Connect with us

ಭಾವ ಭೈರಾಗಿ

ಕುರ‍್ಡ

Published

on

ಲೇಖಕಿ : ಶಾಂತಾ ಜಯಾನಂದ್
  • ಶಾಂತಾ ಜಯಾನಂದ್

ಯಾರಾದ್ರು ರಸ್ತೆಯಲ್ಲಿ ಸಡನ್ ಆಗಿ ಅಡ್ಡ ಬಂದ್ರೆ ಅಥವಾ ಅಪ್ಪಿ ತಪ್ಪಿ ಏನಾದ್ರೂ ಮಾಡಿದ್ರೆ, ಏ, ಕುರ‍್ಡ ಕಣ್ ಕಾಣೋಕಿಲ್ವಾ? ಎಂಬ ಮೊದಲಿಕೆಯ ಮಾತು ಎಲ್ಲೆಡೆ ಸರ್ವೇ ಸಾಮಾನ್ಯ ಅದನ್ನ ಬಹಳ ಸರಿ ಯೋಚಿಸ್ತೇನೆ ಮಾರ್ಕೆಟ್‌ನಲ್ಲೋ ಶಾಪಿಂಗ್ ನಲ್ಲೋ ಪಡ್ಡೆ ಹುಡುಗ್ರು ಡಿಕ್ಕಿ ಹೊಡ್ಕಂಡು ಹೋದ್ರೆ ಕಣ್ ಕಾಣಲ್ವಾ.

ಕುರುಡನ ಹಾಗೆ ನುಗ್‌ತ್ತಾನೆ ಎನ್ನುವಂತಹ ಮಾತಿದೆ.  ಪಾಪ, ನಾನು ನೋಡ್ದಂಗೆ ನಿಜವಾದ ಕಣ್ಣಿಲ್ಲದವರೂ ಯಾರಿಗೂ ತೊಂದ್ರೆ ಕೊಡದೆ ಬರೀ ಶಬ್ಧಗಳನ್ನ ಗ್ರಹಿಸ್ತಾ ಕೋಲನ್ನ ಹಿಡಿದೂ, ಅಥವಾ ಅವರವರೇ ಕೈ ಹಿಡಿದೊ, ರಸ್ತೆ ದಾಟುತ್ತಾರೆ.  ಯಾವುದೇ ರೀತಿಯ ತಲೆಹರಟೆಯಿಂದ ವರ್ತಿಸುವುದಿಲ್ಲ.

ಆದರೂ ಯಾರಾದರೂ ಈ ರೀತಿಯ ತಲೆಹರಟೆ, ತರಲೆಗಳನ್ನು ಮಾಡಿದಾಗ ಕುರ‍್ಡ ಕಣ್ ಕೊಟ್ಟಾ| ಅಂತಾನೊ ಆ ಕುರಡ ನನ್ನ ಮಗ, ಹಂಗ್ ಮಾಡ್ದಾ, ಹೀಂಗ್ ಮಾಡ್ದಾ, ಅಂತ ಮಾತುಗಳು.

ಹೌದು ಈ ಕುರುಡುತನ, ಎಂಬುದು ಹೀಗೇ? ಅಲ್ವಾ.  ಹುಟ್ಟು ಕುರುಡ ಮಧ್ಯದಲ್ಲಿ ಯಾವುದೋ ಕಾರಣಕ್ಕಾಗಿ ಕುರುಡಾದವರೋ, ಯಾವುದೋ ಅಪಘಾತದಲ್ಲಿ ಕಣ್ಣು ಕಳೆದುಕೊಂಡವರು, ಬೆಂಕಿಯ ಆಘಾತ, ಕಡೆಗೆ ಸಕ್ಕರೆ ಕಾಯಿಲೆ ಹೆಚ್ಚಾಗಿ ಸಹ ಕಣ್ಣು ಕಳೆದುಕೊಂಡವರೊ, ಆದರೇ ಹುಟ್ಟು ಕುರುಡನ ಕಥೆ ಹೆಂಗೆ ಕತ್ತಲೊಳಗೆ ಕೈ ಆಡಿದಂತೆ, ಏನೂ ಇಲ್ಲ, ಶೂನ್ಯ, ಶೂನ್ಯ ಬರೀ ಶೂನ್ಯ, ದೇವರು ಏನೋ ಒಂದು ಸಿಕ್ಸ್ತ್ ಸೆನ್ಸ್ ಕೊಟ್ಟರ‍್ತಾನೋ, ಸ್ಪರ್ಶ ಜ್ಞಾನ, ಶಬ್ದಗ್ರಹಣ ವಾತಾವರಣದ ವ್ಯತ್ಯಾಸ, ಮುಂತದವುಗಳಿಂದ ಅಂತ ಸಂದರ್ಭವನ್ನು ನಿರ್ಧರಿಸಬೇಕಾಗುತ್ತದೆ.

ಹುಟ್ಟು ಕುರುಡರಿಗೆ ಪ್ರಪಂಚದ ಕಲ್ಪನೆಯೇ ಇರುವುದಿಲ್ಲ ಅಲ್ವಾ; ನಾನು ಕಲ್ಪನೆ ಮಾಡಿಕೊಂಡು ಕಣ್ಮುಚ್ಚಿ ಮನೆಯಲ್ಲಿ ಓಡಾಡಲು ಹೋಗಿ, ಮಂಚಕ್ಕೆ ಸರಿಯಾಗಿ ತಾಗಿ ಎಡವಿದ್ದು ಉಂಟು, ಮೂತಿ ಹೊಡೆದು ಹೋಗುವ ಹಾಗೆ ಈ ಕತ್ತಲು ಅಂದರೆ ಭಯ ಹುಟ್ಟಿಸುವಂತೆ, ಯಾವಾಗಲೂ ಕಿವಿ, ಅಲರ್ಟ್ ಆಗಿರಲೇಬೇಕು.  ನಮಗೆ ತಿಳಿದ ಭಾಗ, ನಮ್ಮ ಮನೆ, ನಮ್ಮ ಕೊಠಡಿ, ಮುಂತಾದ ಕಡೆ, ಓಡಾಡಲೂ ಹೇಗೆ ಎಡವಿ ಬಿದ್ದು, ನಮಗೆ ಅಬ್ಭಾ, ಈ ಅಂಧರು ಹೇಗೆ ಓಡಾಡುತ್ತಾರೆ.

ಒಂದು ನಿಮಿಷ ಅವರ ಸ್ಥಾನದಲ್ಲಿ ನಿಂತು ಕಲ್ಪಿಸಿಕೊಳ್ಳಲು ಆಗುವುದಿಲ್ಲ.  ನಾನು ಸಹ ಬಿಗಿಯಾಗಿ ಕಣ್ಮುಚ್ಚಿ ಶೂನ್ಯದಲ್ಲಿ ಕೈಯಾಡಿಸಿಕೊಂಡು ಓಡಾಡಿ ನೋಡಿದ್ದುಂಟು.  ಇನ್ನೊಂದು ಈ ಪ್ರಾಣಿ ಗಳು ಕುರುಡಾದ್ರೆ ಏನ್ಮಾಡ್ತವೋ ಅಂತ ನಮ್ಮ ಮನೆ, ನಾಯಿಯನ್ನೇ ದಿಟ್ಟುಸುತ್ತೇನೆ.  ಅಂಧ ಮಕ್ಕಳ ಆಶ್ರಮ ಅದು ಇದು ಅಂತ, ಬಹಳಷ್ಟು ಅಂಧ ಮಕ್ಕಳಶಾಲೆ ಎಲ್ಲಾ ಉಂಟು.  ಆದರೆ, ನನಗನ್ನಿಸುತ್ತೆ ನಮ್ಮಗಳ ಜೊತೆಯೋ ಅವರನ್ನ ಬೆಳೆಸುತ್ತಾ ಮನೆಯವರೇ ಜವಾಬ್ದಾರಿ ಇರಿಸಿಕೊಂಡು ಏಕೆ ಒಟ್ಟಿಗೆ ಬಾಳ್ವೆ ಮಾಡಬಾರದು, ಇಲ್ಲಿ ಬಡವರ ಸಿರಿವಂತರ ಪ್ರಶ್ನೆ ಅಲ್ಲ.

ಬಡವರು ಬೇರೆ ಮಕ್ಕಳನ್ನು ಬಡತನ ಇದೆ ಎಂದು ಸಾಕುವುದಿಲ್ವೇ, ಹಾಗೇ, ಶಾಲೆಗೆ ಕಳಿಸಲಿ, ಏಕೆ ಹೀಗೆ, ಅನಾಥ ಆಶ್ರಮಕ್ಕೆ ಸೇರಿಸ್ತಾರೋ ತಿಳಿಯುವುದಿಲ್ಲ.  ಅವರೇನೋ, ಅನಾಥರಲ್ಲವಲ್ಲ ಬೆಂಗಳೂರಿನ ಹಲವು ಬೀದಿಗಳಲ್ಲಿ (ಬೇರೆ ಬೇರೆ ಊರುಗಳಲ್ಲೂ ಸಹ ಇರಬಹುದು), ಮೈಕ್ ಇಟ್ಕೊಂಡು, ಹಾಡೇಳಿಕೊಂಡು ಪಾಪ ಒಂದು ಬೇರೆ ರೀತಿಯ ಬಿಕ್ಷೆ ಅನ್ನಿಸುತ್ತದೆ.  ಹಾಡೇಳುತ್ತಾ ಇರುತ್ತಾರೆ.

ಯಾಕ್ರೀ ಹೆತ್ತವರೇ ಇಷ್ಟೇ ಬಡತನ ಇರಲಿ, ಶ್ರೀಮಂತಿಕೆ ಇರಲಿ, ನೀವು ಹೆತ್ತ ಮಕ್ಕಳನ್ನು ನೀವು ಸಾಕುವುದಿಲ್ವಾ?  ಕುರುಡರಾದ ತಕ್ಷಣ ಈ ರೀತಿ ಏಕೆ ಆಶ್ರಮಕ್ಕೆ ಸೇರಿಸ್ತೀರಾ?  ಅಂತ, ಗಟ್ಟಿಸಿ ಕೇಳಬೇಕೆನಿಸುತ್ತದೆ.  ಹಾಗೆ ಕೈಲಾದಷ್ಟು ವೈದ್ಯರ ಸಹಾಯ ಪಡೆದು ಅವರಿಗೆ ದೃಷ್ಟಿ ಕೊಡಿಸಲು ಪ್ರಯತ್ನಸಿ ಅಂತ ಅನ್ನಬೇಕೆನಿಸುತ್ತದೆ.

ಜಗತ್ತಿನ ಪ್ರಕೃತಿ ಸೌಂದರ್ಯವಾದ “ಸ್ವಿಜ್ಜರ್‌ಲ್ಯಾಂಡ್” ಗೆ ಹೋಗಿದ್ದೆವು.  ಪ್ರಕೃತಿ ಸೌಂದರ್ಯವನ್ನು ನೋಡು, ಮನಸ್ಸು ಗಾಳಿ ತುಂಬಿದ ಬೆಲೂನಿನಂತೆ ಹಾರಾಡುತ್ತಿತ್ತು ಸಲ್ವಾ ದೈವ ಸೃಷ್ಟಿಯೋ ಅಂತ, ಆ ಹಿಮಾಚ್ಛಾದಿತ ಪರ್ವತಗಳು ಸ್ವಲ್ಪ ಬಿಸಿಲಿಗೆ ಹೀಗೆ, ಯಾಕೋ ಸಡನ್ ಆಗಿ ಕುರುಡರ ನೆನಪಾಯ್ತು.  ದೇವ್ರೆ, ಖಂಡಿತ, ಈ ಜಗತ್ತಿನಲ್ಲಿ ಕುರುಡರನ್ನು ಮಾತ್ರ ಸೃಷ್ಠಿಸಬೇಡಪ್ಪಾ – ದೇವ್ರೇ ಅಂತ ಕಾಣದ ದೇವರಲ್ಲಿ ಮೊರೆ ಇಟ್ಟಿದ್ದು ಸತ್ಯ, ನಾನು ಸಹ ಬೆಂಗಳೂರಿಗೆ ಬಂದ ತಕ್ಷಣ ನಾರಾಯಣ ನೇತ್ರಾಲಯಕ್ಕೆ ನೇತ್ರದಾನಕ್ಕೆ ಬರೆಸಿ ರಿಜಿಸ್ಟರ್ ಮಾಡಿ ಬಂದು ಒಂದು ನಿಟ್ಟುಸಿರಿಟ್ಟಿದ್ದಂತೂ ನಿಜ.

ಮಕ್ಕಳ ಕೈಯಲ್ಲಿ ಕಾರ್ಡನ್ನು ತೋರಿಸಿ, ನಾನು ಸತ್ತ ನಂತರ ದಯವಿಟ್ಟು ನನ್ನ ನೇತ್ರದಾನ ಮಾಡಿ ಎಂದು ಹೇಳಿದ್ದು ಅತ್ಯಂತ ಪ್ರಕೃತಿ ಪ್ರಿಯಳಾದ ನನಗೆ ಅದಕ್ಕೆಂದೇ ಬಹಳಷ್ಟು ಪ್ರವಾಸಗಳನ್ನು ಕೈಗೊಳ್ಳುವ ನನಗೆ ಆ ಸೌಂದರ್ಯದಲ್ಲಿ ಮೈಮರೆಯುವ ಹುಚ್ಚು.  ಅಂಧರಿಗೆ ಹೇಗೆ, ಇದರ ಕಲ್ಪನೆಯನ್ನು ಹೇಳಲು ಸಾಧ್ಯವಿಲ್ಲ ಅಲ್ವಾ?  ಅನ್ನಿಸುತ್ತದೆ.  ಯಾವುದೇ ಕುಳಿ ಗಾಳಿ, ಪ್ರಕೃತಿ ಸುವಾಸನೆಯನ್ನು ಆಸ್ವಾದಿಸಿದರೂ ಆ ಕಲ್ಪನೆಯ ಚಿತ್ರ ಬರಲು ಸಾಧ್ಯವೇ ಇಲ್ಲ.

“ಕುರುಡ ಆನೆ ಮುಟ್ಟಿದಂತೆ” ಎಂಬ ಗಾದೆ ಮಾತು ಸತ್ಯ,  ಇಲ್ಲಿ ಇನ್ನೊಂದು ಮಾತು ಅಂದ್ರೆ, ಇಷ್ಟು ಹುಟ್ಟು ಕುರುಡರ ಕಥೆ ಆದ್ರೆ, ಮಧ್ಯದಲ್ಲಿ ಅಪಘಾತದಲ್ಲೋ ಅಥವಾ ಆರೋಗ್ಯದ ಕಾರಣದಿಂದಲೋ ಕಣ್ಣು (ದೃಷ್ಠಿಹೀನ) ಹೋದರೆ, ಅವರು ಮೊದಲು ಕಂಡ, ಬೆಳಕು, ಕತ್ತಲೆ, ಸೂರ್ಯ, ಚಂದ್ರ, ನೀರು ಬಣ್ಣಗಳು ಎಲ್ಲವೂ ಸಹ ನೆನಪಿಗೆ ಬರುತ್ತದೆ ಅಲ್ವಾ? ನಾವು ಏನನ್ನಾದರೂ ಹೇಳಿದರೇ ಕಲ್ಪಿಸಿಕೊಳ್ಳುವಷ್ಟಾದರೂ, ಇರುತ್ತದೆ.

ಆದರೆ ಹುಟ್ಟು ಅಂಧಕಾರ ಬಹಳ ಭಯಂಕರ ಬಿಡ್ರಿ.  ನ್ಯಾಯದೇವತೆಯು ಕಣ್ಣೆಗೆ ಬಟ್ಟೆ ಕಟ್ಟಿ ಅಂಧ ಕಾನೂನು ಅಂತಾರೆ.  ಕಾನೂನು ಏನು ತಿಳಿಯದೇ ತೀರ್ಪು ಕೊಡುತ್ತೆ ಅಂತಾನಾ? ಇನ್ನು ಪ್ರೇಮ ರಾಗ, ನಮ್ಮ ಶೃಂಗಾರ ಸೌಂದರ್ಯಗಳಲ್ಲಂತೂ ಕಣ್ಣು ಸರಿಯಾಗಿ ಕಾಣದಿದ್ದರೇ, ಕನ್ನಡಕ ಬಂತು ಎಷ್ಟು ಸಂಶೋಧನೆಗಳನ್ನು ಮಾಡಿ, ಅವರ ದೃಷ್ಠಿ ದೋಷಕ್ಕೆ ಕಾರಣವಾದ ಮಸೂರ, ತೆಳು ಗಾಜು ಕಣ್ಣಿಗೆ ಹಾಕೇ ಇಲ್ಲ ಎನ್ನುವಂತಹ ಕನ್ನಡಕಗಳು ಬಂದವು.

ಅಬ್ಬಾ ಈಗ ಕನ್ನಡಕ ಇಲ್ಲ ಲೆನ್ಸ್ ಬಂತು.  ಆ ಕಣ್ಣ ಗುಡ್ಡೆಗೆ ಲೆನ್ಸ್ ಹಾಕುವುದು ಮನಸ್ಸಿನ ವಿಜ್ಞಾನಿಗಳ ವೈದ್ಯ ತಂಡದ ಚಮತ್ಕಾರಕ್ಕೇ ತಲೆದೂಗಲೇ ಬೇಕು.  ಹೋ ಈಗಂತೂ, 10 ನಿಮಿಷದಲ್ಲಿ ಲೇಸರ್ ಆಪರೇಷನ್, ಕಣ್ಣಿನ ರೆಟಿನಾವನ್ನೇ ಸರಿಪಡಿಸಿ ಹೋಗಿ ಆರಾಮವಾಗಿ ಹತ್ತು ನಿಮಿಷದಲ್ಲೇ ಓಡಾಡಿಕೊಂಡಿರುವಂತೆ ಮಾಡುತ್ತಾರೆ.  ಗ್ರೇಟ್ ಅಲ್ವಾ?  ನಿಜಕ್ಕೂ ಕಣ್ಣಿನ ವಿಷಯದಲ್ಲಿ ಏನೇನೋ ಅದ್ಭುತಗಳು ಬಂದಿವೆ.  ಸತ್ತ ಮನುಷ್ಯನ ಕಣ್ಣನ್ನು ತೆಗೆದು, ಒಬ್ಬ ಅಂಧನಿಗೆ ಜೋಡಿಸಿ ಅವನಿಗೆ ದೃಷ್ಠ ಬರುವಂತೆ, ಮಾಡುವುದು, ವಿಜ್ಞಾನದ ಅದ್ಭುತಗಳಲ್ಲಿ ಒಂದು.

ವಯಸ್ಸಾದ ಮೇಲೆ ಸಹ ಕಣ್ಣು ಕಾಣುವಂತಹ ಅನೇಕ ಸಲ್ಯೂಷನ್‌ಗಳನ್ನು ವೈದ್ಯ ವಿಜ್ಞಾನಿಗಳ ಲೋಕ ಕಂಡು ಹಿಡಿದದ್ದು ಅದ್ಭುತವೇ ಸರಿ.  ಇಲ್ಲಿ ನಮ್ಮ ನೇತ್ರ ತಜ್ಞ ಮೋದಿಯವರನ್ನು ಸಹ ನೆನೆಯಲೇ ಬೇಕು.  ಎಷ್ಟು ಜನರಿಗೆ ದೃಷ್ಠಿ ನೀಡಿದ್ದಾರೋ,  ಕಣ್ಣೆ ಎಲ್ಲಾ,  ನಿನ್ನ ಕೈಗನ್ನಡಿಯಲ್ಲಿ, ಚೆಲುವೆಯ ಅಂದದ ಮೊಗಕೆ, ಕಣ್ಣು ಕಣ್ಣು  ಕಲೆತಾಗ, ಹೀಗೆ ಕಣ್ಣಿನ ಬಗ್ಗೆ ಅನೇಕ ಹಾಡುಗಳನ್ನೇ ನೂರಾರು ಉದಾಹರಿಸಬಹುದಾಗಿದೆ.

ಕವಿಯ ಕಲ್ಪನೆಯಲ್ಲಿ ಮುಖದ ಚೆಲುವಿಗೆ ಕಣ್ಣೆ ಸಾಕು.  ನಮ್ಮ ಡಿಂಡಿಮ ಕವಿಯು “ಕಮಲೇ ಕಮಲೋತ್ಪತ್ತಿಃ” ಎಂದು ಕಮಲದಂತಹ ಮುಖದಲ್ಲಿ ಉತ್ಪತ್ತಿಯಾದಂತಹ ಕಮಲಗಳು ಎಂಥ ಕಣ್ಣುಗಳು, ಎಂಬಂತಹ ಅರ್ಥ ಕೊಡುತ್ತದೆ.  ಯಾವುದೇ ಕಾವ್ಯ ಓದುವಾಗ ಹೆಣ್ಣಿನ ಬಣ್ಣನೆ ಇದ್ದರೆ ಅದಕ್ಕೆ ಕಣ್ಣೇ ಕಾರಣ.  ಇನ್ನು ಎಲ್ಲಾ ಭಾವನೆಗಳನ್ನು ಮನುಷ್ಯನು ತನ್ನ ಕಣ್ಣುಗಳಿಂದಲೇ ವ್ಯಕ್ತಪಡಿಸುವುದು.

ದುಃಖ, ಸಂತೋಷ, ಪ್ರೇಮ, ಕಾಮ, ತುಂಟಾಟ, ನವರಸಗಳನ್ನು ಸಹ ಕಣ್ಣಿನಿಂದಲೇ ವ್ಯಕ್ತಪಡಿಸಲು ಸಾಧ್ಯ ಅಲ್ಲವೇ?  ಅಂತಹ ಕಣ್ಣೇ ಇಲ್ಲ ಅಂದ್ರೆ ಹೇಗಲ್ವಾ ದೇವರೇ ಅಂತ, ನಮ್ಮ ಕಣ್ಣಿನ ವೈದ್ಯರಿಗೆ, ನಿಜವಾಗ್ಲೂ ಎರಡು ಕೈ ಎತ್ತಿ ಮುಗಿಯಬೇಕು.  ವೈದ್ಯರುಗಳು ಕಣ್ಣಿನ ಬಗ್ಗೆ ವಿಶೇಷವಾಗಿ ಓದಿ, ದೃಷ್ಠಿ ದಾನದಂತಹ ಅದ್ಭುತ ಚಮತ್ಕಾರದ ಆಪರೇಷನ್ ಮಾಡಿ ದೃಷ್ಠಿ ಬರುವಂತೆ ಮಾಡುತ್ತಾರೆ ಎಂದ್ರೆ ಅಬ್ಬಾ! ಮನುಷ್ಯನ ಬುದ್ದಿವಂತಿಕೆಗೆ ವೈದ್ಯ ಲೋಕಕ್ಕೆ ಭೇಷ್ ಅಂತ ಅನ್ನಲೇಬೇಕು.  ವಯಸ್ಸಾದವರಿಗೆ ಕಣ್ಣಿನ ಪೊರೆ, ತೆಗೆದು ಮಾಡುವ ಆಪರೇಷನ್, ಕಣ್ಣಿನ ದೃಷ್ಠಿಯನ್ನು ಹೊಳಪು ಬರಿಸುವುದು, ಏನೀ ವಿಸ್ಮಯವೇ?

ನಾನು, ಮೊದಲು ಅಂದುಕೊಳ್ಳುತ್ತಾ ಇದ್ದೆ, ಪುಣ್ಯಾತ್ಮ ಅಲ್ವಾ? ಇನ್ನು ಹುಟ್ಟು ಅಂಧಕಾರದಲ್ಲಿರುವವರು ಎಲ್ಲಾ ಸ್ಪರ್ಶ ಜ್ಞಾನದಿಂದಲೇ ತಿಳಿಯಬೇಕಲ್ಲವೇ? ಅದಕ್ಕೆ ಓದು ಬರಹದ ಕಲ್ಪನೆಯಲ್ಲಿ ಬ್ರೈಲ್ ಲಿಪಿ ಕಂಡು ಹಿಡಿದ “ಲೂಯಿಸ್ ಬ್ರೈಲ್” ಫ್ರೆಂಚ್ ಶಿಕ್ಷಣ ತಜ್ಞರನ್ನು ಜ್ಞಾಪಿಸಿಕೊಳ್ಳಲೇ ಬೇಕು.  ಅಲ್ಲಿಂದ ಆರಂಭವಾದ ಬ್ರೈಲ್ ಆಕ್ಟ್, ಕುರುಡರಿಗೆ ಉಪಯುಕ್ತವಾದಂತಹ ಎಷ್ಟೋ ಸಂಗತಿಗಳನ್ನು ಕಂಡುಹಿಡಿಯುತ್ತಲೇ ಇದ್ದಾರೆ.

ಅವರಿಗೆ ಕಣ್ಣು ಗ್ರಹಣ ಶಕ್ತಿ ಬಹಳ ಸೂಕ್ಷ್ಮವಾಗಿರುವುದರಿಂದ ಇರಬೇಕು.  ಬಹಳಷ್ಟು ಕುರುಡರು ಸಂಗೀತಗಾರರಾಗಿ ತಮ್ಮ ಜೀವಿತವನ್ನು ಕಳೆದಿದ್ದಾರೆ ಎಂದು ಹೇಳಬಹುದು.  ಹಿಂದೆ ಸಿಡುಬು ರೋಗದಂತಹ ಮಾರಕ (ಅಮ್ಮ) ಬಂದರೂ ಸಹ ಈ ದೃಷ್ಟಿ ಮಾಂಧ್ಯತೆ, ಬರುತ್ತಲಿತ್ತು.  ಆ ಸಿಡುಬಿನ ಭೀಕರ ಪರಿಣಾಮದಿಂದ ಅಂಧಕಾರವಾಗ್ತ ಇತ್ತು.  ಈಗ ಬಹಳಷ್ಟು ಅಂಧ ಮಕ್ಕಳು ನೃತ್ಯ ಪ್ರಕಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಏನೋ ಒಟ್ಟಿನಲ್ಲಿ ಅಂಧರ ಬಗ್ಗೆ ಯೋಚಿಸುತ್ತಿದ್ದರೆ, ಬಹಳಷ್ಟು ಚಿಂತನೆಗಳು ತಲೆಯಲ್ಲಿ ತುಂಬುತ್ತವೆ.  ಅವರನ್ನು ಅಂಧರೆಂದು, ಗುರುತಿಸಲಿ, ಅವರಿಗೇ ಯಾರು ತೊಂದರೆ ಕೊಡದಿರಲಿ ಎಂಬ ಕಾರಣಕ್ಕಾಗಿಯೇ ಕಪ್ಪು ಗ್ಲಾಸಿನ ಕನ್ನಡಕವೇನೋ ಚಾಲ್ತಿಯಲ್ಲಿವೆ.

ಹಾಗೆ ಸ್ಪರ್ಶ ಜ್ಞಾನ ತಿಳಿಯಲು ವಾಕಿಂಗ್ ಸ್ಟಿಕ್‌ನಂತಹ ಕೋಲು ಸಹ ಇದೆ. ಹಾಗೇ ನಾವು ಸರ‍್ಯನ ಕಣ್ಣಿಗೆ ತಡೆಯೊಡ್ಡಲು, ಹಾಗೇ ಫ್ಯಾಶನ್‌ಗೆ ಸಹ ಕಪ್ಪು ಕನ್ನಡಕವನ್ನು ಧರಿಸುತ್ತೇವೆ.  ಆಗ ಸಹ ಏನೋ ನಾನೂನೂ ಕುರ‍್ಡನಾ? ಅನ್ನುವ ಮಾತು, ನನಗೇ ಯಾರಾದರೂ ಆ ಮಾತೆತ್ತಿದರೆ ತುಂಬವೇ ಕೋಪ ಬರುತ್ತೆ.  ಬಹಳಷ್ಟು ಕುರುಡರ ಬಗ್ಗೆ ಚಿತ್ರಗಳೂ ಸಹ ಬಂದಿವೆ.  ಮನಮುಟ್ಟುವಷ್ಟು ಪರಿಣಾಮಕಾರಿಯಾದಂತಹ ಚಲನ ಚಿತ್ರಗಳನ್ನು ನೋಡಿದ್ದು, ನನಗೆ ನೆನಪಿಲ್ಲ.

ಹಾಂ, ಅಂದ ಹಾಗೆ ನನಗೆ ನೆನಪಾಯ್ತು ಪ್ರಾಣ , ಪಕ್ಷಿಗಳ ಕುರುಡಿನ ಬಗ್ಗೆ ಯೋಚಿಸ್ತಾ ಇದ್ದೆ.  ನನಗೇ ತಿಳಿದಿಲ್ಲ.  ಒಂದು ಘಟನೆಯಂತೂ ನೆನಪಿದೆ, ಒಂದ್ಸಾರಿ ನಮ್ಮ ಮನೆಯಲ್ಲಿ ಅಮ್ಮ ಮೀನು ಸಾರು ಮಾಡಿ ಇಟ್ಟಿದ್ರು, ಅದರ ವಾಸನೆಗೆ ಬೆಕ್ಕು ಬಂದಿತ್ತು, ಅಡಿಗೆ ಮನೆಯಲ್ಲಿ ಯಾರು ಇಲ್ಲದಾಗ, ಆ ಬೆಕ್ಕು ಹೋಗಿ ಆ ಸಾರಿನ ಪಾತ್ರೆಗೆ ಮುಖ ಹಾಕಿ ಸಾರು ಖಾಲಿ ಮಾಡಿದೆ.  ಚಿಕ್ಕ ಬಾಯಿಯ ಪಾತ್ರೆ ಅದು ಪೂರ್ತಿ ಸಾರನ್ನು ತಿಂದ ನಂತರ ತಲೆ ಎತ್ತಲು ಹೋಗಿದೆ.

ಆಚೆ ಬರಲು ಆಗಿಲ್ಲ, ಪಾತ್ರೆ ಸಮೇತ ಹೊರಗೆ ಬಂದು ದಾಂಧಲೆ ಎಬ್ಬಿಸ್ತಾ ಇತ್ತು.  ನಾವೆಲ್ಲಾ ಹೋದ ಗಾಬರಿಗೆ, ಸಿಕ್ಕ ಸಿಕ್ಕೆಲ್ಲಾ ಕಡೆ, ಓಡೋಗಿ ಗೋಡೆಗೆ ಡ್ಯಾಷ್ ಹೊಡೆದು, ಹೇಗ್ಹೇಗೋ ಓಡಾಡ್ತಾ ಇತ್ತು.  ಕಡೇಗೆ ಅದನ್ನ ಹಿಡಿದು ಪಾತ್ರೆ ಹೊರ ತೆಗೆದು ಅದರ ಮುಖ ಕ್ಲೀನ್ ಮಾಡಿ ಬಿಡುವಾಗ ಸಾಕೋ ಸಾಕಾಯ್ತು.  ಹೀಗೆ ಇನ್ನು ಕಣ್ಣಿಲ್ಲದ ಪ್ರಾಣ ಗಳ ಕಥೆ ಹೇಗೇ ಅಂತ.

ಅಂತೂ ಯಾವಗಲೂ ಪ್ರಕೃತಿಯ ಸೌಂದರ್ಯ, ಹೂವು ಬೆಟ್ಟ-ಗುಡ್ಡ, ಕಾಡು-ಮೇಡು, ಮೋಡ ಎಲ್ಲಾ ಬಗೆಯ ಪ್ರಕೃತಿಯ ವೈಚಿತ್ರ್ಯಗಳನ್ನು ಕಾಣುವಾಗ, ಆನಂದಿಸುವಾಗ, ಭಾವಾವೇಶಕ್ಕೆ ಒಳಗಾದಾಗ, ಇಲ್ಲಿ ಇನ್ನೊಂದು ವಿಷಯ ಪ್ರೀತಿ ಕುರುಡು ಅನ್ನುವಂತಹ ಮಾತಿದೆ.  ಬಹುಶಃ ಈ ಮಾತು, ಏಕೆ ಬಂದಿರಬಹುದು ಅಂದ್ರೆ, ಪ್ರೀತಿ ಎಂಬುದು ಭಾವಕ್ಕೆ ಭಾವನೆಗಳಿಗೆ ಸಂಬಂಧಪಟ್ಟಿದ್ದು ಎನಿಸುತ್ತೆ.  ಅದಕ್ಕೆ ಕಾಣುವಿಕೆ ಮುಖ್ಯವಲ್ಲ ಅನ್ನಿಸುತ್ತೆ.  ಭಾವಕ್ಕೆ ಭಾವಸ್ಪಂದನೆ ಉಂಟಾಗಬೇಕು.  ಆದ್ದರಿಂದ ಪ್ರೀತಿಯನ್ನು ಕುರುಡುತನಕ್ಕೆ “love is blind“ ಅಂತ ಹೇಳ್ತಾರೆ ಅಂತ ಕಾಣುತ್ತೆ ಒಟ್ಟಿನಲ್ಲಿ ನನ್ನದು ದೇವನಲ್ಲಿ ಒಂದೇ ಒಂದು ಮನಃಪೂರ್ವಕ ಪ್ರಾರ್ಥನೆ.
ಇಂತಹ ಸುಂದರ
ಸೃಷ್ಠಿಯ ಸೃಷ್ಠಿಸಿದ
ಹೇ, ಭಗವಂತಾ
ಅಂಧರ ಸೃಷ್ಠಿಸಬೇಡ
ಈ ಜಗದೊಳು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending