ದಿನದ ಸುದ್ದಿ
ಮತದಾರರ ಪಟ್ಟಿಯಲ್ಲಿ ಆಧಾರ್ ನಮೂದು ಪರೀಕ್ಷಿಸಿಕೊಳ್ಳಿ : ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
ಸುದ್ದಿದಿನ,ದಾವಣಗೆರೆ : ಭಾರತ ಚುನಾವಣಾ ಆಯೋಗದ ( Election commission) ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಆಧಾರ್ ಸಂಖ್ಯೆಯನ್ನು ( Adhar card number) ನೀಡಿ, ಮತದಾರರ ಪಟ್ಟಿಯಲ್ಲಿ ನಮೂದಿಸಿರುವುದನ್ನು ದೃಢೀಕರಿಸಿಕೊಳ್ಳಲು ಮುಂದಾಗಬೇಕು. ಈ ಪ್ರಕ್ರಿಯೆ ಯಶಸ್ವಿಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ( shivananda kapashi) ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯಲ್ಲಿ ಮತದಾರರ ದೃಢೀಕರಣ, ಆಧಾರ್ ಜೋಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಏರ್ಪಡಿಸಲಾದ ರಾಜಕೀಯ ಪಕ್ಷಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಮತ್ತು ಮತದಾರರ ನೊಂದಣಿ ನಿಯಮಗಳು 1960 ರ ಪ್ರಕಾರ ಮತದಾರರ ನೋಂದಣಿಯ ನಮೂನೆಗಳಲ್ಲಿ ಪ್ರಸ್ತುತ ಬಹಳಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಲ್ಲಿ ನಮೂನೆ 6-ಬಿ ಅನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ನಮೂದುಗಳನ್ನು ದೃಢೀಕರಿಸಲು ಸಂಬಂಧಪಟ್ಟ ಮತದಾರರಿಂದ ಆಧಾರ್ ಸಂಖ್ಯೆ ಪಡೆಯಲು ಈ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕವೂ ಆಧಾರ್ ಜೋಡಣೆಗೆ ಅವಕಾಶ ಕಲ್ಪಿಸಲಾಗಿದ್ದು. ಆಫ್‍ಲೈನ್ ನಮೂನೆ 6-ಬಿ ಯನ್ನು ಸಂಬಂಧಪಟ್ಟ ಮತದಾರರ ನೋಂದಾಣಾಧಿಕಾರಿ, ತಹಶೀಲ್ದಾರರ ಕಛೇರಿ ಅಥವಾ ಬೂತ್ ಮಟ್ಟದ ಅಧಿಕಾರಿಗಳಿಂದ ಪಡೆದು ಸಲ್ಲಿಸಬಹುದು.
ಆನ್‍ಲೈನ್ ಮೂಲಕವೂ ಅವಕಾಶವಿದ್ದು, ಮತದಾರರು ಆಧಾರ್ ಸಂಖ್ಯೆಯನ್ನು ಎನ್‍ವಿಎಸ್‍ಪಿ ನ್ಯಾಷನಲ್ ವೋಟರ್ಸ ಸರ್ವಿಸ, ವಿಹೆಚ್‍ಎ ವೋಟರ್ ಹೆಲ್ಪ್‍ಲೈನ್ ಆ್ಯಪ್ ಹಾಗೂ ಗರುಡ ಆ್ಯಪ್‍ಗಳ ಮೂಲಕ ಅಥವಾ ವೋಟರ್ ಪೋರ್ಟಲ್ ಮುಖಾಂತರ ಮೊಬೈಲ್ ಮೂಲಕವೇ ಸ್ವಯಂ ದೃಢೀಕರಣದೊಂದಿಗೆ ಸಲ್ಲಿಸಬಹುದು.
ಮತದಾರರು ಸ್ವಯಂ ದೃಢೀಕರಣ ಬಯಸದಿದ್ದರೆ ಅಥವಾ ಆನ್‍ಲೈನ್ ಸ್ವಯಂ ದೃಢೀಕರಣ ವಿಫಲವಾದಲ್ಲಿ, ಮತದಾರರು ದೃಢೀಕರಣವಿಲ್ಲದೆ ಆಫ್‍ಲೈನ್‍ನಲ್ಲೆ ಅಗತ್ಯ ಲಗತ್ತುಗಳೊಂದಿಗೆ ನಮೂನೆ 6-ಬಿ ನಲ್ಲಿ ಸಲ್ಲಿಸಬಹುದಾಗಿದೆ. ಈ ಕುರಿತಂತೆ ಜಿಲ್ಲೆಯಲ್ಲಿ ಬರುವ ಆಗಸ್ಟ್ 04 ರಿಂದ ವಿಶೇಷ ಜನಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದ್ದು, ಬೂತ್ ಮಟ್ಟದಲ್ಲಿ, ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೂ ವ್ಯಾಪಕ ಪ್ರಚಾರ ನೀಡಲಾಗುವುದು.
ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬಿಎಲ್‍ಎ ರೊಂದಿಗೆ, ಬೂತ್ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು, ಈ ಪ್ರಕ್ರಿಯೆಯ ಯಶಸ್ವಿಗೆ ಸಹಕಾರ ನೀಡಬೇಕು. ಅರ್ಹ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡುವ ಮತ್ತು ಅನರ್ಹ ಮತದಾರರನ್ನು ತೆಗೆದುಹಾಕುವ ಹಾಗೂ ಮತದಾರರಿಂದ ಸ್ವಯಂ ಪ್ರೇರಿತ ಆಧಾರ್ ಸಂಗ್ರಹಣೆ ಕಾರ್ಯದಲ್ಲಿ ಸಹಕರಿಸುವುದರೊಂದಿಗೆ ರಾಜಕೀಯ ಪಕ್ಷಗಳು ಭಾರತ ಚುನಾವಣಾ ಆಯೋಗದ ಶುದ್ಧ, ನಿಖರ ಮತ್ತು ದೋಷಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ | ಬಿಜೆಪಿ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ; ಅವರನ್ನು ಮನೆಗೆ ಕಳುಹಿಸುವುದು ಐದು ನಿಮಿಷದ ಕೆಲಸ : ಕೆ.ಎಸ್ ಈಶ್ವರಪ್ಪ
ಜಿಲ್ಲೆಯಲ್ಲಿ ಸದ್ಯ 1692 ಮತಗಟ್ಟೆಗಳಿದ್ದು ಪುರುಷರು 7,04,685 ಮಹಿಳೆಯರು 6,98,986 ಇತರೆ 122 ಸೇರಿದಂತೆ ಒಟ್ಟು 14,03,793 ಲಕ್ಷ ಮತದಾರರಿದ್ದಾರೆ. ಆಧಾರ್ ಸಂಖ್ಯೆ ನೀಡಿ ಮತದಾರರ ಪಟ್ಟಿ ದೃಢೀಕರಣ ಪ್ರಕ್ರಿಯೆ ಆಗಸ್ಟ್ 04 ರಿಂದ ಜಾರಿಗೆ ಬರಲಿದ್ದು, ಇದು ನಿರಂತರವಾಗಿ ಜಾರಿಯಲ್ಲಿರುತ್ತದೆ. ಮತದಾರರ ನೊಂದಣಿಗೆ ಜನವರಿ 01, ಏಪ್ರಿಲ್ 01, ಜುಲೈ 01 ಹಾಗೂ ಅಕ್ಟೋಬರ್ 01 ರಂತೆ ಒಟ್ಟು ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿದ್ದು, ಮತದಾರರ ಪಟ್ಟಿಗೆ ಅರ್ಹರು ತಮ್ಮ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ನಮೂನೆ 07 ರಲ್ಲಿ ಹೆಸರು ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ. ನಮೂನೆ 08 ರಲ್ಲಿ ಮತದಾರರ ನಿವಾಸ ಬದಲಾವಣೆ, ವಿವಿಧ ತಿದ್ದುಪಡಿಗಳು, ಮತದಾರರ ಗುರುತಿನ ಚೀಟಿ ಬದಲಾವಣೆ ಹಾಗೂ ವಿಕಲಚೇತನ ವ್ಯಕ್ತಿ ಗುರುತಿಸುವುದಕ್ಕಾಗಿ ಬಳಸಲಾಗುವುದು.
ಚುನಾವಣಾ ಕ್ಷೇತ್ರದೊಳಗೆ ಒಂದು ಭಾಗ ಸಂಖ್ಯೆಯಿಂದ ಮತ್ತೋಂದು ಭಾಗಸಂಖ್ಯೆಗೆ ವರ್ಗಾವಣೆ ಹೊಂದಲು ಹಾಗೂ ಒಂದು ಕ್ಷೇತ್ರದಿಂದ ಮತ್ತೋಂದು ಕ್ಷೇತ್ರಕ್ಕೆ ಬದಲಾವಣೆ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಗಳ ರ್ಯಾಷಲೈಜೇಷನ್ ಅಥವಾ ಮರು ವ್ಯವಸ್ಥೆ ಕಾರ್ಯ ಆಗಸ್ಟ್ 04 ರಿಂದ ಅಕ್ಟೋಬರ್ 24 ರವರೆಗೆ ನಡೆಯಲಿದ್ದು, ಮತದಾರರ ಕರಡು ಪಟ್ಟಿ ನವೆಂಬರ್ 09 ರಂದು ಪ್ರಕಟವಾಗಲಿದೆ.
ಆಗಸ್ಟ್ 08 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಡಿಸೆಂಬರ್ 26 ರ ಒಳಗೆ ವಿಲೇವಾರಿ ಮಾಡಲಾಗುವುದು, ಮತದಾರರ ಅಂತಿಮ ಪಟ್ಟಿ 2023 ರ ಜನವರಿ 05 ಕ್ಕೆ ಪ್ರಕಟಗೊಳ್ಳಲಿದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
2017 ರಿಂದ 2023 ಅವಧಿಯ ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಪ್ರಕಟ ; ಇಲ್ಲಿದೆ ಸಂಪೂರ್ಣ ಮಾಹಿತಿ
ಸುದ್ದಿದಿನ,ಬೆಂಗಳೂರು:ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಪ್ರಶಸ್ತಿಗಳನ್ನು ಸರ್ಕಾರವು 2001ನೇ ಸಾಲಿನಿಂದ ಸ್ಥಾಪಿಸಿದ್ದು 2016 ರವರೆಗೆ ನಾಡಿನ 32 ಜನ ಹಿರಿಯ ಪತ್ರಕರ್ತರು ಈ ಎರಡೂ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿದ್ದ 2017ರಿಂದ 2023ರ ವರೆಗಿನ ಏಳು ವರ್ಷಗಳ ಅವಧಿಯ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಹಾಗೂ ಕೆ.ಶಿವಕುಮಾರ್ ಅವರಿದ್ದ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ, ಅಭಿನಂದನಾ ಪತ್ರ ಒಳಗೊಂಡಿರುತ್ತದೆ.
2017ರಿಂದ 2023ರವರೆಗಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರ ವಿವರ
ವಿಜಯಲಕ್ಷ್ಮಿ ಶಿಬರೂರು (2017): ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಶಿಬರೂರು ಗ್ರಾಮದವರಾದ ವಿಜಯಲಕ್ಷ್ಮಿ ಅವರು, ಕಳೆದ ಸುಮಾರು 25 ವರ್ಷಗಳಿಂದ ನಾಡಿನ ವಿವಿಧ ಮಾಧ್ಯಮಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಸಂರಕ್ಷಣೆ, ಅಪಾಯಕಾರಿ ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಅಪಾಯಗಳು ಮತ್ತಿತರ ಜಾಗೃತಿ ಮೂಡಿಸುವ ವರದಿಗಳನ್ನು ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಬಿತ್ತರಿಸಿದ್ದಾರೆ. ಪರಿಸರ ಜಾಗೃತಿಯ ವರದಿಗಳನ್ನು ಪ್ರಕಟಿಸಿದ್ದಾರೆ.
ಬಿ.ಎಂ.ಟಿ ರಾಜೀವ್ : (2018): ಮೂಲತ: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೆನವಾರ ಗ್ರಾಮದವರು, ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಾರತೀಯ ಅರಣ್ಯ ಸೇವೆಯಿಂದ 2006ರಲ್ಲಿ ನಿವೃತ್ತಿ ಹೊಂದಿದ್ದಾರೆ. 1985 ರಿಂದ ವನ್ಯಜೀವಿಗಳು, ಅರಣ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಲೇಖನ, ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಅರಣ್ಯ/ವನ್ಯಜೀವಿ/ಪರಿಸರದಿಂದ ಮನುಕುಲಕ್ಕಿರುವ ಅನುಕೂಲಗಳು, ಅವಶ್ಯಕತೆಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಭಾರತೀಯ ವನ್ಯಪ್ರಾಣಿಗಳ ಕೈಪಿಡಿ, ಪರಿಸರ ಮಾಲಿನ್ಯ ಮತ್ತು ವಾಯುಗುಣ ಬದಲಾವಣೆ ಕುರಿತು ಒಟ್ಟು 6 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ವಿನೋದಕುಮಾರ್ ಬಿ. ನಾಯ್ಕ: (2019) : ಮೂಲತ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗುಬ್ಬಿಹಳ್ಳಿ ಗ್ರಾಮದವರು. ಏಷಿಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯಲ್ಲಿ ವಿಶೇಷ ಯೋಜನೆಗಳ ವಿಭಾಗದ ಸಂಪಾದಕರಾಗಿರುವ ಇವರು ವಿವಿಧ ಮಾಧ್ಯಮಗಳಲ್ಲಿ ಸುಮಾರು 23 ವರ್ಷಗಳ ಕಾಲ ವನ್ಯಜೀವಿ ಹಾಗೂ ಪರಿಸರ ಕುರಿತು ಅನೇಕ ಪರಿಣಾಮಕಾರಿ ವರದಿಗಳನ್ನು ಮಾಡಿದ್ದಾರೆ. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾದೇಶಿಕ ಮಾಧ್ಯಮಗಳಲ್ಲಿ ಮೊದಲ ಬಾರಿಗೆ ವನ್ಯಜೀವಿ ಸಂರಕ್ಷಣಾ ಅಭಿಯಾನಗಳನ್ನು ಹಮ್ಮಿಕೊಂಡು ಕಾಡಂಚಿನ ಗ್ರಾಮಗಳಲ್ಲಿ ಮಾನವ –ವನ್ಯಜೀವಿ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ‘ಜಂಗಲ್ ಡೈರಿ’ ಕೃತಿ ಪ್ರಕಟಿಸಿದ್ದಾರೆ.
ಮಾಲತೇಶ ಅಂಗೂರ (2020): ಹಾವೇರಿ ಜಿಲ್ಲೆಯ ಮಾಲತೇಶ ಗದಿಗೆಪ್ಪ ಅಂಗೂರ ಅವರು ಸುಮಾರು 34 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಕಳೆದ 18 ವರ್ಷಗಳಿಂದ ಕೌರವ ಕನ್ನಡ ದಿನಪತ್ರಿಕೆಯ ಮುಖ್ಯ ವರದಿಗಾರರಾಗಿ ಪರಿಸರಕ್ಕೆ ಸಂಬಂಧಿಸಿದಂತೆ ವನ್ಯಜೀವಿಗಳು, ಕೆರೆಕಟ್ಟೆಗಳು, ಪ್ರಾಣಿಪಕ್ಷಿಗಳು, ಕೀಟಗಳು, ಸಸ್ಯಗಳು, ನಿಸರ್ಗ, ಗುಡ್ಡ ಗಹ್ವರಗಳು, ಅತಿವೃಷ್ಠಿ ಅನಾವೃಷ್ಠಿ ಸೇರಿದಂತೆ ವಿವಿಧ ಪರಿಸರ ಜಾಗೃತಿಯ ವರದಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು-ಮೇಡು’ ಕೃತಿ ಪ್ರಕಟವಾಗಿದೆ.
ಸುಧೀರ್ ಶೆಟ್ಟಿ (2021): ಉಡುಪಿ ಜಿಲ್ಲೆಯ ಪಾದೆಬೆಟ್ಟು ಗ್ರಾಮದವರಾದ ಇವರು ಮುಂಬೈನಲ್ಲಿ ಫೋಟೋ ಜರ್ನಲಿಸಂ ಪದವಿ ಪಡೆದಿದ್ದಾರೆ. ಅರಣ್ಯ, ವನ್ಯಜೀವಿ, ನದಿ ಮತ್ತು ನೀರಿನ ಮೂಲಗಳ ಸಂರಕ್ಷಣೆ, ಬಂಡೀಪುರ ಅರಣ್ಯದ ಪ್ರಾಣಿಗಳ ಪ್ರಾಣ ರಕ್ಷಣೆ, ಬೆಂಗಳೂರಿನ ಕೆರೆಗಳ ನೀರು ತಮಿಳುನಾಡಿಗೆ ಹರಿದುಹೋಗಿ ಅಲ್ಲಿ ಸಂಸ್ಕರಣೆಗೊಂಡು ಕೃಷಿಗೆ ಬಳಕೆಯಾಗುತ್ತಿರುವ ಬಗ್ಗೆ ಸೆರೆಹಿಡಿದ ಛಾಯಾಚಿತ್ರಗಳು ರಾಜ್ಯದಲ್ಲಿ ಚರ್ಚೆ ಉಂಟುಮಾಡಿದ್ದವು. ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಸಂರಕ್ಷಣೆ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಕಪ್ಪತ್ತಗುಡ್ಡ ಸಂರಕ್ಷಣೆಗೆ ಗದುಗಿನ ಡಾ:ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಎಸ್.ಆರ್.ಹಿರೇಮಠ ಅವರ ಹೋರಾಟದ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದರು. ಮಹದಾಯಿ ತಿರುವು ಯೋಜನೆ, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ, ಸಂಡೂರಿನ ಅಕ್ರಮ ಗಣಿಗಾರಿಕೆ ಮತ್ತಿತರ ವಿಷಯಗಳ ಕುರಿತು ಇವರ ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ.
ಮಲ್ಲಿಕಾರ್ಜುನ ಹೊಸಪಾಳ್ಯ (2022) : ಮಲ್ಲಿಕಾರ್ಜುನ ಹೊಸಪಾಳ್ಯ ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಪಾಳ್ಯ ಗ್ರಾಮದವರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ. ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ಜಲನಿಧಿಗಳಾದ ತಲಪರಿಗೆ ಬಗ್ಗೆ ಅಧ್ಯಯನ, ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ವಿವಿಧ ಪತ್ರಿಕೆಗಳಲ್ಲಿ ಹವ್ಯಾಸಿ ಬರಹಗಾರರಾಗಿ ಕೃಷಿ ವಿಚಾರಗಳ ಬರವಣಿಗೆ ಮಾಡುತ್ತಿದ್ದಾರೆ. ನೆಟ್ಟಿರಾಗಿ, ತಲಪರಿಗೆ, ನಶಿಸುತ್ತಿರುವ ನೀರಿನ ಜ್ಞಾನ,ಕರ್ನಾಟಕದ ಕೃಷಿ ಆಚರಣೆಗಳು ಸೇರಿ ಒಟ್ಟು 14 ಕೃತಿಗಳು ಪ್ರಕಟವಾಗಿವೆ.
ಆರ್.ಮಂಜುನಾಥ್ (ಕೆರೆ ಮಂಜು) (2023) : ಬೆಂಗಳೂರಿನವರಾಗಿರುವ ಆರ್.ಮಂಜುನಾಥ್ ಅವರು,1995ರಿಂದ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಕೆರೆಗಳ ಬಗ್ಗೆ ‘ನಮ್ಮೂರ್ ಕೆರೆ’ಎಂಬ ಲೇಖನ ಮಾಲಿಕೆ (2008). ಅರ್ಕಾವತಿ ನದಿ ಪುನಶ್ಚೇತನ, ಧಾರವಾಡ ಕೆರೆಗಳ ಅಭಿವೃದ್ಧಿ, ಬೆಂಗಳೂರಿನಲ್ಲಿರುವ ರಾಜಕಾಲುವೆಗಳ ಒತ್ತುವರಿಯಿಂದ ಮಳೆಗಾಲದಲ್ಲಿ ನೀರು ಬಡಾವಣೆಗಳಿಗೆ ಹರಿಯುತ್ತಿದೆ. ಎಲ್ಲೆಲ್ಲಿ ಎಷ್ಟೆಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂಬುದನ್ನು ನಕ್ಷೆ ಸಹಿತ ಮಾಹಿತಿಯ ಲೇಖನಗಳು ಸೇರಿ ಕೆರೆಗಳ ರಕ್ಷಣೆ ಬಗ್ಗೆ ಪರಿಣಾಮಕಾರಿ ಲೇಖನಗಳನ್ನು ಪ್ರಕಟಿಸಿದ್ದಾರೆ.
2017ರಿಂದ 2023 ರವರೆಗಿನಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರ ವಿವರ
ಚೀ.ಜ.ರಾಜೀವ್ (2017) :ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕು ಚೀರನಹಳ್ಳಿ ಗ್ರಾಮದವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. 1999ರಿಂದ 2001ರವರೆಗೆ ಉದಯವಾಣಿ ದಿನಪತ್ರಿಕೆಯಲ್ಲಿ, 2001 ರಿಂದ ಇಲ್ಲಿಯವರೆಗೆ ವಿಜಯ ಕರ್ನಾಟಕ ದಿನಪತ್ರಿಕೆಯ ಸುದ್ದಿ ಸಂಪಾದಕರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿ, ಶಿಕ್ಷಣ, ಪರಂಪರೆ, ಮತ್ತಿತರ ಕ್ಷೇತ್ರಗಳ ಸವಾಲುಗಳಿಗೆ ಕನ್ನಡಿ ಹಿಡಿಯುವ ಅಭ್ಯುದಯ ಪತ್ರಿಕೋದ್ಯಮಕ್ಕೆ ಉದಾಹರಣೆಯಾಗುವಂತಹ ವರದಿ ಅಂಕಣಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದಾರೆ.
ದೇವಯ್ಯ ಗುತ್ತೇದಾರ್ (2018): ಮೂಲತ: ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕು ಭೈರಾಮಡಗಿ ಗ್ರಾಮದವರು. 2004ರಿಂದ ಉಷಾಕಿರಣ, ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ವಿಜಯಕರ್ನಾಟಕ ದಿನಪತ್ರಿಕೆಯ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಮಾನವ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕದ ತಾಲ್ಲೂಕುಗಳ ಪರಿಸ್ಥಿತಿ, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಬಡತನ ನಿವಾರಣೆ, ಶಿಶುಮರಣ ತಡೆ ಸೇರಿದಂತೆ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕುರಿತ ಅನೇಕ ವಿಶ್ಲೇ಼ಷಣಾತ್ಮಕ ಲೇಖನಗಳು, ವರದಿಗಳನ್ನು ಪ್ರಕಟಿಸಿದ್ದಾರೆ.
ಗಿರೀಶ್ ಲಿಂಗಣ್ಣ (2019): ಬೆಂಗಳೂರಿನ ಗಿರೀಶ್ ಲಿಂಗಣ್ಣ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಬಾಹ್ಯಾಕಾಶ, ರಕ್ಷಣೆ, ಅಂತಾರಾಷ್ಟ್ರೀಯ ವ್ಯವಹಾರಗಳ ವಿಶ್ಲೇಷಕ. ಸಂಯುಕ್ತ ಕರ್ನಾಟಕ ,ಕನ್ನಡ ಪ್ರಭ, ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಗಳ ಜಾಲತಾಣಗಳ ಅಂಕಣಕಾರರಾಗಿದ್ದಾರೆ. ವಿಜಯ ಕರ್ನಾಟಕ, ಉದಯವಾಣಿ, ವಿಶ್ವವಾಣಿ, ಪತ್ರಿಕೆಗಳಲ್ಲಿ ಒನ್ ಇಂಡಿಯ ಜಾಲತಾಣದಲ್ಲಿ ನಿರಂತರ ಲೇಖನಗಳನ್ನು ಬರೆಯುತ್ತಿದ್ದಾರೆ. ವಿವಿಧ ರಾಷ್ಟ್ರೀಯ, ಅಂತಾರಾಷ್ಟ್ರೀಯ ಇಂಗ್ಲಿಷ್ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಪ್ರಚಲಿತ ವಿಚಾರಗಳ ಕುರಿತು ಸುವರ್ಣ ನ್ಯೂಸ್, ದೂರದರ್ಶನ, ಆಕಾಶವಾಣಿ, ಚಂದನ ವಾಹಿನಿಗಳಲ್ಲಿ ಪ್ಯಾನೆಲಿಸ್ಟ್ ಆಗಿ ಭಾಗಿ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳಲ್ಲಿ ಸಂವಾದ, ಚರ್ಚೆಗಳಲ್ಲಿ ಪ್ಯಾನೆಲಿಸ್ಟ್ ಆಗಿದ್ದಾರೆ.
ಯೋಗೇಶ್ ಎಂ.ಎನ್. (2020): ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಮಾರೇನಹಳ್ಳಿ ಗ್ರಾಮದವರು. ಕಳೆದ ಸುಮಾರು 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಪ್ರಜಾವಾಣಿ ದಿನಪತ್ರಿಕೆಯ ಚಿತ್ರದುರ್ಗ ಜಿಲ್ಲಾ ವರದಿಗಾರರಾಗಿದ್ದಾರೆ. ಭ್ರೂಣಹತ್ಯೆ ತಡೆ, ಉನ್ನತ ಶಿಕ್ಷಣ ಸೇರಿದಂತೆ ಅಭಿವೃದ್ಧಿ ವಿಷಯಗಳ ಕುರಿತು ಪರಿಣಾಮಕಾರಿ ವರದಿಗಳನ್ನು ಪ್ರಕಟ ಮಾಡಿದ್ದಾರೆ. ‘ಜೀವಸೆಲೆ ಕಾಮೇಗೌಡ’ ಕೃತಿಯು ಮಂಡ್ಯ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದೆ. ಸಕ್ಕರೆಯ ಅಕ್ಕರೆ, ವರ್ಣ ಕೃತಿಗಳು ಪ್ರಕಟವಾಗಿವೆ. ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ವಿವಿಧ ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ನೌಶಾದ್ ಬಿಜಾಪುರ (2021): ಮೂಲತ: ಧಾರವಾಡದವರು. ಪ್ರಸ್ತುತ ಬೆಳಗಾವಿಯಲ್ಲಿ ನೆಲೆಸಿದ್ದು, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾಗಿದ್ದಾರೆ. ಕಳೆದ 25 ವರ್ಷಕ್ಕೂ ಹೆಚ್ಚು ಕಾಲದಿಂದ ಡೆಕ್ಕನ್ ಕ್ರೋನಿಕಲ್, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಈಗ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯಲ್ಲಿ ಹಲವಾರು ಅಭಿವೃದ್ಧಿ ಮತ್ತು ಸಾಮಾಜಿಕ ಚಿಂತನೆಗಳಿಂದ ಕೂಡಿದ ಲೇಖನ ಹಾಗೂ ವರದಿಗಳನ್ನು ಪ್ರಕಟಿಸಿದ್ದಾರೆ.
ಸತೀಶ್ ಜಿ.ಟಿ (2022) : ಮೂಲತ: ಚಿತ್ರದುರ್ಗದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2004ರಿಂದ 2011ರವರೆಗೆ ವಿಜಯ ಟೈಮ್ಸ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2011 ರಿಂದ ಈವರೆಗೆ ದಿ ಹಿಂದೂ ದಿನಪತ್ರಿಕೆಯ ಹಾಸನ ವಿಭಾಗದ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಭಿವೃದ್ಧಿಯ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಅನೇಕ ವರದಿಗಳನ್ನು ಪ್ರಕಟಿಸಿದ್ದಾರೆ. ವಿನೋದ್ ಮೆಹ್ತಾ ಅವರ ಆತ್ಮಕಥೆ ‘ಲಖನೌ ಹುಡುಗ’ , ವಿನೋದ್ ಕಾಪ್ರಿ ಅವರ ‘ಮನೆ ಸೇರಲು 1232 ಕಿ.ಮೀ ಸಾಗಿದ ದೂರ’ , ನ್ಯಾಯಮೂರ್ತಿ ಕೆ.ಚಂದ್ರು ಅವರ ‘ನನ್ನ ದೂರು ಕೇಳಿ ಮಹಿಳೆಯರು ನ್ಯಾಯಾಲಯದ ಕದ ತಟ್ಟಿದಾಗ’ ಅಜಿತ್ ಪಿಳ್ಳೆ ಅವರ ‘ಇದು ಯಾವ ಸೀಮೆ ಚರಿತ್ರೆ’ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಎಸ್.ಗಿರೀಶ್ ಬಾಬು (2023): ಬೆಂಗಳೂರಿನವರಾದ ಎಸ್.ಗಿರೀಶ್ ಬಾಬು ಅವರು ಉದಯಟಿವಿ, ವಿಜಯಕರ್ನಾಟಕ , ಉದಯವಾಣಿ, ಮತ್ತಿತರ ಮಾಧ್ಯಮಗಳಲ್ಲಿ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಕೊಕಟನೂರು ಜಾತ್ರೆಯಲ್ಲಿ ಮುತ್ತುಕಟ್ಟುವ (ದೇವದಾಸಿ) ಪದ್ದತಿ ಬಗ್ಗೆ ಬರೆದ ವರದಿಯು ಈ ಸಾಮಾಜಿಕ ಅನಿಷ್ಠದ ನಿರ್ಮೂಲನೆಗೆ ನೆರವಾಯಿತು. ಶಿಕ್ಷಣ, ಆರೋಗ್ಯ, ಪರಿಸರ , ರಕ್ಷಣೆ, ವಿಜ್ಞಾನ, ತಂತ್ರಜ್ಞಾನ ಬೀಟ್ಗಳಲ್ಲಿ ನೂರಾರು ವರದಿಗಳನ್ನು ಪ್ರಕಟಿಸಿದ್ದಾರೆ. ಭಾರತೀಯ ರಕ್ಷಣಾ ಇಲಾಖೆಯು ಪತ್ರಕರ್ತರಿಗಾಗಿ ನಡೆಸುವ ಡಿಫೆನ್ಸ್ ಕರೆಸ್ಪಾಂಡೆನ್ಸ್ ಕೋರ್ಸ್ನಲ್ಲಿ ಭಾಗವಹಿಸಿ ಕಾರ್ಗಿಲ್, ಲೇಹ್ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಮಾಡಿರುತ್ತಾರೆ.
ಶೀಘ್ರದಲ್ಲಿಯೇ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರೈತರಿಗೆ ಉಚಿತ ವಿದ್ಯುತ್ ನೀಡಲು ರಾಜ್ಯಾದ್ಯಂತ ಸೋಲಾರ್ ಘಟಕಗಳ ಸ್ಥಾಪನೆ : ಸಚಿವ ಕೆ.ಜೆ.ಜಾರ್ಜ್
ಸುದ್ದಿದಿನ,ಚಿತ್ರದುರ್ಗ:ರೈತರಿಗೆ ಹಗಲು ಹೊತ್ತು ಏಳು ಘಂಟೆ ಉಚಿತ ಕರೆಂಟ್ ನೀಡಲು ರಾಜ್ಯಾದ್ಯಂತ ಸೋಲಾರ್ ಘಟಕಗಳಿಗೆ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನೀರಗುಂದ ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗಿರುವ ಸೋಲಾರ್ ಘಟಕದ ಕಾಮಗಾರಿ ಪರಿಶೀಲಿಸಿದ ಅವರು, ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂಬತ್ತು ಸೋಲಾರ್ ಘಟಕಗಳು ಸ್ಥಾಪನೆಯಾಗಲಿದ್ದು ಇದರಿಂದ ಅರವತ್ತೆರಡು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.
ಇಂಧನ ಇಲಾಖೆಯು ರಾಜ್ಯಾದ್ಯಂತ 154 ಸೋಲಾರ್ ಘಟಕಗಳನ್ನು ಸ್ಥಾಪಿಸಿ 1 ಸಾವಿರದ 81 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬನೆ ಸಾಧಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಇನ್ನೊಂದೆಡೆ ತುಮಕೂರಿನ ಸಿರಾ ತಾಲ್ಲೂಕಿನ ಚೆಂಗಾವರದಲ್ಲಿ ಪಿ.ಎಂ.ಕುಸುಮ್ ಯೋಜನೆಯಡಿ ನಿರ್ಮಿಸಿರುವ ಸೋಲಾರ್ ಪಾರ್ಕ್ ವೀಕ್ಷಿಸಿ ಮಾತನಾಡಿದ ಅವರು, ರಾಜ್ಯದಾದ್ಯಂತ ಸೋಲಾರ್ ಘಟಕಗಳನ್ನು ನಿರ್ಮಿಸಿ 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ 5 ದಿನಗಳ ವೃತ್ತಿ ನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶಿಬಿರದ ನಂತರ ತಿಂಗಳಲ್ಲಿ ಶಿಬಿರಾರ್ಥಿಗಳು ರಚಿಸಿದ ಆಯ್ಕೆಗೊಂಡ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಸ್ಪಷ್ಟವಾಗಿ ಕನ್ನಡ ಓದಲು, ಬರೆಯಲು ಬರುವ ಮತ್ತು ರಂಗಸಾಹಿತ್ಯ ಕುರಿತು ಪ್ರಾಥಮಿಕ ಜ್ಞಾನವುಳ್ಳ 18 ವರ್ಷ ಮೇಲ್ಪಟ್ಟವರು ಸ್ವ-ಪರಿಚಯದೊಂದಿಗೆ 20 ಜನವರಿ 2025 ರೊಳಗೆ ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಸೌಲಭ್ಯ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಮೊದಲನೇ ಮಹಡಿ, ಕೊಠಡಿ ಸಂ:38ಎ, ಜಿಲ್ಲಾಡಳಿತ ಭವನ, ಪಿ.ಬಿ.ರಸ್ತೆ ದಾವಣಗೆರೆ ದೂ.ಸಂ:08192-200635, 9341010712 ನ್ನು ಸಂಪರ್ಕಿಸಲು ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243