಮೈಸೂರಿನ ಒಕ್ಕಲಿಗರ ಸ್ಥಿತ್ಯಂತರಗಳು) ಅವರಿಗೆ ಡಿ.ಲಿಟ್ ಪದವಿ,100 ಜನರಿಗೆ ಪಿಎಚ್‍ಡಿ ಪದವಿಗಳನ್ನು ಇದೇ ಸಂದರ್ಭದಲ್ಲಿ ರಾಜ್ಯಪಾಲರು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ, ವಿವಿಯ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ನಿಕಾಯಗಳ ಡೀನರು ಸೇರಿದಂತೆ ಅನೇಕರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್‌ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್‌ ಕುಣಿಗಲ್‌ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್.‌ ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್‌ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್‌ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್.‌ ಎನ್‌ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್‌ ಹಿರಿಯಡಕ  ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ  ʼಬಾವಿಗೆ ಬಿದ್ದರೂʼ, ಒಟ್ಟು ಈ  ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.

ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್‌. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.

ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.

ಕವಿತೆ ಸ್ಪರ್ಧೆ ಫಲಿತಾಂಶ

ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್‌ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.

ಫೈಜ್ನಟ್ರಾಜ್‌ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ  ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್‌ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.

ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್‌ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ  ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

Continue Reading

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending