ದಿನದ ಸುದ್ದಿ
ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಭಾರತಕ್ಕೆ ಪಲಾಯನ ಕುರಿತ ವರದಿ ನಿರಾಧಾರ : ಕೊಲಂಬೊದ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ
ಸುದ್ದಿದಿನ ಡೆಸ್ಕ್ : ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಅವರ ಕುಟುಂಬ ಸದಸ್ಯರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಳ್ಳಿಹಾಕಿದೆ.
ಈ ಕುರಿತ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಳು ನಿರಾಧಾರ. ಸತ್ಯಕ್ಕೆ ದೂರವಾದದು ಎಂದು ರಾಯಭಾರಿ ಕಚೇರಿ ಸ್ಪಷ್ಟಪಡಿಸಿ ಟ್ವೀಟ್ ಮಾಡಿದೆ.
ಭಾರತ, ತನ್ನ ಸೇನಾಪಡೆಗಳನ್ನು ಶ್ರೀಲಂಕಾಕ್ಕೆ ಕಳುಹಿಸುವ ಕುರಿತ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಊಹಾಪೋಹದ ವರದಿಗಳನ್ನೂ ಸಹ ರಾಯಭಾರಿ ಸ್ಪಷ್ಟವಾಗಿ ತಳ್ಳಿಹಾಕಿದೆ. ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾರತ ನಿನ್ನೆ ಹೇಳಿದೆ.
ಶ್ರೀಲಂಕಾದಲ್ಲಿನ ಬೆಳವಣಿಗೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, ಭಾರತ, ತನ್ನ ನೆರೆಹೊರೆ ನೀತಿಗೆ ಅನುಗುಣವಾಗಿ, ಈ ವರ್ಷವಷ್ಟೇ ಶ್ರೀಲಂಕಾದ ಜನರಿಗೆ 3.5 ಶತಕೋಟಿ ಡಾಲರ್ಗೂ ಹೆಚ್ಚು ಮೊತ್ತದ ಬೆಂಬಲವನ್ನು ನೀಡಿದೆ. ಶ್ರೀಲಂಕಾದ ಜನರ ಹಿತದೃಷ್ಟಿಯಿಂದ ಭಾರತ ಸದಾ ನೆರವಿಗೆ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.
High Commission has recently noticed rumours circulating in sections of media & social media that certain political persons and their families have fled to India.
These are fake and blatantly false reports,devoid of any truth or substance.High Commission strongly denies them.— India in Sri Lanka (@IndiainSL) May 10, 2022
The Spokesperson of Ministry of External Affairs of India clearly stated yesterday that #India is fully supportive of Sri Lanka's democracy, stability and economic recovery. (2/2)
— India in Sri Lanka (@IndiainSL) May 11, 2022
The High Commission would like to categorically deny speculative reports in sections of media and social media about #India sending her troops to Sri Lanka. These reports and such views are also not in keeping with the position of
the Government of #India. (1/2)— India in Sri Lanka (@IndiainSL) May 11, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚಿಗಟೇರಿ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳ ನೂತನ ಕಟ್ಟಡದ ಲೋಕಾರ್ಪಣೆ ; ಗ್ರೂಪ್ ಡಿ ಹುದ್ದೆಗಳಿಗೆ ನೇರಪಾವತಿಯಡಿ ನೇಮಕಕ್ಕೆ ಕಾನೂನು ಇಲಾಖೆಗೆ ಪ್ರಸ್ತಾವನೆ : ಸಚಿವ ದಿನೇಶ್ ಗುಂಡೂರಾವ್
ಸುದ್ದಿದಿನ,ದಾವಣಗೆರೆ:ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕ್ಲಿನಿಕಲ್ ವಿಭಾಗದಲ್ಲಿ ಗ್ರೂಪ್ ಡಿ ಸೇವೆ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇರ ಪಾವತಿಯಡಿ ನೇಮಕ ಮಾಡಿಕೊಳ್ಳಲು ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಸಾಧಕ, ಬಾದಕಗಳ ಪರಿಶೀಲನೆ ನಂತರ ಹೊರಗುತ್ತಿಗೆಯ ಎಲ್ಲಾ ಗ್ರೂಪ್ ಡಿ ಸಿಬ್ಬಂದಿಗಳನ್ನು ನೇರಪಾವತಿಯಡಿ ಪಡೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ಬುಧವಾರ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಮಾಡಿರುವ 200 ಹಾಸಿಗೆಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ನ್ನು ಲೋಕಾರ್ಪಣೆ ಮಾಡಿ ಸಮಾರಂಭದಲ್ಲಿ ಮಾತನಾಡಿದರು.
ದಾವಣಗೆರೆಯಲ್ಲಿನ ಚಿಗಟೇರಿ ಆಸ್ಪತ್ರೆ ವಿಶಾಲವಾದ ಸ್ಥಳದಲ್ಲಿದ್ದು 70 ವರ್ಷದ ಹಳೆಯದಾಗಿದೆ. ಇಲ್ಲಿ ಹೊಸ ಕಟ್ಟಡ, ದುರಸ್ಥಿಯಾಗಬೇಕಾಗಿದ್ದು ಮಧ್ಯ ಕರ್ನಾಟಕದಲ್ಲಿನ ಈ ಆಸ್ಪತ್ರೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವ ಮೂಲಕ ಈ ಭಾಗದಲ್ಲಿನ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ ಇಲ್ಲಿನ ಮೂಲಭೂತ ಸೌಕರ್ಯಕ್ಕೆ ಮತ್ತು ಹೊಸ ಬ್ಲಾಕ್ ನಿರ್ಮಾಣಕ್ಕೆ ರೂ.17 ಕೋಟಿ ಬಿಡುಗಡೆ ಮಾಡಲಾಗಿದ್ದು ಭವಿಷ್ಯದ ದೃಷ್ಟಿಯಿಂದ ನೂತನ ಯೋಜನೆಯನ್ನು ಸಿದ್ದಪಡಿಸಿ ಅದರಂತೆ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ರೂ. 30 ಕೋಟಿಯಲ್ಲಿ ನಿರ್ಮಿಸಲಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 200 ಹಾಸಿಗೆ ಸಾಮಥ್ರ್ಯವಿದ್ದು ಇಲ್ಲಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಮಂಜೂರು ಮಾಡಲು ಸರ್ಕಾರದ ಮುಂದೆ ಪ್ರಸ್ತಾವನೆ ಇದ್ದು ಇಲ್ಲಿಗೆ ಬೇಕಾಗಿರುವ ವೈದ್ಯರು ಹಾಗೂ ಸಿಬ್ಬಂದಿಗಳ ಹುದ್ದೆಗಳಿಗೆ ಮಂಜೂರಾತಿಯನ್ನು ನೀಡಲಾಗುತ್ತದೆ. ಟ್ರಾಮಾ ಕೇರ್ ಸೆಂಟರ್ಗೂ ಸಿಬ್ಬಂದಿಗಳ ಅಗತ್ಯವಿದ್ದು ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತದೆ. ಆಸ್ಪತ್ರೆ ಕಟ್ಟಿದರೆ ಸಾಲದು, ಇಲ್ಲಿ ಅಗತ್ಯವಿರುವ ಪರಿಕರ, ಸಿಬ್ಬಂದಿಗಳು ಇದ್ದಾಗ ಮಾತ್ರ ಜನರಿಗೆ ಆರೋಗ್ಯ ಸೇವೆ ಸಿಗಲು ಸಾಧ್ಯವಿದೆ ಎಂದರು.
ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಆದರೆ ಇವುಗಳಿಗೆ ಸಿಗಬೇಕಾದ ಆದ್ಯತೆ ಸಾಕಾಗುತ್ತಿಲ್ಲ. ಜನರ ಆರೋಗ್ಯ ಸಂರಕ್ಷಣೆ ಮಾಡಿದಾಗ ಆರೋಗ್ಯವಂತ ನಾಗರಿಕನಾಗಲು ಸಾಧ್ಯ, ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆರೋಗ್ಯವು ಗ್ಯಾರಂಟಿ ಯೋಜನೆಯಾಗಬೇಕು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕಾಗಿದೆ ಎಂದರು.
ಮಾಯಕೊಂಡ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದರೂ ಸಮುದಾಯ ಆರೋಗ್ಯ ಕೇಂದ್ರವಿರುವುದಿಲ್ಲ. ಮುಂದಿನ ದಿನಗಳಲ್ಲಿ ಮಾಯಕೊಂಡಕ್ಕೆ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಲಾಗುತ್ತದೆ. ಮೂಲಭೂತ ಸೌಕರ್ಯ ಕೊಟ್ಟರೆ ಸಾಕಾಗುವುದಿಲ್ಲ, ವೈದ್ಯರು ಜನರ ಸೇವೆ ಮಾಡಬೇಕು. ವೈದ್ಯಕೀಯ ಸೇವಾ ಕ್ಷೇತ್ರವಾಗಿದ್ದು ಸಹಾನುಭೂತಿಯಿಂದ ಎಲ್ಲಾ ವೈದ್ಯರು ಕೆಲಸ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ವೈದ್ಯರು, ಸಿಬ್ಬಂದಿಗಳ ಸೇವೆ ಜನರಿಗೆ ಸಿಗುವಂತಾಗಬೇಕೆಂದರು.
ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಆಸ್ಪತ್ರೆ ಕಟ್ಟಡದ ಜೊತೆಗೆ ಸಲಕರಣೆಗಳು ಇರಬೇಕಾಗುತ್ತದೆ, ಜೊತೆಗೆ ಸಿಬ್ಬಂದಿಗಳು ಇರಬೇಕು, ಇಲ್ಲವಾದಲ್ಲಿ ವ್ಯರ್ಥವಾಗುತ್ತದೆ. ಚಿಗಟೇರಿ ಆಸ್ಪತ್ರೆಯಿಂದ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದೆ. ಇಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ಜನರಿಗೆ ಸಿಗುವಂತಾಗಬೇಕು. ಇಲ್ಲಿ ನರ್ಸ್, ಆಯಾಗಳ ಕೊರತೆ ಇದೆ ಎಂದು ತಿಳಿದುಬಂದಿದ್ದು ವ್ಯವಸ್ಥೆ ಸರಿಪಡಿಸಬೇಕು. ಹೊರಗುತ್ತಿಗೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರಪವಾತಿಯಡಿ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿಗಳನ್ನು ಪಡೆಯುವಂತಾಗಬೇಕು. ಸಾರ್ವಜನಿಕ ಸೇವೆ ಮಾಡುವಾಗ ಬಹಳ ಪಾರದರ್ಶಕವಾಗಿ ಕೆಲಸ ಮಾಡಬೇಕಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಖಾಸಗಿಯಾಗಿ 8 ಕೋಟಿವರೆಗೆ ವೆಚ್ಚ ಮಾಡಲಾಗಿದೆ ಎಂದರು.
ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಯಾಗಿದ್ದ ಸಮಯದಿಂದಲೂ ಚಿಗಟೇರಿ ಆಸ್ಪತ್ರೆಯ ಸ್ಥಿತಿಗತಿ ಗೊತ್ತಿದೆ. ಇಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಜೊತೆಗೆ ಸುಧಾರಣೆಯಾಗಬೇಕಿದೆ. ಮಾಸ್ಟರ್ ಪ್ಲಾನ್ ತಯಾರಿಸುವ ಮೂಲಕ ಹಂತ ಹಂತವಾಗಿ ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಮಾನವ ಹಾಲು ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ಇನ್ನಷ್ಟು ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿದೆ, ಇದಕ್ಕೆ ಮಾನವ ಸಂಪನ್ಮೂಲ ಕಲ್ಪಿಸಬೇಕು. ಸಿಬ್ಬಂದಿಗಳು ಸಹ ಉಪಕರಣಗಳನ್ನು ನಿಷ್ಕ್ರಿಯೆಗೊಳಿಸದೇ ಉಪಯುಕ್ತ ಮಾಡಿಕೊಳ್ಳಬೇಕು. ಐಸಿಯು ಬೆಡ್ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಶವಗಾರಕ್ಕೆ ಕಾಯಕಲ್ಪ ಮಾಡಬೇಕಾಗಿದ್ದು ಅತ್ಯುತ್ತಮವಾಗಿ ಕೆಲಸ ಮಾಡುವ ಡಾ; ಮೋಹನ್ ರವರನ್ನು ಸನ್ಮಾನಿಸಿ ಗೌರವಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮೇಯರ್ ಕೆ.ಚಮನ್ಸಾಬ್, ದೂಡಾ ಆಧ್ಯಕ್ಷ ಕೆ.ದಿನೇಶ್ ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶಿವಕುಮಾರ್ ಕೆ.ಬಿ, ಅಭಿಯಾನ ನಿರ್ದೇಶಕರಾದ ಡಾ; ನವೀನ್ ಭಟ್ ರೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಬಿರ್ಸಾ ಮುಂಡಾ ಜನ್ಮ ದಿನಾಚರಣೆ ; ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳ ಸಮರ್ಪಕ ಬಳಕೆಗೆ ಸೂಚನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹಾಗೂ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಬಿರ್ಸಾ ಮುಂಡಾ ಅವರಾಗಿದ್ದು ಕೇಂದ್ರ ಸರ್ಕಾರ ಬುಡಕಟ್ಟು ಜನರ ಅಭಿವೃದ್ದಿಗಾಗಿ ಅನುಷ್ಟಾನ ಮಾಡುತ್ತಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಜನರ ಅಭಿವೃದ್ದಿ ಮಾಡಲು ಕ್ರಮವಹಿಸಲಾಗುತ್ತದೆ ಎಂದು ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನವಂಬರ್ 15 ರಂದು ನಡೆದ ಜನಜಾತಿಯ ಗೌರವ್ ದಿವಾಸ್ ಆಚರಣೆ ಸಮಾರಂಭದಲ್ಲಿ ಆದಿವಾಸಿ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಆದಿವಾಸಿ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಅಂಗವಾಗಿ ಜನಜಾತಿಯ ಗೌರವ್ ದಿವಸ್ ಎಂದು ಪ್ರತಿ ವರ್ಷ ನವಂಬರ್ 15 ರಂದು ಆಚರಿಸಲಾಗುತ್ತದೆ.
ಜನಜಾತಿಯ ಗೌರವ್ ದಿವಸದಂದು ದೇಶದ ಜನಜಾತಿಯ ಜನರ ಸಾಧನೆಗಳು, ಸಂಸ್ಕøತಿಗಳು, ಐತಿಹ್ಯಗಳು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಅಡಿಯಲ್ಲಿ ಕೇಂದ್ರ ಸರ್ಕಾರವು ಆದಿವಾಸಿಗಳ ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ ಹಾಗೂ ಧರ್ತಿ ಆಬಾ ಜನಜಾತಿಯ ಉತ್ಕರ್ಷ ಅಭಿಯಾನ ಕಾರ್ಯಕ್ರಮಗಳ ಅಡಿಯಲ್ಲಿ ಆದಿವಾಸಿಗಳಿಗೆ ಹಾಗೂ ಎಸ್ಟಿ ಜನರ ಸ್ವಸಹಾಯ ಗುಂಪುಗಳಿಗೆ ಜಿಲ್ಲಾ ಪಂಚಾಯತ್ನಿಂದ ಎನ್ಆರ್ಎಲ್ಎಂ ರಡಿ ಪ್ರಧಾನ ಮಂತ್ರಿ ವನಧನ್ ಯೋಜನೆಯಡಿ ಜಿಲ್ಲೆಯಲ್ಲಿನ 5 ವನಧನ್ ವಿಕಾಸ ಕೇಂದ್ರಗಳ ಸ್ವಸಹಾಯ ಸಂಘದ ಮಹಿಳಾ ಗುಂಪುಗಳಿಗೆ 37 ಲಕ್ಷದ ವೆಚ್ಚದಲ್ಲಿ 22 ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ ಸ್ವ ಉದ್ಯೋಗ ನೀಡುವ ಅಗರಬತ್ತಿ ತಯಾರಿಸುವ ಯಂತ್ರ, ಅಡಿಕೆ ಕತ್ತರಿಸುವ ಯಂತ್ರ, ಎಣ್ಣೆ ಗಾಣ, ಹಿಟ್ಟಿನ ಗಿರಣಿ, ಅಡಿಕೆ ತಟ್ಟೆ ಯಂತ್ರ, ರೊಟ್ಟಿ ಮಾಡುವ ಯಂತ್ರಗಳನ್ನು ವಿತರಣೆ ಮಾಡಲಾಗಿದೆ.
ವನಧನ್ ಯೋಜನೆ ಐದು ವರ್ಷಗಳ ಕಾರ್ಯಕ್ರಮವಾಗಿದ್ದು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನ ಮಾಡಿ ಅತ್ಯುತ್ತಮ ಜಿಲ್ಲೆ ಎಂದು ಹೆಸರು ಗಳಿಸುವ ಮೂಲಕ ಕೇಂದ್ರದ ಹೆಚ್ಚಿನ ಅನುದಾನ ದಾವಣಗೆರೆಗೆ ಪಡೆದು ಕ್ಷೇತ್ರದಲ್ಲಿನ ಬುಡಕಟ್ಟು ಹಾಗೂ ಪ.ಪಂಗಡದ ಜನರ ಆರ್ಥಿಕಾಭಿವೃದ್ದಿ ಮತ್ತು ಇವರು ವಾಸಿಸುವ ಕಡೆ ಮೂಲಭೂತ ಸೌಕರ್ಯ, ಆಶ್ರಮ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸಬೇಕೆಂದು ತಿಳಿಸಿ ಸ್ವ ಉದ್ಯೋಗ ಕೈಗೊಂಡ ಮಹಿಳೆಯರು ಮುಂದಿನ ದಿನಗಳಲ್ಲಿ ತಮ್ಮ ಆರ್ಥಿಕ ಅನುಕೂಲತೆಗಳ ಮತ್ತು ಅಭಿವೃದ್ದಿ ಕುರಿತು ಯಶೋಗಾಥೆಗಳನ್ನು ಇಲಾಖೆಯೊಂದಿಗೆ ಹಂಚಿಕೆ ಮಾಡಿಕೊಳ್ಳುವಂತಾಗಬೇಕೆಂದು ಆಶಿಸಿದರು.
ಬಿರ್ಸಾ ಮುಂಡಾ ಜನ್ಮ ದಿನಾಚರಣೆ ಹಾಗೂ ಧರ್ತಿ ಆಬಾ ಜನ್ಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ ಬುಡಕಟ್ಟು ಗುಂಪುಗಳಿಗೆ ಸ್ವ ಉದ್ಯೋಗದ ವಿವಿಧ ಯಂತ್ರೋಪಕರಣಗಳನ್ನು ವಿತರಣೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಯೋಜನಾ ನಿರ್ದೇಶಕರಾದ ರೇಷ್ಮಕೌಸರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಒಳಮೀಸಲಾತಿ ಜಾರಿಗೆ ಚಾಲನೆ ; ಜಾತಿಗಣತಿ ವರದಿ ವಿರೋಧಕ್ಕೆ ಬೇಡ ಮನ್ನಣೆ : ಮಾಜಿ ಸಚಿವ ಎಚ್.ಆಂಜನೇಯ
ಸುದ್ದಿದಿನ,ದಾವಣಗೆರೆ:ಅಸ್ಪೃಶ್ಯತೆ ನೋವು, ಸೌಲಭ್ಯಗಳ ಮರಿಚೀಕೆ, ಕೈಗೆಟುಕದ ಮೀಸಲಾತಿ ಹೀಗೆ ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ ಮತ್ತು ಸಹೋದರ ಜಾತಿಗಳಿಗೆ ಒಳಮೀಸಲಾತಿ ವರವಾಗಿ ಪರಿಣಮಿಸಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ಹೋರಾಟದ ಫಲ ಹಾಗೂ ಎಲ್ಲ ಪಕ್ಷಗಳ ಸರ್ಕಾರಗಳ ಸಹಕಾರ-ಬದ್ಧತೆ ಕಾರಣಕ್ಕೆ ಪರಿಶಿಷ್ಟ ಜಾತಿ ಗುಂಪಿನಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಂದರ್ಭ ಎದುರಾಗಿದೆ. ಅದರಲ್ಲೂ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಸುಪ್ರೀಂ ಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ ಆಗಿದೆ ಎಂದರು.
ಈಗ ಕೋರ್ಟ್ ತೀರ್ಪು ಬಳಿಕ ರಾಜ್ಯ ಸರ್ಕಾರದ ಅಂಗಳಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಅಧಿಕಾರದ ಚೆಂಡು ಬಂದಿದೆ.ಅದರಲ್ಲೂ ಅಹಿಂದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರವೆಂಬ ಹೆಗ್ಗಳಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಒಳಮೀಸಲಾತಿ ಜಾರಿಗೊಳಿಸಿ, ದಲಿತರ ಕಣ್ಮಣಿ ಆಗುವ ಅವಕಾಶ ನೀಡಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಈ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯದೆ ಒಳಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡಿದ್ದು, ಅದರ ಮೊದಲ ಹೆಜ್ಜೆಯಾಗಿ ದತ್ತಾಂಶ (ಎಂಪಿರಿಕಲ್ ಡಾಟ) ಸಂಗ್ರಹಕ್ಕೆ ಆಯೋಗ ರಚಿಸಿ, ಅಧ್ಯಕ್ಷರನ್ನಾಗಿ ನ್ಯಾ.ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಪರಿಶಿಷ್ಟ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದೆ ಎಂದು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಹೋರಾಟದ ಪರಿಣಾಮ ಈ ಹಿಂದೆ ರಚನೆಗೊಂಡಿದ್ದ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಎಸ್ಸಿಗೆ 15ರಿಂದ 17, ಎಸ್ಟಿಗೆ 3ರಿಂದ ಶೇ.7 ಒಟ್ಟು 18ರಿಂದ ಶೇ.24ಕ್ಕೆ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಏರಿಕೆಗೊಂಡಿತು. ಆದ್ದರಿಂದ ಸಾಮಾಜಿಕ, ಜಾತಿ ವ್ಯವಸ್ಥೆ, ಹಿಂದುಳಿದ ವರ್ಗದ ಜನರ ಕುರಿತು ಹೆಚ್ಚು ಕಾಳಜಿ ಹೊಂದಿರುವ ನಾಗಮೋಹನ್ ದಾಸ್ ನೇಮಕ ಅತ್ಯಂತ ಉತ್ತಮ ನಿರ್ಧಾರವಾಗಿದೆ ಎಂದರು.
ರಾಜ್ಯದ ಎಲ್ಲೆಡೆಯೂ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲವು ಜಿಲ್ಲೆಗಳಲ್ಲಿ ಮಾದಿಗ ಹಾಗೂ ಛಲವಾದಿ ಸಮುದಾಯದವರು ಆದಿಕರ್ನಾಟಕ ಎಂದು ಗುರುತಿಸಿಕೊಂಡಿದ್ದು, ಗೊಂದಲ ಉಂಟು ಮಾಡಿದೆ. ಆದ್ದರಿಂದ ನಾಗಮೋಹನ್ದಾಸ್ ಅವರು ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿ, ಮಾದಿಗ ಮತ್ತು ಅದರ ಉಪ ಜಾತಿಗಳನ್ನು ಗುರುತಿಸುವ ಕೆಲಸ ಮಾಡುವ ಮೂಲಕ ನೊಂದ ಜನರಿಗೆ ನ್ಯಾಯ ಒದಗಿಸುವ ವಿಶ್ವಾಸ ಇದೆ ಎಂದು ಹೇಳಿದರು.
2011ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಜನಗಣತಿ ಅಂಕಿ ಅಂಶ ಹಾಗೂ ಎಲ್.ಜಿ.ಹಾವನೂರು, ನ್ಯಾ.ಸದಾಶಿವ, ಕಾಂತರಾಜ್ ಆಯೋಗದ ವರದಿಗಳನ್ನು ಅಧ್ಯಯನ ನಡೆಸಿದರೆ ದತ್ತಾಂಶ ಮಾಹಿತಿ ದೊರೆಯಲಿದೆ. ಜತೆಗೆ ಒಳಮೀಸಲಾತಿ ಜಾರಿಗೆ ಇರುವ ಸಣ್ಣಪುಟ್ಟ ಅಡ್ಡಿಗಳನ್ನು ತಕ್ಷಣ ನಿವಾರಿಸಬಹುದು ಎಂದರು.
ಬ್ರಿಟಿಷರ ಕಾಲದಲ್ಲಿ ಆಗಿದ್ದ ಹಾಗೂ 100 ವರ್ಷದ ನಂತರ ಸ್ವತಂತ್ರ ಭಾರತದಲ್ಲಿಯೇ ಮೊದಲ ಬಾರಿಗೆ ಸಿದ್ದರಾಮಯ್ಯ ಸರ್ಕಾರ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ನಿರ್ಧಾರ ಅಂದು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ನಾನು ಹೆಚ್ಚು ಕಾಳಜಿಯಿಂದ ವರದಿ ತಯಾರಿಸಲಾಗಿತ್ತು. ಇದು ದೇಶದಲ್ಲಿಯೇ ಐತಿಹಾಸಿಕ ನಿರ್ಧಾರವಾಗಿದೆ ಎಂದರು.
ಈ ನಿಟ್ಟಿನಲ್ಲಿ ಕಾಂತರಾಜ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ 1 ಲಕ್ಷದ 50 ಸಾವಿರ ಶಿಕ್ಷಕರು ಪಾಲ್ಗೊಂಡಿದ್ದು, ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಅನೇಕ ಐಎಎಸ್ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಅಂದಾಜು 180 ಕೋಟಿ ರೂ. ವೆಚ್ಚ ಮಾಡಿ ಅತ್ಯಂತ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ.
ಈ ವರದಿ ಎಲ್ಲ ವರ್ಗದಲ್ಲಿನ ನೊಂದ ಜನರಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸಲು ಬುನಾದಿ ಆಗಲಿದೆ. ಅದರಲ್ಲೂ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಲು ಸಹಕಾರಿ ಆಗಲಿದೆ. ಮೀಸಲಾತಿ, ಸೌಲಭ್ಯ ಹಂಚಿಕೆ ವೇಳೆ ಯಾವ ಆಧಾರದ ಮೇಲೆ ಇದನ್ನು ಜಾರಿಗೊಳಿಸಿದ್ದೀರಾ, ನಿಮ್ಮಲ್ಲಿ ಏನಾದ್ರೂ ಅಂಕಿ-ಅAಶಗಳು ಇವೆಯೇ ಎಂದು ಪದೇ ಪದೆ ಕೋರ್ಟ್ ಪ್ರಶ್ನೇಗೆ ಕಾಂತರಾಜ್ ಆಯೋಗದ ವರದಿ ಉತ್ತರವಾಗಲಿದೆ ಎಂದರು.
ಕಾಂತರಾಜ್ ಆಯೋಗ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಕುರಿತು ಯಾವುದೇ ರೀತಿ ಟೀಕೆ, ಆರೋಪ, ಬೆದರಿಕೆ, ವಿರೋಧ ವ್ಯಕ್ತವಾದರೂ ಸಿದ್ದರಾಮಯ್ಯ ಜಗ್ಗಬಾರದು. ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಚರ್ಚಿಸಿ ವರದಿಯನ್ನು ಬಹಿರಂಗಪಡಿಮಂಡಿಸಬೇಕು. ಬಳಿಕ ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಬಹುದು. ಈ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನೂರಾರು ವರ್ಷಗಳಿಂದಲೂ ಸಾಮಾಜಿಕ ನ್ಯಾಯ ಕಲ್ಪಿಸುವ ಸಂದರ್ಭ ಆಡಳಿತದ ವಿರುದ್ಧ ಕೆಲವರು ತಿರುಗಿಬಿದ್ದಿದ್ದಾರೆ. ಸಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ವಿ.ಪಿ.ಸಿಂಗ್, ದೇವರಾಜ ಅರಸು ಸೇರಿ ಅನೇಕರ ಕಾಲದಲ್ಲಿ ನೊಂದ ಜನರಿಗೆ ಮೀಸಲಾತಿ ಕೊಡಲು ಅಡ್ಡಿಗಳು ಎದುರಾಗಿವೆ. ಆದರೂ ಅವರು ಯಾವುದೇ ಒತ್ತಡ, ಪ್ರತಿಭಟನೆಗಳಿಗೆ ಬೆದರದೆ ಹಕ್ಕು ಕಲ್ಪಿಸಿದ್ದಾರೆ ಎಂದರು.
ಅದೇ ಹಾದಿಯಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಸಾಗುತ್ತಾರೆಂಬ ವಿಶ್ವಾಸ ಇದೆ. ಈಗಾಗಲೇ ಹಲವರು ಬಾರಿ ಅವರು ತಮ್ಮ ಮಾತು, ನಡೆ ಮೂಲಕ ದೃಢಪಡಿಸಿದ್ದು, ನಾನೇ ಒಳಮೀಸಲಾತಿ ಜಾರಿಗೊಳಿಸುವುದು ಹಾಗೂ ಯಾವುದೇ ಟೀಕೆ ಬಂದರೂ ಜಾತಿಗಣತಿ ವರದಿ ಜಾರಿ ಸಿದ್ಧವೆಂಬ ಹೇಳಿಕೆ ಎಲ್ಲ ವರ್ಗದ ಜನರಲ್ಲಿ ಅದಮ್ಯ ವಿಶ್ವಾಸ ಮೂಡಿಸಿದೆ. ಜತೆಗೆ ಒಳಮೀಸಲಾತಿ ಜಾರಿಗೆ ನ್ಯಾ.ನಾಗಮೋಹನ್ ದಾಸ್ ಅವರನ್ನು ನೇಮಕ ಮಾಡಿರುವುದು ಅತ್ಯಂತ ಗಟ್ಟಿ ನಿರ್ಧಾರವಾಗಿದೆ ಎಂದರು.
ವಿರೋಧ ಮಾಡುವವರು ಕಾರಣ ಕೊಡಬೇಕು
ಅನಗತ್ಯವಾಗಿ ಟೀಕೆ, ಆರೋಪ ಮಾಡುವುದು ಸರಿಯಲ್ಲ. ಸರ್ಕಾರದ ಅಡಿಯಲ್ಲಿ ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು, ಶಿಕ್ಷಕರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್ಗಳು ಸೇರಿ ಅನೇಕರು ಕಾರ್ಯನಿರ್ವಹಿಸಿದ್ದಾರೆ. ಅವರ ಶ್ರಮವನ್ನು ಗೌರವಿಸಬೇಕು ಎಂದು ಎಚ್.ಆಂಜನೇಯ ಒತ್ತಾಯಿಸಿದರು.
ವರದಿ ಬಹಿರಂಗಗೊಂಡ ಬಳಿಕ ವಿರೋಧ ಮಾಡುವವರು ತಪ್ಪುಗಳನ್ನು ಗುರುತಿಸಿ ಹೇಳಲಿ. ಇಂತಹ ಪ್ರದೇಶದಲ್ಲಿ ಸರ್ವೇ ಆಗಿಲ್ಲ ಎಂದು ಹೇಳಲಿ. ಆಗ ಅದು ಸತ್ಯವೇ ಅಗಿದ್ದರೇ ಆ ಪ್ರದೇಶದಲ್ಲಿ ಮರು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕೋಣಾ. ಈ ಸಂಬಂಧ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ವರದಿ ಬಹಿರಂಗಕ್ಕೆ ಮುನ್ನವೇ ಅನಗತ್ಯವಾಗಿ ವಿರೋಧ ಮಾಡಿದರೇ ನಾವು ಸಹಿಸುವುದಿಲ್ಲ. ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಸ್ವೀಕಾರ, ಮಂಡನೆ, ಬಹಿರಂಗೊಳಿಸುವುದು ತುರ್ತು ಅಗತ್ಯವಿದೆ. ಅದರಲ್ಲೂ ಈ ವಿಷಯದಲ್ಲಿ ಕೋರ್ಟ್ ಕೇಳುತ್ತಿದ್ದ ಅನೇಕ ಪ್ರಶ್ನೇಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಮಹಾನಗರಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ದಲಿತ ಮುಖಂಡ ಹೀರಣ್ಣಯ್ಯ, ಅಂಜಿನಪ್ಪ ಮತ್ತಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ರಸ್ತೆ ಸುರಕ್ಷತಾ ಸಮಿತಿ ಸಭೆ | ಅಪಘಾತ ಪ್ರಮಾಣ ತಗ್ಗಿಸಲು ಜಿಲ್ಲೆಯ ರಸ್ತೆಗಳ ದುರಸ್ತಿ ಹಾಗೂ ಸುಧಾರಣೆಗೆ ವಿಶೇಷ ಗಮನ ನೀಡಿ : ಡಿಸಿ ಗಂಗಾಧರಸ್ವಾಮಿ ಜಿ.ಎಂ.
-
ದಿನದ ಸುದ್ದಿ6 days ago
ಒಳಮೀಸಲಾತಿ ಜಾರಿಗೆ ಚಾಲನೆ ; ಜಾತಿಗಣತಿ ವರದಿ ವಿರೋಧಕ್ಕೆ ಬೇಡ ಮನ್ನಣೆ : ಮಾಜಿ ಸಚಿವ ಎಚ್.ಆಂಜನೇಯ
-
ದಿನದ ಸುದ್ದಿ1 day ago
ಚಿಗಟೇರಿ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳ ನೂತನ ಕಟ್ಟಡದ ಲೋಕಾರ್ಪಣೆ ; ಗ್ರೂಪ್ ಡಿ ಹುದ್ದೆಗಳಿಗೆ ನೇರಪಾವತಿಯಡಿ ನೇಮಕಕ್ಕೆ ಕಾನೂನು ಇಲಾಖೆಗೆ ಪ್ರಸ್ತಾವನೆ : ಸಚಿವ ದಿನೇಶ್ ಗುಂಡೂರಾವ್
-
ದಿನದ ಸುದ್ದಿ6 days ago
ದಾವಣಗೆರೆ | ಬಿರ್ಸಾ ಮುಂಡಾ ಜನ್ಮ ದಿನಾಚರಣೆ ; ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳ ಸಮರ್ಪಕ ಬಳಕೆಗೆ ಸೂಚನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್