Connect with us

ರಾಜಕೀಯ

ಸಿದ್ದರಾಮೋತ್ಸವ ; ಇದು ಗೂಗ್ಲಿಯೂ ಹೌದು; ಮೊದಲ ಬಾಲಿಗೆ ಸಿಕ್ಸರೂ ಹೌದು..!

Published

on

  • ರಾಜಾರಾಂ ತಲ್ಲೂರು

ಒಂದು ಆಡಳಿತಪಕ್ಷ ದುರಾಡಳಿತದಲ್ಲಿ ತೊಡಗಿರುವಾಗ, ವಿರೋಧಪಕ್ಷ ಶಕ್ತಿಹೀನವಾಗುತ್ತಿದೆ ಎಂದು ಬಿಂಬಿತವಾಗುತ್ತಿರುವಾಗ ರಾಜ್ಯದ ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ಸಿಗೆ ಇಂತಹದೊಂದು ಬೂಸ್ಟರ್ ಡೋಸ್ ಬೇಕಿತ್ತು. ಈಗ ಸಂಜೆಯ ಹೊತ್ತಿಗೆ ಕಾಂಗ್ರೆಸ್ಸಿಗರಲ್ಲಿ ಬೂಸ್ಟರ್ ಡೋಸ್ ಪಡೆದ ಭಾವ ಕಾರ್ಯಕರ್ತರ ನೆಲಮಟ್ಟದಲ್ಲೂ, ಸೋಷಿಯಲ್ ಮೀಡಿಯಾದ ಮುಗಿಲಿನಲ್ಲೂ ಕಾಣಿಸುತ್ತಿದೆ ಎಂಬ ಮಟ್ಟಿಗೆ ಈವತ್ತಿನ “ದಾವಣಗೆರೆ ಶೋಆಫ್” ಯಶಸ್ವಿ.

ಒಂದು ಕ್ಷಣ, ಈ ಸಿದ್ಧರಾಮೋತ್ಸವದ ರನ್‌ಅಪ್ ಕಡೆ ಹಿಂದಿರುಗಿ ನೋಡಿ

ಆಳುವವರ ಪರ ಇರುವ ರಾಜ್ಯದ ಬಹುತೇಕ ಮಾಧ್ಯಮಗಳು, ಇದು ಸಿದ್ಧರಾಮಯ್ಯ-ಡಿಕೆ ಶಿವಕುಮಾರ್ ನಡುವಿನ ಶೋಡೌನ್ ಎಂದೇ ಬಿಂಬಿಸಿದ್ದವು. ಕಾಂಗ್ರೆಸ್ಸಿನ ಒಡಕು ಈ ಸಮಾರಂಭದ ಮೂಲಕ ಹೊರಬೀಳಲಿದೆ ಎಂಬುದು ಅವರ ತುಂಬು ನಿರೀಕ್ಷೆ ಆಗಿತ್ತು. ಸಮಾರಂಭಕ್ಕೆ “ಐವತ್ತು ಕೋಟಿ ಖರ್ಚು ಮಾಡುವ ಸಮಾಜವಾದ” ಎಂಬ ಟೀಕೆಯಿಂದ ಹಿಡಿದು, ಸಿದ್ಧರಾಮಯ್ಯ ಸುಳ್ಳು ಜನ್ಮದಿನಾಂಕದೊಂದಿಗೆ ಹುಟ್ಟಿದ ಹಬ್ಬ ಆಚರಣೆಯ ತುರ್ತಿಗೆ ಬಿದ್ದಿದ್ದಾರೆ ಎಂಬಲ್ಲಿಯ ತನಕ “ಅಪ”ಪ್ರಚಾರ ನಡೆದಿತ್ತು. ಪ್ರಚಾರಕ್ಕಿಂತ ಅಪಪ್ರಚಾರದ ಅಬ್ಬರವೇ ಹೆಚ್ಚಿತ್ತು. ಇದರ ಪರಿಣಾಮವಾಗಿ ಈ ಸಮಾರಂಭದ ಹೆಸರು “ಸಿದ್ಧರಾಮೋತ್ಸವ” ಇರಬೇಕೇ ಬೇಡವೇ ಎಂಬ ಚರ್ಚೆ ಕೂಡ ಕಾಂಗ್ರೆಸ್ಸಿನೊಳಗೆ ನಡೆದ ಬಗ್ಗೆ ಸುದ್ದಿ ಆಗಿತ್ತು.

ಇಂತಹದೊಂದು “ಶೇಕೀ ರನ್ ಅಪ್” ಜೊತೆಗೇ ಆರಂಭಗೊಂಡ “ಸಿದ್ಧರಾಮಯ್ಯನವರ 75ನೇ ಹುಟ್ಟುಹಬ್ಬದ ತಯಾರಿ, ಇಂದು ಬೆಳಗ್ಗೆಯ ಹೊತ್ತಿಗೆ ಹದಿನೈದು ಕಿಲೋಮೀಟರ್ ಹಿಂದೆಯೇ ಜನಸಂದಣಿಯ ಕಾರಣಕ್ಕೆ ಟ್ರಾಫಿಕ್ ಜಾಮ್ ಎಂಬಂತಹ ಸುದ್ದಿಗಳ ಜೊತೆ ಅಂತಿಮ ಹಂತ ತಲುಪಿದ್ದು, ಕಾಂಗ್ರೆಸ್ಸಿಗರು ಈ ಸಮಾವೇಶವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದಕ್ಕೆ ಸೂಚನೆ.

ಕಾಂಗ್ರೆಸ್ಸಿಗೆ ತಾನು ಮರೆತೇ ಹೋಗಿದ್ದ “ಸ್ವಸಾಮರ್ಥ್ಯ ಮರುಪರಿಚಯ”ಕ್ಕೆ ಇಂತಹದೊಂದು ಬೂಸ್ಟರ್ ಡೋಸ್ ಅಗತ್ಯ ಇತ್ತು. ಒಂದಿಡೀ ಟರ್ಮ್ ಆಡಳಿತ ನಡೆಸಿದ್ದ ಸಿದ್ಧರಾಮಯ್ಯ ಸರ್ಕಾರ ಎರಡನೇ ಟರ್ಮಿಗೆ 55-45ರ ಸಣ್ಣ ಅಂತರದಲ್ಲಿ ಸೋತರೂ ಬಾಹ್ಯ ಬೆಂಬಲದಿಂದ ಸರ್ಕಾರ ರಚಿಸಿದ್ದು, ಪ್ರಲೋಭನೆಯ ಪಕ್ಷಾಂತರಗಳಿಂದಾಗಿ ಅಧಿಕಾರ ಕಳೆದುಕೊಂಡದ್ದು… ಎಲ್ಲವನ್ನೂ ಕಾಂಗ್ರೆಸ್ ಕಾರ್ಯಕರ್ತರು ಮರೆತಂತೆ ಕಾಣುತ್ತಿತ್ತು.

ಯಾಕೆ ಈ ಮರೆವು ಉಂಟಾಗಿತ್ತೆಂದರೆ “ಡಬ್ಬಲ್ ಎಂಜಿನ್” ಭೋರ್ಗರೆತ ಅಷ್ಟು ಗಟ್ಟಿಯಾಗಿತ್ತು! ಜೊತೆಗೆ #ಡಿಯರ್_ಮೀಡಿಯಾ ಪ್ರತಿಪಕ್ಷವನ್ನೇ ಆಡಳಿತಪಕ್ಷವೆಂದು ಪರಿಗಣಿಸಿ ಪ್ರಹಾರ ನಿರತವಾಗಿತ್ತು. ಮೆದುಳಿಗೆ ಈ ಸತತ ಪ್ರಹಾರದ ಪರಿಣಾಮ ಮತ್ತು ಕೋವಿಡ್ ಮತ್ತಿತರ ಸಂಕಷ್ಟಗಳು ಕಾಂಗ್ರೆಸ್ ಕಾರ್ಯಕರ್ತರನ್ನು ವಿನಮನಸ್ಕಗೊಳಿಸಿದ್ದವು.

ತಳಮಟ್ಟದಲ್ಲಿ ಅವರ ಶಕ್ತಿ ಸಾಮರ್ಥ್ಯಗಳು ಅವರಿಗೇ ಮರೆತುಹೋಗಿದ್ದವು. ಇಂದಿನ ಸಮಾರಂಭ ಅದನ್ನು ಬಡಿದೆಚ್ಚರಿಸಿದೆ. ಇಂದು ಸಮಾರಂಭದ ವೇದಿಕೆಯಲ್ಲಿದ್ದ ನಾಯಕಗಢಣದ ಮಾತುಗಳು, ಅಭಿವ್ಯಕ್ತಿಗಳು ಈ “ಸಂತಸ”ವನ್ನು ಸಾರಿ ಸಾರಿ ಹೇಳುತ್ತಿದ್ದವು. ಅವರೆಲ್ಲರ ನಿರೀಕ್ಷೆ ಮೀರಿ ದಾವಣಗೆರೆಗೆ ಕಾಂಗ್ರೆಸ್ ಕಾರ್ಯಕರ್ತರು ಲಗ್ಗೆ ಇಟ್ಟಿದ್ದರು!

ಈ ಸಮಾರಂಭ ಏಕೆ ಗೂಗ್ಲಿ ಎಂದರೆ, ಸಿದ್ಧರಾಮಯ್ಯ ಅವರ “ಜನ್ಮದಿನ ಸಂಭ್ರಮ” ಎಂದೇ ಎಲ್ಲರೂ ಊಹಿಸಿಕೊಂಡಿದ್ದ ಈ ಕಾರ್ಯಕ್ರಮ, ಕಾಂಗ್ರೆಸ್ಸಿನ ಮಟ್ಟಿಗೆ ವಿಧಾನಸಭಾ ಚುನಾವಣೆಗಳಿಗೆ ತಯಾರಿಯ ಉದ್ಘಾಟನಾ ಸಮಾರಂಭ ಆಗಿ ಬದಲಾಗಿತ್ತು. ಆ ಮಟ್ಟಿಗೆ ಕಾರ್ಯಕ್ರಮದ ಆಯೋಜಕರು ಮತ್ತು ಸಿದ್ಧರಾಮಯ್ಯನವರ ಸೂಕ್ಷ್ಮಗ್ರಾಹಿತ್ವವನ್ನು ಮೆಚ್ಚಬೇಕು. ಆಡಳಿತಪಕ್ಷಕ್ಕೆ ಇದು ಅನಿರೀಕ್ಷಿತ. ಇಂತಹದೊಂದು ನಿರೀಕ್ಷೆ ಇದ್ದಿದ್ದರೆ, ಅವರದನ್ನು ಬೇರೆ ರೀತಿಯಲ್ಲಿ ನಿಭಾಯಿಸಲು ಅವಕಾಶಗಳಿದ್ದವು.

ಬೇರೆಲ್ಲ ವ್ಯವಸ್ಥೆ ಮಾಡಿಕೊಂಡು, ಸಿದ್ಧರಾಮಯ್ಯನವರನ್ನು ಕಟ್ಟಿ ಹಾಕುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಆಡಳಿತ ಪಕ್ಷಕ್ಕೆ ಈವತ್ತು ದಾವಣಗೆರೆಯಲ್ಲಿ ಸೇರಿದ ಜನಸಾಗರ, ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರ ಮೂಡ್ ಹೊಸ ಚಿಂತೆಯ ಗೆರೆಗಳನ್ನು ಮೂಡಿಸಿದ್ದರೆ ಅಚ್ಚರಿ ಇಲ್ಲ. ತಳಮಟ್ಟದಲ್ಲಿ ಎಲ್ಲವೂ ಸರಿಯಾಗಿಲ್ಲ, ಜನಸಾಮಾನ್ಯರ ಪರಿಸ್ಥಿತಿ ತೀರಾ ಕೆಟ್ಟಿದ್ದು, ಕೇವಲ “ಮೋದಿ” ಹೆಸರು ಈ ಬಾರಿ ಮತ್ತೊಮ್ಮೆ ಓಟು ತಂದುಕೊಡದು ಎಂಬುದು ಅವರಿಗೂ ಅರಿವಿದೆ.

ಈವತ್ತು ಬೆಳಗ್ಗೆ ದಾವಣಗೆರೆಯಲ್ಲಿ ಒಮ್ಮೆ ಜನಸಾಗರವನ್ನು ನೋಡಿದ ಬಳಿಕ ಕಾಂಗ್ರೆಸ್ ನಾಯಕರೆಲ್ಲರೂ “ಸಿಕ್ಸರ್” ಬಾರಿಸುವ ಹುಮ್ಮಸ್ಸಿನಲ್ಲಿದ್ದರು. ಅವರ ಮಾತುಗಳಲ್ಲಿ ಅದು ಮತ್ತೆ ಮತ್ತೆ ವ್ಯಕ್ತವಾಯಿತು. ಡಿ ಕೆ ಶಿವಕುಮಾರ್, ಸಿದ್ಧರಾಮಯ್ಯ ಮತ್ತು ಅವರ ಸರ್ವೋಚ್ಛನಾಯಕ ರಾಹುಲ್ ಗಾಂಧಿ ಮೂವರೂ ಬಹಳ ಎಚ್ಚರಿಕೆಯಿಂದ ತಮ್ಮ ಮಾತುಗಳನ್ನು ಆಯ್ದುಕೊಳ್ಳುವ ಮೂಲಕ, “ಸಿದ್ಧರಾಮೋತ್ಸವ” ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 2023ರ ಚುನಾವಣಾ ಪ್ರಚಾರದ ಆರಂಭ ಎಂಬುದನ್ನು ಕಾರ್ಯಕರ್ತರಿಗೆ ತಲುಪಿಸಿದರು.

ಈ ಸಿಕ್ಸರ್ ಕೂಡ ಆಡಳಿತ ಪಕ್ಷಕ್ಕೆ ಅನಿರೀಕ್ಷಿತ

ಆಟ ಇಲ್ಲಿಗೇ ಮುಗಿಯುವುದಿಲ್ಲ. ಇದಿನ್ನೂ ಆರಂಭ ಮಾತ್ರ. ಆದರೆ ತಯಾರಿಯ ಕೊರತೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಮಟ್ಟಿಗೆ ಇವತ್ತಿನದು ಭರ್ಜರಿ ಆರಂಭ ಎಂಬುದರಲ್ಲಿ ಸಂಶಯ ಇಲ್ಲ. ಕಾಂಗ್ರೆಸ್ಸಿಗರು ಈವತ್ತಿನದೇ ಕೊನೆಯ ಬಾಲ್, ಸಿಕ್ಸರ್ ಬಿದ್ದಿದೆ ಅಂದುಕೊಂಡು ತಣ್ಣಗೆ ಕುಳಿತರೆ ಮಾತ್ರ ಕೆಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending