Connect with us

ದಿನದ ಸುದ್ದಿ

ಬಡವರ ಮನೆ ಮಕ್ಕಳ ಕೊಲೆಗಳಾಗಲಿ ಎಂದು ಬಿಜೆಪಿ ಬಯಸುತ್ತದೆ : ಹೆಚ್.ಡಿ.ಕುಮಾರಸ್ವಾಮಿ

Published

on

ಸುದ್ದಿದಿನ,ಮೈಸೂರು: ಮತ ಕ್ರೋಢೀಕರಣಕ್ಕಾಗಿ ಪ್ರವೀಣ್ ನೆಟ್ಟಾರು ಅವರಂಥ ಬಡವರ ಮನೆ ಮಕ್ಕಳ ಮತ್ತಷ್ಟು ಕೊಲೆಗಳಾಗಲಿ ಎಂದು ಬಿಜೆಪಿ ಬಯಸುತ್ತದೆ. ಹಿಂದುತ್ವದ ಕಾರ್ಡ್ ಮೇಲೆ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಹವಣಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಮಾಧ್ಯಮಗಳ ಜತೆ ಮಾತನಾಡಿದ ಅವರು,‌ಈ ಎರಡು ಬಾರಿ ಆಪರೇಷನ್ ಕಮಲವೆಂಬ ಅನೈತಿಕ ಮಾರ್ಗದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮುಂದೆ, ನಡುರಸ್ತೆಗಳಲ್ಲಿ ಅಮಾಯಕರ ನೆತ್ತರು ಹರಿಸಿ ಪಾಪದ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಹೊಂಚು ಹಾಕಿದೆ ಎಂದರು.

ಹಿಂದೂ ಯುವಕರ ಸಾವುಗಳಾದರೆ ರಾಜಕೀಯ ಫಸಲು ಚೆನ್ನಾಗಿ ಬರುತ್ತದೆ ಎಂದು ಬಿಜೆಪಿ ನಂಬಿದೆ. ಮತ ಕ್ರೋಢೀಕರಣಕ್ಕಾಗಿ ಪ್ರವೀಣ್ ರೀತಿಯ ಮತ್ತಷ್ಟು ಕೊಲೆಗಳಾಗಲಿ ಎಂದು ಬಿಜೆಪಿ ಬಯಸುತ್ತದೆ. ಹಿಂದುತ್ವವೇ ಅದಕ್ಕೆ ಮತ ಗಳಿಸುವವ ಮಾರ್ಗ. ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲು ಬಿಜೆಪಿಗೆ ಯೋಗ್ಯತೆ ಇಲ್ಲ. ಹೆಚ್ಚೆಚ್ಚು ಯುವಕರ ಕೊಲೆಗಳು ನಡೆದಷ್ಟೂ ಅವರಿಗೆ ಅನುಕೂಲ. ಆದ್ದರಿಂದಲೇ ಕೊಲೆಯಾದಾಗ ಬಿಜೆಪಿ ನಾಯಕರು ʼಕೃತಕ ಸಂತಾಪʼ ಸೂಚಿಸುತ್ತಾರೆ. ಸಾವಿನ ಮನೆಗಳ ಮುಂದೆ ಪರೇಡ್ ಮಾಡುತ್ತಾರೆ. ಆ ಯುವಕನ ತಾಯಿ ರೋದನೆ ನೋಡಿ ನೋವಾಗಿದೆ ಎಂದು ಸಿಎಂ ಹೇಳಿದ್ದಾರೆ. ವಾರದ ಹಿಂದೆಯೇ ಎಚ್ಚೆತ್ತುಕೊಂಡಿದ್ದಿದ್ದರೆ ಅವರಿಗೆ ಆ ತಾಯಿಯ ರೋದನೆ ತಪ್ಪಿಸಲು ಸಾಧ್ಯವಿತ್ತು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಉತ್ತರ ಪ್ರದೇಶದಲ್ಲಿಯೂ ಇದೇ ರೀತಿ ನರಮೇಧ ನಡೆಸಿ ಬಿಜೆಪಿ ಅಧಿಕಾರಕ್ಕೆ ಬಂತು. ಮುಜಾಫರ್ ನಗರದಲ್ಲಿ ದೊಡ್ಡ ಹಿಂಸಾಕಾಂಡವೇ ನಡೆಯಿತು. ನೂರಾರು ಕುಟುಂಬಗಳು ಬೀದಿಗೆ ಬಿದ್ದವು. ಹೋಗಲಿ, ಆ ಹಿಂಸಾಚಾಋ ಯಾಕೆ ನಡೆಯಿತು ಎಂಬ ಬಗ್ಗೆ ತನಿಖೆಯಾದರೂ ನಡೆಯಿತಾ? ಅದರ ಹಿಂದೆ ಯಾರಿದ್ದರು? ಸತ್ಯ ಹೊರಗೆ ಬಂತಾ? ಇಲ್ಲ. ಆದರೆ, ಬಣ್ಣ ಬಣ್ಣದ ಜಾಹೀರಾತುಗಳಿಂದ ಜನರಿಗೆ ಮಂಕುಬೂದಿ ಎರಚುತ್ತಿದೆ ಎಂದು ಅವರು ಹೇಳಿದರು.

ನಾನು ಕೂಡ ಎರಡು ಸಲ ರಾಜ್ಯದ ಮುಖ್ಯಮಂತ್ರಿ ಆಗಿದ್ದೆ. ಒಮ್ಮೆಯೇ ಇಂಥ ಕೊಲೆ ಆಯಿತಾ? ಯಾವುದೇ ಪಕ್ಷದ ಕಾರ್ಯಕರ್ತನ ಪ್ರಾಣ ಹೋಯಿತಾ? ಸಾವಿನ ಮನೆಯಲ್ಲಿ ಸಂಭ್ರಮ ಮಾಡುವ ಕೆಲಸ ನಾನು ಮಾಡಲಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈ ಹಿಂಸಾಕಾಂಡವನ್ನು ಹತ್ತಿಕ್ಕಲು ಕೂಡಲೇ ಸರಕಾರ ಮುಂದಾಗಬೇಕು. ಸರ್ವಧರ್ಮ ಗುರುಗಳ ಸಭೆಯನ್ನು ಕರೆದು ಅವರ ಮಾರ್ಗದರ್ಶನದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಾಲ್ಕೈದು ತಿಂಗಳ ಹಿಂದೆಯೇ ನಾನು ಈ ಬಗ್ಗೆ ಹೇಳಿದ್ದೆ. ಆದರೆ ಸರಕಾರಕ್ಕೆ ಶಾಂತಿ ನೆಲೆಸುವುದು ಬೇಕಿಲ್ಲ ಎಂದು ಅವರು ಕಿಡಿಕಾರಿದರು.

ತೇಜಸ್ವಿ ಸೂರ್ಯ ಕೊಡುಗೆ ಏನು?

ಪ್ರತಿಯೊಬ್ಬರಿಗೂ ಗನ್‌ ಮ್ಯಾನ್ ನೀಡಲು ಸಾಧ್ಯವೇ ಎಂದು ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ ಅವರು, ಬೆಂಗಳೂರು ನಗರಕ್ಕೆ ಹಾಗೂ ರಾಜ್ಯಕ್ಕೆ ತೇಜಸ್ವಿ ಸೂರ್ಯ ಅವರ ಕೊಡುಗೆ ಏನು ಎಂಬುದು ಗೊತ್ತಿಲ್ಲ. ಜನರು ಅಂಥವರಿಗೆ ಮತ ಕೊಟ್ಟು ಗೆಲ್ಲಿಸಿ ಅಂಥವರಿಂದ ಇಂಥ ಮಾತುಗಳನ್ನು ಕೇಳಬೇಕಾಗಿ ಬಂದಿದೆ. ಜನರಿಗೆ ಇದೆಲ್ಲವನ್ನು ಸಹಿಸಿಕೊಳ್ಳದೇ ಬೇರೆ ವಿಧಿ ಇಲ್ಲ. ಇಲ್ಲಿ ಯಾರಿಗೂ ಗನ್ʼಮ್ಯಾನ್ ಬೇಕಿಲ್ಲ. ಆದರೆ ನೆಮ್ಮದಿಯಾಗಿ ಬದುಕಲು ನೆಮ್ಮದಿಯ ವಾತಾವರಣ ಬೇಕಷ್ಟೇ. ಸರಕಾರ ಅಷ್ಟು ಮಾಡಿದರೆ ಸಾಕು ಎಂದರು.

ವರ್ಗಾವಣೆಗೂ ಪೇಮೆಂಟ್ ಕೋಟಾ:

ಅಧಿಕಾರಿಗಳ ವರ್ಗಾವರ್ಗಿಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ ಎಂದು ದೂರಿದ ಮಾಜಿ ಮುಖ್ಯಮಂತ್ರಿಗಳು; ಒಬ್ಬ ಸರ್ಕಲ್ ಇನ್ಸ್ಪೆಕ್ಟರ್ 75 ಲಕ್ಷದಿಂದ 1 ಕೋಟಿ ರೂ.ವರೆಗೂ ಲಂಚ ನೀಡಿ ಹುದ್ದೆಗೆ ಬರುತ್ತಾರೆ. ಹಾಗೆ ಬರುವ ಅಧಿಕಾರಿಯಿಂದ ಉತ್ತಮ ಕರ್ತವ್ಯ ನಿರ್ವಹಣೆ ನಿರೀಕ್ಷಿಸಲು ಸಾಧ್ಯವೇ? ನೀವು ಸರಿಯಾಗಿ ಆಡಳಿತ ಮಾಡಿದ್ದರೆ ಯಾಕೆ ಸಾವುಗಳು ಸಂಭವಿಸುತ್ತಿದ್ದವು? ಎಂದು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ʼಹಣಕ್ಕಾಗಿ ಹುದ್ದೆʼ ಎನ್ನುವುದು ಇರಲಿಲ್ಲ. ನನ್ನ ಸರಕಾರ ತೆಗೆದು ಬಿಜೆಪಿ ಸರಕಾರ ಬಂದ ಕೂಡಲೇ ಆ ಪರಿಕಲ್ಪನೆ ಹುಟ್ಟಿಕೊಂಡಿತು. ಯಲಹಂಕದ ತಹಸೀಲ್ದಾರ್ ಹುದ್ದೆ ಪೋಸ್ಟಿಂಗ್ ಕೇಳಿಕೊಂಡು ಒಬ್ಬ ಅಧಿಕಾರಿ 1.5 ಕೋಟಿ ರೂ. ಆಫರ್ ಕೊಟ್ಟಿದ್ದ. ಆಮೇಲೆ ಬಿಡಿಎ ಆಯುಕ್ತರಾಗಲು ಅಧಿಕಾರಿ ಮಹಾಶಯನೊಬ್ಬ 15 ಕೋಟಿ ರೂ. ಆಮಿಷ ಒಡ್ಡಿದ್ದರು. ಅವರೆಲ್ಲರಿಗೂ ಚಳಿ ಬಿಡಿಸಿ ಕಳಿಸಿದ್ದೆ. ಆಮೇಲೆ ಯಡಿಯೂರಪ್ಪ ಮುಖ್ಯಮಂತ್ರಿ ಬಂದ ಕೂಡಲೇ ಅಧಿಕಾರಿಗಳಿಬ್ಬರು ಅದೇ ಜಾಗಳಲ್ಲಿ ಬಂದು ಕೂತಿದ್ದರು ಎಂದು ಮಾಹಿತಿ ಬಿಚ್ಚಿಟ್ಟರು ಕುಮಾರಸ್ವಾಮಿ ಅವರು.

ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಅಶ್ವಿನ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ : ಜಿಲ್ಲಾ ಸಮಿತಿ ಸದಸ್ಯತ್ವಕ್ಕೆ ನೇಮಕ ಮಾಡಲು ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕ್ಯುಲರ್ ಡಿಸ್ಟ್ರೋಫಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಕ್ಲೆರೋಸಿಸ್ (Crebral Palsy, Muscular Dystrophy, Parkinson’s and Multiple Sclerosis) ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಮಾಹೆಯಾನ ರೂ.1000/-ಗಳ
ಪ್ರ್ರೋತ್ಸಾಹಧನವನ್ನು ನೀಡುವ ಯೋಜನೆಯಡಿ ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಒಂದು ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಯನ್ನು ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲು ನವಂಬರ್ 21 ರೊಳಗಾಗಿ ಕಚೇರಿಗೆ ಮನವಿ ಸಲ್ಲಿಸಬಹುದು.

ಜಿಲ್ಲಾ ಸಮಿತಿಯ ಸದಸ್ಯತ್ವಕ್ಕೆ ಕನಿಷ್ಠ ಎರಡು ವರ್ಷಕ್ಕೂ ಹೆಚ್ಚು ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರಬೇಕು, ಸಂಸ್ಥೆಯು ಪಿಡಬ್ಲ್ಯೂಡಿ ಆಕ್ಟ್-2016 ರನ್ವಯ ನೋಂದಣಿಯಾಗಿರಬೇಕು. ಸೆರೆಬ್ರಲ್ ಪಾಲ್ಸಿ, ಮಸ್ಕ್ಯುಲರ್ ಡಿಸ್ಟ್ರೋಫಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಕ್ಲೆರೋಸಿಸ್ ಈ ಅಂಗವಿಕಲತೆಗಳ ಸೇವೆ ಸಲ್ಲಿಸಿದ ಬಗ್ಗೆ ದಾಖಲೆ ಸಲ್ಲಿಸುವುದು. ಪ್ರಸಕ್ತ ಸಾಲಿಗೆ ಸದರಿ ಯೋಜನೆಯ ಜಿಲ್ಲಾ ಸಮಿತಿಯ ಸದಸ್ಯರನ್ನು ನೇಮಿಸಿಕೊಳ್ಳಲಾಗುವುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಾ.ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ತೋಟಗಾರಿಕೆ ಇಲಾಖೆಯಿಂದ ಹೊನ್ನಾಳಿ ಮತ್ತು ನ್ಯಾಮತಿ ಗ್ರಾಮ ಪಂಚಾಯಿತಿಯಲ್ಲಿ 2025-26ನೇ ಸಾಲಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು ಪಹಣಿ, ಆಧಾರ್, ಉದ್ಯೋಗ ಚೀಟಿ, ಸಣ್ಣ, ಅತಿಸಣ್ಣ, ರೈತರ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೊನ್ನಾಳಿ ಅಥವಾ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಬ್ಬಳ ಗ್ರಾಮದ ಮಹಿಳೆ ನಾಪತ್ತೆ

Published

on

ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಬಸವಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯ ಕಬ್ಬಳ ಗ್ರಾಮದ ಮೇಘ.ಟಿ 29 ವರ್ಷ, ಇವರು ಕಳೆದ ಮೇ 1 ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ತನ್ನ ಗಂಡನ ಮನೆ ಇರುವ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಗಂಡನ ಮನೆಗೆ ಹೋಗದೇ, ತವರು ಮನೆಗೂ ವಾಪಾಸ್ ಬಂದಿರುವುದಿಲ್ಲ.

ಚಹರೆ ವಿವರ. 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಹೊಂದಿರುತ್ತಾರೆ, ಹೋಗುವಾಗ ನೀಲಿ ಬಣ್ಣದ ಟಾಪ್ ಕಪ್ಪು ಬಣ್ಣದ ಲೆಗ್ಗಿನ್ಸ್ ಧರಿಸಿರುತ್ತಾರೆ. ಕನ್ನಡ ಮತ್ತು ತೆಲುಗು ಮಾತಾನಾಡುತ್ತಾಳೆ, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಬಸವಾಪಟ್ಟಣ ಪೊಲೀಸ್ ಠಾಣೆ ಪಿಎಸ್‍ಐ ದೂ.ಸಂ: 9480803260 ಸಂಖ್ಯೆಗೆ ಮಾಹಿತಿ ನೀಡಲು ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending