ದಿನದ ಸುದ್ದಿ
ಕೃಷಿ ಬ್ರಹ್ಮ, ನಾಡೋಜ ಎಲ್.ನಾರಾಯಣ ರೆಡ್ಡಿ ವಿಧಿವಶ
ಸುದ್ದಿದಿನ ಡೆಸ್ಕ್ : ಸಾವಯವ ಸಂತ, ಕೃಷಿ ಪಂಡಿತ, ನಾಡೋಜ ಪ್ರಶಸ್ತಿ ವಿಜೇತ ಎಲ್.ನಾರಾಯಣ ರೆಡ್ಡಿ (80) ಯವರು ಸೋಮವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ವಗ್ರಾಮ ಮರೇನಹಳ್ಳಿಯಲ್ಲಿ ವಿಧಿವಶರಾದರು.
ಮೂರು ಗಂಡು ಮಕ್ಕಳು ಮತ್ತು ಪತ್ನಿ ಯನ್ನು ಅಗಲಿದ್ದಾರೆ.ಸೋಮವಾರ ಸಂಜೆ 4 ಗಂಟೆಗಳ ನಂತರ ವರ್ತೂರಿನಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇವರ ಕೃಷಿ ಸೇವೆ ಗೆ ಹಂಪಿ ವಿಶ್ವವಿದ್ಯಾಲಯ ಪ್ರತಿಷ್ಠಿತ ಗೌರವ ಡಾಕ್ಟರೇಟ್ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸಾವಯವ ಕೃಷಿಯ ಬಗ್ಗೆ ವಿವಿಧ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡುತ್ತಿದ್ದರು.ಇಂಗ್ಲೀಷ್,ಜರ್ಮನ್ ಹೀಗೆ ಹಲವಾರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು.
ಪೂರ್ಣ ಚಂದ್ರ ತೇಜಸ್ವಿಯವರ ಸಹಜ ಕೃಷಿ ಪುಸ್ತಕದಲ್ಲಿ ಇವರ ಬಗ್ಗೆ ಉಲ್ಲೇಖವಿರುವುದನ್ನು ಇಲ್ಲಿ ಸ್ಮರಿಸಬಹುದು. ಸರಳತೆಯ, ಗೋ ಆಧಾರಿತ ಕೃಷಿಯ ರಾಸಾಯನಿಕ ಮುಕ್ತ ಕೃಷಿಯ ಹರಿಕಾರ ನಮ್ಮ ಗುರುಗಳು ಅದ ನಾಡೋಜ ಡಾಕ್ಟರ್ ನಾರಾಯಣ ರೆಡ್ಡಿ ವಿಧಿವಶರಾಗಿದ್ದಾರೆ.
ರೈತ ಸಮೂಹಕ್ಕೆ ಮಾದರಿಯಾಗಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿ ರೈತರಿಗೆ ಒಂದು ವಿಶ್ವವಿದ್ಯಾಲಯಕ್ಕಿಂತ ಹೆಚ್ಚಿನ ಜ್ಞಾನಾರ್ಜನೆ ಕೊಡುತ್ತಿದ್ದ ಅವರ ಕೊಡುಗೆ ಅವಿಸ್ಮರಣೀಯ. ಇಳಿ ವಯಸ್ಸಿನಲ್ಲೂ ಅವರು ತರಬೇತಿ ಕಾರ್ಯಕ್ರಮ ಗಳನ್ನು ನಡೆಸುತ್ತಾ ಎಲ್ಲಾ ರೈತ ಸಮೂಹಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು.
ಅವರ ಜ್ಞಾನದ ಪುಸ್ತಕಗಳು, ಹಂಚಿದ ಜ್ಞಾನ ಕೋಟ್ಯಂತರ ರೈತರಿಗೆ ಮಾದರಿಯಾಗಿ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುತ್ತಾ ಅವರಿಗೆ ಗೌರವ ಪೂರ್ವಕ ವಿದಯಾಗಳ ಅರ್ಪಿಸೋಣ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ 5 ದಿನಗಳ ವೃತ್ತಿ ನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶಿಬಿರದ ನಂತರ ತಿಂಗಳಲ್ಲಿ ಶಿಬಿರಾರ್ಥಿಗಳು ರಚಿಸಿದ ಆಯ್ಕೆಗೊಂಡ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಸ್ಪಷ್ಟವಾಗಿ ಕನ್ನಡ ಓದಲು, ಬರೆಯಲು ಬರುವ ಮತ್ತು ರಂಗಸಾಹಿತ್ಯ ಕುರಿತು ಪ್ರಾಥಮಿಕ ಜ್ಞಾನವುಳ್ಳ 18 ವರ್ಷ ಮೇಲ್ಪಟ್ಟವರು ಸ್ವ-ಪರಿಚಯದೊಂದಿಗೆ 20 ಜನವರಿ 2025 ರೊಳಗೆ ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಸೌಲಭ್ಯ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಮೊದಲನೇ ಮಹಡಿ, ಕೊಠಡಿ ಸಂ:38ಎ, ಜಿಲ್ಲಾಡಳಿತ ಭವನ, ಪಿ.ಬಿ.ರಸ್ತೆ ದಾವಣಗೆರೆ ದೂ.ಸಂ:08192-200635, 9341010712 ನ್ನು ಸಂಪರ್ಕಿಸಲು ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯ ಅಗತ್ಯ : ಡಾ. ವೆಂಕಟೇಶ್ ಬಾಬು
ಸುದ್ದಿದಿನ,ಚನ್ನಗಿರಿ:ವಿದ್ಯಾರ್ಥಿಗಳು ಇಂದಿನ ಯುಗಕ್ಕೆ ಅಗತ್ಯವಿರುವ ಎಲ್ಲಾ ಜೀವನ ಹಾಗೂ ತಂತ್ರಜ್ಞಾನ, ವಿಶೇಷವಾಗಿ ಡಿಜಿಟಲ್ ಕೌಶಲ್ಯಗಳನ್ನು ಅರಿತಿರಬೇಕು ಎಂದು ಪ್ರಾಧ್ಯಾಪಕ ಡಾ. ವೆಂಕಟೇಶ್ ಬಾಬು ಅವರು ತಿಳಿಸಿದರು.
ಬುಧವಾರ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಕೋಶದ ಪ್ರೇರಣಾ ವಿಭಾಗದ ವತಿಯಿಂದ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಂಪ್ಯೂಟರ್ ಆಧರಿತ ಉದ್ಯೋಗದ ಕೌಶಲಗಳನ್ನು ಹೊಂದಿದ್ದರೆ ಉದ್ಯೋಗಗಳು ನಮ್ಮನ್ನ ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.
ಕಾಲೇಜಿನ ಅಲ್ಮನಿ ವಿದ್ಯಾರ್ಥಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀ ಮಧು ಜಿ.ಟಿ ರವರು ತಾನು ಈ ಕಾಲೇಜಿನಲ್ಲಿ ಕಲಿಯುವಾಗ ಇಲ್ಲದಿರುವ ಎಲ್ಲಾ ಸೌಲಭ್ಯಗಳು/ ಅವಕಾಶಗಳು ಈಗ ದೊರೆಯುತ್ತಿವೆ ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಅಮೃತೇಶ್ವರ ಬಿ.ಜಿ ಅವರು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಡಿಜಿಟಲ್ ಸ್ಕಿಲ್ ಹಾಗೂ ಇಂಗ್ಲಿಷ್ ಸಂವಹನ ಜ್ಞಾನದ ಅವಶ್ಯಕತೆ ಇದ್ದು ಪದವಿಯೊಂದಿಗೆ ಡಿಜಿಟಲ್ ಕೌಶಲ್ಯಗಳ ಅರಿ ವನ್ನು ವಿದ್ಯಾರ್ಥಿಗಳಿಗೆ ಕಾಲೇಜಿನ ಉದ್ಯೋಗ ಕೋಶ ವೇದಿಕೆಯು ಉಚಿತವಾಗಿ ನೀಡುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಕರೆ ನೀಡಿದರು.
ಡಾ. ಮಂಜುಳಾ ಟಿ ಪ್ಲೇಸ್ಮೆಂಟ್ ಸೆಲ್ ಸಂಚಾಲಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವರ್ತಮಾನದ ಜಗತ್ತಿಗೆ ಡಿಜಿಟಲ್ ಕೌಶಲ ವಿಶೇಷವಾಗಿ ವಿದ್ಯಾರ್ಥಿ ಗಳು ಅತಿ ತುರ್ತಾಗಿ ಕಲಿಯುವ ಅವಶ್ಯಕತೆ ಇದೆ ಎಂದರು.
ಬಿ ಸಿ ಎ/ ಸಿ ಎಸ್ ವಿಭಾಗದ ಮುಖ್ಯಸ್ಥರು ಶ್ರೀಮುರುಳಿಧರವರು, ವಾಣಿಜ್ಯಶಾಸ್ತ್ರ ವಿಭಾಗದ ಲಕ್ಷ್ಮಿ ರಂಗನಾಥ್, ಐಕ್ಯೂ ಏ ಸಿ ಸಂಚಾಲಕರಾದ ಶ್ರೀವಿಜಯಕುಮಾರ್ ಎನ್ ಸಿ ಡಾ. ಪ್ರದೀಪ್ ಕುಮಾರ್. ಡಾ. ದಾಕ್ಷಾಯಿಣಿ ಡೋಂಗ್ರೆ ಹಾಗೂ ಬೋಧಕ/ ಬೋಧಕೇತ ತರರು ಹಾಜರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ವಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉದ್ಘಾಟಿಸಲಾಯಿತು ಇಂದಿನಿಂದ ಸತತ 15 ದಿನಗಳು ಮದ್ಯಾಹ್ನ 2:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಿಜಿಟಲ್ ಸ್ಕಿಲ ಬಗ್ಗೆ ಪ್ರಾಯೋಗಿಕ ತರಗತಿಗಳು ಮತ್ತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಪಿಜಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಖರೀದಿಸಲು ನೋಂದಣಿ ಆರಂಭ
ಸುದ್ದಿದಿನ,ದಾವಣಗೆರೆ:ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್ ರೂ.2300 ಹಾಗೂ ಎ ಗ್ರೇಡ್ ಪ್ರತಿ ಕ್ವಿಂಟಾಲ್‍ಗೆ ರೂ.2320 ರಂತೆ ಹಾಗೂ ಪ್ರತಿ ಕ್ವಿಂಟಾಲ್‍ಗೆ ರಾಗಿಗೆ ರೂ.4290 ರಂತೆ ಖರೀದಿಸಲು ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
ನೋಂದಣಿ ಕೇಂದ್ರಗಳು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ದಾವಣಗೆರೆ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹೊನ್ನಾಳ್ಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಜಗಳೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹರಿಹರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಚನ್ನಗಿರಿ ಇಲ್ಲಿ ಕೃಷಿ ಇಲಾಖೆಯವರು ಸಿದ್ಧಪಡಿಸಿದ ಫ್ರೂಟ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲು ತಿಳಿಸಿದೆ. ನೊಂದಣಿ ಆರಂಭವಾಗಿದ್ದು 2025 ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಖರೀದಿಸಲಾಗುವುದು.
ರೈತರು ಕೃಷಿ ಇಲಾಖೆ ನೀಡಿರುವ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಫೂಟ್ ನೊಂದಣಿ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ಸಾಧನದ ಮುಖಾಂತರ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಫೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ನೇರವಾಗಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಮತ್ತು ಎನ್‍ಪಿಸಿಎಲ್ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಖರೀದಿ ಕೇಂದ್ರಕ್ಕೆ ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ನೀಡಬೇಕು.
ರೈತರು ತಾವು ನೀಡುವ ಎಲ್ಲಾ ದಾಖಲಾತಿಗಳಲ್ಲಿಯೂ ಒಂದೇ ಹೆಸರು ನಮೂದಾಗಿರತಕ್ಕದ್ದು, ಮತ್ತು ರಾಗಿ ತಂದು ಖರೀದಿ ಕೇಂದ್ರದಲ್ಲಿ ರಾಶಿ ಹಾಕಬೇಕು. ರಾಗಿ ಗುಣಮಟ್ಟ ಪರಿಶೀಲಿಸಲು ನೇಮಿಸಲ್ಪಟ್ಟ ಗ್ರೇಡರ್ಸ್ ದಾಸ್ತಾನಿನ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ಧೃಢಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟ ಸರಿಯಿಲ್ಲವೆಂದು ದೃಢಪಡಿಸಿದ್ದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು.
ಪ್ರತಿ ರೈತರಿಂದ ಪ್ರತಿ ಎಕರೆಗೆ ರಾಗಿ 10.00 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಮತ್ತು ರೈತರಿಂದ ಭತ್ತವನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ತಹಶೀಲ್ದಾರರು, ಉಪವಿಭಾಗಾಧಿಕಾರಿ, ಜಂಟಿ ನಿರ್ದೇಶಕರು (ಆಹಾರ), ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು. ಅಥವಾ ದೂರವಾಣಿ ಸಂಖ್ಯೆ -08192-296770 ಗೆ ಕರೆಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243