Connect with us

ದಿನದ ಸುದ್ದಿ

ಆತ್ಮಕತೆ | ಪಾರ‍್ವತಕ್ಕ ಮತ್ತು ಸರಳ ಮದುವೆ

Published

on

  • ರುದ್ರಪ್ಪ ಹನಗವಾಡಿ

ಜೂನ್ 1974ರ ಸಮಯ, ನಾನು ಎಂ.ಎ. ಪರೀಕ್ಷೆ ಮುಗಿದು ಫಲಿತಾಂಶ ಬಂದ ನಂತರ ಪರ‍್ವತಕ್ಕ ಸೋಷಿಯಾಲಜಿ ವಿಭಾಗದಲ್ಲಿ ನನಗೆ ಸಂಶೋಧಕ ಸಹಾಯಕನ ಹುದ್ದೆ ನೀಡುವುದಾಗಿ ಮೊದಲು ಸುಳಿವು ನೀಡಿದ್ದರು. ಈ ನಡುವೆ ಬಸವಣ್ಯಪ್ಪ ಎಂ.ಎ.ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಅವನಿಗೆ ತಮ್ಮ ವಿಭಾಗದಲ್ಲಿಯೇ ಇದ್ದ ಸಾಮಾಜಿಕ ಸಂಶೋಧನಾ ಘಟಕದಲ್ಲಿ ಸಹಾಯಕ ನಿರ್ದೇಶಕನ ಹುದ್ದೆ ನೀಡಿದ್ದರು. ಪಾರ‍್ವತಕ್ಕನೇ ಅದಕ್ಕೆ ವಿಭಾಗದಲ್ಲಿ ನಿರ್ದೇಶಕರು. ಇಡೀ ಪ್ರಾಜೆಕ್ಟ್ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸೋಷಿಯಾಲಜಿ ವಿಷಯದಲ್ಲಿ, ಎಂ.ಎ. ಮಾಡಿದ ಸತ್ಯನಾರಾಯಣ, ನಾರಾಯಣಾಚಾರ್ ಮತ್ತು ಚಂದ್ರಯ್ಯ, ಗಾಯತ್ರಿ ದೇವಿ ಮತ್ತು ಮೈಸೂರಿನಲ್ಲಿಯೇ ಎಂ.ಎ. ಸೋಷಿಯಾಲಜಿ ಮಾಡಿದ ರೇಖಾ ಸುಬ್ಬಯ್ಯ ಇವರುಗಳಿದ್ದರು. ಬಸವಣ್ಯಪ್ಪ ಹಾಸ್ಟೆಲ್‌ನಲ್ಲಿದ್ದವನು ಅಲ್ಲಿನ ಅನಾನುಕೂಲಗಳಿಂದಾಗಿ ಪಾರ‍್ವತಮ್ಮನವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದನು. ನನ್ನ ತರಗತಿಗಳು ಮುಗಿದು ಅವನ ಪ್ರಾಜೆಕ್ಟ್ ಕೆಲಸ ಮುಗಿದ ನಂತರ ನಮ್ಮ ಹಾಸ್ಟೆಲ್‌ಗೆ ಬಂದು ಸಮಯ ಕಳೆಯುತ್ತಿದ್ದ.

ಈ ನಡುವೆ ಎಂ.ಎ. ಸೋಷಿಯಾಲಜಿ ವಿದ್ಯಾರ್ಥಿನಿಯಾಗಿದ್ದ ಸುಮಿತ್ರ ಬಾಯಿ ಮತ್ತವರ ತಂಗಿ ಉಮಾಬಾಯಿ ಅವರುಗಳು ಪಾರ‍್ವತಕ್ಕನ ಮನೆಗೆ ಆಗಾಗ ಬಂದು ನಮ್ಮೆಲ್ಲರಿಗೂ ಪರಿಚಯವಾಗಿದ್ದರು. ಸುಮಿತ್ರ ಬಾಯಿಯವರು ಆಗ ತಾನೆ ಸೋಷಿಯಾಲಜಿಯಲ್ಲಿ ಎಂ.ಎ. ಮುಗಿಸಿ ಮಹಾರಾಜ ಸಂಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅದಕ್ಕೆಲ್ಲ ಪರ‍್ವತಕ್ಕನವರ ವಿಶೇಷ ಮಾರ್ಗದರ್ಶನ ಮತ್ತು ಶಿಫಾರಸ್ಸು ಕಾರಣವಾಗಿತ್ತು. ಅವರ ತಂಗಿ ಉಮಾ ಕೂಡ ಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರ, ಎಂ.ಎ. ವ್ಯಾಸಂಗ ಮಾಡುತ್ತ, ಗಂಗೋತ್ರಿ ಹಾಸ್ಟೆಲ್‌ನಲ್ಲಿ ಉಳಿದಿದ್ದಳು. ಪರ‍್ವತಕ್ಕನ ಮನೆಗೆ ಆಗಾಗ ಅವರ ಅಕ್ಕನ ಜೊತೆ ಬರುತ್ತಿದ್ದ ಉಮಾ ಬಸವಣ್ಯಪ್ಪನಿಗೆ ಪರಿಚಯವಾಗಿ ಅವಳು ಎಂ.ಎ. ಅಂತಿಮ ವರ್ಷವಿದ್ದಾಗಲೇ ಗಂಗೋತ್ರಿ ಕ್ಯಾಂಟೀನ್ ಹಾಗೂ ವಿಶಾಲವಾಗಿದ್ದ ಕ್ಯಾಂಪಸ್‌ನಲ್ಲಿ ಇಬ್ಬರೂ ತಿರುಗಾಡುತ್ತಿದ್ದರು. ಈ ಜೋಡಿ ಕಡೆಗೊಂದು ದಿನ ನನ್ನ ಮುಂದೆ ಪ್ರೀತಿಯಲ್ಲಿರುವ ಸುದ್ದಿ ತಿಳಿಸಿದರು. ಬಸವಣ್ಯಪ್ಪ ಆಗಲೇ ಉದ್ಯೋಗಿಯಾಗಿ ಸಂಪಾದಿಸುತ್ತಿದ್ದನು. ಉಮಾ ಇನ್ನೂ ಅಂತಿಮ ವರ್ಷದ ಪರೀಕ್ಷೆ ಬರೆದಿರಲಿಲ್ಲ. ನಾನೂ ಕೂಡ ನನ್ನ ಪರೀಕ್ಷೆಯ ತಯಾರಿಯಲ್ಲಿದ್ದೆ. ಈ ವಿಷಯವನ್ನು ಪರ‍್ವತಕ್ಕನ ಮುಂದೆ ಪ್ರಸ್ತಾಪಿಸಲು ಯಾರಿಗೂ ಧರ‍್ಯವಿರಲಿಲ್ಲ. ಮೊದಲು ಪರೀಕ್ಷೆಗಳು ಮುಗಿಯಲಿ ಎಂದು ನಾವುಗಳು ಕಾಯುತ್ತಾ ಇದ್ದೆವು.
ನಾನು ಊರಿನಿಂದ ಕರೆದುಕೊಂಡು ಬಂದಿದ್ದ ನನ್ನ ಹೆಸರಿನವನೇ ಆಗಿದ್ದ ರುದ್ರಪ್ಪನಿಗೆ ಪರ‍್ವತಕ್ಕ ನಿರ್ದೇಶಿಸುತ್ತಿದ್ದ ವಿಭಾಗದಲ್ಲಿ ಸಂಶೋಧನಾ ಪ್ರಾಜೆಕ್ಟ್ನಲ್ಲಿ ಸಹಾಯಕನಾಗಿ ಅರೆಕಾಲಿಕ ಹುದ್ದೆ ನೀಡಿದ್ದರು. ಅವನು ಬಿ.ಎ. ನಲ್ಲಿ ಉಳಿಸಿಕೊಂಡಿದ್ದ ಇತರೆ ವಿಷಯಗಳನ್ನು ಪುನಃ ಪರೀಕ್ಷೆ ಬರೆದು ಬಿ.ಎ. ಮುಗಿಸಿದ್ದ. ಪಾರ‍್ವತಕ್ಕನ ಮನೆಯ ಹತ್ತಿರದಲ್ಲಿ ಪ್ರತ್ಯೇಕ ರೂಂ ಮಾಡಿಕೊಂಡಿದ್ದರೂ ಹೆಚ್ಚು ಸಮಯ ಪರ‍್ವತಕ್ಕನ ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದನು. ಅವನಿಗೆ ದೊರಕಿಸಿಕೊಟ್ಟಿದ್ದ ಕೆಲಸ ಅವನ ಬಿ.ಎ. ಡಿಗ್ರಿ ಪೂರ್ಣಗೊಳಿಸಲು ಸಹಾಯ ಮಾಡಿತ್ತು. ನನ್ನ ಎಂ.ಎ. ಪರೀಕ್ಷೆ ಇನ್ನು ಮುಂದೆ ಒಂದು ತಿಂಗಳು ಇದೆ ಎನ್ನುವಾಗಲೇ ಅವನು ಪರೀಕ್ಷೆ ಮುಗಿಸಿಕೊಂಡು ಊರಿಗೆ ಹೋಗಿದ್ದ.

ಈ ನಡುವೆ ತನ್ನ ಬಿ.ಎ. ಪರೀಕ್ಷೆ ಮುಗಿಸಿ ಊರಿಗೆ ಹೊರಟಿದ್ದ ಕಾಯಕದ ರುದ್ರಪ್ಪನನ್ನು ಕಳಿಸಲು, ಹೊರಟ ದಿನ ನಾನು ಸಂಜೆ ದೊಡ್ಡ ಗಡಿಯಾರದ ಹತ್ತಿರದಿಂದ ಹೊರಡುತ್ತಿದ್ದ. ಪ್ರೈವೇಟ್ ಬಸ್ ಹತ್ತಿಸಿದೆ. ಹತ್ತಿದವನು ಬಸ್ ಇನ್ನೂ ಹೊರಡಲು ಸಮಯವಿರುವುದನ್ನು ತಿಳಿದು ಇಳಿದು ಬಂದು ಹತ್ತಿರದಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಸಿಹಿ ಚಾಕಲೇಟ್ ತಂದು ನನಗೆ ಕೊಟ್ಟ. ನಮ್ಮೂರಿಂದ ಈಗ ಇಬ್ಬರೂ ಗ್ರಾಜ್ಯುಯೇಟ್‌ಗಳಾದವೆಂದೂ, `ಇನ್ನು ನಮ್ಮನ್ನು ಹಿಡಿಯುರ‍್ಯಾರು’ ಎಂದು ಬೀಗುತ್ತಾ ಅವನು ಊರ ಕಡೆ ಬಸ್‌ನಲ್ಲಿ ಹೊರಟಿದ್ದ. ಇತ್ತ ನಾನು ಹಾಸ್ಟೆಲ್‌ಗೆ ಹಿಂತಿರುಗಿದ್ದೆ. ಆದರೆ ಅದೇ ನಮ್ಮ ಕೊನೆಯ ಭೇಟಿಯೆಂದು ನಾವಿಬ್ಬರೂ ಅಂದುಕೊಂಡಿರಲಿಲ್ಲ. ಊರಿಗೆ ಹೋದ ಒಂದು ವಾರದೊಳಗೆ, ನನ್ನ ಪರೀಕ್ಷೆಯ ಮಧ್ಯೆಯೇ ಅವನ ಸಾವಿನ ಸುದ್ದಿ ಬಂದು ನನ್ನನ್ನು ಅಘಾತಗೊಳಿಸಿತ್ತು. ಇಷ್ಟೊಂದು ಪೇಚಾಡಿ ಬಿ.ಎ. ಮಾಡಿದ ಅವನು ಡಿಗ್ರಿ ಪಡೆಯುವ ಮುನ್ನ ಪ್ರಪಂಚದಿಂದಲೇ ಇಲ್ಲವಾಗಿದ್ದ. ವಿದ್ಯಾಭ್ಯಾಸದ ನಿರ್ಣಾಯಕ ಘಟ್ಟ ತಲುಪಿ ನಮ್ಮದೇ ಸುಖದ ಭಾವಾವೇಶದ ಲೋಕದಲ್ಲಿ ಮುಳುಗಿದ್ದ ನನಗೆ ಅವನ ಸಾವು ಮಾತ್ರ ಎಂದೂ ಮರೆಯಲಾಗದ ಏಟು ನೀಡಿತ್ತು.

ಪಾರ‍್ವತಕ್ಕನ ಪರಿಚಯವಾಗಿ ನಾಲ್ಕು ವರ್ಷಗಳೇ ಕಳೆದಿದ್ದರೂ ಅವರ ಪ್ರೀತಿ ಮತ್ತು ಸಿಟ್ಟಿಗೆ ಕಾರಣಗಳನ್ನು ತಿಳಿಯಲು ನಮಗಿನ್ನೂ ಸಾಧ್ಯವಾಗಿರಲಿಲ್ಲ. ಅವರನ್ನು ಅವರ ವಿದ್ಯಾರ್ಥಿಗಳನೇಕರು ಹೊಗಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಾವೇನಾದರೂ ಅವರಿಗೆ, ಅವರ ವಿದ್ಯಾರ್ಥಿಗಳ ಭಟ್ಟಂಗಿತನದ ಬುದ್ದಿಯ ಬಗ್ಗೆ ಹೇಳಿದರೆ ಸುತಾರಾಮ್ ಒಪ್ಪುತ್ತಿರಲಿಲ್ಲ. ಅವರು ಮನಸ್ಸಿನಲ್ಲಿ ಒಮ್ಮೆ ರೂಪಿಸಿಕೊಂಡ ತೀರ್ಮಾನಗಳನ್ನು ಯಾವುದೇ ಕಾರಣಕ್ಕೂ ಸಾಮಾನ್ಯವಾಗಿ ಬದಲಾಯಿಸಿಕೊಳ್ಳಲು ತಯಾರಿರುತ್ತಿರಲಿಲ್ಲ. ಮನೆಯಲ್ಲಿರುವಾಗ ರಾಜ್ಯದ ರಾಜಕಾರಣ ಮತ್ತು ಇತರೆ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ಕಡೆಗೆ ಅವರ ತೀರ್ಮಾನಗಳಿಗೆ ಒಪ್ಪದಿದ್ದಾಗ ನಿಮಗೇನೂ ಗೊತ್ತಿಲ್ಲ ಎಂದು ಹೇಳಿ ಮುಗಿಸುತ್ತಿದ್ದರು. ಅವರ ವಾದ ವಿವಾದಗಳು ಏನೇ ಇದ್ದರೂ ನನಗೆ, ಬಸವಣ್ಯಪ್ಪನಿಗೆ ನಮ್ಮ ಊರಿನಿಂದ ಕರೆತಂದಿದ್ದ ಕಾಯಕದ ರುದ್ರಪ್ಪನಿಗೆ ಕಾಣದ ಊರಿನಲ್ಲಿ ಆಶ್ರಯ ನೀಡಿ ನಮ್ಮ ವಿದ್ಯಾಭ್ಯಾಸವನ್ನು ಪೂರೈಸಿಕೊಂಡು ಬೆಳೆಯಲು ಸಹಾಯ ಮಾಡಿ ತಾಯಿಯಂತೆ ನೋಡಿಕೊಂಡರೆಂದು ಹೇಳಿದರೆ ಅದು ಬರಿ ಮಾತಲ್ಲ.
ಪರ‍್ವತಕ್ಕನಿಗೆ ತನ್ನ ವಿದ್ಯಾಭ್ಯಾಸದ ಓಟದಲ್ಲಿ ದೊರೆತ ಜಯಗಳ ನಂತರ ದೊರಕಿದ ಹುದ್ದೆಗಳ ಭರಾಟೆಯಲ್ಲಿ ಮದುವೆಯಾಗಲು ಸಮಯವೇ ಸಿಗಲಿಲ್ಲವೆಂದು ನಾನು ಬಸವಣ್ಯಪ್ಪ ಮಾತಾಡಿಕೊಳ್ಳುತ್ತಿದ್ದೆವು. ಪರಿಶಿಷ್ಟ ಜಾತಿಯ ಹೆಣ್ಣುಮಗಳೊಬ್ಬಳು ಬಿ.ಎ. (ಆರ‍್ಸ್) ಮತ್ತು ಎಂ.ಎ. ಗಳಲ್ಲಿ ರ‍್ಯಾಂಕ್‌ಗಳನ್ನು ಗಳಿಸುತ್ತಾ ಇಂಗ್ಲೆಂಡ್ ದೇಶದಿಂದ ಪಿಹೆಚ್.ಡಿ. ಪಡೆದು, ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಆ ಕಾಲದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರಾಧ್ಯಾಪಕರಾದದ್ದು ಮತ್ತು ಅದರ ಮುಖ್ಯಸ್ಥರಾಗಿದ್ದು ಕೂಡಾ ಸಾಮಾನ್ಯದ ಸಂಗತಿಯಾಗಿರಲಿಲ್ಲ. ಇಷ್ಟೆಲ್ಲ ಸಾಧನೆಗಳ ಮಧ್ಯೆ ಮದುವೆಯಾಗಲಿಲ್ಲ ಏಕೆ, ಏನು ಕಾರಣ ಎಂಬ ವಿಷಯಕ್ಕೆ ನಾವ್ಯಾರೂ ಎಂದೂ ಕೈಹಾಕಿರಲಿಲ್ಲ. ಬೇರೆ ಯಾರೆಲ್ಲಾ ಯಾಕೆ ಮದುವೆಯಾಗಿಲ್ಲವೆಂದು ಕೇಳಿದರೆ ಅವರು ಅತ್ತ ಕಡೆ ಗಮನ ಹರಿಸುವುದಕ್ಕೆ ಪುರುಸೊತ್ತಾಗಲಿಲ್ಲ ಎಂದು ಹೇಳಿ ಬಿಡುತ್ತಿದ್ದೆವು. ಆದರೆ ಅವರು ತಮ್ಮ ವಿಭಾಗದಲ್ಲಿಯಾಗಲೀ, ಬೇರೆಯ ಕಡೆಯಾಗಲೀ ಯಾರಾದರೂ ಮದುವೆಯಾಗುವವರ ಬಗ್ಗೆ ಅಥವಾ ಪ್ರೀತಿ ಪ್ರೇಮಗಳ ಘಟನೆಗಳನ್ನು ಚರ್ಚಿಸುವಾಗ ಅವರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಬಸವಣ್ಯಪ್ಪನ ಮದುವೆಗೆ ಕೂಡಾ ಮೊದಲು ಸಮ್ಮತಿ ನೀಡಿ ನಂತರ ವಿರೋಧಿಸಿದರು. ಆದರೆ ಸದಾ ಹೊಗಳುತ್ತಿದ್ದ ಸುಮಿತ್ರಬಾಯಿ ಮತ್ತು ಅವರ ಇನ್ನೊಬ್ಬ ವಿದ್ಯಾರ್ಥಿನಿ ಇಂದಿರಾ ಅವರುಗಳ ಬಗ್ಗೆ ಹೆಚ್ಚು ಮೆದುವಾಗಿದ್ದು ಅವರಿಬ್ಬರಿಗೂ ಉದ್ಯೋಗ ದೊರಕುವಲ್ಲಿ ಎಲ್ಲ ರೀತಿಯ ಅನುಕೂಲ ಮಾಡಿ ವಿಶ್ವವಿದ್ಯಾಲಯದಲ್ಲಿಯೇ ನೌಕರಿ ಸಿಗುವಂತೆ ನೋಡಿಕೊಂಡರು.

ನಮ್ಮ ಚನ್ನಗಿರಿ ತಾಲ್ಲೂಕಿನ ಕಡೆಯ ಇನ್ನೊಬ್ಬ ಸಮಾಜಶಾಸ್ತ್ರದ ವಿದ್ಯಾರ್ಥಿ ಓ. ನಾಗೇಂದ್ರಪ್ಪ ಎಂ.ಎ. ವಿದ್ಯಾರ್ಥಿ ನಮಗೆ ಒಂದು ವರ್ಷ ಜ್ಯೂನಿಯರ್ ಆಗಿದ್ದ ಅವನು, ನಮ್ಮ ಪಿ.ಜಿ. ಹಾಸ್ಟೆಲ್‌ನಲ್ಲಿಯೇ ಇದ್ದು ಸಮಾಜಶಾಸ್ತ್ರ ಓದುತ್ತಿದ್ದ. ಅವನು ಪರ‍್ವತಕ್ಕ ಕ್ಲಾಸಿನಲ್ಲಿ ದಲಿತ ಹುಡುಗರಿಗೆ ಇಂಗ್ಲಿಷ್‌ನಲ್ಲಿ ಪ್ರಶ್ನೆಗಳನ್ನು ಕೇಳಿ ಅವರು ತಡಬಡಾಯಿಸಿದಾಗ ಮತ್ತಷ್ಟು ಬೈಯ್ಯುವ ಬಗ್ಗೆ ಬಂದು ನನ್ನ ಬಳಿ ಹೇಳುತ್ತಿದ್ದ. ಸಾಲದ್ದಕ್ಕೆ ಅವನಿಗೆ ಆಗಲೇ ಮದುವೆ ಬೇರೆ ಆಗಿತ್ತು. ಇನ್ನೊಬ್ಬ ಮಹಾದೇವ ಎಂಬ ವಿದ್ಯಾರ್ಥಿ ಅತ್ಯಂತ ಸೊಗಸಾಗಿ ಜಾನಪದ ಹಾಡುಗಳನ್ನು ಹಾಡಿ ಜನಾನುರಾಗಿಯಾಗಿದ್ದ. ಜೊತೆಗೆ ಆಗಲೇ ಪ್ರೀತಿಯ ಗುಂಗಿನಲ್ಲಿ ಹುಡುಗಿಯೊಬ್ಬಳ ಜೊತೆ ಓಡಾಡುವುದು ಅವರಿಗೆ ಗೊತ್ತಾಗಿತ್ತು. ಆ ಕಾರಣದಿಂದ ಎಂ.ಎ. ಕೊನೆಯ ವರ್ಷದಲ್ಲಿ ಅವನಿಗೆ ಮೂರನೇ ದರ್ಜೆ ಪಡೆಯುವಂತಾಗಿದ್ದೆಂದು ಮಾತಾಡಿಕೊಳ್ಳುತ್ತಿದ್ದರು. ಆದರೆ ಓ. ನಾಗೇಂದ್ರಪ್ಪ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದಿದ್ದರೂ ಇತರೆ ಚಟುವಟಿಕೆಗಳಲ್ಲಿ ಮುಂದಿದ್ದ. ಪರ‍್ವತಕ್ಕನ ಈ ನಡವಳಿಕೆಯನ್ನು ಸೂಕ್ಷö್ಮವಾಗಿ ಗಮನಿಸಿ, ಅಂದಾಜಿಸಿಕೊಂಡು ಅವರನ್ನು ಮೆಚ್ಚಿಸಲು ಒಂದು ನಾಟಕವನ್ನೇ ಆಡಿದ್ದ. ಅದರ ತುಣುಕನ್ನು ನೀವೂ ಓದಿ ನೋಡಿ.
‘ಮೇಡಂ ನಾನು ಮೊನ್ನೆ ಊರಿಗೆ ಹೋಗಿದ್ದೆ, ಆಗ ನಮ್ಮ ತಾಯಿಗೆ, ನಿಮ್ಮ ಬಗ್ಗೆ ಎಲ್ಲ ವಿಷಯ ಹೇಳಿದಾಗ, ಅವರು ತೋಟದಲ್ಲಿನ ಬಾಳೆಗೊನೆ ಮತ್ತು ಎರಡು ಸೇರು ಬೆಣ್ಣೆ ತೆಗೆದುಕೊಂಡು ಹೋಗಿ ಕೊಡು, ಅವರು ಕೂಡ ನಮ್ಮ ಕಡೆಯವರು ಎಂದು ಬೇರೆ ಹೇಳುತ್ತೀಯಾ’ ಎಂದು ತಮ್ಮ ಅವ್ವ ಕೊಟ್ಟರು ಎಂದು ಕಥೆ ಕಟ್ಟಿದ್ದು. ತಂದಿರುವುದನ್ನು ದಯವಿಟ್ಟು ತೆಗೆದುಕೊಳ್ಳಬೇಕೆಂದು ಅವರ ಮನೆಗೆ ತಂದು ಕೊಟ್ಟಿದ್ದನು. ಅವನು ತಂದುಕೊಟ್ಟ ಬೆಣ್ಣೆ, ಬಾಳೆಗೊನೆ ಬಂದಾದ ಮೇಲೆ ಅವನ ಬಗ್ಗೆ ಒಂದು ರೀತಿಯ ಮೊದಲಿನ ಕಾಠಿಣ್ಯತೆ ಕರಗಿ, ಸ್ವಲ್ಪ ಉದಾರಿಗಳಾದರು. ಈ ರೀತಿಯ ನಾಟಕವನ್ನು ವರ್ಷದಲ್ಲಿ ಒಂದೆರಡು ಬಾರಿ ಮಾಡಿ ಅವರಿಂದ ಕ್ಲಾಸಿನಲ್ಲಿ ಆಗುತ್ತಿದ್ದ ಅವಮಾನದಿಂದ ಪಾರಾಗಿದ್ದ ಹಾಗೂ ಎಂ.ಎ.ನಲ್ಲಿ ಎರಡನೇ ದರ್ಜೆಯಲ್ಲಿ ಪಾಸಾಗಿದ್ದ.
ಅವನಿಗೆ ನಾನು ಇದೇನು ನೀನು ನಿಜವಾಗಿಯೂ ನಿನ್ನ ಊರಿನಿಂದ ತಂದ ಬಾಳೆಗೊನೆಯೆ ಎಂದು ಹಾಸ್ಟೆಲ್‌ನಲ್ಲಿ ಕೇಳಿದಾಗ ನಿಜ ಸಂಗತಿಯನ್ನು ಬಿಚ್ಚಿಟ್ಟಿದ್ದ. ‘ಏನ್ಮಾಡ್ತೀಯಪ್ಪ ಎಸ್‌ಸಿಗಳನ್ನ ಕಂಡ್ರೆ ನಿಮ್ಮ ಮೇಡಂಗೆ ಆಗಲ್ಲ, ಮದುವೆಯಾದವರನ್ನ ಕಂಡ್ರೆ ಇನ್ನೂ ಆಯಮ್ಮನಿಗೆ ಆಗಲ್ಲ. ನಾನು ಮದುವೆಯಾಗಿರುವ ಎಸ್‌ಸಿ ಬೇರೆ, ಏನಾದರೂ ಮಾಡಿ ಈ ಸಂಕಷ್ಟ ದಿಂದ ಪಾರಾಗಲು, ನಾನು ದೇವರಾಜ ಮಾರುಕಟ್ಟೆಯಿಂದ ಕೊಂಡು ಊರಿಂದ ತಂದವು ಎಂದು ಹೇಳಿ ನಾಟಕ ಮಾಡಿದೆ, ಈಗ ಅಷ್ಟರಮಟ್ಟಿಗೆ ನನ್ನ ಕಷ್ಟ ಪರಿಹಾರವಾಗಿದೆ’ ಎಂದು ಅಲವತ್ತುಕೊಂಡಿದ್ದನು. ಹೀಗೆ ಪರ‍್ವತಕ್ಕನ ಅಪಾರ ಸಾಧನೆಗಳ ಜೊತೆಗೆ ಸಾಮಾನ್ಯ ವಿಷಯಗಳಲ್ಲಿ ಯಾರಾದರೂ ಹೊಗಳಿದರೆ, ಅವರನ್ನು ಪೂರ್ತಿ ಮಾಫಿ ಮಾಡಿ ಸಹಾಯ ಮಾಡುತ್ತಿದ್ದರು. ಇಲ್ಲವಾದರೆ ಸಾಮಾನ್ಯರಂತೆ ಸೇಡಿಗೆ ಬಿದ್ದು ತೊಂದರೆ ಕೂಡ ಕೊಡುವ ಮಟ್ಟಕ್ಕೆ ಇಳಿಯುತ್ತಿದ್ದರು.
ಅವರ ವ್ಯಕ್ತಿತ್ವದಲ್ಲಿನ ಈ ಕೊರತೆಯಿಂದಾಗಿಯೇ ಅವರ ಶೈಕ್ಷಣಿಕ ಮಟ್ಟ ಎಷ್ಟೇ ಔನ್ನತ್ಯದಲ್ಲಿದ್ದರೂ, ಸಾರ್ವಜನಿಕರೊಡನೆ ಅವರಿಗಿದ್ದ ಸಿಡುಕಿನ ನಡವಳಿಕೆಯಿಂದಾಗಿ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದನ್ನು ಬಿಟ್ಟರೆ ಮುಂದೆ ಬೇರೇನೂ ಆಗಲಿಲ್ಲ. ಅವರಿಗಿಂತ ಶೈಕ್ಷಣಿಕವಾಗಿ ಕಡಿಮೆ ಇದ್ದವರು ಅನೇಕ ರೀತಿಯ ಪ್ರತಿಷ್ಠಿತ ಹುದ್ದೆಗಳಿಗೇರಿದ್ದರು.

ಇಂತಹ ಘಟನೆಗಳನ್ನೆಲ್ಲಾ ದಿನವೂ ನೋಡಿ ಅನುಭವಿಸುತ್ತಿರುವ ಸಮಯದಲ್ಲಿಯೇ ಬಸವಣ್ಯಪ್ಪ ಉಮಾಳನ್ನು ಮದುವೆಯಾಗುವ ಬಗ್ಗೆ ಪರ‍್ವತಕ್ಕನಿಗೆ ತಿಳಿಸಿದ. ಆಶ್ರ‍್ಯಕರ ಬೆಳವಣಿಗೆಯಂತೆ, ಬೇರೆಲ್ಲಾ ಮಾತಾದ ನಂತರ ಉಮಾಳನ್ನು ಪರ‍್ವತಕ್ಕ ದತ್ತು ಪಡೆದು ಬಸವಣ್ಯಪ್ಪನಿಗೆ ಮದುವೆ ಮಾಡಿಸುವುದಾಗಿ ಇವರೇ ತೀರ್ಮಾನಿಸಿದರು. ಸುಮಿತ್ರಾ ಬಾಯಿ, ಉಮಾ ಅವರ ತಂದೆ ಆಗಿನ ಕಾಲಕ್ಕೆ ಕೇಂದ್ರ ಸರ್ಕಾರ ಸ್ವಾಮ್ಯದ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆಯಲ್ಲಿದ್ದರು. ಅವರದೊಂದು ದೊಡ್ಡ ಕುಟುಂಬ. ಉಮಾ ಮದುವೆಯಾದರೆ ನಂತರದಲ್ಲಿರುವ ಇನ್ನೂ 2-3 ಹೆಣ್ಣುಮಕ್ಕಳ ಮದುವೆ ಚಿಂತೆಯ ಜೊತೆಗೆ ಇದೊಂದು ಅಂತರ ಜಾತೀಯ ಮದುವೆಯ ಕಾರಣಕ್ಕೆ ಅವರ ಅಪ್ಪ ಅಮ್ಮ ಒಪ್ಪಿರಲಿಲ್ಲ. ಅದಕ್ಕಾಗಿಯೇ ಪರ‍್ವತಮ್ಮನವರು ಮುಂದೆ ನಿಂತು ಮದುವೆ ನಿರ್ವಹಿಸುವುದೆಂದು ಮದುವೆಯ ಚರ್ಚೆ ಬಂದಾಗ ತೀರ್ಮಾನವಾಯಿತು.

ನಂತರದ ದಿನಗಳಲ್ಲಿ ಉಮಾ ಆಗಾಗ ಪಾರ‍್ವತಕ್ಕನವರ ಮನೆಗೆ ಬಂದು ಹೋಗುವ ಸಂದರ್ಭದಲ್ಲಿ ಉಮಾ ಮತ್ತು ಪಾರ‍್ವತಕ್ಕನಿಗೆ ಸರಿಯಾದ ರೀತಿಯ ಹೊಂದಿಕೆಯಾಗದೆ ಮೊದಲು ಮದುವೆಗೆ ಒಪ್ಪಿದ್ದರೂ ದಿಢೀರನೆ ನಿರ್ಧಾರ ಬದಲಿಸಿ, ಅವಳನ್ನು ಮದುವೆಯಾಗುವುದು ಬೇಡ ಎಂದು ಬಸವಣ್ಯಪ್ಪನಿಗೆ ಹೇಳಿ ಒಪ್ಪಿಸಲು ನೋಡಿದರು. ಆದರೆ ಉಮಾ ಮತ್ತು ಬಸವಣ್ಯಪ್ಪ ಆ ಬಗ್ಗೆ ಇಬ್ಬರೂ ದೃಢ ನಿರ್ಧಾರ ತೆಗೆದುಕೊಂಡಾಗಿತ್ತು. ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಬಸವಣ್ಯಪ್ಪನ ಮದುವೆಯ ರಾಯಬಾರಿಗಳಾಗಿ ನಾನೂ, ಆಲನಹಳ್ಳಿ ಕೃಷ್ಣ, ಆಗ ತಾನೇ ಧಾರವಾಡದಿಂದ ಮೈಸೂರಿಗೆ ಬಂದಿದ್ದ ರಾಜಶೇಖರ ಕೋಟಿ ಮತ್ತು ಪ್ರಜಾವಾಣಿಯಲ್ಲಿ ಕೆಲಸದಲ್ಲಿದ್ದ ಹೊಸಹಳ್ಳಿ ಶಿವರಾಂ ನಾವೆಲ್ಲ ಉಮಾಳ ಊರಾದ ಮಂಡ್ಯದಲ್ಲಿದ್ದ ಅವರ ತಂದೆಯ ಮನೆಗೆ, ಅಲ್ಲಿನ ಪುರಸಭೆಯ ಅಧ್ಯಕ್ಷರಾಗಿದ್ದ ಹೊನ್ನಯ್ಯನವರ ಮುಖಾಂತರ ಉಮಾ ಅವರ ತಂದೆಯ ಬಳಿಗೆ ಹೆಣ್ಣು ಕೇಳುವ ಪ್ರಸ್ತಾಪ ಮಾಡಿದೆವು. ಅವರ ತಂದೆ ನಮ್ಮ ಜಾತಿಯಲ್ಲದ ಜಾತಿಕನಿಗೆ ಹೆಣ್ಣು ಕೊಡಲು ತಯಾರಿಲ್ಲವೆಂದು ಕಡ್ಡಿ ಮುರಿದಂತೆ ತಿಳಿಸಿದರು. ಬಸವಣ್ಯಪ್ಪ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪಾಸಾದ ವಿಚಾರವಾದಿ ವ್ಯಕ್ತಿ ಹಾಗೂ ನನ್ನ ಒಬ್ಬ ಒಳ್ಳೆಯ ಸ್ನೇಹಿತ, ಅವನಿಗೆ ನಿಮ್ಮ ಮಗಳನ್ನು ಕೊಟ್ಟರೆ ಅವರಿಬ್ಬರೂ ಸುಖವಾಗಿರುವರೆಂದು ವಾದಿಸಿದೆ. ಜೊತೆಗೆ ಜಾತಿ ವ್ಯವಸ್ಥೆಯ ವಿರುದ್ಧ ನಾವೆಲ್ಲ ಇರಬೇಕೆಂದಾಗ, `ನಾನೇನು ಜಾತಿ ಹೋಗಬೇಕೆಂದು ಮಕ್ಕಳನ್ನು ಹಡೆದಿಲ್ಲವೆಂದು’ ಅದೇ ಮಾತು ಹೇಳಿ ಮುಗಿಸಿದ್ದರು. ಕಡೆಗೆ ನೀವು ಸಹಕರಿಸಿದರೂ ಸರಿ, ವಿರೋಧಿಸಿದರೂ ಸರಿಯೆ ಮದುವೆಯನ್ನು ನಾವು ಮಾಡಲು ತಯಾರಿ ನಡೆಸಿರುವುದಾಗಿ ತಿಳಿಸಿ ಅವರ ಮನೆಯಿಂದ ಹೊರಬಂದಿದ್ದೆವು. ಮೈಸೂರಿನ ಹಿರಿಯ ಸಮಾಜವಾದಿ ಚಿಂತಕ, ಹೃದಯವಂತ ವಕೀಲರಾದ ಟಿ.ಎನ್. ನಾಗರಾಜ್ ಅವರ ಬಳಿ ಹೋಗಿ ರಿಜಿಸ್ಟರ್ ಮದುವೆಯಾಗುವ ಬಗ್ಗೆ ಚರ್ಚಿಸಿ ದಿನವೊಂದನ್ನು ನಿಗದಿಪಡಿಸಿ ಮೈಸೂರು ಸಬ್‌ರಿಜಿಸ್ಟಾçರ್ ಕಛೇರಿಯಲ್ಲಿ ರಿಜಿಸ್ಟರ್ ಮಾಡಿಸಿದೆವು. ಅವರ ಮದುವೆಯ ನಂತರ ಸಂಭ್ರಮದ ಸಂತೋಷ ಕೂಟವನ್ನು ದಾಸ್ ಪ್ರಕಾಶ್ ಹೋಟೆಲ್‌ನಲ್ಲಿ ಆಪ್ತ ಗೆಳೆಯರಿಗಾಗಿ ವ್ಯವಸ್ಥೆ ಮಾಡಿದ್ದೆವು. ಮೈಸೂರಿನ ಹಿರಿಯ ಸಮಾಜವಾದಿಗಳು ಡಾ. ಯು.ಆರ್. ಅನಂತಮೂರ್ತಿ, ಪ್ರೊ. ರಾಮಲಿಂಗಂ, ರಾಜಶೇಖರ ಕೋಟಿ, ಮಹಾದೇವ, ಭಕ್ತ, ಅರ್ಕೇಶ್, ಮಹೇಶ, ಉಮಾಳ ಅಕ್ಕ ಸುಮಿತ್ರಾಬಾಯಿ ಎಲ್ಲರೂ ಸಂಭ್ರಮದಲ್ಲಿ ಭಾಗವಹಿಸಿದ್ದೆವು. ಪರ‍್ವತಕ್ಕನವರ ಅಭಿಪ್ರಾಯದ ವಿರುದ್ಧ ಬಸವಣ್ಯಪ್ಪ ಉಮಾಳನ್ನು ಮದುವೆಯಾದ ಕಾರಣ ಅವನಿಗೆ ನೀಡಿದ್ದ ಸಹಾಯಕ ನಿರ್ದೇಶಕರ ಹುದ್ದೆಯಿಂದ ಅವನನ್ನು ಬಿಡುಗಡೆಗೊಳಿಸಿದ್ದರು. ನನಗೂ ಅಲ್ಲೇ ಕೆಲಸ ನೀಡುವರೆಂದು ಹೇಳಿದ ಮಾತನ್ನು ಮಾನ್ಯ ಮಾಡಲು ಒಪ್ಪಲಿಲ್ಲ. ಅವನು ಮದುವೆ ಮಾಡಿಕೊಂಡು ನಿರುದ್ಯೋಗಿಯಾಗಿದ್ದ. ನಾನು ಅವನನ್ನು ಬೆಂಬಲಿಸಿದ ಕಾರಣಕ್ಕೆ ಕೆಲಸದ ನಿರೀಕ್ಷೆಯಲ್ಲಿದ್ದ ನನಗೆ ಕೆಲಸ ನೀಡಲು ನಿರಾಕರಿಸಿದ್ದರು.

ನನಗೆ ಸ್ನೇಹಿತನೊಬ್ಬನ ಪ್ರೀತಿಗೆ ನೀರೆರದ ತೃಪ್ತಿಯಲ್ಲಿದ್ದೆ. ಕೆಲಸದ ಹುಡುಕಾಟದಲ್ಲಿದ್ದು ಇಲ್ಲಿಯೇ ಇರಲು ಆಗುವುದಿಲ್ಲ ಎಂದು ತೀರ್ಮಾನಿಸಿದೆ. ಮೈಸೂರಿನಿಂದ ಊರಿಗೆ ಹೋಗುವ ಸಲುವಾಗಿ ನಮ್ಮ ರೂಂನಲ್ಲಿಟ್ಟಿದ್ದ ಸಣ್ಣಪುಟ್ಟ ವಸ್ತುಗಳನ್ನು ಜೋಡಿಸಿಕೊಂಡು, ಸಂಜೆ ಪರ‍್ವತಕ್ಕನ ಮನೆಯಲ್ಲಿದ್ದ ನನ್ನ ಹಳೆಯ ಟ್ರಂಕ್ ತೆಗೆದುಕೊಂಡು ಬರಲು ಹೋದೆ. ಅವರು ನಾವೆಲ್ಲ ಅವರ ಮಾತಿಗೆ ಓಗೊಡದೆ ಮದುವೆ ಮಾಡಿ ಮುಗಿಸಿದ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡು ವ್ಯಗ್ರಗೊಂಡಿದ್ದರು. ನಮ್ಮವನಾಗಿದ್ದ ನೀನು ಬಸವಣ್ಯಪ್ಪನಿಗೆ ಸಪೋರ್ಟ್ ಮಾಡಿದೆ. ಎಂದು ಹೇಳುತ್ತಾ ಭಾವುಕರಾದರು. ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಇನ್ನು ಅವರಿಗೆ ನನ್ನ ಯಾವ ವಿವರಣೆಗಳೂ ಸಹ್ಯವಾಗುವುದಿಲ್ಲ ಎಂದು ಸುಮ್ಮನಿದ್ದೆ. ನಂತರ ನಾನು ನಮ್ಮ ಊರಿಗೆ ಹೋಗುತ್ತಿರುವುದಾಗಿ ಹೇಳಿ ಹೊಸಿಲು ದಾಟುತ್ತಿದ್ದಾಗ ನಿಮ್ಮ ಪ್ರೊ. ಮಾದಯ್ಯನವರು ಬರಲು ಹೇಳಿದ್ದಾರೆ ಹೋಗಿ ನಾಳೆ ನೋಡು ಎಂದು ಹೇಳಿದರು.
ಬಸವಣ್ಯಪ್ಪ-ಉಮಾರ ಮದುವೆ ನಂತರ ಊರಕಡೆ ಹೊರಟಿದ್ದ ನನಗೆ ಪರ‍್ವತಕ್ಕ ನಮ್ಮ ವಿಭಾಗದ ಪ್ರೊ. ಮಾದಯ್ಯನವರನ್ನು ನೋಡಲು ಹೇಳಿದಂತೆ, ಅವರ ಚೇಂಬರ್‌ನಲ್ಲಿ ಮಾರನೆಯ ದಿನ ಹೋಗಿ ನೋಡಿದೆ. ಅವರಿಗೆ ನನ್ನ ಮತ್ತು ಬಸವಣ್ಯಪ್ಪನ ಸ್ನೇಹ ಮತ್ತು ಆಗಿರುವ ಮದುವೆ ಅದರಲ್ಲೂ ಮೈಸೂರಿನ ಗಣ್ಯವ್ಯಕ್ತಿಗಳ ಭಾಗವಹಿಸುವಿಕೆ ಎಲ್ಲಾ ತಿಳಿದಿತ್ತು. ಸ್ವತಃ ಪ್ರೊ. ಎಂ. ಮಾದಯ್ಯನವರು ವಿದೇಶದಲ್ಲಿಯೇ ಅಂತರ ಜಾತಿ ವಿವಾಹವಾಗಿ ಬಂದವರು. ವಿದೇಶಿ ಹೆಂಡತಿಗೆ ಮತ್ತೆ ಮಠಗಳಲ್ಲಿ ಲಿಂಗ ಕಟ್ಟಿಸಿ ಲಿಂಗಾಯತರಲ್ಲಿ ಒಪ್ಪಿತರಾಗಿದ್ದವರು. ಅವರು`ಪಾರ‍್ವತಕ್ಕನವರು ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವವರು. ಮುಂದೆ ವಿ.ಸಿ. ಮತ್ತು ಅದಕ್ಕೂ ಹೆಚ್ಚಿನ ಹುದ್ದೆಗಳಿಗೆ ಏರುತ್ತಾರೆ. ನೀನಿನ್ನು ವಿದ್ಯಾರ್ಥಿ ಅವರ ಸಹಾಯ ನಿನಗೆ ಬೇಕಾಗುತ್ತದೆ ಆದ್ದರಿಂದ ಅವರಿಂದ ದೂರ ಹೋಗುವುದು ಜಾಣತನವಲ್ಲ ಎಂದೆಲ್ಲ ಹೇಳಿ ನಿನಗೆ ಅವರ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಕೊಡುತ್ತಾರೆ ನಾಳೆ ಹೋಗಿ ನೋಡು’ ಎಂದು ನನಗೆ ಹೇಳಿದರು. ನನ್ನ ಎಂ.ಎ. ವಿದ್ಯಾಭ್ಯಾಸ ಮುಗಿದು ಸಂತೋಷ ಪಡಬೇಕಾದ ದಿನಗಳಲ್ಲಿ ಹೆಚ್ಚು ದ್ವಂದ್ವಗಳಲ್ಲಿ ಸಿಲುಕಿಕೊಂಡ ಅನುಭವವಾಗಿತ್ತು.
ಮಾರನೇ ದಿನ ನಾನು ಮತ್ತೆ ಪರ‍್ವತಕ್ಕನವರ ಡಿಪಾರ್ಟ್ಮೆಂಟ್‌ಗೆ ಭೇಟಿ ಮಾಡಲು ಹೋದಾಗ ನನ್ನ ರಿಸಲ್ಟ್ ಬಂದ ಮಾರನೇ ದಿನದಿಂದಲೇ ಕೆಲಸಕ್ಕೆ ಹಾಜರಾಗುವಂತೆ ರಿಪೋರ್ಟ್ ಮಾಡಿಸಿಕೊಂಡರು. ನನ್ನ ತಳಮಳ ತಾತ್ಕಾಲಿಕವಾಗಿ ಶಮನಗೊಂಡಿತ್ತು. ನನ್ನ ಎರಡು ಮೂರು ದಿನಗಳಲ್ಲಿನ ಅನಿಶ್ಚತೆಯೊಂದು ಅಂದು ಕೊನೆಗೊಂಡಿತ್ತು. ಓದಿನ ಕರ್ತವ್ಯ ಮುಗಿದು ಈಗ ಹೊಸ ಪ್ರಾಜೆಕ್ಟ್ವೊಂದರ ಕೆಲಸಕ್ಕೆ ಸೇರಿದ್ದೆ. ಮೊದಲೇ ಇದ್ದ 5-6 ಜನರೊಡನೆ ಕೂತು ಸರ್ವೆ ಮಾಡಿ ತಂದ ಉತ್ತರಗಳನ್ನು ಕೋಡ್ ಶೀಟ್‌ನಲ್ಲಿ ದಾಖಲಿಸಬೇಕಾಗಿತ್ತು. ದಿನಕ್ಕೆ ಯಾರು ಎಷ್ಟು ಶೀಟ್ ತುಂಬಿಸಿದ್ದಾರೆ ಎನ್ನುವುದನ್ನು ನಿರ್ದೇಶಕರು ವಾರದಲ್ಲಿ ಎರಡು ಮೂರು ಬಾರಿ ರಿವ್ಯೂ ಕೂಡ ಮಾಡುತ್ತಿದ್ದರು. ಪ್ರಾರಂಭದಲ್ಲಿ ನಿಧಾನಗತಿಯ ನನ್ನ ಕೆಲಸಕ್ಕೆ ಅಸಮಾಧಾನಗೊಂಡಿದ್ದರು. ನಂತರದ ದಿನಗಳಲ್ಲಿ ಅದೇ ಕೆಲಸವನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಯಿತು.
ಮದುವೆಯಾಗಿ ಕೆಲಸ ಕಳೆದುಕೊಂಡಿದ್ದ ಬಸವಣ್ಯಪ್ಪನಿಗೆ ಹುಣಸೂರಿನ ಪ್ರೈವೇಟ್ ಕಾಲೇಜಿನಲ್ಲಿ ಕೆಲಸ ಸಿಕ್ಕು ಅವನು ಅಲ್ಲಿ ಸಂಸಾರ ಹೂಡಿದ್ದ. ಒಳ್ಳೆಯ ಅಧ್ಯಾಪಕನೆಂದು ಹೆಸರು ಕೂಡಾ ಮಾಡಿದ್ದ. ನಾನು ಸೋಷಿಯಾಲಜಿ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಬಸವಣ್ಯಪ್ಪನ ಸ್ನೇಹವನ್ನು ತೊರೆಯುತ್ತೇನೆ ಎಂದು ಭಾವಿಸಿದ್ದ ಪಾರ‍್ವತಕ್ಕನಿಗೆ ನಿರಾಶೆಯಾಗಿತ್ತು.

ಹುಣಸೂರಿನಿಂದ ಆಗಾಗ ಮೈಸೂರಿಗೆ ಬಸವಣ್ಯಪ್ಪ ಬಂದಾಗ ನಾನು ಎದ್ದು ಹೊರ ಹೋಗಿ ಕ್ಯಾಂಟೀನ್‌ನಲ್ಲಿ ಕೂತು ಮಾತಾಡಿಕೊಂಡು ಕಳಿಸುತ್ತಿದ್ದೆ. ಅವನ ಸ್ನೇಹವನ್ನು ಮುಂದುವರಿಸುವುದು ಪರ‍್ವತಕ್ಕನಿಗೆ ಸಹಮತವಿಲ್ಲವೆಂಬಂತೆ ಅವರು ಮಾತಾಡುತ್ತಿದ್ದರು. ಒಂದು ಕಡೆ ಸ್ನೇಹ ಇನ್ನೊಂದು ಕಡೆ ಸಹಾಯ ಹಸ್ತ ನೀಡಿದ ನಮ್ಮವ್ವನ ಜೊತೆ ಓದಿದ ಪಾರ‍್ವತಕ್ಕ ನಮಗೆಲ್ಲ ಸಹಾಯ ಮಾಡಿದವರು. ಷೇಕ್ಸ್ಪಿಯರ್ ನಾಟಕದ ಹ್ಯಾಮ್ಲೆಟ್‌ನ ಮಾನಸಿಕ ಹೊಯ್ದಾಟದಂತಾಗಿತ್ತು ನನ್ನ ಸ್ಥಿತಿ.
ಈ ಹೊಯ್ದಾಟದಲ್ಲಿರುವಾಗಲೇ ನಾನು ನಮ್ಮ ಊರಿಗೆ ಹೋಗಿದ್ದೆ. ಆಗತಾನೆ ಸಾರ್ವತ್ರಿಕ ಚುನಾವಣೆಗಳು ನಡೆದು ನಮ್ಮೂರಿನ ಸಿದ್ಧವೀರಪ್ಪನವರು ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು. ನಾನು ಮಂತ್ರಿಗಳಾದ ಸಿದ್ದವೀರಪ್ಪನವರನ್ನು ಭೇಟಿ ಮಾಡುವ ಬಗ್ಗೆ, ಊರಿನಲ್ಲಿ ವಿಚಾರಿಸಿ ಮಾತಾಡಿದೆ. ಸಿದ್ದವೀರಪ್ಪನವರ ತಮ್ಮನ ಮಗ ಬಸವಂತಪ್ಪ ಊರಲ್ಲಿ ಒಂದು ಸಣ್ಣ ಕಿರಾಣಿ ಅಂಗಡಿ ಜೊತೆ ಟೀ ಕೂಡ ತಯಾರಿಸುತ್ತಿದ್ದ. ನಾವೆಲ್ಲ ಟೀ ಕುಡಿದು ಅವನ ಅಂಗಡಿಯಲ್ಲಿ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಿದ್ದೆವು. ಸಿದ್ದವೀರಪ್ಪನವರನ್ನು ನೋಡಲು ಬೆಂಗಳೂರಿಗೆ ಹೋಗುವ ಬಗ್ಗೆ ಊರಲ್ಲಿ ನಾಟಕ ಹೇಳಿಕೊಡುತ್ತಿದ್ದ ರುದ್ರಪ್ಪ ಮಾಸ್ತರು ಮತ್ತು ಬಸವಂತಪ್ಪ ನನ್ನ ಜೊತೆ ಬೆಂಗಳೂರಿಗೆ ಬರುವುದಾಗಿ ಒಪ್ಪಿದರು. ನಾನೂ ತಡಮಾಡದೆ ಮಾರನೆ ದಿನ ಅವರನ್ನು ಕರೆದುಕೊಂಡು ಬೆಂಗಳೂರಿನ ಜಯನಗರದಲ್ಲಿದ್ದ ಸಿದ್ದವೀರಪ್ಪನವರ ಮನೆ ತಲುಪಿದೆವು. ಅವರನ್ನು ಕಂಡು ನಾನು, ನನ್ನ ತಂದೆಯ ನೆನಪು ಮಾಡಿ ನಂತರ ನಾನು ಎಂ.ಎ. ಅರ್ಥಶಾಸ್ತ್ರದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಾಸಾಗಿರುವ ಸುದ್ದಿ ಕೇಳಿ ತುಂಬಾ ಸಂತೋಷಪಟ್ಟರು. ಅಲ್ಲಿಂದಲೇ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ಡಿ.ವಿ. ಅರಸು ಅವರಿಗೆ ಫೋನ್ ಮಾಡಿದರು. ನನಗೆ ಹೋಗಿ ಅವರನ್ನು ಭೇಟಿ ಮಾಡಲು ಸೂಚಿಸಿದರು. ನಾವೆಲ್ಲರೂ ನಮಸ್ಕರಿಸಿ ನನ್ನೊಡನೆ ಬಂದಿದ್ದ ರುದ್ರಪ್ಪ ಮಾಸ್ತರ್ ಮತ್ತು ಬಸವಂತಪ್ಪನನ್ನು ಊರಿಗೆ ಕಳಿಸಿ ನಾನು ಮೈಸೂರಿಗೆ ಬಂದೆ. ಸೋಮವಾರ ಕಳೆದು ಮಂಗಳವಾರದ ಮಧ್ಯಾಹ್ನ ಕ್ರಾಫರ್ಡ್ ಹಾಲ್‌ನ ಬಲ ಭಾಗದಲ್ಲಿದ್ದ ರಿಜಿಸ್ಟಾ್ರ್ ಚೇಂಬರ್‌ಗೆ ಹೋಗಿ ನನ್ನ ಪರಿಚಯ ಮಾಡಿಕೊಂಡೆ. ನನ್ನನ್ನು ಕೂರಲು ಹೇಳಿದ ಅವರು ಕೇಸ್ ವರ್ಕರ್‌ರನ್ನು ಬರಹೇಳಿ ಆದೇಶವನ್ನು ಟೈಪ್ ಮಾಡಿ ತರಲು ಹೇಳಿದರು. ಅರ್ಧ ಗಂಟೆಯಲ್ಲಿ ಮೈಸೂರು ಮಹಾರಾಜ ಕಾಲೇಜಿಗೆ ಸ್ಥಳೀಯ ಅಭ್ಯರ್ಥಿಯಾಗಿ ಉಪನ್ಯಾಸಕ ಹುದ್ದೆಗೆ ನೇಮಕ ಮಾಡಿದ ಆದೇಶ ನನ್ನ ಕೈಯಲ್ಲಿ ಇತ್ತು. ಇಂದು ಮಂಗಳವಾರ ನಾಳೆ ಹೋಗಿ ರಿಪೋರ್ಟ್ ಮಾಡಿಕೊಳ್ಳುತ್ತೇನೆಂದು ಹೇಳುತ್ತಿದ್ದಂತೆ ನೋ.. ನೋ.. ಈಗಲೇ ಹೋಗಿ ರಿಪೋರ್ಟ್ ಮಾಡಿಕೊ ಎಂದು ಅಲ್ಲಿಂದಲೇ ಮಹಾರಾಜಾ ಕಾಲೇಜಿಗೂ ಫೋನ್ ಮಾಡಿ ತಿಳಿಸಿದರು. ಆಗಷ್ಟೆ ವಿದ್ಯಾರ್ಥಿದೆಸೆ ಮುಗಿಸಿ 3-4 ತಿಂಗಳ ಸಂಶೋಧಕ ಸಹಾಯಕನ ಹುದ್ದೆ ಮಾಡಿಕೊಂಡಿದ್ದ ನನಗೆ ನಿಂತ ಗಳಿಗೆಯಲ್ಲಿ ಉಪನ್ಯಾಸಕ ಹುದ್ದೆಯ ಆದೇಶ ನೋಡಿ ನನ್ನನ್ನು ನಾನೇ ನಂಬದಂತಾಗಿದ್ದೆ. ಈಗ್ಗೆ ನಾನು ಎರಡು ವರ್ಷಗಳ ಹಿಂದೆಯಷ್ಟೇ ನಾನು ಓದಿಕೊಂಡಿದ್ದ ಕಾಲೇಜಿಗೆ ಉಪನ್ಯಾಸಕ ಹುದ್ದೆಯ ಆದೇಶ ಹಿಡಿದು ಕಾಲೇಜಿಗೆ ಹೋದೆ. ನನ್ನನ್ನು ನೋಡಿದ ಅಲ್ಲಿನ ಕಛೇರಿ ಸೂಪರಿಂಟೆಂಡ್ ಮತ್ತು ಪ್ರಿನ್ಸಿಪಾಲರು ಮೊದಲಿಗೆ ನನ್ನನ್ನು ಯಾರೋ ವಿದ್ಯಾರ್ಥಿ ಎಂದೇ ಭಾವಿಸಿದ್ದರು. ನನ್ನಲ್ಲಿದ್ದ ಆದೇಶವನ್ನು ತೋರಿಸಿ ದಿನಾಂಕ 4.12.1974ರಂದು ಮಧ್ಯಾಹ್ನ ಉಪನ್ಯಾಸಕ ಹುದ್ದೆಗೆ ಹಾಜರಾಗಿದ್ದೆ.

ಮುಂದುವರಿಯುವುದು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ

Published

on

ಸುದ್ದಿದಿನ,ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ. 29 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ :08182-255293/ 9108235132/8151093747/ 9482023412 ಗಳ ಮೂಲಕ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಟಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

Published

on

ಸುದ್ದಿದಿನ,ದಾವಣಗೆರೆ:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂನ್ 30 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಟಿಇಟಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಇಟಿ ಪರೀಕ್ಷೆಯನ್ನು ಯಾವುದೇ ಲೋಪ ದೋಷಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷಾ ಪಾವಿತ್ರ್ಯತೆ ಗೆ ಯಾವುದೇ ಧಕ್ಕೆಯಾಗದಂತೆ ನಡೆಸಲು ಕೇಂದ್ರದ ಅಧೀಕ್ಷಕರು ಗಳಿಗೆ ಸೂಚನೆ ನೀಡಿ ಕೇಂದ್ರದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ತಿಳಿಸಿದರು.

ಜೂನ್ 30 ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ 11 ಕೇಂದ್ರಗಳಲ್ಲಿ 3805 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4.30 ವರೆಗೆ 19 ಕೇಂದ್ರಗಳಲ್ಲಿ 6150 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು.

144 ಸೆಕ್ಷನ್ ಜಾರಿ. ಪರೀಕ್ಷಾ ಅವ್ಯವಹಾರ ಹಾಗೂ ಸುಗಮ ಪರೀಕ್ಷೆಗಾಗಿ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಇರುತ್ತದೆ. ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಅಂಗಡಿ, ಇಂಟರ್ ನೆಟ್ ಸೆಂಟರ್ ಮುಚ್ಚಲು ಆದೇಶಿಸಲಾಗುತ್ತದೆ. ಮತ್ತು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವಂತಿಲ್ಲ. ಕೇಂದ್ರದ ಪ್ರವೇಶಕ್ಕೂ ಮೊದಲು ತಪಾಸಣೆ ಮಾಡಿ ಪ್ರವೇಶ ನೀಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending