ದಿನದ ಸುದ್ದಿ
ಬ್ಯಾಂಕ್ ಖಾಸಗೀಕರಣ ದೇಶಕ್ಕೆ ಹಿತಾಸಕ್ತಿಗೆ ಮಾರಕ..!
- ಕೆ.ರಾಘವೇಂದ್ರ ನಾಯರಿ
ಮುಖ್ಯಾಂಶಗಳು
- ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಗಳಿಸುವ ಲಾಭದ ಹಣವು ಜನರ ಅಭ್ಯುದಯಕ್ಕೆ ವಿನಯೋಗವಾಗಬೇಕೇ ಹೊರತು ಖಾಸಗಿ ಬಂಡವಾಳಷಾಹಿಗಳು ಲೂಟಿಗೆ ಅಲ್ಲ.
- ಬ್ಯಾಂಕ್ ಖಾಸಗೀಕರಣವು ದೇಶದ ಹಿತಾಸಕ್ತಿಗೆ ಮಾರಕವಾಗಲಿದೆ.
- ದೇಶದ ಅರ್ಥ ವ್ಯವಸ್ಥೆಯ ಜೀವ ನಾಡಿಗಳಾದ ಸಾರ್ವಜನಿಕ ಬ್ಯಾಂಕುಗಳು ಸರಕಾರದ ಅಧೀನದಲ್ಲೇ ನಡೆಯಬೇಕೇ ಹೊರತು ಖಾಸಗಿಯವರಿಂದ ಅಲ್ಲ.
- ಜನಸಾಮಾನ್ಯರ ಲಕ್ಷಾಂತರ ಕೋಟಿ ರೂಪಾಯಿಗಳ ಠೇವಣಿ ಹಣದ ಭದ್ರತೆಗೆ ಅಪಾಯವಾಗುವ ಸಾಧ್ಯತೆ.
- ಸರಕಾರದ ಖಾಸಗೀಕರಣ ನೀತಿಯ ವಿರುದ್ಧ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ನಡೆಸುತ್ತಿರುವ ಹೋರಾಟಕ್ಕೆ ಸಾರ್ವಜನಿಕರ ಬೆಂಬಲವೂ ಅತ್ಯಗತ್ಯ.
ಸಾರ್ವಜನಿಕ ಕ್ಷೇತ್ರದ ಕೆಲ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆಯನ್ನು 4 ಅಥವಾ 5 ಕ್ಕೆ ಇಳಿಸುವುದಾಗಿ ಕೇಂದ್ರ ಸರಕಾರ ಇತ್ತೀಚೆಗೆ ಹೇಳಿಕೊಂಡಿದೆ. ಇದು ಈ ದೇಶಕ್ಕೆ, ಈ ದೇಶದ ಬ್ಯಾಂಕುಗಳಿಗೆ ಮತ್ತು ಈ ದೇಶದ ಜನಸಾಮಾನ್ಯರಿಗೆ ಆಘಾತವನ್ನುಂಟು ಮಾಡಿದೆ. ಏಕೆಂದರೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಖಾಸಗಿಯವರಿಗೆ ಮಾರುವುದರಿಂದ ದೇಶದ ಆರ್ಥಿಕ ವ್ಯವಸ್ಥೆಯ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟಾಗಲಿದೆ.
ಜೊತೆಗೆ ಲಕ್ಷಾಂತರ ಕೋಟಿಯ ಪ್ರಮಾಣದಲ್ಲಿರುವ ಜನತೆಯ ಠೇವಣಿ ಹಣದ ಭದ್ರತೆಯ ಕುರಿತಾಗಿ ಠೇವಣಿದಾರರಿಗೆ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಇದಕ್ಕಿಂತಲೂ ದುರ್ದೈವದ ವಿಷಯವೆಂದರೆ ದೇಶದಲ್ಲಿ ನಡೆಯುತ್ತಿರುವ ಸರಕಾರದ ಈ ಕೆಟ್ಟ ನೀತಿಯ ವಿರುದ್ಧ ವಿರೋಧ ಪಕ್ಷಗಳನ್ನು ಒಳಗೊಂಡಂತೆ ಯಾವುದೇ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಮಾಧ್ಯಮ ವಲಯದವರು, ವಿಚಾರವಾದಿಗಳು, ಆರ್ಥಿಕ ತಜ್ಞರು, ಲೇಖಕರು-ಅಂಕಣಕಾರರು, ಹೋರಾಟಗಾರರು, ಜನಸಾಮಾನ್ಯರು ತುಟಿ ಬಿಚ್ಚದೇ, ವಿರೋಧವನ್ನು ವ್ಯಕ್ತಪಡಿಸದೇ, ಪ್ರತಿಭಟನೆಯನ್ನು ತೋರಿಸದೇ ಇರುವಂತದ್ದು.
ಬ್ಯಾಂಕ್ ನೌಕರ ಸಂಘಟನೆಗಳ ಪೈಕಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA) ಮಾತ್ರ ತನ್ನ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದೆ ಮತ್ತು ಹೋರಾಟವನ್ನು ರೂಪಿಸುತ್ತಿದೆ. ಇನ್ನೆಲ್ಲ ಸಂಘಟನೆಗಳು ಮೌನವಾಗಿ ಸರಕಾರದ ದೇಶವಿರೋಧಿ ನೀತಿಯನ್ನು ಒಪ್ಪಿಕೊಂಡಂತೆ ಗೋಚರಿಸುತ್ತಿದೆ. ಬ್ಯಾಂಕ್ ರಾಷ್ಟ್ರೀಕರಣ ನೀತಿಯನ್ನೇ ತಲೆ ಕೆಳಗಾಗಿಸುವ ಈ ಹುನ್ನಾರ ಖಂಡಿತವಾಗಿಯೂ ನಮ್ಮ ದೇಶಕ್ಕೆ ಮಾರಕ.
ಸುಮಾರು 51 ವರ್ಷಗಳ ಹಿಂದೆ ಅಂದರೆ 1969ರಲ್ಲಿ ಖಾಸಗಿ ವ್ಯಕ್ತಿಗಳ/ಸಂಸ್ಥೆಗಳ ಬಿಗಿ ಮುಷ್ಠಿಯಲ್ಲಿದ್ದ ನಮ್ಮ ದೇಶದ ಪ್ರಮುಖ 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. 1969ರವರೆಗೆ ಖಾಸಗಿ ವಲಯದಲ್ಲಿದ್ದ ಬಹುತೇಕ ಬ್ಯಾಂಕುಗಳ ಮಾಲೀಕರು ದೇಶದ ಆರ್ಥಿಕ ಬೆಳವಣಿಗೆಯ ಕುರಿತಾಗಿ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿರಲಿಲ್ಲ. ಈ ಬಂಡವಾಳಷಾಹಿಗಳು ತಮ್ಮ ಕೈಗಾರಿಕೆಗಳ ಅಗತ್ಯಗಳಿಗೆ ಮತ್ತು ತಮಗೆ ಬೇಕಾದವರಿಗೆ ಮಾತ್ರ ಬ್ಯಾಂಕುಗಳಲ್ಲಿದ್ದ ಜನರ ಠೇವಣಿ ಹಣವನ್ನು ಬಳಸುತ್ತಿದ್ದರು.
ಬ್ಯಾಂಕುಗಳಲ್ಲಿರುವ ಅಗಾಧ ಪ್ರಮಾಣದ ಠೇವಣಿ ಹಣ ಜನಸಾಮಾನ್ಯರಿಗೆ ಸೇರಿರುವಂತದ್ದು ಎಂದು ಎಲ್ಲರೂ ತಿಳಿದುಕೊಳ್ಳಬೇಕು. ಮತ್ತು ಇದೇ ಠೇವಣಿ ಹಣದ ಮುಖಾಂತರ ಬ್ಯಾಂಕುಗಳು ಗಳಿಸುವ ಲಾಭದ ಹಣವನ್ನು ಈ ದೇಶದ ಜನಸಾಮಾನ್ಯರ ಅಭ್ಯುದಯಕ್ಕಾಗಿ ವಿನಿಯೋಗಿಸಬೇಕೇ ಹೊರತು ಖಾಸಗಿ ವ್ಯಕ್ತಿಗಳ ಲೂಟಿಗಾಗಿ ಅಲ್ಲ ಎನ್ನುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅತ್ಯಂತ ಸ್ಪಷ್ಟವಾದ ನಿಲುವಾಗಿದೆ ಮತ್ತು ಅದಕ್ಕಾಗಿ ಹೋರಾಟವನ್ನು ಮಾಡಲಾಗುತ್ತಿದೆ.
ರಾಷ್ಟ್ರೀಕರಣವಾದ ನಂತರದಲ್ಲಿ ಬ್ಯಾಂಕುಗಳು ಅಭೂತಪೂರ್ವವಾಗಿ ಬೆಳವಣಿಗೆಯನ್ನು ಕಂಡಿವೆ. ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಗೆ, ಜನರ ಆರ್ಥಿಕ ಸ್ವಾವಲಂಬನೆಗೆ ಕಾರಣೀಭೂತವಾಗಿದೆ. ಪ್ರಸ್ತುತ ಬ್ಯಾಂಕುಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಠೇವಣಿ ಹಣವಿದೆ. ಈ ಠೇವಣಿ ಹಣವನ್ನು ನಮ್ಮ ದೇಶದ ಕೈಗಾರಿಕೋಧ್ಯಮದ ಬೆಳವಣಿಗೆಗೆ, ಸಾರಿಗೆ-ಸಂಪರ್ಕದ ಸ್ಥಾಪನೆಗೆ, ಕೃಷಿ-ನೀರಾವರಿ, ಸಣ್ಣ-ಮದ್ಯಮ ಗಾತ್ರದ ಕೈಗಾರಿಕೆಗಳ ಬೆಳವಣಿಗೆಗೆ, ಶಿಕ್ಷಣ ಪಡೆಯಲು ಮತ್ತು ಜನ ಸಾಮಾನ್ಯರು ಸ್ವ ಉದ್ಯೋಗ ಕಲ್ಪಿಸಿಕೊಳ್ಳುವಂತಹ ಮಹತ್ಕಾರ್ಯಗಳಿಗೆ ಬಳಸಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಜೀವ ನಾಡಿಯಂತೆ ಕಾರ್ಯ ನಿರ್ವಹಿಸುತ್ತಿವೆ ಈ ರಾಷ್ಟ್ರೀಕೃತ ಬ್ಯಾಂಕುಗಳು.
ಈಗಿನ ಕೇಂದ್ರ ಸರಕಾರ ತಮ್ಮದೇ ಆದ ಉದ್ದೇಶಗಳಿಗಾಗಿ ನಮ್ಮ ದೇಶದ ಸಾರ್ವಜನಿಕ ಕ್ಷೇತ್ರದಲ್ಲಿ ಇರುವಂತಹ ಕೈಗಾರಿಕೆಗಳು, ಬ್ಯಾಂಕುಗಳು, ವಿಮಾ ಸಂಸ್ಥೆಗಳು, ರೈಲ್ವೇ, ಭಾರತೀಯ ಸಂಚಾರ ನಿಗಮ, ಏರ್ ಇಂಡಿಯಾ ಮುಂತಾದ ಹಲವಾರು ಪ್ರಮುಖ ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಉದ್ದೇಶಿಸಿದೆ. ಈ ಆಸ್ತಿಗಳನ್ನು ಮಾರಲು ಈಗಿನ ಸರಕಾರಕ್ಕೆ ಯಾವುದೇ ನೈತಿಕ ಹಕ್ಕಿಲ್ಲ. ಈ ಎಲ್ಲ ಸಂಸ್ಥೆಗಳು ದೇಶದ ಜನಸಾಮಾನ್ಯರ ಶ್ರಮದಿಂದ, ಬೆವರಿನ ಪ್ರತಿಫಲವಾಗಿ ಸ್ಥಾಪನೆಯಾಗಿವೆ ಮತ್ತು ಬೆಳವಣಿಗೆಯನ್ನು ಕಂಡಿವೆ.
ಖಾಸಗಿ ಕ್ಷೇತ್ರದ ಬ್ಯಾಂಕುಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದು ಸರಕಾರ ಹೇಳುತ್ತಿದೆ. ಆದರೆ ನಿಜವಾದ ಸಂಗತಿಯೆಂದರೆ ಈ ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳ ಮಾಲೀಕರು ಹಲವು ಬ್ಯಾಂಕುಗಳನ್ನು ಲೂಟಿ ಮಾಡಿದ್ದರಿಂದ ಆ ಲೂಟಿಗೊಳಗಾದ ಬ್ಯಾಂಕುಗಳನ್ನು ಮತ್ತು ಆ ಬ್ಯಾಂಕುಗಳ ಗ್ರಾಹಕರನ್ನು ರಕ್ಷಿಸುವ ಕೆಲಸವನ್ನು ನಮ್ಮ ಹೆಮ್ಮೆಯ ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿವೆ ಎನ್ನುವುದನ್ನು ಸರಕಾರ ಮರೆಯಬಾರದು ಮತ್ತು ಸಾರ್ವಜನಿಕರಿಗೆ ಇದನ್ನು ಮುಕ್ತವಾಗಿ ತಿಳಿಸಬೇಕು.
ಸಾರ್ವಜನಿಕ ಬ್ಯಾಂಕುಗಳಲ್ಲಿ ಕ್ಲುಪ್ತ ಸಮಯದಲ್ಲಿ ವಸೂಲಾಗದ ಸಾಲದ ಪ್ರಮಾಣ (NON PERFORMING ASSETS) ಅತೀ ಹೆಚ್ಚಿದೆ ಎನ್ನುತ್ತಿದೆ. ಹಾಗಿದ್ದರೆ ಇದಕ್ಕೆ ಕಾರಣರಾರು? ಜನಸಾಮಾನ್ಯರೇ? ಬ್ಯಾಂಕುಗಳ ಠೇವಣಿದಾರರೇ? ಈ ಪರಿಸ್ಥತಿಗೆ ನಿಶ್ಚಿತವಾಗಿಯೂ ಅತೀ ದೊಡ್ಡ ಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡದಿರುವ ಬೃಹತ್ ಖಾಸಗಿ ಬಂಡವಾಳಷಾಹಿಗಳು ಮತ್ತು ಕೇಂದ್ರ ಸರಕಾರದ ನೀತಿಗಳೇ ಕಾರಣ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಬ್ಯಾಂಕುಗಳ ಇಂದಿನ ಸ್ಥಿತಿಗೆ ಆಳುವ ವರ್ಗದ ರಾಜಕಾರಣಿಗಳ ಕುಮ್ಮಕ್ಕು ಇದೆ ಎನ್ನುವುದನ್ನು ನಾವು ಮನಗಾಣಬೇಕು.
ಸಾಲ ವಸೂಲಾತಿ ವಿಷಯದಲ್ಲಿ ಸರಕಾರ ಬಿಗಿಯಾದ ಕ್ರಮವನ್ನು ಕೈಗೊಂಡಲ್ಲಿ ಸಾಲ ವಸೂಲಾತಿಗೆ ಯಾವುದೇ ಸಮಸ್ಯೆಯಿಲ್ಲ. ಇನ್ನೊಂದೆಡೆ ಸರಕಾರವು ರಾಷ್ಟ್ರೀಕ್ರತ ಬ್ಯಾಂಕುಗಳು ನಷ್ಟದಲ್ಲಿವೆ ಎಂದು ಹೇಳಿಕೊಳ್ಳುತ್ತಿದೆ. ವಸೂಲಾಗದ ಸಾಲವನ್ನು ಬ್ಯಾಂಕುಗಳು ಗಳಿಸುವ ಲಾಭದಿಂದ ವಜಾ ಮಾಡಲಾಗುತ್ತಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಬ್ಯಾಂಕುಗಳ ಲೆಕ್ಕ ಪತ್ರವನ್ನು ಅವಲೋಕಿಸಿದರೆ ಇದು ತಿಳಿಯುತ್ತದೆ. ಆರ್ಥಿಕ ಬಲಾಡ್ಯರು, ರಾಜಕೀಯ ಹಿನ್ನಲೆಯ ಬಲಾಡ್ಯರಿಂದ ಸಾಲವನ್ನು ವಸೂಲಾತಿ ಮಾಡದೇ ಬಡ್ಡಿ ಮನ್ನಾ, ಸಾಲವನ್ನೇ ಮನ್ನಾ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಬ್ಯಾಂಕುಗಳು ಮೊದಲಿಂದಲೂ ಒಳ್ಳೆಯ ಲಾಭವನ್ನು ಗಳಿಸುತ್ತಿವೆ.
ಆದರೆ ಸರಕಾರದ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳ ಕೆಟ್ಟ ನೀತಿಯಿಂದಾಗಿ ಬ್ಯಾಂಕುಗಳು ಅನಿವಾರ್ಯವಾಗಿ ನಷ್ಟವನ್ನು ದಾಖಲಿಸಬೇಕಾಗಿದೆ.
ಬ್ಯಾಂಕುಗಳಿಗೆ ಅಗತ್ಯ ಬಂಡವಾಳವನ್ನು ನೀಡಲು ತನ್ನ ಬಳಿ ಹಣವಿಲ್ಲ ಎಂದು ಸರಕಾರ ಒಂದೆಡೆ ಹೇಳುತ್ತಿದೆ. ಬ್ಯಾಂಕುಗಳಲ್ಲಿ ದುಬಾರಿ ಬಂಡವಾಳವಿರಬೇಕೆಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಒಂದೆಡೆ ಷರತ್ತುಗಳನ್ನು ಹಾಕುತ್ತಿವೆ. ನಮ್ಮ ದೇಶದ ಬ್ಯಾಂಕುಗಳಿಗೆ ಆ ತೆರನಾದ ಅಗಾಧ ಪ್ರಮಾಣದ ಅಗತ್ಯ ಖಂಡಿತವಾಗಿಯೂ ಬೇಕಾಗಿಲ. ಸರಕಾರ ಇದರ ಬಗ್ಗೆ ಅಗತ್ಯವಾದ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕು.
ಠೇವಣಿದಾರರಿಗೆ ನಮ್ಮ ದೇಶದ ಸಾರ್ವಜನಿಕ ಬ್ಯಾಂಕುಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ. ಆದರೆ ಈ ವಿಶ್ವಾಸ ಖಾಸಗಿ ಬ್ಯಾಂಕುಗಳ ಮೇಲಿಲ್ಲ. ಇನ್ನೊಂದು ಪ್ರಮುಖವಾದ ವಿಷಯವೆಂದರೆ ಕೇಂದ್ರ ಸರಕಾರದ ಎಲ್ಲ ಆರ್ಥಿಕ ಯೋಜನೆಗಳನ್ನು ಮತ್ತು ನೀತಿಗಳನ್ನು ಕಾರ್ಯಗತಗೊಳಿಸುವುದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಮಾತ್ರ. ಇಂತಹ ಮಹತ್ವದ ಸೇವೆಗಳನ್ನು ಬ್ಯಾಂಕುಗಳು ಯಾವುದೇ ಶುಲ್ಕವಿಲ್ಲದೇ ಮಾಡುತ್ತಿವೆ. ಆದರೆ ಇದೇ ಸೇವೆಯನ್ನು ಖಾಸಗಿ ಬ್ಯಾಂಕುಗಳಿಂದ ನಿರೀಕ್ಷಿಸಲು ಸಾಧ್ಯವೇ? ಖಾಸಗಿ ಬ್ಯಾಂಕುಗಳ ಮೂಲ ಉದ್ದೇಶ ಲಾಭ ಮಾಡುವುದೇ ಹೊರತು ಸೇವಾ ಉದ್ದೇಶವಿಲ್ಲ.
ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ದೇಶದ ಆಮೂಲಾಗ್ರ ಬೆಳವಣಿಗೆಗೆ ಸಹಕಾರ ನೀಡಿದೆ. ದೇಶದ ಕಷ್ಟದ ಸಂದರ್ಭದಲ್ಲೆಲ್ಲ ದೇಶದೊಂದಿಗೆ ನಿಂತಿದೆ. ಇಂತಿರುವಾಗ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಸರಕಾರ ಅಗತ್ಯವಿರುವ ಬಂಡವಾಳ ನೀಡಲೇಬೇಕು. ಇಲ್ಲಿಯವರೆಗೆ ಬ್ಯಾಂಕುಗಳು ನೀಡಿರುವ ಸೇವೆ, ಸರಕಾರಕ್ಕೆ ನೀಡಿರುವ ಲಾಭಾಂಶ, ಡಿವಿಡೆಂಡ್ ಗಳನ್ನು ಗಣನೆಗೆ ತೆಗೆದುಕೊಳ್ಳಬೇಕಲ್ಲವೇ… ದೇಶದ ಕಷ್ಟದ ಸಂದರ್ಭದಲ್ಲಿ ದೇಶದ ಜೊತೆಗೆ ನಿಂತಿರುವ ಬ್ಯಾಂಕುಗಳ ಜೊತೆಗೆ ಈಗಿನ ಪ್ರತಿಕೂಲದ ಸಂದರ್ಭದಲ್ಲಿ ಬ್ಯಾಂಕುಗಳ ಜೊತೆಗೆ ನಿಲ್ಲಬೇಕಾದದ್ದು ಸರಕಾರದ ಜವಾಬ್ದಾರಿಯಲ್ಲವೇ?
ಈಗಿನ ಕೇಂದ್ರ ಸರಕಾರದ ಮುಖ್ಯ ಉದ್ದೇಶ ಕಾರ್ಪೋರೇಟರ್ ಗಳಿಗೆ ನೆರವು ಕೊಡುವುದಾಗಿದೆ.
ಇದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅವರ ಹಿತಕ್ಕಾಗಿ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಬಲಿ ಕೊಡಲಾಗುತ್ತಿದೆ. ಜೊತೆಗೆ ವಿದೇಶಿ ಬಂಡವಾಳಷಾಹಿಗಳಿಗೂ ರತ್ನಗಂಬಳಿಯನ್ನು ಹಾಸಿ ಸ್ವಾಗತಿಸಿ ಸಹಕಾರ ನೀಡಲಾಗುತ್ತಿದೆ. ದೇಶದ ಆಸ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿರುವಂತೆ ಕಾಣಿಸುತ್ತಿಲ್ಲ. ಬ್ಯಾಂಕ್ ಖಾಸಗೀಕರಣದ ನಡೆ ನಮ್ಮ ಆರ್ಥಿಕ ಸ್ವಾವಲಂಬನೆಗೆ, ದೇಶದ ಸಾರ್ವಭೌಮತ್ವಕ್ಕೆ ದೊಡ್ಡ ಹೊಡೆತ ನೀಡುವುದರಲ್ಲಿ ಸಂಶಯವಿಲ್ಲ. ಬಡವರಿಗೆ, ಜನಸಾಮಾನ್ಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ, ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಇನ್ನು ಮುಂದೆ ಸಾಲ ಸಿಗುವುದು ಒತ್ತಟ್ಟಿಗಿರಲಿ ಬ್ಯಾಂಕುಗಳ ಒಳಗೆ ಪ್ರವೇಶವೂ ಕಷ್ಟಸಾಧ್ಯವಾಗುವ ಎಲ್ಲ ಸಾಧ್ಯತೆಗಳೂ ಇವೆ. ಜೊತೆಗೆ ಠೇವಣಿ ಹಣವೂ ಲೂಟಿಯಾಗುವ ಅತೀ ದೊಡ್ಡ ಅಪಾಯವೂ ಇದೆ.
ಸರಕಾರದ ಈ ಖಾಸಗೀಕರಣ ನೀತಿಯನ್ನು ಪಕ್ಷ ಬೇಧವಿಲ್ಲದೇ ಸಾರ್ವಜನಿಕರು ವಿರೋಧಿಸಬೇಕು. ಸಾರ್ವಜನಿಕ ಕ್ಷೇತ್ರದ ಉಳಿವಿಗಾಗಿ ದೇಶದ ಜನತೆ ಒಗ್ಗಟ್ಟಾಗಿ ಚಳುವಳಿ ಮಾಡಬೇಕಾಗಿದೆ ಮತ್ತು ಈ ಕುರಿತಾಗಿ ಜನ ಜಾಗೃತಿ ಅಭಿಯಾನವನ್ನು ನಡೆಸಬೇಕಾಗಿದೆ. ರಾಷ್ಟ್ರೀಕರಣ ಬ್ಯಾಂಕಿಂಗ್ ವ್ಯವಸ್ಥೆಗಾಗಿ 60 ರ ದಶಕದಲ್ಲಿ ಹೋರಾಡಿದ್ದ ಏಕೈಕ ಬ್ಯಾಂಕ್ ನೌಕರರ ಸಂಘಟನೆಯಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಇದು ಅದರ ಉಳಿವಿಗಾಗಿ ಹಲವಾರು ರೀತಿಯ ಹೋರಾಟವನ್ನು ಮಾಡುತ್ತಿದೆ.
ಕೋವಿಡ್19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮುಷ್ಕರವನ್ನು ಸಂಘಟಿಸಲು ಸಾಧ್ಯವಾಗುತ್ತಿಲ್ಲ. ಈ ಹೋರಾಟದ ಹಿಂದಿರುವ ಕಾಳಜಿಯನ್ನು ಅರ್ಥೈಸಿಕೊಂಡು ಪ್ರತಿಯೊಬ್ಬ ದೇಶವಾಸಿಗಳು ಬೆಂಬಲಿಸಬೇಕಾಗಿದೆ. ಇದು ನಮ್ಮ ದೇಶದ ಹಿತಾಸಕ್ತಿಗಾಗಿ ನಡೆಸುತ್ತಿರುವ ದೇಶಪ್ರೇಮಿ ಹೋರಾಟವಾಗಿದೆ.
-ಲೇಖಕರು: ಕೆ.ರಾಘವೇಂದ್ರ ನಾಯರಿ
ಮೊ:9844314543
ಮಾಹಿತಿ ಕೃಪೆ: ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಷನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಮತದಾರ ದೇವರು’ ಎಂದ ಸಿದ್ದರಾಮಯ್ಯ
ಸುದ್ದಿದಿನಡೆಸ್ಕ್:ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಘನತೆವೆತ್ತ ರಾಜ್ಯಪಾಲರಿಗೆ ನೀಡಿ ಬಂದಿದ್ದೇನೆ. ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕ ರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಕಾಣಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಇಂದಿನ ವರೆಗೂ ನನಗೆ ನಿರೀಕ್ಷೆಗೂ ಮೀರಿ ಪ್ರೀತಿ ನೀಡಿದ, ಅಭಿಮಾನಿಸಿದ, ಕೈಹಿಡಿದು ನಡೆಸಿದ ರಾಜ್ಯದ ಜನತೆಯನ್ನು ಉದ್ದೇಶಿಸಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೇರು ನಟ ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ‘’ಅಭಿಮಾನಿ ದೇವರು’’ ಎಂದು ಕರೆಯುತ್ತಿದ್ದರು, ನಾನೊಬ್ಬ ಸಂವಿಧಾನವನ್ನೇ ಧರ್ಮ ಎಂದು ತಿಳಿದುಕೊಂಡಿರುವ ರಾಜಕಾರಣಿ. ನನ್ನ ಪಾಲಿಗೆ ಮತದಾರರು ‘’ಮತದಾರ ದೇವರು”. ಆ ದೇವರುಗಳ ಮುಂದೆ ನನ್ನ ಮನದಾಳದ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ ಎಂದರು.
ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ನನ್ನ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಯಮಾನದವನಲ್ಲ. ಈ ರಾಜೀನಾಮೆ ಪತ್ರವನ್ನು ಕೂಡಾ ಅತ್ಯಂತ ಸಂತೋಷದಿಂದ ಮನಪೂರ್ವಕವಾಗಿ ನೀಡಿದ್ದೇನೆ.
ಹಳ್ಳಿಗಾಡಿನ ರೈತಾಪಿ ಕುಟುಂಬದಿಂದ ಬಂದ ನಾನು ರಾಜಕಾರಣಕ್ಕೆ ಪ್ರವೇಶ ಮಾಡುವಾಗ ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಇಂತಹದ್ದೊಂದು ದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ. ಈ ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡೋ, ಇನ್ನೇನೋ ಆಗಿ ಇರುತ್ತಿದ್ದೆ. ಈ ಕಾರಣಕ್ಕಾಗಿ ಮೊದಲಿಗೆ ನಮ್ಮ ಸಂವಿಧಾನ ಮತ್ತು ಸಂವಿಧಾನದ ಶಿಲ್ಪಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ಸಂದರ್ಭದಲ್ಲಿ ತಲೆಬಾಗಿ ನಮಿಸುತ್ತೇನೆ.
ಎರಡನೆಯದಾಗಿ ರಾಜ್ಯದ ಜನತೆ. ಹೆಚ್ಚುಕಡಿಮೆ ನಾಲ್ಕುವರೆ ದಶಕಗಳ ಸುದೀರ್ಘ ರಾಜಕಾರಣದ ಪಯಣದಲ್ಲಿ ಜನ ನನ್ನನ್ನು ಶಾಸಕ, ಸಚಿವ, ಕೊನೆಗೆ ಎರಡುಬಾರಿ ಮುಖ್ಯಮಂತ್ರಿ ಸ್ಥಾನದ ಕಿರೀಟವನ್ನು ನನ್ನ ತಲೆ ಮೇಲೆ ಇಟ್ಟು ಹರಸಿ ಅವರ ಸೇವೆ ಮಾಡುವ ಭಾಗ್ಯವನ್ನು ನನಗೆ ಕರುಣಿಸಿದ್ದಾರೆ. ಆ ಮತದಾರ ದೇವರುಗಳಿಗೆ ನಾನು ಆಭಾರಿಯಾಗಿದ್ದೇನೆ.
ಮೂರನೆಯದಾಗಿ, ನನ್ನ ಸೈದ್ಧಾಂತಿಕ ಬದ್ಧತೆ ಮತ್ತು ರಾಜಕೀಯ ಹೋರಾಟಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್ ಪಕ್ಷವು ನನ್ನ ಮೇಲೆ ವಿಶ್ವಾಸ ಇರಿಸಿ ನನ್ನನ್ನು ಬರಮಾಡಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಆ ಮೂಲಕ ಈ ನಾಡಿನ ಜನತೆಗೆ ನಾನು ನಂಬಿರುವ ತತ್ವಾದರ್ಶಗಳ ಅನುಸಾರ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಈ ಕಾರಣಕ್ಕಾಗಿ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಸದಾ ಆಭಾರಿಯಾಗಿರುತ್ತೇನೆ.
ನಾನೆಂದೂ ರಾಜಕಾರಣವನ್ನು ಅಧಿಕಾರದ ದಂಡ ಎಂದಾಗಲಿ, ವ್ಯಾಪಾರದ ಗಲ್ಲಾ ಪೆಟ್ಟಿಗೆ ಎಂದಾಗಲಿ ತಿಳಿದುಕೊಂಡವನಲ್ಲ, ಅದು ಬಡವರಿಗೆ, ಶೋಷಿತರಿಗೆ, ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ತಿಳಿದುಕೊಂಡವನು. ಈ ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದಲೇ ವಕೀಲನಾಗಿ ಸೇವೆ ಮಾಡುತ್ತಿದ್ದ ನಾನು ರಾಜಕಾರಣವನ್ನು ಪ್ರವೇಶ ಮಾಡಿದವನು.
ನನ್ನ 77 ವರ್ಷಗಳ ಜೀವನ ಪಯಣದಲ್ಲಿ ಹಲವಾರು ವ್ಯಕ್ತಿಗಳು ಪ್ರೀತಿ-ವಿಶ್ವಾಸದಿಂದ ಕೈಹಿಡಿದು ಮುನ್ನಡೆಸಿದ್ದಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಈ ಪುಸ್ತಕದಲ್ಲಿ ಮೊದಲ ಬರವಣಿಗೆ ಮಾಡಿದ್ದು ವೀರ ಕುಣಿತವನ್ನು ಕಲಿಯುತ್ತಾ ಸಮಯ ಸಿಕ್ಕಾಗ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಿದ್ದ ನನ್ನನ್ನು ಶಾಲೆಗೆ ಕರೆದೊಯ್ದು ವಿದ್ಯೆ ಕಲಿಯುವ ಅವಕಾಶ ನೀಡಿದವರು ರಾಜಪ್ಪ ಮಾಸ್ತರ್.
ವಕೀಲನಾಗಿದ್ದ ನನ್ನಲ್ಲಿನ ಸೇವಾಕಾಂಕ್ಷೆಯನ್ನು ಗುರುತಿಸಿ ಸಮಾಜವಾದದ ಪಾಠ ಮಾಡಿ, ರಾಜಕಾರಣಿಗಳಿಗೆ ಇರಬೇಕಾದ ಸೈದ್ಧಾಂತಿಕ ಬದ್ಧತೆ, ಜನಪರ ಕಾಳಜಿ ಮತ್ತು ಹೋರಾಟದ ಗುಣವನ್ನು ಕಲಿಸಿದವರು ರೈತನಾಯಕ ಎಂ.ಡಿ.ನಂಜುಂಡಸ್ವಾಮಿ
ಮೊದಲ ಬಾರಿ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನನ್ನನ್ನು ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಲ್ಲದೆ ಎರಡನೇ ಬಾರಿ ಶಾಸಕನಾದ ನನ್ನನ್ನು ಸಚಿವನನ್ನಾಗಿ ಮಾಡಿದವರು ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.
ಇವರೆಲ್ಲರ ನೆರವು, ಕಾಳಜಿ ಮತ್ತು ಮಾರ್ಗದರ್ಶನಗಳು ಇಲ್ಲದೆ ಹೋಗಿದ್ದರೆ ನಾನು ಇಷ್ಟು ದೂರ ಸಾಗಿ ಬರುತ್ತಿರಲಿಲ್ಲ ಮತ್ತು ಇಷ್ಟು ಎತ್ತರಕ್ಕೆ ಏರಲು ಕೂಡಾ ಆಗುತ್ತಿರಲಿಲ್ಲ ಎನ್ನುವುದನ್ನು ವಿನಮ್ರವಾಗಿ ನಿವೇದಿಸಬಯಸುತ್ತೇನೆ.
ನಾನು ದುಡ್ಡು, ಆಸ್ತಿಪಾಸ್ತಿ ಮಾಡಲು ರಾಜಕಾರಣಿ ಆದವನಲ್ಲ. ಮತದಾರ ದೇವರುಗಳು ಅಧಿಕಾರದ ಮೂಲಕ ಅವಕಾಶ ನೀಡಿದಾಗೆಲ್ಲ ಅವರ ಕಲ್ಯಾಣಕ್ಕಾಗಿ ಶ್ರಮಿಸಿದ್ದೇನೆ. ಈ ಸಂದರ್ಭದಲ್ಲಿ ನನ್ನ ಸಾಧನೆಗಳ ದಾಖಲೆಗಳನ್ನು ನಾನು ನಿಮ್ಮ ಮುಂದೆ ಇಟ್ಟ ನನ್ನನ್ನು ಸಾಬೀತುಪಡಿಸುವ ವ್ಯರ್ಥಪ್ರಯತ್ನವನ್ನು ನಾನು ಮಾಡುವುದಿಲ್ಲ. ಅವೆಲ್ಲವೂ ತೆರೆದ ಪುಸ್ತಕದ ರೀತಿಯಲ್ಲಿ ರಾಜ್ಯದ ಜನತೆಯ ಕಣ್ಣಮುಂದಿದೆ.
ಜಾತಿ, ದುಡ್ಡು ಮತ್ತು ತೋಳ್ಬಲಗಳ ನೆರವಿಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ಜನಜನಿತವಾಗಿದೆ. ಇದು ಈ ಕಾಲದ ಸತ್ಯವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವದಂತಹ ಸಂವಿಧಾನದ ಆಶಯಗಳಿಗೆ ಬದ್ದರಾಗಿ ರಾಜಕಾರಣ ಮಾಡುವುದು ಎಷ್ಟೊಂದು ಕಷ್ಟದ ಕೆಲಸ ಎನ್ನುವ ಅನುಭವ ನಾಲ್ಕುವರೆ ದಶಕಗಳ ರಾಜಕೀಯ ಪಯಣದಲ್ಲಿ ನನಗಾಗಿದೆ.
ನನ್ನ ರಾಜಕೀಯ ವಿರೋಧಿಗಳು ರಾಜಕಾರಣಕ್ಕಿಂತ ಬಹುದೂರ ಇದ್ದುಕೊಂಡು ಕುಟುಂಬದ ಪಾಲನೆ-ಪೋಷಣೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡ ನನ್ನ ಪತ್ನಿಯ ವಿರುದ್ದವೂ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ಆದರೆ ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗ ಬೇಡ, ಜನಸೇವೆಯ ಪಥದಿಂದ ಹಿಂದಡಿ ಇಡಬೇಡ ಎಂದು ನನ್ನ ಅಂತಾರಾತ್ಮ ಎಚ್ಚರಿಸಿತು. ಅನ್ಯಾಯದ ವಿರುದ್ಧ ನ್ಯಾಯದ ಹೋರಾಟವನ್ನು ಮುಂದುವರಿಸಿ ಆರೋಪಿತ ಕಳಂಕವನ್ನು ನಿವಾರಿಸಿಕೊಂಡು ನಿರಾಳನಾದೆ.
ಈ ಸಂಘರ್ಷದ ಹಾದಿಯಲ್ಲಿ ನಾನೆಂದೂ ನಂಬಿದ ಮೌಲ್ಯಗಳ ಜೊತೆ ರಾಜಿಮಾಡಿಕೊಂಡಿಲ್ಲ. ನಂಬಿದ ಜನತೆಗೆ ದ್ರೋಹ ಬಗೆದಿಲ್ಲ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಿಲ್ಲ. ಹೋರಾಟವನ್ನೇ ಬದುಕಾಗಿಸಿ ಸ್ವೀಕರಿಸಿ ಇಷ್ಟು ದೂರ ಬಂದಿದ್ದೇನೆ.
ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರ ಪಾಲಿನ ಸತ್ಯ ಇದು. ಈ ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆ ಇರಲಿ ಈ ಹೋರಾಟ ಮುಂದುವರಿಯಲಿದೆ.
ನಾನು ರಾಜಕಾರಣಕ್ಕೆ ಪ್ರವೇಶ ಮಾಡಿದಾಗ ನುಡಿದಂತೆ ನಡೆಯಬೇಕು, ಜನತೆ ಇಟ್ಟಿರುವ ವಿಶ್ವಾಸಕ್ಕೆ ಭಂಗ ಉಂಟು ಮಾಡಬಾರದೆಂಬ ಪ್ರಮಾಣವನ್ನು ಮನಸ್ಸಿನೊಳಗೆ ಮಾಡಿದ್ದೆ. ಜನರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಅದನ್ನು ತ್ರಿಕರಣಪೂರ್ವಕವಾಗಿ ಪಾಲಿಸಿದ್ದೇನೆ ಎಂಬ ವಿಶ್ವಾಸ ನನಗಿದೆ. ನುಡಿದಂತೆಯೇ ನಡೆದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.
ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವರಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಮೂಲಸೌಲಭ್ಯಗಳು ವೃದ್ಧಿಯಾಗಬೇಕು. ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು- ಇದು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವಾಗ ನಾನು ಕಂಡ ಕನಸು.
ಆ ಕನಸು ನನಸಾಗುವ ದಾರಿಯಲ್ಲಿ ಕರ್ನಾಟಕ ಭರದಿಂದ ಮುನ್ನಡೆದಿದೆ. ಇಂದು ಕರ್ನಾಟಕವು ದೇಶದಲ್ಲಿಯೇ ತಲಾದಾಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಮೇಲಕ್ಕೇರುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಜನತೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದ್ದೇವೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣಗೊಳ್ಳುತ್ತಿದೆ, ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ, ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಗಳು ಎದುರಾದರೂ ಸಮರ್ಥವಾಗಿ ಎದುರಿಸಿದ್ದೇವೆ, ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಿಂದಾಗಿ ಸರ್ಕಾರದ ಬಗ್ಗೆ ರೈತರಲ್ಲಿ ಭರವಸೆ ಮೂಡಿದೆ. ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಅವರಿಗೆ ಸಮಾಧಾನ ತಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲದ ನಮ್ಮ ನಿಲುವು ಕನ್ನಡಿಗರ ಮನ ಗೆದ್ದಿದೆ.
ನಾಡಿನ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್‌ಗಳನ್ನು ಮಂಡಿಸುವ ಅವಕಾಶ ಲಭ್ಯವಾಗಿದ್ದರ ಬಗ್ಗೆ ನನಗೆ ತೃಪ್ತಿ ಇದೆ. ನಾನು ಮಂಡಿಸಿದ ಹದಿನೇಳು ಬಜೆಟ್‌ಗಳಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಪರವಾದ ಯೋಜನೆಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿದ್ದೇನೆ.
ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆ ಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ.
ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ನನ್ನನ್ನು ತಮ್ಮ ದನಿಯಾಗಿಸಿಕೊಂಡಿದ್ದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನು ನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ.
ನನ್ನನ್ನು ನಾಯಕನನ್ನಾಗಿ ಸ್ವೀಕರಿಸಿ ಬೆಂಬಲ ನೀಡಿದ ನನ್ನ ಎಲ್ಲ ಶಾಸಕ ಮಿತ್ರರಿಗೆ, ಸರ್ಕಾರದ ಯಂತ್ರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಿದ ಅಧಿಕಾರಿವರ್ಗಕ್ಕೆ ನಾನು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ.. ಮತ್ತೊಮ್ಮೆ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮ | ಗ್ರಾಮ ಆಡಳಿತಾಧಿಕಾರಿ ಕೆ.ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹು ಗ್ರಾಮಗಳಲ್ಲಿ ಪ್ರಧಾನಮತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗ್ರಾಮ ಆಡಳಿತಾಧಿಕಾರಿ ಕೋಸಗಿ ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹುಲಿಕಟ್ಟೆ ಸರ್ಕಲ್ ವ್ಯಾಪ್ತಿಯ ಹಾರಕನಾಳು, ಹುಲಿಕಟ್ಟೆ, ಚನ್ನಳ್ಳಿ ತಾಂಡ, ಈಶಾಪುರ, ಹಾರಕನಾಳು ಸಣ್ಣತಾಂಡ, ಹಾರಕನಾಳು ದೊಡ್ಡತಾಂಡ, ಕನ್ನಾಯಕನಹಳ್ಳಿ ಸೇರಿ ಒಟ್ಟು 07 ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೋಸಗಿ ಸುರೇಶ ಎಂಬುವವರು ರೈತರೊಂದಿಗೆ ಒಪ್ಪಂದ ಮಾಡಿಕೊಂಡು, ಪ್ರತಿ ವರ್ಷ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಬೆಳೆಗಳಿಗೆ ತಾವೇ ಎಲ್ಲಾ ರೈತರ ಜಮೀನಿಗೆ ಬೆಳೆ ವಿಮೆ ಹಣ ಪಾವತಿಸುವ ಮೂಲಕ ನಿರಂತರವಾಗಿ 3 ವರ್ಷಗಳಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತ ಬಂದಿರುವ ಮಾಹಿತಿಯು ಸಾಕಷ್ಟು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ಈ ಬಗ್ಗೆ ರೈತರು ಸಾಕಷ್ಟು ಪ್ರತಿಭಟನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೂ ದೂರು ನೀಡಿರುತ್ತಾರೆ.
ಪ್ರಧಾನಮತ್ರಿ ಫಸಲ್ ಭೀಮಾ ಯೋಜನೆಯಲ್ಲಿನ ಭ್ರಷ್ಟಚಾರದ ಪ್ರಮುಖ ರೂವಾರಿಯಾದ ಕೋಸಗಿ ಸುರೇಶ ಎಂಬುವವರು ತಾವು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಗುಂಡಗತ್ತಿ ಸರ್ಕಲ್ ವ್ಯಾಪ್ತಿಯ ಬಹು ಗ್ರಾಮಗಳಲ್ಲಿಯೂ ಫಸಲ್ ಭೀಮಾ ಯೋಜನೆಯಲ್ಲಿ (ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆ) ಸಾಕಷ್ಟು ಅವ್ಯವಹಾರ ನಡೆಸುತ್ತ ಬಂದಿರುತ್ತಾರೆ ಎಂಬ ಅಧಿಕೃತ ಮಾಹಿತಿ ಇರುತ್ತದೆ. ಇವರು ತಾವು ಕೆಲಸ ಮಾಡಿದ ಎಲ್ಲಾ ಸ್ಥಳಗಳಲ್ಲಿಯೂ ಸಾಕಷ್ಟು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಸಾಕಷ್ಟು ರೈತರಿಗೆ ಸರ್ಕಾರಿ ಯೋಜನೆಗಳನ್ನು ಮಾಡಿಸಿಕೊಡುವುದಾಗಿ ಕೋಟ್ಯಾಂತರ ರೂಪಾಯಿ ಲಂಚ ಪಡೆದಿರುತ್ತಾರೆ. ಹಾಗೆಯೇ ಬಡವರು, ಅಸಹಾಯಕರ ಜಮೀನುಗಳನ್ನು ಪ್ರಬಲರ ಹೆಸರಿಗೆ ವರ್ಗಾಹಿಸುವ ನೀಚ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.
ಬಡವರ ಜಮೀನುಗಳನ್ನು ಪ್ರಬಲರ ಹೆಸರಿಗೆ ಮಾಡಿದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ನಂತರ ಮೂಲ ಖಾತೆದಾರರಿಗೆ ವರ್ಗಾವಣೆಯಾಗಿರುವ ಸಾಕಷ್ಟು ನಿದರ್ಶನಗಳಿಗೆ. ಆದರೆ ಯಾವುದೇ ಒಂದು ಪ್ರಕರಣದಲ್ಲಿಯೂ ಈ ಅಧಿಕಾರಿಗೆ ಶಿಕ್ಷೆಯಾಗದಂತೆ ಹಿರಿಯ ಅಧಿಕಾರಿಗಳರಿವರನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಈ ಕಾರಣಕ್ಕಾಗಿಯೇ ಫಸಲ್ ಭೀಮಾ ಯೋಜನೆಯಂತಹ ದೊಡ್ಡ ಮಟ್ಟದ ಹಗರಣಕ್ಕೂ ಮುಂದಾಗಿರುತ್ತಾರೆ.
ಈ ಎಲ್ಲಾ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಫಸಲ್ ಭೀಮಾ ಯೋಜನೆಯ ಅವ್ಯವಹಾರದಲ್ಲಿ ಭಾಗಿಯಾಗಿರುವ ಹಾರಕನಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಎಂ.ಶಿವಣ್ಣ, ಕಂದಾಯ ನಿರೀಕ್ಷಕ ಶ್ರೀ ರಾಘವೇಂದ್ರ, ಹರಪನಹಳ್ಳಿ ತಾಲ್ಲೂಕು ಉಪ ತಹಶೀಲ್ದಾರರಾದ ಶ್ರೀಮತಿ ಕವಿತಾ, ತಹಶೀಲ್ದಾರರಾದ ಶ್ರೀ ಬಿ.ವಿ. ಗಿರೀಶ್‌ಬಾಬು, ಉಪವಿಭಾಗಾಧಿಕಾರಿಯಾದ ಶ್ರೀ ಸುರೇಶ್‌ಕುಮಾರ್ ಟಿ, ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ವೈ.ಹೆಚ್. ಚಂದ್ರಶೇಖರ್, ವಿಜಯನಗರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಮನ್ನಿಕೇರಿ ಇವರುಗಳ ವಿರುದ್ಧ ದೂರು ದಾಖಲಿಸಿ, ಈ ಎಲ್ಲಾ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂಬುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಭವ್ಯ ‘ವಜ್ರ ಮಹೋತ್ಸವ’ ಆಚರಣೆ; ಉಪರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಆಗಮನ
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜು ತನ್ನ 75 ವರ್ಷಗಳ ಅತ್ಯುತ್ತಮ ಶೈಕ್ಷಣಿಕ ಸೇವೆಯ ನೆನಪಿಗಾಗಿ (1951-2026) ಹಮ್ಮಿಕೊಂಡಿರುವ ಭವ್ಯ “ವಜ್ರ ಮಹೋತ್ಸವ ಕಾರ್ಯಕ್ರಮವು ಮೇ 29 ಮತ್ತು 30 ರಂದು ಕಾಲೇಜಿನ ಆವರಣದಲ್ಲಿ ಜರುಗಲಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಂಗಸಂಸ್ಥೆಯಾಗಿರುವ ಈ ಕಾಲೇಜಿನ ಉದ್ಘಾಟನಾ ಸಮಾರಂಭವು ಮೇ 29 ರ ಶುಕ್ರವಾರ ಮಧ್ಯಾಹ್ನ 12:00 ಗಂಟೆಗೆ ಆರಂಭವಾಗಲಿದ್ದು, ದೇಶ ಹಾಗೂ ರಾಜ್ಯದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿ.ಟಿ.ಯು. ಕುಲಾಧಿಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂ ವಿಜ್ಞಾನ , ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್, ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್, ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಂಡಳಿ (FTE&M) ಅಧ್ಯಕ್ಷರಾದ ಪ್ರೊ. ಟಿ. ಜಿ. ಸಿತಾರಾಮ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ವಿ.ಟಿ.ಯು ಕುಲಪತಿಗಳಾದ ಡಾ. ಎಸ್. ವಿದ್ಯಾಶಂಕರ್, ರಿಜಿಸ್ಟ್ರಾರ್ ಡಾ. ಪ್ರಸಾದ್ ಬಿ ರಾಂಪುರೆ , ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಉಜ್ವಲ್ ಯು.ಜೆ , ಹಣಕಾಸು ಅಧಿಕಾರಿ ಡಾ. ಪ್ರಶಾಂತ್ ನಾಯಕ್ , ಯು.ಬಿ.ಡಿ.ಟಿ.ಇ ಪ್ರಾಂಶುಪಾಲರಾದ ಡಾ. ಡಿ. ಪಿ. ನಾಗರಾಜಪ್ಪ ಮತ್ತು ವಿವಿ ಪದಾಧಿಕಾರಿಗಳು ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಶಾಸಕರುಗಳಾದ ಶಾಂತನಗೌಡ ಡಿ.ಜಿ., ಬಿ. ದೇವೇಂದ್ರಪ್ಪ, ಬಿ. ಪಿ. ಹರೀಶ್, ಶ್ರೀ ಬಸವರಾಜು ವಿ. ಶಿವಗಂಗಾ, ಕೆ. ಎಸ್. ಬಸವಂತಪ್ಪ, ಸಮರ್ಥ್ ಶಾಮನೂರು, ವಿಧಾನಪರಿಷತ್ ಸದಸ್ಯರುಗಳಾದ ಎಸ್.ಎಲ್. ಭೋಜೆಗೌಡ, ಡಿ.ಎಸ್.ಅರುಣ್, ಡಾ. ಧನಂಜಯ್ ಸರ್ಜಿ, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್ ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕಾಲೇಜಿನ ಹಳೆಯ ವಿದ್ಯಾರ್ಥಿ ಟಿ. ರಘುಮೂರ್ತಿ , ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಕಾಲೇಜಿನ ಹಳೆಯ ವಿದ್ಯಾರ್ಥಿ ಜನಾರ್ಧನ ಸ್ವಾ̧ಮಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ1 day agoಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮ | ಗ್ರಾಮ ಆಡಳಿತಾಧಿಕಾರಿ ಕೆ.ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoವಂಚನೆ | ಗಜೇಂದ್ರಗಡ ಶ್ರೀ ಅನ್ನದಾನೇಶ್ವರ ಐ.ಟಿ.ಐ ಕಾಲೇಜು ಪ್ರಾಂಶುಪಾಲ ಅಮರಪ್ಪ ಗಾಣಿಗೇರ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoದಾವಣಗೆರೆ | ಇಂದು ಕರೆಂಟ್ ಇರಲ್ಲ
-
ದಿನದ ಸುದ್ದಿ2 days agoಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಭವ್ಯ ‘ವಜ್ರ ಮಹೋತ್ಸವ’ ಆಚರಣೆ; ಉಪರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಆಗಮನ
-
ದಿನದ ಸುದ್ದಿ20 hours ago‘ಮತದಾರ ದೇವರು’ ಎಂದ ಸಿದ್ದರಾಮಯ್ಯ




