Connect with us

ದಿನದ ಸುದ್ದಿ

ಚುನಾವಣಾ ಬಿಗಿ ಬಂದೋಬಸ್ತ್ | ಮತಗಟ್ಟೆ, ಸಿಬ್ಬಂದಿ, ಚೆಕ್ ಪೋಸ್ಟ್ ಗಳಿಷ್ಟು..!

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು : ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕಾಗಿ ವ್ಯಾಪಕ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ 304 ಡಿವೈಎಸ್‌ಪಿಗಳು ಸೇರಿದಂತೆ 84 ಸಾವಿರದ 119 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅವಶ್ಯಕತೆಗೆ ಅನುಗುಣವಾಗಿ ಅಧಿಕಾರಿ/ಸಿಬ್ಬಂದಿಗಳ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಸುಮಾರು 8.500 ಪೊಲೀಸ್ ಅಧಿಕಾರಿ/ಸಿಬ್ಬಂದಿ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕಾಗಿ ಪಡೆಯಲಾಗಿದೆ. 650 ಸಿಎಪಿಎಫ್ ಕಂಪನಿಗಳ ಜೊತೆಗೆ ರಾಜ್ಯ ಸಶಸ್ತ್ರ ಮೀಸಲು ಪಡೆಯನ್ನು ಸಹ ನಿಯೋಜಿಸಲಾಗಿದೆ. ಮತದಾನ ದಿನದಂದು 1 ಲಕ್ಷದ 56 ಸಾವಿರ ಪೊಲೀಸರನ್ನು ಬಂದೋಬಸ್ತ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ.

ಒಟ್ಟು ಮತಗಟ್ಟೆಗಳು

ರಾಜ್ಯದಲ್ಲಿ ಒಟ್ಟು 18 ಸಾವಿರದ 282ಮತಗಟ್ಟೆಗಳಿದ್ದು, ಅದರಲ್ಲಿ 11 ಸಾವಿರದ 417ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಅನುಗುಣವಾಗಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪನಿಗಳನ್ನು ನಿಯೋಜಿಸಲಾಗಿದೆ.

ಚೆಕ್ ಪೊಸ್ಟ್

ಮತದಾನ ದಿನದಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಮತ್ತು ಚುನಾವಣಾ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ 700 ಕ್ಕೂ ಹೆಚ್ಚು ವಿಚಕ್ಷಣಾ ದಳಗಳನ್ನು ನೇಮಿಸಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನೊಳಗೊಂಡಂತೆ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಗಡಿಭಾಗದಲ್ಲಿ ಸುಮಾರು 700 ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

ವಾರೆಂಟ್

ಕಳೆದ 6 ತಿಂಗಳಿನಿಂದ ಜಾರಿ ಆಗದೆ ಇರುವ 5.500 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿ ಮಾಡಲಾಗಿದೆ. ಕಳೆದ 3 ತಿಂಗಳಲ್ಲಿ ಒಟ್ಟು 24 ಸಾವಿರದ 959ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ 30 ಸಾವಿರದ 418 ಭದ್ರತಾ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ ಸನ್ನಡತೆ ಆಧಾರದ ಮೇಲೆ 53 ಸಾವಿರದ 406ವ್ಯಕ್ತಿಗಳನ್ನು ಬಾಂಡ್ ಒವರ್ ಮಾಡಲಾಗಿದೆ.

ಪ್ರಕರಣ

ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ಶಾಂತಿಯುತವಾದ ಮತದಾನ ನಡೆಯಲು ಒಟ್ಟು 714 ವ್ಯಕ್ತಿಗಳ ವಿರುದ್ಧ ಗಡಿಪಾರು ಕಾಯ್ದೆಯಡಿ ಕಾನೂನು ಕ್ರಮ ಕೈಗೊಂಡಿದ್ದು, ಶಾಂತಿಯುತ ಮತದಾನಕ್ಕಾಗಿ 68 ಹವ್ಯಾಸಿ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕ ನೆರೆಹೊರೆಯ ರಾಜ್ಯಗಳ ಗಡಿಭಾಗಗಳಲ್ಲಿ, ಶಾಂತಿ, ಸೌಹಾರ್ದತೆಯ ಕಾಪಾಡುವ ನಿಟ್ಟಿನಲ್ಲಿ ವಿವಿಧ ಹಂತದ ಅಧಿಕಾರಿಗಳಾದ ಐಜಿಪಿ, ಎಸ್‌ಪಿ, ಡಿಸಿ ಹಾಗೂ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ಅಂತರ್ ರಾಜ್ಯ ಗಡಿಭಾಗದ ಜಿಲ್ಲೆಯ ಅಧಿಕಾರಿಗಳೊಂದಿಗೆ 50 ಕ್ಕೂ ಹೆಚ್ಚು ಸಮನ್ವಯ ಸಭೆಗಳನ್ನು ನಡೆಸಿದ್ದು, ಚುನಾವಣೆಯಲ್ಲಿ ನೆರೆ ರಾಜ್ಯಗಳಿಂದ ಅನಧಿಕೃತ ಹಣ, ಮದ್ಯ, ಉಚಿತ ಹಾಗೂ ಇತರೆ ವಸ್ತುಗಳು ಮತ್ತು ರೌಡಿ ಆಸಾಮಿಗಳು, ಸಮಾಜಘಾತುಕ ವ್ಯಕ್ತಿಗಳ ಚಲನವಲನದ ಬಗ್ಗೆ ಸೂಕ್ತ ನಿಗಾ ವಹಿಸುವ ಸಲುವಾಗಿ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾವಹಿಸಲಾಗಿದೆ.

ನಿಯೋಜನೆ

ಚುನಾವಣಾ ಕರ್ತವ್ಯಕ್ಕಾಗಿ ನೇಮಿಸಲಾದ ಒಟ್ಟು 650 ಸಿಎಪಿಎಫ್ ಕಂಪನಿಗಳಲ್ಲಿ 101 ಸಿಆರ್.ಪಿ.ಎಫ್, 108 ಬಿಎಸ್‌ಎಫ್, 75 ಸಿಐಎಸ್‌ಎಫ್, 70 ಐಟಿಬಿಪಿ, 75 ಎಸ್‌ಎಸ್‌ಬಿ, 35 ಆರ್‍ಪಿಎಫ್ ಮತ್ತು 186ಎಸ್‌ಎಪಿ ಕಂಪನಿಗಳಿದ್ದು, ಅವುಗಳನ್ನು ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನಿಯೋಜಿಸಲಾಗಿದೆ.

ರಾಜಕೀಯ ಮತ್ತು ವೆಚ್ಚ ನಿರ್ವಹಣೆಯಲ್ಲಿ ಸೂಕ್ಷ್ಮವಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ರೂಟ್ ಮಾರ್ಚ್ ಮಾಡಿಸುವ ಮೂಲಕ ಕಾನೂನು ಸುವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಹಾಗೂ ಎಫ್‌ಎಸ್‌ಟಿ, ಎಸ್‌ಎಸ್‌ಟಿ, ಇವಿಎಂ ರಕ್ಷಣೆ, ಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿರುವ ಕ್ಲಸ್ಟರ್ ಮತಗಟ್ಟೆಗಳಲ್ಲಿ ಈ ಕಂಪನಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.

ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯುತ ಮತದಾನಕ್ಕಾಗಿ 650ಸಿಎಪಿಎಫ್ ಕಂಪನಿಗಳ ಜೊತೆಗೆ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 224 ಕೆ.ಎಸ್.ಆರ್.ಪಿ ತುಕಡಿಗಳ ಪಹರೆ ಹಾಕಲಾಗಿದೆ. ಹೆಚ್ಚುವರಿಯಾಗಿ ಜಿಲ್ಲಾ ನಗರ ಸಶಸ್ತ್ರ ಪಡೆಗಳನ್ನು ಸೇರಿ ಮತದಾನ ದಿನದಂದು ಒಟ್ಟಾರೆಯಾಗಿ 890 ಸ್ಟ್ರೈಕಿಂಗ್ ಪಾರ್ಟಿಗಳು ಚುನಾವಣಾ ಬಂದೋಬಸ್ತ್ ಕಾರ್ಯವನ್ನು ನಿರ್ವಹಿಸಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬ್ಯಾಂಕ್ ದರೋಡೆ ಹೆಚ್ಚಳ ; ಭದ್ರತಾ ಮಾನದಂಡಗಳನ್ನು ಬ್ಯಾಂಕ್‍ಗಳು ಪಾಲನೆ ಮಾಡುವುದು ಕಡ್ಡಾಯ : ಎಸ್ಪಿ ಉಮಾ ಪ್ರಶಾಂತ್ ಸೂಚನೆ

Published

on

ಸುದ್ದಿದಿನ,ದಾವಣಗೆರೆ:ಬ್ಯಾಂಕ್‍ಗಳ ದರೋಡೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಭದ್ರತಾ ಮಾನದಂಡದ ಜೊತೆಗೆ ಸಿಬ್ಬಂದಿಗಳ ಮಾಹಿತಿ ಸಂಗ್ರಹದಲ್ಲಿ ನಿರ್ಲಕ್ಷ್ಯತೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾ ಪೋಲಿಸ್ ಕಛೇರಿಯಲ್ಲಿ ಜಿಲ್ಲಾ ಮಟ್ಟದ ಬ್ಯಾಂಕಗಳ ಭದ್ರತೆಗಾಗಿ ಬ್ಯಾಂಕಿನ ಎಲ್ಲಾ ವ್ಯವಸ್ಥಾಪಕರುಗಳಿಗೆ ಆಯೋಜಿಸಲಾಗಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬ್ಯಾಂಕಿನ ವ್ಯವಸ್ಥಾಪಕರುಗಳು ಬ್ಯಾಂಕ್‍ಗೆ ಬೇಕಾದ ಹೈಸೆಕ್ಯೂರಿಟಿ ಸಿಸಿ ಕ್ಯಾಮೆರಾಗಳ ಜೊತೆಗೆ ಅಲರಾಮ್‍ಗಳನ್ನು ಅಳವಡಿಸಿಕೊಳ್ಳಬೇಕು. ಬ್ಯಾಂಕ್‍ನ ಸೆಕ್ಯುರಿಟಿ ಸಿಬ್ಬಂದಿಯ ಮಾಹಿತಿ ಸಂಗ್ರಹದ ಜೊತೆಗೆ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸೆಕ್ಯುರಿಟಿ ಕುರಿತು ಚರ್ಚಿಸಬೇಕಾಗುತ್ತದೆ ಎಂದರು.

ಬ್ಯಾಂಕ್‍ನ ಒಳಗೆ ಸ್ಟ್ರಾಂಗ್ ರೂಂ ಡಿಜಿಲಾಕರ್, ಸ್ಟ್ರೋಕ್ ಡಿಟೆಕ್ಟರ್ಗಗಳು, ಹೀಟ್ ಡಿಟೆಕ್ಟರ್‍ಗಳು, ಬ್ಯಾಂಕುಗಳ ಬಳಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಬಂದಲ್ಲಿ ಅಂತಹವರ ಮಾಹಿತಿಯನ್ನು ಪೋಲೀಸ್ ಠಾಣೆಗಳಿಗೆ ನೀಡುವಂತೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಿಳಿಸಿ ಸ್ಟ್ರಾಂಗ್ ರೂಮ್‍ಗೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿದಿನ ಭೇಟಿ ನೀಡುವ ನಮೂನೆಯಲ್ಲಿ ದಾಖಲು ಮಾಡಬೇಕು. ಬ್ಯಾಂಕ್‍ಗಳಿಗೆ ಪ್ರತಿದಿನ ಬೀಟ್ ಪೋಲೀಸರು ಭೇಟಿ ನೀಡುವ ಬಗ್ಗೆ ಇ-ಬೀಟ್ ವ್ಯವಸ್ಥೆ ಮಾಡುವುದು. ಪ್ರತಿ ಬೀಟ್ ಸಿಬ್ಬಂದಿಗಳು ಭೇಟಿ ನೀಡುತ್ತಿರುವ ಬಗ್ಗೆ ರಾತ್ರಿ ಗಸ್ತಿನ ಉಸ್ತುವಾರಿ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ಮಾಡಲು ಸೂಚನೆ ನೀಡಿದರು.

ಜಿಲ್ಲಾ ಕಂಟ್ರೋಲ್ ರೂಂನವರು ಪ್ರತಿದಿನ ಬ್ಯಾಂಕ್‍ಗಳಿಗೆ ಬೀಟ್ ಸಿಬ್ಬಂದಿಗಳು ಹಾಗೂ ರಾತ್ರಿ ಗಸ್ತಿನ ಅಧಿಕಾರಿಗಳು ಭೇಟಿ ನೀಡುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ಪಡೆದು ನಮೂದು ಮಾಡುವುದು. ಹೊರವಲಯಗಳಲ್ಲಿರುವ ಬ್ಯಾಂಕ್‍ಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕೆಂದು ಸೂಚನೆ ನೀಡಿದರು.

ಠಾಣಾ ವ್ಯಾಪ್ತಿಯ ಪಿಐ ಮತ್ತು ಪಿಎಸ್‍ಐ ರವರು ಸೆಕ್ಯೂರಿಟಿ ಆಡಿಟ್ ವರದಿಯನ್ನು ಕಡ್ಡಾಯವಾಗಿ ಪಡೆದು ಜಿಲ್ಲಾ ಪೆÇಲೀಸ್ ಕಚೇರಿಗೆ ಕಳುಹಿಸಿಕೊಡಬೇಕು. ಬ್ಯಾಂಕುಗಳ ಒಳಭಾಗ ಮತ್ತು ಹೊರಭಾಗದಲ್ಲಿ, ಎಟಿಎಂ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಮೋಷನ್ ಸಿಸಿ ಟಿವಿಗಳನ್ನು ಅಳವಡಿಸಿ ಈ ಛಾಯಾಚಿತ್ರ ಮತ್ತು ರೆಕಾಡಿರ್ಂಗ್‍ನ್ನು ಡ್ರೈವ್‍ನಲ್ಲಿ ಸೇವ್ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಮಹಾಪೌರರಾದ ಚಮನ್‍ಸಾಬ್ ಕೆ, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಉಪ ಪೊಲೀಸ್ ಅಧೀಕ್ಷಕರಾದ ಮಂಜುನಾಥ್, ಎಎಸ್‍ಪಿ ಸ್ಯಾಮ್ ವರ್ಗೀಸ್ ಮತ್ತು ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ನಿಂದ ವಿದ್ಯಾರ್ಥಿ ವೇತನ ವಿತರಣೆ

Published

on

ಸುದ್ದಿದಿನ,ದಾವಣಗೆರೆ:ಗುರಿ ಸಾಧಿಸಲು ಕಾರಣಗಳು ನೆಪವಾಗಬಾರದು. ಗುರಿಯನ್ನು ಬೆನ್ನು ಹತ್ತಿ ಗುರಿಮುಟ್ಟುವ ಕಡೆ ಗಮನ ಹರಿಸಿದರೆ ಯಶಸ್ಸು ತಾನಾಗಿ ದೊರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಜನತೆ ಮೊಬೈಲ್ ಬಳಸುವುದರಿಂದ ಆಗುವ ಅನಾನುಕೂಲಗಳು ಮತ್ತು ಹಿಂದಿನ ಯುವಜನತೆ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಮುಖಾಂತರ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಿದೆ. ಪೋಷಕರು ಮಕ್ಕಳ ನಡವಳಿಕೆ ಮೇಲೆ ನಿಗಾ ವಹಿಸುವ ಅವಶ್ಯಕತೆ ಇದೆ ಎಂದ ಅವರು, ಇತ್ತೀಚಿಗೆ ನಡೆಯುತ್ತಿರುವ ಸೈಬರ್ ಕ್ರೈಂಗಳ ಬಗ್ಗೆ ಯುವಜನತೆಗೆ ಸಭೆಯಲ್ಲಿ ಮನವರಿಕೆ ಮಾಡಿದರು.

ಈ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾದ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಿಓಓ ಎಸ್. ಪಂಚಾಕ್ಷರಿ ಮಾತನಾಡಿ, ಬಿ.ಎಸ್.ಎಸ್ ಸಂಸ್ಥೆಯು ತನ್ನ ಸಿಎಸ್ಆರ್ ಇಂಟಿಗ್ರೇಟಡ್ ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಹೈನುಗಾರಿಕೆಗಳಲ್ಲಿ ಸಮಾಜಸೇವಾ ಕಾರ್ಯ ಮಾಡುತ್ತಿದ್ದು, ಅಗತ್ಯ ಪೂರಕ ವಸ್ತುಗಳ ವಿತರಣೆ ಮತ್ತು ಸಹಾಯ ಹಸ್ತದ ನೆರವು ನೀಡಲಾಗುತ್ತಿದೆ. ಸಮಜಾಮುಖಿ ಕೆಲಸಗಳಲ್ಲಿ ಒಂದಾದ ವಿದ್ಯಾರ್ಥಿ ವೇತನ ವಿತರಣೆ ಮುಖೇನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡಲಾಗುತ್ತಿದೆ ಎಂದರು.

ಮಹಿಳೆಯರು ಅವಶ್ಯಕತೆಗೆ ತಕ್ಕಷ್ಟು ಸಾಲವನ್ನು ಪಡೆದು ಮರುಪಾವತಿ ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಕೇವಲ ಸಾಲ ಸೌಲಭ್ಯವನ್ನು ಮಾತ್ರವಲ್ಲದೆ ಸಂಸ್ಥೆಯು ಎಲ್ಲಾ ಕಡೆಗೂ ಸಮಾಜಮುಖಿ ಕಾರ್ಯಗಳಾದ ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರವಾಹ ಪರಿಸ್ಥಿತಿಗಳು, ಬರಗಾಲ ಪರಿಸ್ಥಿತಿಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ, ಪೀಟೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಿಎಸ್ಎಸ್ ಸಂಸ್ಥೆಯ ಸಿಇಓ ಕುಮಾರ್, ಸಿಫ್ ಓ ಸುರತ್ ಬಚ್ಚು, ರಘು ಎನ್.ಸಿ., ಕೆ. ಸಿದ್ದು, ತಿಮ್ಮಾರಾಯಸ್ವಾಮಿ, ಎಸ್. ಗಿರೀಶ್, ಪಂಡಿತ್, ದೇವರಾಜ್ ಎಸ್., ಸತೀಶ ಡಿ.ಎಸ್., ಕಿರಣ್, ಪ್ರಶಾಂತ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು

Published

on

ಸುದ್ದಿದಿನ,ದಾವಣಗೆರೆ:ಜನಪದರು ನಿಜವಾದ ಇತಿಹಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ.‘ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು’ ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನೂ ಸಿರಿಯಜ್ಜಿ ವಿರೋಧಿಸಿದ್ದಳು ಹಾಗಾಗಿ ಜಾನಪದರನ್ನು ನಾವು ಅಕ್ಷರ ಬಾರದವರು ಅನಕ್ಷಸ್ಥರು ಎಂಬುದಾಗಿ ಹೇಳುವುದು ತಪ್ಪು ಎಂದು ಹಿರಿಯ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ವಿಷಾದವ್ಯಕ್ತಪಡಿಸಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಯಜ್ಜಿ ಪ್ರತಿಷ್ಠಾನ, ಮಾನವ ಬಂಧುತ್ವ ವೇದಿಕೆ ಹಾಗೂ ಅಮಿತ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಎಂ.ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ ಮಾಡಿ ಅವರು ಮಾತನಾಡಿದರು.

ಸಿರಿಯಜ್ಜಿ ಭೇಟಿ ಮಾಡಿ ಸುಮಾರು 50ವರ್ಷ ಆಯಿತು.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಜೊತೆಗೆ ಮೊದಲ ಬಾರಿಗೆ ಗುಡಿಸಲಿನ ಭೇಟಿ ಮಾಡಿದ್ದೆ. ಆಡಿನ ಹಾಲು ಕರೆದು ಜತೆಗೆ ಮುದ್ದೆ ಕೊಡುತ್ತಿದ್ದರು. ಅದು 76ರ ಈ ಇಳಿವಯಸ್ಸಿನಲ್ಲೂ ನನಗೆ ಶಕ್ತಿ ಕೊಟ್ಟಿದೆ. ಪಾಶ್ಚಾತ್ಯ ವಿದ್ವಾಂಸರು 1800 ಸಂದರ್ಭದಲ್ಲಿ ದೇಶದಲ್ಲಿ ಹುಡುಕಿ ಹೊತ್ತೊಯ್ಯುವ ಕೆಲಸ ಮಾಡಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅವರಿಗೆ ಅಭಿಮಾನ ಇತ್ತು. ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸರು. ಅರೆ ಬರ ಕನ್ನಡ ಓದಿ ಎಲ್ಲವೂ ಗೊತ್ತದೆ ಎನ್ನುತ್ತೇವೆ.‌ ಆದರೆ, ಸಿರಿಯಜ್ಜಿ ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದರು. ‘ಹತ್ತ ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ’ ಎಂಬ ಮಾತು ದೊಡ್ಡದು. ಇದರಲ್ಲಿ ದೊಡ್ಡ ಸಂದೇಶ ಇತ್ತು ಎಂದು ಸ್ಮರಿಸಿದರು.

ಅವಳ ಹಾಡುಗಾರಿಕೆಯ ಕ್ರಮ ವಿಸ್ಮಯ ಮೂಡಿಸುತ್ತಿತ್ತು. ನೋವಿನ ವಾಕ್ಯದಲ್ಲಿ ಇರುವ ಅರ್ಥ ಬಹಳ ದೊಡ್ಡದು. ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. . 100ಕ್ಕೂ ಹೆಚ್ಚು ತ್ರಿಪದಿಯಲ್ಲಿ ಸಿರಿಯಜ್ಜಿ ಹಾಡಿದ್ದಾಳೆ. ಸಮಾಜಿಕ, ಐತಿಹಾಸಿಕ, ಸಂತೋಷದ ಸಂಗತಿ, ಮಳೆರಾಯನ ಕುರಿತು ಹಾಡು ಹೇಳಿದ್ದಾಳೆ. ಮದುವೆ ಸಂಭ್ರದ ಸಾವಿರಾರು ತ್ರಿಪದಿ ಅವಳಲ್ಲಿದ್ದವು.ಶಿಷ್ಟ ಮತ್ತು ಜಾನಪದ ಸಾಹಿತ್ಯ ಈ ಎರಡರಲ್ಲೂ ಕೆಟ್ಟದ್ದು ಒಳ್ಳೆಯದು ಇದೆ. ಇದರ ಬಗೆಗೆ ಇನ್ನೂಹೆಚ್ಚಿನ ಅಧ್ಯಯನ ನಡೆಸಿ ಪ್ರಾಧ್ಯಾಪಕರು ಚರ್ಚಿಸಬೇಕಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.

ಅನಕ್ಷರಸ್ಥರಲ್ಲಿ ಕೂಡ ವಿದ್ವಾಂಸರು ಇದ್ದಾರೆ. ಸಿರಿಯಜ್ಜಿ ರೀತಿಯವರು ಅಸಂಖ್ಯಾತರಷ್ಟು ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳೋಣ’.ಎ.ಕೆ.ರಾಮಾನುಜನ್, ಎಸ್.ಎಲ್.ಭೈರಪ್ಪ, ಗುಂಡೂರಾವ್, ಎಚ್.ಕೆ.ರಂಗನಾಥ್ ಸೇರಿ ಅನೇಕರು ಸಿರಿಯಜ್ಜಿ ಹುಡುಕಿಕೊಂಡು ಬಂದಿದ್ದರು. ಪ್ರಾಧ್ಯಾಪಕರು ಇದನ್ನು ಗುರುತಿಸಿ ಹೇಳಬೇಕು. ಮಕ್ಕಳಿಗೆ ಪಾಠ ಮಾಡಿದರೆ ಪ್ರಾಧ್ಯಾಪಕರ ಕಾರ್ಯ ಮುಗಿಯುದಿಲ್ಲ ಎಂದು ಕಿವಿಮಾತು ಹೇಳಿದರು.

ಅನಕ್ಷರಸ್ಥರು ಎಂದು ಹೇಳುವುದು ನಮ್ಮ ಅಜ್ಞಾನ ತೋರಿಸುತ್ತದೆ. ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯ, ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯ ಇದು ಕೂಡ ಮುಖ್ಯ.‘ಸಾವಿರದ ಸಿರಿ ಬೆಳಕು’ ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಅಪ್ರಕಟಿತ ಗೀತೆಗಳು ಇನ್ನೂ ಇವೆ. ಅಕ್ಷರಕ್ಕೆ ಅಳಿವಿಲ್ಲ. ದೇಶದ ಉತ್ತಮ ಸಂಗತಿ, ಪಳಯುಳಿಕೆ ಅಮೆರಿಕಾ, ಇಂಗ್ಲೆಂಡ್ ನಲ್ಲಿವೆ.ಎಚ್ಚರಿಕೆ, ಗಮನ ಹರಿಸಬೇಕು ಪ್ರಾಧ್ಯಾಪಕರು. ಮಕ್ಕಳ ಆಸ್ತಿ ಯಾವುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎಂ.ಮುತ್ತಯ್ಯ ಅಭಿಪ್ರಾಯಪಟ್ಟರು.

ಮನುಷ್ಯರೆಂಬಂತೆ ಸಮಾಜ ಕಾಣದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಚಿಕ್ಕ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರೂ ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ.ಸಿರಿಯಜ್ಜಿ ಸೃಷ್ಟಿಸಿದ್ದು ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದು. ಇದು ಕಾಡುಗೊಲ್ಲ ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆ ಕೂಡ ಹೌದು. ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಮಾನ್ಯತೆ ಸಿಕ್ಕಿದ್ದು ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಸಾಕಷ್ಟು ಶ್ರಮಿಸಬೇಕಾಯಿತು ಎಂದು ಮೆಲುಕುಹಾಕಿದರು.

ಜಾನಪದ ಅಧ್ಯಯನ ವಿಸ್ತರಣೆ ಕಂಡ, ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ಈ ಕೃತಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತವಾಗಿ ಸಿರಿಯಜ್ಜಿ ಪರಿಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ.ಕಾಡು ಗೊಲ್ಲರಂತಹ ನಿರ್ಬಂಧಿತ ಸಮುದಾಯದ ಮಹಿಳೆಯೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಸಿಕ್ಕಿದ್ದು ವಿಸ್ಮಯ. ‌ಅವರ ಒಳಗಿನ ಆಸಕ್ತಿ, ಪ್ರಯತ್ನ ಹಾಗೂ ಕುಟುಂಬದ ಬೆಂಬಲದ ಕಾರಣಕ್ಕೆ ಅವಳಿಗೆ ಇದು ಸಾಧ್ಯ ಆಯಿತು. ಕಾಡಗೊಲ್ಲರ, ಸಾಂಸ್ಕೃತಿಕ ವೀರರ ಆರಾಧ್ಯ ದೈವ, ಬೇರೆ ಸಮುದಾಯದ ದೈವಗಳ ಬಗ್ಗೆ ಸಿರಿಯಜ್ಜಿ ಹಾಡಿದ್ದಾರೆ. ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಸಾಹಿತ್ಯದ ಪದ-ಪದದ ವಿವರಗಳನ್ನು ಅವಳು ನೀಡುತ್ತಿದ್ದಳು. ಕಾವ್ಯ ಅವಳ ಬದುಕಿನ ಭಾಗ ಆಗಿತ್ತು. ಹೀಗಾಗಿ ಅವಳು ನಿರರ್ಗಳವಾಗಿ ಹಾಡುತ್ತದ್ದಳು. ಆದರೆ, ಒಬ್ಬ ವ್ಯಕ್ತಿ ಇಷ್ಟು ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ್‌ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending