Connect with us

ದಿನದ ಸುದ್ದಿ

ಕೋವಿಡ್ ಜಿಲ್ಲಾ ತಜ್ಞ ವೈದ್ಯರ ಸಲಹಾ ಸಮಿತಿ ಸಭೆ ಶೀಘ್ರ ರೋಗ ಪತ್ತೆಯಿಂದ ಮರಣ ಸಂಭವ ಕಡಿಮೆ ; ಹೆಚ್ಚುವರಿ ಆಂಬುಲೆನ್ಸ್ ಖರೀದಿಗೆ ಆದೇಶ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಕೋವಿಡ್ ರೋಗವನ್ನು ಬೇಗ ಪತ್ತೆ ಹಚ್ಚಿದಲ್ಲಿ, ರೋಗಿಯ ಮರಣ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ತಡವಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿಯೇ ಹೆಚ್ಚಿನ ಮರಣ ಪ್ರಕರಣಗಳು ವರದಿಯಾಗಿದ್ದು, ಹೀಗಾಗಿ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ತಜ್ಞ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆಯಲು ಮುಂದಾಗಬೇಕು ಎಂದು ಬಹುತೇಕ ತಜ್ಞ ವೈದ್ಯರು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಣಗಳದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೋವಿಡ್ ಜಿಲ್ಲಾ ತಜ್ಞ ವೈದ್ಯರ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ತಜ್ಞ ವೈದ್ಯರು, ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಂಭವಿಸುವ ಮರಣ ಪ್ರಕರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬರುವ 15 ದಿನಗಳಲ್ಲಿ ಕೋವಿಡ್ ಪ್ರಕರಣಗಳು ಎಷ್ಟಾಗಬಹುದು. ಇದಕ್ಕಾಗಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ತಜ್ಞ ವೈದ್ಯರ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕೋವಿಡ್ 2ನೇ ಅಲೆಯಲ್ಲಿ ರೋಗಲಕ್ಷಣಗಳೂ ಕೂಡ ಕೆಲವು ರೋಗಿಗಳನ್ನು ಭಿನ್ನವಾಗಿ ಕಂಡುಬಂದಿವೆ. ಸಾಮಾನ್ಯವಾಗಿ ಜ್ವರ, ನೆಗಡಿ, ಕೆಮ್ಮು ಮುಂತಾದ ರೋಗಲಕ್ಷಣಗಳು ಕೋವಿಡ್‍ನ ಆರಂಭಿಕ ಹಂತದಲ್ಲಿ ಕಂಡುಬಂದಿತ್ತು.

ಇದನ್ನೂ ಓದಿ | ಮಂಗಳವಾರದಿಂದ ಲಾಕ್ ಡೌನ್ : ಏನಿರತ್ತೆ..? ಏನಿರಲ್ಲ..?

ಆದರೆ ಇತ್ತೀಚಿನ ಪ್ರಕರಣಗಳನ್ನು ಗಮನಿಸಿದಾಗ, ಜ್ವರ ಇಲ್ಲದಂತಹ ಪ್ರಕರಣಗಳು, ವಾಂತಿಬೇಧಿ, ಕಣ್ಣು ಕೆಂಪಾಗುವುದು, ತಲೆನೋವು, ಮೈಕೈನೋವು ರೋಗ ಲಕ್ಷಣಗಳು ಇರುವುದು ಕಂಡುಬಂದಿದೆ. ಸಾರ್ವಜನಿಕರು ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೆ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು, ಸೋಂಕು ದೃಢಪಟ್ಟಲ್ಲಿ ಆತಂಕಕ್ಕೆ ಒಳಗಾಗದೆ ತಜ್ಞ ವೈದ್ಯರ ಶಿಫಾರಸ್ಸಿನಂತೆ ಚಿಕಿತ್ಸೆ ಪಡೆದುಕೊಳ್ಳಬೇಕು.

ಬೇಗ ರೋಗ ಪತ್ತೆಯಾದಲ್ಲಿ, ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಬಹುದು. ಆದರೆ ರೋಗ ಪತ್ತೆ ಮಾಡಿಸಿಕೊಳ್ಳದೆ, ಸೋಂಕು ಉಲ್ಬಣಗೊಂಡು, ಶ್ವಾಸಕೋಶದಲ್ಲಿ ಸೋಂಕು ತೀವ್ರಗೊಂಡು, ತಡವಾಗಿ ಆಸ್ಪತ್ರೆಗೆ ಬರುವುದು ರೋಗಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಸಾಮಾನ್ಯವಾಗಿ ಕೋವಿಡ್‍ನಿಂದ ಮರಣ ಪ್ರಕರಣಗಳನ್ನು ವಿಶ್ಲೇಷಿಸಿದಾಗ, ತಡವಾಗಿ ಆಸ್ಪತ್ರೆಗೆ ಬಂದವರಲ್ಲೇ ಹೆಚ್ಚಿನ ಮರಣ ಸಂಭವಿಸಿದೆ ಎಂದು ತಜ್ಞ ವೈದ್ಯರು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಕ್ರಿಯಿಸಿ, ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಹೊರಗಡೆ ತಿರುಗಾಡುವುದನ್ನು ಬಿಡಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ, ಸ್ವಯಂ ಚಿಕಿತ್ಸೆ ಪಡೆಯದೆ, ಸಿಕ್ಕ ಸಿಕ್ಕ ಗುಳಿಗೆಗಳನ್ನು ನುಂಗದೆ, ಓಣಿಗಳಲ್ಲಿನ ಸಣ್ಣಪುಟ್ಟ ವೈದ್ಯರಲ್ಲಿ ಸಾಮಾನ್ಯ ಚಿಕಿತ್ಸೆಗೆ ಒಳಗಾಗುವ ದುಸ್ಸಾಹಸಕ್ಕೆ ಕೈಹಾಕದೆ, ಕೂಡಲೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು.

ಇತ್ತೀಚೆಗೆ ಆರ್‍ಟಿಪಿಸಿಆರ್ ಟೆಸ್ಟ್ ನೆಗೆಟೀವ್ ಇದ್ದರೂ ಕೂಡ, ಶ್ವಾಸಕೋಶದಲ್ಲಿ ಸೋಂಕು ಇರುವ ಸಾಧ್ಯತೆಗಳಿರುತ್ತದೆ. ಸಾಮಾನ್ಯ ಕಫ ಎಂದು ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಮನವಿ ಮಾಡಿಕೊಂಡರು.

ವಿದೇಶಿ ಪ್ರಯಾಣಿಕರಿಗೆ ಖಾಸಗಿಯಲ್ಲಿ ಟೆಸ್ಟ್

ವಿದೇಶಕ್ಕೆ ತೆರಳಬಯಸುವವರು ಅಥವಾ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಬೆಳೆಸುವವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಬಯಸಿದಲ್ಲಿ, ಅಂತಹವರಿಗೆ ಸರ್ಕಾರಿ ಆಸ್ಪತ್ರೆ, ಸಂಸ್ಥೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಬಾರದು. ಅಂತಹವರು ಅಗತ್ಯವೆನಿಸಿದಲ್ಲಿ ನಿಗದಿತ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಲ್ಲಿ ಟೆಸ್ಟ್ ಮಾಡಿಸಿಕೊಳ್ಳಲಿ.

ಕೋವಿಡ್ ಟೆಸ್ಟ್ ಅನ್ನು ಅನಗತ್ಯವಾಗಿ ಎಲ್ಲರಿಗೂ ಮಾಡಬಾರದು. ರೋಗ ಲಕ್ಷಣಗಳು ಕಂಡುಬಂದವರಿಗೆ, ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಹಾಗೂ ತಜ್ಞ ವೈದ್ಯರು ಶಿಫಾರಸು ಮಾಡುವವರಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಆಂಬುಲೆನ್ಸ್ ಖರೀದಿಗೆ ಆದೇಶ

ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಆಂಬುಲೆನ್ಸ್‍ಗಳನ್ನು ಬೇಕಾಬಿಟ್ಟಿಯಾಗಿ ಬಳಸಬಾರದು. ತಜ್ಞ ವೈದ್ಯರ ಸಲಹಾ ಸಮಿತಿಯ ಶಿಫಾರಸಿನಂತೆ, ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಮರ್ಪಕ ನಿರ್ವಹಣೆಗಾಗಿ ಜಿಲ್ಲೆಗೆ 01 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಕೇರ್ ಸಿಸ್ಟಂ ಹೊಂದಿರುವ ಆಂಬುಲೆನ್ಸ್, 02- ಬೇಸಿಕ್ ಲೈಫ್ ಸಪೋರ್ಟ್ ಸಿಸ್ಟಂ ಇರುವ ಆಂಬುಲೆನ್ಸ್ ಹಾಗೂ ಪ್ರತಿ ತಾಲ್ಲೂಕಿಗೆ ಒಂದು ಲೈಫ್ ಸಪೋರ್ಟ್ ಸಿಸ್ಟಂ ಆಂಬುಲೆನ್ಸ್ ಖರೀದಿಸಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರೆಮ್‍ಡೆಸಿವರ್ ಔಷಧ ದುರ್ಬಳಕೆಗೆ ಕಡಿವಾಣ

ಜಿಲ್ಲೆಯಲ್ಲಿ ರೆಮ್‍ಡೆಸಿವರ್ ಚುಚ್ಚುಮದ್ದು ಅಕ್ರಮ ಬಳಕೆಗೆ ಕಡಿವಾಣ ಹಾಕಲಾಗುತ್ತಿದ್ದು, ಈಗಾಗಲೆ ಅಕ್ರಮ ಎಸಗಿದ 02 ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರೆಮ್‍ಡೆಸಿವರ್ ಸೇರಿದಂತೆ ತುರ್ತು ಸಂದರ್ಭಕ್ಕೆ ಬಳಸುವ ಔಷಧಿಯನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ದಾಸ್ತಾನಿಗೆ ಆಗಮಿಸಿದ ವಿವರ, ನೀಡಲಾದ ರೋಗಿ ಹಾಗೂ ಔಷಧದ ಎಸ್‍ಎಫ್‍ಆರ್-ಐಡಿಯನ್ನು ನಮೂದಿಸಬೇಕು.
ಈ ಐಡಿ ಇಲ್ಲದೆ ಯಾರಿಗೂ ಔಷಧಿಯನ್ನು ಕೊಡುವಂತಿಲ್ಲ.

ಜಿಲ್ಲೆಯಲ್ಲಿ ಇದಕ್ಕಾಗಿ ಫ್ಲೈಯಿಂಗ್ ಸ್ಕ್ವಾಡ್ ತಂಡವನ್ನು ರಚಿಸಲಾಗಿದ್ದು, ಈ ಅಧಿಕಾರಿಗಳು, ವಿವಿಧೆಡೆ ಪರಿಶೀಲಿಸಿ ವರದಿ ಸಲ್ಲಿಸಬೇಕು. ರೆಮ್‍ಡೆಸಿವರ್ ಚುಚ್ಚುಮದ್ದನ್ನು ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ, ಅಗತ್ಯವಿರುವ ರೋಗಿಗೆ ಮಾತ್ರ ನೀಡಬೇಕು.

ಕೋವಿಡ್ ಸೋಂಕಿತ ಎಲ್ಲ ರೋಗಿಗಳಿಗೂ ನೀಡಬಾರದು. ರೆಮ್‍ಡೆಸಿವರ್ ಔಷಧಿಯನ್ನು ಬೇಕಾಬಿಟ್ಟಿಯಾಗಿ ಶಿಫಾರಸು ಮಾಡುವವರ ವಿರುದ್ಧ ಕೆಪಿಎಂಇ ಕಾಯ್ದೆ ಅನ್ವಯ ವೈದ್ಯಕೀಯ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಏ. 27 ರಿಂದ ಮೋತಿವೀರಪ್ಪ ಕಾಲೇಜಿನಲ್ಲಿ ಲಸಿಕೆ

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಇದುವರೆಗೂ ಕೋವಿಡ್ ನಿರೋಧಕ ಲಸಿಕೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನಸಂದಣಿ ತಡೆಯುವ ಉದ್ದೇಶ ಹಾಗೂ ಸ್ಥಳ ಅಭಾವದ ಕಾರಣದಿಂದ ಕೋವಿಡ್ ಸೇರಿದಂತೆ ಎಲ್ಲ ಬಗೆಯ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆಯ ಬದಲಿಗೆ ಬೇರೆಡೆ ಲಸಿಕೆಯನ್ನು ನೀಡುವಂತೆ ತಜ್ಞ ವೈದ್ಯರ ಸಲಹಾ ಸಮಿತಿ ನೀಡಿದ ಶಿಫಾರಸಿನಂತೆ, ಏ. 27 ರಿಂದ ಜಿಲ್ಲಾ ಆಸ್ಪತ್ರೆ ಸಮೀಪದ ಮೋತಿ ವೀರಪ್ಪ ಕಾಲೇಜಿನಲ್ಲಿ ಕೋವಿಡ್ ಸೇರಿದಂತೆ ಎಲ್ಲ ಬಗೆಯ ಲಸಿಕೆಯನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹೊರ ಜಿಲ್ಲೆಯ ರೋಗಿಗಳ ಬಗ್ಗೆ ನಿಗಾ ವಹಿಸಿ

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ದೊರೆಯದ ಕಾರಣದಿಂದ ದಾವಣಗೆರೆ ಜಿಲ್ಲೆಯ ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಬೇರೆ ಬೇರೆ ಜಿಲ್ಲೆಯವರು ಬಂದು, ನಮ್ಮ ಜಿಲ್ಲೆಯವರಿಗೆ ತೊಂದರೆಯಾಗಬಾರದು.

ನಮ್ಮವರಿಗೆ ಸಮರ್ಪಕ ವೈದ್ಯಕೀಯ ನೆರವು ದೊರೆಯಬೇಕು ಎನ್ನುವುದು ನಮ್ಮ ಆಶಯವಾಗಿದ್ದು, ಬರುವ ದಿನಗಳಲ್ಲಿ ಉದ್ಭವವಾಗುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಡಿಹೆಚ್‍ಒ ಹಾಗೂ ಜಿಲ್ಲಾ ಸರ್ಜನ್ ಅವರು ಸಮರ್ಪಕವಾಗಿ ಪರಿಶೀಲಿಸಿ, ನಮ್ಮ ಜಿಲ್ಲೆಯವರಿಗೆ ತೊಂದರೆ ಆಗದ ರೀತಿ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಶೇ. 75 ಹಾಸಿಗೆಗಳು ಕೋವಿಡ್‍ಗೆ ಮೀಸಲು

ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ತಮ್ಮ ಹಾಸಿಗೆ ಸಾಮಥ್ರ್ಯದಲ್ಲಿ ಶೇ. 75 ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಡಿಹೆಚ್‍ಒ ಅವರು, ಎಲ್ಲ ಆಸ್ಪತ್ರೆಗಳು ಸರ್ಕಾರದ ಸೂಚನೆ ಹಾಗೂ ಕೋವಿಡ್‍ನ ಎಲ್ಲ ಪ್ರೋಟೊಕಾಲ್‍ಅನ್ನು ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

ಆಕ್ಸಿಜನ್ ಬಳಕೆ ಸಮರ್ಪಕವಾಗಿರಲಿ

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬಳಕೆ ಮಾಡಲಾಗುವ ಆಕ್ಸಿಜನ್ ಅನ್ನು ನ್ಯಾಯಯುತವಾಗಿ ಬಳಕೆ ಮಾಡಬೇಕು. ಅವಶ್ಯಕತೆ ಇಲ್ಲದವರಿಗೆಲ್ಲಾ ಆಕ್ಸಿಜನ್ ನೀಡಬಾರದು. ಆಕ್ಸಿಜನ್ ಪಡೆದು ಚೇತರಿಕೆ ಕಂಡುಬರುವ ರೋಗಿಗಳನ್ನು ಸಾಮಾನ್ಯ ವಾರ್ಡ್‍ಗೆ ಸ್ಥಳಾಂತರಿಸಿ, ಅಗತ್ಯತೆ ಇರುವ ರೋಗಿಗಳಿಗೆ ಆಕ್ಸಿಜನ್ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಜಯಪ್ರಕಾಶ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಡಿಹೆಚ್‍ಒ ಡಾ. ನಾಗರಾಜ್, ತಜ್ಞ ವೈದ್ಯರ ಸಮಿತಿ ಸದಸ್ಯರುಗಳಾದ ಡಾ. ರವಿ, ಡಾ. ಬಿ.ಎಸ್. ಪ್ರಸಾದ್, ಡಾ. ಶಿವಕುಮಾರ್, ಡಾ. ಅರುಣ್‍ಕುಮಾರ್ ಸೇರಿದಂತೆ ವಿವಿಧ ತಜ್ಞ ವೈದ್ಯರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೇಂದ್ರ ಬಜೆಟ್ : ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

Published

on

ಸುದ್ದಿದಿನಡೆಸ್ಕ್:ಕೇಂದ್ರದ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೆಲುಗು ದೇಶಂ ನಾಯಕ ಕೇಂದ್ರ ಸಚಿವ ಕಿಂಜರಪು ರಾಮಮೋಹನ ನಾಯ್ಡು ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಎಲ್ಲರ ಕನಸಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಆಯ-ವ್ಯಯ ಪೂರಕವಾಗಿದೆ ಎಂದು ಹೇಳಿದರು.

ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮವನ್ನು ಹಣಕಾಸು ಸಚಿವರು ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್, ಆಯ-ವ್ಯಯ ಬಿಹಾರ ಜನತೆಗೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ ಎಂದರು.

ಕಾಂಗ್ರೆಸ್ ಮುಖಂಡ ಶಶಿತರೂರ್ ಪ್ರತಿಕ್ರಿಯೆಸಿ, ಉದ್ಯೋಗ ಖಾತರಿ ಯೋಜನೆಯ ರಾಜ್ಯಗಳ ತಾರತಮ್ಯವನ್ನು ನಿಭಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ನಾಯಕ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ರಾಜ್ಯಕ್ಕೆ ನಿರ್ಧಿಷ್ಟವಾದ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ನಾಯಕಿ ಕಲ್ಯಾಣ ಬ್ಯಾನರ್ಜಿ ಅವರು, ಆಯ-ವ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ್ ಶೆಟ್ಟರ್, ಜನಪರ ಸಾಮಾನ್ಯವರ್ಗದವರ ಆಯ-ವ್ಯಯವಾಗಿದೆ ಎಂದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ್‌ಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರುಗಳು ಆಯ-ವ್ಯಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅನಿಶ್ ಶಹಾ ಪ್ರತಿಕ್ರಿಯಿಸಿ, ದೇಶದ ಬೆಳವಣಿಗೆಗೆ ಪೂರಕ ಆಯ-ವ್ಯಯ ರೈತರು, ಯುವಕರು, ಮಹಿಳೆಯರಿಗೆ ಸಹಕಾರಿ ಎಂದು ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಅನುದಾನವನ್ನು ಗಣನೀಯವಾಗಿ ಖಡಿತ ಮಾಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ್ದ ಅನುದಾನವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಪರಿಶಿಷ್ಟ ಸಮುದಾಯ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ಖಡಿತ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂಲ ಸೌಕರ್ಯ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ಆಯ-ವ್ಯಯ ಪೂರಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಯ-ವ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಬೆಳವಣಿಗೆಯ ಪ್ರಮಾಣದಲ್ಲಿ ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಜೆಟ್ 2024-25 : ಆದಾಯ ತೆರಿಗೆ ಪಾವತಿಯಲ್ಲಿ ಸರಳೀಕೃತ ಕ್ರಮ

Published

on

ಸುದ್ದಿದಿನಡೆಸ್ಕ್:ಆದಾಯ ತೆರಿಗೆ ಕಾಯ್ದೆ- 1961ಕ್ಕೆ ತಿದ್ದುಪಡಿ ಮಾಡಿ, ಸರಳೀಕೃತ ತೆರಿಗೆ ಪಾವತಿಗೆ ಆದ್ಯತೆ ನೀಡಲಾಗುವುದು. ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್ ಇತರ ಔಷಧಿಗಳ ಮೇಲಿನ ಸೀಮಾ ಸುಂಕ ಇಳಿಕೆ. ಮೊಬೈಲ್ ಹಾಗೂ ಅದರ ಉಪಕರಣಗಳ ಮೇಲೆ ತೆರಿಗೆಯನ್ನು ಶೇಕಡ 15 ಕ್ಕೆ ಇಳಿಸಲಾಗುವುದು. ಚಿನ್ನ, ಬೆಳ್ಳಿ, ಪ್ಲಾಟಿನಮ್ ಮೇಲಿನ ಸೀಮಾ ಸುಂಕವನ್ನು ಶೇಕಡ 6.4ರಿಂದ ಶೇಕಡ 4 ಕ್ಕೆ ಇಳಿಸಲಾಗುವುದು.

ಎಲ್ಲ ವರ್ಗದವರ, ಎಲ್ಲ ಸಮುದಾಯದ ಆಯ-ವ್ಯಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲೋಕಸಭೆಯಲ್ಲಿಂದು ಮಂಡಿಸಿದ 2024-25ನೇ ಸಾಲಿನ ಬಜೆಟ್‌ಗೆ ಪ್ರತಿಕ್ರಿಯಿಸಿ ರೈತ ಸಮುದಾಯದ ಆದಾಯ ದ್ವಿಗುಣ, ನಿರುದ್ಯೋಗಿಗಳಿಗೆ ಉದ್ಯೋಗ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಹೆಚ್ಚಿಸುವ ಯೋಜನೆಗಳು ಆಯ-ವ್ಯಯದಲ್ಲಿವೆ ಎಂದು ಅವರು ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ 25 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

NEET EXAM | ನೀಟ್ ಮರು ಪರೀಕ್ಷೆ ಇಲ್ಲ : ಸುಪ್ರೀಂ ಕೋರ್ಟ್

Published

on

ಸುದ್ದಿದಿನಡೆಸ್ಕ್:ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ದೇಶಾದ್ಯಂತ ಏಕಕಾಲಕ್ಕೆ ನಡೆದ ನೀಟ್ ಪದವಿಪೂರ್ವ ಪರೀಕ್ಷೆಯನ್ನು ಪುನಃ ನಡೆಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಯನ್ನು ವಜಾಮಾಡಿದ ಸುಪ್ರಿಂಕೋರ್ಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ.

ದೇಶಾದ್ಯಂತ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಿಂದ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಅಂಶ ಎಲ್ಲಿಯೂ ನಮೂದನೆಯಾಗಿಲ್ಲ. ಹಾಗಾಗಿ ಮರು ಪರೀಕ್ಷೆ ಮಾಡದಿರಲು ನ್ಯಾಯಪೀಠ ತೀರ್ಮಾನಿಸಿತು ಎಂದು ತ್ರಿಸದಸ್ಯ ಪೀಠ ತೀರ್ಪು ನೀಡಿದೆ. ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending