ದಿನದ ಸುದ್ದಿ
ಮೂಲ ರಾಮಾಯಣ ಕುರಿತು ಚಿಂತನೆ ಅಗತ್ಯ: ಸತೀಶ್ ಜಾರಕಿಹೊಳಿ
ಸುದ್ದಿದಿನ,ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ಬಹಳಷ್ಟು ರಾಮಾಯಣಗಳು ಬರುತ್ತಿವೆ. ಇದರಿಂದ ಗೊಂದಲ ಮೂಡುತ್ತಿರುವುದರಿಂದ ಮೂಲ ವಾಲ್ಮೀಕಿ ರಾಮಾಯಣ ಹಾಗೂ ನಂತರ ಬಂದ ರಾಮಾಯಣಗಳ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಶಾಸಕ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಭಾನುವಾರ (ಅ.13) ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದಯ, ಮಾನವೀಯತೆ ಇಲ್ಲದ ಧರ್ಮ ನಮ್ಮದಾಗುವುದು ಸಾಧ್ಯವಿಲ್ಲ; ಮಾನವೀಯತೆಯೇ ನಮ್ಮ ಧರ್ಮವಾಗಬೇಕು ಎಂದರು. ದೇವರುಗಳಲ್ಲೂ ತಾರತಮ್ಯ ಮಾಡಲಾಗುತ್ತಿದ್ದು, ಕೆಲವು ಉಗ್ರ ದೇವರುಗಳು; ಇನ್ನುಳಿದವು ಶಾಂತ ದೇವರುಗಳಿದ್ದು, ಶಾಂತ ದೇವರುಗಳು ಬೆಳ್ಳಿ-ಬಂಗಾರ ಮಾತ್ರ ಬೇಡುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು.
ಆಹಾರ ಪದ್ಧತಿ, ವ್ಯಕ್ತಿಯ ಬಣ್ಣ-ರೂಪಗಳ ಮೇಲೆ ತಾರತಮ್ಯ ನಡೆಯುತ್ತಿದ್ದು, ಈ ಬಗ್ಗೆ ಸಮಾಜದ ಜನರು ಜಾಗೃತರಾಗಬೇಕಿದೆ.
ವಾಲ್ಮೀಕಿ ಸಮಾಜಕ್ಕೆ ಉದ್ಯೋಗ-ಶಿಕ್ಷಣದಲ್ಲಿ ಶೇ.7.5 ರಷ್ಟು ಮೀಸಲಾತಿ ಅಗತ್ಯವಾಗಿದೆ. ಇದನ್ನು ಪಡೆಯುವ ನಿಟ್ಟಿನಲ್ಲಿ ವಾಲ್ಮೀಕಿ ಗುರುಪೀಠದ ನೇತೃತ್ವದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಶಿಕ್ಷಣ, ಸಂಘಟನೆ, ಹೋರಾಟ ಎಂದು ಡಾ.ಅಂಬೇಡ್ಕರ್ ಹೇಳಿದರು. ಅದಕ್ಕೆ ಈಗ ‘ಉದ್ಯೋಗ’ ಎಂಬ ಪದವನ್ನೂ ಸೇರಿಸಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಸಮಾಜದಲ್ಲಿ ಶಿಕ್ಷಣ ಪ್ರಮಾಣ ಈಗ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತಹ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳಬೇಕಿದೆ. ತಂತ್ರಜ್ಞಾನದ ಈ ಯುಗದಲ್ಲಿ ಉದ್ಯೋಗಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕಿದೆ. ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಸಾಧಿಸಿದಾಗ ಜಯಂತಿ ಸಾರ್ಥಕವಾಗುತ್ತದೆ. ಸರ್ಕಾರ ಒಂದು ಹಂತದವರೆಗೆ ಸಹಾಯ-ಸಹಕಾರ ನೀಡುತ್ತದೆ. ನಮ್ಮ ಬದುಕು ರೂಪಿಸುವ ಕೆಲಸ ನಾವು ಮಾಡಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ರಾಮಾಯಣ-ಮಹಾಭಾರತ ಭಾರತೀಯ ಸಂಸ್ಕೃತಿಯ ಕಣ್ಣುಗಳು
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಧಾರವಾಡ ಕರ್ನಾಟಕ ಕಾಲೇಜಿನ ಡಾ.ಶರಣು ಮುಷ್ಠಿಗೇರಿ ಅವರು, ಜಗತ್ತಿನ ಮಹಾನ್ ಆದರ್ಶ ಗ್ರಂಥಗಳಾಗಿರುವ ರಾಮಾಯಣ-ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು. ಆದ್ದರಿಂದ ನಾನು ಭಾರತೀಯ ಎಂದು ಹೇಳಿಕೊಳ್ಳಬೇಕಾದರೆ ನಾವು ಈ ಎರಡೂ ಮಹಾನ್ ಗ್ರಂಥಗಳನ್ನು ಓದಲೇಬೇಕು ಎಂದರು.
ವಾಲ್ಮೀಕಿ ಈ ದೇಶದ ಆದರ್ಶ. ಆದ್ದರಿಂದ ಅವರ ಆದರ್ಶಗಳು ಮತ್ತು ಬದುಕು ಇಂದು ಅರಿವಿನ ಮಾರ್ಗಗಳಾಗಿವೆ.ಒಂದು ವಾಲ್ಮೀಕಿ ರಾಮಾಯಣ ಇಂದು ಅರವತ್ತು ಸಾವಿರ ರಾಮಾಯಣಗಳಾದರೂ ಮೂಲ ಗ್ರಂಥ ವಾಲ್ಮೀಕಿ ರಾಮಾಯಣವೇ ಆಗಿ ಉಳಿದಿರುವುದಕ್ಕೆ ಅದರ ಸತ್ವವೇ ಕಾರಣವಾಗಿದೆ. ಜಗತ್ತಿನ ಸಂಕಟಕ್ಕೆ ಮಿಡಿಯುವ ಮಹಾನ್ ಕಾವ್ಯ ರಚಿಸಿದ ಕೀರ್ತಿ ವಾಲ್ಮೀಕಿ ಋಷಿಗೆ ಸಲ್ಲುತ್ತದೆ. ರಾಮಾಯಣ, ಮಹಾಭಾರತ, ಗಾಯತ್ರಿ ಮಂತ್ರ ಸೇರಿದಂತೆ ಮಹಾನ್ ಗ್ರಂಥ, ಮಂತ್ರ ರಚಿಸಿದವರು ತಳ ಸಮುದಾಯದವರು. ಪ್ರಸ್ತುತ ಸನ್ನಿವೇಶದಲ್ಲಿ ಇದನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಯುತ್ತಿರುವುದು ವಿಷಾದಕರ.
ನಾನು ಭಾರತೀಯ ಎಂದು ಹೇಳಿಕೊಳ್ಳಬೇಕಾದರೆ ಪ್ರತಿಯೊಬ್ಬರು ಈ ಎರಡೂ ಗ್ರಂಥಗಳನ್ನು ಓದಲೇಬೇಕು ಎಂದರು. ರಾಮಾಯಣ ಆದರ್ಶದ ಪ್ರತೀಕವಾಗಿದೆ.ಗಂಡ-ಹೆಂಡತಿ, ಅಣ್ಣ-ತಮ್ಮ, ರಾಜ-ಮಹಾರಾಜರು, ಋಷಿಮುನಿಗಳು, ಆಡಳಿತ ವ್ಯವಸ್ಥೆ ಪ್ರತಿಯೊಂದು ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟ ಆದರ್ಶ ಕೃತಿ ರಾಮಾಯಣ. ಅಂತಹ ರಾಮಾಯಣ ಜಗತ್ತಿಗೆ ಕೊಟ್ಟ ವಾಲ್ಮೀಕಿ ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ.
ದೇಶಕ್ಕಾಗಿ ತ್ಯಾಗ ಮಾಡಿದ ನಾಯಕ ಜನಾಂಗದವರು ಸಾಹಸ -ಶೌರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇತಿಹಾಸದ ಪುಟಗಳನ್ನು ತಿರುವಿ ಹಾಕುದರೆ ಸಾಕು ಈ ಸಮುದಾಯದ ತ್ಯಾಗ, ಹೋರಾಟದ ಗತವೈಭವ ಕಾಣಿಸುತ್ತದೆ ಎಂದರು. ದೇವರ, ಧರ್ಮ, ವಿಶ್ವಾಸದ ಹೆಸರಿನಲ್ಲಿ ಸಮಾಜವನ್ನು ಯಾಮಾರಿಸುವ ಕೆಲಸ ನಡೆದಿದೆ. ಇದರ ಬಗ್ಗೆ ಜಾಗರೂಕತೆಯಿಂದ ಇರಬೇಕು.
ವಾಲ್ಮೀಕಿಯ ಆದರ್ಶ ರಾಮಾಯಣ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕಿದ್ದು, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸುವ ಮೂಲಕ ಮಹಾನ್ ಗ್ರಂಥ ಮತ್ತು ವಾಲ್ಮೀಕಿಯ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಬೇಕಿದೆ ಎಂದು ಡಾ.ಶರಣು ಮುಷ್ಠಿಗೇರಿ ಅಭಿಪ್ರಾಯಪಟ್ಟರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಮಹಾನ್ ಗ್ರಂಥ ರಾಮಾಯಣದ ಮೂಲಕ ಜಗತ್ತಿಗೆ ಆದರ್ಶ ರಾಮರಾಜ್ಯದ ಕನಸು ಕಟ್ಟಿಕೊಟ್ಟ ವಾಲ್ಮೀಕಿ ಸದಾ ಸ್ಮರಣಾರ್ಹರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಬೆನಕೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಯು ಆಯಾ ಸಮಾಜದ ನಿಜವಾದ ಪ್ರಗತಿಯಾಗಿದೆ ಎಂದರು.
ಹಿಂಡಾಲ್ಕೊ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಅರುಣ ಕಟಾಂಬಳೆ, ತಾಲೂಕ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ ಕೆ.ಎಚ್,
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಸದಾಶಿವ ಬಡಿಗೇರ, ತಾಲೂಕ ಪಂಚಾಯತ್ ಉಪಾಧ್ಯಕ್ಷರಾದ ಮಾರುತಿ ಸನದಿ, ಮಾಜಿ ನಗರ ಸೇವಕಿ ಜಯಶ್ರೀ ಮಾಲಗಿ, ಎಪಿಎಂಸಿ ಅಧ್ಯಕ್ಷರಾದ ಆನಂದ ಪಾಟೀಲ, ಮಾಜಿ ಪೌರರಾದ ಬಸಪ್ಪ ಚಿಕ್ಕಲದಿನ್ನಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಮೇಶ್ ಗೋರಲ್, ಸಮಾಜದ ಮುಖಂಡರು, ಸಮಾಜದ ವಿವಿಧ ಸಂಘಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಾಲ್ಮೀಕಿ ಭಾವಚಿತ್ರದ ಮೆರವಣಿಗೆ
ಇದಕ್ಕೂ ಮುಂಚೆ ನಗರದ ಅಶೋಕ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಚಾಲನೆ ನೀಡಿದರು.ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಆರ್.ಟಿ.ಓ. ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರ ತಲುಪಿತು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ಜಗದೀಶ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ 5 ದಿನಗಳ ವೃತ್ತಿ ನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶಿಬಿರದ ನಂತರ ತಿಂಗಳಲ್ಲಿ ಶಿಬಿರಾರ್ಥಿಗಳು ರಚಿಸಿದ ಆಯ್ಕೆಗೊಂಡ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಸ್ಪಷ್ಟವಾಗಿ ಕನ್ನಡ ಓದಲು, ಬರೆಯಲು ಬರುವ ಮತ್ತು ರಂಗಸಾಹಿತ್ಯ ಕುರಿತು ಪ್ರಾಥಮಿಕ ಜ್ಞಾನವುಳ್ಳ 18 ವರ್ಷ ಮೇಲ್ಪಟ್ಟವರು ಸ್ವ-ಪರಿಚಯದೊಂದಿಗೆ 20 ಜನವರಿ 2025 ರೊಳಗೆ ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಸೌಲಭ್ಯ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಮೊದಲನೇ ಮಹಡಿ, ಕೊಠಡಿ ಸಂ:38ಎ, ಜಿಲ್ಲಾಡಳಿತ ಭವನ, ಪಿ.ಬಿ.ರಸ್ತೆ ದಾವಣಗೆರೆ ದೂ.ಸಂ:08192-200635, 9341010712 ನ್ನು ಸಂಪರ್ಕಿಸಲು ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯ ಅಗತ್ಯ : ಡಾ. ವೆಂಕಟೇಶ್ ಬಾಬು
ಸುದ್ದಿದಿನ,ಚನ್ನಗಿರಿ:ವಿದ್ಯಾರ್ಥಿಗಳು ಇಂದಿನ ಯುಗಕ್ಕೆ ಅಗತ್ಯವಿರುವ ಎಲ್ಲಾ ಜೀವನ ಹಾಗೂ ತಂತ್ರಜ್ಞಾನ, ವಿಶೇಷವಾಗಿ ಡಿಜಿಟಲ್ ಕೌಶಲ್ಯಗಳನ್ನು ಅರಿತಿರಬೇಕು ಎಂದು ಪ್ರಾಧ್ಯಾಪಕ ಡಾ. ವೆಂಕಟೇಶ್ ಬಾಬು ಅವರು ತಿಳಿಸಿದರು.
ಬುಧವಾರ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಕೋಶದ ಪ್ರೇರಣಾ ವಿಭಾಗದ ವತಿಯಿಂದ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಂಪ್ಯೂಟರ್ ಆಧರಿತ ಉದ್ಯೋಗದ ಕೌಶಲಗಳನ್ನು ಹೊಂದಿದ್ದರೆ ಉದ್ಯೋಗಗಳು ನಮ್ಮನ್ನ ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.
ಕಾಲೇಜಿನ ಅಲ್ಮನಿ ವಿದ್ಯಾರ್ಥಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀ ಮಧು ಜಿ.ಟಿ ರವರು ತಾನು ಈ ಕಾಲೇಜಿನಲ್ಲಿ ಕಲಿಯುವಾಗ ಇಲ್ಲದಿರುವ ಎಲ್ಲಾ ಸೌಲಭ್ಯಗಳು/ ಅವಕಾಶಗಳು ಈಗ ದೊರೆಯುತ್ತಿವೆ ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಅಮೃತೇಶ್ವರ ಬಿ.ಜಿ ಅವರು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಡಿಜಿಟಲ್ ಸ್ಕಿಲ್ ಹಾಗೂ ಇಂಗ್ಲಿಷ್ ಸಂವಹನ ಜ್ಞಾನದ ಅವಶ್ಯಕತೆ ಇದ್ದು ಪದವಿಯೊಂದಿಗೆ ಡಿಜಿಟಲ್ ಕೌಶಲ್ಯಗಳ ಅರಿ ವನ್ನು ವಿದ್ಯಾರ್ಥಿಗಳಿಗೆ ಕಾಲೇಜಿನ ಉದ್ಯೋಗ ಕೋಶ ವೇದಿಕೆಯು ಉಚಿತವಾಗಿ ನೀಡುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಕರೆ ನೀಡಿದರು.
ಡಾ. ಮಂಜುಳಾ ಟಿ ಪ್ಲೇಸ್ಮೆಂಟ್ ಸೆಲ್ ಸಂಚಾಲಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವರ್ತಮಾನದ ಜಗತ್ತಿಗೆ ಡಿಜಿಟಲ್ ಕೌಶಲ ವಿಶೇಷವಾಗಿ ವಿದ್ಯಾರ್ಥಿ ಗಳು ಅತಿ ತುರ್ತಾಗಿ ಕಲಿಯುವ ಅವಶ್ಯಕತೆ ಇದೆ ಎಂದರು.
ಬಿ ಸಿ ಎ/ ಸಿ ಎಸ್ ವಿಭಾಗದ ಮುಖ್ಯಸ್ಥರು ಶ್ರೀಮುರುಳಿಧರವರು, ವಾಣಿಜ್ಯಶಾಸ್ತ್ರ ವಿಭಾಗದ ಲಕ್ಷ್ಮಿ ರಂಗನಾಥ್, ಐಕ್ಯೂ ಏ ಸಿ ಸಂಚಾಲಕರಾದ ಶ್ರೀವಿಜಯಕುಮಾರ್ ಎನ್ ಸಿ ಡಾ. ಪ್ರದೀಪ್ ಕುಮಾರ್. ಡಾ. ದಾಕ್ಷಾಯಿಣಿ ಡೋಂಗ್ರೆ ಹಾಗೂ ಬೋಧಕ/ ಬೋಧಕೇತ ತರರು ಹಾಜರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ವಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉದ್ಘಾಟಿಸಲಾಯಿತು ಇಂದಿನಿಂದ ಸತತ 15 ದಿನಗಳು ಮದ್ಯಾಹ್ನ 2:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಿಜಿಟಲ್ ಸ್ಕಿಲ ಬಗ್ಗೆ ಪ್ರಾಯೋಗಿಕ ತರಗತಿಗಳು ಮತ್ತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಪಿಜಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಖರೀದಿಸಲು ನೋಂದಣಿ ಆರಂಭ
ಸುದ್ದಿದಿನ,ದಾವಣಗೆರೆ:ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್ ರೂ.2300 ಹಾಗೂ ಎ ಗ್ರೇಡ್ ಪ್ರತಿ ಕ್ವಿಂಟಾಲ್‍ಗೆ ರೂ.2320 ರಂತೆ ಹಾಗೂ ಪ್ರತಿ ಕ್ವಿಂಟಾಲ್‍ಗೆ ರಾಗಿಗೆ ರೂ.4290 ರಂತೆ ಖರೀದಿಸಲು ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
ನೋಂದಣಿ ಕೇಂದ್ರಗಳು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ದಾವಣಗೆರೆ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹೊನ್ನಾಳ್ಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಜಗಳೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹರಿಹರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಚನ್ನಗಿರಿ ಇಲ್ಲಿ ಕೃಷಿ ಇಲಾಖೆಯವರು ಸಿದ್ಧಪಡಿಸಿದ ಫ್ರೂಟ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲು ತಿಳಿಸಿದೆ. ನೊಂದಣಿ ಆರಂಭವಾಗಿದ್ದು 2025 ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಖರೀದಿಸಲಾಗುವುದು.
ರೈತರು ಕೃಷಿ ಇಲಾಖೆ ನೀಡಿರುವ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಫೂಟ್ ನೊಂದಣಿ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ಸಾಧನದ ಮುಖಾಂತರ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಫೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ನೇರವಾಗಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಮತ್ತು ಎನ್‍ಪಿಸಿಎಲ್ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಖರೀದಿ ಕೇಂದ್ರಕ್ಕೆ ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ನೀಡಬೇಕು.
ರೈತರು ತಾವು ನೀಡುವ ಎಲ್ಲಾ ದಾಖಲಾತಿಗಳಲ್ಲಿಯೂ ಒಂದೇ ಹೆಸರು ನಮೂದಾಗಿರತಕ್ಕದ್ದು, ಮತ್ತು ರಾಗಿ ತಂದು ಖರೀದಿ ಕೇಂದ್ರದಲ್ಲಿ ರಾಶಿ ಹಾಕಬೇಕು. ರಾಗಿ ಗುಣಮಟ್ಟ ಪರಿಶೀಲಿಸಲು ನೇಮಿಸಲ್ಪಟ್ಟ ಗ್ರೇಡರ್ಸ್ ದಾಸ್ತಾನಿನ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ಧೃಢಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟ ಸರಿಯಿಲ್ಲವೆಂದು ದೃಢಪಡಿಸಿದ್ದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು.
ಪ್ರತಿ ರೈತರಿಂದ ಪ್ರತಿ ಎಕರೆಗೆ ರಾಗಿ 10.00 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಮತ್ತು ರೈತರಿಂದ ಭತ್ತವನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ತಹಶೀಲ್ದಾರರು, ಉಪವಿಭಾಗಾಧಿಕಾರಿ, ಜಂಟಿ ನಿರ್ದೇಶಕರು (ಆಹಾರ), ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು. ಅಥವಾ ದೂರವಾಣಿ ಸಂಖ್ಯೆ -08192-296770 ಗೆ ಕರೆಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243