Connect with us

ದಿನದ ಸುದ್ದಿ

ವಿಧಾನಸಭಾ ಚುನಾವಣೆ | ಬಹಿರಂಗ ಪ್ರಚಾರಕ್ಕೆ ತೆರೆ : ಮತದಾನಕ್ಕೆ ಸಕಲ ಸಿದ್ಧತೆ

Published

on

ಸುದ್ದಿದಿನ, ಬೆಂಗಳೂರು : ಇದೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸಂಜೆ ತೆರೆ ಬಿದ್ದಿದೆ. ಇನ್ನೇನಿದ್ದರು ಅಭ್ಯರ್ಥಿಗಳು ಮತ್ತು ಸ್ಥಳೀಯ ರಾಜಕೀಯ ಮುಖಂಡರು ಮನೆ-ಮನೆಗೆ ತೆರಳಿ ಮತಯಾಚನೆಗೆ ಅವಕಾಶವಿರುತ್ತದೆ.

ಬಹಿರಂಗ ಪ್ರಚಾರದ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿವಿಧ ರಾಜಕೀಯ ಪಕ್ಷಗಳ ತಾರಾಪ್ರಚಾರಕರು ಹಾಗೂ ಆಯಾ ವಿಧಾನಸಭಾ ಕ್ಷೇತ್ರಗಳ ಮತಪಟ್ಟಿಯಲ್ಲಿ ಹೆಸರಿಲ್ಲದ ರಾಜಕೀಯ ನಾಯಕರು ಸೇರಿದಂತೆ ಎಲ್ಲ ಮುಖಂಡರು ಕ್ಷೇತ್ರಗಳನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಒಂದೇ ಹಂತದ ಮತದಾನ

ರಾಜ್ಯದ ಎಲ್ಲ 224 ಕ್ಷೇತ್ರಗಳಿಗೆ ನಾಡಿದ್ದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಂದು ಬೆಳಗ್ಗೆ7 ರಿಂದ ಸಂಜೆ 6 ಗಂಟೆವರೆಗೆ ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಲು ಆಯೋಗ ಅನುವು ಮಾಡಿಕೊಟ್ಟಿದೆ.

ಈ ನಡುವೆ 80 ವರ್ಷ ಮೇಲ್ಪಟ್ಟ ಹಾಗೂ ದಿವ್ಯಾಂಗರು ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ಸದಾವಕಾಶವನ್ನು ಹಿರಿಯ ನಾಗರಿಕರು ಮತ್ತು ದಿವ್ಯಾಂಗರು ಅಧಿಕ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಂಡಿರುವುದು ಆಯೋಗದ ವರದಿಯಿಂದ ತಿಳಿದುಬಂದಿದೆ.

ಬಹಿರಂಗ ಪ್ರಚಾರ

ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಗಡುವಿಗೆ ಮುನ್ನ ಬಿಜೆಪಿ, ಕಾಂಗ್ರೆಸ್,ಜೆಡಿಎಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಸಾರ್ವಜನಿಕ ಸಭೆ, ರೋಡ್ ಶೋ, ರ್‍ಯಾಲಿಗಳ ಮುಖಾಂತರ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಈ ಕ್ಷೇತ್ರದಿಂದ ಅವರು ನಾಲ್ಕನೇ ಬಾರಿಗೆ ಆಯ್ಕೆ ಬಯಸಿದ್ದಾರೆ.

ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಹಾಗೂ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ರಾಜೀವ್ ಚಂದ್ರಶೇಖರ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕಲಬುರಗಿ ವಲಯದಲ್ಲಿ ಮೊಕ್ಕಾಂ ಹೂಡಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮ್ಮ ತವರು ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕನಕಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ, ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಬೆಂಗಳೂರಿನ ವಿಜಯನಗರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಮತ್ತೊಬ್ಬ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಬೆಂಗಳೂರಿನಲ್ಲಿಂದು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುವ ಮೂಲಕ ಮಹಿಳಾ ಕಾರ್ಮಿಕರು ಮತ್ತು ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಮತಯಾಚನೆ ನಡೆಸಿದರು.

ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಮನವರಿಕೆ ಮಾಡಿಕೊಟ್ಟರು. ಚಲನಚಿತ್ರ ನಟ ಶಿವರಾಜ್‌ಕುಮಾರ್ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚಿಸಿದರು.

ಮತ್ತೊಂದೆಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಳವಳ್ಳಿ, ಹೊಳೆನರಸೀಪುರ, ಹಾಸನ ಮತ್ತು ರಾಮನಗರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು. ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾವು ಪ್ರತಿನಿಧಿಸುವ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.

ಆಮ್ ಆದ್ಮಿ ಪಕ್ಷ ನಾಯಕರು ಬೆಂಗಳೂರಿನಲ್ಲಿ ರೋಡ್ ಶೋ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಏತನ್ಮಧ್ಯೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರರ ವಿರುದ್ಧ ಪ್ರತ್ಯೇಕವಾಗಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending