Connect with us

ದಿನದ ಸುದ್ದಿ

ಪಠ್ಯ ಪುಸ್ತಕ ವಿವಾದ | ಮನುವಾದಿ ವಿಕೃತ ರೋಗಿಷ್ಠರಿಗೆ ಮಾತ್ರ ಬಾಬಾಸಾಹೇಬರು ಕನಸಿನಲ್ಲೂ ದಿಗಿಲು ಬೀಳಿಸುತ್ತಾರೆ : ಸಿದ್ದರಾಮಯ್ಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ನಾಡಿನ ಜನತೆಯ ಆಕ್ರೋಶದ ಬಳಿಕ ಬಹಳ ತಡವಾಗಿಯಾದರೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದೀರಿ. ಆದರೆ, ಈ ಸಮಿತಿ ಪಠ್ಯದೊಳಗೆ ತುರುಕಿರುವ ಸಂವಿಧಾನ ವಿರೋಧಿ ಸಂಗತಿಗಳನ್ನು ಹಾಗೇ ಉಳಿಸಿಕೊಂಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಟೀಕಿಸಿದ್ದಾರೆ.

ಜನರ ವಿವೇಕವನ್ನು ಶತಮಾನಗಳಿಂದ ತಿದ್ದುತ್ತಾ ಬಂದಿರುವ ಚಿಂತಕರ ಜೀವಪರ ವಿಚಾರಗಳಿದ್ದ ಪಠ್ಯಗಳಲ್ಲಿನ ವಾಕ್ಯ, ಪದ, ಪ್ಯಾರಾಗಳನ್ನು ತೆಗೆದುಹಾಕಿ, ಉಳಿದವಕ್ಕೆ ಕತ್ತರಿ ಹಾಕಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುವ ಪ್ರತಿಗಾಮಿ ಹಾಗೂ ಜಾತಿ ಶ್ರೇಷ್ಠತೆಯ ವ್ಯಸನದ ಸಂಗತಿಗಳನ್ನು ಪಠ್ಯದೊಳಗೆ ಉಳಿಸಿಕೊಳ್ಳುವ ಸರ್ಕಾರದ ಹುನ್ನಾರ ಹಾಗೂ ಪ್ರಧಾನವಾಗಿ ಒಂದು ಜಾತಿಯವರ ಬರಹಗಳನ್ನು, ವಿಚಾರಗಳನ್ನು ನಾಡಿನ ಮೇಲೆ ಹೇರಲು ಹೊರಟಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ನಾಡಿನ ಅನೇಕ ಚಿಂತಕರು ಪ್ರತಿಭಟಿಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆಗೆ ಅಗತ್ಯವಾದ ಬೌದ್ಧಿಕ ತಿಳಿವಳಿಕೆ ಮತ್ತು ಅರ್ಹತೆಗಳಿಲ್ಲದ, ಸಾಮಾಜಿಕ ತಾಣಗಳಲ್ಲಿ ಶೂದ್ರ-ದಲಿತ ಪರಂಪರೆ ಮತ್ತು ಸಂಸ್ಕೃತಿ ಬಗೆಗೆ ವಿಕೃತಿ ಕಾರಿಕೊಳ್ಳುವುದನ್ನೇ ಪಾಂಡಿತ್ಯ ಎಂದುಕೊಂಡಿರುವ ಹಾಗೂ ಮಹಿಳೆಯರ ಬಗ್ಗೆ ಕನಿಷ್ಠ ಗೌರವವೂ ಇಲ್ಲದಂತೆ ಬಹಿರಂಗವಾಗಿ ಪೋಸ್ಟ್ಗಳನ್ನು ಹಾಕಿ ಅಸಹ್ಯವಾಗಿ ಆಚರಿಸುತ್ತಿದ್ದ ವ್ಯಕ್ತಿಯನ್ನು ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ದ್ರೋಹ ಎಸಗಿದ್ದು ಸರ್ಕಾರ ಮಾಡಿರುವ ಗಂಭೀರ ಅಪರಾಧ ಎಂದಿದ್ದಾರೆ.

ಸರ್ಕಾರದ ಈ ಅಪರಾಧಕ್ಕಾಗಿ ನಾಡಿನ ಪ್ರಮುಖ ಮಠಾಧೀಶರು, ಚಿಂತಕರು ಆಕ್ರೋಶ ಹೊರ ಹಾಕಿದ್ದಾರೆ. ನಾಡಿನ ಸಾಂಸ್ಕೃತಿಕ ಜಗತ್ತು ವ್ಯಾಪಕ ಪ್ರತಿರೋಧ ವ್ಯಕ್ತಪಡಿಸಿದೆ. ಪಠ್ಯಗಳಲ್ಲಿ ಬಸವಣ್ಣ, ನಾರಾಯಣಗುರು, ಅಂಬೇಡ್ಕರ್, ಕುವೆಂಪು, ಸ್ವಾಮಿ ವಿವೇಕಾನಂದ, ಸಾವಿತ್ರಿಬಾಯಿ ಫುಲೆ, ರಾಣಿ ಅಬ್ಬಕ್ಕ ಮುಂತಾದ ಈ ನೆಲದ ನಿಜವಾದ ಜ್ಞಾನ ಪರಂಪರೆ ಮತ್ತು ಅಧ್ಯಾತ್ಮ ಪರಂಪರೆಯ ಹಲವು ಮಹಾತ್ಮರ ಕುರಿತಾದ ಪಠ್ಯಗಳನ್ನು ತೆಗೆದು ಹಾಕಿರುವುದಕ್ಕೆ ಅಥವಾ ಉಳಿಸಿಕೊಂಡಿರುವ ಪಠ್ಯಗಳಲ್ಲಿನ ಸಂವಿಧಾನದ ಆಶಯಗಳನ್ನು ತೆಗೆದಿರುವುದಕ್ಕೆ ಇದುವರೆಗೂ ಸರ್ಕಾರ ಕ್ಷಮೆ ಕೇಳಿಲ್ಲ ಮತ್ತು ಸಂವಿಧಾನದ ಆಶಯಗಳನ್ನಎಂದುತ್ತಿ ಹಿಡಿಯುತ್ತೇವೆ ಎನ್ನುವ ಭರವಸೆಯನ್ನೂ ನೀಡಿಲ್ಲ.

ಬಸವಣ್ಣನವರ ಕುರಿತಂತೆ ತಿರುಚಿದ ಸಂಗತಿಗಳನ್ನು ಮಕ್ಕಳಿಗೆ ಬೋಧಿಸಲು ಹೊರಟಿದ್ದಾರೆ ಎಂದು ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟದವರು ನಿಮ್ಮ ಗಮನಕ್ಕೆ ತಂದರು. ಬಳಿಕ, ಬಸವಣ್ಣನವರ ಪಠ್ಯವನ್ನು ತಿರುಚಿ, ಶರಣ ಸಂಸ್ಕೃತಿ ಪರಂಪರೆಗೆ ವಿರುದ್ಧವಾದ ಅಂಶಗಳನ್ನು ಕಪಟತನದಿಂದ ಪಠ್ಯದಲ್ಲಿ ಸೇರಿಸಿದ್ದನ್ನು ಪರಿಷ್ಕರಿಸಲು ಸರ್ಕಾರ ಒಪ್ಪಿಕೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಆದರೆ ಈ ಪರಿಷ್ಕರಣೆಯನ್ನು ಯಾರಿಂದ ಮಾಡಿಸುತ್ತೀರಿ? ಬಸವಣ್ಣನವರಿಗೆ ಬಗೆದಿರುವ ದ್ರೋಹದಂತೆಯೇ ಇನ್ನಿತರೆ ಪಾಠಗಳಲ್ಲಿ ಮಾಡಿರುವ ಅನಿಷ್ಠಗಳನ್ನು ಅಳಿಸುವ ಬಗ್ಗೆ ಸರ್ಕಾರದ ನಿಲುವು ಏನು ಎಂಬುದರ ಕುರಿತು ಸರ್ಕಾರ ಏನನ್ನೂ ಹೇಳಿಲ್ಲ. ಹೀಗಾಗಿ ಪಠ್ಯ ಪರಿಷ್ಕರಣಾ ಸಮಿತಿಯ ಆಯ್ಕೆಯಿಂದ ಅದನ್ನು ವಿಸರ್ಜಿಸುವವರೆಗೂ ಸರ್ಕಾರ ಮೇಲಿಂದ ಮೇಲೆ ಅಪರಾಧ ಮಾಡುತ್ತಲೇ ಇದೆ.

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಎನ್ನುವ ಸಾಲಿನಿಂದ “ಸಂವಿಧಾನ ಶಿಲ್ಪಿ” ಎನ್ನುವ ಪದಕ್ಕೆ ಕತ್ತರಿ ಹಾಕಲಾಗಿದೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಇಡಿ ವಿಶ್ವವೇ ಒಪ್ಪಿಕೊಂಡಿದೆ. ಆದರೆ, ಮನುವಾದಿ ವಿಕೃತ ರೋಗಿಷ್ಠರಿಗೆ ಮಾತ್ರ ಬಾಬಾಸಾಹೇಬರು ಕನಸಿನಲ್ಲೂ ದಿಗಿಲು ಬೀಳಿಸುತ್ತಾರೆ. ನಿಮ್ಮ ಸರ್ಕಾರಕ್ಕೆ ಇದನ್ನು ಕತ್ತರಿಸಿ ಹಾಕುವ ರೋಗ ಬಂದಿದೆ. ಜತೆಗೆ ಕನ್ನಡ ರಾಜ್ಯೋತ್ಸವದ ಕುರಿತ ಪಠ್ಯವನ್ನೂ ಕಿತ್ತುಹಾಕಿ ಬಿಜೆಪಿ ನಾಡದ್ರೋಹಿ ಪರಂಪರೆಯನ್ನು ಮುಂದುವರೆಸಿದೆ. ಇಂಥಾ ಅಸಹ್ಯದ ನೂರಾರು ಅಧ್ವಾನಗಳನ್ನು ಪಠ್ಯ ಪರಿಷ್ಕರಣ ಸಮಿತಿ ಮಾಡಿದೆ.

ದೇವನೂರು ಮಹದೇವ, ಮೂಡ್ನಾಕೂಡು ಚಿನ್ನಸ್ವಾಮಿಯವರಂತಹ ಹಿರಿಯ ಬರಹಗಾರರು ತಮ್ಮ ತಕರಾರುಗಳನ್ನು ವ್ಯಕ್ತಪಡಿಸಿದಾಗ ಆ ತಕರಾರುಗಳನ್ನು ಕೇಳಿಸಿಕೊಳ್ಳುವ ಸೌಜನ್ಯವೂ ಇಲ್ಲದಂತೆ ಸರ್ಕಾರ ಮತ್ತು ಪಠ್ಯ ಪುಸ್ತಕ ಸಮಿತಿ ವಿಕೃತಿ ಮೆರೆದಿದೆ. ನಾಡಿನ ಹಿರಿಯ ಮಠಾಧೀಶರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದಾಗ ಅವರುಗಳ ಸಾತ್ವಿಕ ಸಿಟ್ಟನ್ನೂ ಲೇವಡಿ ಮಾಡುವ ರೀತಿಯಲ್ಲಿ ಸಚಿವರು ಮತ್ತು ಪಕ್ಷದ ಮುಖಂಡರಿಂದ ರಾಜಕೀಯ ಹೇಳಿಕೆ ಕೊಡಿಸಲಾಗಿದೆ. ಮಠಾಧೀಶರನ್ನು ಕಾಂಗ್ರೆಸ್ ವಕ್ತಾರರು ಎನ್ನುವ ಅರ್ಥ ಬರುವಂತೆ ಸಚಿವರುಗಳಿಂದ ಪರೋಕ್ಷ ಹೇಳಿಕೆ ಕೊಡಿಸಿ ಮಠ ಪರಂಪರೆಗೆ ಅವಮಾನ ಎಸಗಿದಂತೆ ಸರ್ಕಾರ ವರ್ತಿಸಿದೆ.

ಪಠ್ಯ ಪರಿಷ್ಕರಣೆಗೆ ಸಂವಿಧಾನದಲ್ಲಿ ನಂಬಿಕೆಯೇ ಇಲ್ಲದ ಮತ್ತು ಈ ನಾಡಿನ ಜನ ಸಂಸ್ಕೃತಿ ಬಗ್ಗೆ ಕನಿಷ್ಠ ಗೌರವ ಇಲ್ಲದವರನ್ನೇ ಹುಡುಕಿ ಸಮಿತಿಯನ್ನು ರಚಿಸಿದ್ದು ಮತ್ತು ನಾಡಿನ ಪ್ರಜ್ಞಾವಂತ ಸಮುದಾಯದ ಆಗ್ರಹಕ್ಕೂ ಲೆಕ್ಕಿಸದೆ ಈ ಸಮಿತಿಯ ಎಲ್ಲಾ ನಿಯಮಬಾಹಿರ ಮತ್ತು ನಾಡದ್ರೋಹಿ ವಿಚಾರಗಳನ್ನು ಪಠ್ಯಗಳಲ್ಲಿ ಉಳಿಸಿಕೊಂಡು ಕೇವಲ ಸಮಿತಿಯನ್ನು ವಿಸರ್ಜಿಸಿರುವುದನ್ನು ನೋಡಿದರೆ ಇದೆಲ್ಲವೂ ಪೂರ್ವಯೋಜಿತ ಷಡ್ಯಂತ್ರದಂತೆ ಕಾಣುತ್ತಿದೆ.

ನಮ್ಮ ನಾಡಗೀತೆಯು ಸರ್ಕಾರದ ಅಧಿಕೃತ ಗುರುತು. ನಾಡಿನ ಸಾರ್ವಭೌಮತೆಯ ಸಂಕೇತ. ಇಂತಹ ಗುರುತರವಾದ ಸಂಗತಿಗೆ ಅವಮಾನ ಮಾಡಿರುವ ಚಕ್ರತೀರ್ಥನನ್ನು ಸರ್ಕಾರ ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದ್ದು ಅಕ್ಷಮ್ಯ. ಈತನ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎನ್ನುವ ನಾಡಿನ ಜನತೆಯ, ಲೇಖಕ-ಬರಹಗಾರರ ಮತ್ತು ಸ್ವಾಮೀಜಿಗಳ ಆಗ್ರಹವನ್ನು ಸರ್ಕಾರ ತಕ್ಷಣ ಪಾಲಿಸಬೇಕು ಎಂದು ಒತ್ತಾಯಿಸುತ್ತೇನೆ.

ಆದ್ದರಿಂದ ಈ ಕೂಡಲೇ ವಿಸರ್ಜನೆಗೊಂಡಿರುವ ಸಮಿತಿ ರೂಪಿಸಿರುವ ಪಠ್ಯ ಪುಸ್ತಕಗಳನ್ನು ತಡೆ ಹಿಡಿಯಬೇಕು. ಈ ಸಮಿತಿಯು ತೂರಿಸಿರುವ ವಾಸ್ತವಕ್ಕೆ ದೂರವಾದ ಸಂಗತಿಗಳನ್ನು ಮತ್ತು ತಿರುಚಿರುವ ವಿಷಯಗಳ ಬಗ್ಗೆ ಉನ್ನತ ಮಟ್ಟದ ಸಮಿತಿಯಿಂದ ವರದಿ ತರಿಸಿಕೊಳ್ಳಬೇಕು. ಈಗಾಗಲೇ ಶಾಲೆಗಳು ಆರಂಭಗೊಂಡಿರುವುದರಿಂದ ಮಕ್ಕಳಿಗೆ ತೊಂದರೆ ಆಗದಂತೆ ಹಿಂದಿನ ಬರಗೂರು ಸಮಿತಿಯ ಪಠ್ಯಗಳನ್ನೇ ಈ ಸಾಲಿಗೂ ಮಕ್ಕಳಿಗೆ ವಿತರಿಸಬೇಕು. ನಿಜವಾದ ಅರ್ಹತೆ ಇರುವ ಶಿಕ್ಷಣ ತಜ್ಞರ ಸಮಿತಿ ಮೂಲಕ ಪರಿಷ್ಕರಣಾ ಸಮಿತಿ ಮಾಡಿರುವ ಅದ್ವಾನಗಳನ್ನು ಕೂಡಲೇ ಸರಿಪಡಿಸಬೇಕು ಹಾಗೂ ನಾಡಿನ ಸಂಸ್ಕೃತಿ, ಪರಂಪರೆ, ಚರಿತ್ರೆ, ಸಂವಿಧಾನದ ಆಶಯಗಳ ಬಗ್ಗೆ ಗೌರವ ಇರುವವರನ್ನು ಸಮಿತಿಗಳಿಗೆ ನೇಮಿಸಬೇಕು. ಇಷ್ಟೆಲ್ಲಾ ಯಡವಟ್ಟುಗಳಿಗೆ ಕಾರಣರಾದ ಶಿಕ್ಷಣ ಸಚಿವ ನಾಗೇಶ್ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ದಿನದ ಸುದ್ದಿ

ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಇನ್ಮುಂದೆ ಮತ್ತಷ್ಟು ಸುಲಭ: ‘ಸಕಾಲ’ ಸೇವೆಗೆ ಭೌತಿಕ ಆರ್‌ಟಿಐ ಅರ್ಜಿಗಳ ಸೇರ್ಪಡೆ, ಗ್ರಾಮ ಒನ್‌ನಲ್ಲೂ ಲಭ್ಯ

Published

on

ಸುದ್ದಿದಿನ,​ಬೆಂಗಳೂರು: ನಾಗರಿಕರಿಗೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಇನ್ನಷ್ಟು ಸುಲಭವಾಗಿ ಬಳಸಲು ಹಾಗೂ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರವು ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಎರಡು ಪ್ರಮುಖ ಹಾಗೂ ನೂತನ ನಿರ್ಧಾರಗಳನ್ನು ಕೈಗೊಂಡಿದೆ.

ಭೌತಿಕ ಆರ್‌ಟಿಐ ಅರ್ಜಿಗಳ ದಾಖಲಾತಿ ಈಗ ‘ಸಕಾಲ’ ಸೇವೆ

​ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ (ಕಾಗದದ ರೂಪದ) ಆರ್‌ಟಿಐ ಅರ್ಜಿಗಳನ್ನು ಸ್ವೀಕರಿಸಿದ ಸಾರ್ವಜನಿಕ ಪ್ರಾಧಿಕಾರವು 2 ದಿನಗಳ ಒಳಗಾಗಿ ಆರ್‌ಟಿಐ ಆನ್‌ಲೈನ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.

​ಇದನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ರ ಅಡಿಯಲ್ಲಿ ಖಾತ್ರಿ ಸೇವೆಯಾಗಿ ಅಧಿಸೂಚಿಸಲಾಗಿದೆ. ​ಇದರಿಂದ ಪ್ರತಿಯೊಬ್ಬ ಅರ್ಜಿದಾರರಿಗೂ ಆನ್‌ಲೈನ್ ನೋಂದಣಿ ಸಂಖ್ಯೆ ದೊರೆಯಲಿದ್ದು, ಅರ್ಜಿಯ ಸ್ಥಿತಿಗತಿಯನ್ನು (Status) ಯಾವಾಗ ಬೇಕಾದರೂ ಪರಿಶೀಲಿಸಬಹುದು.

​ಅರ್ಜಿಗಳು ಕಳೆದುಹೋಗುವ ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇರುವುದಿಲ್ಲ. ನಿಯಮಿತ ۲ ದಿನಗಳಲ್ಲಿ ಪೋರ್ಟಲ್‌ನಲ್ಲಿ ದಾಖಲಿಸದಿದ್ದರೆ ನಾಗರಿಕರು ಸಕಾಲ ಕಾಯ್ದೆಯಡಿ ಪರಿಹಾರ ವೆಚ್ಚ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಸಂಬಂಧಪಟ್ಟ ಅಧಿಕಾರಿಯೇ ಇದಕ್ಕೆ ಹೊಣೆಗಾರರಾಗುತ್ತಾರೆ.

ಎಲ್ಲಾ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಆರ್‌ಟಿಐ ಸೇವೆ ಲಭ್ಯ

​ಇಂಟರ್ನೆಟ್ ಅಥವಾ ಕಂಪ್ಯೂಟರ್ ಬಳಕೆ ತಿಳಿಯದ ಸಾರ್ವಜನಿಕರನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯದ ಎಲ್ಲಾ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಆರ್‌ಟಿಐ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ವಿಸ್ತರಿಸಲಾಗಿದೆ.

​ನಾಗರಿಕರು ತಮ್ಮ ಸಮೀಪದ ಕೇಂದ್ರಕ್ಕೆ ತೆರಳಿ ಸಿಬ್ಬಂದಿಯ ನೆರವಿನಿಂದ ಅರ್ಜಿ ಸಲ್ಲಿಸಬಹುದು.
​ನಿಗದಿತ ಆರ್‌ಟಿಐ ಶುಲ್ಕ ಮತ್ತು ಕೇಂದ್ರದ ನಾಮಮಾತ್ರ ಸೇವಾ ಶುಲ್ಕವನ್ನು ಪಾವತಿಸಿ, ಸ್ಥಳದಲ್ಲೇ ಆನ್‌ಲೈನ್ ಸ್ವೀಕೃತಿ (Acknowledgement) ಪಡೆಯಬಹುದು.

​ಗ್ರಾಮ ಪಂಚಾಯಿತಿ ಮಟ್ಟದ ‘ಗ್ರಾಮ ಒನ್’ ಕೇಂದ್ರಗಳ ಮೂಲಕ ಈಗ ಹಳ್ಳಿಯ ಪ್ರತಿಯೊಬ್ಬ ನಾಗರಿಕರಿಗೂ ಆನ್‌ಲೈನ್ ಆರ್‌ಟಿಐ ಸೌಲಭ್ಯ ತಲುಪಿದೆ.

ಪ್ರಮುಖ ಪ್ರಯೋಜನಗಳು

​ಏಕರೂಪದ ವೇದಿಕೆ: ಭೌತಿಕ, ಆನ್‌ಲೈನ್ ಅಥವಾ ಸೇವಾ ಕೇಂದ್ರಗಳ ಮೂಲಕ ಬರುವ ಎಲ್ಲಾ ಅರ್ಜಿಗಳು ಒಂದೇ ವೇದಿಕೆಯಡಿ ಬರಲಿವೆ. ​ಪಾರದರ್ಶಕತೆ: ಆರ್‌ಟಿಐ ಕಾಯ್ದೆ 2005ರ ಕಾಲಮಿತಿಗಳ ಪಾಲನೆಯನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು.

ಇದರಿಂದ ಮಾಹಿತಿ ಅಧಿಕಾರಿಗಳಿಂದಾಗುವ ವಿಳಂಬವನ್ನು ಶೀಘ್ರವಾಗಿ ಗುರುತಿಸಬಹುದು.
ನಾಗರಿಕರಿಗೆ ತಮ್ಮ ಅರ್ಜಿಗಳ ವಿಶ್ವಾಸಾರ್ಹ ದಾಖಲೆ ಲಭ್ಯವಾಗುತ್ತದೆ.

​ಸಾರ್ವಜನಿಕರು ನೇರವಾಗಿ ಆನ್‌ಲೈನ್‌ನಲ್ಲಾಗಲಿ ಅಥವಾ ತಮ್ಮ ಸಮೀಪದ ಸೇವಾ ಕೇಂದ್ರಗಳ (ಬೆಂಗಳೂರು ಒನ್/ಕರ್ನಾಟಕ ಒನ್/ಗ್ರಾಮ ಒನ್) ಮೂಲಕವಾಗಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ​ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆ‌ಆರ್.ಐ.ಡಿ.ಎಲ್  ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಮಾಯಕೊಂಡ  ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್‌ಲೈನ್ ಕೌನ್ಸಿಲಿಂಗ್‌ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್‌ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.

ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.

ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending