Connect with us

ಕ್ರೀಡೆ

ಶುಕ್ರವಾರ | ಬೆಳಗಿನ ಪ್ರಮುಖ ಸುದ್ದಿಗಳು

Published

on

ಶುಕ್ರವಾರ | ಬೆಳಗಿನ ಪ್ರಮುಖ ಸುದ್ದಿಗಳು

  1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದೂ ಕೂಡ ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ವೀಕ್ಷಣೆಯನ್ನು ಮುಂದುವರೆಸಲಿದ್ದಾರೆ. ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ ಮತ್ತು ಪೈ ಬಡಾವಣೆಗಳಿಗೆ ಅವರು ಭೇಟಿ ನೀಡಲಿದ್ದಾರೆ.
  2. ಪರಿಷ್ಕೃತ ಕ್ರಿಯಾ ಯೋಜನೆ 2015 ರಲ್ಲಿ ಲೋಪವಿದೆ ಎಂಬ ಕಾರಣಕ್ಕೆ ಜಲ ಮೂಲಗಳ ಬಳಕೆಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸುವ ಕುರಿತಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ್ದ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡಿಎ ಆಯುಕ್ತರಿಗೆ ಸೂಚಿಸಿದ್ದಾರೆ. ಅದರಂತೆ ಬಿಡಿಎ ಆಯುಕ್ತರು ಅಧಿಸೂಚನೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
  3. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಉಡುಪಿ, ವಿಜಯಪುರ, ಬೆಳಗಾವಿ, ತಿಪಟೂರು ಸೇರಿ ಹಲವು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ವತಃ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
  4. ಬೆಸ್ಕಾಂನ ಎಲ್ಲ ಕಾರ್ಯ ಮತ್ತು ಪಾಲನ ವಿಭಾಗಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಅಂದರೆ, ನಾಳೆ ಮಧ್ಯಾಹ್ನ 3 ಗಂಟೆಯಿಂದ 5.30ರವರೆಗೆ ಗ್ರಾಹಕ ಸಂವಾದ ಸಭೆಗಳನ್ನು ನಡೆಸಲಾಗುವುದು. ಗ್ರಾಹಕರು ವಿದ್ಯುತ್‌ಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
  5. ಜೈಪುರದಲ್ಲಿ ಇಂದು ನಡೆಯಲಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ನಂತರ ಅವರು ಪಕ್ಷದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
  6. ಇಂದಿನಿಂದಲೇ ಜಾರಿಗೆ ಬರುವಂತೆ ಕಚ್ಚಾ ಸೆಣಬಿನ ಮೇಲಿನ ಬೆಲೆ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಸೆಪ್ಟಂಬರ್ 30ರಂದು ಸೆಣಬು ಕಾರ್ಖಾನೆಗಳು ಮತ್ತು ಇತರೆ ಬಳಕೆದಾರರು ಟಿಡಿ5 ದರ್ಜೆಯ ಸೆಣಬು ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 6ಸಾವಿರದ 500ರೂಪಾಯಿ ಬೆಲೆ ಮಿತಿ ನಿಗದಿಪಡಿಸಲಾಗಿತ್ತು. ಕಚ್ಚಾ ಸೆಣಬು ವ್ಯಾಪಾರದ ಮಾರುಕಟ್ಟೆಯ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
  7. ಐಪಿಎಲ್ ಟಿ-20 ಕ್ರಿಕೆಟ್‌ನಲ್ಲಿಂದು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
  8. ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
  9. ಇದೇ 22ರಂದು ಫಿಲ್ಮಾಹಾಲಿಕ್ ಫೌಂಡೇಶನ್ ವತಿಯಿಂದ 3ನೇ ವರ್ಷದ ಕರ್ನಾಟಕ ಯುವ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು ಮೈಸೂರು ಅಂತಾರಾಷ್ಟ್ರೀಯ ಜಲ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಮೈಸೂರಿನ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ಅಂತರಾಷ್ಟ್ರೀಯ ಜಲ ಚಲನಚಿತ್ರೋತ್ಸವದ ಮುಖ್ಯ ಉದ್ದೇಶ ಹೊಸ ತಲೆಮಾರಿನ ಚಲನಚಿತ್ರ ತಯಾರಕರಿಗೆ ಕಲಾತ್ಮಕ ಸೃಜನಶೀಲತೆಯನ್ನು ಪೋಷಿಸಿ ಮತ್ತು ಉತ್ತೇಜಿಸಿ ಅವರ ಚಲನಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸುವುದೇ ಆಗಿದೆ. 91ಕ್ಕೂ ಹೆಚ್ಚು ದೇಶಗಳ ಚಲನಚಿತ್ರ ತಯಾರಕರು ಭಾಗವಹಿಸಲಿದ್ದಾರೆ.
  10. ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಜಲಾಶಯಗಳು ಯಾವುದೇ ಸಮಯದಲ್ಲಿ ಭರ್ತಿಯಾಗಬಹುದಾಗಿದೆ. ಜಲಾಶಯಗಳ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮನವಿ ಮಾಡಿದ್ದಾರೆ.
  11. ಮಂಡ್ಯದಲ್ಲಿ ಭಾರಿ ಮಳೆಯಿಂದ ಬೀಡಿ ಕಾಲೋನಿಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಧಿಕಾರಿ ಎಸ್. ಅಶ್ವತಿ ಬೀಡಿ ಕಾಲೋನಿಗೆ ಭೇಟಿ ನೀಡಿ, ಪರಿಶೀಲಿಸಿ ಸದ್ಯಕ್ಕೆ ಕಾಲೋನಿಯ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  12. ಮುಂಗಾರು ಋತುವಿನಲ್ಲಿ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕೂಡಲೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಸೂಚಿಸುವಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ. ರಾಜ್ಯ ಸರ್ಕಾರಗಳು ವಿದ್ಯುತ್ ಉತ್ಪಾದನೆಗಾಗಿ ಕೂಡಲೇ ಅಗತ್ಯ ಕಲ್ಲಿದ್ದಲು ಪ್ರಮಾಣದ ಶೇಕಡ10ರಷ್ಟನ್ನು ಆಮದು ಮಾಡಿಕೊಳ್ಳುವಂತೆ ಹಾಗೂ ಈ ತಿಂಗಳ 31ರೊಳಗೆ ಕಲ್ಲಿದ್ದಲು ಆಮದು ಆರ್ಡರ್ ನೀಡುವಂತೆ ಸಚಿವ ಆರ್‌ಕೆ ಸಿಂಗ್ ಸೂಚಿಸಿದ್ದಾರೆ.
  13. ಇದೇ 21 ಮತ್ತು 22ರಂದು ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿದ್ದು, 6 ಸಾವಿರದ 625 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ರಾಗಪ್ರಿಯಾ ಯಾದಗಿರಿಯಲ್ಲಿ ತಿಳಿಸಿದ್ದಾರೆ.
  14. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೇ 21ರಂದು ನಿಗದಿಯಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಮೇ 27ಕ್ಕೆ ಮುಂದೂಡಲಾಗಿದೆ. ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿರುವುದರಿಂದ ಚುನಾವಣಾ ನೀತಿ ಸಂಹಿತೆ ಹಾಗೂ ಶಿಕ್ಷಣ ಇಲಾಖೆಯ ಟಿಇಟಿ ಪರೀಕ್ಷೆಯನ್ನು ಮೇ 21 ರಂದು ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
  15. ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಬಂದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ ಭತ್ತ ನೆಲ ಕಚ್ಚಿದ್ದು, 1 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
  16. ಅವಧಿಗೆ ಮುನ್ನವೇ ಮುಂಗಾರು ಅಪ್ಪಳಿಸಿರುವ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ಇಂದು ಕೂಡ ಕೇರಳ ರಾಜಧಾನಿ ತಿರುವನಂತಪುರಂ, ಕೊಲ್ಲಂ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.
  17. ವಾರ್ಷಿಕ ಅಮರನಾಥ ಯಾತ್ರೆ ಹಾಗೂ ಮಚಲಿ ಯಾತ್ರೆಯ ಹಿನ್ನೆಲೆಯಲ್ಲಿ ಸೇನಾ ಪಡೆಗಳ ಹಾಗೂ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಭದ್ರತಾ ಪರಿಶೀಲನೆ ನಡೆಸಿದರು. ಲೆಫ್ಟಿನೆಂಟ್ ಜನರಲ್ ಮಂಜಿಂದರ್ ಸಿಂಗ್ ನೇತೃತ್ವದಲ್ಲಿ ಸೇನಾ ಪಡೆಗಳ ತಂಡ ಜಮ್ಮು ವಲಯದ ನಗ್ರೋಟಾ ಎಂಬಲ್ಲಿ ಭದ್ರತಾ ಸಿದ್ಧತೆಗಳ ಪರಿಶೀಲನೆ ನಡೆಸಿತು. ಜಮ್ಮು ಪೊಲೀಸ್ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಮುಖೇಶ್ ಸಿಂಗ್ ಹಾಗೂ ಗುಪ್ತಚರ ದಳದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
  18. ಐಪಿಎಲ್ ಕ್ರಿಕೆಟ್‌ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್‌ಗಳಿಂದ ಜಯಗಳಿಸಿದೆ. ಟೈಟನ್ಸ್ ತಂಡ ಒಡ್ಡಿದ 169ರನ್‌ಗಳ ಗುರಿ ಬೆನ್ನೆತ್ತಿದ ಬೆಂಗಳೂರು ತಂಡ ಇನ್ನೂ 8ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 170ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಟಿ-20 ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತ ಕ್ರಿಕೆಟ್ ತಂಡ ಇಂದು ದೆಹಲಿಗೆ ಆಗಮನ ; ಸಂಜೆ ರೋಡ್ ಶೋ

Published

on

ಸುದ್ದಿದಿನಡೆಸ್ಕ್:ಟಿ-20ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತ ಕ್ರಿಕೆಟ್ ತಂಡ ಇಂದು ಬೆಳಗ್ಗೆ ರಾಜಧಾನಿ ದೆಹಲಿಗೆ ಆಗಮಿಸಿತು. ವಿಮಾನ ನಿಲ್ದಾಣದಲ್ಲಿ ಭಾರತದ ಆಟಗಾರರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಪಂದ್ಯಾವಳಿಯ ಫೈನಲ್ ಪಂದ್ಯ ನಡೆದ ಬಾರ್ಬಡೋಸ್‌ನಿಂದ ತಂಡವು ಹಿಂತಿರುಗಿತು.

ಬೆರಿಲ್ ಚಂಡಮಾರುತದಿಂದಾಗಿ ಭಾರತ ತಂಡದ ಆಗಮನ ವಿಳಂಬವಾಯಿತು. ರಾಷ್ಟ್ರದ ರಾಜಧಾನಿಯಲ್ಲಿ ಭಾರತೀಯ ತಂಡವನ್ನು ಸ್ವಾಗತಿಸಲು ಕ್ರಿಕೆಟ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ಮುಂಬೈಗೆ ತೆರಳುವ ಮುನ್ನ ಭಾರತ ತಂಡ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದೆ.

ಚಾಂಪಿಯನ್ ತಂಡ ಮುಂಬೈನಲ್ಲಿ ಇಂದು ಸಂಜೆ ತೆರೆದ ಬಸ್‌ನಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ -ಬಿಸಿಸಿಐ ಕಾರ್ಯದರ್ಶಿ ಜೈ ಶಾ ತಿಳಿಸಿದ್ದಾರೆ.

ಸಂಜೆ 5ರಿಂದ 7ರವರೆಗೆ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ವಿಜಯಯಾತ್ರೆ ನಡೆಯಲಿದೆ. ಅದರ ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭ ನಡೆಯಲಿದ್ದು, ಅಲ್ಲಿ ಬಿಸಿಸಿಐ ಭಾರತ ತಂಡಕ್ಕೆ ಬಹುಮಾನ ಮೊತ್ತವನ್ನು ನೀಡಲಿದೆ. ಟಿ-20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ರೋಡ್ ಶೋಗೆ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

11 ವರ್ಷಗಳ ನಂತರ ಭಾರತ ತಂಡಕ್ಕೆ ಐಸಿಸಿ ಟಿ-20 ವಿಶ್ವಕಪ್ ಕಿರೀಟ ; ಗಣ್ಯರ ಮೆಚ್ಚುಗೆ

Published

on

ಸುದ್ದಿದಿನಡೆಸ್ಕ್:ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ, 17 ವರ್ಷಗಳ ನಂತರ ಐಸಿಸಿ ಪುರುಷರ ಟಿ-20 ವಿಶ್ವಕಪ್ ಗೆದ್ದಸಾಧನೆ ಮಾಡಿದೆ.

ಭಾರತ ನೀಡಿದ 177 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತಗೊಂಡಿತು. ದಕ್ಷಿಣ ಆಫ್ರಿಕಾ ಪರ ಹೆನ್ರಿಚ್ ಕ್ಲಾಸೆನ್ 52 ರನ್ ಗಳಿಸಿದರೆ, ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ 3, ಜಸ್ ಪ್ರಿತ್ ಬುಮ್ರಾ ಮತ್ತು ಅರ್ಷ್ ದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರು.

ಟೂರ್ನಿಯಲ್ಲಿ ಅತ್ಯುತ್ತಮ ಇನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಸಹಜವಾಗಿಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಹಾಗೆಯೇ 8 ಪಂದ್ಯಗಳಿಂದ 15 ವಿಕೆಟ್ ಉರುಳಿಸಿದ ವೇಗಿ ಜಸ್ ಪ್ರಿತ್ ಬುಮ್ರಾ ಟೂರ್ನಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. 2007ರ ನಂತರ ಭಾರತ ಟಿ20 ವಿಶ್ವಕಪ್ ಗೆದ್ದರೆ, 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ.

ಈ ಮಧ್ಯೆ, ಭಾರತ ತಂಡ 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಕ್ರಿಕೆಟ್ ನ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ನಿವೃತ್ತಿ ಪ್ರಕಟಿಸಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending