Connect with us

ದಿನದ ಸುದ್ದಿ

ಮತದಾರರ ಪಟ್ಟಿಯಲ್ಲಿ ಆಧಾರ್ ನಮೂದು ಪರೀಕ್ಷಿಸಿಕೊಳ್ಳಿ : ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

Published

on

ಸುದ್ದಿದಿನ,ದಾವಣಗೆರೆ : ಭಾರತ ಚುನಾವಣಾ ಆಯೋಗದ ( Election commission) ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಆಧಾರ್ ಸಂಖ್ಯೆಯನ್ನು ( Adhar card number) ನೀಡಿ, ಮತದಾರರ ಪಟ್ಟಿಯಲ್ಲಿ ನಮೂದಿಸಿರುವುದನ್ನು ದೃಢೀಕರಿಸಿಕೊಳ್ಳಲು ಮುಂದಾಗಬೇಕು. ಈ ಪ್ರಕ್ರಿಯೆ ಯಶಸ್ವಿಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ( shivananda kapashi)  ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯಲ್ಲಿ ಮತದಾರರ ದೃಢೀಕರಣ, ಆಧಾರ್ ಜೋಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಏರ್ಪಡಿಸಲಾದ ರಾಜಕೀಯ ಪಕ್ಷಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಮತ್ತು ಮತದಾರರ ನೊಂದಣಿ ನಿಯಮಗಳು 1960 ರ ಪ್ರಕಾರ ಮತದಾರರ ನೋಂದಣಿಯ ನಮೂನೆಗಳಲ್ಲಿ ಪ್ರಸ್ತುತ ಬಹಳಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಲ್ಲಿ ನಮೂನೆ 6-ಬಿ ಅನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ನಮೂದುಗಳನ್ನು ದೃಢೀಕರಿಸಲು ಸಂಬಂಧಪಟ್ಟ ಮತದಾರರಿಂದ ಆಧಾರ್ ಸಂಖ್ಯೆ ಪಡೆಯಲು ಈ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕವೂ ಆಧಾರ್ ಜೋಡಣೆಗೆ ಅವಕಾಶ ಕಲ್ಪಿಸಲಾಗಿದ್ದು. ಆಫ್‍ಲೈನ್ ನಮೂನೆ 6-ಬಿ ಯನ್ನು ಸಂಬಂಧಪಟ್ಟ ಮತದಾರರ ನೋಂದಾಣಾಧಿಕಾರಿ, ತಹಶೀಲ್ದಾರರ ಕಛೇರಿ ಅಥವಾ ಬೂತ್ ಮಟ್ಟದ ಅಧಿಕಾರಿಗಳಿಂದ ಪಡೆದು ಸಲ್ಲಿಸಬಹುದು.

ಆನ್‍ಲೈನ್ ಮೂಲಕವೂ ಅವಕಾಶವಿದ್ದು, ಮತದಾರರು ಆಧಾರ್ ಸಂಖ್ಯೆಯನ್ನು ಎನ್‍ವಿಎಸ್‍ಪಿ ನ್ಯಾಷನಲ್ ವೋಟರ್ಸ ಸರ್ವಿಸ, ವಿಹೆಚ್‍ಎ ವೋಟರ್ ಹೆಲ್ಪ್‍ಲೈನ್ ಆ್ಯಪ್ ಹಾಗೂ ಗರುಡ ಆ್ಯಪ್‍ಗಳ ಮೂಲಕ ಅಥವಾ ವೋಟರ್ ಪೋರ್ಟಲ್ ಮುಖಾಂತರ ಮೊಬೈಲ್ ಮೂಲಕವೇ ಸ್ವಯಂ ದೃಢೀಕರಣದೊಂದಿಗೆ ಸಲ್ಲಿಸಬಹುದು.

ಮತದಾರರು ಸ್ವಯಂ ದೃಢೀಕರಣ ಬಯಸದಿದ್ದರೆ ಅಥವಾ ಆನ್‍ಲೈನ್ ಸ್ವಯಂ ದೃಢೀಕರಣ ವಿಫಲವಾದಲ್ಲಿ, ಮತದಾರರು ದೃಢೀಕರಣವಿಲ್ಲದೆ ಆಫ್‍ಲೈನ್‍ನಲ್ಲೆ ಅಗತ್ಯ ಲಗತ್ತುಗಳೊಂದಿಗೆ ನಮೂನೆ 6-ಬಿ ನಲ್ಲಿ ಸಲ್ಲಿಸಬಹುದಾಗಿದೆ. ಈ ಕುರಿತಂತೆ ಜಿಲ್ಲೆಯಲ್ಲಿ ಬರುವ ಆಗಸ್ಟ್ 04 ರಿಂದ ವಿಶೇಷ ಜನಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದ್ದು, ಬೂತ್ ಮಟ್ಟದಲ್ಲಿ, ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೂ ವ್ಯಾಪಕ ಪ್ರಚಾರ ನೀಡಲಾಗುವುದು.

ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬಿಎಲ್‍ಎ ರೊಂದಿಗೆ, ಬೂತ್ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು, ಈ ಪ್ರಕ್ರಿಯೆಯ ಯಶಸ್ವಿಗೆ ಸಹಕಾರ ನೀಡಬೇಕು. ಅರ್ಹ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡುವ ಮತ್ತು ಅನರ್ಹ ಮತದಾರರನ್ನು ತೆಗೆದುಹಾಕುವ ಹಾಗೂ ಮತದಾರರಿಂದ ಸ್ವಯಂ ಪ್ರೇರಿತ ಆಧಾರ್ ಸಂಗ್ರಹಣೆ ಕಾರ್ಯದಲ್ಲಿ ಸಹಕರಿಸುವುದರೊಂದಿಗೆ ರಾಜಕೀಯ ಪಕ್ಷಗಳು ಭಾರತ ಚುನಾವಣಾ ಆಯೋಗದ ಶುದ್ಧ, ನಿಖರ ಮತ್ತು ದೋಷಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ | ಬಿಜೆಪಿ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ; ಅವರನ್ನು ಮನೆಗೆ ಕಳುಹಿಸುವುದು ಐದು ನಿಮಿಷದ ಕೆಲಸ : ಕೆ.ಎಸ್ ಈಶ್ವರಪ್ಪ

ಜಿಲ್ಲೆಯಲ್ಲಿ ಸದ್ಯ 1692 ಮತಗಟ್ಟೆಗಳಿದ್ದು ಪುರುಷರು 7,04,685 ಮಹಿಳೆಯರು 6,98,986 ಇತರೆ 122 ಸೇರಿದಂತೆ ಒಟ್ಟು 14,03,793 ಲಕ್ಷ ಮತದಾರರಿದ್ದಾರೆ. ಆಧಾರ್ ಸಂಖ್ಯೆ ನೀಡಿ ಮತದಾರರ ಪಟ್ಟಿ ದೃಢೀಕರಣ ಪ್ರಕ್ರಿಯೆ ಆಗಸ್ಟ್ 04 ರಿಂದ ಜಾರಿಗೆ ಬರಲಿದ್ದು, ಇದು ನಿರಂತರವಾಗಿ ಜಾರಿಯಲ್ಲಿರುತ್ತದೆ. ಮತದಾರರ ನೊಂದಣಿಗೆ ಜನವರಿ 01, ಏಪ್ರಿಲ್ 01, ಜುಲೈ 01 ಹಾಗೂ ಅಕ್ಟೋಬರ್ 01 ರಂತೆ ಒಟ್ಟು ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿದ್ದು, ಮತದಾರರ ಪಟ್ಟಿಗೆ ಅರ್ಹರು ತಮ್ಮ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ನಮೂನೆ 07 ರಲ್ಲಿ ಹೆಸರು ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ. ನಮೂನೆ 08 ರಲ್ಲಿ ಮತದಾರರ ನಿವಾಸ ಬದಲಾವಣೆ, ವಿವಿಧ ತಿದ್ದುಪಡಿಗಳು, ಮತದಾರರ ಗುರುತಿನ ಚೀಟಿ ಬದಲಾವಣೆ ಹಾಗೂ ವಿಕಲಚೇತನ ವ್ಯಕ್ತಿ ಗುರುತಿಸುವುದಕ್ಕಾಗಿ ಬಳಸಲಾಗುವುದು.

ಚುನಾವಣಾ ಕ್ಷೇತ್ರದೊಳಗೆ ಒಂದು ಭಾಗ ಸಂಖ್ಯೆಯಿಂದ ಮತ್ತೋಂದು ಭಾಗಸಂಖ್ಯೆಗೆ ವರ್ಗಾವಣೆ ಹೊಂದಲು ಹಾಗೂ ಒಂದು ಕ್ಷೇತ್ರದಿಂದ ಮತ್ತೋಂದು ಕ್ಷೇತ್ರಕ್ಕೆ ಬದಲಾವಣೆ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಗಳ ರ್ಯಾಷಲೈಜೇಷನ್ ಅಥವಾ ಮರು ವ್ಯವಸ್ಥೆ ಕಾರ್ಯ ಆಗಸ್ಟ್ 04 ರಿಂದ ಅಕ್ಟೋಬರ್ 24 ರವರೆಗೆ ನಡೆಯಲಿದ್ದು, ಮತದಾರರ ಕರಡು ಪಟ್ಟಿ ನವೆಂಬರ್ 09 ರಂದು ಪ್ರಕಟವಾಗಲಿದೆ.

ಆಗಸ್ಟ್ 08 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಡಿಸೆಂಬರ್ 26 ರ ಒಳಗೆ ವಿಲೇವಾರಿ ಮಾಡಲಾಗುವುದು, ಮತದಾರರ ಅಂತಿಮ ಪಟ್ಟಿ 2023 ರ ಜನವರಿ 05 ಕ್ಕೆ ಪ್ರಕಟಗೊಳ್ಳಲಿದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರ

Published

on

ಸುದ್ದಿದಿನ,ದಾವಣಗೆರೆ:ಎಂ.ಸಿ.ಸಿ. ಬ್ಲಾಕ್‍ನಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು #1374/19, ಎರಡನೇ ಮಹಡಿ, ಸರೂರ್ ಆರ್ಕೆಡ್ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಲೇಡಿಸ್ ಹಾಸ್ಟೆಲ್ ಎದುರು, ನೂತನ ಕಾಲೇಜು ರಸ್ತೆ ದಾವಣಗೆರೆ, ಇಲ್ಲಿಗೆ ನವಂಬರ್ 11 ರಿಂದ ಸ್ಥಳಾಂತರಿಸಲಾಗುವುದು ಎಂದು ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ ದೇವಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿಯ ಸಲ್ಲಿಸುವ ಅವಧಿಯನ್ನು ನವಂಬರ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಜಗಳೂರು ಕಾಟಮ್ಮ ; ಸಾಧನೆಯ ಹೆಗ್ಗುರುತುಗಳು

Published

on

ಶ್ರೀಮತಿ ಕಾಟಮ್ಮ
  • ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ದಾವಣಗೆರೆ ಜಿಲ್ಲೆಯ ಜಗಳೂರು ಸೀಮೆ ಬುಡಕಟ್ಟು ಸಮುದಾಯಗಳ ನೆಲೆವೀಡು, ತಾಜಾ ಜಾನಪದ ಸಂಸ್ಕೃತಿಯು ಹಾಸು ಹೊಕ್ಕಾದ ಸಮೃದ್ಧ ಹೊನ್ನ ಕಣಜ.

ಜಗಳೂರು ತಾಲೂಕಿನ ಹೆಗ್ಗುರುತಿನ ಊರಾದ ತೋರಣಗಟ್ಟೆಯ ಗೌಡ್ರ ಚಿಕ್ಕಪ್ಪ ಮತ್ತು ಗೌರಮ್ಮ ಇವರ ಪುತ್ರಿಯಾದ ಕಾಟಮ್ಮ ತನ್ನ ಬಾಲ್ಯದಲ್ಲೇ ಊರಿನ ಪರಿಸರಕ್ಕನುಗುಣವಾಗಿ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ಊರ ದೇವರುಗಳ ಪರುವು ಉತ್ಸವಗಳನ್ನು ಕಣ್ಣುತುಂಬಿಸಿಕೊಳ್ಳುವಾಗ ವಾರಗಟ್ಟಲೆ ಜರುಗುತಿದ್ದ ಮದುವೆ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವಾಗ ಊರಿನ ಹಿರಿಯರು ಹಾಡುತಿದ್ದ ಸೋಬಾನೆ ಪದಗಳು ದೇವರ ಪದಗಳು ಕುಣಿತ ಮಣಿತಗಳ ಪದಗಳನ್ನು ಚಿತ್ತವಿಟ್ಟು ಆಲಿಸುತ್ತಲೇ ತಾನೂ ಅವುಗಳನ್ನು ಅಸ್ವಾದಿಸಿಕೊಂಡು ಸಹವರ್ತಿಯಾಗಿ ದನಿ ಸೇರಿಸಲು ಆರಂಭಿಸಿದರು.

ಹುಟ್ಟಿದ ಊರಿನಲ್ಲಿಯೇ ಬಾಲಪ್ಪನವರನ್ನು ವಿವಾಹವಾದ ಕಾಟಮ್ಮ ನಾಲ್ಕು ಮಕ್ಕಳ ತಾಯಿಯಾಗಿ ತುಂಬು ಸಂಸಾರವನ್ನು ನಿರ್ವಹಿಸುತ್ತಲೇ ತನ್ನ ಎದೆಯೊಳಗಿನ ಪದಗಳಿಗೆ ದನಿಯಾಗುತ್ತಾ ಬಂದರು. ತನ್ನ ಸೋದರಿ ಶಾಂತ ವೀರಮ್ಮ ಹಾಗೂ ಸಮೀಪದ ಬಂದುಗಳಾದ ಬಾಲಮ್ಮ, ಬಡಮ್ಮ ಮುಂತಾದವರ ತಂಡ ಕಟ್ಟಿಕೊಂಡು ಮದ್ಯ ಕರ್ನಾಟಕದ ಪ್ರಸಿದ್ಧ ಜಾನಪದ ಸಾಂಸ್ಕೃತಿಕ ವೀರರಾದ ಕಾಟಣ್ಣ, ದೊಡ್ಡಣ್ಣ, ಬಡಣ್ಣ, ಚಿಕ್ಕಣ್ಣ ಇವರ ಬಗ್ಗೆ ಸುದೀರ್ಘ ಕಥನ ಕಾವ್ಯಗಳನ್ನು ಕಟ್ಟಿ ನಿರರ್ಗಳವಾಗಿ ಹಾಡಬಲ್ಲವರಾಗಿದ್ದಾರೆ. ವಿಶೇಷವಾಗಿ ದಾವಣಗೆರೆ ಸೀಮೆಯಲ್ಲಿ ‘ಮಳೆ ಮಲ್ಲಪ್ಪ’ ನೆಂದೇ ಖ್ಯಾತನಾಮರಾಗಿ ಆರಾಧನೆಗೆ ಒಳಗಾಗಿರುವ ಅವಧೂತ ಪರಂಪರೆಯ ‘ಮೆಲ್ಲಜ್ಜಿ’ ನ ಬಗ್ಗೆ ಈ ತಾಯಿ ಕಟ್ಟಿಕೊಡುವ ಪದಗಳು ಬಹು ಪ್ರಸಿದ್ದಿ ಪಡೆದಿವೆ.

ಮೆಲ್ಲಜ್ಜ ಸುಮಾರು ನೂರಾ ಐವತ್ತು ವರ್ಷಗಳ ಹಿಂದೆ ತೋರಣಗಟ್ಟೆಯಲ್ಲಿ ಎಲ್ಲರಂತೆ ಬದುಕಿ ಬಾಳಿದ ವ್ಯಕ್ತಿ. ಆದರೆ ತನ್ನ ವಿಶಿಷ್ಟ ಆಧ್ಯಾತ್ಮಿಕ ಮನೋಪ್ರವೃತ್ತಿಯ ಅವಧೂತನಾಗಿ, ಹವಮಾನ ತಜ್ಞನಾಗಿ ‘ ಮಳೆ ಮೆಲ್ಲಜ್ಜ ‘ ಎಂದು ಪ್ರಸಿದ್ದಿ ಪಡೆದು ಮರಣೋತ್ತರದಲ್ಲಿ ಜನ ಸಮುದಾಯದಿಂದ ಸಂಗತಿಯಾಗಿದೆ.ಗಾಗುತ್ತಾನೆ. ಇಂತಹ ಅಸಾಮಾನ್ಯ ವ್ಯಕ್ತಿತ್ವದ ಮೆಲ್ಲಜ್ಜನ ಕುರಿತಂತೆ ಪದಗಾತಿ ಕಾಟಮ್ಮ ಸುಧೀರ್ಘವಾಗಿ ಕಥನ ಕಟ್ಟಿ ಹಾಡುವ ಸೋಪಜ್ಞ ಕಲೆಗಾರಿಕೆಯನ್ನು ಹೊಂದಿದವರಾಗಿದ್ದಾರೆ. ಜಗಳೂರು ಸೀಮೆಯಲ್ಲಿ ಈ ಕಥನ ಮನೆಮಾತಾಗಿದೆ.

ಜಗಳೂರು ಸೀಮೆಯಲ್ಲಿ ಯಾರದೇ ಮದುವೆ ಸಂಬಂದಿತ ಕಾರ್ಯಗಳಲ್ಲಿ ಶ್ರೀಮತಿ ಕಾಟಮ್ಮ ನವರ ಉಪಸ್ಥಿತಿ, ಸೋಬಾನೆ ಪದಗಾರಿಕೆ ಇರಲೇಬೇಕು. ಅಷ್ಟರಮಟ್ಟಿಗೆ ಇವರು ಸುಪ್ರಸಿದ್ಧರಾಗಿದ್ದಾರೆ.

ಮದುವೆಯ ಹಸೆ ಚಿತ್ತಾರ ಬಿಡಿಸುವಲ್ಲಿ ಸಿದ್ಧ ಹಸ್ತರು. ಬುಡಕಟ್ಟು ಸಮುದಾಯಗಳ ಮದುವೆಗಳಲ್ಲಿ ಹಾಕಲಾಗುವ ಹಾಲಸ್ತ್ರ ಹಸೆ, ಒಳ್ಳಕ್ಕಿ ಹಸೆ, ದೇವರ ಹಸೆ, ಬೂವದ ಹಸೆ . ಅರಿಣಿ ಹಸೆ . ಅಂದ್ರದ ಹಸೆ ಮುಂತಾದ ಹಸೆಗಳನ್ನು ಕರಿಕಂಬಳಿಹಾಸು ಮೇಲೆ ತಾನೇ ಬಿಡಿಸಿ ಆಯಾ ಸಂದರ್ಭಗಳನ್ನು ಮಧುರವಾಗಿ ಹಾಡುವ ನಿಪುಣೆಯಾಗಿದ್ದಾರೆ.

ಸಾಮಾನ್ಯವಾಗಿ ಹಸೆ ಬಿಡಿಸುವವರಿಗೆ ಹಾಡಲು ಬರುವುದಿಲ್ಲ. ಹಾಡುವವರು ಹಸೆ ಬಿಡಿಸುವುದಿಲ್ಲ. ಆದರೆ ಕಾಟಮ್ಮ ಇದಕ್ಕೆ ಭಿನ್ನ. ಎರಡನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಕಲಾಚತುರೆ. ಸುದೀರ್ಘ ನಲವತ್ತು ವರ್ಷಗಳಿಂದ ನಿರಂತರವಾಗಿ ಪದಗಂಗೆಯನ್ನು ಹರಿಸುತ್ತಿರುವ ಎಲೆಮರೆಯ ಪ್ರತಿಭೆ ಕಾಟಮ್ಮನವರನ್ನು ಯಾವ ಸಂಘ ಸಂಸ್ಥೆಗಳು ಗುರುತಿಸದೆಹೋದ ಈ ಹೊತ್ತಿನಲ್ಲಿ ಮೊದಲ ಬಾರಿಗೆ ಕರ್ನಾಟಕ ಜಾನಪದ ಅಕಾಡೆಮಿ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ(ಬರಹ: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending