Connect with us

ದಿನದ ಸುದ್ದಿ

‘ಪೈಸಾ ವಸೂಲ್’ ಕಲಾಪ..!

Published

on

  • ದಿನೇಶ್ ಅಮಿನ್ ಮಟ್ಟು , ಹಿರಿಯ ಪತ್ರಕರ್ತರು

ನಾನು ಕಳೆದ ಏಳು ವರ್ಷಗಳಲ್ಲಿ , ಅದರಲ್ಲಿ ಮುಖ್ಯವಾಗಿ ಮೊದಲ ಐದು ವರ್ಷ ವಿಧಾನಮಂಡಲದ ಕಲಾಪಗಳನ್ನು ಸಮೀಪದಿಂದ ನೋಡಿದ್ದೇನೆ, ಹೆಚ್ಚುಕಡಿಮೆ ನಾನು ಅದರ ಭಾಗವಾಗಿದ್ದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಕಳೆದ ಆರುದಿನಗಳ ಕಿರುಅವಧಿಯಲ್ಲಿ ವಿಧಾನಸಭೆಯಲ್ಲಿ ನಡೆದಿರುವುದು ನಿಜವಾದ ‘ಪೈಸಾ ವಸೂಲ್’ ಕಲಾಪ.

ಕೊರೊನಾ, ರಾಜ್ಯದ ಹಣಕಾಸು ದುಸ್ಥಿತಿ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ, ಡಿಜೆಹಳ್ಳಿ ಗಲಭೆ- ಈ ಐದು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ‘ನೀವು ಬೇಕಾದಷ್ಟು ಒದರಿಕೊಳ್ಳಿ, ನಾವು ಮಾಡುವುದನ್ನು ಮಾಡಿಯೇ ಬಿಡುತ್ತೇವೆ’ ಎಂಬ ಉಡಾಫೆಯಿಂದಲೇ ಇರಬಹುದು, ಸಾಮಾನ್ಯವಾದ ಚರ್ಚೆ ಮಧ್ಯದ ಗದ್ದಲ ಮತ್ತು ಕೊನೆದಿನದ ಕೊನೆಕ್ಷಣಗಳ ಬೈದಾಟವನ್ನು ಹೊರತುಪಡಿಸಿದರೆ, ವಿರೋಧ ಪಕ್ಷದ ನಾಯಕರ ಮಾತಿಗೆ ಆಡಳಿತ ಪಕ್ಷ ಪೂರ್ಣ ಅವಕಾಶ ನೀಡಿತ್ತು.

ಮೇಲಿನ ಐದು ವಿಷಯಗಳ ಬಗ್ಗೆ ಸಿದ್ದರಾಮಯ್ಯನವರು ಸಾಕಷ್ಟು ತಯಾರಿಯೊಂದಿಗೆ ಸುದೀರ್ಘವಾಗಿಯೇ ಮಾತನಾಡಿದ್ದರು. ರಾಜಕೀಯದ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಕೈ ಸ್ವಲ್ಪ ಮೇಲಾಗಿತ್ತು. ಅವರನ್ನು ಎದುರಿಸಲು ವಿರೋಧಪಕ್ಷದ ಸದಸ್ಯರಲ್ಲಿ ತಯಾರಿ ಇರಲಿಲ್ಲ. ಉದಾಹರಣೆಗೆ ಭೂ ಸುಧಾರಣೆ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರೇ ಹಿಂದೆ ಹೇಳಿದ್ದ ಅಭಿಪ್ರಾಯಗಳು ಮತ್ತು ಎಪಿಎಂಸಿ ತಿದ್ದುಪಡಿ ಬಗೆಗಿನ ಕಾಂಗ್ರೆಸ್ ಪಕ್ಷದ ನಿಲುವಿನ ವಿಷಯದಲ್ಲಿ ಆಡಳಿತ ಪಕ್ಷದ ಸದಸ್ಯರು ವಿರೋಧಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಆದರೆ..
ಕಳೆದ ಆರು ದಿನಗಳ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ನಿರಾಶೆಯಾಗುತ್ತದೆ. ಕೊರೊನಾ ದಿನಗಳಲ್ಲಿ ಎಲ್ಲವೂ ಡಿಜಿಟಲೀ ಲಭ್ಯವಿರುವುದರಿಂದ ಅತ್ಯಂತ ಸುಖವಾಗಿರುವವರು ಪತ್ರಿಕೆಗಳ ವರದಿಗಾರರು. ( ಟಿವಿ ವರದಿಗಾರರ ಸ್ಥಿತಿ ಚಿಂತಾಜನಕ). ಕಳೆದ ಆರು ದಿನಗಳ ಕಲಾಪ ಚಂದನ ಚಾನೆಲ್ ಸೇರಿದಂತೆ ಹತ್ತಾರು ಯೂಟ್ಯೂಬ್ ಚಾನೆಲ್ ಗಳಲ್ಲಿ ಲೈವ್ ಪ್ರಸಾರವಾಗುತ್ತಿತ್ತು. ವರದಿಗಾರರು ಮನೆಯಲ್ಲಿಯೇ ಆರಾಮ ಕುರ್ಚಿಯಲ್ಲಿ ಕೂತು ವರದಿ ಮಾಡುವ ಅವಕಾಶ. ಹೀಗಿದ್ದರೂ ಪತ್ರಿಕೆಗಳ ಪುಟ ನೋಡಿದರೆ ನಿರಾಶೆಯಲ್ಲದೆ ಬೇರೆನು ಭಾವ ಮೂಡಲು ಸಾಧ್ಯ?

ಇದಕ್ಕೆ ನಾನು ವರದಿಗಾರರನ್ನಷ್ಟೇ ದೂರುವುದಿಲ್ಲ. ಇವರ ಹೊರತಾಗಿ ಬೇರೆ ಎರಡು ಕಾರಣಗಳಿವೆ. ಮೊದಲನೆಯದು ಸುದ್ದಿಸಂಪಾದಕರ ಸ್ಥಾನದಲ್ಲಿ ಕೂತು ಸುದ್ದಿಗೆ ಸಿಗಬೇಕಾದ ಪ್ರಾಮುಖ್ಯವನ್ನು ನಿರ್ಧರಿಸುವ ನಾಲಾಯಕ್ ಪತ್ರಕರ್ತರು. ಎರಡನೆಯದು ಪತ್ರಿಕೆಗಳ ಮಾಲೀಕರು ಇಲ್ಲವೇ ಸಂಪಾದಕರ ರಾಜಕೀಯ ಪೂರ್ವಗ್ರಹ. ಇದೇನು ಸದ್ಯಕ್ಕೆ ಸರಿಹೋಗುವ ಲಕ್ಷಣ ಕಾಣುತ್ತಿಲ್ಲ.

ಪತ್ರಿಕೆಗಳು ಯಾಕೆ ಅಪ್ರಸ್ತುತವಾಗುತ್ತಿದೆ ಎನ್ನುವುದಕ್ಕೆ ಕಾರಣಗಳನ್ನು ಸಂಶೋಧನೆ ಮಾಡಿ ತಿಳಿದುಕೊಳ್ಳಬೇಕಾಗಿಲ್ಲ. ಕಳೆದ ಆರುದಿನಗಳ ಪತ್ರಿಕೆಗಳನ್ನು ನೋಡಿದರೆ ಸಾಕು.

ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸದನದಲ್ಲಿ ಮಾತನಾಡಿದ್ದ ನಾಲ್ಕು ವಿಷಯಗಳ ಟಿಪ್ಪಣಿ ಕೆಳಗಿದೆ. ಇದು ಅವರ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಪ್ರಕಟವಾಗಿದೆ. ಸುಲಿದ ಬಾಳೆ ಹಣ್ಣಿನಂತೆ ರೆಡಿ ಇದ್ದ ಈ ಟಿಪ್ಪಣಿಯನ್ನು ವರದಿಗಾರರು ಯಥಾವತ್ತಾಗಿ ವರದಿ ಮಾಡಿದರೆ ಸಾಕಿತ್ತು.
ಪತ್ರಿಕೆಗಳ ನಿಜವಾದ ಶತ್ರು ಕೊರೊನಾವೂ ಅಲ್ಲ, ಓದುಗರೂ ಅಲ್ಲ, ಮತ್ತೆ ಯಾರೆಂದು ನೀವೇ ನಿರ್ಧರಿಸಿ.

ಸಿದ್ದರಾಮಯ್ಯನವರು ಮಾತನಾಡಿದ ಮೂರು ವಿಷಯಗಳ ಟಿಪ್ಪಣಿ 

ಕೊರೋನಾ

ಕೊರೊನಾ ಸೋಂಕು ಅನಿಯಂತ್ರಿತವಾಗಿ ಹರಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗೇಡಿತನ ಕಾರಣ. ಪ್ರಧಾನಿ ಅವರು ಮೊದಲು ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಕ್ಯಾಂಡಲ್ ಹಚ್ಚಿ ಎಂದರು. ಮಹಾಭಾರತ ಯುದ್ಧ ಮುಗಿದದ್ದು 18 ದಿನದಲ್ಲಿ, ನಾವು 21 ದಿನದಲ್ಲಿ ಕೊರೊನಾ ಗೆಲ್ತೇವೆ ಎಂದರು. ಏನಾಯ್ತು? ದೇಶದಲ್ಲಿ ಕೊರೊನಾ ಇಷ್ಟೊಂದು ವೇಗವಾಗಿ ಹರಡುತ್ತಿದೆಯೆಂದರೆ ಶೀಘ್ರದಲ್ಲಿಯೇ ನಾವು ಅಮೆರಿಕವನ್ನು ಹಿಂದಕ್ಕೆ ಹಾಕಿ ಮೊದಲ ಸ್ಥಾನಕ್ಕೆ ಏರಲಿದ್ದೇವೆ. ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕು 55,62,663 ಜನರಿಗೆ ತಗುಲಿದೆ. 89,000 ಜನ ಸಾವಿಗೀಡಾಗಿದ್ದಾರೆ. ಇದಕ್ಕೆ ಯಾರು ಹೊಣೆ?

ಫೆಬ್ರವರಿ 24-25 ರಂದು ಲಕ್ಷಾಂತರ ಜನರನ್ನು ಸೇರಿಸಿ ಭಾರತದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಲಾಯಿತು. ನಂತರ ತಬ್ಲಿಗಿ ಸಮಾವೇಶಕ್ಕೂ ಅನುಮತಿ ನೀಡಲಾಯಿತು. ಜನವರಿಯಲ್ಲೇ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೂ ಕೇಂದ್ರ ಈ ಮಟ್ಟಿನ ಬೇಜವಾಬ್ದಾರಿ ನಡವಳಿಕೆ ಪ್ರದರ್ಶಿಸಿದ್ದು ಏಕೆ?
ಕೊರೊನಾ ಸೋಂಕಿನಿಂದಾಗಿ ಅತಿ ಹೆಚ್ಚು ಸರಾಸರಿ ಮರಣ ಪ್ರಮಾಣ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ 7ನೇ ಸ್ಥಾನದಲ್ಲಿದೆ. ದೊಡ್ಡ ರಾಜ್ಯಗಳಲ್ಲಿ ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿದೆ. ಹತ್ತು ಲಕ್ಷ ಜನರಲ್ಲಿ ಮಹಾರಾಷ್ಟ್ರದಲ್ಲಿ 286 ಜನ, ರಾಜ್ಯದಲ್ಲಿ 129 ಜನ ಸತ್ತಿದ್ದಾರೆ.

ಸರಾಸರಿ ಮರಣದಲ್ಲಿ ಕರ್ನಾಟಕದ ಸ್ಥಿತಿ ಆತಂಕಕಾರಿಯಾಗಿದೆ. ಹತ್ತು ಲಕ್ಷ ಜನರಲ್ಲಿ ತೆಲಂಗಾಣದಲ್ಲಿ 29, ತಮಿಳುನಾಡುನಲ್ಲಿ 121, ಪಂಜಾಬ್ನಲ್ಲಿ 99, ಆಂಧ್ರದಲ್ಲಿ 107, ಕೇರಳದಲ್ಲಿ 15 ಜನ ಸತ್ತಿದ್ದರೆ ರಾಜ್ಯದಲ್ಲಿ 129 ಜನ ಸತ್ತಿದ್ದಾರೆ. ಇದನ್ನು ನಾವು ಸಾಧನೆ ಅನ್ನಬೇಕಾ? ಕೋವಿಡ್ ಟೆಸ್ಟ್ ನಲ್ಲಿ ಕರ್ನಾಟಕ 7ನೇ ಸ್ಥಾನದಲ್ಲಿದೆ. ದೆಹಲಿ, ಜಮ್ಮು ಕಾಶ್ಮೀರ, ತಮಿಳುನಾಡು, ತೆಲಂಗಾಣ ರಾಜ್ಯಗಳು ನಮಗಿಂತ ಮೇಲಿವೆ.

ದೆಹಲಿಯಲ್ಲಿ 10 ಲಕ್ಷ ಜನರಲ್ಲಿ 1,48,783 ಜನರಿಗೆ ಮತ್ತು ಆಂಧ್ರದಲ್ಲಿ 1,01,532 ಜನರ ಪರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಕೇವಲ 67,328 ಜನರ ಪರೀಕ್ಷೆ ಮಾಡಲಾಗಿದೆ. ಮೊದಲು ಲಾಕ್ ಡೌನ್ ಘೋಷಿಸಿದಾಗ ರಾಜ್ಯದಲ್ಲಿ 37 ಕೊರೊನಾ ಸೋಂಕಿನ ಪ್ರಕರಣಗಳಿತ್ತು, ಒಂದು ಸಾವು ಸಂಭವಿಸಿತ್ತು. ಈಗ 5,26,876 ಸೋಂಕಿನ ಪ್ರಕರಣಗಳು ಮತ್ತು 8,145 ಸಾವು ಸಂಭವಿಸಿವೆ. ಇದಕ್ಕೆ ಪೂರ್ವಸಿದ್ದತೆ ಇಲ್ಲದ ರಾಜ್ಯ ಸರ್ಕಾರದ ವೈಫಲ್ಯ ಕಾರಣ.

ಲಾಕ್ಡೌನ್ ಸಮಯದಲ್ಲಿ ತ್ವರಿತಗತಿಯಲ್ಲಿ ವೈದ್ಯರ ನೇಮಕ, ಆಕ್ಸಿಜನ್ ವ್ಯವಸ್ಥೆ ಇರುವ ಬೆಡ್ ಗಳು, ವೆಂಟಿಲೇಟರ್ ಗಳು, ಸಾಕಷ್ಟು ಟೆಸ್ಟ್ ಗಳು, ಔಷಧಗಳು, ಆಂಬುಲೆನ್ಸ್ಗಳು, ಲ್ಯಾಬ್ ಗಳ ಸ್ಥಾಪನೆ ಆಗಬೇಕಾಗಿತ್ತು. ಸರ್ಕಾರ ಏನನ್ನೂ ಮಾಡದೆ ಕೈಚೆಲ್ಲಿ ಕೂತುಬಿಟ್ಟಿತ್ತು.

ಕೊರೊನಾದಂತಹ ಸಂಕಟದ ಕಾಲವನ್ನು ಭ್ರಷ್ಟಾಚಾರ ಎಸಗಲು ದುರ್ಬಳಕೆ ಮಾಡಿಕೊಂಡಿರಿ. ಕೃಷಿ ಉತ್ಪನ್ನಗಳ ತಯಾರಿಕೆ ಕಂಪೆನಿಯಿಂದ ಪಿಪಿಇ ಕಿಟ್, ಸ್ಟೀಲ್ ಫರ್ನಿಚರ್ಸ್ ಕಂಪೆನಿಯಿಂದ ಪಲ್ಸ್ ಆಕ್ಸಿಮೀಟರ್, ಸಾಫ್ಟ್ವೇರ್ ಕಂಪೆನಿಯಿಂದ ವೈದ್ಯಕೀಯ ಉಪಕರಣಗಳ ಖರೀದಿ. ಏನಿದು ಮುಖ್ಯಮಂತ್ರಿ ಅವರೇ? ಎಲ್ 1 ಕಂಪೆನಿ ಬಿಟ್ಟು ಗುಜರಾತಿನ ಕಂಪೆನಿಗಳಿಗೆ ಗ್ಲುಕೋಸ್ ಸರಬರಾಜು ಮಾಡುವ ಆದೇಶ ನೀಡಿದ್ದೀರಿ. 2200 ರೂ ನೀಡಿ ಪಲ್ಸ್ ಆಕ್ಸಿಮೀಟರ್ ಅನ್ನು ಮಾರ್ಚ್ನಲ್ಲಿ ಖರೀದಿಸಿದ್ದೀರಿ. ಜುಲೈನಲ್ಲಿ 1100 ರೂ ನೀಡಿದ್ದೀರಿ.

ಪ್ರತಿಯೊಂದರಲ್ಲೂ ನಿರ್ಲಜ್ಜ ಭ್ರಷ್ಟಾಚಾರ.
ಕಳಪೆ ಸ್ಯಾನಿಟೈಸರ್, ಕಳಪೆ ಪಿಪಿಈ ಕಿಟ್ ಸರಬರಾಜು ಮಾಡಿದ್ದೀರಿ. ವೈದ್ಯರು ಪ್ರತಿಭಟನೆ ಮಾಡಿದ ಮೇಲೆ ವಾಪಸ್ ಪಡೆದಿರಿ. ಕೊರೋನ ವಾರಿಯರ್ಸ್ ಎಂದು ಹೂ ಮಳೆಗರೆದು ಅವರಿಗೆ ಕಳಪೆ ಆರೋಗ್ಯ ರಕ್ಷಕ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದೀರಿ ಎಂದರೆ ನಿಮ್ಮನ್ನು ಏನೆಂದು ಕರೆಯಬೇಕು?

ನಾನು ಮಾಹಿತಿ ಕೋರಿ ಸುಮಾರು 20 ಪತ್ರಗಳನ್ನು ಮುಖ್ಯಮಂತ್ರಿಯವರಿಗೆ ಬರೆದಿದ್ದೆ, ಒಂದಕ್ಕೂ ಉತ್ತರ ನೀಡಿಲ್ಲ. ಎಲ್ಲ ಕಡತಗಳನ್ನು ಮುಖ್ಯಮಂತ್ರಿಗಳು ಇಟ್ಟುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮುಖ್ಯಮಂತ್ರಿಗಳೇ, ನೀವು ಪ್ರಾಮಾಣಿಕರಾಗಿದ್ದರೆ ಮಾಹಿತಿ ನೀಡಲು ನಿಮಗ್ಯಾಕೆ ಭಯ ಸ್ವಾಮಿ?

ಬೇರೆ ಬೇರೆ ಇಲಾಖೆಗಳು ಎಷ್ಟು ಖರ್ಚು ಮಾಡಿವೆ? ಎಷ್ಟು ಸಾಮಗ್ರಿಗಳಿಗೆ ಹಣ ಬಿಡುಗಡೆಯಾಗಿದೆ? ಎಷ್ಟು ಬಾಕಿ ಇದೆ? ಎಷ್ಟು ಮೊತ್ತದ ಸಾಮಗ್ರಿಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡಿದ್ದೀರಿ? ಯಾವಾಗ ಸರಬರಾಜು ಮಾಡಿದರು? ಹಣವನ್ನು ಯಾವಾಗ ಬಿಡುಗಡೆ ಮಾಡಿದ್ದೀರಿ? ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲ.

ಮುಖ್ಯ ಕಾರ್ಯದರ್ಶಿಗಳು ನಡೆಸಿದ್ದ ಏಪ್ರಿಲ್ ಮೇ ತಿಂಗಳ ಪರಿಶೀಲನೆಯಲ್ಲಿ ಆರೋಗ್ಯ ಇಲಾಖೆ ರೂ.3328 ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಆದರೆ ಜುಲೈ ತಿಂಗಳ ವರೆಗಿನ ಪ್ರಗತಿ ಪರಿಶೀಲನೆಯನ್ನು ಆಗಸ್ಟ್ 20 ರಂದು ಮಾಡಿದ್ದಾರೆ. ಅದರಲ್ಲಿ 1708.42 ಕೋಟಿ ಖರ್ಚು ಎಂದು ಹೇಳಲಾಗಿದೆ. ಏನಿದರ ಮರ್ಮ? ನಾವು ಪ್ರಶ್ನಿಸದಿದ್ದರೆ ಲೆಕ್ಕ ಬೆಳೆಯುತ್ತಾ ಹೋಗಿ ಹಣ ಬಿಡುಗಡೆಯಾಗುತ್ತಿತ್ತು. ಪ್ರಶ್ನಿಸಿದ ಕೂಡಲೆ ಲೆಕ್ಕ ಕಡಿಮೆಯಾಯಿತು.

ಏನಿದರ ಒಳ ಮರ್ಮ? ಒಪ್ಪಂದ ಮಾಡಿಕೊಂಡಂತೆ ಒಂದು ದಿನ ಹಣ ಬಿಡುಗಡೆಯಾಗಲೇ ಬೇಕು, ಇಲ್ಲಾ ನೀವು ಖರೀದಿ ಆದೇಶಗಳನ್ನು ರದ್ದು ಮಾಡಬೇಕು. ಈ ಲೆಕ್ಕದಲ್ಲಿ ಜಿಲ್ಲಾಡಳಿತಗಳು ಮಾಡಿರುವ ಖರ್ಚಿನ ಲೆಕ್ಕ ಇಲ್ಲ. ಬಿಬಿಎಂಪಿಯ ಖರೀದಿ, ಸರಬರಾಜು ಕಮಿಟ್ಮೆಂಟ್ ಗಳ ಮಾಹಿತಿ ಇಲ್ಲ. ಇದೆಲ್ಲ ಲೆಕ್ಕ ಹಾಕಿದರೆ ಜುಲೈನಲ್ಲಿ ನಾವು ಆರೋಪಿಸಿದ್ದ 2000 ಕೋಟಿ ರೂಪಾಯಿ ಮೀರಿದ ಹಗರಣವಾಗುತ್ತದೆ.

ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಲಾಕ್ಡೌನ್ ನಷ್ಟ ಪರಿಹಾರದ ಪ್ಯಾಕೇಜ್ಗಳು ಈ ವರೆಗೂ ಅರ್ಹರನ್ನು ತಲುಪಿಲ್ಲ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಿದ್ದ ರೂ.137 ಕೋಟಿ ಹಣದಲ್ಲಿ 69,670 ಬೆಳಗಾರರಿಗೆ ರೂ.57 ಕೋಟಿ ಹಣ ಮಾತ್ರ ಖರ್ಚು ಮಾಡಲಾಗಿದೆ. ಉಳಿದ ರೈತರಿಗೆ ಪರಿಹಾರ ಯಾವಾಗ?

ಹೂ ಬೆಳೆಗಾರರಿಗೆ ಹೆಕ್ಟೇರ್ಗೆ ತಲಾ ರೂ.25,000 ದಂತೆ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಈ ವರೆಗೆ ಕೇವಲ 22,728 ರೈತರಿಗೆ ಮಾತ್ರ ಈ ಹಣ ತಲುಪಿದೆ. ಸವಿತಾ ಸಮಾಜದ 2.30 ಲಕ್ಷ ಜನರಿಗೆ ಪರಿಹಾರದ ಘೋಷಣೆ ಮಾಡಿ 52,966 ಮಂದಿಗೆ ಮಾತ್ರ ಪರಿಹಾರ ನೀಡಲಾಗಿದೆ.

7.75 ಲಕ್ಷ ಮಂದಿ ಆಟೋ, ಟ್ಯಾಕ್ಸಿ ಚಾಲಕರಿಗೆ ತಲಾ ರೂ.5,000 ದಂತೆ ಪರಿಹಾರದ ಭರವಸೆ ನೀಡಿದ್ದ ಸರ್ಕಾರ ಈ ವರೆಗೆ ಕೇವಲ 2,14,119 ಜನರಿಗೆ ಮಾತ್ರ ಪರಿಹಾರದ ಹಣ ನೀಡಿದೆ. ಹೀಗೆ ಕಟ್ಟಡ ಕಾರ್ಮಿಕರು, ಮೆಕ್ಕೆಜೋಳ ಬೆಳೆಗಾರರಿಗೆ, ಆಶಾ ಕಾರ್ಯಕರ್ತೆಯರಿಗೆ ಘೋಷಿಸಲಾಗಿದ್ದ ಪರಿಹಾರದ ಹಣವಿನ್ನು ಗಗನ ಕುಸುಮವಾಗಿಯೇ ಇದೆ.

ಕೊರೊನಾ ಪರಿಸ್ಥಿತಿ ನಿರ್ವಹಣೆ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಿ, ಸರ್ಕಾರ ತಪ್ಪಿತಸ್ಥರನ್ನು ಪತ್ತೆಗಚ್ಚುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ. ಭ್ರಷ್ಟಾಚಾರ ನಡೆದಿಲ್ಲ ಅಂತಾದರೆ ಸರ್ಕಾರಕ್ಕೆ ತನಿಖೆ ಎದುರಿಸಲು ಏಕೆ ಭಯ?

ರಾಜ್ಯದ ಹಣಕಾಸು ಪರಿಸ್ಥಿತಿ

ರಾಜ್ಯದ ವಿತ್ತೀಯ ಕೊರತೆ ನಮ್ಮ ಆಂತರಿಕ ಉತ್ಪನ್ನದ(GSDP) ಶೇಕಡಾ ಮೂರನ್ನು ಮೀರಬಾರದು ಎಂದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಹೇಳಿದೆ. ಬಿ.ಎಸ್ ಯಡಿಯೂರಪ್ಪ ಸರ್ಕಾರ ಈ ಮಿತಿಯನ್ನು ಶೇಕಡಾ 5ಕ್ಕೆ ಹೆಚ್ಚಿಸಲು ಹೊರಟಿರುವುದು ರಾಜ್ಯದ ಆರ್ಥಿಕತೆಗೆ ಬೀಳುವ ಮಾರಣಾಂತಿಕ ಹೊಡೆತ.

ಮುಖ್ಯಮಂತ್ರಿಯಾಗಿ ನಾನು ಮಂಡಿಸಿದ್ದ ಆರು ಆಯವ್ಯಯಪತ್ರಗಳಲ್ಲಿ ವಿತ್ತೀಯಕೊರತೆ ಎಂದೂ ಶೇಕಡಾ ಮೂರರ ಮಿತಿಯನ್ನು ಮೀರಿರಲಿಲ್ಲ. ನನ್ನ ಕೊನೆಯ ಬಜೆಟ್ ನಲ್ಲಿ ಈ ಮಿತಿ ಶೇಕಡಾ 2.49ರಷ್ಟಿತ್ತು. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಇದು ಅನಿವಾರ್ಯ. ಯಡಿಯೂರಪ್ಪ ಸರ್ಕಾರ ರಾಜ್ಯವನ್ನು ಆರ್ಥಿಕ ದಿವಾಳಿಗೆ ತಳ್ಳುತ್ತಿದೆ.

ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ನಮ್ಮ ಸಾಲ 25%ರ ಮಿತಿಯಲ್ಲಿರಬೇಕಾಗುತ್ತದೆ.. ನಾನೆಂದೂ ಈ ಮಿತಿಯನ್ನು ಮೀರಿರಲಿಲ್ಲ. ಆದರೆ ಬಿ.ಎಸ್ ಯಡಿಯೂರಪ್ಪ ಸರ್ಕಾರ ರೂ.53000 ಕೋಟಿ ಸಾಲ ಮಾಡಿದೆ, ಈಗ ಹೆಚ್ಚುವರಿಯಾಗಿ ರೂ.33,000 ಕೋಟಿ ಸಾಲ ಎತ್ತಲು ಹೊರಟಿದೆ. ಈ ಒಟ್ಟು ಸಾಲ ಖಂಡಿತ 25%ರ ಮಿತಿಯನ್ನು ಮೀರಲಿದೆ.

2020-21ರ ಆಯವ್ಯಯದಲ್ಲಿ ನಮ್ಮ ಒಟ್ಟು ಆಂತರಿಕ ಉತ್ಪನ್ನ ರೂ.18 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಕೊರೊನಾ ಹಾವಳಿ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಎಡವಟ್ಟುಗಳ ಕಾರಣದಿಂದ ಅದು ರೂ.12 ಲಕ್ಷ ಕೋಟಿಗಿಂತಲೂ ಕೆಳಗಿಳಿಯಬಹುದು.
ಆಗ ನಮ್ಮ ಸಾಲದ ಸಾಮರ್ಥ್ಯ ಕೂಡಾ ಕಡಿಮೆಯಾಗಲಿದೆ.

ಸಂವಿಧಾನದ 101ನೇ ತಿದ್ದುಪಡಿ ಮೂಲಕ ಕಾರ್ಯರೂಪಕ್ಕೆ ಬಂದಿರುವ ಜಿಎಸ್ ಟಿ ಕಾಯ್ದೆಯ ಸೆಕ್ಷನ್ 18ರ ಪ್ರಕಾರ 5 ವರ್ಷಗಳ ಕಾಲ ಜಿಎಸ್ ಟಿ ಪರಿಹಾರ ನೀಡಬೇಕಾಗಿರುವುದು ಸಂವಿಧಾನಾತ್ಮಕ ಕರ್ತವ್ಯ. ಈ ಪರಿಹಾರದ ನಿರಾಕರಣೆ ನಮ್ಮ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ.
2020-2021ರ ಆರ್ಥಿಕ ವರ್ಷದ ಅಂತ್ಯಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್ ಟಿ ಪರಿಹಾರವಾಗಿ ರೂ.30,000 ಕೋಟಿ ನೀಡಬೇಕಾಗುತ್ತದೆ.

ಕೇಂದ್ರ ಸರ್ಕಾರದ ಅನ್ಯಾಯವನ್ನು ಪ್ರತಿಭಟಿಸಲಿಕ್ಕಾಗದ ಮುಖ್ಯಮಂತ್ರಿಗಳು ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ಹೊರಟು ರಾಜ್ಯವನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ.

ರಾಜ್ಯದ ಹಿತದೃಷ್ಟಿಯಿಂದ ವಿತ್ತೀಯ ಕೊರತೆಯ ಮಿತಿಯನ್ನು 3% ಇಂದ 5% ಗೆ ಏರಿಕೆ ಮಾಡುವುದು ಸರಿಯಲ್ಲ. ಹೆಚ್ಚೆಂದರೆ 3.5 ಕ್ಕೆ ಏರಿಕೆ ಮಾಡಿ, ಮುಂದಿನ ದಿನಗಳಲ್ಲಿ ಮತ್ತೆ ಇಳಿಕೆ ಮಾಡಬೇಕು. 5% ಗೆ ಏರಿಕೆ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ.

ಈಗಿನ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕಾದರೆ ರಾಜ್ಯ ಸರ್ಕಾರ ಬದ್ಧತಾ ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ದುಂದು ವೆಚ್ಚಗಳನ್ನು ನಿಲ್ಲಿಸಬೇಕು, ಅನಗತ್ಯ ಹುದ್ದೆಗಳನ್ನು ರದ್ದುಮಾಡಬೇಕು, ತೆರಿಗೆಯೇತರ ಆದಾಯವನ್ನು ಹೆಚ್ಚಿಸಬೇಕು. ಆರ್ಥಿಕ ಶಿಸ್ತನ್ನು ಪಾಲಿಸಬೇಕು.

14ನೇ ಹಣಕಾಸು ಆಯೋಗದಲ್ಲಿ 4.71% ಇದ್ದ ರಾಜ್ಯದ ಪಾಲನ್ನು 15ನೇ ಹಣಕಾಸು ಆಯೋಗದಲ್ಲಿ 3.64%ಗೆ ಇಳಿಸಲಾಗಿದೆ. ಇದರಿಂದ ರಾಜ್ಯಕ್ಕೆ ರೂ.12 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಆಯೋಗ ಶಿಫಾರಸು ಮಾಡಿದ್ದ ರೂ.5495 ಕೋಟಿ ವಿಶೇಷ ಅನುದಾನವನ್ನು ಹಣಕಾಸು ಸಚಿವೆ ತಿರಸ್ಕರಿಸಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ.

ಈ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದವರು. ಅವರಿಗೆ ರಾಜ್ಯದ ಹಿತ ಬೇಕಿಲ್ಲವೇ? ಯಡಿಯೂರಪ್ಪ ಅವರೇ, ನೀವ್ಯಾಕೆ ಇದನ್ನೆಲ್ಲ ಸಹಿಸಿಕೊಂಡು ಕೂತಿದ್ದೀರಿ. ಇದರಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ, ನೀವೂ ಮಾಡಬೇಡಿ. ರಾಜ್ಯದ ಹಿತ ನಮಗೆ ಮುಖ್ಯ.

ರಾಜ್ಯದ ಹಿತರಕ್ಷಣೆಯ ವಿಷಯದಲ್ಲಿ ರಾಜಕೀಯವನ್ನು ಎಳೆದು ತರಬಾರದು. ನಿಮ್ಮ ಪಕ್ಷದ ಸಂಸದರು ದೆಹಲಿಯಲ್ಲಿ ಬಾಯಿ ಬಿಡುತ್ತಿಲ್ಲ. ಸರ್ವಪಕ್ಷಗಳ ನಿಯೋಗವನ್ನಾದರೂ ಕರೆದುಕೊಂಡು ಹೋದರೆ ನಾವೇ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಧಾನಿಯವರಿಗೆ ತಿಳಿಸುತ್ತೇವೆ. ಇದರಲ್ಲಿ ರಾಜಕೀಯ ಬೇಡ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕತೆ ಅಧೋಗತಿಗೆ ತಲುಪಿದೆ ಎನ್ನುವುದನ್ನು ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಆರ್ ಬಿ ಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರ ವರೆಗೆ ದೇಶದ ಪ್ರಖ್ಯಾತ ಆರ್ಥಿಕ ತಜ್ಞರೆಲ್ಲರೂ ದೇಶದ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ.

ಭೂ ಸುಧಾರಣೆ ತಿದ್ದುಪಡಿ

ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ಯಾವ ರೈತರ ಹಿತದೃಷ್ಟಿಯೂ ಇಲ್ಲ.

ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ತಂದು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರು, ರಾಜ್ಯ ಬಿಜೆಪಿ ಸರ್ಕಾರ ಉಳ್ಳವನನ್ನೇ ಭೂ ಒಡೆಯನನ್ನಾಗಿ ಮಾಡಲು ಹೊರಟಿದೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ.

ಕೃಷಿ ಭೂಮಿ ಖರೀದಿಗೆ ಆದಾಯದ ಮಿತಿಯ ಸೆಕ್ಷನ್ 79ಎ, ಕೃಷಿಕರೇತರರಿಗೆ ಭೂಮಿ ಖರೀದಿ ನಿಷೇಧಿಸಿದ್ದ ಸೆಕ್ಷನ್ 79ಬಿ, ಸುಳ್ಳು ಪ್ರಮಾಣಪತ್ರಕ್ಕೆ ದಂಡ ವಿಧಿಸುವ ಸೆಕ್ಷನ್ 79 ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80, ಗರಿಷ್ಠ ಭೂಮಿತಿಯ ಸೆಕ್ಷನ್ 63ರ ರದ್ದತಿ ಭೂತಾಯಿಗೆ ಬಗೆವ ದ್ರೋಹ.

ತಿದ್ದುಪಡಿಗೆ ಒಳಗಾಗಿರುವ ಎಲ್ಲಾ ಸೆಕ್ಷನ್ ಗಳು ಭೂಮಲೀಕರ ದೌರ್ಜನ್ಯದಿಂದ ಸಣ್ಣ ರೈತರನ್ನು ರಕ್ಷಿಸುವ ಹಾಗೂ ಸಣ್ಣ ಪುಟ್ಟ ಹಿಡುವಳಿದಾರರ ಅಸಹಾಯಕತೆಯನ್ನು ಶ್ರೀಮಂತರು ಹಾಗು ಉದ್ಯಮಿಗಳು ದುರುಪಯೋಗ ಪಡಿಸಿಕೊಳ್ಳದಂತೆ ತಡೆಹಿಡಿಯುವ ಅವಕಾಶಗಳನ್ನು ಒದಗಿಸುತ್ತಿದ್ದವು.

ಈ ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ ಕಾರ್ಪೋರೇಟ್ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕುಳಗಳು ಮತ್ತು ಶ್ರೀಮಂತರು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದು. ಸಣ್ಣ ರೈತಾಪಿಗಳು ಇನ್ನಷ್ಟು ವೇಗವಾಗಿ ಹಾಗೂ ಶಾಸನಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ.

ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆ ಮಾಡಿರುವ ಅಂದಾಜು 60,000 ಎಕರೆ ಜಮೀನು ಒಳಗೊಂಡಿರುವ 13,814 ಪ್ರಕರಣಗಳು ರಾಜ್ಯದ ನ್ಯಾಯಾಲಯದಲ್ಲಿವೆ. ಪ್ರಸ್ತಾಪಿತ ತಿದ್ದುಪಡಿಯಿಂದ ಈ ಎಲ್ಲ ಪ್ರಕರಣಗಳು ರದ್ದಾಗಿ ಅಕ್ರಮಗಳೆಲ್ಲ ಸಕ್ರಮವಾಗಲಿವೆ. ಈ ಭೂಗಳ್ಳರನ್ನು ರಕ್ಷಿಸಲಿಕ್ಕಾಗಿಯೇ ತಿದ್ದುಪಡಿ ತರಲಾಗಿದೆ.

ಭೂ ಸುಧಾರಣೆ ಕಾಯ್ದೆ ಉಲ್ಲಂಘಣೆಯ 13,814 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಭೂಮಿಗೆ ಚಿನ್ನದ ಬೆಲೆ ಇರುವ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿದೆ. ಈ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಶಾಮೀಲಾಗಿ ಸರ್ಕಾರ ಈ ತಿದ್ದುಪಡಿ ತಂದಿದೆ.

ಭೂ ಸುಧಾರಣೆ ತಿದ್ದುಪಡಿಯ ಹಿಂದೆ ಕೋಟ್ಯಂತರ ರೂಪಾಯಿಗಳ ಹಗರಣ ಇದೆ. ಅಂದಾಜು 60,000 ಎಕರೆ ಜಮೀನನ್ನು ಪಡೆಯಲಿರುವ ಭೂಗಳ್ಳರಿಂದ ಆಡಳಿತ ಪಕ್ಷದವರಿಗೆ ಏನು ಲಾಭ ಎನ್ನುವುದನ್ನು ನಾನು ವಿವರಿಸಲು ಹೋಗುವುದಿಲ್ಲ. ಭೂ ಸುಧಾರಣಾ ಕಾಯ್ದೆಯಿಂದಾಗಿ ಭ್ರಷ್ಟಾಚಾರ ಹೆಚ್ಚಾಗಿದೆ, ಅಧಿಕಾರಿಗಳು ಲಂಚ ಹೊಡೆಯಲು ಅನುಕೂಲವಾಗಿದೆ ಎಂದು ಸರ್ಕಾರ ಹೇಳುತ್ತಿದೆ.

ಲಂಚ ಎಲ್ಲಿ ಇಲ್ಲ? ತಹಶೀಲ್ದಾರ್, ಪೊಲೀಸ್, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ ಇಲ್ಲವೇ? ನಿರ್ಮೂಲನೆ ಮಾಡಬೇಕಾಗಿರುವುದು ಲಂಚವನ್ನೇ? ಇಲ್ಲ ಕಾನೂನನ್ನೇ? ಅಧಿಕಾರಿಗಳು ಲಂಚಕೋರರಾಗಿದ್ದಾರೆ ಎಂದರೆ ಸರ್ಕಾರ ಅವರನ್ನು ನಿಯಂತ್ರಿಸಲು ವಿಫಲವಾಗಿದೆ ಇಲ್ಲವೇ ಸರ್ಕಾರವೇ ಲಂಚಕೋರರ ಜೊತೆ ಶಾಮೀಲಾಗಿದೆ ಎಂದರ್ಥವಲ್ಲವೇ? ಇದನ್ನೂ ಸಮರ್ಥಿಸಿಕೊಳ್ಳಲು ನಾಚಿಕೆ ಆಗುವುದಿಲ್ವೇ?

ಇಡೀ ದೇಶ ಕೊರೊನಾ ಸೋಂಕಿನಿಂದ ತತ್ತರಿಸುತ್ತಿರುವಾಗ ತರಾತುರಿಯಲ್ಲಿ ಈ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರುವ ಅನಿವಾರ್ಯತೆ ಏನಿತ್ತು? ಇದನ್ನು ತರುವ ಮೊದಲು ರೈತರ ಜೊತೆ ಸಮಾಲೋಚನೆ ಮಾಡಿದ್ದೀರಾ? ವಿರೋಧ ಪಕ್ಷಗಳ ಜೊತೆ ಚರ್ಚೆ ಮಾಡಿದ್ದೀರಾ? ಕನಿಷ್ಠ ನಿಮ್ಮ ಪಕ್ಷದೊಳಗಾದರೂ ಚರ್ಚೆ ಮಾಡಿದ್ದೀರಾ?

ಈ ಭೂ ಸುಧಾರಣಾ ತಿದ್ದುಪಡಿಯಿಂದ ಕೃಷಿಗೇನು ತೊಂದರೆಯಾಗಲಾರದು ಎಂದು ಹೇಳುತ್ತೀರಲ್ಲಾ? ಕೃಷಿಯೇತರ ಬಳಕೆಗೆ ಕೃಷಿ ಭೂಮಿಯನ್ನು ಬಳಸಿಕೊಳ್ಳಬಾರದೆಂಬ ನಿರ್ಬಂಧವೇನಾದರೂ ತಿದ್ದುಪಡಿಯಲ್ಲಿದೆಯೇ? ಯಾಕೆ ಅದನ್ನು ಸೇರಿಸಿಲ್ಲ? ಇದರ ಹಿಂದಿನ ದುರುದ್ದೇಶ ಏನು?
ರೈತ ವಿರೋಧಿಯಾಗಿರುವ ಭೂ ಸುಧಾರಣಾ ತಿದ್ದುಪಡಿಯನ್ನು ನಾವು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರಲ್ಲಿ ಆತ್ಮಸಾಕ್ಷಿ ಇದ್ದರೆ ಅವರೂ ವಿರೋಧಿಸಬೇಕು ಎಂದು ಮನವಿ ಮಾಡುತ್ತೇವೆ. ನಮ್ಮ ಹೋರಾಟ ಸದನಕ್ಕೆ ಮಾತ್ರ ಸೀಮಿತವಲ್ಲ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ.

ಎಪಿಎಂಸಿಕಾಯ್ದೆಗೆ ತಿದ್ದುಪಡಿ

ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸ್ವಪ್ರೇರಣೆಯಿಂದಲ್ಲ. ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ಕೃಷಿ ಸಚಿವಾಲಯದ ಒತ್ತಡಕ್ಕೆ ಮಣಿದು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ನಾಡಿನ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ಹೊರಟಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ಈಗಿನ ಎಪಿಎಂಸಿ ಕಾಯಿದೆಯ ಅನ್ವಯ ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಒಳಗೆ ವರ್ತಕರಿಗೆ ಇಲ್ಲವೇ ಹೊರಗೆ ಪರವಾನಗಿ ಇರುವ ವರ್ತಕರಿಗೆ ಮಾರಾಟ ಮಾಡಬಹುದಿತ್ತು. ತಿದ್ದುಪಡಿಯಿಂದಾಗಿ ಎಪಿಎಂಸಿ ಹೊರಗಿನ ವರ್ತಕರ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣ ಇರುವುದಿಲ್ಲ. ಹೀಗಿದ್ದಾಗ ರೈತರಿಗೆ ಎಲ್ಲಿದೆ ರಕ್ಷಣೆ?

ಆರಂಭದಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂದು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ, ಇದರಿಂದ ರಾಜ್ಯದಲ್ಲಿನ ಎಪಿಎಂಸಿ ಗಳು ಒಂದೊಂದಾಗಿ ಮುಚ್ಚಿಕೊಳ್ಳುತ್ತಾ ಸಾಗಿ ಕೊನೆಗೆ ರೈತರು ಅನಿವಾರ್ಯವಾಗಿ ಖಾಸಗಿಯವರನ್ನೆ ಅವಲಂಭಿಸಬೇಕಾಗುತ್ತದೆ.

ಒಮ್ಮೆ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳು ಸಾರ್ವಭೌಮತ್ವ ಸಾಧಿಸಿದರೆಂದರೆ ನಂತರ ಅವರನ್ನು ನಿಯಂತ್ರಿಸುವ ಯಾವ ನಿಯಮಗಳು ಅಥವಾ ಅಧಿಕಾರ ಸರ್ಕಾರದ ಬಳಿ ಇರುವುದಿಲ್ಲ. ಇದು ಭವಿಷ್ಯದಲ್ಲಿ ಶೋಷಣೆಗೆ ದಾರಿ ಮಾಡಿಕೊಡುತ್ತದೆ.

ರೈತರ ಬೆಳೆಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ನಿಜವಾದ ಕಾಳಜಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದ್ದರೆ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿ, ತೂಕ ಮತ್ತು ಇತರೆಡೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ.

ಎಪಿಎಂಸಿ ಗಳಿಂದ ಸರ್ಕಾರಕ್ಕೆ ವಾರ್ಷಿಕ ರೂ.600 ಕೋಟಿ ಲಾಭವಿದೆ, ಇದರ ಜೊತೆಗೆ ರೈತರ ಬೆಳೆಗಳಿಗೂ ಅರ್ಹ ಬೆಲೆ ಸಿಗುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವುದರಿಂದ ಎಲ್ಲಾ ಎಪಿಎಂಸಿ ಗಳು ಬಾಗಿಲು ಹಾಕಿದರೆ ಸರ್ಕಾರಕ್ಕಾಗುವ ಈ ನಷ್ಟವನ್ನು ಖಾಸಗಿ ಕಂಪನೆಗಳು ತುಂಬಿಕೊಡುತ್ತವೆಯೇ?
ರೈತರಿಗೆ ಮುಕ್ತ ಮಾರುಕಟ್ಟೆ ಕಲ್ಪಿಸುವುದರಿಂದ ನ್ಯಾಯಯುತ ಬೆಲೆ ಸಿಗುತ್ತದೆ ಎಂಬುದು ಸರ್ಕಾರದ ವಾದ.

ಹಾಗಾದರೆ 1966ರ ಪೂರ್ವದಲ್ಲೂ ಮುಕ್ತ ಮಾರುಕಟ್ಟೆಯಿತ್ತು, ಆಗ ರೈತರಿಗೆ ನ್ಯಾಯಯುತ ಬೆಲೆ ಸಿಕ್ಕಿದ್ದರೆ ಎಪಿಎಂಸಿ ಕಾಯ್ದೆ ಯಾಕೆ ಜಾರಿಗೆ ಬರುತ್ತಿತ್ತು? ರೈತರ ಮೇಲಿನ ಶೋಷಣೆ ಹೆಚ್ಚಿದ್ದಕ್ಕೆ ಕಾಯ್ದೆ ಜಾರಿಗೆ ಬಂದದ್ದಲ್ಲವೇ. ರಾಜ್ಯಪಟ್ಟಿಯಲ್ಲಿರುವ ಎಪಿಎಂಸಿ ಕಾಯಿದೆಗೆ ಮಾದರಿ ತಿದ್ದುಪಡಿ ರೂಪಿಸಿ, ಇದನ್ನು ಯಥಾವತ್ತಾಗಿ ಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರ ಹೇಳುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅಪಚಾರ. ಕೇಂದ್ರಕ್ಕೆ ಈ ಅಧಿಕಾರ ಕೊಟ್ಟವರು ಯಾರು?

ಎಪಿಎಂಸಿ ಗಳ ಮೇಲೆ ಸರ್ಕಾರದ ನಿಯಂತ್ರಣವಿದೆ, ತಿದ್ದುಪಡಿ ಜಾರಿಯಾದರೆ ರೈತರ ಉತ್ಪನ್ನಗಳನ್ನು ಖರೀದಿಸುವ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ಸರ್ಕಾರಕ್ಕೆ ಯಾವುದೇ ರೀತಿಯ ನಿಯಂತ್ರಣ ಇರುವುದಿಲ್ಲ. ಭವಿಷ್ಯದಲ್ಲಿ ಖಾಸಗಿಯವರೇ ರೈತರ ಶೋಷಣೆಗೆ ಇಳಿದರೆ ನ್ಯಾಯಕ್ಕಾಗಿ ರೈತರು ಯಾರನ್ನು ಕೇಳಬೇಕು?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending