ದಿನದ ಸುದ್ದಿ
ಕಾರ್ಯಕ್ಷಮತೆಗೆ ಕಿವಿ ಹಿಂಡಲೇಬೇಕೇ…

- ಡಾ ಜಿ. ಎನ್. ಮಲ್ಲಿಕಾರ್ಜುನಪ್ಪ, ವಿಶ್ರಾಂತ ಪ್ರಾಂಶುಪಾಲರು, ದಾವಣಗೆರೆ
ಸ್ಮಾರ್ಟ್ ಸಿಟಿ, ವಿದ್ಯಾನಗರಿ, ಎಂದು ಹೆಸರಾಗಿರುವ ಮಧ್ಯಕರ್ನಾಟಕದ ಮಹಾನಗರ ದಾವಣಗೆರೆ. ಇಲ್ಲಿ ವೃತ್ತಿಪರ ಮತ್ತು ಸಾಮಾನ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಖಾಸಗೀ ಸಂಸ್ಥೆಗಳೇ ಹೆಚ್ಚು.
ಅಂತಹುದರಲ್ಲಿ ಕೆಲವು ವರ್ಷಗಳ ಹಿಂದೆ ಚಿಕ್ಕದಾಗಿ ಪ್ರಾರಂಭವಾದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕೂಡ ಒಂದು. ಒಂದು ನೂರು ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜಿನಲ್ಲಿ ಇವತ್ತು ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಮ್., ಬಿ.ಸಿ.ಎ., ಮೊದಲಾದ ಸ್ನಾತಕ ಪದವಿ ತರಗತಿಗಳು ಮತ್ತು ಎಂ.ಎ., ಎಂ.ಕಾಂ., ಎಂ.ಬಿ.ಎಗಳಂಥ ಸ್ನಾತಕೋತ್ತರ ತರಗತಿಗಳು ನಡೆಯುತ್ತಿವೆ. ಯಾತಕ್ಕೂ ಸಾಲದ ಕನಿಷ್ಠ ಮೂಲ ಸೌಲಭ್ಯದಲ್ಲಿ ಗುಣಮಟ್ಟದ ಶಿಕ್ಷಣವನ್ನ ಈ ಸಂಸ್ಥೆ ನೀಡುತ್ತಾ ಬಂದಿದೆ.
ಶೇ.70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಶಿಷ್ಠ ಜಾತಿ, ಪಂಗಡ ಮತ್ತು ಹೊಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿದ್ದು ಅರ್ಧದಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಈ ಕಾಲೇಜಿನಲ್ಲಿ ಸಂಜೆ ಮಹಾವಿದ್ಯಾಲಯವಿದ್ದು ಬಿ.ಎ. ಮತ್ತು ಬಿ.ಕಾಂ ತರಗತಿಗಳಲ್ಲಿ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಹಾಸ್ಟೆಲ್ಗಳಲ್ಲಿ ನಿಯಮಾವಳಿ ಪ್ರಕಾರ ಇವರಿಗೆ ಸೌಲಭ್ಯಗಳಿವೆ.
ಮೊನ್ನೆ ಆ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದ ಕ್ರೀಡಾ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾಯೋಜನೆ, ಎನ್.ಸಿ.ಸಿ, ಯುವ ರೆಡ್ ಕ್ರಾಸ್, ರೋವರ್ರ್ಸ್ ಮತ್ತು ರೇಂಜರ್ಸ್, ಮುಂತಾದ ಘಟಕಗಳ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ನಾನಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸಿದ್ದಕ್ಕೋ ಅಥವಾ ಆ ಎಲ್ಲ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಕಾರಣಕ್ಕೋ ನನ್ನನ್ನೂ ಅತಿಥಿಯಾಗಿ ಆಹ್ವಾನಿಸಿದ್ದರು.
ರಾಜ್ಯದ ಸಚಿವರೂ ಮತ್ತು ಆ ಕ್ಷೇತ್ರದ ಶಾಸಕರೂ ಆಗಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಿತ್ತು. ಕಾರ್ಯನಿಮಿತ್ತ ಅವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ, ಅದೇ ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಂತರ ಅದೇ ಸಂಜೆ ಮಹಾವಿದ್ಯಾಲಯದ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮಗೆ ವಿದ್ಯಾರ್ಥಿಗಳಿಗಿರುವಂತೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಶಿಫಾರಸು ಮಾಡುವಂತೆ ಕೋರಿ ಪ್ರಾಂಶುಪಾಲರ ಮೂಲಕ ಮನವಿ ಪತ್ರವೊಂದನ್ನು ಅವರಿಗೆ ಕೊಟ್ಟರು.
ಪ್ರಾಂಶುಪಾಲರನ್ನು ವಿಚಾರಿಸಲಾಗಿ, ಇಲಾಖೆಯ ಅಧಿಕಾರಿಗಳ ಪ್ರಕಾರ ವಿದ್ಯಾರ್ಥಿಗಳ ಹಾಸ್ಟೆಲ್ಗಳಲ್ಲಿ ರಾತ್ರಿ 09 ಗಂಟೆಯವರೆಗೆ ಒಳಗೆ ಬರುವ ಮತ್ತು ಊಟಮಾಡುವ ಅವಕಾಶವಿದ್ದು, ವಿದ್ಯಾರ್ಥಿನಿಯರ ಹಾಸ್ಟೆಲ್ಗಳಲ್ಲಿ ರಾತ್ರಿ 08ಕ್ಕೆ ಸಮಯ ಮುಗಿಯುತ್ತದೆ. ಕಾಲೇಜು ಮುಗಿಯುವ ಸಮಯ ರಾತ್ರಿ 08 ಗಂಟೆಗೆ. ಆ ಸಮಯದಲ್ಲಿ ವಿದ್ಯಾರ್ಥಿನಿಯರು ಕಾಲೇಜಿನಿಂದ ಹಾಸ್ಟೆಲ್ಗೆ ಬರಲು ಭದ್ರತಾ ಸಮಸ್ಯೆ ಇರುವ ಕಾರಣಕ್ಕೆ ಅವಕಾಶ ನೀಡಲಾಗಿಲ್ಲ ಎನ್ನುವುದು. ಕೇಳಿ ನಿಜಕ್ಕೂ ದಂಗು ಬಡಿದಂತಾಯಿತು.
ಮಹಿಳೆಯರು ರಾತ್ರಿ ನಿರ್ಭಯದಿಂದ ಓಡಾಡುವಂತಹ ಆಡಳಿತ ವ್ಯವಸ್ಥೆ ಇರಬೇಕು ಎಂದು ಕನಸಿದ ರಾಷ್ಟ್ರದಲ್ಲಿ, ಸಮಾನ ಅವಕಾಗಳು ಮೂಲಭೂತ ಹಕ್ಕಾಗಿರುವ ದೇಶದಲ್ಲಿ, ಪುಕ್ಕಟೆಯಾಗಿ ಮಹಿಳೆಯರು ರಸ್ತೆ ಸಾರಿಗೆ ಬಸ್ಸಿನಲ್ಲಿ ದಿನದ 24 ಗಂಟೆಗಳ ಕಾಲ ಓಡಾಡುವ ಸೌಲಭ್ಯವಿರುವ ರಾಜ್ಯದಲ್ಲಿ ಸಾಮಾನ್ಯ ಪದವಿಯೊಂದನ್ನು ಆರಸಿ ಹಗಲು ದುಡಿದು ಸಂಜೆ ಒಂದಷ್ಟು ತರಗತಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಸಲ್ಲದ ಕಾರಣದಿಂದ 3 ವರ್ಷಗಳಿಂದ ಹಾಸ್ಟೆಲ್ ಸೌಲಭ್ಯವನ್ನು ನಿರಾಕರಿಸಲಾಗಿದೆ ಎಂದರೆ ಏನೆನ್ನಬೇಕು?
ಪ್ರಾಥಮಿಕ ಶಿಕ್ಷಣದಿಂದ ಉನ್ನತಶಿಕ್ಷಣಕ್ಕೆ ಕಾಲಿರಿಸುವ ವಿದಾರ್ಥಿಗಳ ಅನಪಾತ(ಜಿಇಆರ್) ಇವತ್ತು ಶೇ. 26ರ ಆಸುಪಾಸು ಇದ್ದು ಅದನ್ನು ಮುಂದಿನ 2035ರ ಹೊತ್ತಿಗೆ ಶೇ.50ಕ್ಕೆ ತಲುಪಿಸಬೇಕೆಂಬುದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಉದ್ದೇಶ. ಇದರ ಒಂದು ಭಾಗವಾಗಿ ಹಿಂದಿನ ಸರ್ಕಾರ ರಾಜ್ಯದ ಎಲ್ಲ ಮಹಾ ನಗರಪಾಲಿಕೆಗಳಿರುವ ನಗರಗಳ ಸಾಮಾನ್ಯ ಪದವಿ ಕಾಲೇಜುಗಳಲ್ಲಿ ಸಂಜೆ ಮಹಾ ವಿದ್ಯಾಲಯಗಳನ್ನು ಆರಂಭಿಸಿತು.
ಆರ್ಥಿಕವಾಗಿ ಅನುಕೂಲವಿರದ ಪೋಷಕರ ಮಕ್ಕಳು ಹಗಲು ಅಂಗಡಿ ಮುಂಗಟ್ಟುಗಳಲ್ಲಿ ಕೆಲಸಮಾಡಿ ಸಂಜೆ ಪದವಿ ತರಗತಿಗಳಿಗೆ ಹಾಜರಾಗಿ ಪದವಿ ಪಡೆಯುವ ಮತ್ತು ಆ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶ ಅವರದಾಯಿತು. ಲಭ್ಯ ಮಾಹಿತಿ ಪ್ರಕಾರ ಹಾಲಿ 09 ನಗರಗಳಲ್ಲಿ ಇಂಥ ವ್ಯವಸ್ಥೆ ಇದ್ದು ಸಾವಿರಾರು ಪದವಿ ಆಕಾಂಕ್ಷಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಶೇ. 50ರಷ್ಟು ವಿದ್ಯಾರ್ಥಿನಿಯರಿದ್ದು ಅಂಥವರಲ್ಲಿ ದಾವಣಗೆರೆಯ ಸಂಜೆ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯರೂ ಕೂಡ ಒಬ್ಬರು.
ಹೊಸ ಶಿಕ್ಷಣ ನೀತಿಯ ಪೂರ್ಣಾನುಷ್ಠಾನಕ್ಕೆ ಮುಂದಾದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯದಲ್ಲಿ, ಕ್ಲಬ್ಬು ಪಬ್ಬು, ಬಾರು, ರೆಸ್ಟೋರೆಂಟ್ಗಳಲ್ಲಿ ಹೆಣ್ಣು-ಗಂಡೆನ್ನದೆ ರಾತ್ರಿ 12ರವರೆಗೆ ಮೋಜು ಮಸ್ತಿಗೆ ಅವಕಾಶವಿರುವ ನಗರಗಳಲ್ಲಿ, ಈ ವಿದ್ಯಾರ್ಥಿನಿಯರಿಗೇಕೆ ಈ ದುಃಸ್ಥಿತಿ? ಹಾಸ್ಟೆಲ್ಗಳಿಂದಾಗಿ ಕಾಲೇಜುಗಳಿವೆಯೋ ಕಾಲೇಜುಗಳಿಗಾಗಿ ಹಾಸ್ಟೆಲುಗಳಿವೆಯೋ ತಿಳಿಯಲಾಗದಾಗಿದೆ. ಇದೇ ಪರಿಸ್ಥಿತಿ ಉಳಿದ 08 ನಗರಗಳಲ್ಲಿಯೂ ಇರಬಹುದೇನೋ. ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಚಾಟಿ ಬೀಸುವವರಾರು.
ಚಾಟಿ ಬೀಸಿ ಕೆಲಸ ಮಾಡಿಸುವುದೇ ಕಾರ್ಯಕ್ಷಮತೆಯೇ? ಹೀಗಾದರೆ ಓದಿದ ವಿದ್ಯೆಗೆ, ಪಡೆದ ಸರ್ಕಾರಿ ಹುದ್ದೆಗೆ ಸಂದ ಬೆಲೆಯೇನು? ಕೊನೇ ಪಕ್ಷ ತಮ್ಮ ಮಕ್ಕಳೇ ಈ ದುಃಸ್ಥಿತಿಗೊಳಗಾಗಿದ್ದಿದ್ದರೆ ಇವರಿಗೇನೆನ್ನಿಸುತ್ತಿತ್ತು? ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಇಂಥ ವಿಪರ್ಯಾಸಗಳತ್ತ ಗಮನಕೊಡಬೇಕಿದೆ.
ಕಾಲೇಜಿನ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಮಾಡಿಯೋ, ರಜಾದಿನಗಳಂದು ತರಗತಿ ನಡೆಸಿಯೋ, ಕೊನೆಯ ಪಾಳಿಯಾಗಿ ರಾತ್ರಿ 09 ಗಂಟೆಗೆ ಕಾಲೇಜಿನಿಂದ ಹಾಸ್ಟೆಲ್ಗಳ ಮಾರ್ಗದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ವ್ಯವಸ್ಥೆ ಮಾಡಿಯೋ ಈ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕಿದೆ. ಸಂವಿಧಾನದತ್ತ ಅವರ ಮೂಲಭೂತ ಹಕ್ಕುಗಳಿಗೆ ನ್ಯಾಯ ಒದಗಿಸಬೇಕಿದೆ.
–ಡಾ ಜಿ. ಎನ್. ಮಲ್ಲಿಕಾರ್ಜುನಪ್ಪ, ವಿಶ್ರಾಂತ ಗ್ರೇಡ್-1 ಪ್ರಾಂಶುಪಾಲರು, ಕಾಲೇಜು ಶಿಕ್ಷಣ ಇಲಾಖೆ.
ಮೊ: 9449077003
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶೀಘ್ರದಲ್ಲೇ ದೈಹಿಕ ಶಿಕ್ಷಕರ ನೇಮಕ : ಸಚಿವ ಎಸ್. ಮಧು ಬಂಗಾರಪ್ಪ

ಸುದ್ದಿದಿನ ಡೆಸ್ಕ್ : ಪ್ರಾಥಮಿಕ ಶಾಲಾ ವಿಭಾಗದಲ್ಲಿ ಖಾಲಿ ಇರುವ 2120 ದೈಹಿಕ ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 2500 ಹುದ್ದೆಗಳ ಭರ್ತಿ ಪ್ರಸ್ತಾವನೆ ಆರ್ಥಿಕ ಇಲಾಖೆಯ ಸಮಾಲೋಚನೆಯಲ್ಲಿದೆ.
ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ಆದಷ್ಟು ಶೀಘ್ರದಲ್ಲಿ ನೇಮಕ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ವಿಧಾನಪರಿಷತ್ತಿಗೆ ಸೋಮವಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
