ದಿನದ ಸುದ್ದಿ
ಮ.ರಾಮಮೂರ್ತಿಯವರ ಕೊಟ್ಟ ಕನ್ನಡದ ಬಾವುಟ ; ಹೋರಾಟದ ಜವಾಬ್ದಾರಿಯ ಹಸ್ತಾಂತರಕ್ಕೆ ಮೆರಗು
- ಸುಮನ್ ಜೆ.ಎಸ್,ಪ್ರಥಮ ವರ್ಷದ ಸ್ನಾತಕೋತ್ತರ ಪದವಿ, ವಿದ್ಯಾರ್ಥಿ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಬೆಂಗಳೂರು ವಿಶ್ವವಿದ್ಯಾಲಯ
ಕನ್ನಡ ನಾಡಿನ ಅಭಿಮಾನ ಸ್ವಾಭಿಮಾನ ಮತ್ತು ಅಸ್ಮಿತೆಯಾಗಿ ಕನ್ನಡಿಗರ ಉಸಿರಲ್ಲಿ ಬೆರೆತು ಹೋಗಿರುವ ಕೆಂಪು-ಹಳದಿ ಬಾವುಟದ ನಿರ್ಮಾತೃ ಮ.ರಾಮಮೂರ್ತಿ ಎಂದು ಈ ಹೆಸರು ಕೇಳಿದ ತಕ್ಷಣವೇ ಕನ್ನಡಿಗರ ನರನಾಡಿಗಳಲ್ಲಿ ಸಂಚಲನ ಉಂಟಾಗುತ್ತದ್ದೆ ನಮ್ಮ ತಾಯಿನಾಡು ಅನುಭವಿಸುತ್ತಿರುವ ವೇದನೆಗಳಿಗೆ ತೀವ್ರವಾಗಿ ಪ್ರತಿರೋಧಿಸುವ ಪ್ರೇರಕ ಶಕ್ತಿಯೊಂದು ಇಡಿ ದೇಹದ ತುಂಬೆಲ್ಲಾ ವಿದ್ಯುತ್ತಿನಂತೆ ಸಂಚರಿಸುತ್ತದೆ ಅಂತಹ ಒಂದು ಪ್ರಚೋದಕ ಶಕ್ತಿಯಿಂದ ಕೂಡಿರುವ ವ್ಯಕ್ತಿತ್ವವಾಗಿತ್ತು.
ರಾಮಮೂರ್ತಿ ರವರು ಮಾರ್ಚ್ 11, -1918ರಂದು ನಂಜನಗೂಡಿನ ಗಾಂಧಿವಾದಿಯಾಗಿ ವೀರ ಕೇಸರಿ ಪತ್ರಿಕೆಯ ಸಂಪಾದರಾಗಿದ್ದ ಸೀತಾರಾಮ ಶಾಸ್ತ್ರಿ ಮತ್ತು ಸುಬ್ಬಮ್ಮ ಅವರ ಪುತ್ರನಾಗಿ ಹುಟ್ಟಿದ ರವರು ಶೈಕ್ಷಣಿಕ ಜೀವನವೂ ಹುಟ್ಟೂರಲ್ಲಿ ಸೇರಿದಂತೆ ಬೆಂಗಳೂರಿನ ಗಾಂಧಿನಗರದಲ್ಲಿರುವ ಆರ್ಯ ವಿದ್ಯಾಶಾಲೆಯಲ್ಲಿ ಮುಂದೊರೆಯಿತು. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ಸುಬ್ರಮಣ್ಯ ಅಯ್ಯರ್ ಅವರಿಂದ ಮತ್ತು ಮಾಧ್ಯಮಿಕ ಶಾಲೆಯಿಂದ ಶಿಕ್ಷಕರಾದ ದೇವುಡು ಅವರಿಂದ ವಿಶೇಷ ಕಾಳಜಿಗೊಳಪಟ್ಟು ಅವರಿಂದ ಪ್ರಭಾವಿತರಾದರು.ಹುಟ್ಟಿನಿಂದ ಪ್ರತಿಭಾವಂತರಾಗಿದ್ದ ರಾಮಮೂರ್ತಿ ರವರಿಗೆ ಚಳವಳಿಗಳಿಗೆ ಧುಮುಕಲು ಮೊದಲ ಪ್ರೇರಣೆಯಾಗಿದ್ದು ಅವರ ತಂದೆಯವರಾದ ಸೀತಾರಾಮಶಾಸ್ತ್ರಿ,
ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾಗಿ ಚಳವಳಿಗಳತ್ತ ಮುಖ ಮಾಡಿದ ಶಾಸ್ತ್ರಿ ಅದರ ಪ್ರಚಾರಕ್ಕಾಗಿ ‘ವೀರ ಕೇಸರಿ’ ಎನ್ನುವ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಮುಂದೆ ರಾಮಮೂರ್ತಿ ಪತ್ರಕರ್ತರಾಗಿ ಹೊರಹೊಮ್ಮುವಲ್ಲಿ ಬಹಳ ದೊಡ್ಡ ಪಾತ್ರವಹಿಸಿದ್ದು ಇದೆ ವೀರಕೇಸರಿ ಪತ್ರಿಕೆ.
ತನ್ನ ತಂದೆಯವರು ಸ್ಥಾಪಿಸಿದ ಪತ್ರಿಕೆಯಲ್ಲಿ ಸ್ವತಃ ತಾನೂ ಕೂಡ ತಂದೆಯವರೊಂದಿಗೆ ತೊಡಗಿಸಿಕೊಂಡು ಮುಂದೆ ತಾವೇ ವೀರಕೇಸರಿ ಪತ್ರಿಕೆಯ ಸಂಪಾದಕರಾದರು. ಸ್ವತಂತ್ರ ಚಳವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿದಲ್ಲಿ ಈ ಪತ್ರಿಕೆಯು ತನ್ನ ಓದುಗರನ್ನ ಚಳುವಳಿಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುತ್ತಿತ್ತು ಆ ಪತ್ರಿಕೆಯು ಭಾರತ ಸ್ವತಂತ್ರವಾಗಿ ಭಾಷಾವಾರು ರಾಜ್ಯಗಳು ರಚನೆಯಾದ ಮೇಲೆ ಕರ್ನಾಟಕದ ಹಲವಾರು ಮೂಲಭೂತ ಸಮಸ್ಯೆಗಳನ್ನು ನಾಡಿನ ಜನತೆಯ ಎದುರು ತೆರೆದಿಡಲು ರಾಮಮೂರ್ತಿ ರವರ ಸಂಪಾದಕತ್ವದಲ್ಲಿ ಆರಂಭಿಸಿತು.
ಅನೇಕ ಕಾರಣಾಂತರಗಳಿಂದ ವೀರಕೇಸರಿ ಪತ್ರಿಕೆಯು ನಿಂತುಕೊಂಡ ಮೇಲೆ ಮಹತ್ವಾಕಾಂಕ್ಷೆಯ ವ್ಯಕ್ತಿತ್ವಯುಳ್ಳ ರಾಮಮೂರ್ತಿ ವಿನೋದಿನಿ, ಕಥಾವಾಣಿ, ವಿನೋದವಾಣಿ ಅಂತಹ ಪತ್ರಿಕೆಗಳನ್ನು ಹುಟ್ಟುಹಾಕಿ ತನ್ನ ಸಕ್ರಿಯತೆಯನ್ನು ಕಾಯ್ದುಕೊಂಡರು. ನಾಡಿನಲ್ಲಿ ಲೈಂಗಿಕ ವಿಜ್ಞಾನದ ಪತ್ರಿಕೆಯ ಕೊರತೆಯನ್ನು ಅರಿತು ರಾಮಮೂರ್ತಿ, ‘ಕಾಮಕಲಾ’ ಎನ್ನುವ ಪತ್ರಿಕೆ ಹೊರಡಿಸಿದರು. ಇಂತಹ ಹಲವಾರು ಸಮಸ್ಯೆಗಳು ಎದುರಾದಾಗ ಪತ್ರಿಕೆಯನ್ನು ಮುಚ್ಚಿದರು ಹೀಗೆ ಒಬ್ಬ ಸೃಜನಶೀಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ ಅನೇಕ ಏಳು ಬೀಳುಗಳು ನಡುವೆ ಜಗ್ಗದೆ ಹೋರಾಟ ನಡೆಸಿದರು.
ರಾಮಮೂರ್ತಿ ಪ್ರಾಥಮಿಕ ಶಾಲಾ ಹಂತದಿಂದಲೇ ಸಾಹಿತ್ಯಾಸಕ್ತರಾಗಿದ್ದರು. ಆ ಆಸಕ್ತಿಯೇ ಮುಂದೆ ಅವರಿಗೆ ಬರಹಗಾರರಾಗಿ, ಪತ್ತೆದಾರಿ ಕಾದಂಬರಿಕಾರರಾಗಿ ರೂಪಗೊಳ್ಳುವಲ್ಲಿ ಪ್ರಚೋದಿಸಿದರ ಕಾರಣದಿಂದಾಗಿ 1950-60ರ ದಶಕದಲ್ಲಿ ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ ಮರೆಯಾಗಿದ್ದ ವಜ್ರಗಳು ಇಂತಹ ಪತ್ತೆದಾರಿ ಕಾದಂಬರಿಗಳಲ್ಲದೆ ಭಾಗ್ಯದ ಮದುವೆ, ಪ್ರೇಮಮಂದಿರ, ಹಿಪ್ಪರಗಿ ಇಂತಹ ಐತಿಹಾಸಿಕ ಕಾದಂಬರಿಗಳನ್ನ ಒಳಗೊಂಡು ಸುಮಾರು 150ಕ್ಕೂ ಹೆಚ್ಚು ಕಾದಂಬರಿಗಳು ಇವರ ವಿದ್ವತ್ತಿಗೆ ಸಾಕ್ಷಿಯಾಗಿವೇ. ಕನ್ನಡದ ಓದುಗರಿಗೆ ಸುಲಭವಾಗಿ ಎಟುಕುವ ದರದಲ್ಲಿ ತನ್ನ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ವಿಶಾಲ ಮನಸ್ಸು ಕೂಡ ರಾಮಮೂರ್ತಿಯವದಾಗಿತ್ತು.
ಇದಕೊಂದು ನಿದರ್ಶನ ಕೊಡುವುದಾದರೆ 120-130ರ ಪುಟಗಳ ಪುಸ್ತಕ ಅವರು ಬರವಣಿಗೆ ಮಾರಾಟದ ದರವನ್ನು ನಿಗದಿ ಪಡಿಸಿದ್ದು, ಇದು ಕನ್ನಡದ ಸಾಹಿತ್ಯದ ಬೆಳವಣಿಗೆಗಾಗಿ ಅವರು ಕೈಗೊಂಡ ಕೆಲಸಗಳಲ್ಲಿ ಒಂದು ಎಂದರು ಉತ್ಪ್ರೇಕ್ಷೆ ಅಲ್ಲ.
ಬಹುರೂಪಿಯಾಗಿದ್ದ ರಾಮಮೂರ್ತಿ ಸಾಹಿತಿಯಾಗಿ, ಪತ್ತೆದಾರಿ ಕಾದಂಬರಿಕಾರರಾಗಿ, ಪ್ರಖರ ಪತ್ರಕರ್ತರಾಗಿ, ಸ್ವತಂತ್ರ ಹೋರಾಟಗಾರರಾಗಿ, ಕನ್ನಡಪರ ಹೋರಾಟಗಾರರಾಗಿ ತನ್ನ ನಿರಂತರತೆಯನ್ನ ಸಮಾಜದೊಂದಿಗೆ ಸೆಣೆಸುತ್ತಲೆ ಬಂದವರು. ಈ ನಾಡು ಇಂದು ಪ್ರತಿಯೊಂದು ಕ್ಷಣದಲ್ಲು ಮ.ರಾಮಮೂರ್ತಿ ರವರನ್ನು ಸ್ಮರಿಸಲು ಹಲವಾರು ಕಾರಣಗಳಿವೆ. ಅವರು ಬದುಕಿ ಬಾಳಿದ ಕಾಲವೂ ಸ್ವತಂತ್ರ ಚಳುವಳಿ, ಸಾಮಾಜಿಕ ಚಳುವಳಿಗಳು ಸೇರಿದಂತೆ ಹಲವಾರು ಚಳುವಳಿಗಳು ಉತ್ತುಂಗದಲ್ಲಿ ಕಾಲವದು ಭಾರತವೂ 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದ ನಂತರ ಆಂತರಿಕವಾಗಿ ಭಾರತವೂ ಹಲವಾರು ಹೋರಾಟಗಳು ತನ್ನೊಳಗಿನ ಅಸ್ತವ್ಯಸ್ತತೆಯನ್ನು ಸರಿ ಪಡಿಸಿಕೊಳ್ಳುವತ್ತ ಸಾಗಿತ್ತು.
ಇತ್ತ ಕರ್ನಾಟಕದಲ್ಲೂ ಸಹ ಹಲವಾರು ಹೋರಾಟಗಳು ಮುನ್ನೆಲೆಗೆ ಬಂದವು, ಭಾಷಾವಾರು ರಾಜ್ಯಗಳ ರಚನೆಗಳಾದಾಗ ಕರ್ನಾಟಕವೂ ತೀವ್ರ ತರದ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಈ ಸಮಸ್ಯೆಗಳನ್ನು ಪ್ರತಿನಿಧಿಸಲು ಬೇಕಾದ ಪ್ರತಿನಿಧಿಗಳು ಹಲವಾರಿದ್ದರು. ರಾಮಮೂರ್ತಿ ಮತ್ತವರ ಸಮಕಾಲಿನವರಾದ
ಕನ್ನಡ ಚಳವಳಿಗಳ ಹರಿಕಾರರು ಎಂದೆ ಪ್ರಸಿದ್ಧರಾಗಿರುವ ಕೊಣಂದೂರು ಲಿಂಗಪ್ಪ, ಅ.ನ.ಕೃ, ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜತೆಗೆ ಗುರುತಿಸಿಕೊಂಡವರು.
ಮ.ರಾಮಮೂರ್ತಿ ಕನ್ನಡ ಚಳವಳಿಗಳು ನಿರ್ಣಾಯಕ ಹಂತದಲ್ಲಿರುವ ಕಾಲಘಟ್ಟದಲ್ಲಿ ಹಲವಾರು ಹೋರಾಟಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.1956ರಲ್ಲಿ ಭಾಷಾವಾರು ರಾಜ್ಯಗಳ ರಚನೆ ಆದಾಗಾ ಕರ್ನಾಟಕವೂ ಸುತ್ತುಮುತ್ತಲಿನ ಅನ್ಯಭಾಷಿಕರಿಂದ ಹಲವು ಸಮಸ್ಯೆಗಳು ಎದುರಿಸುತ್ತಿತ್ತು. ವಿಶೇಷವಾಗಿ ಬೆಂಗಳೂರು ಅನ್ಯಭಾಷಿಕರಿಂದ ಸಮಸ್ಯೆಗಳನ್ನ ಎದುರಿಸುತ್ತಿತ್ತು. ಅಂತಹ ಕಾಲದಲ್ಲಿ ಇದರ ವಿರುದ್ಧವಾಗಿ ಕನ್ನಡ ನೆಲದ ಹಿತಾಸಕ್ತಿಯನ್ನು ಕಾಪಾಡಲು ಮುಂದಾದ ನೂರಾರು ಮಹನೀಯರಲ್ಲಿ ಮ.ರಾಮಮೂರ್ತಿ ಪ್ರಾತಃಸ್ಮರಣಿಯರು ಇಡಿ ಬದುಕೆ ಕನ್ನಡ ನಾಡಿನ ಹಿತಕ್ಕಾಗಿ ಸವೆಸಿದರು.
ಬೆಂಗಳೂರಲ್ಲಿನ ಹಲವಾರು ಬಡಾವಣೆಗಳಲ್ಲಿ ಕನ್ನಡಕ್ಕೆ ಗೌರವ ಕೊಡೊದಲ್ಲೆ ಇರಲಿ ಕನ್ನಡ ಎಂದರೆ ಎನ್ನಡ ಎನ್ನುವ ಸ್ಥಿತಿ ತಲುಪಿತ್ತು. ನಂತರ ದಿನದಲ್ಲಿ ಕನ್ನಡದ ಕುವರರಾದ ಕೋಣಂದೂರ ಲಿಂಗಪ್ಪಾ, ಬಂದಗದ್ದೆ ರಮೇಶ್ ಅನ್ನು ತರುಣ ವಿಧ್ಯಾರ್ಥಿಗಳು ‘ಕನ್ನಡ ಯುವಜನ ಸಭಾ’ ಎನ್ನುವ ಹೆಸರಲ್ಲಿ ಕನ್ನಡ ವಿರೋಧಿ ಶಕ್ತಿಗಳಿಗೆ ಪ್ರತಿರೋಧ ಒಡ್ಡಲು ಆರಂಭಿಸಿದರು.
ಅದು ಸ್ಪೋಟಗೊಂಡಿದ್ದು, ಮತ್ತೆ ಮ.ರಾಮಮೂರ್ತಿ ಮತ್ತೆ ಅ.ನ.ಕೃ ಅವರು 04.02.1962ರಲ್ಲಿ ಆಯೋಜಿಸಿದ್ದ ‘ಬೆಂಗಳೂರು ಕನ್ನಡಿಗರ ಸಮಾವೇಶ’ ನಡೆಸಿ ಅದರ ಪ್ರಚಾರಕ್ಕಾಗಿ ಮತ್ತು ಕನ್ನಡ ಪರ ಸಂಘಟನೆಗಳಲ್ಲಿ ಹೋರಾಟದ ಶಕ್ತಿ ತುಂಬಲು ‘ಕನ್ನಡ ಯುವಜನ’ ಎನ್ನುವ ಪಾಕ್ಷಿಕ ಪತ್ರಿಕೆ ಹೊರಡಿಸಿ ಚಳವಳಿಗೆ ಹೊಸ ಆಯಾಮ ನೀಡಿದರು.
ಪುನಃ 27.05.1963ರಂದು ಚಾಮರಾಜಪೇಟೆ ರಾಮಸೇವಾ ಮಂಡಳಿಯಲ್ಲಿ ಎಂ.ಎಸ್. ಸುಬ್ಬಲಕ್ಷ್ಮೀ ಅವರ ಸಂಗೀತ ಕಚೇರಿ ವ್ಯವಸ್ಥೆಯಾಗಿತ್ತು, ಕನ್ನಡಕ್ಕೆ ಅವಕಾಶವೆ ಇಲ್ಲದ ಕಾರ್ಯಕ್ರಮವನ್ನು ಮ.ರಾಮಮೂರ್ತಿ ಮತ್ತು ಅ.ನ.ಕೃ ಅವರು ತೀವ್ರವಾಗಿ ಖಂಡಿಸಿ ಪ್ರತಿಭಟನೆ ಮಾಡಿದ್ದರ ಫಲವಾಗಿ ಆ ಕಚೇರಿ ರದ್ದಾಯಿತು. ಕನ್ನಡ ಅಂತ ಬಂದಾಗ ಯಾವುದಕ್ಕೂ ಸಹ ರಾಜಿಯಾಗದ ವ್ಯಕ್ತಿತ್ವ ರಾಮಮೂರ್ತಿಯವರದಾಗಿತ್ತು. ಈ ಪ್ರತಿಭಟನೆಯು ಹೊಸ ಒಂದು ಹೆಜ್ಜೆಗೆ ನಾಂದಿ ಹಾಡಿತ್ತು.
ಅದೇನೆಂದರೆ ಸುಮಾರು 60ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಒಳಗೊಂಡ ‘ಕರ್ನಾಟಕ ಸಂಯುಕ್ತ ರಂಗ’ದ ಉದಯವಾಯಿತು. ಅ.ನ.ಕೃರವರು ಅಧ್ಯಕ್ಷರಾದರು. ರಾಮಮೂರ್ತಿ ಕಾರ್ಯದರ್ಶಿಯಾಗಿ ಹಲವಾರು ಐತಿಹಾಸಿಕ ನಿರ್ಧಾರಗಳು, ಹೋರಾಟಗಳು ಕೈಗೊಂಡರು.
ಅಜಾನುಬಾಹು ದೇಹ ನಿರ್ಭಿತ ಹೆಜ್ಜೆಗಳಿಂದ ಕೂಡಿದ ರಾಮಮೂರ್ತಿ ವ್ಯಕ್ತಿತ್ವಕ್ಕೆ “ಕನ್ನಡದ ವೀರ ಸೇನಾನಿ” ಎನ್ನುವ ಬಿರುದು ಬರಲು ಒಂದು ರೋಚಕ ಘಟನೆಯೇ ಇದೆ. ಇದು ರಾಮಮೂರ್ತಿರವರ ಎದೆಗಾರಿಕೆಗೆ ಸಾಕ್ಷಿಯಾಗಿದೆ.
ಅಂದಿನ ಕಾಲದಲ್ಲಿ ಚಿತ್ರದುರ್ಗದ ಹಿರಿಯೂರಲ್ಲಿ ನಿರ್ಮಾಣವಾಗಿದ್ದ ವಾಣಿ ವಿಲಾಸ ಸಾಗರ ಕಟ್ಟುವಾಗ ಕೂಲಿ ಕಾರ್ಮಿಕರಾಗಿ ತಮಿಳರೇ ಇದ್ದರು. ಇಡೀ ಹಿರಿಯೂರು ಪಟ್ಟಣವೇ ತಮಿಳರ ಕೈವಶ ಮಾಡಿಕೊಂಡು ಪಟ್ಟಣದಲ್ಲಿ ಡಿಎಂಕೆ ಪಕ್ಷದ ಬಾವುಟವನ್ನು ಹಾರಿಸಿದ್ದರು. ಇದು ಅಲ್ಲಿನ ಕನ್ನಡಪರ ಮನಸ್ಸುಗಳಲ್ಲಿ ತಳಮಳ ಉಂಟಾದರು ಏನೂ ಮಾಡದ ಸ್ಥಿತಿಯಲ್ಲಿದ್ದಾಗ ವಿಷಯ ರಾಮಮೂರ್ತಿ ಗಮನಕ್ಕೆ ಬಂದು ಬಾವುಟವನ್ನು ತೆಗೆಯುವಂತೆ ಮೌಖಿಕವಾಗಿ ಸೂಚಿಸಿದರು.
ನಂತರ ಅದನ್ನ ಕಡೆಗಣಿಸಿದ ತಮಿಳರು ಕನ್ನಡಿಗರ ತಾಳ್ಮೆ ಮತ್ತಷ್ಟು ಪರೀಕ್ಷೆ ಮಾಡಿದರು. ಇದನ್ನ ಸಹಿಸದ ರಾಮಮೂರ್ತಿ ಹಿರಿಯೂರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಆವಾಗಲೂ ಕೂಡ ತಾವಾಗಿಯೇ ಬಾವುಟ ತೆಗೆಯಿರಿ ಇಲ್ಲಾ ನಾನು ಇದನ್ನ ತೆಗೆದು ಎಸೆಯುತ್ತೆನೆ ಎಂದು ಹೇಳಿದ್ದು, ಲಘುವಾಗಿ ತಗೊಂಡ ತಮಿಳರು ಇವರ ಮಾತನ್ನು ಕಡೆಗಣಿಸಿದಾಗ ರೊಚ್ಚಿಗೆದ್ದ ರಾಮಮೂರ್ತಿ ತಾನೇ ಆ ಡಿಎಂಕೆ ಬಾವುಟ ಕಿತ್ತೆಸೆಯಲು ಮುಂದಾದಾಗ ಒಬ್ಬ ತಮಿಳು ಯುವಕ ಅವರನ್ನ ತಡೆದು ತಾನೆ ಬಾವುಟ ತೆಗೆದ ತಮಿಳರು ಕ್ನನಡಿಗರಿಗೆ ಕ್ಷಮೆ ಯಾಚಿಸಿದರು. ಈ ಒಂದು ದಿಟ್ಟ ನಡೆಯಿಂದ ಅವರಿಗೆ ವೀರ ಸೇನಾನಿ ಎಂಬ ಬಿರುದು ಅಭಿಮಾನಪೂರ್ವಕವಾಗಿ ಅರ್ಪಿಸಲಾಯಿತು.
ರಾಮಮೂರ್ತಿ ಪ್ರತಿಯೊಂದು ಹೋರಾಟವೂ ಕನ್ನಡಿಗರ ಲಾಭಕ್ಕಾಗಿ, ಉದ್ದಾರಕ್ಕಾಗಿ ನಾಡಿನ ಸಮಗ್ರ ಹಿತಕ್ಕಾಗಿಯೇ ಇತ್ತು. ಎನ್ನುವುದಕ್ಕೆ ಬಹಳಷ್ಟು ಸಾಕ್ಷಿಗಳಿವೆ. ಡಬ್ಬಿಂಗ್ ಚಿತ್ರ ವಿರೋಧಿ ಹೋರಾಟ, ಸ್ಥಳಿಯ ಕೆಲಸಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ, ಕನ್ನಡ ಶಿಕ್ಷಣ ಮಾಧ್ಯಮ ಭಾಷೆ ಮಾಡಲು, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಲುವಾಗಿ ಇಂತಹ ದೂರಾಲೋಚನೆಗಳು ಕನ್ನಡಿಗರ ಭವಿಷ್ಯದ ಹಿತಕ್ಕಾಗಿ ನಡೆದ ನಡೆಯಬೇಕಾದ ಹೋರಾಟಗಳಾದರೆ.
ಅನ್ಯಭಾಷಿಕರಿಂದ ಕನ್ನಡಕ್ಕಾಗುತ್ತಿರುವ ಅನ್ಯಾಯ, ಕಾರ್ಖನೆಗಳಲ್ಲಿ ದುಡಿಯುವ ಕನ್ನಡದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸಿದರು. ಇದಕ್ಕೆ ಒಳ್ಳೆಯ ನಿದರ್ಶನ ಎಂದರೆ ಮೈಕೊ ಕಾರ್ಖನೆಯ ಕಾರ್ಮಿಕರ ಪರವಾಗಿ ಹೋರಾಟ ಮಾಡಿದ್ದು ಅವರಿಗೆ ಕನ್ನಡದ ದುಡಿಯುವ ಜನರ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ.
ಇಂತಹ ಒಂದು ಘನ ವ್ಯಕ್ತಿತ್ವದ ರಾಮಮೂರ್ತಿ ರವರ ಕನಕಪುರ ರಸ್ತೆ ಪಕ್ಕದ ತಲೆಘಟ್ಟಪೂರದಲ್ಲಿ ಡಿಸೆಂಬರ್ 27.1962ರಲ್ಲಿ ತಮ್ಮ ಜಮೀನಿನಲ್ಲಿ ಬಾವಿಗೆ ನೀರು ಬಂದಿದೆ ಎನ್ನುವ ಖುಷಿಯಲ್ಲಿ ಕೆಲಸಗಾರರೊಂದಿಗೆ ಬಾವಿಗಿಳಿದಾಗ ಮೇಲಿಂದ ಮಣ್ಣು ಕುಸಿದು ಇಬ್ಬರು ಕೆಲಸಗಾರರೊಂದಿಗೆ ದುರಂತವಾಗಿ ಸಾವಿಗಿಡಾದರು. ಕನ್ನಡ ಬಹುದೊಡ್ಡ ಶಕ್ತಿಯೊಂದು ವಿಧಿ ಕನ್ನಡಿಗರಿಂದ ಕಿತ್ತುಕೊಂಡು ಬಿಟ್ಟಿತ್ತು.
ಕನ್ನಡವು ಸುಮ್ಮನೆ ಯಾವುದು ಕೂಡ ಉಳಿಸಿಕೊಂಡಿಲ್ಲ ಪ್ರತಿಯೊಂದರ ಹಿಂದೆ ರೋಚಕ ಇತಿಹಾಸವಿದೆ ಆ ಇತಿಹಾಸ ರೂಪಿಸುವಲ್ಲಿ ಸಾಹಿತಿಗಳು, ಕವಿಗಳು, ಹೋರಾಟಗಾರರು, ಪತ್ರಕರ್ತರು, ಗೋಪಾಲಗೌಡರಂತಹ ಕನ್ನಡ ಪ್ರೇಮಿ ರಾಜಕಾರಣಿಗಳು ಸೇರಿದಂತೆ ಪ್ರತಿಯೊಬ್ಬರು ದುಡಿದಿದ್ದಾರೆ. ಇಂತಹ ಹಲವಾರು ಮಹನೀಯರ ಕನಸಿನ ಕನ್ನಡ ನಾಡು ಅಂದು ಅವರು ಎದುರುಗೊಂಡು ಹೋರಾಡಿದ ಸಮಸ್ಯೆಗಳು ಇಂದು ಮತ್ತೆ ಅದರ ಹತ್ತರಷ್ಟಾಗಿ ಕನ್ನಡಿಗರ ಎದುರಿಗೆ ಬೃಹದಾಕಾರದಲ್ಲಿ ನಿಂತಿದೆ.
ಮ.ರಾಮಮೂರ್ತಿ ಅವರಂತಹ ಕನ್ನಡದ ಕಲಿಗಳು ಹಾಕಿಕೊಟ್ಟ ದಾರಿಯಲ್ಲೇ ಮತ್ತೆ ನಾವೂ ಸಾಗಬೇಕಾಗಿದೆ. ನಮ್ಮ ನಾಡು ನುಡಿ ನೆಲ ಜಲ ಇಂದು ಅನುಭವಿಸುತ್ತಿರುವ ನೋವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಾಮಮೂರ್ತಿ ಅವರು ತನ್ನ ಹೋರಾಟವನ್ನ ಬಾವುಟವನ್ನು ನಿರ್ಮಿಸಿ ನಾಡಿಗೆ ಅರ್ಪಿಸುವ ಮೂಲಕ ನಾಡು ನುಡಿಗಾಗಿ ಹೋರಾಡುವ ಜವಾಬ್ದಾರಿಯನ್ನು ಕೂಡ ಕನ್ನಡಿಗರ ಹೆಗಲಿಗೆ ವಹಿಸಿದ್ದಾರೆ. “ಒಂದಲ್ಲಾ ಒಂದು ದಿನ ಈ ರಾಜ್ಯದಲ್ಲಿ ಕನ್ನಡ ಬಾವುಟ ಹಾರಿಸುತ್ತೇನೆ. ಎಲ್ಲೆಡೆ ಕನ್ನಡ ಕಾಣುವಂತೆ ಮಾಡುವವರೆಗೆ ವಿರಮಿಸಲಾರೆ” ಎನ್ನುವ ಅವರ ಕೆಚ್ಚೆದೆಯ ಘೋಷವಾಕ್ಯವೂ ನಮ್ಮ ಕನ್ನಡಿಗರ ಎದೆಬಡಿತವಾಗಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



