ದಿನದ ಸುದ್ದಿ
ಕೋವಿಡ್-19 ಕೋಲಾಹಲ
- ಡಾ.ಎಚ್.ಎಸ್.ಅನುಪಮಾ
ಬೆಳಗಾವಿ ಹತ್ತಿರದ ಹಳ್ಳಿಗೆ ಚೀನಾದಿಂದ ಟೆಕ್ಕಿ ದಂಪತಿಗಳು ಬಂದಿಳಿದರು. ಮೊದಲಾಗಿದ್ದರೆ ತಮ್ಮೂರಿಗೆ ವಿದೇಶದಿಂದ ಬಂದವರ ಕಾಣಲು ಹಳ್ಳಿಯ ಅಬಾಲವೃದ್ಧ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕುತೂಹಲಿಗಳಾಗಿರುತ್ತಿದ್ದರು. ಕರೆಕರೆದು ಮಾತಾಡಿಸುತ್ತಿದ್ದರು. ಇಣುಕಿ ನೋಡುತ್ತಿದ್ದರು. ಆದರೆ ಈಗ ಬಂದವರು ತಾವು ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಇದ್ದೇವೆಂದು ಪ್ರಮಾಣಪತ್ರ ತೋರಿಸಿದರೂ ಕೇಳದೇ ಆ ಜೋಡಿಯನ್ನು ಅಟ್ಟಾಡಿಸಿ ಬೈದು, ಪೊಲೀಸರ ಕರೆದು, ಆಂಬುಲೆನ್ಸಿನಲ್ಲಿ ಕೂಡಿ ಹಾಕಿ ಊರು ಬಿಟ್ಟೋಡಿಸಿದರು. ಅಷ್ಟೇ ಅಲ್ಲ, ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಆ ಜೋಡಿಯ ಭಾವಚಿತ್ರ ಹಂಚಿಕೊಂಡು ಅವರನ್ನು ಯಾರೂ ನಿಮ್ಮ ಊರುಗಳೊಳಗೆ ಬಿಟ್ಟುಕೊಳ್ಳಬೇಡಿ ಎಂದು ಪ್ರಚಾರ ಮಾಡಿದರು.
ಮಂಡ್ಯದ ಹೊರಭಾಗದಲ್ಲಿ ನಾರುಬೇರುಗಳ ಔಷಧಿ ಮತ್ತು ಮಸಾಲೆ ಪದಾರ್ಥಗಳನ್ನು ಹೊತ್ತು ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಾರ ಮಾಡಿಬಂದ ಹಕ್ಕಿಪಿಕ್ಕಿ ಸಮುದಾಯದ ಅಲೆಮಾರಿಗಳು ತಮ್ಮ ನೆಲೆಗೆ ವಾಪಸಾದದ್ದೇ ಉಳಿದವರು ಭಯಭೀತರಾದರು. ಹಕ್ಕಿಪಿಕ್ಕಿಟೆಂಟುಗಳೊಳಗೆಅಲ್ಲೋಲಕಲ್ಲೋಲವಾಯಿತು.ಕೊನೆಗೆ ವಿದೇಶದಿಂದ ಹಿಂದಿರುಗಿದವರಿಗೆ ಬೇರೆ ವ್ಯವಸ್ಥೆ ಮಾಡುವಂತಾಯಿತು.
ಮತ್ತೊಂದೆಡೆ ಭಾರತದ ಹಳ್ಳಿ, ನಗರ, ಕೇರಿಗಳಲ್ಲಿ ಟಿವಿ, ಜಾಲತಾಣಗಳಿಂದ ಕರೋನಾ ಅತಿಸುದ್ದಿಯಿಂದ ಭಯದ ವ್ಯಾಧಿ ಹರಡತೊಡಗಿದೆ. ಹೊರಗೆ ಹೋಗಬೇಡಿ. ಮುಟ್ಟಬೇಡಿ. ಮನೆಗೆ ಕರೆಯಬೇಡಿ. ಕೆಮ್ಮುವವರ ಬಳಿ ನಿಲ್ಲಬೇಡಿ ಎಂಬಿತ್ಯಾದಿ ಬೇಡಗಳ ನಡುವೆ ಆಗಲೇ ವ್ಯಕ್ತಿಗಳ ನಡುವಿರುವ ದೂರ ವಿಸ್ತಾರವಾಗತೊಡಗಿದೆ.
‘ಅಯ್ಯೋ, ತಂಡಿಕೆಮ್ಮ ಅಂತ ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಅಲ್ಲಿ ರಕ್ತ ಟೆಸ್ಟ್ ಮಾಡಿ ಕಡೆಗೆ 14 ದಿನ ಕ್ವಾಣೇಲಿ ಕೂಡಿ ಹಾಕ್ತಾರಂತೆ’ ಎಂಬ ಹೆದರಿಕೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಲು ಕೆಲವರು ಹೆದರಿದರೆ; ತಂತಮ್ಮ ಮನೆಯ ಮದುವೆ, ತೀರ್ಥಯಾತ್ರೆ, ಧಾರ್ಮಿಕ ಕಾರ್ಯಗಳೆಲ್ಲವನ್ನು ರದ್ದು ಮಾಡಿದ್ದಾರೆ ಮತ್ತೆ ಕೆಲವರು. ಶಾಲೆಯೂ ಇಲ್ಲದೆ, ಪರೀಕ್ಷೆಯೂ ಇಲ್ಲದೇ ಪಾಸಾಗಿ ಮುಂದಿನ ತರಗತಿಗೆ ಹೋದ ಮಕ್ಕಳು ಸಮಯ ಕಳೆಯಲು ಹೊಸಹೊಸ ಯೋಜನೆಗಳನ್ನು ಹಾಕತೊಡಗಿವೆ.
‘ಅರೆ, ಎಲ್ಲಾದರೂ ಸಾಧ್ಯವೇ? ಸಾಧ್ಯವೇ ಇಲ್ಲ’ ಎನ್ನುವಂತಹುದೆಲ್ಲ ತಂತಾನೇ ಅನಿವಾರ್ಯವಾಗಿ, ಸಾಧ್ಯವೂ ಆಗಿ ಏರ್‌ಪೋರ್ಟುಗಳು, ಮಾಲುಗಳು, ದೇವಳ-ಆಶ್ರಮ-ಮಠಗಳು, ಹೋಟೆಲು ಬೀಚುಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಗುಡಿಸಲು-ಟೆಂಟು-ಸ್ಲಮ್ಮುವಾಸಿಗಳು, ಕೂಲಿಗಳು, ಮನೆದೇವಿಯರು ತಂತಮ್ಮ ದಿನನಿತ್ಯದ ಹೊಟ್ಟೆಪಾಡಿನ ಕೆಲಸಗಳಲ್ಲಿ ಮುಳುಗಿ ಹೋಗಿದ್ದಾರೆ.
ಇಷ್ಟೆಲ್ಲ ಉಲ್ಟಾಪಲ್ಟಾ, ಕೋಲಾಹಲ, ಅಸಂಭವ ಸಂಭವ ಆಗುತ್ತಿರುವುದಾದರೂ ಏತಕ್ಕೆ? ಭಯಕ್ಕೆ, ಪ್ರಾಣಭಯಕ್ಕೆ. ನಿಜ. ಜೀವಿಗಳ ಚಟುವಟಿಕೆಯನ್ನೆಲ್ಲ ನಿಯಂತ್ರಿಸುವ ಮುಖ್ಯ ಚಾಲನಾ ಶಕ್ತಿ ಭಯ ಎನ್ನುವುದು ಮತ್ತೆ ಸಾಬೀತಾಗಿದೆ. ಅದರಲ್ಲೂ ಪ್ರಾಣಭಯ ಆವರಿಸಿಕೊಂಡಿತೆಂದರೆ ಯಮನಿಯಮಗಳು ಮರೆತು ಹೋಗುತ್ತವೆ. ಸಂಬಂಧಗಳು ಕಾಣೆಯಾಗುತ್ತವೆ. ಎತ್ತ, ಏನುಗಳು ಸತ್ತು ಹೋಗುತ್ತವೆ.
ನಾವೆಳೆದ ಗಡಿಗಳೆಂಬ ಹುಸಿರೇಖೆಗಳು ತಂತಾವೇ ಅಳಿಸಿ ಹೋಗುತ್ತವೆ. ಜೈಲುಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ. ತಮ್ಮ ಮೇಲೆ ತಾವೇ ಆರೋಪಿಸಿಕೊಂಡ ಹುಸಿ ಶಕ್ತಿಗಳೆಲ್ಲ ಕರಗಿಹೋಗಿ ಸುಮ್ಮಸುಮ್ಮನೆ ‘ಮಹಾನ್’ ಆದವರು ಬೆತ್ತಲಾಗಿ ನಿಜಸ್ವರೂಪ ಬಯಲಾಗುತ್ತದೆ. ಸರ್ವಾಧಿಕಾರಿಯಿಂದ ಹಿಡಿದು ಬೀದಿ ಬದಿಯ ಭಿಕಾರಿಯವರೆಗೂ; ಪರಮಾಣು ಶಸ್ತ್ರಾಸ್ತ್ರ ಹೊಂದಿದವರಿಂದ ಹಿಡಿದು ಚಿಂದಿ ಆಯುವವರವರೆಗೆ ಪ್ರಾಣಭಯ ಆವರಿಸಿದಾಗ ಎಲ್ಲರಿಗೂ ಬದುಕುಳಿವ ಹಂಬಲದ ಹೊರತು ಮತ್ತೆಲ್ಲ ಮರೆತುಹೋಗುತ್ತದೆ.
ಹೌದು. ಕೋವಿಡ್-19 ವೈರಸ್‌ನಿಂದ ಹರಡುತ್ತಿರುವ ಕಾಯಿಲೆ ಮತ್ತು ಮರಣ ಭೀತಿ ಇಡಿಯ ವಿಶ್ವವನ್ನೇ ಆವರಿಸಿದ ೨೦೨೦ರ ಮಾರ್ಚ್ ಹೊತ್ತಿಗೆ ಗಡಿ, ಮೂರ್ತಿ, ಸ್ಮಾರಕ, ಮಾಲು, ಮಹಲು, ಫ್ಯಾಷನ್, ಯುದ್ಧ, ದಂಗೆಗಳೇ ಮೊದಲಾದ ಮನುಷ್ಯ ಅಹಂಕಾರದ ನಿರ್ಮಿತಿಗಳೆಲ್ಲಾ ತಾತ್ಕಾಲಿಕವಾಗಿಯಾದರೂ ಪೊಳ್ಳು ಎಂದೆನಿಸುವಂತೆ ಅಣುರೇಣುತೃಣವೊಂದು ನಿವಾಳಿಸಿ ಬಿಸಾಡಿದೆ. ಲಕ್ಷ ಕೋಟಿ ರೂಪಾಯಿಗಳನ್ನು ಗಾಳಿಯಲ್ಲೇ ಸೃಷ್ಟಿಸುವ ಷೇರು ಮಾರುಕಟ್ಟೆ ಎಂಬ ಮಾಯಾನಗರಿ ಮೇಣದರಮನೆಯಂತೆ ಕರಗಿ ಹೋಗುತ್ತಿದೆ.
ಯಾವುದೂ ಬೇಡ, ಯಾರಿಗೂ ಬೇಡವೆನುವಂತಹ ತಾತ್ಕಾಲಿಕ ಸ್ಮಶಾನ ವೈರಾಗ್ಯ ಆವರಿಸಿದಂತಿದೆ. ಧರ್ಮಗುರುಗಳ ಸಾಕ್ಷಿಯಿಲ್ಲದೆ ಎಲ್ಲ ಶವಗಳನ್ನೂ ಮಿಲಿಟರಿ-ಮುನ್ಸಿಪಾಲಿಟಿ ಲಾರಿಗಳು ಹೊತ್ತೊಯ್ದು ವಿದ್ಯುತ್ ಚಿತಾಗಾರದಲ್ಲಿ ಸುಟ್ಟುಬಿಡುತ್ತಿವೆ. ಧರ್ಮ-ಜಾತಿ ಭೇದವಿಲ್ಲದೆ ಬದುಕಿರುವವರನ್ನೂ, ಮರಣಿಸಿದವರನ್ನೂ ವೈರಸ್ ಆವರಿಸಿಕೊಂಡಿದೆ. ಎರಡು ಕಾಲಿನವರ ಸಾಧನೆ ಏನೇ ಇರಲಿ, ಪ್ರಕೃತಿಯೆದುರು ಎಲ್ಲವೂ ತೃಣವೇ, ನಿಜ ದೈವ ಪ್ರಕೃತಿಯೇ ಎಂಬ ಪಾಠ ಮತ್ತೆಮತ್ತೆ ಕಲಿಯಬೇಕಾಗಿದೆ.
ವೈರಸ್ ಎಂಬ ವಿಸ್ಮಯ-ಅಪಾಯ
ಆನೆ, ತಿಮಿಂಗಿಲಗಳಿಂದ ಹಿಡಿದು ಬ್ಯಾಕ್ಟೀರಿಯಾಗಳಂತಹ ಏಕಕೋಶ ಜೀವಿಗಳ ತನಕ ಜೀವಿಗಳಿಗೆ ನಾನಾ ಕಾಯಿಲೆಗಳನ್ನುಂಟುಮಾಡುವ; ಏಡ್ಸ್, ಪೋಲಿಯೋ, ದಡಾರ, ಸಿಡುಬು, ಮೈಲಿಬೇನೆ, ಕಾಮಾಲೆ, ವಾಂತಿಭೇದಿ, ರುಬೆಲ್ಲಾ, ಇನ್‌ಫ್ಲುಯೆಂಜಾ, ಹಂದಿಗೋಡು ಕಾಯಿಲೆ, ಮಂಗನ ಕಾಯಿಲೆ, ಮಂಗನಬಾವು ಮತ್ತಿತರ ನೂರಾರು ಕಾಯಿಲೆಗಳಿಗೆ ಕಾರಣವಾದ ವೈರಸ್‌ಗಳು ಬಲು ವಿಚಿತ್ರ, ವಿಶಿಷ್ಟ ಅಪಾಯಕಾರಿ ಕಣಗಳು. ಪಕ್ಷಿ, ಪ್ರಾಣಿ, ಗಿಡ, ಶಿಲೀಂಧ್ರ, ಬ್ಯಾಕ್ಟೀರಿಯಾ ಇತ್ಯಾದಿ ಬೇರೊಂದು ಜೀವಿಯ ಜೀವಕೋಶದೊಳಗೆ ಮಾತ್ರ ಬದುಕಬಲ್ಲ ಸೂಕ್ಷ್ಮಾಣುಗಳು ಅವು. ಇತ್ತ ‘ಜೀವಿ’ಯೂ ಅಲ್ಲ. ಅತ್ತ ‘ಅಜೀವಿ’ಗಳೂ ಅಲ್ಲ. ಜೀವಿ ಅಜೀವಿಗಳ ನಡುವಿರುವ ಅತ್ಯಂತ ಸರಳ, ಅತಿ ಸಣ್ಣ ಕಣ ವೈರಸ್ ಸಂಪೂರ್ಣ ಬೇರೆ ಜೀವಕೋಶವನ್ನು ಅವಲಂಬಿಸಿರುವಂಥವು.
ವೈರಸ್ಸುಗಳ ಗಾತ್ರ ಬಲು ಕಿರಿದು. ಎಲ್ಲೋ ಕೆಲವನ್ನು ಹೊರತುಪಡಿಸಿದರೆ ಎಲ್ಲವೂ ಬ್ಯಾಕ್ಟೀರಿಯಾಗಿಂತ ಸಣ್ಣವು. ಪೋಲಿಯೋ ವೈರಸ್ ಉಪ್ಪಿನ ಒಂದು ಕಣದ 10 ಸಾವಿರದಲ್ಲಿ ಒಂದನೇ ಭಾಗದಷ್ಟು ಗಾತ್ರದ್ದು; ಕೋವಿಡ್ ಐದು ಸಾವಿರದ ಒಂದು ಭಾಗದಷ್ಟು ದೊಡ್ಡದು. ವೈರಸ್ಸುಗಳಿಗಿಂತ ಬ್ಯಾಕ್ಟೀರಿಯಾಗಳು 8-10 ಪಟ್ಟು ದೊಡ್ಡದಿರುತ್ತವೆ. 1931ರಲ್ಲಿ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಕಂಡುಹಿಡಿದ ಮೇಲೆಯೇ ನಾವು ವೈರಸ್ಸುಗಳನ್ನು, ಅವುಗಳ ರೂಪರಚನೆಯನ್ನು ಕಂಡದ್ದು.
ಪ್ರಾಣಿಗಳ ದೇಹದಲ್ಲಷ್ಟೇ ಇರುವ ಕೆಲವು ವೈರಸ್‌ಗಳು ಮನುಷ್ಯರನ್ನು ತಲುಪಿ ಹೊಸಹೊಸ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹೀಗೆ ಏಡ್ಸ್ ಕಾಯಿಲೆ ದಕ್ಷಿಣ ಆಫ್ರಿಕಾದ ಚಿಂಪಾಂಜಿಗಳಿಂದ; ಸಾರ‍್ಸ್ ಕಾಯಿಲೆ ಸಿವೆಟ್ ಬೆಕ್ಕುಗಳಿಂದ; ಕೆಎಫ್‌ಡಿ ಮಂಗಗಳಿಂದ; ಮರ‍್ಸ್-2019 ಒಂಟೆಗಳಿಂದ; ಈಗ ಕೋವಿಡ್-19 ಬಾವಲಿಗಳಿಂದ ಬಂದಂಥವು. ಶ್ವಾಸನಾಳ, ಬಾಯಿ, ಗಂಟಲು, ಚರ್ಮ, ಲೈಂಗಿಕ ಅಂಗಾಂಗಗಳು, ಕೀಟದ ಕಡಿತ ಮುಂತಾದ ಮಾರ್ಗಗಳಿಂದ ಮಾನವ ದೇಹದೊಳಗೆ ಪ್ರಾಣಿ ವೈರಸ್‌ಗಳು ಹೊಕ್ಕಿಬಿಡುತ್ತವೆ. ಮುಖ ನೆಕ್ಕಿದ ಒಂಟೆ, ತಲೆಮೇಲೆ ಹತ್ತಿದ ಮಂಗ, ಕಾಲಸಂದಿ ತೂರಿಕೊಳುವ ಬೆಕ್ಕು, ರೋಗವಾಹಕ ಜೀವಿಯ ಅರೆಬೆಂದ ಮಾಂಸದಡುಗೆ, ತರಕಾರಿ-ಮಾಂಸದ ಮಾರುಕಟ್ಟೆಗಳಲ್ಲಾಗುವ ಮನುಷ್ಯ-ಪ್ರಾಣಿ ಸಂಪರ್ಕ – ಇವೇ ಮೊದಲಾದ ಕಾರಣಗಳಿಗೆ ಮನುಷ್ಯರಲ್ಲಿ ಪ್ರಾಣಿಯ ವೈರಸ್ ಸೇರಿಬಿಡಬಹುದು. ಹಾಗೆಯೇ ಇಕೋ ಟೂರಿಸಂ, ಅತಿಕ್ರಮಣ, ಒತ್ತುವರಿ, ವಲಸೆಗಳಿಂದ ಪ್ರಾಣಿಗಳಿಗೆ ನಮ್ಮ ವೈರಸ್‌ಗಳನ್ನು ನಾವೂ ದಾಟಿಸುತ್ತಿರಬಹುದು.
ನವೆಂಬರ್ 2019ರಿಂದ ಇದುವರೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಜನರನ್ನು ಕೊಂದಿರುವ ಮರ‍್ಸ್ ತಾನು ಅಂಟಿದ 30% ಜನರನ್ನು ಕೊಂದು ಹಾಕುವಷ್ಟು ಅಪಾಯಕಾರಿ. ಈಗ ಬಂದೆರಗಿರುವ ಕೋವಿಡ್-19ರ ಸ್ವಭಾವ ನಮಗಿನ್ನೂ ತಿಳಿದಿಲ್ಲ. ಈ ಬರಹ ಬರೆಯುತ್ತಿರುವ 22-3-20ರ ಮಧ್ಯಾಹ್ನದವರೆಗೆ ಕೋವಿಡ್-19 ನಿಂದ 3,12,500 ರೋಗಿಗಳು ಬಾಧಿತರಾಗಿದ್ದರೆ 13,424 ಜನ ಮರಣ ಹೊಂದಿದ್ದಾರೆ. ಮೂರು ತಿಂಗಳಲ್ಲಿ ಅಂಟಾರ್ಕ್ಟಿಕಾ ಬಿಟ್ಟು ಎಲ್ಲ ಖಂಡಗಳಿಗೂ ಅದು ಹರಡಿದೆ. 167ಕ್ಕಿಂತ ಹೆಚ್ಚು ದೇಶಗಳಲ್ಲಿ ಕೋವಿಡ್‌ನ ಸೋಂಕಿದೆ. ಈಗದು ಯೂರೋಪ್ ಕೇಂದ್ರಿತ. ಇಟಲಿ, ಇರಾನ್, ಸ್ಪೇನ್‌ನಲ್ಲಿ ವೇಗವಾಗಿ ಹರಡುತ್ತಿದೆ. ಮರಣ ಪ್ರಮಾಣ 3.4 % ಇದೆ.
ಏನಿದು ಕರೋನಾ, ಕೋವಿಡ್?
ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಉಸಿರಾಟದ ತೀವ್ರ ತೊಂದರೆಯನ್ನುಂಟುಮಾಡುವ ಹಲವು ರೋಗಿಗಳು ಆಸ್ಪತ್ರೆಗೆ ದಾಖಲಾದರು. ಹೊಸವರ್ಷ ಕೊಡುತ್ತಿರುವ ಕೊಡುಗೆಯೋ ಎಂಬಂತೆ ರೋಗಕಾರಣವಾದ ‘ಹೊಸ ಕರೋನಾ ವೈರಸ್’ ಪತ್ತೆಯಾಯಿತು. ವುಹಾನ್‌ನ ಕಡಲ ಆಹಾರಪದಾರ್ಥಗಳ ಸಗಟು ಮಾರುಕಟ್ಟೆಯಿಂದ ಅದು ಹರಡಿದೆ ಎನ್ನಲಾಯಿತು.
ಬಾವಲಿಗಳ ದೇಹಲ್ಲಿರುವ ಕರೋನಾ ವೈರಸ್‌ಗೆ 96% ಸಾಮ್ಯತೆ ಇರುವ ವೈರಾಣು ರೋಗಿಗಳಲ್ಲಿ ಪತ್ತೆಯಾಯಿತು. ಆದರೆ ಮಾರುಕಟ್ಟೆಯಲ್ಲಿ ಬಾವಲಿಯ ಮಾರಾಟ ಇಲ್ಲದಿದ್ದ ಕಾರಣ ಪ್ಯಾಂಗೊಲಿನ್‌ನಂತಹ ಮಧ್ಯವರ್ತಿ ಪ್ರಾಣಿಯಿಂದ ಅಥವಾ ಮಾರುಕಟ್ಟೆಯಲ್ಲಿದ್ದ ಹಾವಿನ ಮಾಂಸದಿಂದ ಅದು ಬಂದಿರಬಹುದೆಂದು ಶಂಕಿಸಲಾಯಿತು. ಕೊನೆಗೆ ಅದಕ್ಕೆ ಕೋವಿಡ್-19 ಎಂಬ ನಾಮಕರಣ ಮಾಡಿದರು. ಇಲ್ಲಿಯವರೆಗೆ ಗೊತ್ತಿರದ ಹೊಸ ವೈರಸ್ ಆಗಿದ್ದರಿಂದ ‘ನೊವೆಲ್’ ವೈರಸ್ ಎಂದು ಕರೆಸಿಕೊಂಡಿತು.
ಸೂರ್ಯನ ಚಿತ್ರ ಬರೆವಾಗ ಉರೂಟು ಸೊನ್ನೆಯ ಸುತ್ತ ಪ್ರಭೆ ಬರೆಯುತ್ತಿದ್ದೆವು, ನೆನಪಿದೆಯೆ? ಅದು ಸೌರ ಕರೋನಾ. ಅಂಥದೇ ರಚನೆಯನ್ನು ಮೈತುಂಬ ಹೊದ್ದಿರುವಂಥವು ಕರೋನಾ ವೈರಸ್‌ಗಳು. ಎಲ್ಲ ರೀತಿಯ ಕರೋನಾ ವೈರಸ್ಸುಗಳೂ ಮಾರಣಾಂತಿಕವಲ್ಲ. ಕೆಲವು ನೆಗಡಿ, ಕೆಮ್ಮು, ಸಣ್ಣ ಜ್ವರಕ್ಕೆ ಮುಗಿದುಹೋಗುತ್ತವೆ. ಹೊಸಋತುವಿನ ಆರಂಭದ ದಿನಗಳ ತಂಡಿ, ಸಣ್ಣಜ್ವರ, ಗಂಟಲುರಿ ಕರೋನಾದಿಂದ ಆಗಿರುವ ಸಾಧ್ಯತೆಯೂ ಇದೆ. ಎಲ್ಲೋ ಕೆಲವೊಮ್ಮೆ ದುಷ್ಟತನವನ್ನೆಲ್ಲ ಆವಾಹಿಸಿಕೊಂಡುಬರುವ ಕೇಡಿಗ ತಳಿಗಳು ಹುಟ್ಟಿಬಿಡುತ್ತವೆ. ಈಗ ಚಾಲ್ತಿಯಲ್ಲಿರುವ ಮರ‍್ಸ್-2019 ಕೋವಿಡ್-19ಅಂತಹವು.
10 ಸಾವಿರ ವರ್ಷಗಳ ಹಿಂದೆ ಭೂಮಿಗೆ ಬಂದ ಕರೋನಾ ವೈರಸ್ ಬಿಸಿರಕ್ತದ ಬೆನ್ನೆಲುಬಿರುವ ಪ್ರಾಣಿಗಳು, ಹಕ್ಕಿ, ಬಾವಲಿಗಳಿಂದ ಮನುಷ್ಯರಿಗೆ ಬಂದಿದ್ದು. ಹಂದಿ, ದನ, ಕೋಳಿ, ನಾಯಿ, ಫೆರೆಟ್, ಕುದುರೆ, ಟರ್ಕಿ, ಬೆಕ್ಕು, ಮೊಲಗಳಲ್ಲಿ ಶೀತ, ಭೇದಿ, ಕರುಳಿನ ತೊಂದರೆಯುಂಟುಮಾಡುವ ಈ ವೈರಸ್ ಮನುಷ್ಯರನ್ನು ಬಾಧಿಸತೊಡಗಿದ್ದು ಇತ್ತೀಚಿನ ಶತಮಾನಗಳಲ್ಲಿ. ನೂರಿನ್ನೂರು ವರ್ಷಗಳ ಹಿಂದೆ ಪ್ರಾಣಿಗಳ ಶ್ವಾಸಕ್ರಿಯೆಯನ್ನು ಬಾಧಿಸುವ ಕರೋನಾ ವೈರಸ್ ಬಂದರೆ, ಇತ್ತೀಚೆಗೆ ಮನುಷ್ಯರನ್ನು ಬಾಧಿಸುವ ಸಾರ‍್ಸ್, ಮರ‍್ಸ್ ಕಾಯಿಲೆಯ ವೈರಸ್ ಉತ್ಪತ್ತಿಯಾಗಿವೆ.
ಕೋವಿಡ್ 19 ಬಂದರೆ ಏನಾಗುವುದು?
- ಏನೂ ಆಗದೇ ಇರಬಹುದು. ಈ ಸಾಧ್ಯತೆಯೇ ಹೆಚ್ಚು.
- ಕೆಲವರಿಗೆ ವೈರಸ್ ಸೋಂಕುಂಟಾದ ಹದಿನಾಲ್ಕು ದಿನಗಳೊಳಗೆ ತಂಡಿ, ಗಂಟಲುರಿ, ಸಣ್ಣ ಜ್ವರ, ಭೇದಿ ಶುರುವಾಗುತ್ತದೆ.
- ನಂತರ ಮೂಗು, ಗಂಟಲ ಮೂಲಕ ಶ್ವಾಸಕೋಶ ಪ್ರವೇಶಿಸುವ ವೈರಸ್ ಕೆಲವರಲ್ಲಿ ತೀವ್ರತರದ ನ್ಯುಮೋನಿಯಾ ಉಂಟುಮಾಡುತ್ತದೆ. ಅತಿಜ್ವರ, ಕೆಮ್ಮು, ದಮ್ಮು, ವಾಂತಿ, ತಲೆನೋವು, ಉಸಿರಾಟದ ತೊಂದರೆ ಹೆಚ್ಚುತ್ತದೆ.
- ಅತಿ ತೀವ್ರತರವಾಗುವ ಕೆಲವು ಪ್ರಕರಣಗಳಲ್ಲಿ ವಿವಿಧ ಅಂಗಾಂಗಗಳ ವೈಫಲ್ಯತೆಯಾಗಿ ಮರಣವುಂಟಾಗುತ್ತದೆ.
- ಇದುವರೆಗೆ ರೋಗ ಬಾಧಿಸಿದವರಲ್ಲಿ 60 ವರ್ಷ ಮೇಲ್ಪಟ್ಟವರು, ರೋಗನಿರೋಧಕ ಶಕ್ತಿ ಕುಂಠಿತಗೊಂಡವರು, ಎಳೆಯ ಮಕ್ಕಳೇ ಹೆಚ್ಚಿದ್ದಾರೆ. ಬಡದೇಶಗಳಿಗಿಂತ ಮುಂದುವರೆದ ದೇಶಗಳನ್ನು ಹೆಚ್ಚು ಬಾಧಿಸಿದೆ. ಇಂದು ವಿಶ್ವಪಿಡುಗು (ಪ್ಯಾಂಡೆಮಿಕ್) ಎಂದು ಘೋಷಿಸಲ್ಪಟ್ಟಿದೆ. ಯಾಕೆಂದರೆ ಅದು ಸುಲಭದಲ್ಲಿ ಹರಡುವಂಥದು. ಆದರೆ ಇದರಿಂದಾಗುವ ಸಾವುನೋವುಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಸರ್ಕಾರಗಳು, ಸಂಸ್ಥೆಗಳು, ಸಮಾಜಗಳು ನಾನಾ ಸಲಹೆ, ಸೂಚನೆಯಿತ್ತಿವೆ.
ಹರಡುವಿಕೆ ತಡೆಯಲು ಇರುವ ಕೆಲವು ಸುಲಭ ತಂತ್ರಗಳಿವು
- ಅತಿ ಅನಿವಾರ್ಯವಲ್ಲದ ಎಲ್ಲ ಪ್ರಯಾಣ ರದ್ದುಗೊಳಿಸಿ ಇದ್ದಲ್ಲೇ ಇರುವುದು.
- ಬಟ್ಟೆ ಮೇಲೆ ವೈರಸ್ 6 ರಿಂದ 12 ಗಂಟೆ ಕಾಲ ಬದುಕಬಹುದು. ಈ ವೈರಸ್ ಉಷ್ಣಸೂಕ್ಷ್ಮ. 30-35 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಗೆ ಹಾಗೂ ಸೋಪಿಗೆ ಸತ್ತು ಹೋಗುತ್ತದೆ. ಹಾಗಾಗಿ ಪದೇಪದೇ ಸೋಪು ನೀರಿನಲ್ಲಿ ಕೈ ತೊಳೆಯಬೇಕು. ಸೋಪು ಹಚ್ಚಿ ಬಟ್ಟೆ ತೊಳೆದು ಬಿಸಿಲಲ್ಲಿ ಒಣಗಿಸಬೇಕು.
- ಕೆಮ್ಮುವಾಗ ಸೀನುವಾಗ ಮುಖಗವಸಿನಿಂದ ಅಥವಾ ವಸ್ತ್ರದಿಂದ ಮೂಗುಬಾಯಿ ಮುಚ್ಚಿಕೊಂಡಿರಬೇಕು. ಯಾಕೆಂದರೆ ಒಮ್ಮೆ ಸೀನಿದರೆ ಅಥವಾ ಕೆಮ್ಮಿದರೆ 20,000 ಕಿರುಹನಿಗಳು ವಾತಾವರಣಕ್ಕೆ ಸೇರುತ್ತವೆ. ಪ್ರತಿ ಕಿರುಹನಿಯೂ ನೂರಾರು ವೈರಸ್ ಕಣಗಳನ್ನು ಹೊಂದಿದ್ದು ಎದುರಿರುವವರನ್ನು ಬೇರೆಬೇರೆ ರೀತಿ ತಲುಪುತ್ತವೆ. ಹಾಗಾಗಿ ಜನರ ನಡುವೆ ಇರುವಾಗಲೆಲ್ಲ ಮುಖಗವಸು ತೊಡಬೇಕು.
- ಕೆಮ್ಮುವವರು, ಸೀನುವವರಿಂದ ಮೂರು ಮೀಟರ್ ದೂರ ಇದ್ದರೆ ಒಳ್ಳೆಯದು. ಮೂರು ಮೀಟರ್ (10 ಅಡಿ) ಅಂತರ ಸಿಕ್ಕರಷ್ಟೇ ಕೆಮ್ಮು, ಸೀನಿನ ಹನಿಗಳು ನೆಲ ಮುಟ್ಟುತ್ತವೆ.
- ಬಂದವರನ್ನು ಸ್ವಾಗತಿಸುತ್ತ ಅಪ್ಪಿಕೊಳ್ಳುವುದು, ಕೈಕುಲುಕುವುದು, ಮುತ್ತಿಕ್ಕುವುದು ಮಾಡಬಾರದು. ಸಾಮಾಜಿಕ ಅಂತರವಿಟ್ಟುಕೊಂಡು ದೂರದಿಂದಲೇ ಹಾರೈಸಬೇಕು.
- ಲೋಹದ ಮೇಲ್ಮೈ ಮೇಲೆ ವೈರಸ್ 12 ಗಂಟೆ ಕಾಲ ಜೀವಂತ ಇರಬಲ್ಲದು. ಹಾಗಾಗಿ ಅಂತಹ ಮೇಲ್ಮೈಗಳನ್ನು ಮುಟ್ಟುತ್ತ ಇರುವವರು ಪದೇಪದೇ ಸೋಪು ಹಚ್ಚಿ (ಸ್ಯಾನಿಟೈಸರ್ ಹಚ್ಚಿ ಅಲ್ಲ) ಕೈ ತೊಳೆಯಬೇಕು. ಅಂತಹ ಮೇಲ್ಮೈಗಳನ್ನೂ ಶುಚಿಗೊಳಿಸಬೇಕು.
- ನಮ್ಮ ಮೈಕೈಮೇಲೆ 5-10 ನಿಮಿಷ ವೈರಸ್ ಜೀವಂತ ಉಳಿಯಬಹುದು. ಆದರೆ ಆ 5-10 ನಿಮಿಷದಲ್ಲಿ ನಾವು ಅಪ್ರಜ್ಞಾಪೂರ್ವಕವಾಗಿ ಕಣ್ಣು, ಮೂಗು, ಬಾಯಿ, ಕಿವಿ ಮುಟ್ಟಿ ಅಲ್ಲೆಲ್ಲ ಸೇರಿಸಿರುತ್ತೇವೆ. ಹಾಗಾಗಿ ನಮ್ಮ ಮೈ ಮುಖ ಮುಟ್ಟಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು.
2018ರಲ್ಲಿ ಮಲೇರಿಯಾದಿಂದ ವಿಶ್ವಾದ್ಯಂತ 4 ಲಕ್ಷ ಜನ ಸತ್ತಿದ್ದಾರೆ. ಏಡ್ಸ್‌ನಿಂದ 7.7 ಲಕ್ಷ ಜನ ಅಸು ನೀಗಿದ್ದಾರೆ. ಪ್ರತಿ ವರ್ಷ 22 ಸಾವಿರ ಜನ ಡೆಂಗಿಗೆ ಬಲಿಯಾಗುತ್ತಾರೆ. ಹುಚ್ಚುನಾಯಿ ಕಡಿತದ ರೇಬಿಸ್‌ನಿಂದ ವಾರ್ಷಿಕ 55 ಸಾವಿರ ಜನ ಸಾಯುತ್ತಾರೆ. ಒಂದೂವರೆ ಲಕ್ಷ ಜನ ಟೈಫಾಯ್ಡ್‌ನಿಂದ ಸಾಯುತ್ತಾರೆ. 40 ಸಾವಿರ ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ. ಹಾಗಿರುವಾಗ ಇದುವರೆಗೆ 13000 ಜನರನ್ನು ಕೊಂದ ಕೋವಿಡ್ ಬಗೆಗೇಕೆ ಇಷ್ಟು ಭೀತಿ?
ಭೀತಿ ಏಕೆಂದರೆ ನಮಗೆ ಅದರ ಬಗ್ಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು. ಅದರ ಕಾರಣ, ನಿಯಂತ್ರಣ, ಚಿಕಿತ್ಸೆ, ಪರಿಣಾಮ, ಲಸಿಕೆ, ಹರಡುವಿಕೆ ಬಗೆಗೆ ಹೆಚ್ಚು ಗೊತ್ತಿಲ್ಲ. ಇನ್ನೂ ಲಸಿಕೆ, ಚುಚ್ಚುಮದ್ದು ಕಂಡುಹಿಡಿದಿಲ್ಲ. ಮನುಷ್ಯರ ಮೇಲೆ ಪ್ರಯೋಗಿಸಬಹುದಾದ ಲಸಿಕೆ ಕಂಡುಹಿಡಿಯಲು ತಿಂಗಳುಗಳೇ ಬೇಕಾಗಬಹುದು. ಬೃಹತ್ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ವರುಷಗಳೇ ಬೇಕಾಗಬಹುದು. ಹಾಗಾಗಿ ಇದರ ಬಗೆಗೆ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತವಾಗಿದೆ.
14ನೇ ಶತಮಾನದ ಬ್ಯುಬೋನಿಕ್ ಪ್ಲೇಗ್ ವಿಶ್ವದ ಕಾಲುಭಾಗ ಜನಸಂಖ್ಯೆಯನ್ನು ಕೊಂದು ಹಾಕಿತ್ತು. 102 ವರ್ಷ ಕೆಳಗೆ, 1918ರಲ್ಲಿ ಬಂದ ಎಚ್೧ಎನ್೧ ಇನ್‌ಫ್ಲುಯೆಂಜಾ ಕಾಯಿಲೆ ವಿಶ್ವಾದ್ಯಂತ ಮಿಂಚಿನಂತೆ ಹರಡಿ 5 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. (ವಿಶ್ವದ ಮೂರನೆ ಒಂದು ಭಾಗ ಜನರಿಗೆ ಸೋಕಿದ ಆ ವೈರಸ್ ಹಕ್ಕಿಗಳಿಂದ ಮನುಷ್ಯರಿಗೆ ಬಂದಿತ್ತು.) 2009ರ ಇನ್‌ಫ್ಲುಯೆಂಜಾ ಎಚ್1ಎನ್1 ಕನಿಷ್ಟ 2 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತು. (ಅದು ಹಂದಿಗಳಿಂದ ಮನುಷ್ಯರಿಗೆ ರವಾನೆಯಾಗಿತ್ತು.) ಇದೂ ಅಂತಹ ಒಂದು ವಿಶ್ವವ್ಯಾಧಿಯಾಗದಿರಲಿ ಎನ್ನುವುದೇ ಈ ಎಲ್ಲ ಮುನ್ನೆಚ್ಚರಿಕೆಗಳ ಉದ್ದೇಶವಾಗಿದೆ.
ಆದ್ದರಿಂದ ಕೋವಿದಕ್ಕೆ ಅಂಜದೇ, ಆತಂಕದಿಂದ ದಿನ ದೂಡದೇ, ಸಮಯ ವ್ಯಯವಾಯಿತೆಂದು ದುಃಖಿಸದೇ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳೋಣ. ಅನಿವಾರ್ಯವಲ್ಲದ, ತುರ್ತು ಅಲ್ಲ ಎಲ್ಲ ತಿರುಗಾಟ, ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸೋಣ. ಚಿಕಿತ್ಸೆಯ ಹುಸಿ ಭರವಸೆಗಳಿಗೆ, ಗಾಳಿಸುದ್ದಿಗಳಿಗೆ ಕಿವಿಗೊಡದಿರೋಣ. ಅನಾಯಾಸವಾಗಿ ಸಿಕ್ಕ ಈ ವಿರಾಮ-ರಜೆಯ ಅಮೂಲ್ಯ ಸಮಯವನ್ನು ಕುಟುಂಬದೊಂದಿಗೆ ಕಳೆಯಲಿಕ್ಕೆ, ಆತ್ಮಾವಲೋಕನ ಮಾಡಿಕೊಳ್ಳಲಿಕ್ಕೆ, ನಾಳಿನ ನಡೆಗಳ ಬಗೆಗೆ ಯೋಚಿಸಲಿಕ್ಕೆ ವಿನಿಯೋಗಿಸೋಣ. ನಮ್ಮ ಮುಂದಿನ ತಲೆಮಾರಿಗೆ ಆರೋಗ್ಯವಂತ ನೆಲ, ಸಮಾಜ ಬಿಟ್ಟು ಹೋಗುವುದು ಹೇಗೆಂಬ ಬಗೆಗೆ ಚಿಂತಿಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ 5 ದಿನಗಳ ವೃತ್ತಿ ನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶಿಬಿರದ ನಂತರ ತಿಂಗಳಲ್ಲಿ ಶಿಬಿರಾರ್ಥಿಗಳು ರಚಿಸಿದ ಆಯ್ಕೆಗೊಂಡ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಸ್ಪಷ್ಟವಾಗಿ ಕನ್ನಡ ಓದಲು, ಬರೆಯಲು ಬರುವ ಮತ್ತು ರಂಗಸಾಹಿತ್ಯ ಕುರಿತು ಪ್ರಾಥಮಿಕ ಜ್ಞಾನವುಳ್ಳ 18 ವರ್ಷ ಮೇಲ್ಪಟ್ಟವರು ಸ್ವ-ಪರಿಚಯದೊಂದಿಗೆ 20 ಜನವರಿ 2025 ರೊಳಗೆ ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಸೌಲಭ್ಯ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಮೊದಲನೇ ಮಹಡಿ, ಕೊಠಡಿ ಸಂ:38ಎ, ಜಿಲ್ಲಾಡಳಿತ ಭವನ, ಪಿ.ಬಿ.ರಸ್ತೆ ದಾವಣಗೆರೆ ದೂ.ಸಂ:08192-200635, 9341010712 ನ್ನು ಸಂಪರ್ಕಿಸಲು ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯ ಅಗತ್ಯ : ಡಾ. ವೆಂಕಟೇಶ್ ಬಾಬು
ಸುದ್ದಿದಿನ,ಚನ್ನಗಿರಿ:ವಿದ್ಯಾರ್ಥಿಗಳು ಇಂದಿನ ಯುಗಕ್ಕೆ ಅಗತ್ಯವಿರುವ ಎಲ್ಲಾ ಜೀವನ ಹಾಗೂ ತಂತ್ರಜ್ಞಾನ, ವಿಶೇಷವಾಗಿ ಡಿಜಿಟಲ್ ಕೌಶಲ್ಯಗಳನ್ನು ಅರಿತಿರಬೇಕು ಎಂದು ಪ್ರಾಧ್ಯಾಪಕ ಡಾ. ವೆಂಕಟೇಶ್ ಬಾಬು ಅವರು ತಿಳಿಸಿದರು.
ಬುಧವಾರ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಕೋಶದ ಪ್ರೇರಣಾ ವಿಭಾಗದ ವತಿಯಿಂದ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಂಪ್ಯೂಟರ್ ಆಧರಿತ ಉದ್ಯೋಗದ ಕೌಶಲಗಳನ್ನು ಹೊಂದಿದ್ದರೆ ಉದ್ಯೋಗಗಳು ನಮ್ಮನ್ನ ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.
ಕಾಲೇಜಿನ ಅಲ್ಮನಿ ವಿದ್ಯಾರ್ಥಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀ ಮಧು ಜಿ.ಟಿ ರವರು ತಾನು ಈ ಕಾಲೇಜಿನಲ್ಲಿ ಕಲಿಯುವಾಗ ಇಲ್ಲದಿರುವ ಎಲ್ಲಾ ಸೌಲಭ್ಯಗಳು/ ಅವಕಾಶಗಳು ಈಗ ದೊರೆಯುತ್ತಿವೆ ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಅಮೃತೇಶ್ವರ ಬಿ.ಜಿ ಅವರು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಡಿಜಿಟಲ್ ಸ್ಕಿಲ್ ಹಾಗೂ ಇಂಗ್ಲಿಷ್ ಸಂವಹನ ಜ್ಞಾನದ ಅವಶ್ಯಕತೆ ಇದ್ದು ಪದವಿಯೊಂದಿಗೆ ಡಿಜಿಟಲ್ ಕೌಶಲ್ಯಗಳ ಅರಿ ವನ್ನು ವಿದ್ಯಾರ್ಥಿಗಳಿಗೆ ಕಾಲೇಜಿನ ಉದ್ಯೋಗ ಕೋಶ ವೇದಿಕೆಯು ಉಚಿತವಾಗಿ ನೀಡುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಕರೆ ನೀಡಿದರು.
ಡಾ. ಮಂಜುಳಾ ಟಿ ಪ್ಲೇಸ್ಮೆಂಟ್ ಸೆಲ್ ಸಂಚಾಲಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವರ್ತಮಾನದ ಜಗತ್ತಿಗೆ ಡಿಜಿಟಲ್ ಕೌಶಲ ವಿಶೇಷವಾಗಿ ವಿದ್ಯಾರ್ಥಿ ಗಳು ಅತಿ ತುರ್ತಾಗಿ ಕಲಿಯುವ ಅವಶ್ಯಕತೆ ಇದೆ ಎಂದರು.
ಬಿ ಸಿ ಎ/ ಸಿ ಎಸ್ ವಿಭಾಗದ ಮುಖ್ಯಸ್ಥರು ಶ್ರೀಮುರುಳಿಧರವರು, ವಾಣಿಜ್ಯಶಾಸ್ತ್ರ ವಿಭಾಗದ ಲಕ್ಷ್ಮಿ ರಂಗನಾಥ್, ಐಕ್ಯೂ ಏ ಸಿ ಸಂಚಾಲಕರಾದ ಶ್ರೀವಿಜಯಕುಮಾರ್ ಎನ್ ಸಿ ಡಾ. ಪ್ರದೀಪ್ ಕುಮಾರ್. ಡಾ. ದಾಕ್ಷಾಯಿಣಿ ಡೋಂಗ್ರೆ ಹಾಗೂ ಬೋಧಕ/ ಬೋಧಕೇತ ತರರು ಹಾಜರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ವಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉದ್ಘಾಟಿಸಲಾಯಿತು ಇಂದಿನಿಂದ ಸತತ 15 ದಿನಗಳು ಮದ್ಯಾಹ್ನ 2:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಿಜಿಟಲ್ ಸ್ಕಿಲ ಬಗ್ಗೆ ಪ್ರಾಯೋಗಿಕ ತರಗತಿಗಳು ಮತ್ತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಪಿಜಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಖರೀದಿಸಲು ನೋಂದಣಿ ಆರಂಭ
ಸುದ್ದಿದಿನ,ದಾವಣಗೆರೆ:ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್ ರೂ.2300 ಹಾಗೂ ಎ ಗ್ರೇಡ್ ಪ್ರತಿ ಕ್ವಿಂಟಾಲ್‍ಗೆ ರೂ.2320 ರಂತೆ ಹಾಗೂ ಪ್ರತಿ ಕ್ವಿಂಟಾಲ್‍ಗೆ ರಾಗಿಗೆ ರೂ.4290 ರಂತೆ ಖರೀದಿಸಲು ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
ನೋಂದಣಿ ಕೇಂದ್ರಗಳು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ದಾವಣಗೆರೆ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹೊನ್ನಾಳ್ಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಜಗಳೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹರಿಹರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಚನ್ನಗಿರಿ ಇಲ್ಲಿ ಕೃಷಿ ಇಲಾಖೆಯವರು ಸಿದ್ಧಪಡಿಸಿದ ಫ್ರೂಟ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲು ತಿಳಿಸಿದೆ. ನೊಂದಣಿ ಆರಂಭವಾಗಿದ್ದು 2025 ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಖರೀದಿಸಲಾಗುವುದು.
ರೈತರು ಕೃಷಿ ಇಲಾಖೆ ನೀಡಿರುವ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಫೂಟ್ ನೊಂದಣಿ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ಸಾಧನದ ಮುಖಾಂತರ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಫೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ನೇರವಾಗಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಮತ್ತು ಎನ್‍ಪಿಸಿಎಲ್ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಖರೀದಿ ಕೇಂದ್ರಕ್ಕೆ ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ನೀಡಬೇಕು.
ರೈತರು ತಾವು ನೀಡುವ ಎಲ್ಲಾ ದಾಖಲಾತಿಗಳಲ್ಲಿಯೂ ಒಂದೇ ಹೆಸರು ನಮೂದಾಗಿರತಕ್ಕದ್ದು, ಮತ್ತು ರಾಗಿ ತಂದು ಖರೀದಿ ಕೇಂದ್ರದಲ್ಲಿ ರಾಶಿ ಹಾಕಬೇಕು. ರಾಗಿ ಗುಣಮಟ್ಟ ಪರಿಶೀಲಿಸಲು ನೇಮಿಸಲ್ಪಟ್ಟ ಗ್ರೇಡರ್ಸ್ ದಾಸ್ತಾನಿನ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ಧೃಢಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟ ಸರಿಯಿಲ್ಲವೆಂದು ದೃಢಪಡಿಸಿದ್ದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು.
ಪ್ರತಿ ರೈತರಿಂದ ಪ್ರತಿ ಎಕರೆಗೆ ರಾಗಿ 10.00 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಮತ್ತು ರೈತರಿಂದ ಭತ್ತವನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ತಹಶೀಲ್ದಾರರು, ಉಪವಿಭಾಗಾಧಿಕಾರಿ, ಜಂಟಿ ನಿರ್ದೇಶಕರು (ಆಹಾರ), ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು. ಅಥವಾ ದೂರವಾಣಿ ಸಂಖ್ಯೆ -08192-296770 ಗೆ ಕರೆಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243