ದಿನದ ಸುದ್ದಿ
ಗಾಂಧೀಜಿ 150 ನೇ ಜನ್ಮ ವರ್ಷಾಚರಣೆ; ಶಾಂತಿ ಮಾರ್ಗ ಸ್ತಬ್ದಚಿತ್ರಕ್ಕೆ ಸ್ವಾಗತ
ಸುದ್ದಿದಿನ ಚಿತ್ರದುರ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ಸತ್ಯ ಮಾರ್ಗ ಹಾಗೂ ಶಾಂತಿ ಮಾರ್ಗ ಎಂಬ ಎರಡು ಸ್ತಬ್ದಚಿತ್ರವನ್ನು ಆಯೋಜಿಸಲಾಗಿದ್ದು ಶಾಂತಿ ಮಾರ್ಗ ಸ್ತಬ್ದಚಿತ್ರವು ಅಕ್ಟೋಬರ್ 8 ರಂದು ಜವನಗೊಂಡನಹಳ್ಳಿ ಮೂಲಕ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿತು.
ಸ್ತಬ್ದಚಿತ್ರದಲ್ಲಿ ಬಾಲಕ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಭಾರತೀಯ ಸೈನ್ಯ ಶುಶ್ರೂಷಾ ಪಥದಲ್ಲಿ ಗಾಂಧಿ, ದೇಶಿ ಉಡುಪಿನಲ್ಲಿ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಗಾಂಧಿ, ಬರವಣಿಗೆಯಲ್ಲಿ ನಿರತ ಗಾಂಧಿ ಹಾಗೂ ಅನಂತದೆಡೆಗೆ ಗಾಂಧಿ ಕುರಿತ ಭಾವಚಿತ್ರಗಳು ಇದರಲ್ಲಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಚಿತ್ರಣವನ್ನು ನಿರ್ಮಿಸಲಾಗಿದ್ದು ಗಾಂಧಿಯೊಂದಿಗೆ ಹೋರಾಟದಲ್ಲಿ ಭಾಗವಹಿಸಿದ ಜನರ ಗುಂಪಿನ ಚಿತ್ರಣವು ಇದರಲ್ಲಿ ನಿಜರೂಪದಂತಿರುವುದು ವಿಶೇಷವಾಗಿದೆ.
ಗಾಂಧಿ ಹೇಳಿದಂತಹ ಅನೇಕ ಘೋಷ ವಾಕ್ಯಗಳ ಎಲ್‍ಇಡಿ ಪ್ರದರ್ಶನವು ಇದರಲ್ಲಿ ಲಭ್ಯವಿದೆ. ಗಾಂಧಿ ಹೇಳಿದ ಘೋಷಣ ವಾಕ್ಯಗಳು ಇಂದಿಗೂ ಸತ್ಯವೆನಿಸಿದ್ದು ಸಾವಿರಾರು ಮಾತುಗಳಿಗಿಂತ ಒಂದು ಚಿಕ್ಕ ಕೆಲಸವೇ ಮೇಲು, ಅಹಿಂಸೆ ಪರಮಶ್ರೇಷ್ಠವಾದದು, ನನ್ನ ಜೀವನವೇ ನನ್ನ ಸಂದೇಶ, ಅಹಿಂಸೆ ಧೈರ್ಯದ ಶಿಖರ, ಮನುಕುಲದ ದೊಡ್ಡ ಆಯುಧ ಶಾಂತಿ, ಸರಳತೆ ಎಂಬುದು ಜಾಗತಿಕ ಚಿಂತನೆಯ ಧಾತು ಎಂಬ ಘೋಷ ವಾಕ್ಯಗಳನ್ನು ಬಿತ್ತರಿಸಲಾಗುತ್ತದೆ.
ವಾಹರರ ಮೂಲಕ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾತನಾಡಬಾರದು ಎಂಬ ಘೋಷಣೆಗಳು ಗಾಂಧೀಜಿಯವರು ಅನುಸರಿಸಿಕೊಂಡು ಬಂದಂತಹ ಮಾರ್ಗವಾಗಿದ್ದು ಇದರ ಉಲ್ಲೇಖವನ್ನು ಇಲ್ಲಿ ಕಾಣಬಹುದಾಗಿದೆ.
ಸ್ತಬ್ದಚಿತ್ರವು ಬೆಳಗ್ಗೆ 9 ಗಂಟೆಗೆ ಶಿರಾದಿಂದ ಜವನಗೊಂಡನಹಳ್ಳಿಗೆ ಆಗಮಿಸಿತು. ಬೆ.10 ಗಂಟೆಗೆ ಹಿರಿಯೂರು ಪಟ್ಟಣದಲ್ಲಿ ಸ್ವಾಗತಿಸಿ ಮೆರವಣಿಗೆ ಮೆರವಣಿಗೆ ನಡೆಸಲಾಯಿತು. ಹಿರಿಯೂರು ಪಟ್ಟಣದಲ್ಲಿ ನಗರಸಭೆ ಅಧ್ಯಕ್ಷೆ ಮಂಜುಳಮ್ಮ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಜೇಶ್ವರಿಯವರು, ಸದಸ್ಯರಾದ ಚಂದ್ರಶೇಖರ್, ತಿಪ್ಪಮ್ಮ, ವನಿತ, ಮುಖಂಡರಾದ ದ್ಯಾಮೇಗೌಡರು, ಹಾಲಪ್ಪ, ಕೇಶವಮೂರ್ತಿ, ವಿಶ್ವನಾಥ, ನಿಜಲಿಂಗಪ್ಪ ಹಾಗೂ ಇನ್ನಿತರರು ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಿದರು.
ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಿದಾಗ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿಯವರು ಗಾಂಧೀಜಿವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ವೇಳೆ ನಗರಸಭೆ ಆಯುಕ್ತರಾದ ಚಂದ್ರಪ್ಪ, ವಾರ್ತಾಧಿಕಾರಿ ಧನಂಜಯರವರು ಉಪಸ್ಥಿತರಿದ್ದರು.
ಸ್ತಬ್ದಚಿತ್ರವು ಮುಖ್ಯರಸ್ತೆಯಲ್ಲಿ ಸಾಗಿ ಮದಕರಿ ವೃತ್ತ, ಡಾ; ಬಿ.ಆರ್.ಅಂಬೇಡ್ಕರ್ ವೃತ್ತ, ಎಸ್.ಬಿ.ಐ. ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕನಕ ವೃತ್ತದವರೆಗೆ ಸಾಗಿ ಮಾಳಪ್ಪನಹಳ್ಳಿ ರಸ್ತೆ ಮಾರ್ಗವಾಗಿ ಮುರುಘಾ ಮಠದ ಮುಂಭಾಗದ ಮೂಲಕ ಎನ್.ಹೆಚ್.4 ಬೈಪಾಸ್ ಮೂಲಕ ಸಾಗಿ ಜೆ.ಸಿ.ಆರ್. ಮುಖ್ಯ ರಸ್ತೆ, ಗಾಯಿತ್ರಿ ವೃತ್ತದ ಮೂಲಕ ಒನಕೆ ಓಬವ್ವ ವೃತ್ತದವರೆಗೆ ಸಾಗಿತು.
ನಾಸಿಕ್ ಡೋಲ್ ವಿಜಾಪುರ ಗೊಲ್ಲರಹಟ್ಟಿ ಗಂಗಾಧರಪ್ಪ ಮತ್ತು ತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅ.9 ರಂದು ಬೆಳಗ್ಗೆ 10 ಗಂಟೆಗೆ ಚಳ್ಳಕೆರೆ ತಲುಪಲಿದ್ದು ಮೆರವಣಿಗೆ ನಡೆಯಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ನಾಯಕನಹಟ್ಟಿ ಮೂಲಕ ಜಗಳೂರಿಗೆ ಸಂಚರಿಸಲಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ.

ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.
ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ ‘ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.
ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಸಲ್ಲಿಸಿರುವ ಸೇವೆ, ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಆದ್ಯತೆ ಹಾಗೂ ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಪರ್ಕವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವರಾಗಿ ಆಯ್ಕೆಯಾದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮಾಯಕೊಂಡ ಕ್ಷೇತ್ರ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭ್ರಮ ಮನೆಮಾಡಿತು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಬಸವಂತಪ್ಪ ಅವರ ನಿವಾಸದ ಎದುರು ಬೆಳಗ್ಗಿನಿಂದಲೇ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಜಮಾಯಿಸಿ ಅಭಿನಂದನೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರೆ, ಯುವಕರು ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು.
ಕೆ.ಎಸ್. ಬಸವಂತಪ್ಪ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಕಾರಣದಿಂದಲೇ ಅವರಿಗೆ ಸಚಿವ ಸ್ಥಾನ ದೊರೆತಿದೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಮಾಯಕೊಂಡ ಕ್ಷೇತ್ರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ನೀರಾವರಿ, ರಸ್ತೆ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಂತಹ ಹಲವು ಸವಾಲುಗಳಿವೆ. ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ವಿಶೇಷವಾಗಿ ರೈತರು, ಯುವಕರು ಹಾಗೂ ಮಹಿಳಾ ಸಂಘಟನೆಗಳು ಹೊಸ ಸಚಿವರಿಂದ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸುತ್ತಿವೆ.
ಸಚಿವ ಸ್ಥಾನ ಘೋಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಎಸ್. ಬಸವಂತಪ್ಪ ಅವರು, “ಈ ಜವಾಬ್ದಾರಿ ನನಗೆ ದೊರೆತಿರುವುದು ವೈಯಕ್ತಿಕ ಗೌರವ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಸಂದ ಗೌರವವಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ” ಎಂದು ಹೇಳಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ದಾವಣಗೆರೆ ಜಿಲ್ಲೆಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಶಾಲೆಗಳು ಮತ್ತು ಆಸ್ಪತ್ರೆಗಳ ಸೌಲಭ್ಯಗಳ ಸುಧಾರಣೆ, ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಮುಖಂಡರು ಮಾತನಾಡಿ, ಬಸವಂತಪ್ಪ ಅವರ ಸಚಿವ ಸ್ಥಾನದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳು ಹರಿದು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾತ್ಮಕ ಮಟ್ಟದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ವೇಗ ಸಿಗಲಿದ್ದು, ಬಾಕಿ ಉಳಿದಿರುವ ಹಲವು ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಹ ಸಚಿವರಿಗೆ ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಬಹುಕಾಲದ ಬೇಡಿಕೆಗಳಾದ ನೀರಾವರಿ ಯೋಜನೆಗಳ ವಿಸ್ತರಣೆ, ಕೈಗಾರಿಕಾ ಹೂಡಿಕೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಬಸವಂತಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಸಾರ್ವಜನಿಕರು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿ, ಸಚಿವರ ಹೊಸ ಜವಾಬ್ದಾರಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ರಾಜ್ಯ ಸಚಿವ ಸಂಪುಟದಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ದೊರೆತಿರುವ ಈ ಪ್ರತಿನಿಧಿತ್ವವು ದಾವಣಗೆರೆ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಚಿವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಯಕೊಂಡ ಕ್ಷೇತ್ರದ ಜನರು ಸಚಿವ ಸ್ಥಾನವನ್ನು ಕೇವಲ ರಾಜಕೀಯ ಸಾಧನೆಯಾಗಿ ನೋಡದೇ, ಅಭಿವೃದ್ಧಿಯ ಹೊಸ ಅಧ್ಯಾಯದ ಆರಂಭವಾಗಿ ಪರಿಗಣಿಸುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.
ಕೆ.ಎಸ್. ಬಸವಂತಪ್ಪ ಅವರ ಸಚಿವ ಸ್ಥಾನವು ಮಾಯಕೊಂಡ ಕ್ಷೇತ್ರ ಹಾಗೂ ದಾವಣಗೆರೆ ಜಿಲ್ಲೆಗೆ ಹೊಸ ಅವಕಾಶಗಳನ್ನು ತೆರೆದಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಎಲ್ಲ ವಲಯಗಳಲ್ಲೂ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅವರ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಜಿಲ್ಲೆಯ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿವೆ ಎಂಬ ಅಭಿಪ್ರಾಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.
ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ2 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ17 minutes agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

