Connect with us

ದಿನದ ಸುದ್ದಿ

ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ನೈತಿಕತೆ ಇಲ್ಲ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರ ಸರ್ಕಾರ. ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ. ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ಯಾವ ನೈತಿಕತೆಯು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ ಹೋಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಚ್ಚಾ ತೈಲದ ಬೆಲೆಯ ಮೇಲೆ ನಿಗದಿಯಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಒಂದು ಬ್ಯಾರಲ್ ಕಚ್ಚಾತೈಲಕ್ಕೆ 120 ಡಾಲರ್ ಇತ್ತು, ಈಗ 65 ಡಾಲರ್ ಗೆ ಇಳಿದಿದೆ. ಅಂದು ಗ್ಯಾಸ್ ಸಿಲಿಂಡರ್ ಬೆಲೆ 400 ರೂ. ಇತ್ತು, ಇಂದು 800 ರೂ. ಮೀರಿದೆ. ಪೆಟ್ರೋಲ್ – ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವ ಬಗ್ಗೆ ಜನರು ಪ್ರಶ್ನೆ ಕೇಳಬೇಕಿದೆ.

ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಆರೋಪ ಅವರಿಗೇ ನಾಚಿಕೆಗೇಡಿನದು. ಬಿಜೆಪಿಯವರ ಕಾಲದಲ್ಲಿ ಅನುದಾನವಿಲ್ಲದಿದ್ದರೂ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಈಗ ನಮಗೆ ಪಾಠ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಮ್ಮ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್ ನ ಪ್ರಮಾಣ ಸುಮಾರು 38 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ. ಇದು ಸರ್ಕಾರವೊಂದರ ಆರ್ಥಿಕ ದಿವಾಳಿತನವೇ? ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 53,11,000 ಕೋಟಿ ಸಾಲವಿತ್ತು. ಆದರೆ ಈಗ 200 ಲಕ್ಷ ಕೋಟಿಗೂ ಹೆಚ್ಚಾಗಿದೆ. ದೇಶದ ಸಾಲ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಅಲ್ವಾ?

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಅಸಮರ್ಥರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದಾಗ ಬಿಜೆಪಿಯವರ ವಿರುದ್ಧವೇ ಹಲವು ಹೇಳಿಕೆಗಳನ್ನು ನೀಡಿದ್ದರು. ಜಾತಿಗಣತಿ ಜಾರಿಗೆ ತರಬೇಕೆಂಬುದು ಕಾಂಗ್ರೆಸ್ ನ ಭರವಸೆಯಾಗಿದೆ. ಒಂದು ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುವುದು ಸರ್ಕಾರವಾಗಿ ಅವಶ್ಯಕ. ಸ್ವಾತಂತ್ರ್ಯ ನಂತರ ಜಾತಿಗಣತಿ ನಡೆದಿಲ್ಲ, ಹಲವು ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲಿ ಈ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದ್ದರಿಂದ ಜಾತಿಗಣತಿ ಮಾಡಬೇಕಾದ ಅನಿವಾರ್ಯತೆಯಿತ್ತು.

ಜಾತಿಗಣತಿಯನ್ನು ಸಮರ್ಪಕವಾಗಿ ನಡೆಸಲಾಗಿಲ್ಲ ಎಂಬ ಬಿಜೆಪಿ ಆರೋಪ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಿಂದ ಕೂಡಿದೆ. ಸಮೀಕ್ಷೆಯನ್ನು ಶೇ. 95 ರಷ್ಟು ನಿಖರವಾಗಿ ನಡೆಸಲಾಗಿದೆ. ಶೇ. 98 ರಷ್ಟು ನಿಖರವಾಗಿ ಗ್ರಾಮಾಂತರ ಹಾಗೂ ಶೇ.96 ರಷ್ಟು ನಿಖರವಾಗಿ ನಗರ ಪ್ರದೇಶಗಳಲ್ಲಿ ನಡೆಸಲಾಗಿದೆ. 1,01,60,000 ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು, ಸುಮಾರು 1,36,000 ಜನ ಶಿಕ್ಷಕರಿದ್ದರು. ಶಿಕ್ಷಕರಲ್ಲಿ ಹೆಚ್ಚಿನವರು ಸಾಮಾನ್ಯ ವರ್ಗದವರೇ ಆಗಿದ್ದು, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ಜಾತಿಗಣತಿಯ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರವಷ್ಟೇ ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯ.

ಒಳಮೀಸಲಾತಿ ಜಾರಿಗೆ ತರಲು ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗ ರಚಿಸಿ, ಎರಡು ತಿಂಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕ, ಎಸ್.ಸಿ ಗಳು ಸೇರಿದಂತೆ 102 ಜಾತಿಗಳಿವೆ. ಇವರಲ್ಲಿ ಯಾರು ಯಾವ ಜಾತಿಗೆ ಸೇರಿದ್ದಾರೆಂಬ ಬಗ್ಗೆ ಸ್ಪಷ್ಟತೆ ಸಿಗಬೇಕೆಂಬ ಕಾರಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ.

ನಮ್ಮ ಸರ್ಕಾರ ನವದೆಹಲಿಯಲ್ಲಿ ಕರ್ನಾಟಕ ಭವನವನ್ನು ನಿರ್ಮಿಸಿದೆ. ಅದೇ ರೀತಿ ಮಹಾರಾಷ್ಟ್ರ ಸರ್ಕಾರದವರು ಬೆಳಗಾವಿಯಲ್ಲಿ ಭವನವನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆ. ಆದರೂ ಮಹಾರಾಷ್ಟ್ರದವರು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ “ಕುಕಿಂಗ್ ವಿಥೌಟ್ ಫೈರ್” ಎಂಬ ಬೆಂಕಿ ರಹಿತ ಆಹಾರ ತಯಾರಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹಲವಾರು ತಂಡಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ಆಹಾರ ಮೇಳವೂ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರು ಕಾರಟ್ ಹಲ್ವಾ, ಫ್ರೂಟ್ ಸಲಾಡ್, ಚುರಿ ಮುರಿ, ಮೊಸರು ಅವಲಕ್ಕಿ, ವಿವಿಧ ರುಚಿಯ ಜ್ಯೂಸ್‌ಗಳು, ಕೊಕೊನೆಟ್ ಬರ್ಫಿ, ಕುಕುಂಬರ್ ಬೋಟ್, ಟೊಮೇಟೊ ಚಾಟ್, ಆಪಲ್ ಪೇಡ ಮತ್ತು ಅವಲಕ್ಕಿ ಚಿತ್ರಾನ್ನ ಸೇರಿದಂತೆ ಹಲವಾರು ಪೌಷ್ಟಿಕ ಹಾಗೂ ರುಚಿಕರ ಆಹಾರಗಳನ್ನು ತಯಾರಿಸಿ ಪ್ರದರ್ಶನೆ ಮತ್ತು ಮಾರಾಟ ಮಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡು ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.

ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.

ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಹಿರಿಯ ಕ್ರಿಕೆಟ್ ಪಟು ಎನ್ಆರ್‌ಎಚ್ ರಮೇಶ್ ನಿಧನ

Published

on

ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್‌ಎಚ್‌ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ನಾಯಕನಾಗಿದ್ದ ಎನ್.ಆರ್‌.ಎಚ್‌.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್‌, 2ನೇ ಮೇನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್‌ಎಚ್‌ ರಮೇಶ ನಿಧನಕ್ಕೆ ಎಫ್‌ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್‌ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್‌ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending