Connect with us

ದಿನದ ಸುದ್ದಿ

ದುಡಿಯುವ ವರ್ಗದ ಧೀಮಂತ ನಾಯಕ ಕಾಂII ಹೆಚ್‌ಕೆಆರ್ – ಒಂದು ನೆನಪು

Published

on


ಈ ನಾಡು ಕಂಡ ಅದ್ಭುತ ಕಾರ್ಮಿಕ ನಾಯಕ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ ಅವರು ದಿನಾಂಕ 08-05-2021 ರಂದು ನಿಧನರಾಗಿದ್ದರು. ಇಂದು ಅವರ ಪ್ರಥಮ ಪುಣ್ಯ ಸ್ಮರಣೆ.


ದಾವಣಗೆರೆ ಎಂದರೆ ಕಾರ್ಮಿಕರ ಹೋರಾಟಕ್ಕೆ ಹೆಸರುವಾಸಿಯಾದ ನೆಲ. ಈ ಮಣ್ಣಿನ ಗುಣವೇ ಸಂಘಟನೆ, ಹೋರಾಟ, ಚಳುವಳಿಗಳಿಗೆ ಪ್ರೇರಣೆ ನೀಡುತ್ತದೆ ಅಂತನಿಸುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕಾರ್ಮಿಕರ ಹೋರಾಟ ಎಂದೊಡನೆ ತಟ್ಟಂತೆ ನೆನಪಾಗುವುದೇ ದಾವಣಗೆರೆ‌.

ಕಾರ್ಮಿಕ ಸಂಘಟನೆ ಮಾತ್ರವಲ್ಲದೇ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ಉಚ್ಛ್ರಾಯ ಸ್ಥಿತಿಗೆ ತಂದಂತಹ ಊರು ಕೂಡಾ ದಾವಣಗೆರೆ. ಇಂತಹ ಕ್ರಾಂತಿಕಾರಿ ಗುಣಗಳನ್ನು ಹೊಂದಿದ್ದಂತಹ ದಾವಣಗೆರೆಯಲ್ಲಿ ದಿವಂಗತ ಕಾಮ್ರೇಡ್ ಪಂಪಾಪತಿಯವರ ಗರಡಿಯಲ್ಲಿ ಬೆಳೆದು ದುಡಿಯುವ ವರ್ಗದ ಧೀಮಂತ ನಾಯಕನಾಗಿ ಬೆಳೆದು ಕಾರ್ಮಿಕರ ಕಷ್ಟ ಸುಖಗಳನ್ನೇ ತನ್ನ ಉಸಿರಾಗಿಸಿಕೊಂಡು ಬೆಳೆದ ಕಾರ್ಮಿಕ ನಾಯಕನೇ ಕಾಮ್ರೇಡ್ ಹೆಚ್.ಕೆ.ರಾಮಚಂದ್ರಪ್ಪ.

ಭಾರತೀಯ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕನಾಗಿ, ಅಸಂಘಟಿತ ವರ್ಗದ ದುಡಿಯುವ ಜನರ ಹೋರಾಟಗಳಿಗೆ ದೊಡ್ಡ ಶಕ್ತಿಯಾಗಿ ಹಾಗೂ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮಾರ್ಗದರ್ಶಕರಾಗಿದ್ದ ಕಾಂII ಹೆಚ್.ಕೆ.ರಾಮಚಂದ್ರಪ್ಪ ಅವರು ನಿಧನರಾಗಿ ಒಂದು ವರ್ಷವಾಯಿತು. ಅವರ ನಿಧನ ಕಾರ್ಮಿಕ ವಲಯಕ್ಕೆ ಅದರಲ್ಲೂ ಬಹುಮುಖ್ಯವಾಗಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಬಹುದೊಡ್ಡ ಆಘಾತವನ್ನು ತಂದೊಡ್ಡಿದೆ.

ಹೆಚ್.ಕೆ.ರಾಮಚಂದ್ರಪ್ಪ ಅವರು ವಿಶೇಷವಾಗಿ ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತರ ಸಂಘಟನೆ ಹಾಗೂ ಇನ್ನೂ ಹಲವಾರು ಕಾರ್ಮಿಕ ಸಂಘಟನೆಗಳಿಗೆ ಧ್ವನಿಯಾಗಿ ತಮ್ಮ ಜೀವನವನ್ನೇ ಕಾರ್ಮಿಕರ ಪರವಾದ ಹೋರಾಟಗಳಿಗೆ ಸಮರ್ಪಿಸಿಕೊಂಡಿದ್ದರು.
ತಮ್ಮ ಮುಂದಿನ ಹೋರಾಟಗಳಿಗೆ ಮುಂದೆ ನಾಯಕ ಯಾರು ಎನ್ನುವ ಪ್ರಶ್ನೆ ದುಡಿಯುವ ವರ್ಗದ ಮುಂದಿದೆ ಎಂದರೂ ತಪ್ಪಾಗಲಾರದು.

ಬಹುಷಃ ಅವರ ಆರು ದಶಕಗಳ ದಣಿವರಿಯದ ಹೋರಾಟದ ಜೀವನದಲ್ಲಿ ಸದಾ ಕಾಲ ಒಡನಾಡಿಯಾಗಿದ್ದ ಕಾಂII ಆನಂದ್ ರಾಜ್ ಅವರ ಮಾರ್ಗದರ್ಶನದಲ್ಲಿ ಕಾಂII ಅವರಗೆರೆ ಉಮೇಶ್ ಹೆಚ್.ಜಿ. ಹಾಗೂ ಕಾಂII ಅವರಗೆರೆ ಚಂದ್ರು ಹಾಗೂ ಮತ್ತಿತರರು ಹೆಚ್‌ಕೆಆರ್ ಅವರು ನಡೆಸಿಕೊಂಡು ಬಂದ ಹೋರಾಟದ ಕ್ರಾಂತಿಕಾರಿ ರಥವನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡುವ ಮೂಲಕ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸಬೇಕಾಗಿದೆ.

ಸೈದ್ಧಾಂತಿಕವಾಗಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಹೆಚ್‌ಕೆಆರ್ ಅವರು ವಿಶಾಲ ದೃಷ್ಟಿ ಕೋನವನ್ನು ಹೊಂದಿದ್ದ ನಾಯಕರಾಗಿದ್ದರು. ದುಡಿಯುವ ವರ್ಗದ ಅದರಲ್ಲೂ ಪ್ರಮುಖವಾಗಿ ಅಂಗನವಾಡಿ, ಬಿಸಿಯೂಟ, ಆಶಾ, ಕಟ್ಟಡ ಕಾರ್ಮಿಕರು, ಕೈಗಾರಿಕಾ ವಲಯದ ಕಾರ್ಮಿಕರು, ಆಟೋ ಚಾಲಕರು, ಸಾ ಮಿಲ್ ಕಾರ್ಮಿಕರು, ಪುಟ್‌ಪಾತ್ ವ್ಯಾಪಾರಸ್ಥರು, ಹೋಟೆಲ್ ಕಾರ್ಮಿಕರು, ಮನೆಗೆಲಸದವರು ಹೀಗೆ ಹತ್ತು ಹಲವು ಕಾರ್ಮಿಕ ಸಂಘಟನೆಗಳಿಗೆ ಇವರೇ ಉಸಿರಾಗಿದ್ದರು, ಶಕ್ತಿಯಾಗಿದ್ದರು.

ಸಂಘಟಿತ ವಲಯದ ಬ್ಯಾಂಕ್ ನೌಕರರು, ವಿಮಾ ನೌಕರರು, ರೈಲ್ವೇ ನೌಕರರು, ದೂರಸಂಪರ್ಕ ನಿಗಮದ ನೌಕರರು, ಅಂಚೆ ನೌಕರರು ಮುಂತಾದವರ ಸಂಘಟನೆಗಳಿಗೆ ಮಾರ್ಗದರ್ಶಕರಾಗಿದ್ದರು ಮತ್ತು ಅವರ ಯಾವತ್ತೂ ಹೋರಾಟಗಳಿಗೆ ಸದಾ ಪ್ರೋತ್ಸಾಹ ನೀಡಿ ನೆರವಾಗುತ್ತಿದ್ದರು. ಅಲ್ಲಿನ ಯುವ ನಾಯಕರುಗಳನ್ನು ಸೈದ್ಧಾಂತಿಕವಾಗಿ ಬೆಳೆಸಲು ಮತ್ತು ಎಡಪಂಥೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಪ್ರಬಲ ಹೋರಾಟಗಾರರನ್ನಾಗಿ ರೂಪಿಸಲು ವಿಶೇಷ ಮುತುವರ್ಜಿವಹಿಸುತ್ತಿದ್ದರು.

1943 ರ ಪೆಬ್ರವರಿ 2 ರಂದು ಹರಪನಹಳ್ಳಿ ತಾಲೂಕಿನ ಉಚ್ಛಂಗಿದುರ್ಗದಲ್ಲಿ ಕೆಂಪಣ್ಣ ಮತ್ತು ಕೆಂಪಮ್ಮ ದಂಪತಿಗಳ ಮಗನಾಗಿ ಜನಿಸಿದ ಹೆಚ್‌ಕೆಆರ್ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಉತ್ತಮ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. 1960 ರಲ್ಲಿ ದಾವಣಗೆರೆಯ ಚಂದ್ರೋದಯ ಮಿಲ್‌ನಲ್ಲಿ ಕೆಲಸಕ್ಕೆ ಸೇರಿದರು. ಆ ಸಂದರ್ಭದಲ್ಲಿ ಅಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯವನ್ನು ಪ್ರತಿಭಟಿಸಿದರು.

ಇವರ ಹೋರಾಟದ ಮನೋಭಾವನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಕಾಂII ಪಂಪಾಪತಿ, ಕಾಂII ಸುರೇಶ್, ಕಾಂIIಶೇಖರಪ್ಪ ಇವರನ್ನು ಕಮ್ಯುನಿಸ್ಟ್ ತೆಕ್ಕೆಗೆ ಸೇರಿಸಿಕೊಂಡರು. ಅಲ್ಲಿಂದ ಅವರ ಹೋರಾಟದ ಜೀವನ ಆರಂಭವಾಯಿತು. ಎಲ್ಲಿ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತೋ ಅಲ್ಲಿ ಹೆಚ್‌ಕೆಆರ್ ಹಾಜರಿರುತ್ತಿದ್ದರು. ವೈಯಕ್ತಿಕ ಬದುಕಿನ ಹಿತಾಸಕ್ತಿಗಳನ್ನು ಕಡೆಗಣಿಸಿ ಕಾರ್ಮಿಕರ ಹಕ್ಕುಗಳಿಗಾಗಿ, ಕಾರ್ಮಿಕರ ನ್ಯಾಯಬದ್ಧವಾದ ಬೇಡಿಕೆಗಳ ಈಡೇರಿಕೆಗಾಗಿ ಕಟಿಬದ್ಧರಾಗಿ ನಿಂತರು‌. ಚಳುವಳಿ, ಹೋರಾಟ ಇವರ ಜೀವನದ ಅವಿಭಾಜ್ಯ ಅಂಗವಾಯಿತು‌.

ಎ.ಐ.ಟಿ.ಯು.ಸಿ. ಸಂಘಟನೆಯ ಕೆಂಪು ಬಾವುಟದ ಆಶ್ರಯದಲ್ಲಿ ಅಸಂಘಟಿತ ಕಾರ್ಮಿಕರ, ದುಡಿಯುವ ಮಹಿಳೆಯರ, ರೈತ ಕಾರ್ಮಿಕರ, ವಿದ್ಯಾರ್ಥಿಗಳ, ದುರ್ಬಲವರ್ಗದವರ, ಕೊಳಚೆ ಪ್ರದೇಶಗಳ ನಿವಾಸಿಗಳ ಪರವಾದ ಹೋರಾಟಕ್ಕೆ ಧುಮುಕಿದರು‌. ಕಾರ್ಲ್ ಮಾರ್ಕ್ಸ್, ಲೆನಿನ್ ಅವರುಗಳ ತತ್ವ ಸಿದ್ಧಾಂತ ಮೂಲಕ ತಮ್ಮ ಮನಸ್ಸನ್ನು ಹದಗೊಳಿಸಿಕೊಂಡರು‌. ಶೋಷಣೆರಹಿತ ಸಮ ಸಮಾಜದ ನಿರ್ಮಾಣದ ಕನಸು ಕಂಡರು. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿದರು‌.

ಈ ಹೋರಾಟದ ಹಾದಿಯಲ್ಲಿ ಅನೇಕ ನೋವು, ಸಂಕಷ್ಟ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು. ಬಂಡವಾಳಷಾಹಿ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸವನ್ನೂ ಅನುಭವಿಸಬೇಕಾಯಿತು‌. ಅವರ ಕುಟುಂಬವರ್ಗ ಇನ್ನಿಲ್ಲದ ಕಷ್ಟಕ್ಕೆ ತುತ್ತಾಗಬೇಕಾಯಿತು. ಆದರೂ ಅವರು ಎದೆಗುಂದದೇ ಹೋರಾಟದ ಹಾದಿಯಲ್ಲಿ ಮುಂದುವರೆದರು. ಪಂಪಾಪತಿಯವರು 1978, 1983, 1985 ರಲ್ಲಿ ದಾವಣಗೆರೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಹೆಚ್‌ಕೆಆರ್ ಶ್ರಮ ಬಹಳಷ್ಟಿತ್ತು.

ಪಂಪಾಪತಿಯವರ ಜೊತೆ ಜೊತೆಗೆ ರಾಜಕೀಯವಾಗಿ ಇವರೂ ಬೆಳೆದರು. 1974 ರಿಂದ ಸತತವಾಗಿ 21 ವರ್ಷಗಳ ಕಾಲ ದಾವಣಗೆರೆ ನಗರಸಭಾ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಅನೇಕ ಜನಪರವಾದ ಆಡಳಿತವನ್ನು ನೀಡಿದರು. ಕಮ್ಯುನಿಸ್ಟ್ ಆಡಳಿತದ ವೈಭವವನ್ನು ದಾವಣಗೆರೆಯ ಹಳೆತಲೆಮಾರಿನ ಜನರು ಈಗಲೂ ಹೆಮ್ಮೆಯಿಂದ ನೆನೆಯುತ್ತಾರೆ. ಮೇ 1 ವಿಶ್ವ ಕಾರ್ಮಿಕ ದಿನಾಚರಣೆ ಬಂತೆಂದರೆ ದಾವಣಗೆರೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಹತ್ತಾರು ಸಾವಿರ ಕಾರ್ಮಿಕರ ಮೆರವಣಿಗೆ, ಮುಗಿಲು ಮುಟ್ಟುವಂತಹ ಕಾರ್ಮಿಕರ ಘೋಷಣೆಗಳು ಕಾರ್ಮಿಕರ ದಿನಾಚರಣೆಗೆ ಕೆಳೆಕಟ್ಟುವಂತಿತ್ತು.

ಅದೇ ಮೇ ತಿಂಗಳಿನಲ್ಲಿಯೇ ಕಾಮ್ರೇಡ್ ಹೆಚ್‌.ಕೆ.ರಾಮಚಂದ್ರಪ್ಪ ಅವರು ಅಸ್ತಂಗತರಾಗಿದ್ದು ಕಾಕತಾಳೀಯವೇ ಸರಿ. ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಕಾರ್ಮಿಕರ ಪರವಾದ ಹೋರಾಟದ ಮನೋಭಾವವನ್ನು ಅವರು ತಮ್ಮ ಉಸಿರಿರುವವರೆಗೂ ಬಿಡಲಿಲ್ಲ‌. ಇವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಅನೇಕ ರಾಜಕೀಯ ಪಕ್ಷಗಳು ಇವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದರು. ಇವರ ಕಣ್ಣೆದುರೇ ಅನೇಕ ಕಮ್ಯುನಿಸ್ಟ್ ನಾಯಕರುಗಳು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದರು‌.

ಒಂದು ವೇಳೆ ಇವರು ಕೂಡಾ ಬೇರೆ ಯಾವುದಾದರೂ ಪ್ರಬಲ ರಾಜಕೀಯ ಪಕ್ಷಕ್ಕೆ ಸೇರಿದ್ದೇ ಹೌದಾಗಿದ್ದರೆ ಖಂಡಿತವಾಗಿಯೂ ಸಂಸದರಾಗಿಯೋ ಶಾಸಕರಾಗಿಯೋ ಆಯ್ಕೆಗೊಳ್ಳುವುದು ಶತಸಿದ್ಧವಾಗಿತ್ತು ಎಂದು ಅವರ ಸಮಕಾಲೀನ ಮಿತ್ರರೇ ಹೇಳುತ್ತಾರೆ‌. ಆದರೆ ಹೆಚ್‌ಕೆಆರ್ ಅವರು ಕಲ್ಲುಬಂಡೆಯಂತೆ ಕಮ್ಯುನಿಸ್ಟ್ ಪಕ್ಷದ ಜೊತೆ ನಿಂತರು‌. ತತ್ವ, ಸಿದ್ಧಾಂತಗಳಿಗೆ ಕಟಿಬದ್ಧರಾಗಿದ್ದ ಹೆಚ್‌ಕೆಆರ್ ಅವರು ತಮ್ಮ ಕಮ್ಯುನಿಸ್ಟ್ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲಿಲ್ಲ ಎನ್ನುವುದು ಸೂರ್ಯನಷ್ಟೇ ಸತ್ಯ.

ಇವರ ಹೋರಾಟದ ಜೀವನವನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ, ಅಭಿನಂದಿಸಿ, ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿವೆ‌. ಅದರಲ್ಲಿ ಮುಖ್ಯವಾಗಿ ಚಿತ್ರದುರ್ಗದ ಶ್ರೀ ಮುರುಘಾ ಮಠವು ಪ್ರತೀ ವರ್ಷ ಕೊಡಮಾಡುವ ಪ್ರತಿಷ್ಠಿತ “ಶೂನ್ಯ ಪೀಠ ಚನ್ನಬಸವ ಪ್ರಶಸ್ತಿಯನ್ನು 2015 ರಲ್ಲಿ ಕೊಡಲಾಗಿತ್ತು. ಪ್ರಶಸ್ತಿಯು ರೂ.25000/- ನಗದು ಹಣವನ್ನೂ ಹೊಂದಿತ್ತು. ಹೆಚ್‌ಕೆಆರ್ ಅವರು ಆ ಪ್ರಶಸ್ತಿಯ ನಗದು ಹಣವನ್ನು ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿಯೇ ಶ್ರೀ ಮಠದ ಸಮಾಜಮುಖಿ ಕಾರ್ಯಗಳಿಗೆ ದೇಣಿಗೆಯಾಗಿ ನೀಡಿದ್ದು ಅವರ ಔದಾರ್ಯತೆಯನ್ನು ತೋರಿಸುತ್ತದೆ ಮತ್ತು ಸೇರಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನು ಕಾಮ್ರೇಡ್ ಹೆಚ್.ಕೆ‌.ರಾಮಚಂದ್ರಪ್ಪನವರನ್ನು ರಾಜ್ಯಾದ್ಯಂತ ಎಲ್ಲರೂ ಪಕ್ಷಾತೀತವಾಗಿ ಗೌರವಿಸುತ್ತಿದ್ದರು. ಯಾವುದೇ ಸರಕಾರಿ ಕಛೇರಿಗಳಿಗೆ ಇವರು ಭೇಟಿ ನೀಡಿದಾಗ ಅಧಿಕಾರಿಗಳು ಎದ್ದು ನಿಂತು ಇವರಿಗೆ ಗೌರವ ಕೊಡುತ್ತಿದ್ದರು. 2015ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದಾವಣಗೆರೆಗೆ ಬರುವ ಕಾರ್ಯಕ್ರಮವಿತ್ತು. ಐ‌ಟಿಐ ಕಾಲೇಜಿನಲ್ಲಿ ಹೆಲಿಕಾಪ್ಟರ್ ಬಂದಿಳಿಯಿತು.

ಸಹಜವಾಗಿಯೇ ಸಾವಿರಾರು ಅಭಿಮಾನಿಗಳು, ರಾಜಕೀಯ ಧುರೀಣರು ನೆರೆದಿದ್ದರು. ಹೆಚ್‌ಕೆಆರ್ ನೇತೃತ್ವದಲ್ಲಿ ಒಂದಿಷ್ಟು ಕಾರ್ಮಿಕರು ಕೂಡಾ ತಮ್ಮ ಮನವಿಯನ್ನು ಸಲ್ಲಿಸಲು ಕಾಯುತ್ತಿದ್ದರು. ಸಿದ್ದರಾಮಯ್ಯನವರು ಹೆಲಿಕಾಪ್ಟರ್ ಇಳಿದು ಎಲ್ಲರ ಕಡೆಗೆ ಒಮ್ಮೆ ದೃಷ್ಟಿಹಾಯಿಸಿದರು. ಸೀದಾ ಅವರು ಬಂದಿದ್ದು ಹೆಚ್‌ಕೆಆರ್ ಬಳಿಗೆ. ಎನ್ರೀ ರಾಮಚಂದ್ರಪ್ಪ ಅವರೇ ಚೆನ್ನಾಗಿದ್ದೀರಾ ಎಂದು ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತನಾಡಿಸಿ ಮನವಿಪತ್ರವನ್ನು ತೆಗೆದುಕೊಂಡರು. ಹೆಚ್‌ಕೆಆರ್ ಅವರು ಅಂಗನವಾಡಿ ಕಾರ್ಯಕರ್ತದ ಗೌರವಧನವನ್ನು ಹೆಚ್ಚಿಸುವಂತೆ ಮನವಿ ಮಾಡಿದರು.

ಅದರಂತೆಯೇ ಸಿದ್ದರಾಮಯ್ಯನವರು ಮುಂದಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು ಹೆಚ್ಚಿಸಿದ್ದರು‌. ಹೀಗೆ ಅಜಾತಶತ್ರುವಿನಂತೆ ಎಲ್ಲರ ಗೌರವಕ್ಕೆ ಪಾತ್ರರಾದ ಧೀಮಂತ ವ್ಯಕ್ತಿತ್ವ ಅವರದಾಗಿತ್ತು. ಅವರು ನಿಧನರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಅವರ ಬಂಧು ಬಾಂಧವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಬಂಧುಗಳು ಕೊರೋನಾ ಭಯವನ್ನು ಲೆಕ್ಕಿಸದೇ ಧಾವಿಸಿದ್ದು ಅವರ ಜನಪ್ರಿಯತೆಯನ್ನು ಸಾರಿ ಸಾರಿ ಹೇಳುತಿತ್ತು. ಅಂಗನವಾಡಿ ಹಾಗೂ ಬಿಸಿಯೂಟ ಸಂಘಟನೆಗಳ ಮಹಿಳಾ ಕಾರ್ಮಿಕರಂತೂ ತಮ್ಮ ಸ್ವಂತ ಸಹೋದರನನ್ನೋ ತಂದೆಯನ್ನೋ ಕಳೆದುಕೊಂಡಂತೆ ಬಿಕ್ಕಿ ಬಿಕ್ಕಿ ಅಳುತಿದ್ದುದು ಮನಕಲುಕುವಂತಿತ್ತು.

ಹೆಚ್‌ಕೆಆರ್ ಅವರ ಉಸಿರು ನಿಂತಿರಬಹುದು. ಆದರೆ ಅವರ ಹೆಸರು ಲಕ್ಷಾಂತರ ಕಾರ್ಮಿಕರ ಮನದಲ್ಲಿ ಹಚ್ಚಹಸಿರಾಗಿ ಮುಂದಿನ ಹೋರಾಟಗಳಿಗೆ ಸ್ಪೂರ್ತಿಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ.


ಕಾಮ್ರೇಡ್ ಹೆಚ್.ಕೆ.ಆರ್. ಗೆ ಗೌರವ ಡಾಕ್ಟರೇಟ್ ನೀಡಲಿ

  • ಕಾಂ.ಹೆಚ್‌.ಕೆ.ಆರ್‌. ಶ್ರಮಿಕ ವರ್ಗದ ಬಹುದೊಡ್ಡ ಹೋರಾಟಗಾರನಾಗಿ, ಅದರಲ್ಲೂ ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಾದ ಅಂಗನವಾಡಿ, ಬಿಸಿಯೂಟ, ಆಶಾ ಹಾಗೂ ಕಟ್ಟಡ ಕಾರ್ಮಿಕರ ಪರವಾಗಿ ಹಾಗೂ ಸಮಾಜದಲ್ಲಿನ ಶೋಷಿತರು, ದಮನಿತರು, ದೀನ-ದಲಿತರು, ವಿದ್ಯಾರ್ಥಿಗಳ ಸಮುದಾಯ, ಮಹಿಳೆಯರ ಪರವಾಗಿ ಸುದೀರ್ಘವಾದ ಆರು ದಶಕಗಳ ಕಾಲ ಹೋರಾಟ ಮಾಡಿ ಆ ವರ್ಗಕ್ಕೆ ಅನೇಕ ಸೌಲಭ್ಯಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಹೋರಾಟ ಅನನ್ಯವಾದುದು. ಕಾರ್ಮಿಕ ವರ್ಗದ ಪರವಾದ ಅವರ ಹೋರಾಟವನ್ನು ಪರಿಗಣಿಸಿ ದಾವಣಗೆರೆ ವಿಶ್ವವಿದ್ಯಾಲಯ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಬೇಕು.

| ಕೆ.ರಾಘವೇಂದ್ರ ನಾಯರಿ, ಎಐಟಿಯುಸಿ ಜಿಲ್ಲಾಧ್ಯಕ್ಷ


ಕಾಂII ಹೆಚ್‌ಕೆಆರ್ ಚಿರಾಯುವಾಗಲಿ..‌.
ಕಾಂII ಹೆಚ್‌ಕೆಆರ್ ಅಮರ ರಹೇ‌…

(ಲೇಖಕರು: ಕೆ.ರಾಘವೇಂದ್ರ ನಾಯರಿ,
ಕಾರ್ಮಿಕ ಮುಖಂಡ ಹಾಗೂ
AITUC ದಾವಣಗೆರೆ ಜಿಲ್ಲಾಧ್ಯಕ್ಷರು
ಮೊ: 9844314543
mail id : krnairycbeu@gmail.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending