Connect with us

ದಿನದ ಸುದ್ದಿ

ಬ್ಯಾಂಕುಗಳಲ್ಲಿ ಕನ್ನಡ..!

Published

on

ಲೇಖಕರು : ಎನ್.ಟಿ.ಎರ್ರಿಸ್ವಾಮಿ
 • ಎನ್.ಟಿ.ಎರ‍್ರಿಸ್ವಾಮಿ, ವಿಶ್ರಾಂತ ವಿಭಾಗೀಯ ಪ್ರಬಂಧಕರು,ಕೆನರಾ ಬ್ಯಾಂಕ್,ದಾವಣಗೆರೆ

ನುಷ್ಯ ಮನುಷ್ಯರ ನಡುವೆ ಉತ್ತಮ ಬಾಂಧವ್ಯ ಏರ್ಪಡಲು, ಒಬ್ಬರು ಮತ್ತೊಬ್ಬರನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಅವರಾಡುವ ಭಾಷೆ ಮಹತ್ತರ ಪಾತ್ರವಹಿಸಬಲ್ಲದು. ಅದು ಸರಳವಾಗಿ, ಸಹಜವಾಗಿ ಇಬ್ಬರಿಗೂ ಅರ್ಥವಾಗುವಂತಿರಬೇಕು. ಅದು ಸಮೂಹದ ಭಾಷೆಯಾದಾಗ, ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟುವಲ್ಲಿಯೂ ಅದು ಪ್ರಭಾವ ಉಂಟು ಮಾಡಬಲ್ಲದು.

ಮಾನವ ವಿಕಾಸದ ಹಾದಿಯಲ್ಲಿ ಭಾಷೆ ಉಂಟು ಮಾಡುವ ಸಂಚಲನವನ್ನು ನಾವು ಯುಗ ಯುಗಗಳಿಂದಲೂ ಗಮನಿಸುತ್ತಾ ಬಂದಿದ್ದೇವೆ. ಹಾಗೆ ನೋಡಿದರೆ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿಯೇ ಪ್ರಮುಖವಾದ ಭಾಷೆ ಕನ್ನಡ. ಇಲ್ಲಿನ ನೆಲ-ಜಲ, ಗುಡ್ಡ-ಬೆಟ್ಟ, ಕಾಡು-ಮೇಡು, ಜನ-ಜಾನುವಾರುಗಳ ಮೇಲೆ ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಮಾಡುತ್ತಾ ಬಂದಿರುವ ಮೋಡಿ ಅಮೋಘವಾದುದು.

ಕನ್ನಡಕ್ಕೆ ಯಾವ ರೀತಿಯ ಪ್ರಾಚೀನತೆಯಿದೆಯೋ, ಅದೇ ರೀತಿಯ ಪ್ರಾಚೀನತೆಯೂ ಕರ್ನಾಟಕದ ಬ್ಯಾಂಕಿAಗ್ ಕ್ಷೇತ್ರಕ್ಕೂ ಇದೆ ಎಂಬುದು ಒಂದು ವಿಶೇಷ ಹಾಗೂ ಹೆಗ್ಗಳಿಕೆಯ ಸಂಗತಿ. ದೇಶದಲ್ಲಿಯೇ ಪ್ರಥಮವಾಗಿ ಸಹಕಾರಿ ಬ್ಯಾಂಕುಗಳು. ಖಾಸಗಿ ಬ್ಯಾಂಕುಗಳು, ರಾಷ್ಟ್ರೀಕೃತವಾದ ಬ್ಯಾಂಕುಗಳು, ರಾಷ್ಟ್ರೀಕರಣವಾಗಬಹುದಾದ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಉದಯವಾಗಿದ್ದು ಪ್ರಥಮವಾಗಿ ಕನ್ನಡದ ನೆಲದಲ್ಲಿಯೇ ಎಂಬುದನ್ನು ನಾವು ಮರೆಯಲಾಗದು.

ಹಿಂದೆ ಕನ್ನಡ ಭಾಷೆಯನ್ನು ಬ್ಯಾಂಕುಗಳಲ್ಲಿ ಬಳಸುವ ಬಗ್ಗೆ ಯಾವುದೇ ತಂಟೆ-ತಕರಾರು ಹಾಗೂ ತೊಂದರೆಗಳು ಇರಲಿಲ್ಲ. ಕನ್ನಡ ನೆಲದಲ್ಲಿಯೇ ಹುಟ್ಟಿ ಬೆಳೆದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕು, ಕಾರ್ಪೋರೇಷನ್ ಬ್ಯಾಂಕು, ಯಥೇಚ್ಛವಾಗಿ ಕನ್ನಡವನ್ನು ಬಳಸುತ್ತಿದ್ದವು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.

ಅದೂ ಅಲ್ಲದೆ ಭಾರತೀಯ ಸ್ಟೇಟ್ ಬ್ಯಾಂಕ್, ಐ.ಸಿ.ಐ.ಸಿ.ಐ. ನಂತಹ ಬ್ಯಾಂಕುಗಳು ಕೂಡ ಪ್ರಾರಂಭಿಕ ಹಂತದಲ್ಲಿ ಕನ್ನಡದಲ್ಲಿಯೇ ಹೆಚ್ಚು ವ್ಯವಹರಿಸುವ ಪರಿಪಾಟವನ್ನು ಹೊಂದಿದ್ದವು ಎಂದರೆ ನಮಗೆ ಆಶ್ಚರ್ಯವಾಗದಿರದು. ಆದರೆ ಖಾಸಗೀಕರಣ, ಆಧುನೀಕರಣ, ಯಂತ್ರೀಕರಣ, ಜಾಗತೀಕರಣದ ಪ್ರಭಾವಕ್ಕೆ ಸಿಲುಕಿದ ಬ್ಯಾಂಕುಗಳು ಹಂತ ಹಂತವಾಗಿ ಸ್ಥಳೀಯ ಭಾಷೆಯಿಂದ ವಿಮುಖವಾಗುವ ಸನ್ನವೇಶ ಎದುರಾಯಿತು.

ಇಂದು ಗಣಕೀಕರಣದ ಉಚ್ಛ್ರಾಯ ಸ್ಥಿತಿಯಲ್ಲಿರುವ ಬ್ಯಾಂಕುಗಳು ಮನುಷ್ಯ-ಮನುಷ್ಯರ ನಡುವೆ ಮಾತನಾಡುವ ಬದಲು ಯಂತ್ರ-ಯಂತ್ರಗಳ ನಡುವೆ ಮಾತನಾಡುವ ಹಂತಕ್ಕೆ ಬಂದು ತಲುಪಿವೆ. ಆ ಯಂತ್ರಗಳ ಭಾಷೆ ಕನ್ನಡವಾಗಿಲ್ಲ, ಬ್ಯಾಂಕಿನವರ ಭಾಷೆಯೂ ಕನ್ನಡವಾಗುತ್ತಿಲ್ಲ, ಬೇರಾವುದೋ ಭಾಷೆ ಅಂದರೆ ಹಿಂದಿ ಮತ್ತು ಇಂಗ್ಲೀಷ್ ಅಲ್ಲಿ ರಾರಾಜಿಸುವಂತಾಗಿದೆ ಎಂಬುದು ಒಂದು ವಿಪರ್ಯಾಸ.

ನಮಗೆಲ್ಲ ತಿಳಿದಿರುವಂತೆ ಬ್ಯಾಂಕುಗಳಲ್ಲಿನ ದೈನಂದಿನ ವ್ಯವಹಾರ ಗ್ರಾಹಕನಿಗೆ ಅರ್ಥವಾಗುವ ಸ್ಥಳೀಯ ಭಾಷೆಯಲ್ಲಿ ನಡೆದಾಗ ಮಾತ್ರ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಹೆಚ್ಚಿನ ಪ್ರಯೋಜನ ಆಗಬಲ್ಲದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಸರ್ಕಾರದ ಆಡಳಿತ ಭಾಷೆಯೂ ಕನ್ನಡವೇ ಹೌದು. ನೆಲದ ಭಾಷೆಯಲ್ಲಿಯೇ ವ್ಯವಹರಿಸುವುದು ಎಲ್ಲರ ವ್ಯವಹಾರಿಕ ಧರ್ಮವಾಗಬೇಕು. ಇದರಿಂದ ಬ್ಯಾಂಕುಗಳೂ ಹೊರತೇನಲ್ಲ. ಅಲ್ಲದೆ ಕನ್ನಡದ ಭಾಷೆಗೆ ಸಂವಿಧನಾತ್ಮಕ ಚೌಕಟ್ಟಿದೆ. ಎಲ್ಲ 28 ಭಾಷೆಗಳೂ ರಾಷ್ಟç ಭಾಷೆಗಳೇ ಸ್ಥಳೀಯ ಭಾಷೆ ಬಳಕೆಗೆ ಜನರಿಗೆ ಸಂಪೂರ್ಣ ಹಕ್ಕಿದೆ ಎಂಬುದನ್ನು ಸಂವಿಧಾನ ಪ್ರತಿಪಾದಿಸುತ್ತದೆ.

ಈ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಪ್ರಜೆಗಳು, ಪ್ರಭುಗಳು ಪಾಲಿಸುವ ಅನಿವಾರ್ಯತೆ ಈಗ ಹೆಚ್ಚಾಗಿದೆ. ಆದರೆ ಅದಾಗುತ್ತಿಲ್ಲ. ಬದಲಾಗಿ ಹಿಂದಿ, ಇಂಗ್ಲೀಷುಗಳನ್ನು ಜನರ ಮೇಲೆ ಹೇರಲಾಗುತ್ತಿದೆ ಎಂಬ ಭಾವನೆ ಈಗ ಎಲ್ಲೆಲ್ಲೂ ಒಡಮೂಡಿದೆ. ಬ್ಯಾಂಕುಗಳು ತ್ರಿಭಾಷ ಸೂತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಿಜರ್ವ್ ಬ್ಯಾಂಕಿನ ಆದೇಶವಿದ್ದರೂ ಕನ್ನಡದ ಭಾಷೆ ಮೂರನೆಯ ಹಂತಕ್ಕೆ ತಳ್ಳಲ್ಪಡುತ್ತಿದೆ ಎಂದು ಯಾರಿಗಾದರೂ ಅರ್ಥ ಆಗುತ್ತಿದೆ. ಬ್ಯಾಂಕಿನ ಸಿಬ್ಬಂದಿಯದೂ ಕೂಡ ದೊಡ್ಡ ಸಮಸ್ಯೆಯೇ.

ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಬ್ಯಾಂಕುಗಳಲ್ಲಿ ದುರ್ಬಿನು ಹಾಕಿ ಹುಡುಕುವ ಅಪಾಯ ಎದುರಾಗಿದೆ. ನೂರು ಜನ ಹೊಸದಾಗಿ ನೌಕರಿಗೆ ಸೇರಿದರೆ ಅದರಲ್ಲಿ ಬೆರೆಳೆಣಿಕೆಯಷ್ಟು ಜನ ಮಾತ್ರ ಕನ್ನಡ ಬಲ್ಲವರು. ಉಳಿದ ಬಹುಪಾಲು ಬ್ಯಾಂಕು ನೌಕರಿ ಅನ್ಯ ಭಾಷಿಕರ ಪಾಲಾಗುತ್ತಿವೆ. ಅವರಿಗೆ ಇಲ್ಲಿನ ಸಂಸ್ಕೃತಿ, ನಡೆ-ನುಡಿ, ನೆಲದ, ಇಲ್ಲಿನ ಜನರ ಸಂಪ್ರೀತಿ ಯಾವುದೂ ಬೇಡವಾಗಿದೆ ಎಂಬ ಪರಿಸ್ಥಿತಿ. ಕನ್ನಡದ ಜನರು ಎಚ್ಚೆತ್ತುಕೊಳ್ಳದ ಹೊರತು ಇಂತಹ ಅಪಾಯಗಳಿಗೆ ನಮಗೆ ಉತ್ತರ ಸಿಗದು.

ಕನ್ನಡವನ್ನು ಬ್ಯಾಂಕುಗಳಲ್ಲಿ ಬಳಸದೇ ಇರಲು ಯಾವ ಸಂವಿಧಾನಾತ್ಮಕ ಬಿಕ್ಕಟ್ಟುಗಳೂ ಇಲ್ಲ. ಆದರೆ ಬ್ಯಾಂಕುಗಳಿಗೆ ಹಾಗೂ ಜನರಿಗೆ ಕನ್ನಡ ಬಳಕೆಯ ಬಗ್ಗೆ ಬದ್ಧತೆಯ ಕೊರತೆ ಇದೆ ಎಂದು ನನಗೆ ಅನ್ನಿಸುತ್ತಿದೆ. 40ವರ್ಷಗಳ ಸುದೀರ್ಘ ಬ್ಯಾಂಕ್ ಸೇವೆಯ ಅವಧಿಯಲ್ಲಿ ನಾನು ಕಂಡುಕೊಂಡ ಒಂದು ಸರಳ ಸತ್ಯವೆಂದರೆ ಬ್ಯಾಂಕು ಎಂದಾಕ್ಷಣ ಜನರು ಅನ್ಯ ಭಾಷೆಯ ಕಡೆ ಮುಖಮಾಡಿ ನಿಲ್ಲುವಂತಹುದು ! ನಾವು ಇದರಿಂದ ಹೊರಬರಬೇಕಿದೆ. ಅನೇಕ ಬ್ಯಾಂಕುಗಳು ಕನ್ನಡವನ್ನು ಬಳಸಲು ಹಲವಾರು ಉಪಕ್ರಮಗಳನ್ನೂ ಕೈಗೊಂಡಿವೆ.

ಆದರೆ ಅಂತಹ ಉಪಕ್ರಮಗಳನ್ನು ಸಿಬ್ಬಂದಿ, ಅಧಿಕಾರಿ ಹಾಗೂ ಜನಸಾಮಾನ್ಯರು ಬಳಸದೇ ಹೋದಲ್ಲಿ ಅವು ತುಕ್ಕು ಹಿಡಿಯಬಹುದು ಅಷ್ಟೇ. ಕನ್ನಡವನ್ನು ಬ್ಯಾಂಕುಗಳಲ್ಲಿ ಸುಲಲಿತವಾಗಿ ಬಳಸಲು ಬ್ಯಾಂಕು ಹಾಗೂ ಗ್ರಾಹಕ ಮಹೋದಯರು ಸಮ ಸಮನಾಗಿ ಜವಾಬ್ದಾರಿ ಹೊತ್ತಾಗ ಮಾತ್ರ ಭಾಷೆಯ ಬಳಕೆ ಹಸನಾಗಬಲ್ಲದು.

ಬ್ಯಾಂಕುಗಳಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಸಲು ಇರುವ ಮಾರ್ಗೋಪಾಯಗಳನ್ನು ಇಲ್ಲಿ ಚಿಂತಿಸಲಾಗಿದೆ.

 1. ಜನಸಾಮಾನ್ಯರಿಗೆ ಬ್ಯಾಂಕಿನ ಎಲ್ಲ ಸೌಲಭ್ಯಗಳು ಸರಳವಾಗಿ, ಸುಲಭವಾಗಿ ದೊರೆಯುವಂತಾಗಲು ಎಲ್ಲ ಮಾಹಿತಿಯನ್ನು ಕನ್ನಡದಲ್ಲಿಯೇ ಮುದ್ರಿಸಿ ಒದಗಿಸುವುದು.
 2. ಉಳಿತಾಯ, ಸಾಲ ಮರುಪಾವತಿ, ಡಿಡಿ, ನೆಫ್ಟ್, ಆರ್‌ಟಿಜಿಎಸ್ ಠೇವಣಿ ಮಾಡುವ ಚಲನ್ ಮುಂತಾದವನ್ನು ಕನ್ನಡದಲ್ಲಿಯೂ ಕಡ್ಡಾಯವಾಗಿ ದೊರೆಯುವಂತೆ ಮಾಡುವುದು.
 3. ಕೃಷಿ ಸಾಲ, ಬಂಗಾರ ಸಾಲ, ಮುದ್ರಾಯೋಜನೆ, ಸಣ್ಣ ವ್ಯಾಪಾರ, ಸ್ವಸಹಾಯ ಸಂಘಗಳಿಗೆ ಕೊಡ ಮಾಡುವ ಸಾಲ ಮುಂತಾದ ಸಾಲ ಯೋಜನೆಗಳ ಅರ್ಜಿ ನಮೂನೆಗಳು ಕನ್ನಡದಲ್ಲಿಯೂ ಮುದ್ರಿಸಿಹಂಚುವುದು.
 4. ಎಲ್ಲ ಎಟಿಎಂ ಯಂತ್ರಗಳಲ್ಲಿನ ವ್ಯವಹಾರಿಕ ಸೂಚನೆಗಳನ್ನು ಕನ್ನಡದಲ್ಲಿಯೇ ಕಡ್ಡಾಯವಾಗಿ ಪ್ರದರ್ಶಿಸುವುದು.
 5. ಜನಧನ್ ಖಾತೆ, ಸರಳ ಉಳಿತಾಯ ಖಾತೆ, ಚಾಲ್ತಿ ಖಾತೆ, ಠೇವಣಿ ಖಾತೆಗಳ ಅರ್ಜಿ ನಮೂನೆಗಳನ್ನು ತಪ್ಪದೇ ಕನ್ನಡದಲ್ಲಿ ಮುದ್ರಿಸಿ ಬಳಸುವುದು.
 6. ಸಾಲ ಮಸೂಲಾತಿಗಾಗಿ ಬ್ಯಾಂಕುಗಳು ನೀಡುವ ತಗಾದೆ ನೋಟೀಸು ಕನ್ನಡದಲ್ಲಿ ನೀಡಿದರೆ ಒಳಿತು. ಇದರಿಂದ ಗ್ರಾಹಕ ತನ್ನದೇ ಭಾಷೆಯಲ್ಲಿ ವಿಷಯ ತಿಳಿಯುವುದರ ಮೂಲಕ ತಕ್ಷಣ ಸ್ವಂದಿಸಲು ಸಾಧ್ಯವಾಗಬಲ್ಲದು.
 7. ಬ್ಯಾಂಕಿನ ದೈನಂದಿಕ ವ್ಯವಹಾರದಲ್ಲಿ ಬಳಸುವ ಸೀಲುಗಳಲ್ಲಿ ಕನ್ನಡದ ಹೆಸರುಗಳು ಬಳಕೆಯಾಗುವಂತೆ ಕ್ರಮ ವಹಿಸುವುದು.
 8. ಬ್ಯಾಂಕಿನ ಒಳ ಆವರಣದಲ್ಲಿ ಇರುವ ಎಲ್ಲ ಸೂಚನಾ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವುದು.
 9. ಬ್ಯಾಂಕಿನ ಹೊರ ಆವರಣದಲ್ಲಿ ಇರುವ ದೊಡ್ಡ ಬೋರ್ಡ್ಗಳಲ್ಲಿ ದೊಡ್ಡದಾಗಿಯೇ ಕನ್ನಡವನ್ನು ಬರೆಸುವುದು. ಕಾನೂನಾತ್ಮಕವಾಗಿ ಶೇಕಡಾ60% ಕ್ಕಿಂತ ಹೆಚ್ಚು ಕನ್ನಡವನ್ನು ಅಲ್ಲಿ ಬಳಸಬೇಕೆಂಬುದನ್ನು ಕಡ್ಡಾಯವಾಗಿ ಬಳಸುವುದು.
 10. ಬ್ಯಾಂಕ್ ಅಧಿಕಾರಿಗಳು, ವ್ಯವಸ್ಥಾಪಕರು ಮುಂತಾದವರ ಪದನಾಮದ ಫಲಕಗಳನ್ನು ಕನ್ನಡದಲ್ಲಿಯೇ ಬರೆಸುವುದು.
 11. ಅನ್ಯಭಾಷಿಕ ಅಧಿಕಾರಿ / ಸಿಬ್ಬಂದಿ ಇದ್ದಲ್ಲಿ ನಿರ್ದಿಷ್ಟ ಗಡುವಿನ ಒಳಗಾಗಿ ಅವರು ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತಹ ವಾತಾವರಣ ನಿರ್ಮಿಸುವುದು.
 12. ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ “ಕನ್ನಡ ಘಟಕ / ಕನ್ನಡ ಜಾಗೃತಿ ಸಮಿತಿ” ಯನ್ನು ತೆರೆಯುವುದು. ಘಟಕ/ ಸಮಿತಿಯ ಮೂಲಕ ನಿರಂತರವಾಗಿ ಕನ್ನಡದ ಚಟುವಟಿಕೆಗಳನ್ನು ನಡೆಸುವುದು.
 13. ಶಾಖೆ ನೀಡುವ ಜಾಹೀರಾತು ಪ್ರಕಟಣೆ, ಹರಾಜು ನೋಟೀಸು ಮುಂತಾದವನ್ನು ಕನ್ನಡದಲ್ಲಿಯೂ ತಪ್ಪದೇ ನೀಡುವುದು.
 14. ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಹೆಚ್ಚು ಹೆಚ್ಚಾಗಿ ಕನ್ನಡದಲ್ಲಿಯೇ ವ್ಯವಹರಿಸಬಹುದು /ಮಾತನಾಡಬಹುದು. ಅದರಿಂದ ಗ್ರಾಹಕರಿಗೆ ಬ್ಯಾಂಕಿನ ಬಗ್ಗೆ, ಅಂತಹ ಅಧಿಕಾರಿಯ ಬಗ್ಗೆ ಆತ್ಮೀಯ ಭಾವನೆ ಮೂಡಬಲ್ಲದು.
 15. ಕನ್ನಡದ ಪತ್ರಕ್ಕೆ ಕನ್ನಡದಲ್ಲಿಯೇ ಉತ್ತರಿಸುವ ಬದ್ಧತೆಯನ್ನು ಬೆಳೆಸಿಕೊಳ್ಳುವುದು. ಅಂತೆಯೇಗ್ರಾಹಕರು ಕೂಡ ಕನ್ನಡದಲ್ಲಿನ ಉತ್ತರಕ್ಕಾಗಿ ಒತ್ತಾಯಿಸುವುದು.
 16. ಎಲ್ಲ ಸಾಮಾಜಿಕ ಸುರಕ್ಷತಾ ಯೋಜನೆಗಳ ಅರ್ಜಿಗಳನ್ನು ಕನ್ನಡದಲ್ಲಿಯೇ ನೀಡುವುದು.
 17. ಪಾಸ್‌ಬುಕ್‌ಗಳಲ್ಲಿ ಇರುವ ಮಾಹಿತಿ ಪುಟವನ್ನು ಅಂದರೆ ಪ್ರಥಮ ಪುಟವನ್ನು ಕನ್ನಡದಲ್ಲಿಯೂ ಮುದ್ರಿಸುವುದು.
 18. ವಹಿವಾಟಿನ ರವಾನೆ ಸಂದೇಶಗಳನ್ನು ಕನ್ನಡದಲ್ಲಿಯೂ ರವಾನಿಸುವುದು.
 19. ಗ್ರಾಹಕ ಸಭೆ / ಮಾಹಿತಿ ಶಿಬಿರಗಳಲ್ಲಿ ನೀಡುವ ಮಾಹಿತಿ ಕನ್ನಡದಲ್ಲಿಯೇ ನೀಡುವುದು.
 20. ಆರ್ಥಿಕ ಸಾಕ್ಷರತಾ ಕೇಂದ್ರಗಳು ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸುವುದು.
 21. “ತಮಗೆ ಸಹಾಯ ಬೇಕೆ” ಕೌಂಟರಿನ ಸಿಬ್ಬಂದಿ ಕನ್ನಡದಲ್ಲಿ ಮಾತನಾಡುವಂತೆ ಕ್ರಮವಹಿಸುವುದು.
 22. ವಿವಿಧ ಕೌಂಟರುಗಳ ಮಾಹಿತಿ ಕನ್ನಡದಲ್ಲಿ ಬರೆಸುವುದು.
 23. ಅಂತರ್ಜಾಲದಲ್ಲಿ ಬ್ಯಾಂಕುಗಳು ಪ್ರಚುರಪಡಿಸುವ ಉತ್ಪನ್ನಗಳ ಮಾಹಿತಿಯನ್ನು ಕನ್ನಡದಲ್ಲಿಯೂ ಪ್ರಚುರಪಡಿಸುವುದು.
 24. ಆರ್‌ಸೆಟಿ ಮತ್ತು ರುಡ್‌ಸೆಟಿ ಸಂಸ್ಥೆಗಳ ಮೂಲಕ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು.
 25. ಬ್ಯಾಂಕುಗಳು ದಿನನಿತ್ಯದ ವ್ಯವಹಾರದಲ್ಲಿ ಬಳಸುವ ಇಂಗ್ಲೀಷ್ ಪದಕ್ಕೆ ಸಮಾನಾಂತರ ಕನ್ನಡ ಪದವನ್ನು ಗುರುತಿಸಿ ಬ್ಯಾಂಕ್ ಶಾಖೆಯ ಸೂಚನಾ ಫಲಕದಲ್ಲಿ ಪ್ರತಿನಿತ್ಯ ಪ್ರಚುರಪಡಿಸುವುದು.
 26. ಹಿಂದಿ ದಿವಸ”ವನ್ನು ಕಡ್ಡಾಯವಾಗಿ ಆಚರಿಸುವಂತೆ ಪ್ರತಿ ನವೆಂಬರ್ ಒಂದರಂದು “ಕನ್ನಡದಿವಸ”‌ ವನ್ನುಬ್ಯಾಂಕಿನ ಪ್ರತಿ ಶಾಖೆಯಲ್ಲೂ ಕಡ್ಡಾಯವಾಗಿ ಆಚರಿಸುವುದು. ಮತ್ತುಅಂದಿನ ಸಭೆಯಲ್ಲಿ ಬ್ಯಾಂಕು / ಶಾಖೆ ಇದುವರೆಗೂ ಕೈಗೊಂಡ ಕನ್ನಡಪರವಾದ ಚಟುವಟಿಕೆಗಳ ವಿಚಾರ ವಿನಿಮಯ ಮಾಡಿಕೊಳ್ಳುವುದು.

ಒಟ್ಟಾರೆ ಬ್ಯಾಂಕುಗಳಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚಾಗಿ ಬಳಸಲು ವಿಪುಲ ಅವಕಾಶಗಳಿವೆ. ನಾವೆಲ್ಲರೂ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು, ಸಮಯ ಸಂದರ್ಭ ಬಂದಾಗಲೆಲ್ಲ ಸುಲಲಿತವಾಗಿ ಬ್ಯಾಂಕುಗಳಲ್ಲಿ ಕನ್ನಡವನ್ನು ಬಳಸಿದ್ದಲ್ಲಿ ಅದು ಇನ್ನೂ ಎತ್ತರದ ಶಿಖರಕ್ಕೆ ಏರಬಲ್ಲದು.

ಎನ್.ಟಿ.ಎರ‍್ರಿಸ್ವಾಮಿ,
ಕೆನರಾ ಬ್ಯಾಂಕಿನ ವಿಶ್ರಾಂತ ವಿಭಾಗೀಯ ಪ್ರಬಂಧಕರು,
ಅಚ್ಯುತ ಬಡಾವಣೆ, ಜಗಳೂರು – 577528
ದಾವಣಗೆರೆ ಜಿಲ್ಲೆ.
ಮೊ : 9901909672

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಸಾರಿಗೆ ಬಸ್

Published

on

ಸುದ್ದಿದಿನ,ದಾವಣಗೆರೆ : ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಸಾರ್ವಜನಿಕರು ವೀಕ್ಷಿಸುವಂತಾಗಲು ದಾವಣಗೆರೆ ವಿಭಾಗದ ದಾವಣಗೆರೆ ಮತ್ತು ಹರಿಹರದಿಂದ ಜೋಗ್‍ಫಾಲ್ಸ್‍ಗೆ ರಾಜಹಂಸ ಸಾರಿಗೆ ವಿಶೇಷ ಪ್ಯಾಕೇಜ್ ಸೇವೆ ಆ. 01 ರಿಂದ ವಾರದ ಎಲ್ಲಾ ದಿನಗಳಂದು ಇರುತ್ತದೆ.

ಭಾನುವರದಂದು ಮಾತ್ರ ಈ ಸೇವೆ ಪ್ರಾರಂಭಿಸಲಾಗಿತ್ತು. ಆಧರೆ ಈ ಪ್ಯಾಕೇಜ್ ಪ್ರಯಾಣಕ್ಕೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಬಂದ ಕಾರಣ ಆ.01 ರಿಂದ ವಾರದ ಎಲ್ಲಾ ದಿನಗಳಂದು ಬಸ್ ಕಾರ್ಯಚರಣೆ ನಡೆಸಲು ಉದ್ದೇಶಿಸಲಾಗಿದೆ.

ದಾವಣಗೆರೆಯಿಂದ ಬೆಳಿಗ್ಗೆ 07 ಕ್ಕೆ ಹೊರಟು, ಹರಿಹರ 7-30, ಶಿರಸಿ- ಬೆ. 10.30 ಕ್ಕೆ ತಲುಪುತ್ತದೆ. 12 ಕ್ಕೆ ಶಿರಸಿಯಿಂದ ಹೊರಟು ಮಧ್ಯಾಹ್ನ 1.30 ಕ್ಕೆ ಜೋಗವನ್ನು ತಲುಪುತ್ತದೆ. ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆಯನ್ನು ತಲುಪುತ್ತದೆ. ಪ್ರಯಾಣ ದರ ರೂ 500 (ಹೋಗಿ ಬರುವ 2 ಬದಿ ಸೇರಿ) ಮಕ್ಕಳಿಗೆ ರೂ.375 (2 ಬದಿಯಿಂದ) ಹರಿಹರದಿಂದ ಹೊರಡುವ ಪ್ರಯಾಣಿಕರಿಗೆ ದರ ರೂ. 475 (2 ಬದಿ) ಮಕ್ಕಳಿಗೆ ರೂ 350 ಆಗಿರುತ್ತದೆ.

ಮುಂಗಡ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್ www.ksrtc.in ಮಾಡಲು ಸೌಕರ್ಯ ಕಲ್ಪಿಸಲಾಗಿದೆ ಎಂದು ದಾವಣಗೆರೆ ಕ.ರಾ.ರ.ಸಾ. ನಿಗಮ. ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ ಪ್ರಕರಣಗಳು

Published

on

ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿ ಸೋಮವಾರ 1,606 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 31 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಈ ಪೈಕಿ ಬೆಂಗಳೂರಿನಲ್ಲಿ 467 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸೋಂಕಿಗೆ ಬಲಿಯಾಗಿದ್ದಾರೆಂದು ರಾಜ್ಯ ಆರೋಗ್ಯ ಇಲಾಖೆ ಇಂದು ಮಾಹಿತಿ ನೀಡಿದೆ. ಈವರೆಗೆ 28,36.678 ಮಂದಿ ಚೇತರಿಸಿಕೊಂಡಿದ್ದು, 23,057 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದಲ್ಲಿ 36,405 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಎಸ್​​ವೈ ರಾಜೀನಾಮೆ ಘೋಷಣೆ..!

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು : ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದ ಭಾಷಣದಲ್ಲಿ ಭಾವುಕರಾಗಿ ಸಿಎಂ ಬಿಎಸ್​​ವೈ ಕಣ್ಣೀರು ಹಾಕಿದರು.

ಸಂಘದ ಕಾರ್ಯಕರ್ತನಾಗಿ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಬಳಿಕ ರಾಜಕೀಯ ಜೀವನ ಪ್ರವೇಶಿಸಿ ಸಂದರ್ಭದಿಂದ ಹಿಡಿದು ತಮ್ಮ ಈಗಿನ ರಾಜಕೀಯದವರೆಗೂ ತಮ್ಮ ಹೋರಾಟಗಳನ್ನ ಅವರು ಮೆಲುಕು ಹಾಕಿದರು. ಭಾಷಣದ ಮಧ್ಯೆ ಅವರು ಗದ್ಗದಿತರಾಗಿ ಕಣ್ಣೀರು ಹಾಕಿದರು. ಕೊನೆಯಲ್ಲಿ ಗದ್ಗದಿತರಾಗಿ ಊಟದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಕಣ್ಣೀರು ಹಾಕಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending