Connect with us

ದಿನದ ಸುದ್ದಿ

ವಾಹನ ಸವಾರರೇ ಎಚ್ಚರ | ದಾವಣಗೆರೆ ಸಂಚಾರಿ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ; ಬಿತ್ತು ದಂಡ

Published

on

ಸುದ್ದಿದಿನ,ದಾವಣಗೆರೆ:ನಗರದಲ್ಲಿ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿಜಯಕುಮಾರ ಎಂ ಸಂತೋಷ ರವರು ಹಾಗು ಮಂಜುನಾಥ ಜಿ ಮತ್ತು ನಗರ ಡಿವೈಎಸ್ಪಿ ರವರಾದ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜುನಾಥ ನಲವಾಗಲು ರವರ ನೇತೃತ್ವದಲ್ಲಿ ದಕ್ಷಿಣ ಸಂಚಾರ ಹಾಗೂ ಉತ್ತರ ಸಂಚಾರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡಗಳು ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಶುಕ್ರವಾರ ಅರಿವು ಮೂಡಿಸಿದರು.

ನಗರದ ವಿವಿಧ ಕಡೆ ಕರ್ಕಶ ದ್ವನಿ ಸೂಸುವ ಸೈಲೆನ್ಸರ್ (Defective Silencers), ಕರ್ಕಶ ದ್ವನಿ ಸೂಸುವ ಹಾರ್ನ್ (Shrill Horns) ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ವಾಹನ ಸವಾರರಿಗೆ ಸ್ಥಳದಂಡವನ್ನುವಿಧಿಸಲಾಗಿರುತ್ತದೆ ಅಲ್ಲದೇ ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಸ್ಥಳದಂಡವನ್ನು ವಿಧಿಸಲಾಗಿದ್ದು, ವಾಹನ ಸವಾರರಿಗೆ ಸಂಚಾರ ನಿಯಮಗಳ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಲಾಯಿತು.

ಕರ್ಕಶ ದ್ವನಿ ಸೂಸುವ ಹಾರ್ನ್ (Shrill Horns) ಗಳಿಗೆ ಸಂಬಂಧಿಸದಂತೆ ಒಟ್ಟು 25 ಪ್ರಕರಣಗಳಲ್ಲಿ 12,500/- ಸಾವಿರ ರೂ ದಂಡ.
ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸದಂತೆ ಒಟ್ಟು 105 ಪ್ರಕರಣಗಳಲ್ಲಿ 53,000/- ಸಾವಿರ ರೂ ದಂಡ.
Tripple riding ಸಂಬಂಧಿಸಿದಂತೆ 20 ಪ್ರಕರಣಗಳಲ್ಲಿ 10,000/- ಸಾವಿರ ರೂ ದಂಡ.
Rackless Driving ಸಂಬಂಧಿಸಿದಂತೆ 2 ಪ್ರಕರಣಗಳಲ್ಲಿ 3000/- ಸಾವಿರ ರೂ ದಂಡ.
ಸೀಟ್ ಬೆಲ್ಟ್ ಗೆ ಸಂಬಂಧಿಸಿದಂತೆ 12 ಪ್ರಕರಣಗಳಲ್ಲಿ 6000/- ಸಾವಿರ ರೂ ದಂಡ.
ಬೈಕ್ ಮತ್ತು ಆಟೋಗಳಲ್ಲಿ Extra passanger ಚಾಲನೆ ಮಾಡಿದ್ದರಲ್ಲಿ 35 ಪ್ರಕರಣಗಳಲ್ಲಿ 7000/- ಸಾವಿರ ರೂ ದಂಡ ಸೇರಿದಂತೆ ಇತರೆ ಸಂಚಾರ ನಿಯಮ ಲ್ಲಂಘನೆ ಪ್ರಕರಣಗಳು ದಾಖಲಾಗಿರುತ್ತವೆ.

ಇನ್ನೂ ಮುಂದೆಯೂ ಇದೇ ರೀತಿಯ ಕಾರ್ಯಚರಣೆಯು ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದ್ದು ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನದ ಇನ್ಶೂರೆನ್ಸ್, ಹೊಂದಿರಬೇಕು, ವಾಹನಗಳಲ್ಲಿ ಕರ್ಕಶ ದ್ವನಿ ಸೂಸುವ ಸೈಲೆನ್ಸರ್ (Defective Silencers), ಕರ್ಕಶ ದ್ವನಿ ಸೂಸುವ ಹಾರ್ನ್ (Shrill Horns) ಗಳ ನ್ನು ಹಾಕಬಾರದು ಹಾಗೂ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸ ಬೇಕು, ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು, ವಾಹನ ಸವಾರರು ಸೀಟ್ ಬ್ಯಾಲ್ಟ್ ಧರಿಸಿರಬೇಕು.

ಅಲ್ಲದೇ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್ಇಡಿ (LED) ದೀಪಗಳನ್ನು ವಾಹನಗಳಿಗೆ ಅಳವಡಿಸುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಕೇಂದ್ರ ಮೋಟಾರು ಕಾಯ್ದೆ(CMV)ಯಲ್ಲಿ ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು, ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಲಾಗುವುದು, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ವಾಹನ ಚಾಲನೆ ಮಾಡುವ ಎಲ್ಲರೂ ಪಾಲಿಸಬೇಕು – ಒಂದು ವೇಳೆ ಸಂಚಾರ ನಿಯಮ ಪಾಲಿಸದೇ ಹೋದರೆ ಅಂತಹ ಚಾಲಕರ ಮೇಲೆ ಇದೇ ರೀತಿ ಕ್ರಮಜರುಗಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಟರು ಸೂಚಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನೇಕಾರ ಸಮ್ಮಾನ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಕೈಮಗ್ಗ, ವಿದ್ಯುತ್ ಮಗ್ಗ, ಹಾಗೂ ಮಗ್ಗ ಪೂರ್ವ ಚಟುವಟಿಕೆಯಲ್ಲಿ ನೋಂದಣಿಯಾಗಿರುವ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆಯಡಿ ವಾರ್ಷಿಕವಾಗಿ ರೂ. 5 ಸಾವಿರ ಸಹಾಧನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರು ಸೇವಾಸಿಂಧು ಪೋರ್ಟಲ್‍ನಲ್ಲಿ ನೋಂದಾಯಿಸಿಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಅಕ್ಟೋಬರ್ 20 ರೊಳಗಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಗೆರೆ ರಾಮಾಂಜನೇಯ ಪ್ಲಾಜಾ, ಕಾಲೇಜ್ ರಸ್ತೆ, ನಿಟ್ಟುವಳ್ಳಿ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 08192-262362 ಸಂಖ್ಯೆಗೆ ಕರೆ ಮಾಡಲು ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ ಬಳಿಕ‌ ವಿಸ್ತೃತವಾದ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ.

ನ್ಯಾಯಾಲಯವು ಸೆಕ್ಷನ್ 218 ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ.

ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನಿನ ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ.

ದೂರುದಾರ ತನ್ನ ದೂರಿನಲ್ಲಿ ಸೆಕ್ಷನ್ 218 ಬಿಎನ್ಎಸ್ಎಸ್, 17 ಎ ಮತ್ತು 19 ಪಿಸಿ ಕಾಯಿದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು ಪ್ರಾಥಮಿಕ ಹಂತದಲ್ಲಿ 19 ಪಿಸಿ ಕಾಯಿದೆ ಪ್ರಕಾರ ಕೇಳಿದ್ದ ಅಭಿಯೋಜನಾ ಅನುಮತಿ‌ ನಿರಾಕರಿಸಿದ್ದರು.

ಈ ದಿನ ಘನ ನ್ಯಾಯಾಲಯ ರಾಜ್ಯಪಾಲರು 218 ಬಿಎನ್ಎಸ್ಎಸ್ ಪ್ರಕಾರ ನೀಡಿರುವ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ.
ಮುಂದಿನ ದಿನಗಳಲ್ಲಿ ಸತ್ಯ ಹೊರಬಂದು 17ಎ ಅಡಿ ನೀಡಿರುವ ತನಿಖೆ ರದ್ದಾಗಲಿದೆ ಎಂಬ ದೃಢ ವಿಶ್ವಾಸ ನನಗಿದೆ.

ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ.
ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ.

ಇದು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ಧದ ಹೋರಾಟ. ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ಧ ನಮ್ಮ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ.

ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ನಿಂತಿದ್ದು, ಕಾನೂನಿನ ಹೋರಾಟ ಮುಂದುವರಿಸುವಂತೆ ಉತ್ತೇಜನ ನೀಡಿದ್ದಾರೆ.

ನಾನು ಬಡವರ ಪರವಾಗಿದ್ದೇನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ದ ಬಿಜೆಪಿ, ಜೆಡಿಎಸ್ ರಾಜಕೀಯ ಪ್ರತಿಕಾರಕ್ಕೆ ಇಳಿದಿದೆ.

ನನ್ನ 40 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಇಂತಹ ಸೇಡು, ಸಂಚಿನ ರಾಜಕೀಯವನ್ನು ಎದುರಿಸಿದ್ದೇನೆ ಮತ್ತು ರಾಜ್ಯದ ಜನರ ಆಶೀರ್ವಾದ, ಹಾರೈಕೆಯ ಬಲದಿಂದ ಗೆಲ್ಲುತ್ತಾ ಬಂದಿದ್ದೇನೆ. ಈ ಹೋರಾಟವನ್ನು ಜನತೆಯ ಆಶೀರ್ವಾದದ ಬಲದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ.

ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶ.

ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ಮುಖಗಳನ್ನು ಒಮ್ಮೆ ರಾಜ್ಯದ ಜನತೆ ಸರಿಯಾಗಿ ನೋಡಬೇಕೆಂದು ಮನವಿ ಮಾಡುತ್ತೇನೆ.

ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ನಾನು ರಾಜ್ಯದ ಬಡವರು, ಶೋಷಿತರ ಪರವಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ವಿರೋಧಿಸಿದವರೇ ಆಗಿದ್ದಾರೆ.

ಇದೇ ಬಿಜೆಪಿ, ಜೆಡಿಎಸ್ ನಾಯಕರು ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿದ್ದಾರೆ.

ಇಂದು ನನ್ನ ವಿರುದ್ಧ ರಾಜಕೀಯ ಸಂಚು ನಡೆಸುತ್ತಿರುವ ಇದೇ ನಾಯಕರು ಎಸ್‌ಸಿಎಸ್‌ಪಿ/ಟಿಎಸ್‌‌ಪಿ ಕಾಯ್ದೆಯನ್ನು ವಿರೋಧಿಸಿದ್ದಾರೆ.

ಕರ್ನಾಟಕದ ಜನತೆ ಇಲ್ಲಿಯ ವರೆಗೆ ಭಾರತೀಯ ಜನತಾ ಪಕ್ಷಕ್ಕೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತ ನೀಡಿಲ್ಲ. ಇಲ್ಲಿಯ ವರೆಗೆ ಬಿಜೆಪಿ ಅನೈತಿಕವಾಗಿ, ದುಡ್ಡಿನ ಬಲದಿಂದ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದದ್ದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಆಪರೇಷನ್ ಕಮಲಕ್ಕೆ ಅವಕಾಶವೇ ಇಲ್ಲದಂತೆ ನಮ್ಮ ಪಕ್ಷಕ್ಕೆ 136 ಸದಸ್ಯರ ಬಲ ನೀಡಿ ಗೆಲ್ಲಿಸಿದರು.
ಇದರಿಂದ ಹತಾಶೆಗೀಡಾಗಿರುವ ಬಿಜೆಪಿ, ಜೆಡಿಎಸ್ ನಾಯಕರು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ.

ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವ ಸಂಚನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿದೆ.

ನನ್ನ ಪ್ರಕರಣದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಇದೇ ರೀತಿ ಮುಖಭಂಗ ಅನುಭವಿಸುವುದು ಖಂಡಿತ.
ಸತ್ಯಮೇವ ಜಯತೇ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪೂನಾ ಒಪ್ಪಂದಕ್ಕೆ 92 ವರ್ಷ

Published

on

  • ಮಲ್ಕುಂಡಿ ಮಹದೇವ ಸ್ವಾಮಿ

ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ದೇವದಾಸ್ ಗಾಂಧಿ.

“ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಡಾ. ಅಂಬೇಡ್ಕರ್.

ಅಂದು ಅಕೋಲದಲ್ಲಿ ಗಾಂಧಿಜೀ ತಂಗಿದ್ದರು. ಅಲ್ಲಿಗೆ ಕೆಲವು ಅಂಬೇಡ್ಕರ್ ಅನುಯಾಯಿಗಳು ಬಂದು ಗಾಂಧಿಯವರನ್ನು ಭೇಟಿಯಾಗಿ, ಕೆಲವು ಪ್ರಶ್ನೆಗಳನ್ನು ಕೇಳಿದರು. “ಗಾಂಧೀಜಿಯವರೇ, ಕೆಲವರು ತಿಲಕರನ್ನು ದೇವರೆಂದು ಪೂಜಿಸುವಂತೆ, ಅಂಬೇಡ್ಕರರನ್ನು ದೇವರೆಂದು ಪೂಜಿಸಬಹುದೇ….? ಗಾಂಧೀಜಿಯವರು ಉತ್ತರಿಸುತ್ತಾ, ಪೂಜಿಸಬಹುದು. ಪೂಜಿಸುವವರಿಗೆ ಈ ಹಕ್ಕಿದೆ. ಅಂಬೇಡ್ಕರರನ್ನು ನಾನು ಮೆಚ್ಚುತ್ತೇನೆ. ನಾನು ಅವರ ದೃಷ್ಟಿಕೋನಗಳಿಂದ ಭಿನ್ನವಾಗಿದ್ದೇನೆ ಆದರೆ ಅವರು ಧೈರ್ಯಶಾಲಿ ಎಂದು ಒಪ್ಪಿಕೊಳ್ಳುತ್ತೇನೆ. ಧೈರ್ಯಶಾಲಿ ಪುರುಷ ಕೂಡ ತಪ್ಪು ಮಾಡುತ್ತಾನೆ. ನಾನು ನನ್ನನ್ನು ಧೈರ್ಯಶಾಲಿ ಎಂದು ಸ್ವತಹ ನಿರ್ಧರಿಸಿಕೊಳ್ಳುತ್ತೇನೆ ಮತ್ತು ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ” ಎಂದರು.

ತಿಲಕರನ್ನು ದೇವರೆಂದು ಭಾವಿಸಿದ್ದ ಗಾಂಧೀಜಿಗೆ ಪ್ರಶ್ನಿಸಿದ ಅಂಬೇಡ್ಕರ್ ಅನುಯಾಯಿಗಳು ಪೂನಾ ಒಪಂದದಿಂದಾದ ಅನ್ಯಾಯದ ಸಿಟ್ಟನ್ನು ತೋಡಿಕೊಂಡರು. ಮತ್ತು ಈ ಒಪ್ಪಂದ ಇನ್ನು ಮುಂದಿನ ಪೀಳಿಗೆಯೂ ಪ್ರಶ್ನಿಸುವ ಅಧಿಕಾರವನ್ನು ಶಾಶ್ವತವಾಗಿ ಕಿತ್ತುಕೊಂಡಿತು ಎಂಬ ಮತ್ತೊಂದು ಸಿಟ್ಟುಕೂಡ ಅಲ್ಲಡಗಿತ್ತು. ನೀವು ಪ್ರಶ್ನಿಸುವವರಾಗಿದ್ದರೇ ಈ ಪ್ರಸಂಗದ ವಿಶ್ಲೇಷಣೆಯನ್ನು ನಿಮಗೇ ಬಿಡುತ್ತೇನೆ.

ರಾಮ್ಸೆ ಮೆಕ್ ಡೊನಾಲ್ಡ್ ರವರಿಗೆ ಆಗಸ್ಟ್ 18 ಗಾಂಧಿಜೀ ಪತ್ರ ಬರೆದು ಬ್ರಿಟಿಷ್ ರ ಕೋಮುವಾರು ತೀರ್ಪನ್ನು ಕಟುವಾಗಿ ಟೀಕಿಸಿದ್ದರು. ಮತ್ತು ತಮ್ಮ ಅಸಮ್ಮತಿಯನ್ನು ತೋರಿದರು. ಸೆಪ್ಟೆಂಬರ್ 9 ಬ್ರಿಟಿಷರು ಗಾಂಧೀಜಿ ಯವರ ನಿರ್ಧಾರವನ್ನು ನಿರಾಕರಿಸಿದ ಕಾರಣ. ಆ ಸೋಮವಾರ ಎಲ್ಲಾ ನಾಯಕರು ಜಮಾಯಿಸಿ ಅಂಬೇಡ್ಕರರನ್ನು ಕೇಳಿದಾಗ: ” ಗಾಂಧೀಜಿ ಅವರಿಗಾಗಿ ಇಂತಹ ಮಹಾತ್ಯಾಗ ಮಾಡಲಾರೆ ” ಎಂದರು. ಮರುದಿನ ಮಹಾತ್ಮಗಾಂಧಿಜೀಯವರು ಆ ಮಾವಿನ ತೋಪಿನಲ್ಲಿ ಉಪವಾಸಕ್ಕೆ ಕುಳಿತರು.

ಉಪವಾಸದ 3 ದಿನಗಳ ನಂತರ ಅಂಬೇಡ್ಕರ್ ಅವರಿಗೆ ಎಲ್ಲಾ ಕಡೆಯಿಂದ ಬೆದರಿಕೆ ಕರೆಗಳು ಬರಲು ಆರಂಭಿಸಿದವು. ಕೆಲವು ಗೂಂಡಾಗಳು ನೇರವಾಗಿ ಅಂಬೇಡ್ಕರರನ್ನು ಪ್ರಶ್ನಿಸಿದ್ದರು. ಬಹುತೇಕ ಎಲ್ಲ ಪತ್ರಿಕೆಗಳು ಗಾಂಧಿಯವರನ್ನು ಬೆಂಬಲಿಸುತ್ತಿವೆ ಮತ್ತು ಅಂಬೇಡ್ಕರರನ್ನು ವಿರೋಧಿಸುತ್ತಿವೆ. ಅವರ ರಕ್ತದ ಒತ್ತಡ ಹೆಚ್ಚುತ್ತಿದೆ.

ಉದ್ರಿಕ್ತತೆ ಹೆಚ್ಚಾಯಿತು, ಅಂಬೇಡ್ಕರ್ ಖಳನಾಯಕ, ದೇಶದ್ರೋಹಿ, ಭಾರತವನ್ನು ಛಿದ್ರಗೊಳಿಸಲು ಬಯಸಿದ ವ್ಯಕ್ತಿ, ಗಾಂಧಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ವ್ಯಕ್ತಿ. ಟ್ಯಾಗೋರ್, ನೆಹರು ಮತ್ತು ಸಿ. ರಾಜಗೋಪಾಲಾಚಾರಿ ಸೇರಿದಂತೆ ಗರಂ ದಾಲ್ (ಉಗ್ರಗಾಮಿಗಳು) ಹಾಗೂ ನರಮ್ ದಾಲ್ (ಮಿತವಾದಿಗಳು) ರಾಜಕೀಯ ಭಾರೀ ತೂಕ ಗಾಂಧಿಯ ಕಡೆ ತೂಗಿತು. ಆದರೂ ಅಂಬೇಡ್ಕರ್ ರದು ಅದೇಮಾತು.

“ನಾನು ನನ್ನ ಆದ್ಯ ಕರ್ತವ್ಯಕ್ಕೆ ದ್ರೋಹ ಬಗೆಯಲಾರೆ ಮತ್ತು ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ನ್ಯಾಯಯುತ ಮತ್ತು ನ್ಯಾಯ ಸಮ್ಮತವಾದ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಎಂಬದು. ಅಂಬೇಡ್ಕರ್‌ ರವರ ಈ ಕಾಠಿಣ್ಯ, ಗಾಂಧಿಯವರ ಸ್ವಯಂ ಪ್ರೇರಿತ ಹಠ. ಭಾರತವನ್ನು ಅಂದು ನಿತ್ರಾಣಗೊಳಿಸಿತ್ತು.

ಮಹಾದೇವ ದೇಸಾಯಿ ಹೇಳುವಂತೆ ಸೆಪ್ಟಂಬರ್ 22 ಮಧ್ಯಾಹ್ನ ಅಂಬೇಡ್ಕರ್ ಗಾಂಧಿಯಜೀಯವರನ್ನು ಭೇಟಿಯಾಗಿ, “ನಾನು ನನ್ನ ಸಮುದಾಯಕ್ಕೆ ರಾಜಕೀಯ ಅಧಿಕಾರವನ್ನು ಬಯಸುತ್ತೇನೆ ಅದು ನಮ್ಮ ಉಳಿವಿಗೆ ಅನಿವಾರ್ಯವಾಗಿದೆ” ಉಪವಾಸವನ್ನು ಕೈ ಬಿಡಿ” ಎಂದರು. ಚರ್ಚೆ ಕಗ್ಗಂಟಾಗಿ ಸೆಪ್ಟೆಂಬರ್ 23 ಕ್ಕೆ ಮಾತುಕತೆ ಮುಂದುವರಿಯಿತು. ಮತ್ತೇ 24 ಕ್ಕೆ. ಅಂದು ಸಂಜೆ 5 ಗಂಟೆಗೆ 23 ಜನರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ವಿಶ್ವಾಸ ಅರ್ಹತೆಗಾಗಿ ರಾಜಾಜಿ ತಮ್ಮ ಒಂದು “ಫೌಂಟೆನ್ ಪೆನ್ನ” ನ್ನು ಅಂಬೇಡ್ಕರ್ ಅವರ ಜತೆ ವಿನಿಮಯ ಮಾಡಿಕೊಂಡಿದ್ದರು. ಇದು ಹೊರಗಿನ ಮರ್ಮಾಘಾತ. ಈ ಒಳಗಿನ ಮರ್ಮಾಘಾತದಬಗ್ಗೆ ಹೇಳಲೇ ಬೇಕು.

ಈ ದಕ್ಷಿಣ ಭಾರತದ ಅಸ್ಪೃಶ್ಯ ರಾಜಕಾರಣಿ
“ಎ ಸಿ ರಾಜನ್” ಅವರು ಅಂಬೇಡ್ಕರ್ ಅವರು ದುಂಡುಮೇಜಿನ ಸಭೆಯಲ್ಲಿ ಚರ್ಚಿಸಲು ಅಸ್ಪೃಶ್ಯರ ಪ್ರತಿನಿಧಿ ಎನ್ನುವುದನ್ನು ನಿರಾಕರಿಸಿದ್ದರು. ಮತ್ತು ಬಾಪೂ ರವರ ಕಡೆ ಕೈ ಎತ್ತಿದ್ದರು. ಪೂನಾ ಒಪ್ಪಂದದ ಬಿಕ್ಕಟ್ಟಿನ ಸಮಯದಲ್ಲಿ ಅಂಬೇಡ್ಕರವರನ್ನು ಪ್ರತ್ಯೇಕೀಕರಿಸಿ ಚರ್ಚೆಮಾಡಲು ಸಿದ್ಧಗೊಂಡಿದ್ದರು.

“ಪಲ್ ವಂಕರ್ ಬಾಲೂ” ದೇಶದ ಮೊದಲ ದಲಿತ ಕ್ರಿಕೆಟಿಗ ಕೂಡ ಅಂಬೇಡ್ಕರವರಿಗೆ 24ವರ್ಷ ದೊಡ್ಡವರಾಗಿದ್ದು ಅಂಬೇಡ್ಕರರ ಸ್ನೇಹ ಜೀವಿಯಾಗಿದ್ದರು. ಆದರೆ ಈ ಸಂದರ್ಭದಲ್ಲಿ ಗಾಂಧೀಜಿಯವರ ಪಾಳಯದಲ್ಲಿ ಪಳಗಿದರು. ಅವರು ಗಾಂಧಿಜೀಯವರ ಅನುಯಾಯಿಗಳಾಗಿ, ಅಂಬೇಡ್ಕರವರ ನಿಲುವುಗಳನ್ನು ಹೆಜ್ಜೆಹೆಜ್ಜೆಗೂ ನಿರಾಕರಿಸಿದರು. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ವಾಗುವ ವಿಚಾರದಲ್ಲಿಯೂ ಕಠೋರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮುಂದೆ ಅಂಬೇಡ್ಕರ್ ಅವರ ವಿರುದ್ಧ ಚುನಾವಣೆಗೆ ನಿಂತು ಸೋತದ್ದು ಬೇರೆ ವಿಚಾರ ಆದರೆ ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಒಂದು ಐತಿಹಾಸಿಕ ಹೋರಾಟದಲ್ಲಿ ಅಂಬೇಡ್ಕರ್ ಅವರ ನಿಲುವು ಮತ್ತು ಕಾಠಿಣ್ಯಗಳನ್ನು.

ಗಾಂಧೀಜಿಯವರ ಪ್ರಕಾರ ಪ್ರತ್ಯೇಕ ಮತದಾನ ಪದ್ಧತಿ ಸಮಸ್ಯೆಯನ್ನು ಉತ್ತಮಕ್ಕಿಂತ ಕೆಟ್ಟದ್ದಾಗಿಸುತ್ತದೆ. ಇದು ಪ್ರತಿ ಹಳ್ಳಿಯಲ್ಲಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಳಿಯ ಸಂಘರ್ಷಕ್ಕೆ ಕಾರಣವಾಗುತ್ತಿದೆ.ಎಂಬುದು.

1931 ಅ 14 ಅಂಬೇಡ್ಕರವರು ಗಾಂಧಿಯವರನ್ನು ಮೊಟ್ಟ ಮೊದಲನೆ ಬಾರಿಗೆ ಭೇಟಿಯಾಗಿ ಪ್ರತ್ಯೇಕ ಮತದಾನದ ಹಕ್ಕುಗಳ ಬಗ್ಗೆ ಚರ್ಚಿಸಿದ್ದರು. ನಂತರ ಗಾಂಧೀಜಿ ನವೆಂಬರ್ 13 ತಮ್ಮ ಭಾಷಣದಲ್ಲಿ ನಾನು ಪ್ರತ್ತೇಕ ಪ್ರಾತಿನಿಧ್ಯವನ್ನು ವಿರೋಧಿಸುವ ಏಕೈಕ ವ್ಯಕ್ತಿಯಾಗಿದ್ದೇನೆ ಎಂದು ಒಂದು ವರ್ಷದ ಹಿಂದೆಯೇ ಹೇಳಿದ್ದರು. ಈ ಉಪವಾಸ ಒಂದು ವರ್ಷ ಪೂರ್ವ ನಿಯೋಜಿತ ಕಾರ್ಯಕ್ರಮ ದಂತೆ ಕಾಣುತ್ತದೆ ಅಲ್ಲವೆ? ಇದು ಹಠಾತ್ತಾಗಿ ಆಗಿಂದಾಗೆ ಸೃಷ್ಟಿಯಾದ ಯೋಜನೆ ಅಲ್ಲ.

ಇಡೀ ಪೂನಾ ಒಪ್ಪಂದಕ್ಕೆ ಸಾಕ್ಷಿಯಾದ ಘಟನೆಗಳನ್ನಾಧರಿಸಿ ಮಹಾದೇವ ರಾನಡೆ ಹೇಳುವಂತೆ ” ಅವರಿಗೆ ಬೇಕಿರುವುದು ಯಾವುದೋ ಒಂದು ಇತ್ಯಾರ್ಥ; ಅವರು ಆದರ್ಶ ಪರಿಹಾರಕ್ಕಾಗಿ ಕಾಯಲು ಸಿದ್ಧರಿಲ್ಲ. ಗಾಂಧೀಜಿ ಯವರ ಜೀವ ಉಳಿಸುವ ಉತ್ಸಾಹದಲ್ಲಿ ಈ ಸಹಿ ಹಾಕಿದರು.

ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ಎಂದು ಅಂಬೇಡ್ಕರ್ ರವರ ಮುಂದೆ ಕಣ್ಣೀರುಡುತ್ತದ್ದ ದೇವದಾಸ್ ಗಾಂಧಿ ಅವರ ಮುಖದಲ್ಲಿ ಮಾತ್ರ ಮಂದಹಾಸವಿತ್ತು.

ಹೊ! ಗಾಂಧಿಯವರು ಒಪ್ಪಂದಕ್ಕೆ ಸಹಿ ಹಾಕಿದರಾ?, ಒಂದು ಅಂತಿಮ ಪದ; ಅದು ಗಾಂಧಿಯಲ್ಲ. ಅವರ ಮಗ ದೇವದಾಸ್ ಗಾಂಧಿ.

ಸುಪರ್ಣ ಗುಪ್ತಾ ‘ ಅಂಬೇಡ್ಕರ್ ರವರು ಶೋಷಿತರ ವಿಮೋಚನೆಗಾಗಿ ಹಕ್ಕು ಆಧಾರಿತ ವಿಧಾನಕ್ಕೆ ಆದ್ಯತೆ ನೀಡಿದರು. ಗಾಂಧಿಜೀಯವರು ಅಧ್ಯಾತ್ಮ ಮತ್ತು ನಂಬಿಕೆ ವಿಧಾನಕ್ಕೆ ಮಾನ್ಯತೆ ನೀಡಿದರು. ಅಂಬೇಡ್ಕರರಿಗಿಂತ ಭಿನ್ನವಾಗಿ ಶೋಷಕರ ಮನಸ್ಥಿತಿಯನ್ನು ಬದಲಾಯಿಸಿದಾಗ ಮಾತ್ರ, ಯಾವುದೇ ಶೋಷಣೆಯನ್ನು ಸರಿಪಡಿಸಬಹುದು ಎಂದು ಗಾಂಧಿಜೀ ಭಾವಿಸಿದ್ದರು’. ಎನ್ನುತ್ತಾರೆ. ಇದು ಈ ನೆಲದಲ್ಲಿ ಅಸಂಭವ. ಕಾರಣ ಇಲ್ಲಿನ ಜಾತಿ ವ್ಯವಸ್ಥೆ ಒಂದು ಮಾನಸಿಕ ಸ್ಥಿತಿಯಾಗಿದೆ. ಅದು ಸಾವಿರಾರು ವರ್ಷಗಳು ತನ್ನ ಬೇರನ್ನು ತಾನೇ, ತನ್ನ ಮೆದುಳಿಗೆ ಎಣೆದುಕೊಂಡಿದೆ. ಇದನ್ನು ನಂಬಿಕೆ ಮಾತ್ರದಿಂದಲೇ ಬಿಡಿಸುವುದು ಕಷ್ಟ.

ಈ ಸತ್ಯ ಗಾಂಧೀಜಿಯವರ ಅರಿವಿಗೆ ಬಂದಿದ್ದೆ ಅವರು
ಅಸ್ಪೃಶ್ಯತೆಯ ವಿರುದ್ದ 1933 ನವೆಂಬರ್ ನಿಂದ 1934 ರ ಆಗಸ್ಟ್ ವರೆಗೆ 12500 km ಭಾರತದಾದ್ಯಂತ ಪ್ರವಾಸ ಕೈಗೊಂಡಾಗ. 800000 ಗಳನ್ನು ಹರಿಜನ ನಿಧಿಗೆ ಸಂಗ್ರಹಿಸಲು ಮೇಲ್ವರ್ಗದ ಜನರ ಬಳಿ ತೆರಳಿದಾಗ. ಕೊನೆ ಕೊನೆಗೆ ಶ್ರೀರಂಗಂ ತಂಜಾವೂರಿನ ಇತರ ದೇವಾಲಯಗಳಲ್ಲಿ ಅಸ್ಪೃಶ್ಯತಾಚರಣೆಯನ್ನು ಮನಗಂಡು ತಾವೇ ದೇವಾಲಗಳಿಗೇ ಹೋಗುವುದನ್ನು ನಿಷೇಧಿಸಿಕೊಂಡಾಗ. ಹರಿಜನ ಸೇವಕ ಸಂಘ ಹರಿಜನ ಪತ್ರಿಕೆ ಇಲ್ಲಿ ಹುಟ್ಟಿಕೊಂಡವು. ಪ್ರತಿ ಹಳ್ಳಿಗಳಲ್ಲಿ ರಾಮಮಂದಿರ ಭಜನೆಗಳು ಆರಂಭವಾದವು. ಇದು
ಈಗ ಈ ಜನರ ಬದುಕಿನ ಭಾಗವಾಗಿ ಬಿಟ್ಟಿದೆ.

ಲೂಯಿ ಫಿಷರ್ “ಗಾಂಧೀಜಿಗೆ ದ್ವೇಷ, ಅಸೂಯೆ, ವಿಷ, ಅಸಮಧಾನವಿಲ್ಲ. ಅವರನ್ನು ಜೈಲಿಗೆ ಹಾಕಿದ ವೈಸ್ ರಾಯ್ ಗಳ ಜೊತೆ ಅವರು ಸ್ನೇಹಿತರಾಗಿದ್ದರು. ಅವರು ವ್ಯವಸ್ಥೆಯನ್ನು ವಿರೋಧಿಸಿದರು ಆದರೆ ವ್ಯಕ್ತಿಯನ್ನಲ್ಲಾ.
ಎಂದು ಯಾರು ಏನೇ ಹೇಳಿದರು,
ಅಂಬೇಡ್ಕರ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧೀಜಿಯವರನ್ನು ನಾನು “ಮಹಾತ್ಮ” ಎಂದು ಒಪ್ಪಲಾರೆ ಎಂದರು.

ಅಂಬೇಡ್ಕರ್ ರ ಈ ನೋವಿಗೆ ಪಟೇಲರ ಈ ಮಾತನಲ್ಲಿ ಉತ್ತರ ಸಿಗಬಹುದೇನೊ ಪಟೇಲರು “ಈ ಗಾಂಧಿಜೀ ಏಕೆ ಉಪವಾಸ ಮಾಡುತ್ತಿದ್ದಾರೆ ?” ಎಂದು ಗೊಂದಲಕ್ಕೀಡಾದರು. ಎದುರಿನಲ್ಲಿದ್ದವರು “ಅಸ್ಪೃಶ್ಯರನ್ನು ಎದುರಿಸಲು ಇನ್ಯಾವುದೇ ಮಾರ್ಗಗಳಿಲ್ಲವಲ್ಲಾ ಆ ಕಾರಣಕ್ಕಿರಬಹುದೇನೊ…? ಎಂದರು.

ಕೊನೆಯದಾಗಿ ಈ ಮಾತು

ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸ ಕ್ಕೆ ದ್ರೋಹ ಮಾಡುವುದಿಲ್ಲ” ಎಂದರಲ್ಲಾ ಡಾ. ಅಂಬೇಡ್ಕರ್ ಈ ಎಳೆಯನ್ನು ಇಡಿದು ಈ ಪೀಳಿಗೆ ಯಾಕೆ ಬದುಕುವ ಪ್ರಯತ್ನ ಮಾಡುತ್ತಿಲ್ಲಾ….? (ಬರಹ-ಮಲ್ಕುಂಡಿ ಮಹದೇವ ಸ್ವಾಮಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending