Connect with us

ಭಾವ ಭೈರಾಗಿ

ಕವಿತೆ | ಸ್ವತ್ತು ಈ ಹೊತ್ತು

Published

on

  • ಗಂಗಾಧರ ಬಿ ಎಲ್ ನಿಟ್ಟೂರ್

 

ಗತ್ತೋ ಗತ್ತು ಕೊಡಲು ಇ ಸ್ವತ್ತು
ಹೋದಂತೆ ಆಡುವರು ತಮ್ಮಪ್ಪನ ಸ್ವತ್ತು
ದುಡ್ಡು ಕೀಳಲು ನಾನಾ ಮಸಲತ್ತು.

ಕಾಡಿದೆ ಮನುಕುಲಕೆ ಮಾಯಾವಿ ವಿಪತ್ತು
ದುಡಿದವರ ಬಾಯಿಗಿಲ್ಲ ಕೈಗೆ ಬಂದ ತುತ್ತು
ಕುಳಿತಿಹನು ಶ್ರಮಿಕ ಕೈ ಹೊತ್ತು
ನೆತ್ತಿ ಉರಿ ಆಡಳಿತಕ್ಕೇನು ಗೊತ್ತು ?

ವೃಥಾ ಒಡ್ಡಿದರೆ ಆಪತ್ತು ನೌಕರಿಗೆ ಕುತ್ತು
ರೊಚ್ಚಿಗೆಬ್ಬಿಸಲು ಗೂಸಾ ಗ್ಯಾರೆಂಟಿ ಬಿತ್ತು
ರುಚಿಸಬೇಕೇ ನಿಷ್ಠೆಯ ತಾಕತ್ತು !

ಮಧ್ಯ ಪ್ರವೇಶಿಸಲಿ ಇಲಾಖೆ ಎಚ್ಚೆತ್ತು
ತೋರಲಿ ಕಾಳಜಿಯ ಕಸರತ್ತು
ನಾಯಕರ ಕಳಕಳಿಗೆ ತುರ್ತು ಈ ಹೊತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಕವಿತೆ | ಇಷ್ಟಂತೂ ಹೇಳಬಲ್ಲೆ..!

Published

on

  • ರಂಗಮ್ಮ ಹೊದೇಕಲ್, ತುಮಕೂರು

ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!

ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!

ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!

ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!

ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!

ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!

ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!

ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!

ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!

ನಾವು ಈ ನೆಲದ ಮಕ್ಕಳು
ಬೆಂಕಿಯೂ‌.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!! (ರಂಗಮ್ಮ ಹೊದೇಕಲ್, ತುಮಕೂರು)

ಕವಯಿತ್ರಿ : ರಂಗಮ್ಮ ಹೊದೇಕಲ್, ತುಮಕೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಚಳಿಗಾಲದ ಎರಡು ಜೀವರಸಗಳು

Published

on

  • ಜಿ. ದೇವೂ ಮಾಕೊಂಡ

ಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.

ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!

ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.

ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?

ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?

ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)

ಕವಿ: ಜಿ.ದೇವೂ ಮಾಕೊಂಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ನಟಿಸುತ್ತೇನೆ ಈ ಚಿತ್ರಶಾಲೆಯಲ್ಲಿ

Published

on

  • ಉದಯ್ ಕುಮಾ‌ರ್. ಎಂ, ಬಸವನತ್ತೂರು-ಕೊಡಗು

ದುಗುಡದ ದನಿಗಳೆಲ್ಲ
ಹುದುಗಿ ಹೋಗಲಿ
ನನ್ನೊಳಗೆ
ದುಃಖದ ನದಿಗಳೆಲ್ಲ
ಹಾದು ಹೋಗಲಿ..
ನಾನು ಕೂಡ ನಿನ್ನಂತೆ
ನಗೆಯ ನಟಿಸುತ್ತೇನೆ..
ನಿರಾಕಾರ ಕ್ಯಾನ್ವಾಸಿನ ಮೇಲೆ
ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ
ಒಮ್ಮೊಮ್ಮೆ ಬೇಡದ್ದೂ..
ಯಾರ್ಯಾರದ್ದೊ ಇಷ್ಟಾನಿಷ್ಟದಂತೆ!

ಗತದ ಘೋರ ಪಾತಕವನ್ನು
ತರಚು ಗಾಯವೆಂದು ಕರೆದು,
ಹೋದಲ್ಲಿ, ಬಂದಲ್ಲಿ
ಅದನ್ನೇ ಜಪಿಸಿ ತಳವೂರುತ್ತೇನೆ…
ಹುಸಿ ನೆಮ್ಮದಿಯ ನಿಟ್ಟುಸಿರ
ಹೊರಸೂಸಿ..

ಅತ್ಯಾಸೆಯ ರೆಕ್ಕೆಗಳ
ಮುರಿದುಕೊಳ್ಳುತ್ತೇನೆ
ದಿಗಂತದೆಡೆಗೆ ಹಾರುವ
ಕನಸುಗಳ ಸುಟ್ಟು,
ಅದರ ಬೂದಿಯನ್ನೆ
ವಿಭೂತಿಯಾಗಿ ಬಳಿದು,
ವೈರಾಗ್ಯದ
ಮಾತುಗಳನುದುರಿಸುತ್ತಾ..

ಸುತ್ತಲಿನ ಸತ್ತ ಮೆದುಳುಗಳೊಳಗೆ ನಿರಾಕಾರವಾದವುಗಳೆನೇನೋ ಮೊಳೆತು,
ಬೇರು ಬಿಟ್ಟು, ಆಳಕ್ಕಿಳಿದು
ಕೈಕೊಡಲಿಗಳಾಗಿ
ಕತ್ತು ಕತ್ತರಿಸುವ ಫರ್ಮಾನು
ಹೊರಡಿಸುವಾಗಲೂ
ನಿಶ್ಚಿಂತೆಯ ನಟಿಸುತ್ತೇನೆ!

ಮಹನೀಯನ ಚಿತ್ರಗಳು
ಬೇಕಾದಂತೆ ಬರೆಯಲ್ಪಡುವ,
ಬಿಕರಿಯಾಗುವ, ಚಿತ್ರಶಾಲೆಯಲ್ಲಿ;
ಜೀ..ಹುಜೂರ್..ಉಸುರುತ್ತಾ,
ನಿಂತ ಮೂಢರ ಗುಂಪುಗಳೊಳಗೆ
ಕಾಲ ಸವೆಸುತ್ತೇನೆ. (ಕವಿ:ಉದಯ್ ಕುಮಾ‌ರ್. ಎಂ, ಬಸವನತ್ತೂರು-ಕೊಡಗು)

ಉದಯ್ ಕುಮಾ‌ರ್. ಎಂ, ಬಸವನತ್ತೂರು-ಕೊಡಗು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending

Shares
FacebookWhatsAppXSMSRedditPinterestSumoMe