Connect with us

ಭಾವ ಭೈರಾಗಿ

ಕೃತಿ ವಿಶ್ಲೇಷಣೆ | ‘ನೂಲಿನ ಬೇಲಿ’ ಆವರಣದಿ ಭ್ರಮಣಿಸಿದ ಕ್ಷಣ..!

Published

on

ನೂಲಿನ ಬೇಲಿ
  • ಕು. ಹರ್ಷಿಯಾ ಭಾನು

ಲೇಖಕರನ್ನು ಪರಿಚಯಿಸಿದವರು ಚುಟುಕಾಗಿ ಅವರ ಪರಿಚಯ ಹಾಗೂ ಅವರ ಸಾಹಿತ್ಯಾಸಕ್ತಿಯ ಕುರಿತು ವಿವರಿಸಿದ್ದಾರೆ.ಮುನ್ನುಡಿಯ ಬರೆಹಗಾರರು ಕಾದಂಬರಿಯ ಒಳತಿರುಳನ್ನು ತಮ್ಮ ಮುನ್ನುಡಿಯಲ್ಲಿ ತೆರೆದಿಡುವುದರ ಮೂಲಕ ಓದುಗರಲ್ಲಿ ಕೃತಿಯ ಬಗ್ಗೆ ಕುತೂಹಲ ಕೆರಳಿಸಿ ಸ್ವಾಗತಿಸುವ ಹಾಗಿದೆ . ಈ ಕೃತಿಯನ್ನು ಲೇಖಕರು ತಮ್ಮ ಗುರುಗಳಿಗೆ ಗುರುದಕ್ಷಿಣೆಯ ರೂಪದಲ್ಲಿ ಗೌರವದಿಂದ ಸಮರ್ಪಿಸಿಸಿದ್ದಾರೆ. ಈ ಕೃತಿಯು ಇಪ್ಪತ್ತು ಅದ್ಯಾಯಗಳಿಂದ ಕೂಡಿದೆ.

ಮತ್ತೊಂದು ಬಹುಮುಖ್ಯವಾದ ಅಂಶವೇನೆಂದರೆ ನಿರೂಪಣೆಯ ಶೈಲಿ ವರ್ತಮಾನವನ್ನು ಭೂತಕಾಲದೊಂದಿಗೆ ಸಂಯೋಜನೆಗೊಳಿಸಿ ಕಥೆಯನ್ನು ನಿರೂಪಣೆ ಮಾಡುತ್ತಾ ನಿರೂಪಕರು ಸಾಗುತ್ತಾರೆ. ಇದೊಂದು ನೆನಪುಗಳ ಮೆರವಣಿಗೆ. ರನ್ನನ ಗದಾಯುದ್ದದಲ್ಲಿ ಬಳಕೆಯಾಗಿರುವ ಸಿಂಹಾವಲೋಕನ ಕ್ರಮ(flash back technique) ಲೇಖಕರ ಕಾದಂಬರಿಯಲ್ಲೂ ಬಳಕೆಯಾಗಿದೆ.

ಈ ಕೃತಿಯ ಬಗ್ಗೆ ಲೇಖಕರು ತಮ್ಮ ಮಾತುಗಳಲ್ಲಿ ಹೇಳಿಕೊಂಡಂತೆ, ಅವರು ಬಾಲ್ಯದಲ್ಲಿ ಕಂಡ ಘಟನೆಗಳನ್ನೇ ಆದಾರವಾಗಿಟ್ಟುಕೊಂಡು ಈ ಕಾದಂಬರಿಯನ್ನು ಹೆಣೆದಿದ್ದಾರೆ. ‘ನೂಲಿನ ಬೇಲಿ‘ ಅಂದರೆ ಅತ್ಯಂತ ನಾಜೂಕಾದ ಬೇಲಿ ಎಂಬರ್ಥದಲ್ಲಿ ಈ ಶೀರ್ಷಿಕೆ ಬಳಸಿದ್ದಾರೆ.. ಅಂದರೆ ಇಂತಹ ಬೇಲಿಯಿಂದ ಮೇಲ್ನೋಟಕ್ಕೆ ರಕ್ಷಣೆ ದೊರೆಯುತ್ತೆ ಎನಿಸಿದರೂ ಸಹ ಅಪಾಯವೇ ಹೆಚ್ಚು…. ಕಾಯುವವರೇ ಕೊಲ್ಲುವವರಾದಂತೆ, ರಕ್ಷಕರೇ ಭಕ್ಷಕರಾದಂತೆ, ಬೇಲಿಯೇ ಎದ್ದು ಹೊಲ ಮೇಯುವುದು ಎಂಬಂತೆ ಈ ಕಾದಂಬರಿಯ ಕಥಾ ಹಂದರ ಹಲವು ಗೂಢಾರ್ಥಗಳನ್ನು ಹೊಂದಿದೆ.

ಗೋಪಾಲ್ ಬೆಟ್ಟಳ್ಳಿ, ರಘು ಬೆಟ್ಟಳ್ಳಿ, ಹುಳಿಯಾರ್ ನಟರಾಜ್ ಸರ್, ರಮೇಶ ಮೊದಲಾದವರು ವರ್ತಮಾನದ ಪಾತ್ರಗಳು. ರಮೇಶ ಪೆಟ್ರೋಲ್ ಬಂಕ್ ಹತ್ತಿರ ನಿರೂಪಕರಿಗೆ ಆಕಸ್ಮಿಕವಾಗಿ ಭೇಟಿಯಾದಾಗಲೇ ಅವರ ಸ್ಮೃತಿಪಟಲದಲ್ಲಿ ಹಳೆಯ ನೆನಪುಗಳು ಒಂದೊಂದಾಗಿ ಬರಲಾರಂಭಿಸಿದ್ದು.

ಮೊದಲ ಹಾಗೂ ಎರಡನೆ ಅದ್ಯಾಯವು ವರ್ತಮಾನದ ಕಥೆಯನ್ನು ಹೊಂದಿದೆ, ಗೋಪಾಲ್ ಬೆಟ್ಟಳ್ಳಿಯವರೊಂದಿಗೆ ಕಳೆದ ಕ್ಷಣಗಳು ಹಾಗೂ ನಟರಾಜ್ ಹುಳಿಯಾರ್ ಸರ್ ರವರೊಂದಿಗೆ ಕಾರ್ಯಕ್ರಮಕ್ಕೆ ಹೋದ ಕ್ಷಣಗಳನ್ನು ವಿವರಿಸುತ್ತಾರೆ. ನಿಜವಾದ ಕಥೆ ಪ್ರಾರಂಭವಾಗುವುದು ಕಾರ್ಯಕ್ರಮ ಮುಗಿಸಿ ಮರಳುವಾಗ ಪೆಟ್ರೋಲ್ ಬಂಕ್ ಹತ್ತಿರ ಭೇಟಿಯಾದ ರಮೇಶ ಎಂಬ ವ್ಯಕ್ತಿಯನ್ನು ಕಂಡಾಗ.ಅವರನ್ನು ಭೇಟಿಯಾದ ನಂತರ ನಿರೂಪಕರ ಬಾಲ್ಯಕಾಲದ ನೆನಪುಗಳ ಮೆರವಣಿಗೆ ಪ್ರಾರಂಭವಾಗುತ್ತದೆ.

ಕಾದಂಬರಿಯ ಮುಖ್ಯಪಾತ್ರಧಾರಿ ಮದನ ಓದುಗರಿಗೆ ಖಳನಾಯಕರೇ ಸರಿ. ಅವರ ಮಡದಿ ಸುಮತಿ, ಅವರ ಸಹೋದರರಾದ ಶಂಕರ, ಶಂಕರನ ಮಡದಿ ಭವಾನಿ(ಇವರೇ ಕಾದಂಬರಿಯ ದುರಂತ ನಾಯಕ ನಾಯಕಿಯರು) ಕಾದಂಬರಿಯ ಇತರೆ ಪಾತ್ರಗಳು, ರಾಮಣ್ಣ, ಪಂಕಜ, ಕುಮಾರಿ, ಸುಮತಿಯ ಮಕ್ಕಳು , ನಿರೂಪಕರ ತಾಯಿ, ಶಂಕರನ ಮಕ್ಕಳು ಮುಂತಾದವರು.

ಕಾದಂಬರಿಯು ಸರ್ಕಾರದ ಅರಾಜಕತೆ, ಬೇಜವಾಬ್ದಾರಿತನ, ಕಲಬೆರಕೆ, ಮೂಢನಂಬಿಕೆ, ಬಡತನ, ಕಾಮ ಮತ್ತು ಪ್ರೇಮಗಳ ಸುತ್ತಲಿನ ಕಥಾ ಹಂದರವನ್ನು ಹೊಂದಿದೆ. ಪ್ರಾರಂಭದಲ್ಲಿ ‘ಸರ್ಕಾರದ ಅರಾಜಕತೆ’ ಹಾಗೂ ‘ಬೇಜವಾಬ್ದಾರಿತನ’ದ ಬಗ್ಗೆ ನಿರೂಪಕರು ಧ್ವನಿಯೆತ್ತುತ್ತಾರೆ. ಅಂದರೆ ಸರ್ಕಾರವು ಓಟು ಹಾಕಿದ ಜನಗಳಿಗೆ ಕತ್ತಲೆ ಭಾಗ್ಯ ಕರುಣಿಸಿ ತಾವು ಮಾತ್ರ ಜನಸಾಮಾನ್ಯರ ಕಷ್ಟಗಳಿಗೆ ಕಾರಣರಾಗುತ್ತಾರೆಂಬ ಸೂಕ್ಷ್ಮ ವಿಚಾರವನ್ನು ತಿಳಿಸುತ್ತಾರೆ.

ಮೂಢನಂಬಿಕೆ

ಈ ಮೂಢನಂಬಿಕೆಯನ್ನು ನಂಬದೆ ನಂಬಿಕೆಯನ್ನಷ್ಟೇ ಗೌರವಿಸಬೇಕೆನ್ನುವ ಸ್ಪಷ್ಟ ಸಂದೇಶ ಅವರ ಕಾದಂಬರಿ ನಮಗೆ ನೀಡುತ್ತದೆ, ಉದಾಹರಣೆಗೆ ಭವಾನಿ ಹಾಗೂ ಶಂಕರ ಮದುವೆಯಾದ ಹೊಸದರಲ್ಲಿ ಗೋಚರವಾದ ಅಪಶಕುನಗಳು ಮೇಲ್ನೋಟಕ್ಕೆ ಮೂಢನಂಬಿಕೆಯಂತೆ ಭಾಸವಾದರೂ ಸಹ ಅವರಿಬ್ಬರ ಬದುಕು ದುರಂತ ಅಂತ್ಯ ಕಂಡದ್ದನ್ನು ನಿರೂಪಕರು ಬಲವಾಗಿ ನಂಬುವಂತೆ ಮಾಡಿತು.

ಹೆಣ್ಣಿನ ಮೇಲಿನ ದೌರ್ಜನ್ಯ

ಈ ಸಮಸ್ಯೆ ಇಂದು ನಿನ್ನೆಯದಲ್ಲ.ತಲೆತಲಾಂತರದಿಂದ ಬೆಳೆದು ಬಂದಿರುವ, ಇಂದಿಗೂ ಬಗೆಹರಿಯದ ಹೆಣ್ಣು ಮಕ್ಕಳ ಸಮಸ್ಯೆ. ಪುರುಷನ ವಕ್ರದೃಷ್ಟಿಗೆ ಬಲಿಯಾದ ಹೆಣ್ಣುಗಳೆಷ್ಟೋ ದುರಂತ ಅಂತ್ಯ ಕಾಣೋದನ್ನ ನಾವು ದಿನಬೆಳಗಾದರೆ ಮಾದ್ಯಮಗಳ ಮೂಲಕ ತಿಳಿದುಕೊಳ್ಳುತ್ತೇವೆ. ಕಾದಂಬರಿಯ ಪಾತ್ರಗಳಾದ ಕುಮಾರಿ, ಪಂಕಜ ಹಾಗೂ ಭವಾನಿಯಂತಹ ಮೂವರು ಹೆಣ್ಣು ಮಕ್ಕಳ ಕಥೆಗಳು ವಿಭಿನ್ನವಾಗಿದ್ದರೂ ಸಹ ಪುರುಷನ ದೌರ್ಜನ್ಯಕ್ಕೆ ಒಳಗಾದವರು.

ಬಡತನ

ಇದೊಂದು ಸಾಮಾಜಿಕ ಸಮಸ್ಯೆ ನಿರೂಪಕರು ಬಡತನದ ಬವಣೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ, ನಿರೂಪಕರ ಕುಟುಂಬ ಬಡತನದಿಂದ ಕೂಡಿದ್ದರೂ ಸಹ ಅವರಿಗೆ ಸರ್ಕಾರಿ ಶಾಲೆಗೆ ಕಳುಹಿಸಿ ಓದಿಸುವುದು, ಅದೆಷ್ಟೋ ಕಿ.ಮೀ. ನಡೆದುಕೊಂಡೆ ಹೋಗ್ಬೇಕಾದ ಸನ್ನಿವೇಷ, ಮಳೆ ಬಂದ್ರೆ ನೆನೆದುಕೊಂಡೇ ಬರಬೇಕಾದ ಅನಿವಾರ್ಯತೆ, ಮನೆಯಲ್ಲಿ ಬಡತನ ಇರುವುದರಿಂದ ತನ್ನ ಓದು ಮುಂದುವರೆಸಲು ಮಾವನ ಮನೆಗೆ ಕಳುಹಿಸಿ ತಿಂದುಂಡು ಚೆನ್ನಾಗಿರುವನೆಂಬ ತಾಯಿಯ ಕಾಳಜಿ ಇವೆಲ್ಲವುಗಳನ್ನು ಲೇಖಕರು ವಿವರಿಸಿದ್ದಾರೆ.

ಬೀದಿ ಜಗಳಗಳು

ಕೊಳಾಯಿ ನೀರಿಗಾಗಿ ನಡೆಯುವ ಜಗಳಗಳು,ತಾರಕಕ್ಕೇರಿದ ಪ್ರಸಂಗಗಳು, ಉದಾಹರಣೆಗೆ ಪರಿಮಳ ಮತ್ತು ಜಯಮ್ಮರ ನಡುವೆ ನಡೆದ ಜಗಳ ತಾರಕಕ್ಕೇರಿ ಪರಸ್ಪರರನ್ನು ಹೀಯಾಳಿಸುತ್ತಾ, ಹೀಗಳೆಯುತ್ತಾ ಜುಟ್ಟು ಹಿಡಿದು ಹೊಡೆದಾಡುವಷ್ಟರಮಟ್ಟಿಗೆ ತಾರಕಕ್ಕೇರಿ ಜಗಳ ನಿಂತ ಮೇಲೆ ಪೊಲೀಸರು ಬರುವುದು, ಸಮಾಜದಲ್ಲಿ ನಡೆಯುತಿರುವ ಪ್ರಸ್ತುತ ವ್ಯವಸ್ಥೆಯನ್ನು ಬಿಂಬಿಸುತ್ತದೆ. ಇವೇ ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿಹಿಡಿದಿದ್ದಾರೆ ನಿರೂಪಕರು.ಪರಿಸ್ಥಿತಿಯ ಕೈಗೊಂಬೆಯಾಗಿ ಹೆಣ್ಣು ಯಾವರೀತಿ ಪುರುಷನ ದಾರುಣವಾದ ಶೋಷಣೆಗೆ ಒಳಗಾಗುತ್ತಾಳೆ ಎಂಬುದನ್ನು ಪಂಕಜ, ಕುಮಾರಿ ಹಾಗೂ ಭವಾನಿ ಪಾತ್ರಗಳ ಮೂಲಕ ಓದುಗರಿಗೆ ಲೇಖಕರು ತಿಳಿಸಿದ್ದಾರೆ.

ಹಣದ ಅಮಲೇರಿದರೆ ಮನುಷ್ಯ ಎಂತಹ ಕೀಳುಮಟ್ಟಕ್ಕೆ ಬೇಕಾದರೂ ಇಳಿಯಬಲ್ಲ ಎಂಬುದನ್ನು ಮದನನ ಪಾತ್ರ ಸಂಕೇತಿಸುತ್ತದೆ. ಪಂಕಜಳ ಬಡತನದ ಸ್ಥಿತಿಯನ್ನು ರಾಮಣ್ಣ ತನ್ನ ಸ್ವಾರ್ಥಕ್ಕೆ ಬಳಸಿಕೊಂಡ, ಸುಮತಿ ಅವರ ಸಂಬಂಧಿಕರಾದ ಕುಮಾರಿಯನ್ನ ಮದನ ತನ್ನ ಸ್ವಾರ್ಥಕ್ಕೆ ಬಳಸಿಕೊಂಡದ್ದಲ್ಲದೆ, ತನ್ನ ತಮ್ಮನ ಹೆಂಡತಿಯ ಸಂಸಾರದ ಸರ್ವನಾಶಕ್ಕೂ ಸಹ ಮದನ ಮೂಲ ಕಾರಣನಾದ. ತಾನೇ ತನ್ನ ತಮ್ಮನ ಸಂಸಾರಕ್ಕೆ ಆಸರೆಯಾದಂತೆ ನಟಿಸಿ, ನಂಬಿಸಿ ಭವಾನಿಗೆ ದ್ರೋಹ ಎಸಗಿದ ಕಿರಾತಕನಂತೆ ಓದುಗರಿಗೆ ಕಾಣುತ್ತಾನೆ ಮದನ.

ಕುಮಾರನ ಆತ್ಮಹತ್ಯೆ(ಮಾತು ಬರದವನಾಗಿದ್ದು ಮದುವೆಯಾಗದ್ದಕ್ಕೆ ಜನರ ಚುಚ್ಚು ಮಾತುಗಳಿಂದ ಬೇಸತ್ತು), ಬಾಲ್ಯದಲ್ಲೇ ತನ್ನ ತಾಯಿಗೆ ಸಹಾಯ ಮಾಡಬೇಕೆಂಬ ರಮೇಶನ ಜವಾಬ್ದಾರಿತನ, ಶಂಕರನ ಮೃದು ಸ್ವಭಾವ ಹೀಗೆ ಒಂದೇ ಎರಡೇ,,, ಹತ್ತು ಹಲವು ಸನ್ನಿವೇಷಗಳಿಂದ ಕೂಡಿದ ಅಭೂತಪೂರ್ವ ಕಾದಂಬರಿ ಇದಾಗಿದೆ. ಭವಾನಿಯ ದುರಂತಮಯ ಬದುಕನ್ನು ಓದುವಾಗಲಂತೂ ಕಣ್ಣೆಲ್ಲ ಒದ್ದೆ , ಒದ್ದೆ. ಕಾರಣ ಭವಾನಿಯ ಬದುಕಿಗೆ ಆಸರೆಯಾಗಿ ನಿಲ್ಲಬೇಕಾಗಿದ್ದ ಮದನನೇ ಆಕೆಯ ಬಾಳಿಗೆ ನೂಲಿನ ಬೇಲಿಯಾದದ್ದು, ಬದುಕಿಗೆ ಮುಳುವಾದದ್ದು ನಿಜಕ್ಕೂ ಆಕೆಯ ದುರಂತಕ್ಕೆ ನೇರ ಕಾರಣವಾಗಿಬಿಟ್ಟನು.

ಇಲ್ಲಿ ತಾತ್ವಿಕತೆಯ ಸಂಕೇತವಾಗಿ ನಿಲ್ಲುವುದು ನಿರೂಪಕರ ತಾಯಿ. ಅವರು ಭವಾನಿಗೆ ತೋರುವ ಮಮತೆ ಹಾಗೂ ಸುಮತಿ, ಭವಾನಿ ಇಬ್ಬರಿಗೂ ಹೇಳುವ ಬುದ್ದಿವಾದ ಕಾದಂಬರಿಕಾರರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಕೊಳಾಯಿ ಜಗಳ, ಬೈಗುಳಗಳು, ಕಣ್ಣ ಮುಂದೆ ನಡೆದ ಅಪಶಕುನಗಳು, ನೆರೆಹೊರೆಯವರ ಮಾತುಕತೆಗಳು ಇವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ನಿರೂಪಕರು ಸನ್ನಿವೇಷಗಳನ್ನು ನೆನಪಿಸಿಕೊಂಡು ಆಗಾಗ ಭಾವಪರವಶರಾಗುತ್ತಿದ್ದರು.. ಓದುಗರನ್ನೂ ಸಹ ಸರಾಗವಾಗಿ ಓದಿಸುತ್ತಾ ಭಾವಪರವಶರನ್ನಾಗಿ ಮಾಡುತ್ತಿದ್ದರು.

ಹೀಗೆ ಕಾದಂಬರಿ ಓದುಗರನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ, ಇದಕ್ಕೆ ನನ್ನ ಅನುಭವವೇ ಕಾರಣ. ಬಿಡುಗಡೆಗೂ ಮುನ್ನವೇ ಮುದಲ್ ವಿಜಯ್ ಅಣ್ಣಾವ್ರಿಗೆ ಕೃತಿಯನ್ನು ಕೇಳಿದಾಗ ವಿಳಾಸ ಪಡೆದು ಕಳುಹಿಸಿದರು. ಒಮ್ಮೆ ಓದಲೆಂದು ಎತ್ತಿಕೊಂಡ ಕೃತಿ ಪೂರ್ತಿ ಓದಿ ಮುಗಿಯುವವರೆಗೂ ಇಡಲು ಮನಸ್ಸೇ ಆಗಲಿಲ್ಲ. ಸಮಯ ಸಿಕ್ಕಾಗ ಓದಬೇಕು ಎನಿಸುವುದಕ್ಕಿಂತಲೂ, ಒಮ್ಮೆ ಓದಲು ಪ್ರಾರಂಭಿಸಿದರೆ ಸಾಕು, ಈ ಕಾದಂಬರಿಯ ಓದಿಗಾಗಿಯೇ ಸಮಯ ಮಾಡ್ಕೊಬೇಕು ಎನಿಸಬಹುದಾದ ಕೃತಿಗಳ ಸಾಲಿಗೆ ಈ ಕಾದಂಬರಿ ಸೇರುತ್ತದೆ.

ಕೃತಿ: ನೂಲಿನ ಬೇಲಿ
ಲೇಖಕರ ಹೆಸರು: ಮುದಲ್ ವಿಜಯ್
ಪ್ರಕಾಶನ: ಮುದಲ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮಣ್ಣ ಮಕ್ಕಳು

Published

on

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
  • ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ

ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.

ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.

ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು

Published

on


ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.

ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.

  • ಬಸವರಾಜ ಹೂಗಾರ

ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.

ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.

  • ಡಾ.ರಹಮತ್ ತರೀಕೆರೆ

ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.

  • ಬಿ.ಶ್ರೀನಿವಾಸ,ಕೃತಿ ಲೇಖಕ

ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.

ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.

“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.

ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.

ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.

ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ

  • ಡಾ.ರಾಮಚಂದ್ರ ಹಂಸನೂರು, ಬೆಟಗೇರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending