Connect with us

ಲೈಫ್ ಸ್ಟೈಲ್

ಕಾಯಕಯೋಗಿ ನುಲಿಯ ಚಂದಯ್ಯನವರ ಸ್ಮರಣೋತ್ಸವ

Published

on

ಕಾಯಕಯೋಗಿ ನುಲಿಯ ಚಂದಯ್ಯ
  • ಡಾ.ಗೀತಾಬಸವರಾಜು,ಉಪನ್ಯಾಸಕರು,ಎ.ವಿ.ಕೆ.ಕಾಲೇಜು, ದಾವಣಗೆರೆ

(ಕಾಯಕವನ್ನೇ ತನ್ನ ಉಸಿರಾಗಿಸಿಕೊಂಡು ಸಮಾಜಕ್ಕೆ ಕರ್ತವ್ಯ ಪ್ರಜ್ಞೆ ಸಾರಿ ಕಾಯಕ ದಾಸೋಹದ ಮೂಲಕ ಮನುಕುಲಕ್ಕೆ ಬೆಳಕು ನೀಡಿದ ಮಹಾ ಶಿವಶರಣ ನುಲಿಯ ಚಂದಯ್ಯನವರ ಸ್ಮರಣೋತ್ಸವ ಜೂನ್ 29 ರಂದು ನಡೆಯಲಿದೆ ತನ್ನಿಮಿತ್ತ ಈ ಲೇಖನ)

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ತವರೂರು. ಇಲ್ಲಿ ವಿವಿಧ ಧರ್ಮ , ಜಾತಿಯವರು ನೆಲೆಸಿದ್ದು, ಅನೇಕತೆಯಲ್ಲಿ ಏಕತೆಯನ್ನು ರೂಢಿಸಿಕೊಂಡು ಪ್ರೀತಿ, ದಯೆ, ಕರುಣೆ, ಸಹನೆ, ನಂಬಿಕೆ, ಭಾವೈಕ್ಯತೆ ಮುಂತಾದ ಮಾನವೀಯ ಸಂಬಂಧಗಳೊಂದಿಗೆ ಬದುಕುತ್ತಿದ್ದಾರೆ.

ಬಲ್ಲವನೆ ಬಲ್ಲ ಬೆಲ್ಲದ ಸವಿಯ ಎಂಬ ನುಡಿಯಂತೆ 12 ನೇ ಶತಮಾನ ಸರ್ವರಿಗೂ ಸಿಹಿಯನ್ನು ಉಣಬಡಿಸಿದ ಕಾಲ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸಿದವರು ವಚನಕಾರರು. ವಿಶ್ವಗುರು ಬಸವೇಶ್ವರರ ಅನುಭವ ಮಂಟಪದ ಅನೇಕ ಕಾಯಕ ಮಣಿಗಳಲ್ಲಿ ಚಂದಯ್ಯನವರ ಹೆಸರು ಸ್ಮರಣೀಯ.

ಆರ್.ನುಲೇನೂರು ವಚನಕಾರ ನುಲಿಯ ಚಂದಯ್ಯ ಲಿಂಗೈಕ್ಯರಾದ ಪುಣ್ಯಭೂಮಿ. ಶಿವಶರಣ ಚಂದಯ್ಯನವರು ಇಲ್ಲಿ ನೆಲೆಸಿದ್ದರಿಂದ ಮತ್ತು ಹಗ್ಗ ನುಲಿಯುವ (ಹೊಸೆಯುವ) ಕಾಯಕ ಮಾಡುತ್ತಿದ್ದುದರಿಂದ ನುಲಿಯಯ್ಯನೂರು, ನುಲಿಯನೂರು, ನುಲೇನೂರು ಎಂಬ ಹೆಸರು ಬಂದಿದೆ. ರಾಮಗಿರಿ ಸಮೀಪವಿರುವುದರಿಂದ ಆರ್ ನುಲೇನೂರು ಎಂದು ಕರೆಯಲಾಗುತ್ತದೆ. ಕಾಯಕವನ್ನೇ ತನ್ನ ಉಸಿರಾಗಿಸಿಕೊಂಡು ಸಮಾಜಕ್ಕೆ ಕರ್ತವ್ಯ ಪ್ರಜ್ಞೆ ಸಾರಿದ ಚಂದಯ್ಯನವರು ಕಾಯಕ ದಾಸೋಹದ ಮೂಲಕ ಮನುಕುಲಕ್ಕೆ ಬೆಳಕು ನೀಡಿದ ಮಹಾ ಶಿವಶರಣ.

ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುರುಹು ಹರಿವುದು
ಜಂಗಮವಾದರೂ ಕಾಯಕದಿಂದಲೇ ತನ್ನ ವೇಷದ ಪಾಶ ಹರಿವುದು

ಗುರುವಾದರೂ ಚರಸೇವೆಯ ಮಾಡಬೇಕು
ಲಿಂಗವಾದರೂ ಚರಸೇವೆಯ ಮಾಡಬೇಕು
ಜಂಗಮವಾದರೂ ಚರಸೇವೆಯ ಮಾಡಬೇಕು
ಇದು ಚಂದೇಶ್ವರ ಲಿಂಗದರಿವು ಕೇಳಾ ಪ್ರಭುವೇ”

ನುಲಿಯ ಚಂದಯ್ಯನವರ ಇದೊಂದು ವಚನ ಕಾಯಕದ ಮಹತ್ವವನ್ನು ತಿಳಿಸುತ್ತದೆ.

ವಿಜಯಪುರ ಜಿಲ್ಲೆಯ ಶಿವಣಗಿ ಎಂಬ ಗ್ರಾಮದಲ್ಲಿ ಜನಿಸಿದ ಚಂದಯ್ಯನವರು ಹೊಡಕೆ ಹುಲ್ಲನ್ನು ತಂದು ಹಗ್ಗ ಹೊಸೆಯುವ ಕಾಯಕವನ್ನು ನಡೆಸಿ ಅದರಿಂದ ಬಂದ ಹಣವನ್ನು ಗುರು – ಲಿಂಗ – ಜಂಗಮಕ್ಕೆ ಅರ್ಪಿಸುತ್ತಿದ್ದರು. ಕಾಯಕ ಭಾವ ಶುದ್ಧವಾಗಿರಬೇಕು. ಜಂಗಮ ದಾಸೋಹವು ನಿಜವಾದ ಶಿವಪೂಜೆ ಎನ್ನುವುದು ಅವರ ನಿಲುವಾಗಿತ್ತು.

ನುಲಿಯ ಚಂದಯ್ಯನವರ ಗದ್ದುಗೆ ಚಿತ್ರ

ಕಲ್ಯಾಣದಲ್ಲಿ ಕ್ರಾಂತಿಯಾದಾಗ ನುಲಿಯ ಚಂದಯ್ಯನವರು ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಕೆರೆ ಮೂಲಕ ದುಮ್ಮಿಗೆ ಬಂದು ನೆಲೆಸುತ್ತಾರೆ. ಅಲ್ಲಿನ ಪಾಳೆಗಾರ ದುಮ್ಮಣ್ಣನಾಯಕನ ಪರಿಚಯವಾಗುತ್ತದೆ. ನಾಯಕನ ರಾಣಿ ಪದ್ಮಾವತಿ ಚಂದಯ್ಯನ ವಿಚಾರಧಾರೆಗಳಿಗೆ ಮನ:ಪರಿವರ್ತಿತಳಾಗಿ ಲಿಂಗವಂತ ಧರ್ಮದ ದೀಕ್ಷೆಯನ್ನು ಪಡೆದು ಅರಮನೆಯಲ್ಲಿ ಆಶ್ರಯವನ್ನು ನೀಡುತ್ತಾಳೆ.

ಅರಮನೆಯ ವಾತಾವರಣ ಶರಣ ಸಂಸ್ಕೃತಿಗೆ ಹೊಂದಿಕೆಯಾಗದ ಕಾರಣ ಪದ್ಮಾವತಿಯು ತನ್ನ ತವರೂರಾದ ಆರ್.ನುಲೇನೂರಿಗೆ(ಪದ್ಮಾವತಿ ಪಟ್ಟಣ)ಆಹ್ವಾನಿಸುತ್ತಾಳೆ. ನಂತರ ಅಲ್ಲೊಂದು ಶಿಲಾಮಂಟಪ ನಿರ್ಮಿಸಿ ನಿತ್ಯಕಾಯಕ ದಾಸೋಹಕ್ಕೆ ಹಾಗೂ ಅನುಭಾವ ಗೋಷ್ಠಿ ನಡೆಸಲು ಅವಕಾಶ ಕಲ್ಪಿಸುತ್ತಾಳೆ. ಚಂದಯ್ಯನವರು ಬದುಕಿನ ಕೊನೆಯವರೆಗೆ ಇದೇ ಗ್ರಾಮದಲ್ಲಿ ನೆಲೆಸಿದ್ದು ತಮ್ಮ ಇಷ್ಟಲಿಂಗ ಚಂದೇಶ್ವರ ಲಿಂಗದಲ್ಲಿ ಒಂದಾದರು ಎಂದು ಪ್ರತೀತಿ ಇದೆ.

ಚಂದಯ್ಯನವರ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಒಮ್ಮೆ ಹೊಡಕೆ ಹುಲ್ಲು ಕೊಯ್ಯುವಾಗ ಚಂದಯ್ಯನವರ ಕೊರಳಲ್ಲಿದ್ದ ಇಷ್ಟಲಿಂಗವು ಜಾರಿ ನೀರಲ್ಲಿ ಬಿದ್ದಿತು. ಲಿಂಗವನ್ನು ಲೆಕ್ಕಿಸದೆ ಅವರು ಹಾಗೆ ಹೊರಟುಬಿಟ್ಟರು. ಲಿಂಗವು ತನ್ನನ್ನು ಸ್ವೀಕರಿಸಬೇಕೆಂದು ಅಂಗಲಾಚಿ ಕೇಳಿಕೊಂಡರೂ ಅದನ್ನು ಗಮನಿಸದೆ, ನನಗೆ ನಿನಗಿಂತ ಜಂಗಮಾರಾಧನೆ ಮುಖ್ಯ ಎಂದು ಹೇಳಿ ಕಾಯಕದಲ್ಲಿ ನಿರತರಾದರು. ಕೊನೆಗೆ ಮಡಿವಾಳ ಮಾಚಯ್ಯನವರ ಸಂಧಾನದಿಂದ ಲಿಂಗವನ್ನು ಸ್ವೀಕರಿಸಿದರು. ಇವರ ಕಾಯಕ ಪ್ರಜ್ಞೆ ಎಷ್ಟಿತ್ತು ಎಂಬುದಕ್ಕೆ ಈ ಘಟನೆ ನಿದರ್ಶನ.

ಒಮ್ಮೆ ಕೆರೆಯ ನೀರನ್ನು ಬಳಸುವ ವಿಷಯದಲ್ಲಿ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಚಂದಯ್ಯ ಕೆರೆಯ ದಡದ ಬಳಿ ಬೆತ್ತದಿಂದ ನೆಲ ಮುಟ್ಟಿದಾಗ ಬಾವಿ ಸೃಷ್ಠಿಯಾಗಿ ನೀರು ಉಕ್ಕಿತು. ಇದೇ ಬಾವಿಯ ನೀರನ್ನು ಪೂಜಾಕಾರ್ಯಗಳಿಗೆ ಬಳಸುತ್ತಿದ್ದರು. ಇಂದಿಗೂ ಕೆರೆಯ ಪಕ್ಕದಲ್ಲಿ ಈ ಬಾವಿಯಿದ್ದು ಚಂದಯ್ಯನ ಬಾವಿ ಎಂದೇ ಪ್ರಸಿದ್ದಿಯಾಗಿದೆ.

ಕಾಯಕವು ಅಂತರಂಗ ಬಹಿರಂಗ ಶುದ್ಧಿಗೆ ಸೋಪಾನ. ಕಾಯಕವು ನಮ್ಮ ನಿತ್ಯಬದುಕಿನಲ್ಲಿ ನಿತ್ಯ ಕಾಯದ ಮೂಲಕವಾಗಿ ನಡೆಯುವ ಧ್ಯಾನ. ಶರಣರ ಕಾಯಕದಲ್ಲಿ ಕೇವಲ ಧನಕ್ಕೆ ಪ್ರಾಶಸ್ತ್ಯವಿರದೆ ಅದರ ಸತ್ಪಾತ್ರತೆಗೆ ಪ್ರಾಶಸ್ತ್ಯವಿತ್ತು. ಕಾಯಕದ ಉದ್ದೇಶ ಗುರು-ಲಿಂಗ-ಜಂಗಮ ದಾಸೋಹಕ್ಕೆ ಆದರೆ ತ್ರಿವಿಧ ದಾಸೋಹಕ್ಕೆ ನೈವೇದ್ಯವಾಗಬಲ್ಲ ದ್ರವ್ಯ ಪದಾರ್ಥ ‘ಸತ್ಯ ಶುದ್ಧ ಕಾಯಕದ ‘ ಪ್ರತಿನಿತ್ಯದ ದ್ರವ್ಯವೇ ಆಗಿರಬೇಕು ಎಂಬ ನಿಲುವು ಚಂದಯ್ಯನವರದು. ಸತ್ಯ ಶುದ್ಧ ಕಾಯಕದಲ್ಲಿ ನಿರತರಾಗಿ ಸಾರ್ಥಕ ಬದುಕನ್ನು ನಡೆಸಿದ ಕಾಯಕಯೋಗಿ ಚಂದಯ್ಯನವರು ಲಿಂಗೈಕ್ಯರಾದ ಸ್ಥಳವನ್ನು 1956ರಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ವತಿಯಿಂದ 38 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲಾಗಿದೆ.

ಜೂನ್ 29 ರಂದು ಪೂಜ್ಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾಯಕಯೋಗಿ ಶರಣ ನುಲಿಯ ಚಂದಯ್ಯನವರ ಸ್ಮರಣೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಮಾಜದಲ್ಲಿದ್ದ ಅಂಧಕಾರ, ಮೂಢನಂಬಿಕೆ ಜಾತಿ ಬೇಧ ದೂರಮಾಡಿ ಸದ್ಬುದ್ಧಿ, ಸದಾಚಾರ, ಸಹಬಾಳ್ವೆ ಮುಂತಾದ ಮಾನವೀಯ ಗುಣಗಳನ್ನು ಬಿತ್ತಿ ಸಮಸಮಾಜ ನಿರ್ಮಿಸಿದ ಶರಣರ ದೃಷ್ಟಿಕೋನದಂತೆ ತಾಲೂಕು ಸಾಧು ವೀರಶೈವ ಸಂಘ(ರಿ) ಶ್ರೀ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಹೊಳಲ್ಕೆರೆ.

ಸಮಸ್ತ ಗ್ರಾಮಸ್ಥರು ಆರ್.ನುಲೇನೂರು ಇವರ ಸಂಯುಕ್ತಾಶ್ರಯದಲ್ಲಿ ವರ್ಗ, ಲಿಂಗಬೇಧವಿಲ್ಲದೆ ಚಂದಯ್ಯನವರ ಸ್ಮರಣೋತ್ಸವ ಮತ್ತು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಕಾಯಕ ಯೋಗಿಗೆ ಗೌರವ ಸಲ್ಲಿಸಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

Published

on

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ

Published

on

ಇಂದು ಅಸ್ತಮಾ ರೋಗದ ಬಗ್ಗೆ ಕೆಲವು ಮುಖ್ಯ ಮತ್ತು ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ.ಅಸ್ತಮಾ ಸಮಸ್ಯೆ ಒಮ್ಮೆ ಬಂತೆಂದರೆ, ಜೀವನಪರ್ಯಂತ ಇದರಿಂದ ಬಳಲಲೇಬೇಕು ಮತ್ತು ಇನ್ಹೇಲರ್ ಗಳನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಇದು ಅರ್ಧ ಸತ್ಯ; ಏಕೆಂದರೆ ನಾವು ಮನಸ್ಸು ಮಾಡಿದರೆ ಇದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿದೆ. ಯಾವ ಕಾರಣದಿಂದ ಅಸ್ತಮಾ ಸಮಸ್ಯೆ ಬಂದಿದ್ದರೂ ನಮ್ಮ ಜೀವನ ಶೈಲಿ ಮತ್ತು ದಿನಚರಿಯ ಕ್ರಿಯೆಗಳು ಸರಿಯಾಗಿದ್ದರೆ ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ. ಅತ್ಯುತ್ತಮ ಉದಾಹರಣೆ ಎಂದರೆ ಪ್ರಾಣಾಯಾಮ.

ಭಸ್ತ್ರಿಕಾ, ಕಪಾಲಭಾತಿ, ನಾಡಿಶೋಧನ, ಉಜ್ಜಾಯಿ, ಬಂಧಗಳಂತಹ ಪ್ರಾಣಾಯಾಮದ ಕ್ರಿಯೆಗಳನ್ನು ನಿತ್ಯವೂ ತಪ್ಪದೇ ಅಭ್ಯಾಸ ಮಾಡಿದರೆ ನಮ್ಮ ಶ್ವಾಸಾಂಗವ್ಯೂಹದ ಶಕ್ತಿ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ ಸುಲಭಕ್ಕೆ ಅಸ್ತಮಾ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಸುಲಭವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ ಅಸ್ತಮಾ ಖಾಯಿಲೆಯಲ್ಲಿ ಸೂಕ್ಷ್ಮ ಶ್ವಾಸನಾಳಗಳಲ್ಲಿ ಹೆಚ್ಚಾದ ಲೋಳೆಯ ಸ್ರವಿಸುವಿಕೆಯ ಕಾರಣ ನಾಳಗಳು ಕಿರಿದಾಗಿ ಉಸಿರಾಟಕ್ಕೆ ಕಷ್ಟವಾಗುತ್ತದೆ.

ಇದರಿಂದ ಹೃದಯ, ಶ್ವಾಸಕೋಶ, ಮೆದುಳು ಮತ್ತು ಇಡೀ ದೇಹಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ತಕ್ಷಣ ಸಮಸ್ಯೆ ಶಮನವಾಗಲು ಆಧುನಿಕ ವೈದ್ಯ ಪದ್ಧತಿಯಲ್ಲಿ ಹೇಳಿದ ಔಷಧಗಳನ್ನು ಅಥವಾ ಇನ್ಹೇಲರ್ ಗಳನ್ನು ಬಳಸುವುದು ಒಳ್ಳೆಯದೇ. ಆದರೆ ಶಾಶ್ವತ ಪರಿಹಾರಕ್ಕಾಗಿ ಭಾರತೀಯ ಚಿಕಿತ್ಸಾ ಪದ್ಧತಿಗಳು ವಿವರಿಸಿರುವ ಚಿಕಿತ್ಸೆಗಳ ಮೊರೆ ಹೋಗಲೇಬೇಕು.

ಆಸನ, ಪ್ರಾಣಾಯಾಮ, ಜಲನೇತಿ, ಸೂತ್ರನೇತಿಯಂತಹ ಕ್ರಿಯೆಗಳನ್ನು ನಿಯಮಿತವಾಗಿ ಅಭ್ಯಾಸದಲ್ಲಿ ಇಟ್ಟುಕೊಂಡರೆ ತುಂಬಾ ಸಹಾಯವಾಗುತ್ತದೆ. ಆಯುರ್ವೇದ ಹೇಳಿದ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಬಹಳ ದೊಡ್ಡ ಪ್ರಮಾಣದಲ್ಲಿ ಅಸ್ತಮಾ ಹತೋಟಿಗೆ ಬರುತ್ತದೆ ಮತ್ತು ಆನುವಂಶಿಕವಾಗಿ ಬರುವ ಸಾಧ್ಯತೆ ಇದ್ದರೂ ಅದನ್ನು ತಡೆಗಟ್ಟುತ್ತದೆ. ಅಪರೂಪಕ್ಕೆ ಮಾತ್ರ ಜೀರ್ಣಕ್ರಿಯೆಗೆ ಕಷ್ಟಕರವಾದ ಆಹಾರಗಳನ್ನು ಅಂದರೆ ಕರಿದ ಪದಾರ್ಥಗಳು ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕೇ ಹೊರತು ಸಾಮಾನ್ಯವಾಗಿ ನಿತ್ಯವೂ ಲಘು ಭೋಜನವನ್ನೇ ಮಾಡಬೇಕು.

ಇದರಿಂದ ನಮ್ಮ ಶ್ವಾಸಕೋಶದ ಸೂಕ್ಷ್ಮನಾಳಗಳಲ್ಲಿ ವ್ಯತಿರಿಕ್ತ ಬದಲಾವಣೆ ಆಗುವುದನ್ನು ತಡೆಯಬಹುದು. ಹಗಲುನಿದ್ದೆ ಮಾಡುವ ರೂಢಿಯಿದ್ದರೆ ಹಗಲುನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತಾ ಬಂದು ಪೂರ್ತಿಯಾಗಿ ಬಿಟ್ಟುಬಿಡಬೇಕು. ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು ಮತ್ತು ಸಾಧ್ಯವಾದಷ್ಟೂ ಬೇಗ ಮಾಡಬೇಕು. ರಾತ್ರಿಯ ಊಟದಲ್ಲಿ ಹಾಲು, ಮೊಸರು, ತುಪ್ಪ, ಕರಿದ ಪದಾರ್ಥಗಳು, ಮಾಂಸಾಹಾರಗಳನ್ನು ತ್ಯಜಿಸಲೇಬೇಕು. ರಾತ್ರಿ ಊಟದ ನಂತರ ಕನಿಷ್ಟ ಒಂದೂವರೆ ಘಂಟೆ ಬಿಟ್ಟು ಮಲಗಬೇಕು.

ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸ್ಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಉಗಿ ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಉಗಿ ಕೊಟ್ಟರೆ ಹೆಚ್ಚು ಸಹಾಯವಾಗುತ್ತದೆ. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡುಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಒಂದು ವೀಳ್ಯದೆಲೆಯಲ್ಲಿ ಐದು ಎಲೆ ತುಳಸಿ, ಒಂದು ಲವಂಗ, ಒಂದು ಚೂರು ಜೇಷ್ಠಮಧು ಹಾಕಿ ಪ್ರತಿ ಬಾರಿ ಊಟವಾದ ನಂತರ ಒಂದು ವಾರದ ಕಾಲ ಸೇವಿಸಬಹುದು. ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಸಮಪ್ರಮಾಣದ ಮಿಶ್ರಣವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ; ಅಸ್ತಮಾ ಕೂಡಾ ಹತೋಟಿಯಲ್ಲಿರುತ್ತದೆ.

ದೀರ್ಘಾವಧಿಯಿಂದ ಇರುವ ಅಸ್ತಮಾ ರೋಗಿಗಳಿಗೆ ಕೆಲವೊಮ್ಮೆ ಒಳರೋಗಿಯಾಗಿದ್ದು ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗಳನ್ನು ಪಡೆದು ಗುಣಪಡಿಸಿಕೊಳ್ಳಬೇಕಾಗುತ್ತದೆ. ಅಸ್ತಮಾ ಸಂಪೂರ್ಣವಾಗಿ ಗುಣವಾದ ಮೇಲೆಯೂ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ ಕೆಲವು ಕಾಲದ ನಂತರ ಮರುಕಳಿಸುವ ಸಾಧ್ಯತೆ ಇರುತ್ತದೆ. ಅಸ್ತಮಾ ತೀವ್ರಾವಸ್ಥೆಯಲ್ಲಿದ್ದಾಗ ಸಾಧ್ಯವಾದಷ್ಟೂ ಬೇಗ ಆಸ್ಪತ್ರೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆ ತೆಗೆದುಕೂಳ್ಳಬೇಕು. ಉಸಿರಾಟದ ತೊಂದರೆಗಳೆಲ್ಲವೂ ಅಸ್ತಮಾ ಅಲ್ಲ. ಹಾಗಾಗಿ ವೈದ್ಯರ ಭೇಟಿ ಮಾಡದೇ ಅಸ್ತಮಾ ಎಂದು ತೀರ್ಮಾನಿಸಿ ಮನೆಮದ್ದುಗಳನ್ನಾಗಲೀ ಔಷಧ ಸೇವನೆಯನ್ನಾಗಲೀ ಮಾಡಬಾರದು.(ಬರಹ-ಡಾ ವೆಂಕಟ್ರಮಣ ಹೆಗಡೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಸಕ್ಕರೆ ಕಾಯಿಲೆ ಸುತ್ತ ಮುತ್ತ..! ; ಹುಷಾರಾಗಿರಿ..!

Published

on

ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಕಾಯಿಲೆ ಇರುವ ನಂಬರ್ ಒನ್ ದೇಶ ಚೀನಾ, ಭಾರತ ಎರಡನೇ ಸ್ಥಾನದಲ್ಲಿದೆ. 2025 ರಲ್ಲಿ ಭಾರತವೇ ನಂಬರ್ ಒನ್ ಆಗಲಿದೆ ಎಂದು ವೈದ್ಯಕೀಯ ಜಗತ್ತು ಹೇಳುತ್ತಿದೆ. ನಮ್ಮ ದೇಶದಲ್ಲಿ ಸಾಕಷ್ಟು ಆಸ್ಪತ್ರೆಗಳಿವೆ. ಸಾಕಷ್ಟು ವೈದ್ಯರಿದ್ದಾರೆ. ಪ್ರತಿಯೊಂದು ಕಾಯಿಲೆಗೂ ಉತ್ತಮವಾದ ಔಷಧಿಗಳೂ ಇವೆ.

ಒಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರ ಅತ್ಯಂತ ಮುಂದುವರೆದಿದೆ. ಆದರೂ ಬಿಪಿ ಶುಗರ್ ನಿಯಂತ್ರಣ ಏಕೆ ಸಾಧ್ಯವಾಗುತ್ತಿಲ್ಲ. ಇಂದಿಗೂ ಅನೇಕ ವೈದ್ಯರು ಬಿಪಿ ಶುಗರ್ ಕಾಯಿಲೆಗೆ ಔಷಧಿ ಜೀವನ ಪರ್ಯಂತರ ತೆಗೆದುಕೊಳ್ಳಲೇಬೇಕೆಂದು ಏಕೆ ಹೇಳುತ್ತಿದ್ದಾರೆ? ಈ ಬಗ್ಗೆ ಆಳವಾಗಿ ನೋಡಿದಾಗ ಪ್ರಮುಖವಾಗಿ ಇಂದಿನ ಅಧಿಕ ಜನರು ಅಧಿಕ ಆಹಾರ ಸೇವಿಸುತ್ತಿದ್ದಾರೆ. ಪದೇ ಪದೇ ಆಹಾರ ಸೇವಿಸುತ್ತಿದ್ದಾರೆ. ಪ್ರತಿದಿನ ಮೂರು ಹೊತ್ತು ಊಟ ಮಾಡಲೇಬೇಕು. ಹಸಿವೆ ಇರಲಿ ಇಲ್ಲದಿರಲಿ ಆಹಾರ ಸೇವಿಸುತ್ತಿದ್ದಾರೆ. ಅದರಲ್ಲೂ ಪ್ರಕೃತಿಯಿಂದ ಗಿಡ ಮರಗಳಿಂದ ಬರುವ ಆಹಾರವನ್ನು ನೇರವಾಗಿ ಸೇವಿಸುತ್ತಿಲ್ಲ. ಪ್ರತಿಯೊಂದು ಆಹಾರವೂ ಪ್ರೊಸೆಸ್ಡ್ ಪ್ಯಾಕ್ಡ್ ಆಗಿ ಬರುತ್ತಿದೆ. ಅದರಲ್ಲೂ ಎಣ್ಣೆಯಲ್ಲಿ ಕರಿದ, ಮಸಾಲೆಯಿಂದ ರುಚಿಕರವಾದ ಆಹಾರವೇ ಬೇಕು. ಉಪವಾಸ ಮಾಡುವವರು ಅತಿ ಕಡಿಮೆಯಾಗಿದ್ದಾರೆ. ಇದಕ್ಕೆಲ್ಲ ಕಾರಣ ಇಂದಿನ ಜನರಲ್ಲಿ ಅಧಿಕ ಹಣವಿದೆ. ಆಹಾರದ ಕೊರತೆಯಿಲ್ಲ. ಮನೆಯಲ್ಲಿ ಊಟವಿಲ್ಲವೆಂದರೆ ಹೋಟೆಲ್ಗೆ ಹೋಗಿ ಊಟ ಮಾಡುತ್ತಾರೆ. ಖಾಲಿ ಹೊಟ್ಟೆಯಲ್ಲಿ ಮಾತ್ರ ಇರುವುದಿಲ್ಲ.

ದೇಶದ ಶೇಕಡ 20 ರಷ್ಟು ಜನರಿಗೆ ತಮಗೆ ಬಿಪಿ ಮತ್ತು ಸಕ್ಕರೆ ಕಾಯಿಲೆ ಇರುವ ಬಗ್ಗೆ ಅರಿವೆಯೇ ಇರುವುದಿಲ್ಲ. ಶೇ.20 ರಷ್ಟು ಜನರು ತಮಗೆ ಬಿಪಿ ಅಥವಾ ಶುಗರ್ ಕಾಯಿಲೆ ಇಲ್ಲದೆ ಇದ್ದರೂ ಮಾತ್ರೆ ಸೇವಿಸುತ್ತಿದ್ದಾರೆ. ಶೇಕಡ 50 ರಷ್ಟು ಜನರು ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೇ ಬಿಪಿ ಸಕ್ಕರೆ ಕಾಯಿಲೆಗೆ ಮಾತ್ರೆ ಸೇವಿಸುತ್ತಿದ್ದಾರೆ. ಶೇಕಡ 30 ರಷ್ಟು ಜನರು ಅನವಶ್ಯಕ ಅತಿಯಾದ ನಿರಂತರ ಔಷಧಿಗಳ ಸೇವನೆಯಿಂದ ಹೈಬಿಪಿ ಮತ್ತು ಶುಗರ್ ಕಾಯಿಲೆಗೆ ಈಡಾಗುತ್ತಿದ್ದಾರೆ. ಬಿಪಿ ಮತ್ತು ಶುಗರ್ ಕಾಯಿಲೆ ಇವೆರಡೂ ಅಣ್ಣ ತಮ್ಮಂದಿರಿದ್ದಂತೆ. ಒಂದು ಬಂದರೆ ಇನ್ನೊಂದು ಬರಲೇಬೇಕು. ಇವೆರಡೂ ಬಂದಾಗ ಇತರೆ ಎಲ್ಲಾ ಕಾಯಿಲೆಗಳು ಒಂದೊಂದಾಗಿ ಬರುತ್ತವೆ.

ನಮ್ಮ ದೇಹದಲ್ಲಿರುವ ಮೇದೋಜೀರಕ ಗ್ರಂಥಿಯು (pancreatitis) ಶುಗರ್ ಕಾಯಿಲೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೆದೋಜೀರಕ ಗ್ರಂಥಿಯು ಆಹಾರ ಜೀರ್ಣಗೊಳಿಸಲು ಕೆಲವು ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತದೆ. ಜೊತೆಗೆ ಇನ್ಸುಲಿನ್ ಉತ್ಪಾದಿಸುವ ಕೆಲಸವನ್ನೂ ಇದು ಮಾಡುತ್ತದೆ. ನಾವು ಸೇವಿಸುವ ಕೆಟ್ಟ ಆಹಾರದಿಂದ, ಕೆಟ್ಟ ಜೀವನ ಶೈಲಿಯಿಂದ ಈ ಮೆದೋಜೀರಕ ಗ್ರಂಥಿಯು ಬಲಹೀನಗೊಂಡು ಇನ್ಸುಲಿನ್ ಅನ್ನು ಕಡಿಮೆ ಉತ್ಪಾದಿಸುತ್ತದೆ ಅಥವಾ ಉತ್ಪಾದಿಸುವದನ್ನೇ ನಿಲ್ಲಿಸಿ ಬಿಡುತ್ತದೆ. ಆಗಲೇ ಶುಗರ್ ಕಾಯಿಲೆ ನಮಗೆ ಬರುತ್ತದೆ.

ನಾನು ಈ ಲೇಖನದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ಮಾಹಿತಿ ಒದಗಿಸಿರುತ್ತೇನೆ. ನಾನು ತಿಳಿಸಿರುವ ಈ ಚಿಕಿತ್ಸಾ ಪದ್ಧತಿಯು ವಿಶ್ವದಲ್ಲಿಯೇ ಶ್ರೇಷ್ಠ ಚಿಕಿತ್ಸಾ ಪದ್ದತಿಯಾಗಿದೆ. ಇದನ್ನು 100% ಪಾಲಿಸುವ ಮೂಲಕ ನಿಮ್ಮ ಶುಗರ್ ಕಾಯಿಲೆಯನ್ನು 100% ಕಂಟ್ರೋಲ್ನಲ್ಲಿ ಇಡಬಹುದು. ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ. ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ನಿಯಂತ್ರಣ ಹೊಂದಲು, ಗುಣಮುಖ ಹೊಂದಲು ಹೆಚ್ಚು ಕಡಿಮೆ ಸಮಯ ತೆಗೆದುಕೊಳ್ಳಬಹುದು. ಆದರೆ, ಶಾಶ್ವತ ಪರಿಹಾರ ಸಿಗುತ್ತದೆ.

ಸಕ್ಕರೆ ಕಾಯಿಲೆ ಎಂದರೇನು?

ಅಧಿಕ ಸಕ್ಕರೆ ಸೇವನೆಯಿಂದ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದರೆ, ಇದು ತಪ್ಪು. ಏಕೆಂದರೆ ನಾವು ಪ್ರತಿ ದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸೇವಿಸುವ ಎಲ್ಲಾ ಆಹಾರಗಳು ಕಾರ್ಬೋಹೈಡ್ರೇಟ್ ಎಂಬ ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಅಂದರೆ, ನಾವು ಪ್ರತಿ ದಿನ ಸೇವಿಸುವ ಅನ್ನ, ಚಪಾತಿ, ಇಡ್ಲಿ, ವಡಾ, ದೋಸೆ ಇತರೆ ಎಲ್ಲವುಗಳಲ್ಲೂ ಶೇ.50 ಕ್ಕಿಂತ ಹೆಚ್ಚು ಸಕ್ಕರೆ ಅಂಶವಿರುತ್ತದೆ. ಈ ಆಹಾರ ಸೇವಿಸಿದಾಗ ಜೀರ್ಣಗೊಂಡು ಗ್ಲುಕೋಸ್ ರೂಪದಲ್ಲಿ ಪರಿವರ್ತನೆ ಹೊಂದಿ ರಕ್ತ ಸೇರುತ್ತದೆ. ರಕ್ತ ಸೇರಿದ ಈ ಗ್ಲುಕೋಸನ್ನು ಮೆದೋಜೀರಕ ಗ್ರಂಥಿ ಬಿಡುಗಡೆ ಮಾಡುವ ಇನ್ಸುಲಿನ್ ಎಂಬ ಹಾರ್ಮೋನು ರಕ್ತದ ಮೂಲಕ ಶರೀರದ ಎಲ್ಲಾ ಜೀವಕೋಶಗಳಿಗೆ ತಲುಪಿಸುತ್ತದೆ. ಆಗಲೇ ನಮಗೆ ಶಕ್ತಿ ಬರುತ್ತದೆ. ಈ ಗ್ಲುಕೋಸ್ ಜೀವಕೋಶಗಳಿಗೆ ತಲುಪದೇ ರಕ್ತದಲ್ಲಿಯೇ ಅಧಿಕವಾಗಿ ಸಂಗ್ರಹವಾಗುವುದನ್ನು ಸಕ್ಕರೆ ಕಾಯಿಲೆ ಎನ್ನುವರು.

ಟೈಪ್-1 ಮತ್ತು ಟೈಪ್-2 ಡಯಾಬಿಟೀಸ್ ಎಂದರೇನು?

ಕೆಲವು ಕಾರಣಗಳಿಂದ ಮೆದೋಜೀರಕ ಗ್ರಂಥಿಯು ಇನ್ಸುಲಿನ್ ಕಡಿಮೆ ಉತ್ಪಾದಿಸುತ್ತದೆ ಅಥವಾ ಉತ್ಪಾದಿಸುವುದನ್ನೆ ನಿಲ್ಲಿಸಿಬಿಡುತ್ತದೆ. ಆಗ ರಕ್ತದಲ್ಲಿರುವ ಗ್ಲುಕೋಸ್ ಉಪಯೋಗವಾಗದೆ ರಕ್ತದಲ್ಲಿಯೇ ಅಧಿಕವಾಗಿ ಉಳಿದುಬಿಡುತ್ತದೆ. ಇದನ್ನು ಟೈಪ್-1 ಡಯಾಬಿಟೀಸ್ ಎನ್ನುವರು. ಇದು ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವರಲ್ಲಿ ಮೇದೋಜೀರಕ ಗ್ರಂಥಿ ಅಗತ್ಯ ಇನ್ಸುಲಿನ್ ಉತ್ಪಾದಿಸಿದರೂ ಗ್ಲುಕೋಸ್ ಉಪಯೋಗಿಸಿಕೊಳ್ಳಲು ಜೀವಕೋಶಗಳು ವಿಫಲವಾಗುತ್ತವೆ. ಇದರಿಂದಲೂ ರಕ್ತದಲ್ಲಿ ಅಧಿಕ ಗ್ಲುಕೋಸ್ ಸಂಗ್ರಹವಾಗುತ್ತದೆ. ಇದನ್ನೇ ಟೈಪ್-2 ಡಯಾಬಿಟೀಸ್ ಎನ್ನುವರು. ಇದು ಇಂದು ಎಲ್ಲರಲ್ಲೂ ಅತೀ ಹೆಚ್ಚಾಗಿ ಕಂಡುಬರುತ್ತಿದೆ.

ಸಕ್ಕರೆ ಕಾಯಿಲೆಯ ಲಕ್ಷಣಗಳು

ಅತಿಯಾದ ಹಸಿವು, ಪದೇ ಪದೇ ಮೂತ್ರ ವಿಸರ್ಜನೆ, ತೂಕ ಕಡಿಮೆಯಾಗುವುದು, ಗಾಯ ವಾಸಿಯಾಗಲು ವಿಳಂಬ, ಕಣ್ಣು ಮಂಜಾಗುವುದು, ಇವು ಸಕ್ಕರೆ ಕಾಯಿಲೆಯ ಪ್ರಮುಖ ಲಕ್ಷಗಳಾಗಿವೆ. ಇವುಗಳಲ್ಲಿ ಕೆಲವು ಲಕ್ಷಣಗಳು ಕಾಣದೇ ಇರಬಹುದು. ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಿ.

ಸಕ್ಕರೆ ಕಾಯಿಲೆ ಬರಲು ಕಾರಣವೇನು?

ಪ್ರಮುಖವಾಗಿ ಎರಡು ಕಾರಣಗಳಿಂದ ಸಕ್ಕರೆ ಕಾಯಿಲೆ ಬರುತ್ತದೆ. ತಪ್ಪಾದ ಆಹಾರ ಸೇವನೆ ಮತ್ತು ತಪ್ಪಾದ ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಬರುತ್ತದೆ. ಪ್ರೊಸೆಸ್ಡ್ ಪ್ಯಾಕ್ಡ್ ಫುಡ್ ಸೇವನೆ, ಕರಿದ ಹುರಿದ ಆಹಾರ, ಅತಿಯಾದ ಆಹಾರ, ಪದೇ ಪದೇ ಆಹಾರ ಸೇವನೆ, ತೂಕ ಹೆಚ್ಚಳ, ಅನವಶ್ಯಕ ಅತಿಯಾದ ಔಷಧಿಗಳ ಸೇವನೆ, ರೋಗ ನಿರೋಧಕ ವ್ಯವಸ್ಥೆಯ ಅಸಮತೋಲನ, ಅನುವಂಶಿಕ, ಮಾನಸಿಕ ಒತ್ತಡ, ಮತ್ತು ದೈಹಿಕ ಶ್ರಮ ಇಲ್ಲದೇ ಇರುವುದು ಈ ಎಲ್ಲಾ ಕಾರಣಗಳಿಂದಲೂ ಸಕ್ಕರೆ ಕಾಯಿಲೆ ಬರುತ್ತದೆ.

ಸಕ್ಕರೆ ಕಾಯಿಲೆಯ ನಾರ್ಮಲ್ ರೇಂಜ್

ಖಾಲಿ ಹೊಟ್ಟೇಲಿ 100 ರೊಳಗೆ ಇದ್ದಲ್ಲಿ ನಾರ್ಮಲ್, ಊಟದ ನಂತರ 140 ರೊಳಗಿದ್ದಲ್ಲಿ ನಾರ್ಮಲ್ ಎಂದು ವೈದ್ಯಕೀಯ ಕ್ಷೇತ್ರವು ಪರಿಗಣಿಸಿದೆ. ನಿಮಗೆ ಖಾಲಿ ಹೊಟ್ಟೇಲಿ 100 ರಿಂದ 126 ರೊಳಗಿದ್ದಲ್ಲಿ ಮತ್ತು ಊಟದ ನಂತರ 140 ರಿಂದ 200ರ ರೊಳಗಿದ್ದಲ್ಲಿ ನಿಮಗೆ ಸಕ್ಕರೆ ಖಾಯಿಲೆ ಬರುವ ಸಂಭವವಿರುತ್ತದೆ. ಮುಂಜಾಗ್ರತೆಯಾಗಿ ನಿಮ್ಮ ಆಹಾರದಲ್ಲಿ ಬದಲಾವಣೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆದರೆ, ಶುಗರ್ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಖಾಲಿ ಹೊಟ್ಟೇಲಿ 126ರ ಮೇಲಿದ್ದಲ್ಲಿ ಮತ್ತು ಊಟದ ನಂತರ 200 ಕ್ಕಿಂತ ಮೇಲಿದ್ದಲ್ಲಿ ನಿಮಗೆ ಸಕ್ಕರೆ ಕಾಯಿಲೆ ಇದ್ದು, ನಿಮ್ಮ ಆಹಾರದಲ್ಲಿ ಬದಲಾವಣೆ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಜೊತೆಗೆ ಅಲ್ಪ ಪ್ರಮಾಣದ ಶುಗರ್ ಔಷಧ ತೆಗೆದುಕೊಳ್ಳಲೇಬೇಕು. (ಬರಹ :ಸೂರ್ಯಕಾಂತ ಸಜ್ಜನ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending