ದಿನದ ಸುದ್ದಿ
ಪೂನಾ ಒಪ್ಪಂದಕ್ಕೆ 92 ವರ್ಷ
- ಮಲ್ಕುಂಡಿ ಮಹದೇವ ಸ್ವಾಮಿ
“ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ದೇವದಾಸ್ ಗಾಂಧಿ.
“ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಡಾ. ಅಂಬೇಡ್ಕರ್.
ಅಂದು ಅಕೋಲದಲ್ಲಿ ಗಾಂಧಿಜೀ ತಂಗಿದ್ದರು. ಅಲ್ಲಿಗೆ ಕೆಲವು ಅಂಬೇಡ್ಕರ್ ಅನುಯಾಯಿಗಳು ಬಂದು ಗಾಂಧಿಯವರನ್ನು ಭೇಟಿಯಾಗಿ, ಕೆಲವು ಪ್ರಶ್ನೆಗಳನ್ನು ಕೇಳಿದರು. “ಗಾಂಧೀಜಿಯವರೇ, ಕೆಲವರು ತಿಲಕರನ್ನು ದೇವರೆಂದು ಪೂಜಿಸುವಂತೆ, ಅಂಬೇಡ್ಕರರನ್ನು ದೇವರೆಂದು ಪೂಜಿಸಬಹುದೇ….? ಗಾಂಧೀಜಿಯವರು ಉತ್ತರಿಸುತ್ತಾ, ಪೂಜಿಸಬಹುದು. ಪೂಜಿಸುವವರಿಗೆ ಈ ಹಕ್ಕಿದೆ. ಅಂಬೇಡ್ಕರರನ್ನು ನಾನು ಮೆಚ್ಚುತ್ತೇನೆ. ನಾನು ಅವರ ದೃಷ್ಟಿಕೋನಗಳಿಂದ ಭಿನ್ನವಾಗಿದ್ದೇನೆ ಆದರೆ ಅವರು ಧೈರ್ಯಶಾಲಿ ಎಂದು ಒಪ್ಪಿಕೊಳ್ಳುತ್ತೇನೆ. ಧೈರ್ಯಶಾಲಿ ಪುರುಷ ಕೂಡ ತಪ್ಪು ಮಾಡುತ್ತಾನೆ. ನಾನು ನನ್ನನ್ನು ಧೈರ್ಯಶಾಲಿ ಎಂದು ಸ್ವತಹ ನಿರ್ಧರಿಸಿಕೊಳ್ಳುತ್ತೇನೆ ಮತ್ತು ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ” ಎಂದರು.
ತಿಲಕರನ್ನು ದೇವರೆಂದು ಭಾವಿಸಿದ್ದ ಗಾಂಧೀಜಿಗೆ ಪ್ರಶ್ನಿಸಿದ ಅಂಬೇಡ್ಕರ್ ಅನುಯಾಯಿಗಳು ಪೂನಾ ಒಪಂದದಿಂದಾದ ಅನ್ಯಾಯದ ಸಿಟ್ಟನ್ನು ತೋಡಿಕೊಂಡರು. ಮತ್ತು ಈ ಒಪ್ಪಂದ ಇನ್ನು ಮುಂದಿನ ಪೀಳಿಗೆಯೂ ಪ್ರಶ್ನಿಸುವ ಅಧಿಕಾರವನ್ನು ಶಾಶ್ವತವಾಗಿ ಕಿತ್ತುಕೊಂಡಿತು ಎಂಬ ಮತ್ತೊಂದು ಸಿಟ್ಟುಕೂಡ ಅಲ್ಲಡಗಿತ್ತು. ನೀವು ಪ್ರಶ್ನಿಸುವವರಾಗಿದ್ದರೇ ಈ ಪ್ರಸಂಗದ ವಿಶ್ಲೇಷಣೆಯನ್ನು ನಿಮಗೇ ಬಿಡುತ್ತೇನೆ.
ರಾಮ್ಸೆ ಮೆಕ್ ಡೊನಾಲ್ಡ್ ರವರಿಗೆ ಆಗಸ್ಟ್ 18 ಗಾಂಧಿಜೀ ಪತ್ರ ಬರೆದು ಬ್ರಿಟಿಷ್ ರ ಕೋಮುವಾರು ತೀರ್ಪನ್ನು ಕಟುವಾಗಿ ಟೀಕಿಸಿದ್ದರು. ಮತ್ತು ತಮ್ಮ ಅಸಮ್ಮತಿಯನ್ನು ತೋರಿದರು. ಸೆಪ್ಟೆಂಬರ್ 9 ಬ್ರಿಟಿಷರು ಗಾಂಧೀಜಿ ಯವರ ನಿರ್ಧಾರವನ್ನು ನಿರಾಕರಿಸಿದ ಕಾರಣ. ಆ ಸೋಮವಾರ ಎಲ್ಲಾ ನಾಯಕರು ಜಮಾಯಿಸಿ ಅಂಬೇಡ್ಕರರನ್ನು ಕೇಳಿದಾಗ: ” ಗಾಂಧೀಜಿ ಅವರಿಗಾಗಿ ಇಂತಹ ಮಹಾತ್ಯಾಗ ಮಾಡಲಾರೆ ” ಎಂದರು. ಮರುದಿನ ಮಹಾತ್ಮಗಾಂಧಿಜೀಯವರು ಆ ಮಾವಿನ ತೋಪಿನಲ್ಲಿ ಉಪವಾಸಕ್ಕೆ ಕುಳಿತರು.
ಉಪವಾಸದ 3 ದಿನಗಳ ನಂತರ ಅಂಬೇಡ್ಕರ್ ಅವರಿಗೆ ಎಲ್ಲಾ ಕಡೆಯಿಂದ ಬೆದರಿಕೆ ಕರೆಗಳು ಬರಲು ಆರಂಭಿಸಿದವು. ಕೆಲವು ಗೂಂಡಾಗಳು ನೇರವಾಗಿ ಅಂಬೇಡ್ಕರರನ್ನು ಪ್ರಶ್ನಿಸಿದ್ದರು. ಬಹುತೇಕ ಎಲ್ಲ ಪತ್ರಿಕೆಗಳು ಗಾಂಧಿಯವರನ್ನು ಬೆಂಬಲಿಸುತ್ತಿವೆ ಮತ್ತು ಅಂಬೇಡ್ಕರರನ್ನು ವಿರೋಧಿಸುತ್ತಿವೆ. ಅವರ ರಕ್ತದ ಒತ್ತಡ ಹೆಚ್ಚುತ್ತಿದೆ.
ಉದ್ರಿಕ್ತತೆ ಹೆಚ್ಚಾಯಿತು, ಅಂಬೇಡ್ಕರ್ ಖಳನಾಯಕ, ದೇಶದ್ರೋಹಿ, ಭಾರತವನ್ನು ಛಿದ್ರಗೊಳಿಸಲು ಬಯಸಿದ ವ್ಯಕ್ತಿ, ಗಾಂಧಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ವ್ಯಕ್ತಿ. ಟ್ಯಾಗೋರ್, ನೆಹರು ಮತ್ತು ಸಿ. ರಾಜಗೋಪಾಲಾಚಾರಿ ಸೇರಿದಂತೆ ಗರಂ ದಾಲ್ (ಉಗ್ರಗಾಮಿಗಳು) ಹಾಗೂ ನರಮ್ ದಾಲ್ (ಮಿತವಾದಿಗಳು) ರಾಜಕೀಯ ಭಾರೀ ತೂಕ ಗಾಂಧಿಯ ಕಡೆ ತೂಗಿತು. ಆದರೂ ಅಂಬೇಡ್ಕರ್ ರದು ಅದೇಮಾತು.
“ನಾನು ನನ್ನ ಆದ್ಯ ಕರ್ತವ್ಯಕ್ಕೆ ದ್ರೋಹ ಬಗೆಯಲಾರೆ ಮತ್ತು ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ನ್ಯಾಯಯುತ ಮತ್ತು ನ್ಯಾಯ ಸಮ್ಮತವಾದ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಎಂಬದು. ಅಂಬೇಡ್ಕರ್ ರವರ ಈ ಕಾಠಿಣ್ಯ, ಗಾಂಧಿಯವರ ಸ್ವಯಂ ಪ್ರೇರಿತ ಹಠ. ಭಾರತವನ್ನು ಅಂದು ನಿತ್ರಾಣಗೊಳಿಸಿತ್ತು.
ಮಹಾದೇವ ದೇಸಾಯಿ ಹೇಳುವಂತೆ ಸೆಪ್ಟಂಬರ್ 22 ಮಧ್ಯಾಹ್ನ ಅಂಬೇಡ್ಕರ್ ಗಾಂಧಿಯಜೀಯವರನ್ನು ಭೇಟಿಯಾಗಿ, “ನಾನು ನನ್ನ ಸಮುದಾಯಕ್ಕೆ ರಾಜಕೀಯ ಅಧಿಕಾರವನ್ನು ಬಯಸುತ್ತೇನೆ ಅದು ನಮ್ಮ ಉಳಿವಿಗೆ ಅನಿವಾರ್ಯವಾಗಿದೆ” ಉಪವಾಸವನ್ನು ಕೈ ಬಿಡಿ” ಎಂದರು. ಚರ್ಚೆ ಕಗ್ಗಂಟಾಗಿ ಸೆಪ್ಟೆಂಬರ್ 23 ಕ್ಕೆ ಮಾತುಕತೆ ಮುಂದುವರಿಯಿತು. ಮತ್ತೇ 24 ಕ್ಕೆ. ಅಂದು ಸಂಜೆ 5 ಗಂಟೆಗೆ 23 ಜನರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ವಿಶ್ವಾಸ ಅರ್ಹತೆಗಾಗಿ ರಾಜಾಜಿ ತಮ್ಮ ಒಂದು “ಫೌಂಟೆನ್ ಪೆನ್ನ” ನ್ನು ಅಂಬೇಡ್ಕರ್ ಅವರ ಜತೆ ವಿನಿಮಯ ಮಾಡಿಕೊಂಡಿದ್ದರು. ಇದು ಹೊರಗಿನ ಮರ್ಮಾಘಾತ. ಈ ಒಳಗಿನ ಮರ್ಮಾಘಾತದಬಗ್ಗೆ ಹೇಳಲೇ ಬೇಕು.
ಈ ದಕ್ಷಿಣ ಭಾರತದ ಅಸ್ಪೃಶ್ಯ ರಾಜಕಾರಣಿ
“ಎ ಸಿ ರಾಜನ್” ಅವರು ಅಂಬೇಡ್ಕರ್ ಅವರು ದುಂಡುಮೇಜಿನ ಸಭೆಯಲ್ಲಿ ಚರ್ಚಿಸಲು ಅಸ್ಪೃಶ್ಯರ ಪ್ರತಿನಿಧಿ ಎನ್ನುವುದನ್ನು ನಿರಾಕರಿಸಿದ್ದರು. ಮತ್ತು ಬಾಪೂ ರವರ ಕಡೆ ಕೈ ಎತ್ತಿದ್ದರು. ಪೂನಾ ಒಪ್ಪಂದದ ಬಿಕ್ಕಟ್ಟಿನ ಸಮಯದಲ್ಲಿ ಅಂಬೇಡ್ಕರವರನ್ನು ಪ್ರತ್ಯೇಕೀಕರಿಸಿ ಚರ್ಚೆಮಾಡಲು ಸಿದ್ಧಗೊಂಡಿದ್ದರು.
“ಪಲ್ ವಂಕರ್ ಬಾಲೂ” ದೇಶದ ಮೊದಲ ದಲಿತ ಕ್ರಿಕೆಟಿಗ ಕೂಡ ಅಂಬೇಡ್ಕರವರಿಗೆ 24ವರ್ಷ ದೊಡ್ಡವರಾಗಿದ್ದು ಅಂಬೇಡ್ಕರರ ಸ್ನೇಹ ಜೀವಿಯಾಗಿದ್ದರು. ಆದರೆ ಈ ಸಂದರ್ಭದಲ್ಲಿ ಗಾಂಧೀಜಿಯವರ ಪಾಳಯದಲ್ಲಿ ಪಳಗಿದರು. ಅವರು ಗಾಂಧಿಜೀಯವರ ಅನುಯಾಯಿಗಳಾಗಿ, ಅಂಬೇಡ್ಕರವರ ನಿಲುವುಗಳನ್ನು ಹೆಜ್ಜೆಹೆಜ್ಜೆಗೂ ನಿರಾಕರಿಸಿದರು. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ವಾಗುವ ವಿಚಾರದಲ್ಲಿಯೂ ಕಠೋರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮುಂದೆ ಅಂಬೇಡ್ಕರ್ ಅವರ ವಿರುದ್ಧ ಚುನಾವಣೆಗೆ ನಿಂತು ಸೋತದ್ದು ಬೇರೆ ವಿಚಾರ ಆದರೆ ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಒಂದು ಐತಿಹಾಸಿಕ ಹೋರಾಟದಲ್ಲಿ ಅಂಬೇಡ್ಕರ್ ಅವರ ನಿಲುವು ಮತ್ತು ಕಾಠಿಣ್ಯಗಳನ್ನು.
ಗಾಂಧೀಜಿಯವರ ಪ್ರಕಾರ ಪ್ರತ್ಯೇಕ ಮತದಾನ ಪದ್ಧತಿ ಸಮಸ್ಯೆಯನ್ನು ಉತ್ತಮಕ್ಕಿಂತ ಕೆಟ್ಟದ್ದಾಗಿಸುತ್ತದೆ. ಇದು ಪ್ರತಿ ಹಳ್ಳಿಯಲ್ಲಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಳಿಯ ಸಂಘರ್ಷಕ್ಕೆ ಕಾರಣವಾಗುತ್ತಿದೆ.ಎಂಬುದು.
1931 ಅ 14 ಅಂಬೇಡ್ಕರವರು ಗಾಂಧಿಯವರನ್ನು ಮೊಟ್ಟ ಮೊದಲನೆ ಬಾರಿಗೆ ಭೇಟಿಯಾಗಿ ಪ್ರತ್ಯೇಕ ಮತದಾನದ ಹಕ್ಕುಗಳ ಬಗ್ಗೆ ಚರ್ಚಿಸಿದ್ದರು. ನಂತರ ಗಾಂಧೀಜಿ ನವೆಂಬರ್ 13 ತಮ್ಮ ಭಾಷಣದಲ್ಲಿ ನಾನು ಪ್ರತ್ತೇಕ ಪ್ರಾತಿನಿಧ್ಯವನ್ನು ವಿರೋಧಿಸುವ ಏಕೈಕ ವ್ಯಕ್ತಿಯಾಗಿದ್ದೇನೆ ಎಂದು ಒಂದು ವರ್ಷದ ಹಿಂದೆಯೇ ಹೇಳಿದ್ದರು. ಈ ಉಪವಾಸ ಒಂದು ವರ್ಷ ಪೂರ್ವ ನಿಯೋಜಿತ ಕಾರ್ಯಕ್ರಮ ದಂತೆ ಕಾಣುತ್ತದೆ ಅಲ್ಲವೆ? ಇದು ಹಠಾತ್ತಾಗಿ ಆಗಿಂದಾಗೆ ಸೃಷ್ಟಿಯಾದ ಯೋಜನೆ ಅಲ್ಲ.
ಇಡೀ ಪೂನಾ ಒಪ್ಪಂದಕ್ಕೆ ಸಾಕ್ಷಿಯಾದ ಘಟನೆಗಳನ್ನಾಧರಿಸಿ ಮಹಾದೇವ ರಾನಡೆ ಹೇಳುವಂತೆ ” ಅವರಿಗೆ ಬೇಕಿರುವುದು ಯಾವುದೋ ಒಂದು ಇತ್ಯಾರ್ಥ; ಅವರು ಆದರ್ಶ ಪರಿಹಾರಕ್ಕಾಗಿ ಕಾಯಲು ಸಿದ್ಧರಿಲ್ಲ. ಗಾಂಧೀಜಿ ಯವರ ಜೀವ ಉಳಿಸುವ ಉತ್ಸಾಹದಲ್ಲಿ ಈ ಸಹಿ ಹಾಕಿದರು.
ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ಎಂದು ಅಂಬೇಡ್ಕರ್ ರವರ ಮುಂದೆ ಕಣ್ಣೀರುಡುತ್ತದ್ದ ದೇವದಾಸ್ ಗಾಂಧಿ ಅವರ ಮುಖದಲ್ಲಿ ಮಾತ್ರ ಮಂದಹಾಸವಿತ್ತು.
ಹೊ! ಗಾಂಧಿಯವರು ಒಪ್ಪಂದಕ್ಕೆ ಸಹಿ ಹಾಕಿದರಾ?, ಒಂದು ಅಂತಿಮ ಪದ; ಅದು ಗಾಂಧಿಯಲ್ಲ. ಅವರ ಮಗ ದೇವದಾಸ್ ಗಾಂಧಿ.
ಸುಪರ್ಣ ಗುಪ್ತಾ ‘ ಅಂಬೇಡ್ಕರ್ ರವರು ಶೋಷಿತರ ವಿಮೋಚನೆಗಾಗಿ ಹಕ್ಕು ಆಧಾರಿತ ವಿಧಾನಕ್ಕೆ ಆದ್ಯತೆ ನೀಡಿದರು. ಗಾಂಧಿಜೀಯವರು ಅಧ್ಯಾತ್ಮ ಮತ್ತು ನಂಬಿಕೆ ವಿಧಾನಕ್ಕೆ ಮಾನ್ಯತೆ ನೀಡಿದರು. ಅಂಬೇಡ್ಕರರಿಗಿಂತ ಭಿನ್ನವಾಗಿ ಶೋಷಕರ ಮನಸ್ಥಿತಿಯನ್ನು ಬದಲಾಯಿಸಿದಾಗ ಮಾತ್ರ, ಯಾವುದೇ ಶೋಷಣೆಯನ್ನು ಸರಿಪಡಿಸಬಹುದು ಎಂದು ಗಾಂಧಿಜೀ ಭಾವಿಸಿದ್ದರು’. ಎನ್ನುತ್ತಾರೆ. ಇದು ಈ ನೆಲದಲ್ಲಿ ಅಸಂಭವ. ಕಾರಣ ಇಲ್ಲಿನ ಜಾತಿ ವ್ಯವಸ್ಥೆ ಒಂದು ಮಾನಸಿಕ ಸ್ಥಿತಿಯಾಗಿದೆ. ಅದು ಸಾವಿರಾರು ವರ್ಷಗಳು ತನ್ನ ಬೇರನ್ನು ತಾನೇ, ತನ್ನ ಮೆದುಳಿಗೆ ಎಣೆದುಕೊಂಡಿದೆ. ಇದನ್ನು ನಂಬಿಕೆ ಮಾತ್ರದಿಂದಲೇ ಬಿಡಿಸುವುದು ಕಷ್ಟ.
ಈ ಸತ್ಯ ಗಾಂಧೀಜಿಯವರ ಅರಿವಿಗೆ ಬಂದಿದ್ದೆ ಅವರು
ಅಸ್ಪೃಶ್ಯತೆಯ ವಿರುದ್ದ 1933 ನವೆಂಬರ್ ನಿಂದ 1934 ರ ಆಗಸ್ಟ್ ವರೆಗೆ 12500 km ಭಾರತದಾದ್ಯಂತ ಪ್ರವಾಸ ಕೈಗೊಂಡಾಗ. 800000 ಗಳನ್ನು ಹರಿಜನ ನಿಧಿಗೆ ಸಂಗ್ರಹಿಸಲು ಮೇಲ್ವರ್ಗದ ಜನರ ಬಳಿ ತೆರಳಿದಾಗ. ಕೊನೆ ಕೊನೆಗೆ ಶ್ರೀರಂಗಂ ತಂಜಾವೂರಿನ ಇತರ ದೇವಾಲಯಗಳಲ್ಲಿ ಅಸ್ಪೃಶ್ಯತಾಚರಣೆಯನ್ನು ಮನಗಂಡು ತಾವೇ ದೇವಾಲಗಳಿಗೇ ಹೋಗುವುದನ್ನು ನಿಷೇಧಿಸಿಕೊಂಡಾಗ. ಹರಿಜನ ಸೇವಕ ಸಂಘ ಹರಿಜನ ಪತ್ರಿಕೆ ಇಲ್ಲಿ ಹುಟ್ಟಿಕೊಂಡವು. ಪ್ರತಿ ಹಳ್ಳಿಗಳಲ್ಲಿ ರಾಮಮಂದಿರ ಭಜನೆಗಳು ಆರಂಭವಾದವು. ಇದು
ಈಗ ಈ ಜನರ ಬದುಕಿನ ಭಾಗವಾಗಿ ಬಿಟ್ಟಿದೆ.
ಲೂಯಿ ಫಿಷರ್ “ಗಾಂಧೀಜಿಗೆ ದ್ವೇಷ, ಅಸೂಯೆ, ವಿಷ, ಅಸಮಧಾನವಿಲ್ಲ. ಅವರನ್ನು ಜೈಲಿಗೆ ಹಾಕಿದ ವೈಸ್ ರಾಯ್ ಗಳ ಜೊತೆ ಅವರು ಸ್ನೇಹಿತರಾಗಿದ್ದರು. ಅವರು ವ್ಯವಸ್ಥೆಯನ್ನು ವಿರೋಧಿಸಿದರು ಆದರೆ ವ್ಯಕ್ತಿಯನ್ನಲ್ಲಾ.
ಎಂದು ಯಾರು ಏನೇ ಹೇಳಿದರು,
ಅಂಬೇಡ್ಕರ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧೀಜಿಯವರನ್ನು ನಾನು “ಮಹಾತ್ಮ” ಎಂದು ಒಪ್ಪಲಾರೆ ಎಂದರು.
ಅಂಬೇಡ್ಕರ್ ರ ಈ ನೋವಿಗೆ ಪಟೇಲರ ಈ ಮಾತನಲ್ಲಿ ಉತ್ತರ ಸಿಗಬಹುದೇನೊ ಪಟೇಲರು “ಈ ಗಾಂಧಿಜೀ ಏಕೆ ಉಪವಾಸ ಮಾಡುತ್ತಿದ್ದಾರೆ ?” ಎಂದು ಗೊಂದಲಕ್ಕೀಡಾದರು. ಎದುರಿನಲ್ಲಿದ್ದವರು “ಅಸ್ಪೃಶ್ಯರನ್ನು ಎದುರಿಸಲು ಇನ್ಯಾವುದೇ ಮಾರ್ಗಗಳಿಲ್ಲವಲ್ಲಾ ಆ ಕಾರಣಕ್ಕಿರಬಹುದೇನೊ…? ಎಂದರು.
ಕೊನೆಯದಾಗಿ ಈ ಮಾತು
ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸ ಕ್ಕೆ ದ್ರೋಹ ಮಾಡುವುದಿಲ್ಲ” ಎಂದರಲ್ಲಾ ಡಾ. ಅಂಬೇಡ್ಕರ್ ಈ ಎಳೆಯನ್ನು ಇಡಿದು ಈ ಪೀಳಿಗೆ ಯಾಕೆ ಬದುಕುವ ಪ್ರಯತ್ನ ಮಾಡುತ್ತಿಲ್ಲಾ….? (ಬರಹ-ಮಲ್ಕುಂಡಿ ಮಹದೇವ ಸ್ವಾಮಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


