ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶೀಘ್ರದಲ್ಲೇ ದೈಹಿಕ ಶಿಕ್ಷಕರ ನೇಮಕ : ಸಚಿವ ಎಸ್. ಮಧು ಬಂಗಾರಪ್ಪ

ಸುದ್ದಿದಿನ ಡೆಸ್ಕ್ : ಪ್ರಾಥಮಿಕ ಶಾಲಾ ವಿಭಾಗದಲ್ಲಿ ಖಾಲಿ ಇರುವ 2120 ದೈಹಿಕ ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 2500 ಹುದ್ದೆಗಳ ಭರ್ತಿ ಪ್ರಸ್ತಾವನೆ ಆರ್ಥಿಕ ಇಲಾಖೆಯ ಸಮಾಲೋಚನೆಯಲ್ಲಿದೆ.
ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರನ್ನು ಆದಷ್ಟು ಶೀಘ್ರದಲ್ಲಿ ನೇಮಕ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ವಿಧಾನಪರಿಷತ್ತಿಗೆ ಸೋಮವಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
