ದಿನದ ಸುದ್ದಿ
ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ನಾಳೆ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ
ಸುದ್ದಿದಿನಡೆಸ್ಕ್: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾತ್ರಿ 7.15ಕ್ಕೆ ರಾಷ್ಟ್ರಪತಿಗಳು ನರೇಂದ್ರ ಮೋದಿ ಮತ್ತು ಅವರ ನೂತನ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಇದಕ್ಕೂ ಮುನ್ನ ನಿನ್ನೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ಎನ್‌ಡಿಎ ನಿಯೋಗವೂ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ, ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಪತ್ರವನ್ನು ಸಲ್ಲಿಸಿತು.
ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಬೆಂಬಲ ಪತ್ರವನ್ನೂ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಯಿತು. ರಾಷ್ಟ್ರಪತಿ ಭವನದ ಹೊರಗೆ ಮಾತನಾಡಿದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ಪ್ರಬಲ, ಸ್ಥಿರ ಮತ್ತು ಬೆಳವಣಿಗೆ ಆಧಾರಿತ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದರು.
ರಾಷ್ಟ್ರಪತಿ ಭವನವು ಪ್ರಮಾಣವಚನ ಸಮಾರಂಭದ ಕಾರ್ಯಕ್ರಮವನ್ನು ರೂಪಿಸಲಿದ್ದು, ಅಷ್ಟರೊಳಗೆ ಮಂತ್ರಿಮಂಡಲದ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು. ಜನರು ಎನ್‌ಡಿಎ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಿದ್ದಾರೆ.
18ನೇ ಲೋಕಸಭೆಯು ಹೊಸ ಮತ್ತು ಯುವ ಶಕ್ತಿಯ ಸದನವಾಗಿದೆ. ತಮ್ಮ ಸರ್ಕಾರ ದೇಶದ ಜನರ ಆಶಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲಿದೆ ಎಂದು ನರೇಂದ್ರ ಮೋದಿ ಹೇಳಿದರು. ಸ್ಥಿರ ಸರ್ಕಾರವು ಭಾರತ ಮತ್ತು ಅದರ ಆರ್ಥಿಕತೆ ಮತ್ತು ಯುವಜನತೆಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ರಾಷ್ಟ್ರವನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲು ತಮ್ಮ ಸರ್ಕಾರ ಯಾವುದೇ ಅವಕಾಶವನ್ನು ಕೈಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಮತ್ತೊಂದೆಡೆ, ಸಂವಿಧಾನದ 75ನೇ ವಿಧಿಯ ಅಡಿಯಲ್ಲಿ ತನ್ನಲ್ಲಿರುವ ಅಧಿಕಾರವನ್ನು ಚಲಾಯಿಸುವ ಮೂಲಕ ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿಯೋಜಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.
The President will administer the oath of office and secrecy to the Prime Minister and other members of the Union Council of Ministers at 7.15 pm on June 09, 2024, at Rashtrapati Bhavan.
— President of India (@rashtrapatibhvn) June 7, 2024
ಇದಕ್ಕೂ ಮುನ್ನ ನರೇಂದ್ರ ಮೋದಿ ಅವರು, ಲೋಕಸಭೆಯಲ್ಲಿ ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾದರು. ಮೋದಿಯವರ ಹೆಸರನ್ನು ಸೂಚಿಸಿದ ರಾಜನಾಥ್ ಸಿಂಗ್, ಈ ಹುದ್ದೆಗೆ ಮೋದಿ ಅವರೇ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.
ರಾಜನಾಥ್ ಸಿಂಗ್ ಅವರು, ಮಂಡಿಸಿದ ಸೂಚನೆಗೆ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಈ ವೇಳೆ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಮಾತನಾಡಿ, ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಹಲವಾರು ಪ್ರಮುಖ ಉಪಕ್ರಮಗಳನ್ನು ಎನ್‌ಡಿಎ ಸರ್ಕಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
ಈ ಅವಧಿಯಲ್ಲಿ ದೇಶ, ದಾಖಲೆ ಎನಿಸಬಹುದಾದ ಪ್ರಗತಿ ಹಾಗೂ ಬದಲಾವಣೆಯನ್ನು ಕಂಡಿದೆ. ಸೂಕ್ತ ಕಾಲದಲ್ಲಿ ಸೂಕ್ತ ನಾಯಕನನ್ನು ಭಾರತ ಹೊಂದಿದ್ದು, ಅವರೇ ನರೇಂದ್ರ ಮೋದಿಯವರಾಗಿದ್ದಾರೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿ ಮಾತನಾಡಿದ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್, ಮೋದಿ ಅವರ ನಾಯಕತ್ವದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಮೋದಿಯವರು ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ.
ಮೂರನೇ ಅವಧಿಯನ್ನು ಯಾವುದೇ ಅಡೆ-ತಡೆ ಇಲ್ಲದೆ ಪೂರೈಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಶಿವಸೇನೆಯ ಶಿಂಧೆ ಬಣದ ನಾಯಕ ಏಕನಾಥ್ ಶಿಂಧೆ, ಎಲ್‌ಜೆಪಿ ರಾಮ್‌ವಿಲಾಸ್ ಬಣದ ಮುಖ್ಯಸ್ಥ ಚಿರಾಂಗ್ ಪಾಸ್ವಾನ್, ಎನ್‌ಸಿಪಿ ನಾಯಕ ಅಜಿತ್ ಪವಾರ್, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಅಪ್ನಾದಳ್-ಎಸ್ ನಾಯಕಿ ಅನುಪ್ರಿಯಾ ಪಟೇಲ್ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸೂಚನೆಗೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿ, ಹಲವು ಪಕ್ಷಗಳನ್ನೊಳಗೊಂಡ ಎನ್‌ಡಿಎ ಮೈತ್ರಿಕೂಟ, ಅಧಿಕಾರಕ್ಕಾಗಿ ರಚನೆಯಾದ ಒಕ್ಕೂಟವಲ್ಲ. ದೇಶ ಮೊದಲು ಎಂಬ ಸ್ಫೂರ್ತಿಯೊಂದಿಗೆ ಕೆಲಸ ಮಾಡಲು ಒಕ್ಕೂಟ ಬದ್ಧವಾಗಿದೆ ಎಂದು ಹೇಳಿದರು. ಭಾರತದ ಇತಿಹಾಸದಲ್ಲಿ ಎನ್‌ಡಿಎ ಅತ್ಯಂತ ಯಶಸ್ವಿ ಮೈತ್ರಿಕೂಟವಾಗಿದೆ ಮತ್ತು ಎಲ್ಲ ನಿರ್ಧಾರಗಳನ್ನು ಒಟ್ಟಾಗಿ ಕೈಗೊಳ್ಳುವುದು ನಮ್ಮೆಲ್ಲರ ಗುರಿಯಾಗಿರುತ್ತದೆ. ದೇಶದ ಜನತೆ ಇಂದು 22 ರಾಜ್ಯಗಳಲ್ಲಿ ಸರ್ಕಾರ ರಚನೆಗೆ ಎನ್‌ಡಿಎಗೆ ಅವಕಾಶ ಮಾಡಿಕೊಟ್ಟಿದೆ ಎಂದರು. ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ಎನ್‌ಡಿಎ ಶ್ರಮಿಸಿದೆ. ಉತ್ತಮ ಆಡಳಿತ ನೀಡಲು ಎನ್‌ಡಿಎ ಮೈತ್ರಿಕೂಟದ ಎಲ್ಲ ನಾಯಕರು ಆಧಾರಸ್ತಂಭವಾಗಿ ನಿಂತಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದರು.
The passing away of Shri Ramoji Rao Garu is extremely saddening. He was a visionary who revolutionized Indian media. His rich contributions have left an indelible mark on journalism and the world of films. Through his noteworthy efforts, he set new standards for innovation and… pic.twitter.com/siC7aSHUxK
— Narendra Modi (@narendramodi) June 8, 2024
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ, ಸತತ ಮೂರನೇ ಬಾರಿಗೆ ಬಹುಮತ ಗಳಿಸಿದೆ. ಒಡಿಶಾ ಮತ್ತು ಆಂಧ್ರಪ್ರದೇಶದಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದು, ಮೆಚ್ಚುಗೆಯ ವಿಚಾರವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ, ಕೇಂದ್ರ ಸಚಿವರಾದ ಪಿಯುಶ್ ಗೋಯಲ್ ಮತ್ತು ಅನುರಾಗ್ ಸಿಂಗ್ ಠಾಕೂರ್ ಸೇರಿದಂತೆ ಅನೇಕ ಸಚಿವರು ಉಪಸ್ಥಿತರಿದ್ದರು.
ಅಲ್ಲದೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ, ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಡಾ.ಮುರಳಿ ಮನೋಹರ ಜೋಶಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಮೋದಿ ಅವರು, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬ್ಯಾಂಕ್ ದರೋಡೆ ಹೆಚ್ಚಳ ; ಭದ್ರತಾ ಮಾನದಂಡಗಳನ್ನು ಬ್ಯಾಂಕ್‍ಗಳು ಪಾಲನೆ ಮಾಡುವುದು ಕಡ್ಡಾಯ : ಎಸ್ಪಿ ಉಮಾ ಪ್ರಶಾಂತ್ ಸೂಚನೆ
ಸುದ್ದಿದಿನ,ದಾವಣಗೆರೆ:ಬ್ಯಾಂಕ್‍ಗಳ ದರೋಡೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಭದ್ರತಾ ಮಾನದಂಡದ ಜೊತೆಗೆ ಸಿಬ್ಬಂದಿಗಳ ಮಾಹಿತಿ ಸಂಗ್ರಹದಲ್ಲಿ ನಿರ್ಲಕ್ಷ್ಯತೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಪೋಲಿಸ್ ಕಛೇರಿಯಲ್ಲಿ ಜಿಲ್ಲಾ ಮಟ್ಟದ ಬ್ಯಾಂಕಗಳ ಭದ್ರತೆಗಾಗಿ ಬ್ಯಾಂಕಿನ ಎಲ್ಲಾ ವ್ಯವಸ್ಥಾಪಕರುಗಳಿಗೆ ಆಯೋಜಿಸಲಾಗಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬ್ಯಾಂಕಿನ ವ್ಯವಸ್ಥಾಪಕರುಗಳು ಬ್ಯಾಂಕ್‍ಗೆ ಬೇಕಾದ ಹೈಸೆಕ್ಯೂರಿಟಿ ಸಿಸಿ ಕ್ಯಾಮೆರಾಗಳ ಜೊತೆಗೆ ಅಲರಾಮ್‍ಗಳನ್ನು ಅಳವಡಿಸಿಕೊಳ್ಳಬೇಕು. ಬ್ಯಾಂಕ್‍ನ ಸೆಕ್ಯುರಿಟಿ ಸಿಬ್ಬಂದಿಯ ಮಾಹಿತಿ ಸಂಗ್ರಹದ ಜೊತೆಗೆ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸೆಕ್ಯುರಿಟಿ ಕುರಿತು ಚರ್ಚಿಸಬೇಕಾಗುತ್ತದೆ ಎಂದರು.
ಬ್ಯಾಂಕ್‍ನ ಒಳಗೆ ಸ್ಟ್ರಾಂಗ್ ರೂಂ ಡಿಜಿಲಾಕರ್, ಸ್ಟ್ರೋಕ್ ಡಿಟೆಕ್ಟರ್ಗಗಳು, ಹೀಟ್ ಡಿಟೆಕ್ಟರ್‍ಗಳು, ಬ್ಯಾಂಕುಗಳ ಬಳಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಬಂದಲ್ಲಿ ಅಂತಹವರ ಮಾಹಿತಿಯನ್ನು ಪೋಲೀಸ್ ಠಾಣೆಗಳಿಗೆ ನೀಡುವಂತೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಿಳಿಸಿ ಸ್ಟ್ರಾಂಗ್ ರೂಮ್‍ಗೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿದಿನ ಭೇಟಿ ನೀಡುವ ನಮೂನೆಯಲ್ಲಿ ದಾಖಲು ಮಾಡಬೇಕು. ಬ್ಯಾಂಕ್‍ಗಳಿಗೆ ಪ್ರತಿದಿನ ಬೀಟ್ ಪೋಲೀಸರು ಭೇಟಿ ನೀಡುವ ಬಗ್ಗೆ ಇ-ಬೀಟ್ ವ್ಯವಸ್ಥೆ ಮಾಡುವುದು. ಪ್ರತಿ ಬೀಟ್ ಸಿಬ್ಬಂದಿಗಳು ಭೇಟಿ ನೀಡುತ್ತಿರುವ ಬಗ್ಗೆ ರಾತ್ರಿ ಗಸ್ತಿನ ಉಸ್ತುವಾರಿ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ಮಾಡಲು ಸೂಚನೆ ನೀಡಿದರು.
ಜಿಲ್ಲಾ ಕಂಟ್ರೋಲ್ ರೂಂನವರು ಪ್ರತಿದಿನ ಬ್ಯಾಂಕ್‍ಗಳಿಗೆ ಬೀಟ್ ಸಿಬ್ಬಂದಿಗಳು ಹಾಗೂ ರಾತ್ರಿ ಗಸ್ತಿನ ಅಧಿಕಾರಿಗಳು ಭೇಟಿ ನೀಡುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ಪಡೆದು ನಮೂದು ಮಾಡುವುದು. ಹೊರವಲಯಗಳಲ್ಲಿರುವ ಬ್ಯಾಂಕ್‍ಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕೆಂದು ಸೂಚನೆ ನೀಡಿದರು.
ಠಾಣಾ ವ್ಯಾಪ್ತಿಯ ಪಿಐ ಮತ್ತು ಪಿಎಸ್‍ಐ ರವರು ಸೆಕ್ಯೂರಿಟಿ ಆಡಿಟ್ ವರದಿಯನ್ನು ಕಡ್ಡಾಯವಾಗಿ ಪಡೆದು ಜಿಲ್ಲಾ ಪೆÇಲೀಸ್ ಕಚೇರಿಗೆ ಕಳುಹಿಸಿಕೊಡಬೇಕು. ಬ್ಯಾಂಕುಗಳ ಒಳಭಾಗ ಮತ್ತು ಹೊರಭಾಗದಲ್ಲಿ, ಎಟಿಎಂ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಮೋಷನ್ ಸಿಸಿ ಟಿವಿಗಳನ್ನು ಅಳವಡಿಸಿ ಈ ಛಾಯಾಚಿತ್ರ ಮತ್ತು ರೆಕಾಡಿರ್ಂಗ್‍ನ್ನು ಡ್ರೈವ್‍ನಲ್ಲಿ ಸೇವ್ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಮಹಾಪೌರರಾದ ಚಮನ್‍ಸಾಬ್ ಕೆ, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಉಪ ಪೊಲೀಸ್ ಅಧೀಕ್ಷಕರಾದ ಮಂಜುನಾಥ್, ಎಎಸ್‍ಪಿ ಸ್ಯಾಮ್ ವರ್ಗೀಸ್ ಮತ್ತು ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ನಿಂದ ವಿದ್ಯಾರ್ಥಿ ವೇತನ ವಿತರಣೆ
ಸುದ್ದಿದಿನ,ದಾವಣಗೆರೆ:ಗುರಿ ಸಾಧಿಸಲು ಕಾರಣಗಳು ನೆಪವಾಗಬಾರದು. ಗುರಿಯನ್ನು ಬೆನ್ನು ಹತ್ತಿ ಗುರಿಮುಟ್ಟುವ ಕಡೆ ಗಮನ ಹರಿಸಿದರೆ ಯಶಸ್ಸು ತಾನಾಗಿ ದೊರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಜನತೆ ಮೊಬೈಲ್ ಬಳಸುವುದರಿಂದ ಆಗುವ ಅನಾನುಕೂಲಗಳು ಮತ್ತು ಹಿಂದಿನ ಯುವಜನತೆ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಮುಖಾಂತರ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಿದೆ. ಪೋಷಕರು ಮಕ್ಕಳ ನಡವಳಿಕೆ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎಂದ ಅವರು, ಇತ್ತೀಚಿಗೆ ನಡೆಯುತ್ತಿರುವ ಸೈಬರ್ ಕ್ರೈಂಗಳ ಬಗ್ಗೆ ಯುವಜನತೆಗೆ ಸಭೆಯಲ್ಲಿ ಮನವರಿಕೆ ಮಾಡಿದರು.
ಈ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾದ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಿಓಓ ಎಸ್. ಪಂಚಾಕ್ಷರಿ ಮಾತನಾಡಿ, ಬಿ.ಎಸ್.ಎಸ್ ಸಂಸ್ಥೆಯು ತನ್ನ ಸಿಎಸ್ಆರ್ ಇಂಟಿಗ್ರೇಟಡ್ ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಹೈನುಗಾರಿಕೆಗಳಲ್ಲಿ ಸಮಾಜಸೇವಾ ಕಾರ್ಯ ಮಾಡುತ್ತಿದ್ದು, ಅಗತ್ಯ ಪೂರಕ ವಸ್ತುಗಳ ವಿತರಣೆ ಮತ್ತು ಸಹಾಯ ಹಸ್ತದ ನೆರವು ನೀಡಲಾಗುತ್ತಿದೆ. ಸಮಜಾಮುಖಿ ಕೆಲಸಗಳಲ್ಲಿ ಒಂದಾದ ವಿದ್ಯಾರ್ಥಿ ವೇತನ ವಿತರಣೆ ಮುಖೇನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡಲಾಗುತ್ತಿದೆ ಎಂದರು.
ಮಹಿಳೆಯರು ಅವಶ್ಯಕತೆಗೆ ತಕ್ಕಷ್ಟು ಸಾಲವನ್ನು ಪಡೆದು ಮರುಪಾವತಿ ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಕೇವಲ ಸಾಲ ಸೌಲಭ್ಯವನ್ನು ಮಾತ್ರವಲ್ಲದೆ ಸಂಸ್ಥೆಯು ಎಲ್ಲಾ ಕಡೆಗೂ ಸಮಾಜಮುಖಿ ಕಾರ್ಯಗಳಾದ ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರವಾಹ ಪರಿಸ್ಥಿತಿಗಳು, ಬರಗಾಲ ಪರಿಸ್ಥಿತಿಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ, ಪೀಟೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಎಸ್ಎಸ್ ಸಂಸ್ಥೆಯ ಸಿಇಓ ಕುಮಾರ್, ಸಿಫ್ ಓ ಸುರತ್ ಬಚ್ಚು, ರಘು ಎನ್.ಸಿ., ಕೆ. ಸಿದ್ದು, ತಿಮ್ಮಾರಾಯಸ್ವಾಮಿ, ಎಸ್. ಗಿರೀಶ್, ಪಂಡಿತ್, ದೇವರಾಜ್ ಎಸ್., ಸತೀಶ ಡಿ.ಎಸ್., ಕಿರಣ್, ಪ್ರಶಾಂತ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು
ಸುದ್ದಿದಿನ,ದಾವಣಗೆರೆ:ಜನಪದರು ನಿಜವಾದ ಇತಿಹಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ.‘ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು’ ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನೂ ಸಿರಿಯಜ್ಜಿ ವಿರೋಧಿಸಿದ್ದಳು ಹಾಗಾಗಿ ಜಾನಪದರನ್ನು ನಾವು ಅಕ್ಷರ ಬಾರದವರು ಅನಕ್ಷಸ್ಥರು ಎಂಬುದಾಗಿ ಹೇಳುವುದು ತಪ್ಪು ಎಂದು ಹಿರಿಯ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ವಿಷಾದವ್ಯಕ್ತಪಡಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಯಜ್ಜಿ ಪ್ರತಿಷ್ಠಾನ, ಮಾನವ ಬಂಧುತ್ವ ವೇದಿಕೆ ಹಾಗೂ ಅಮಿತ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಎಂ.ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ ಮಾಡಿ ಅವರು ಮಾತನಾಡಿದರು.
ಸಿರಿಯಜ್ಜಿ ಭೇಟಿ ಮಾಡಿ ಸುಮಾರು 50ವರ್ಷ ಆಯಿತು.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಜೊತೆಗೆ ಮೊದಲ ಬಾರಿಗೆ ಗುಡಿಸಲಿನ ಭೇಟಿ ಮಾಡಿದ್ದೆ. ಆಡಿನ ಹಾಲು ಕರೆದು ಜತೆಗೆ ಮುದ್ದೆ ಕೊಡುತ್ತಿದ್ದರು. ಅದು 76ರ ಈ ಇಳಿವಯಸ್ಸಿನಲ್ಲೂ ನನಗೆ ಶಕ್ತಿ ಕೊಟ್ಟಿದೆ. ಪಾಶ್ಚಾತ್ಯ ವಿದ್ವಾಂಸರು 1800 ಸಂದರ್ಭದಲ್ಲಿ ದೇಶದಲ್ಲಿ ಹುಡುಕಿ ಹೊತ್ತೊಯ್ಯುವ ಕೆಲಸ ಮಾಡಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅವರಿಗೆ ಅಭಿಮಾನ ಇತ್ತು. ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸರು. ಅರೆ ಬರ ಕನ್ನಡ ಓದಿ ಎಲ್ಲವೂ ಗೊತ್ತದೆ ಎನ್ನುತ್ತೇವೆ. ಆದರೆ, ಸಿರಿಯಜ್ಜಿ ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದರು. ‘ಹತ್ತ ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ’ ಎಂಬ ಮಾತು ದೊಡ್ಡದು. ಇದರಲ್ಲಿ ದೊಡ್ಡ ಸಂದೇಶ ಇತ್ತು ಎಂದು ಸ್ಮರಿಸಿದರು.
ಅವಳ ಹಾಡುಗಾರಿಕೆಯ ಕ್ರಮ ವಿಸ್ಮಯ ಮೂಡಿಸುತ್ತಿತ್ತು. ನೋವಿನ ವಾಕ್ಯದಲ್ಲಿ ಇರುವ ಅರ್ಥ ಬಹಳ ದೊಡ್ಡದು. ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. . 100ಕ್ಕೂ ಹೆಚ್ಚು ತ್ರಿಪದಿಯಲ್ಲಿ ಸಿರಿಯಜ್ಜಿ ಹಾಡಿದ್ದಾಳೆ. ಸಮಾಜಿಕ, ಐತಿಹಾಸಿಕ, ಸಂತೋಷದ ಸಂಗತಿ, ಮಳೆರಾಯನ ಕುರಿತು ಹಾಡು ಹೇಳಿದ್ದಾಳೆ. ಮದುವೆ ಸಂಭ್ರದ ಸಾವಿರಾರು ತ್ರಿಪದಿ ಅವಳಲ್ಲಿದ್ದವು.ಶಿಷ್ಟ ಮತ್ತು ಜಾನಪದ ಸಾಹಿತ್ಯ ಈ ಎರಡರಲ್ಲೂ ಕೆಟ್ಟದ್ದು ಒಳ್ಳೆಯದು ಇದೆ. ಇದರ ಬಗೆಗೆ ಇನ್ನೂಹೆಚ್ಚಿನ ಅಧ್ಯಯನ ನಡೆಸಿ ಪ್ರಾಧ್ಯಾಪಕರು ಚರ್ಚಿಸಬೇಕಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಅನಕ್ಷರಸ್ಥರಲ್ಲಿ ಕೂಡ ವಿದ್ವಾಂಸರು ಇದ್ದಾರೆ. ಸಿರಿಯಜ್ಜಿ ರೀತಿಯವರು ಅಸಂಖ್ಯಾತರಷ್ಟು ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳೋಣ’.ಎ.ಕೆ.ರಾಮಾನುಜನ್, ಎಸ್.ಎಲ್.ಭೈರಪ್ಪ, ಗುಂಡೂರಾವ್, ಎಚ್.ಕೆ.ರಂಗನಾಥ್ ಸೇರಿ ಅನೇಕರು ಸಿರಿಯಜ್ಜಿ ಹುಡುಕಿಕೊಂಡು ಬಂದಿದ್ದರು. ಪ್ರಾಧ್ಯಾಪಕರು ಇದನ್ನು ಗುರುತಿಸಿ ಹೇಳಬೇಕು. ಮಕ್ಕಳಿಗೆ ಪಾಠ ಮಾಡಿದರೆ ಪ್ರಾಧ್ಯಾಪಕರ ಕಾರ್ಯ ಮುಗಿಯುದಿಲ್ಲ ಎಂದು ಕಿವಿಮಾತು ಹೇಳಿದರು.
ಅನಕ್ಷರಸ್ಥರು ಎಂದು ಹೇಳುವುದು ನಮ್ಮ ಅಜ್ಞಾನ ತೋರಿಸುತ್ತದೆ. ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯ, ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯ ಇದು ಕೂಡ ಮುಖ್ಯ.‘ಸಾವಿರದ ಸಿರಿ ಬೆಳಕು’ ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಅಪ್ರಕಟಿತ ಗೀತೆಗಳು ಇನ್ನೂ ಇವೆ. ಅಕ್ಷರಕ್ಕೆ ಅಳಿವಿಲ್ಲ. ದೇಶದ ಉತ್ತಮ ಸಂಗತಿ, ಪಳಯುಳಿಕೆ ಅಮೆರಿಕಾ, ಇಂಗ್ಲೆಂಡ್ ನಲ್ಲಿವೆ.ಎಚ್ಚರಿಕೆ, ಗಮನ ಹರಿಸಬೇಕು ಪ್ರಾಧ್ಯಾಪಕರು. ಮಕ್ಕಳ ಆಸ್ತಿ ಯಾವುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎಂ.ಮುತ್ತಯ್ಯ ಅಭಿಪ್ರಾಯಪಟ್ಟರು.
ಮನುಷ್ಯರೆಂಬಂತೆ ಸಮಾಜ ಕಾಣದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಚಿಕ್ಕ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರೂ ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ.ಸಿರಿಯಜ್ಜಿ ಸೃಷ್ಟಿಸಿದ್ದು ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದು. ಇದು ಕಾಡುಗೊಲ್ಲ ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆ ಕೂಡ ಹೌದು. ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಮಾನ್ಯತೆ ಸಿಕ್ಕಿದ್ದು ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಸಾಕಷ್ಟು ಶ್ರಮಿಸಬೇಕಾಯಿತು ಎಂದು ಮೆಲುಕುಹಾಕಿದರು.
ಜಾನಪದ ಅಧ್ಯಯನ ವಿಸ್ತರಣೆ ಕಂಡ, ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ಈ ಕೃತಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತವಾಗಿ ಸಿರಿಯಜ್ಜಿ ಪರಿಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ.ಕಾಡು ಗೊಲ್ಲರಂತಹ ನಿರ್ಬಂಧಿತ ಸಮುದಾಯದ ಮಹಿಳೆಯೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಸಿಕ್ಕಿದ್ದು ವಿಸ್ಮಯ. ಅವರ ಒಳಗಿನ ಆಸಕ್ತಿ, ಪ್ರಯತ್ನ ಹಾಗೂ ಕುಟುಂಬದ ಬೆಂಬಲದ ಕಾರಣಕ್ಕೆ ಅವಳಿಗೆ ಇದು ಸಾಧ್ಯ ಆಯಿತು. ಕಾಡಗೊಲ್ಲರ, ಸಾಂಸ್ಕೃತಿಕ ವೀರರ ಆರಾಧ್ಯ ದೈವ, ಬೇರೆ ಸಮುದಾಯದ ದೈವಗಳ ಬಗ್ಗೆ ಸಿರಿಯಜ್ಜಿ ಹಾಡಿದ್ದಾರೆ. ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಸಾಹಿತ್ಯದ ಪದ-ಪದದ ವಿವರಗಳನ್ನು ಅವಳು ನೀಡುತ್ತಿದ್ದಳು. ಕಾವ್ಯ ಅವಳ ಬದುಕಿನ ಭಾಗ ಆಗಿತ್ತು. ಹೀಗಾಗಿ ಅವಳು ನಿರರ್ಗಳವಾಗಿ ಹಾಡುತ್ತದ್ದಳು. ಆದರೆ, ಒಬ್ಬ ವ್ಯಕ್ತಿ ಇಷ್ಟು ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ್ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ2 days ago
ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು
-
ದಿನದ ಸುದ್ದಿ2 days ago
ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ನಿಂದ ವಿದ್ಯಾರ್ಥಿ ವೇತನ ವಿತರಣೆ
-
ದಿನದ ಸುದ್ದಿ9 hours ago
ಬ್ಯಾಂಕ್ ದರೋಡೆ ಹೆಚ್ಚಳ ; ಭದ್ರತಾ ಮಾನದಂಡಗಳನ್ನು ಬ್ಯಾಂಕ್‍ಗಳು ಪಾಲನೆ ಮಾಡುವುದು ಕಡ್ಡಾಯ : ಎಸ್ಪಿ ಉಮಾ ಪ್ರಶಾಂತ್ ಸೂಚನೆ