ನೆಲದನಿ
ಕಲೆಯೊಳಗೆ ಕಾಯಕ ಕಾಣುವ ಕಲಾವಿದ : ರವೀಂದ್ರ ಅರಳಗುಪ್ಪಿ ಅವರ ಕಲಾತ್ಮಕ ಬದುಕಿನ ಸುತ್ತ

ಭಾರತವು ವಿವಿಧತೆಯನ್ನು ಏಕತೆಯನ್ನು ಕಂಡ ನಾಡು. ಇಲ್ಲಿ ವಿಭಿನ್ನವಾದ ಸಂಸ್ಕøತಿ, ಆಚಾರ, ವಿಚಾರಗಳಿದ್ದರು ಕೂಡ ಈ ಎಲ್ಲಾ ಭಿನ್ನತೆಗಳು ಜೀವಪರವಾದ ಆಶಯಗಳನ್ನು ಮೈಗೂಡಿಸಿಕೊಂಡಿವೆ. ಇಂತಹ ಜೀವಪರ ಸಂಸ್ಕøತಿಯ ಭಾಗವಾಗಿ ಬೆಳೆದು ಬಂದಿರುವ ಕಲೆಯೂ ಕೂಡ ಸಮಕಾಲೀನ ಸಮಾಜದ ಹಲವಾರು ನೋವು, ನಲಿವುಗಳಿಗೆ ಸ್ಪಂದಿಸುತ್ತ ಬಂದಿದೆ. ಒಂದು ಕಲೆಯನ್ನು ಜೀವ ಚೈತನ್ಯದ ಪರವಾಗಿ ಸಿದ್ಧಗೊಳಿಸುವ ಜವಬ್ದಾರಿಯು ಒಬ್ಬ ಸೃಜನಶೀಲ ಕಲಾವಿದನ ಮೇಲೆ ನಿಂತಿರುತ್ತದೆ. ಆಯಾ ಕಲಾವಿದರ ಮನಸ್ಥಿತಿಗೆ ಅನುಗುಣವಾಗಿ ಕಲೆಯು ತನ್ನ ಬೆಳವಣಿಗೆಯನ್ನು ಕಂಡುಕೊಳ್ಳುತ್ತದೆ. ಕಲಾವಿದನು ತನ್ನ ಕಲೆಯನ್ನು ವ್ಯವಹಾರಿಕ ನೆಲೆಯಲ್ಲಿ ಮಾತ್ರ ಮುನ್ನಡೆಸಿದರೆ ಅದು ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವತ್ತ ಸಾಗುತ್ತದೆ. ಅದೇ ಕಲೆಯನ್ನು ಜೀವಪರವಾದ ಕಾಳಜಿಯೊಂದಿಗೆ ಬೆರೆಸಿ, ಸಮಾಜ ಸುಧಾರಣೆಗೆ ಮುಂದಾದರೆ ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣದೆಡೆಗೆ ಕಲೆಯು ತನ್ನ ಯಾನವನ್ನು ಮುಂದುವರೆಸುತ್ತದೆ. ಹೀಗೆ ಕಲೆಯನ್ನು ಒಂದು ವ್ಯವಹಾರಿಕ ದೃಷ್ಟಿಕೋನಕ್ಕಷ್ಟೆ ಸೀಮಿತಗೊಳಿಸದೆ ಜೀವಜಗತ್ತಿಗೆ ಮಹತ್ತರವಾದ ಸಂದೇಶ ನೀಡುವಂತೆ ಸಿದ್ಧಗೊಳಿಸಿಕೊಂಡು ಬಂದವರಲ್ಲಿ ಶ್ರೀಯುತ ರವೀಂದ್ರ ಹೆಚ್ ಅರಳಗುಪ್ಪಿ ಅವರು ಒಬ್ಬರಾಗಿದ್ದಾರೆ. ಶ್ರೀಯುತರು ತಮ್ಮ ಕಲಾ ಬದುಕನ್ನು ಜೀವಪರವಾದ ನೆಲೆಯಲ್ಲಿ ಪ್ರತಿಸ್ಪಂದಿಸುತ್ತ ಬಂದಿರುವ ಕ್ರಮವನ್ನು ಅನಾವರಣಗೊಳಿಸುವುದೆ ಇಂದಿನ ನೆಲದನಿಯ ಪ್ರಮುಖ ಆಶಯವಾಗಿದೆ.
ಶ್ರೀಯುತ ರವೀಂದ್ರ ಅರಳಗುಪ್ಪಿ ಅವರು ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟೆಯಲ್ಲಿ ಜನ್ಮತಳೆದರು ಸಹ ಬೆಳೆದದ್ದು ಮಾತ್ರ ಹಿರೆಕೇರೂರು ತಾಲ್ಲೂಕಿನ ಅಣಜಿ ಎಂಬ ಗ್ರಾಮೀಣ ಪರಿಸರದಲ್ಲಿ. ಶ್ರೀ ಹೊಳೆಬಸಪ್ಪ ಹಾಗೂ ಶ್ರೀಮತಿ ಜೀವಮ್ಮನವರ ಪುತ್ರನಾದ ರವೀಂದ್ರ ಅರಳಗುಪ್ಪಿಯವರು ತಮ್ಮ ಬಾಲ್ಯದ ದಿನಗಳಲ್ಲಿ ತಂದೆ ತಾಯಿಗಳಿಂದ ಸಾಕಷ್ಟು ನೈತಿಕ ಶಿಕ್ಷಣವನ್ನು ಪಡೆದುಕಂಡು, ಅದೇ ತಳಹದಿಯ ಮೇಲೆ ತಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಅಂತರ್ಗತ ಮಾಡಿಕೊಂಡವರು. ಇವರ ತಂದೆಯವರು ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದು, ತಂದೆಯವರಿಂದ ಸಾಕಷ್ಟು ಬದುಕಿನ ಪಾಠಗಳನ್ನು ಕಲಿತುಕೊಂಡ ಶ್ರೀಯುತರು, ಗ್ರಾಮೀಣ ಬದುಕಿನ ಸಹಕಾರ, ಸಹಭಾಳ್ವೆಯ ತತ್ವಗಳಿಂದ ಪ್ರಭಾವಿತರಾದವರು. ತಮ್ಮ ಎಸ್.ಎಸ್.ಎಲ್.ಸಿ ಹಂತದವರೆಗಿನ ಶಿಕ್ಷಣವನ್ನು ತಾವು ನೆಲೆಸಿದ್ದ ಅಣಜಿ ಗ್ರಾಮದಲ್ಲಿ ಪಡೆದ ಇವರು, ಈ ಶಾಲಾ ಹಂತದಲ್ಲಿ ಹಲವಾರು ತೆರನಾದ ಬದುಕಿನ ಪಾಠಗಳನ್ನು ಇಲ್ಲಿ ಕರಗತ ಮಾಡಿಕೊಂಡಿದ್ದರು. ನಂತರದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮಲ್ಲಾಡಿಹಳ್ಳಿಯಲ್ಲಿ ಪಡೆದಿದ್ದು, ಇಲ್ಲಿಯೂ ಕೂಡ ಆಧ್ಯಾತ್ಮಿಕ ತಳಹದಿಯ ಶಿಕ್ಷಣವನ್ನು ಪಡೆದುಕೊಂಡರು. ಇದಾದ ತರುವಾಯದಲ್ಲಿ ಪದವಿ ಶಿಕ್ಷಣಕ್ಕೆ ದಾವಣಗೆರೆಗೆ ಬಂದು, ಎಂ.ಎಸ್.ಬಿ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ದಾಖಲಾದರು. ಈ ವೇಳೆಗಾಗಲೆ ಸಾಕಷ್ಟು ನಾಟಕದ ಹುಚ್ಚು ಮೈಗೂಡಿಸಿಕೊಂಡಿದ್ದ ಇವರಿಗೆ ಹಲವಾರು ಬೀದಿ ನಾಟಕಗಳನ್ನು ನೋಡಿ, ಅವುಗಳ ಪ್ರದರ್ಶನದಲ್ಲಿಯೂ ತಲ್ಲಿನರಾಗಿದ್ದರು. ದ್ವಿತೀಯ ವರ್ಷದ ಪದವಿ ಶಿಕ್ಷಣ ಪಡೆಯುವ ಹಂತದಲ್ಲಿ ದಾವಣಗೆರೆಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ‘ಹೆಗ್ಗಡಾಯಣ’ ಎಂಬ ನಾಟಕ ಪ್ರದರ್ಶನಗೊಳ್ಳುತ್ತಿದೆ ಎಂಬುದನ್ನು ತಮ್ಮ ಸ್ನೇಹಿತರಿಂದ ತಿಳಿದು, ಇಲ್ಲಿಗೆ ನಾಟಕ ನೋಡಲು ಆಗಮಿಸಿದ್ದರು. ಆಗ ಇಲ್ಲಿನ ಚಿತ್ರಕಲಾ ವಿದ್ಯಾಲಯವನ್ನು ಗಮನಿಸಿ, ನಾನು ಕೂಡ ಚಿತ್ರ ಕಲಾವಿದನಾಗಬೇಕೆಂಬ ಹಂಬಲದಿಂದ ಬಿ.ಕಾಂ ಪದವಿಗೆ ವಿದಾಯ ಹೇಳಿ, ಚಿತ್ರಕಲಾ ಶಾಲೆಗೆ ಸೇರಿಕೊಂಡು, ಇದೇ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿಕೊಂಡು, ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ.
ಶ್ರೀಯುತ ರವೀಂದ್ರ ಅರಳಗುಪ್ಪಿ ಅವರು ನಾಟಕ ಮತ್ತು ಚಿತ್ರಕಲಾ ಕ್ಷೇತ್ರಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದವರಾಗಿದ್ದಾರೆ. ಈ ಎರಡು ಕ್ಷೇತ್ರಗಳ ಮೂಲಕವಾಗಿ ಸಮಾಜವನ್ನು ತಿದ್ದುವ ಹಲವಾರು ಕಾರ್ಯಗಳನ್ನು ಅನುಷ್ಠಾನಗೊಳಿಸಿಕೊಂಡು ಬಂದಿದ್ದಾರೆ. ಕಲೆಗಳನ್ನು ಕೇವಲ ವ್ಯವಹಾರಿವಾಗಿ ಮಾತ್ರ ನೋಡುವಂತಹ ಕಾಲಘಟ್ಟದಲ್ಲಿ, ಕಲೆಯ ಮೂಲಕವಾಗಿ ಸಾಮಾಜಿಕ ಸೇವೆಯನ್ನು ಮಾಡಬಹುದು ಎಂಬುದನ್ನು ಶ್ರೀಯುತ ತೋರಿಸಿಕೊಟ್ಟಿದ್ದಾರೆ. ಮೊದಲನೆಯದಾಗಿ ಚಿತ್ರಕಲೆಯ ಮೂಲಕವಾಗಿ ಕೈಗೊಂಡ ಸಾಮಾಜಿಕ ಜಾಗೃತಿಯ ಕೆಲವೊಂದು ಅಂಶಗಳನ್ನು ನಿದರ್ಶನಗಳ ಮೂಲಕ ಗುರುತಿಸಲಾಗುವುದು. ಚಿತ್ರಕಲೆಯನ್ನು ಬಳಸಿಕೊಂಡು ಪರಿಸರ ಜಾಗೃತಿ, ಕಾನೂನಿನ ಅರಿವು ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದಾರೆ. ಇಲ್ಲಿ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರಿಂದ ಆಗುವು ಅನಾವುತ, ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಹಲವಾರು ಬಿತ್ತಿಚಿತ್ರಗಳ ಮೂಲಕ ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಹಾಗೆಯೇ ವಾಹನ ಸವಾರರು ಪಾಲಿಸಬೇಕಾದ ಜೀವಪರವಾದ ಅಂಶಗಳ ಕುರಿತು ಬಿತ್ತಿಚಿತ್ರಗಳ ಮೂಲಕ ಅರಿವು ಮೂಡಿಸುತ್ತ ಬಂದಿದ್ದಾರೆ. ನಗರ ಪರಿಸರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಚೆಲ್ಲುವುದರಿಂದ ಉಂಟಾಗುವ ಪರಿಣಾಮಗಳ ಕುರಿತು ಸಾಮಾಜಿಕ ಅರಿವು ಮೂಡಿಸುತ್ತ ಬಂದಿದ್ದಾರೆ. ಹೀಗೆ ಚಿತ್ರಕಲೆಯನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಚಿತ್ರಕಲೆಯಲ್ಲಿನ ಇವರ ವಿಶೇಷವಾದ ಪ್ರತಿಭೆಯಿಂದಾಗಿ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಹಲವಾರು ಚಿತ್ರಪಟಗಳನ್ನು ಸಿದ್ಧಪಡಿಸಿದ್ದಾರೆ. ಇವರ ಕಲಾಕುಂಚದಿಂದ ಮೂಡಿಬಂದ ಪ್ರತಿಯೊಂದು ಕಲಾಚಿತ್ರಗಳು ಸಂಶೋಧನೆಯ ಫಲಗಳಾಗಿದ್ದು, ಮಾನವನ ಬದುಕಿನ ಮೇಲೆ ಅರಿಷಡ್ವರ್ಗಗಳು ಬೀರುವ ಪ್ರಭಾವವನ್ನು ಅನಾವರಣಗೊಳಿಸುತ್ತವೆ.
ಶ್ರೀಯುತರು ನಾಟಕ ಕ್ಷೇತ್ರದಲ್ಲಿಯೂ ತನ್ನದೇ ಆದ ಸಾಧನೆ ಮಾಡಿದ್ದಾರೆ. ಇಲ್ಲಿಯೂ ಕೂಡ ಸಾಮಾಜಿಕ ಕಳಕಳಿ ಪ್ರಮುಖವಾಗಿ ಕಾರ್ಯಪ್ರವೃತ್ತವಾಗಿರುವುದು ಕಂಡುಬರುತ್ತದೆ. ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಬೀದಿ ನಾಟಕಗಳನ್ನು ರಚನೆ ಮಾಡಿ, ಪ್ರದರ್ಶನ ಮಾಡುತ್ತ ಬಂದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಶ್ರೀಯುತರು ವಿಭಿನ್ನವಾದ ಆಲೋಚನಾ ಲಹರಿಯುಳ್ಳವರಾಗಿದ್ದಾರೆ. ಹೀಗಾಗಿಯೇ ಕಾರಗೃಹ ವಾಸಕ್ಕೆ ತುತ್ತಾಗಿರುವ ವಿಚಾರಣಾಧೀನ ಖೈದಿಗಳನ್ನು ಅಧ್ಯಯನ ಮಾಡಬೇಕೆಂಬ ಹಂಬಲವೊತ್ತು, ನಾಟಕ ಕಲಿಸುವ ನೆಪದಿಂದ ದಾವಣಗೆರೆಯ ಕಾರಗೃಹಕ್ಕೆ ಭೇಟಿ ನೀಡಿ, ಇಲ್ಲಿನ ಜೈಲು ಅಧಿಕಾರಿಗಳ ಮನವೊಲಿಸಿ, ಖೈದಿಗಳಿಗೆ ನಾಟಕ ಕಲಿಸುವ ಅವಕಾಶವನ್ನು ಪಡೆದುಕೊಂಡು ತಮ್ಮ ಸಂಶೋಧನೆಯ ಜೊತೆ ಜೊತೆಗೆ ನಾಟಕ ತರಬೇತಿಯನ್ನು ನೀಡಲು ಆರಂಭಿಸುತ್ತಾರೆ. ಇಲ್ಲಿಯೂ ಕೂಡ ಮಾನವನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಹರಿಷಡ್ವರ್ಗಗಳ ಪ್ರಭಾವಕ್ಕೆ ತುತ್ತಾಗಿ ಅಪರಾಧಿ ಕೃತ್ಯಗಳಲ್ಲಿ ತೊಡಗಿರುವ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ‘ಮೃತ್ಯು’ ಎಂಬ ನಾಟಕವನ್ನು, ಹಾಗೆಯೇ ಈ ಜಗತ್ತಿನ ಪ್ರತಿಯೊಂದು ಜೀವಿಗೂ ತಪ್ಪನ್ನು ತಿದ್ದಿಕೊಂಡು ಬದುಕುವುದಕ್ಕೆ ಮುಕ್ತ ಅವಕಾಶಗಳಿವೆ ಎಂಬ ಅರಿವು ಮೂಡಿಸುವ ನೆಲೆಯಲ್ಲಿ ‘ಪರಿವರ್ತನೆ’ ಎಂಬ ನಾಟಕವನ್ನು ಖೈದಿಗಳಿಂದ ಪ್ರದರ್ಶಿಸಿ ಉತ್ತಮವಾದ ಪ್ರಶಂಸೆಗೆ ಒಳಗಾಗಿದ್ದಾರೆ. ಈ ಪರಿವರ್ತನೆ ಎಂಬ ನಾಟಕದಲ್ಲಿ ಪಾತ್ರ ಮಾಡಿದ ಪ್ರತಿಯೊಬ್ಬ ಖೈದಿಯೂ ಅಪಾಧನೆಯಿಂದ ಮುಕ್ತವಾಗಿ ಬಿಡುಗಡೆಯ ಭಾಗ್ಯವನ್ನು ಪಡೆದುಕೊಂಡಿರುತ್ತಾರೆ.
ಶ್ರೀಯುತ ರವೀಂದ್ರ ಅರಳಗುಪ್ಪಿ ಅವರದು ಬಹುಮುಖಿ ವ್ಯಕ್ತಿತ್ವ. ಅವರು ತಮ್ಮಲ್ಲಿ ಅಂತರ್ಗತವಾದ ಕಲೆಯನ್ನು ಎಂದಿಗೂ ವ್ಯವಹಾರಿಕ ದೃಷ್ಟಿಕೋನದಿಂದ ನೋಡಿದವರಲ್ಲ. ಆ ಕಲೆಯಿಂದ ಸಮಾಜವನ್ನು ಎಷ್ಟು ಸುಧಾರಿಸಬಹುದೆಂಬ ಆಲೋಚನೆ ಮಾಡುತ್ತ ಬಂದವರು. ಇವರ ಶ್ರೀಮತಿಯವರಾದ ಎಂ.ಜಿ ಉಷಾ ಅವರು ಕೂಡ ಚಿತ್ರಕಲಾವಿದರಾಗಿದ್ದು, ಶ್ರೀಯುತರ ಪ್ರತಿಯೊಂದು ಸಮಾಜಮುಖಿ ಕಾರ್ಯಕ್ಕೆ ಜೀವ ತುಂಬುತ್ತ ಬಂದಿದ್ದಾರೆ. ತಮ್ಮ ಶ್ರೀಮತಿಯವರ ಸಹಕಾರದಿಂದಲೇ ನಾನು ಇಷ್ಟೆಲ್ಲ ಸಾಧನೆಗೆ ಪ್ರಮುಖ ಕಾರಣ ಎಂಬುದು ರವೀಂದ್ರ ಅರಳಗುಪ್ಪಿಯವರ ಮನದಾಳದ ಮಾತಾಗಿದೆ. ಈ ಇಬ್ಬರು ದಂಪತಿಗಳ ಚಿತ್ರಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಸಾಕಷ್ಟು ಪ್ರಶಂಸೆಗೆ ಗುರಿಯಾಗಿವೆ. ಇವರ ಸಾಧನೆ ಸುದೀರ್ಘವಾಗಿದ್ದು, ಇಲ್ಲಿ ಅವುಗಳನ್ನೆಲ್ಲ ಹಂಚಿಕೊಳ್ಳುವುದಕ್ಕೆ ಜಾಗದ ಕೊರತೆಯಿದೆ. ಆದ ಕಾರಣ ಈ ಕಿರುಪರಿಚಯದೊಂದಿಗೆ ಒಂದು ಅಲ್ಪ ವಿರಾಮ ಹಾಕುತ್ತೆನೆ. ಇವರ ಒಬ್ಬಳೆ ಮಗಳು ‘ಇಂಪನ’ ಜೊತೆಗೆ ಸಾಗುತ್ತಿರುವ ಈ ದಂಪತಿಗಳಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನೆರವೇರಲಿ ಎಂಬುದು ನಮ್ಮ ಹಾರೈಕೆ…
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.
ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.
ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.
ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.
ವಸ್ತು ಪ್ರದರ್ಶನ
ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.
ದೇಸೀ ಆಟಗಳು
ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.
ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ಉತ್ಸವ’-2025.
| ಡಾ.ಬಿ.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

ಅಂತರಂಗ
ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

- ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ
ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು
ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.
ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ
ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:
1. 1908 – ಮಹಿಳಾ ಹಕ್ಕುಗಳ ಹೋರಾಟ:
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.
2. 1909 – ಮೊದಲ ಮಹಿಳಾ ದಿನಾಚರಣೆ:
ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.
3. 1910 – ಅಂತಾರಾಷ್ಟ್ರೀಯ ಹೋರಾಟ:
ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.
4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.
5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:
1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.
6. 1975 – ವಿಶ್ವ ಮಹಿಳಾ ವರ್ಷ:
UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು
7. 2011 – 100ನೇ ವಾರ್ಷಿಕೋತ್ಸವ:
2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.
ಮಹಿಳಾ ದಿನಾಚರಣೆಯ ಉದ್ದೇಶ
ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.
ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ
ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.
ಮಹಿಳೆಯರು ಬದುಕಿನ ಉತ್ಸಾಹ
ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಾಧನೆಗಳ ಬೆಳಕು
1. ಶಿಕ್ಷಣ ಮತ್ತು ಸಶಕ್ತೀಕರಣ:
ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2. ಉದ್ಯೋಗ ಹಾಗೂ ಉದ್ಯಮಶೀಲತೆ:
ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
3. ಕ್ರೀಡೆ ಮತ್ತು ಸಾಹಸ:
ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.
4. ಸಮಾಜಸೇವೆ ಮತ್ತು ಪ್ರಭಾವ:
ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.
ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ
ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.
ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್
ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.
“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಮ್ಮ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

- ಹರ್ಷಕುಮಾರ್ ಕುಗ್ವೆ
ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.
ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ. ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.
ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು... ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.
‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು... ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.
ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು. ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು. ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.
ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ7 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ6 days ago
ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ ಕಾರ್ಯನಿರ್ವಹಣಾ ಸಮಿತಿ ರಚನೆ
-
ದಿನದ ಸುದ್ದಿ6 days ago
‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ7 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ದಾವಣಗೆರೆ | ಮೌಲಾನಾ ಅಜಾದ್ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ಅಂಕಣ4 days ago
ಕವಿತೆ | ಅವಳೀಗ ಕಾಯುವುದಿಲ್ಲ