ರಾಜಕೀಯ
ಮಾತು, ಮೌನ ಮತ್ತು ಮಿಥ್ಯಾವಾಸ್ತವ
ಈಗ ಮಾತುಗಳದ್ದೇ ಆರ್ಭಟ. ಮಾತು, ಪ್ರತಿಮಾತು, ದಿಢೀರನೆ ಪ್ರತಿಕ್ರಿಯಿಸಿಬಿಡುವ ಸಿಟ್ಟು-ಸೆಡವಿನ ಪ್ರವೃತ್ತಿಗಳ ವಿಜೃಂಭಣೆ. ನಾಯಕರೆನ್ನಿಸಿಕೊಂಡು ಜನಪ್ರಿಯಗೊಂಡವರ ವಿರುದ್ಧ ಯಾರೂ ಉಸಿರೆತ್ತುವ ಹಾಗಿಲ್ಲ. ಆರಾಧನೆಯ ಗುಂಗಿನೊಳಗೆ ಪ್ರಶ್ನಿಸಿದವರನ್ನು ಸುಮ್ಮನಾಗಿಸಿಬಿಡುವ ಜಾಯಮಾನಗಳದ್ದೇ ಪ್ರಭಾವಳಿ. ಅನುಭವಕ್ಕೆ ಬಂದ ಮತ್ತು ಕಣ್ಣಮುಂದಿನ ವಾಸ್ತವಗಳನ್ನು ನೋಡಿಯೂ ನೋಡದಂತಿದ್ದು ಎಲ್ಲರ ಹಾಗೆ ಹೊಗಳುವ ಮನೋವೃತ್ತಿಯನ್ನು ಒತ್ತಾಯಪೂರ್ವಕವಾಗಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ. ಇಂಥದ್ದೊಂದು ವಾತಾವರಣವನ್ನೇ ಸಮಕಾಲೀನ ರಾಜಕಾರಣ ನಿರೀಕ್ಷಿಸುತ್ತಿದೆ. ಮಾತು ಮತ್ತು ಮೌನಗಳ ಚಾಣಾಕ್ಷಯುತ ನಿರ್ವಹಣೆಯ ಮೂಲಕ ಅದು ಹೊಸ ಪೀಳಿಗೆಯ ಯೋಚಿಸುವ ಶಕ್ತಿಯನ್ನು ಕೊಂದುಬಿಟ್ಟಿದೆ. ಅಧಿಕಾರರೂಢ ಮತ್ತು ವಿರೋಧ ಪಕ್ಷಗಳು ಯಾವುದು ವಾಸ್ತವವಲ್ಲವೋ ಅದನ್ನು ಸೃಷ್ಟಿಸಿ ಸಮ್ಮತಿಯನ್ನು ಉತ್ಪಾದಿಸಿಕೊಳ್ಳುತ್ತಿವೆ. ವಾಸ್ತವವನ್ನು ಮುಚ್ಚಿಟ್ಟು ಭಾವುಕ ಸಂಗತಿಗಳ ದಾಳಗಳನ್ನು ಎಸೆದು ಪ್ರಜಾಪ್ರಭುತ್ವದ ಅಖಾಡದ ಸಂವೈಧಾನಿಕ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿವೆ.
ಈಗ ನಮಗೆ ಎಂಥ ರಾಜಕಾರಣ ಬೇಕಾಗಿದೆ ಎಂದರೆ ನಮ್ಮ ಬದುಕು ಅದರಿಂದ ಉದ್ಧರಿಸಲ್ಪಡುವಂತಿರಬೇಕು. ಈ ನಮ್ಮ ಬದುಕಿನ ವ್ಯಾಪ್ತಿಯೊಳಗೆ ಎಲ್ಲ ಧರ್ಮಗಳವರೂ ಇರಬೇಕು. ಎಲ್ಲ ಜಾತಿಗಳವರೂ ಇರಬೇಕು. ಅವರವರ ನಂಬಿಕೆಗಳ ಭಾವಜಗತ್ತನ್ನು ಮತ್ತಷ್ಟು ಉದಾತ್ತಗೊಳಿಸುವ ಪ್ರಯತ್ನಗಳಿಗೆ ಅಲ್ಲಿ ಅವಕಾಶವಿರಬೇಕು. ಆ ಮೂಲಕ ಹೊಸ ವಿಶ್ವಾಸಾರ್ಹತೆ ಮೂಡಬೇಕು. ಅಪನಂಬಿಕೆ ಮತ್ತು ಮೂಢನಂಬಿಕೆಗಳ ಜಾಡ್ಯಗಳನ್ನು ತೊರೆಯುವ ಹೃದಯವೈಶಾಲ್ಯತೆ ನೆಲೆಗೊಳ್ಳಬೇಕು. ಹಾಗಾಗುವ ಹಾಗೆ ರಾಜಕಾರಣವು ನಾಯಕತ್ವವನ್ನು ಚಿಗುರಿಸಬೇಕು. ಮಾತಿನ ಭಾಷಿಕ ಅಬ್ಬರದ ಬದಲು ಮಿತಭಾಷಿಕ ಸೌಜನ್ಯವನ್ನು ಸೃಷ್ಟಿಸಬೇಕು.
ಘಾಸಿಗೊಳ್ಳುತ್ತಿರುವ ಆಯ್ಕೆ ಹಕ್ಕು
ಹಾಗೆ ಆಗುತ್ತಿಲ್ಲ. ಸ್ವಾತಂತ್ರ್ಯಾನಂತರ ಹಲವು ದಶಕಗಳಾದರೂ ಭಾರತದ ಕನಸುಗಳ್ಯಾವುವೂ ಸಾಕಾರಗೊಳ್ಳಲಿಲ್ಲ ಮತ್ತು ಅಧಿಕಾರದಲ್ಲಿದ್ದ ಹಿಂದಿನವರು ಉದ್ದೇಶಪೂರ್ವಕವಾಗಿ ಆ ಕನಸುಗಳನ್ನು ಸಾಕಾರಗೊಳಿಸುವುದರ ಕಡೆಗೆ ಗಮನಹರಿಸಲಿಲ್ಲ ಎಂಬ ಕೊರಗುಗಳನ್ನು ಮುಂದಿಡುತ್ತಲೇ ತಮ್ಮ ಪರವಾದ ಅಲೆಯನ್ನು ಸೃಷ್ಟಿಸಿಕೊಂಡ ರಾಜಕೀಯ ಪಡೆಗಳು ಅಧಿಕಾರಕ್ಕೆ ಬಂದ ತಕ್ಷಣ ಮತ್ತದೇ ಸ್ಥಗಿತತೆಯ ಜಾಡ್ಯವನ್ನೇ ಪರಮಲಕ್ಷಣವಾಗಿಸಿಕೊಂಡಿವೆ. ಯಾವುದನ್ನು ವಿರೋಧಿಸಿ ಅಧಿಕಾರಕ್ಕೆ ಬರುತ್ತಾರೋ ಅವರೇ ತಾವು ಹಿಂದೆ ವಿರೋಧಿಸಿದ್ದ ನಡೆಯನ್ನೇ ಮರುಪ್ರತಿಷ್ಠಾಪಿಸಿಕೊಳ್ಳುವುದು ರಾಜಕಾರಣಿ, ರಾಜಕೀಯ ಪಕ್ಷಗಳ ಅಲಿಖಿತ ಕಡ್ಡಾಯ ನಿಯಮವಾಗಿಬಿಟ್ಟಿದೆಯೇನೋ ಎಂದು ಭಾಸವಾಗುತ್ತಿದೆ. ಈ ವಿಚಿತ್ರ ನಡೆಗಳು ಭಾರತದ ಪ್ರಜೆಗಳ ಆಯ್ಕೆಯ ಹಕ್ಕನ್ನು ಘಾಸಿಗೊಳಿಸಿವೆ.
ನಿರ್ಲಿಪ್ತ ಭಾವ
ಅಧಿಕಾರದಲ್ಲಿದ್ದವರನ್ನು ಪ್ರಶ್ನಿಸಬೇಕು ಎಂಬ ಮನೋಭಾವವು ವಿರೋಧ ಪಕ್ಷಗಳಿಂದ ಪ್ರಚೋದಿತವಾಗಬೇಕಿಲ್ಲ. ಮಾಧ್ಯಮಗಳ ವಿಶ್ಲೇಷಣೆಗಳನ್ನೇ ನೆಚ್ಚಿಕೊಂಡು ಪ್ರಶ್ನಿಸುವ ಅಗತ್ಯವಿಲ್ಲ. ಈ ದೇಶದ ಸಂವಿಧಾನ ಒದಗಿಸಿರುವ ಪ್ರಶ್ನಿಸುವ ಅವಕಾಶವನ್ನು ಬಳಸಿಕೊಳ್ಳುವ ವಿವೇಕ ನಮ್ಮೆಲ್ಲರದ್ದಾಗಿರಬೇಕು. ಈ ವಿವೇಕವನ್ನು ಪ್ರಖರಗೊಳಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಗಮನಾರ್ಹ ಪಾತ್ರನಿರ್ವಹಿಸಬೇಕು. ಪ್ರಶ್ನೆ ಕೇಳುವ ಸಾಧ್ಯತೆಗಳನ್ನು ವರ್ತಮಾನದ ರಾಜಕಾರಣ ಹೇಗೆ ಮೊಟಕುಗೊಳಿಸುತ್ತಿದೆ ಎಂದರೆ ಕಣ್ಣಮುಂದೆ ಎಷ್ಟೆಲ್ಲಾ ಊನಗಳಿದ್ದರೂ, ಸ್ವತಃ ವ್ಯವಸ್ಥೆಯ ಲೋಪಗಳ ಕಾರಣಕ್ಕಾಗಿಯೇ ನೋವು ಅನುಭವಿಸಿದರೂ ಅವುಗಳ ಬಗ್ಗೆ ಮಾತನಾಡಬಾರದು ಎಂಬ ನಿರ್ಲಿಪ್ತ ಭಾವವನ್ನೇ ನೆಚ್ಚಿಕೊಳ್ಳುವಂತೆ ಒತ್ತಡಗಳು ಸೃಷ್ಟಿಯಾಗುತ್ತಿವೆ.
ಪ್ರತಿಮೆಯ ನೆಗೆತ!
ಅಧಿಕಾರಕ್ಕೆ ಹತ್ತಿರವಾಗುವ ರಹಸ್ಯ ಕಾರ್ಯಸೂಚಿಯೊಂದಿಗೆ ರಾಜಕೀಯ ಪಡೆಗಳು ಇತಿಹಾಸದ ಮೌಲಿಕ ಸಂಸ್ಥೆಯನ್ನು ತಮ್ಮ ಹತಾರೆಗಳೊಂದಿಗೆ ಈಗಾಗಲೇ ಪ್ರವೇಶಿಸಿಬಿಟ್ಟಿವೆ. ಈಗಾಗಲೇ ಆಗಿಹೋದ ಸಂಗತಿಯೊಂದರ ವಿವರವನ್ನು ತಮ್ಮ ಉದ್ದೇಶಕ್ಕೆ ತಿರುಗಿಸಿಕೊಳ್ಳುವ ಚಾಣಾಕ್ಷ ನಡೆಗಳೊಂದಿಗೆ ಅವು ಯಶಸ್ಸು ಸಾಧಿಸುತ್ತಿವೆ. ಈಗಾಗಲೇ ಆಗಿಹೋದವರನ್ನು ಟೀಕಿಸುವ ಹುಮ್ಮಸ್ಸಿನಲ್ಲಿ ಸದ್ಯಕ್ಕೆ ಸರಿಯಾದ ಹಾದಿ ತೋರಿಸುವ ಆದರ್ಶದ ಐತಿಹಾಸಿಕ ಪರಂಪರೆಯ ಮೌಲಿಕತೆಯನ್ನು ಉದ್ದೇಶಪೂರ್ವಕವಾಗಿ ಹಿನ್ನೆಲೆಗೆ ಸರಿಸಲಾಗುತ್ತಿದೆ. ಈ ಹಿಂದಿನವರು ವಿಜೃಂಭಿಸಿದ ಪ್ರತಿಮಾ ರಾಜಕಾರಣವು ಇದೀಗ ಹೊಸದೊಂದು ನೆಗೆತ ನೆಗೆದಿದೆ ಅಷ್ಟೇ. ಯಾರ ಆದರ್ಶಗಳನ್ನು ನಾವು ಬದುಕಿನೊಳಗೆ ಅಳವಡಿಸಿಕೊಳ್ಳುತ್ತಾ ಸಾಗುವ ಬದಲು ಅವುಗಳನ್ನು ನಾಮ್‍ಕೇವಾಸ್ತೆ ಎಂಬಂತೆ ನೆನಪಿಸಿಕೊಳ್ಳುತ್ತಾ ಅವರ ಮೂರ್ತಿಗಳನ್ನು ಆರಾಧಿಸಿದೆವು. ಹಾಗೆ ಆರಾಧಿಸುವ ಹಾಗೆ ನಮ್ಮ ಮೇಲೆ ಭಾವುಕ ಪ್ರಭಾವವನ್ನು ಬೀರಲಾಯಿತು. ಈಗ ಆ ತರಹದ ಪ್ರಭಾವ ದಟ್ಟವಾಗಿ ಪ್ರತಿಮಾ ರಾಜಕಾರಣ ಹೊಸದೊಂದು ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವುದರ ಕಡೆಗೆ ಕಾರ್ಯೋನ್ಮುಖವಾಗಿದೆ.
ಇತಿಹಾಸ ತಿರುಚುವ ರೋಚಕ ಶೈಲಿ
ಇತಿಹಾಸವನ್ನು ಜನಪ್ರಿಯ ಶೈಲಿಯಲ್ಲಿ ತಿರುಚುವ ನಕಾರಾತ್ಮಕ ಶೈಲಿಯು ಒಂದು ಟ್ರೆಂಡ್‍ನ ರೂಪದಲ್ಲಿ ಇದೀಗ ಅಸ್ತಿತ್ವದಲ್ಲಿದೆ. ಈಗಾಗಲೇ ಆಗಿಹೋದ ಇತಿಹಾಸದಲ್ಲಿ ನಾವು ನಿಖರ ವಿವರಗಳ ಆಧಾರದಲ್ಲಿ ಮಹತ್ವದ ವ್ಯಕ್ತಿತ್ವಗಳ ಕೊಡುಗೆಗಳನ್ನು ಗ್ರಹಿಸಿಕೊಂಡಿರುತ್ತೇವೆ. ಆ ಕೊಡುಗೆಗಳು ವರ್ತಮಾನ ಮತ್ತು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ರೀತಿಯಲ್ಲಿಯೇ ಚರ್ಚಿತವಾಗಬೇಕು ಎಂಬ ಎಚ್ಚರವನ್ನೂ ಇದೇ ಇತಿಹಾಸದ ವಿವೇಚನಾತ್ಮಕ ವಿಶ್ಲೇಷಣೆಗಳು ನಮ್ಮೊಳಗೆ ನೆಲೆಗೊಳಿಸಿರುತ್ತವೆ. ರಾಜಕೀಯ ಪಡೆಗಳ ಕಾರ್ಯಸೂಚಿಗಳು ಈ ವಿವೇಚನಾತ್ಮಕ ಎಚ್ಚರದ ಪ್ರಜ್ಞೆಯನ್ನು ಒಡೆದುಬಿಡುತ್ತವೆ. ಇಲ್ಲಿಯವರೆಗೆ ಸರಿಯಾಗಿ ಗ್ರಹಿಸಿದವರ ತಲೆಮಾರಿನ ಪ್ರಜ್ಞೆಯನ್ನು ಛಿದ್ರಗೊಳಿಸಿದ್ದಲ್ಲದೇ ಹೊಸ ಪೀಳಿಗೆಯೊಳಗೂ ಅನುಮಾನಗಳನ್ನು ಬಿತ್ತಿ ಅಧಿಕಾರದ ಗಮ್ಯವನ್ನು ತಲುಪಿಕೊಳ್ಳುವ ಹುನ್ನಾರಗಳು ತೀವ್ರಗೊಳ್ಳುವ ಹಾಗೆಯೇ ಈ ಒಡೆಯುವಿಕೆಯು ಅಗಾಧವಾಗಿರುತ್ತದೆ. ಅಹಿಂಸೆಯಿಂದಲಷ್ಟೇ ಸ್ವಾತಂತ್ರ್ಯ ಹೋರಾಟಕ್ಕೆ ಯಶಸ್ಸು ದಕ್ಕಲಿಲ್ಲ, ಗಾಂಧೀಜಿಯೊಬ್ಬರಿಂದಲೇ ಎಲ್ಲವೂ ಆಗಲಿಲ್ಲ, ಹಿಂಸೆಗೆ ಪ್ರಚೋದನೆ ನೀಡಿದವರು ಇಲ್ಲದಿದ್ದರೆ ಸ್ವಾತಂತ್ರ್ಯ ದಕ್ಕುತ್ತಿರಲಿಲ್ಲ, ಸಂವಿಧಾನವನ್ನು ಈ ದೇಶದ ಆಚಾರ-ವಿಚಾರಗಳಿಗೆ ಅನುಗುಣವಾಗಿ ಬದಲಿಸಬೇಕು, ಅದರಲ್ಲಿ ಅನೇಕ ಸಮಸ್ಯೆಗಳಿವೆ, ಇಂಥವರ ಬದಲು ಇಂಥವರು ಪ್ರಧಾನಿಯಾಗಿದ್ದಿದ್ದರೆ ಈ ದೇಶದ ಚಿತ್ರಣವೇ ಬದಲಾಗಿಬಿಟ್ಟಿರುತ್ತಿತ್ತು… – ಹೀಗೆ ವಿವಿಧ ರೀತಿಗಳಲ್ಲಿ ತರಹೇವಾರಿ ವಿತಂಡವಾದಿ ದೃಷ್ಟಿಕೋನಗಳನ್ನು ಹರಿಬಿಟ್ಟು ಇತಿಹಾಸದ ಸಾಂಸ್ಥಿಕ ಮೌಲ್ಯಕ್ಕೆ ಧಕ್ಕೆಯುಂಟುಮಾಡಲಾಗುತ್ತಿದೆ.
ಭಾವುಕ ಸರೋವರಕ್ಕೆ ವಿಷ ಬೆರೆಕೆ
ಒಂದು ಕಡೆಗೆ ದೇವರು, ಧರ್ಮ, ನಂಬಿಕೆಗಳ ಕುರಿತ ಜಿಜ್ಞಾಸೆ. ಮತ್ತೊಂದು ಕಡೆಗೆ ಯಾತನೆಗಳೊಂದಿಗೇ ಬದುಕು ದೂಡುವ ಅನಿವಾರ್ಯತೆ ಎದುರಿಸುತ್ತಿರುವ ಜನರು. ಸಮಸ್ಯೆಗಳನ್ನು ನಿವಾರಿಸುವ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದ್ದ ಅಧಿಕಾರರೂಢ ಆಡಳಿತಾತ್ಮಕ ವ್ಯವಸ್ಥೆಯು ತನ್ನ ಪಾಡಿಗೆ ತಾನಿರುತ್ತಾ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತಾ ಸಹನಶೀಲತೆಯು ಭಾರತೀಯ ಪರಂಪರೆಯ ಬಹುದೊಡ್ಡ ಹೆಮ್ಮೆ ಎಂಬುದನ್ನೇ ಮುನ್ನೆಲೆಗೆ ತರುತ್ತದೆ. ಬದಲಾವಣೆಗೆ ಕಾಯಬೇಕು, ಸಮಸ್ಯೆಗಳಿದ್ದರೆ ಸಹಿಸಿಕೊಳ್ಳಬೇಕು, ಒಂದಲ್ಲ ಒಂದು ದಿವಸ ಅವು ಪರಿಹಾರ ಕಾಣುತ್ತವೆ, ಅದಕ್ಕಾಗಿಯೇ ನಾವು ಶ್ರಮಿಸುತ್ತಿರುವುದು ಎಂದು ಅಧಿಕಾರರೂಢ ರಾಜಕಾರಣ ನಂಬಿಸುತ್ತದೆ. ಪ್ರಶ್ನೆಗಳು, ಪ್ರತಿರೋಧದ ಅಲೆ ಶುರುವಾಗುತ್ತಿದ್ದಂತೆ ದೇವರು, ಧರ್ಮ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಭಾವುಕ ಸಂಗತಿಗಳ ಸರೋವರಕ್ಕೆ ಕಲ್ಲೆಸೆದು ವೈರುಧ್ಯದ ಅಲೆಗಳನ್ನೇಳಿಸಿಬಿಡುತ್ತದೆ.ಶುದ್ಧ ತಿಳಿವಿನ ತಿಳಿನೀರಿನೊಳಗೆ ಧರ್ಮ, ಜಾತಿ, ಲಿಂಗ ಬೇಧದ ವಿವಾದದ ವಿಷವನ್ನು ಬೆರೆಸಿ ರಾಡಿ ಎಬ್ಬಿಸಿಬಿಡುತ್ತದೆ.
ಸ್ವಯಂದ್ವಂದ್ವಗಳ ಒದ್ದಾಟ
ಇದಾವುದರ ಅರಿವಿಲ್ಲದ ಮುಗ್ಧ ಜನರು ದೇವರೇ ಅವತಾರವೆತ್ತಿ ಮುಂದೊಂದು ದಿನ ತಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಅಂದುಕೊಳ್ಳುತ್ತಾ, ತಮ್ಮ ಬದುಕನ್ನು ಉದ್ಧರಿಸಿಕೊಳ್ಳುವ ಸಂವಿಧಾನಾತ್ಮಕ ಅವಕಾಶಗಳನ್ನು ನಿರಾಕರಿಸುತ್ತಾ ಅದೇ ರಾಡಿಯೊಳಗೇ ಸಿಲುಕಿ ಹೊರಬರಲಾಗದೇ ಒದ್ದಾಡುತ್ತಿರುತ್ತಾರೆ. ದೇವಾಲಯ ಪ್ರವೇಶಿಸಬೇಕೇ? ಬೇಡವೇ? ಪ್ರವೇಶಿಸದಿದ್ದರೆ ಏನಾಗುತ್ತದೆ? ಪ್ರವೇಶಿಸಿದರೆ ಏನಾಗುತ್ತದೆ? ದೇವಾಲಯ ಪ್ರವೇಶದ ಮೂಲಕವೇ ಭಾರತದ ಸಮಾನತೆಯ ಕನಸು ಸಾಕಾರಗೊಳ್ಳುವ ಮೊದಲ ಹೆಜ್ಜೆ ಶುರುವಾಗಬೇಕು? ಎಂಬ ಪ್ರಶ್ನೆಗಳನ್ನೇ ದೃಷ್ಟಿಯಲ್ಲಿರಿಸಿಕೊಂಡ ಚರ್ಚೆಗಳೇ ಪ್ರಧಾನ ಆದ್ಯತೆ ಪಡೆದುಕೊಂಡುಬಿಡುತ್ತವೆ. ದೇವಾಲಯದೊಳಗೆ ಪ್ರವೇಶ ಸರಿಯೇ ತಪ್ಪೇ? ದೇವಸ್ಥಾನದೊಳಗೆ ಪ್ರವೇಶಿಸಿ ಆಮೇಲೆ ದೇವರು ಕುಪಿತಗೊಂಡರೆ? ಈ ತರಹದ ಸ್ವಯಂದ್ವಂದ್ವಗಳೊಂದಿಗೆ ಜನರು ಒದ್ದಾಡುವ ಹಾಗೆ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂಥ ಒದ್ದಾಟವನ್ನೇ ರಾಜಕಾರಣ ತನ್ನ ಸಂಕುಚಿತ ಇರುವಿಕೆಯನ್ನು ನಿರಂತರವಾಗಿ ಚಾಲ್ತಿಯಲ್ಲಿರಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತದೆ.
ತಿರುಚಿದ ವಿವರಗಳ ವೈಭವ!
ಸರಿಯಾಗಿ ಆಲೋಚಿಸುವ ಮತ್ತು ಸರಿಯಾಗಿ ಆಲೋಚಿಸದ ಎರಡು ಗುಂಪುಗಳಲ್ಲಿ ಚಿಂತಕರು ವಿಭಜಿಸಲ್ಪಡುತ್ತಿದ್ದಾರೆ. ಸರಿಯಾಗಿ ಆಲೋಚಿಸುವ ಗುಂಪಿನೊಳಗೂ ಸರಿಯಾಗಿ ಆಲೋಚಿಸದವರೂ ಇರಬಹುದು. ಅಂಥವರು ಅತ್ಯಂತ ವಿವೇಚನಾಪೂರ್ಣವಾಗಿ ಯೋಚಿಸಿ ಪ್ರತಿಕ್ರಿಯಿಸುವವರು. ಓದಿಕೊಳ್ಳುವ, ತಿಳಿದುಕೊಳ್ಳುವ, ಇತಿಹಾಸಕ್ಕೆ ಅಪಚಾರ ಬಗೆಯದ ಸಂಯಮದ ವ್ಯಕ್ತಿತ್ವಗಳವರು ಅವರು. ಈ ಗುಂಪಿನಲ್ಲಿಯೂ ಸರಿಯಾಗಿ ಆಲೋಚಿಸದವರೂ ಸಿಗಬಹುದು. ಸರಿಯಾಗಿ ಯೋಚಿಸುವ ಮತ್ತು ಯೋಚಿಸದ ಸಮ್ಮಿಶ್ರ ಗುಂಪಿಗೆ ಪ್ರತಿಯಾಗಿ ಮತ್ತೊಂದು ಗುಂಪು ಯೋಚಿಸುವ ಸಹನೆಯನ್ನೇ ಹೊಂದಿರುವುದಿಲ್ಲ. ಯಥಾಸ್ಥಿತಿ ವಾದಗಳನ್ನೇ ಅತ್ಯಂತ ರಂಜನೀಯವಾಗಿ ಬಿಂಬಿಸುವುದರಲ್ಲಿಯೇ ಖುಷಿ ಕಾಣುವವರು ಇವರು. ತಾವೂ ಯೋಚಿಸುವುದಿಲ್ಲ, ಇನ್ನೊಬ್ಬರು ಯೋಚಿಸುವುದಕ್ಕೂ ಬಿಡುವುದಿಲ್ಲ. ಅಂಥ ಕೆಟಗರಿಯವರು. ಇಂಥ ಗುಂಪುಗಳ ವೈರುಧ್ಯಗಳನ್ನೇ ಇವತ್ತಿನ ರಾಜಕಾರಣವು ತನ್ನ ಮೂಗಿನ ನೇರಕ್ಕೆ ಬಳಸಿಕೊಂಡು ಹೊಸಪೀಳಿಗೆಯನ್ನು ದಾರಿ ತಪ್ಪಿಸುವ ತನ್ನ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿದೆ. ಇತಿಹಾಸದ ಯಾವ ಗಂಧಗಾಳಿ ಗೊತ್ತಿಲ್ಲದವರ ಮುಂದೆ ತಿರುಚಿದ ವಿವರಗಳನ್ನು ಮುಂದಿಟ್ಟಾಗ ಸಹಜವಾಗಿಯೇ ಆರಾಧನಾ ಭಾವ ಹುಟ್ಟಿಕೊಳ್ಳುತ್ತದೆ.
ಚಿಂತಕರ ಅಪಹರಣ
ಈಗಿನ ವೈಚಿತ್ರ್ಯವೆಂದರೆ ಈ ಆರಾಧನೆಯ ಭಾವೋನ್ಮಾದವು ಸರಿಯಾಗಿ ಆಲೋಚಿಸಬೇಕಾದ ಚಿಂತಕರನ್ನೂ ಆವರಿಸಿಕೊಂಡಿದೆ. ತಮಗಿರುವ ಯೋಚಿಸುವ ಶಕ್ತಿಯನ್ನು ಅಧಿಕಾರದಲ್ಲಿರುವವರ ಸುಪರ್ದಿಗೆ ಒಪ್ಪಿಸಿ ಅವರು ಇಟ್ಟ ಹೆಜ್ಜೆಗಳೆಲ್ಲವೂ ಸರಿ ಎಂಬ ಮೂಢನಂಬಿಕೆಯೊಂದಿಗೆ ಇದ್ದು, ಆ ಮೌಢ್ಯವನ್ನು ವರ್ಣರಂಜಿತ ಪದಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಗುಂಪಿನಲ್ಲಿ ಈಗಾಗಲೇ ಜನಪ್ರಿಯರಾದ ಲೇಖಕರಿದ್ದಾರೆ. ಸುದಿ ಮಾಧ್ಯಮ ಪ್ರತಿನಿಧಿಸುವ ಹಿರಿಯ ಪತ್ರಕರ್ತರಿದ್ದಾರೆ. ನಟರುಗಳಿದ್ದಾರೆ. ನಟಿಯರಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಪಡೆದ ಜನರ ಮನ್ನಣೆಯನ್ನು ಅವರು ಅಧಿಕಾರದಲ್ಲಿರುವವರನ್ನು ಆರಾಧಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅದೇ ಆರಾಧನಾ ಮನೋಭಾವನೆಯನ್ನು ಜನರೂ ತಾಳುವಂತೆ ಪ್ರಚೋದಿಸುತ್ತಿದ್ದಾರೆ.
ವಿತಂಡವಾದಿ ಸರಳಸೂತ್ರ
ಇಂಥ ಸಂದರ್ಭದಲ್ಲೆಲ್ಲಾ ಅವರು ಸರಳ ಸೂತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಅಧಿಕಾರದಲ್ಲಿರುವವರನ್ನು ನೀವು ಪ್ರಶ್ನಿಸುತ್ತೀರಿ ಎಂದಾದರೆ, ಯಾರನ್ನು ಆಯ್ಕೆ ಮಾಡುತ್ತೀರಿ? ಇಂಥವರನ್ನಾ? ಎಂದು ಎಸೆದದ್ದಷ್ಟೇ ಅಲ್ಲ, ಇತಿಹಾಸದಲ್ಲಿ ಆಗಿಹೋದ ನಕಾರಾತ್ಮಕ ಸಂಗತಿಗಳನ್ನು ದೇವರು, ಧರ್ಮ ಮತ್ತು ನಂಬಿಕೆಗಳಂತಹ ವಿಷಯಗಳಿಗೆ ತಳುಕು ಹಾಕಿ ಸರಳೀಕರಿಸಿ ವಿತಂಡವಾದವನ್ನು ಮುಂದಿಡುತ್ತಾರೆ. ಟಿವಿ ಚಾನಲ್‍ಗಳ ಆ್ಯಂಕರ್‍ಗಳು, ‘ಸುದ್ದಿಮಿತ್ರರು’ ಈ ವಿತಂಡವಾದದ ಒಳಗೇ ಲಭ್ಯವಾಗುವ ವಿವರಗಳನ್ನೇ ಆಧರಿಸಿ ತಾವೇನೋ ಮಹತ್ವದ್ದನ್ನು ಸಂಶೋಧಿಸಿದ್ದೇವೆ ಎನ್ನುವಂತೆ ಮಾತನಾಡುತ್ತಾರೆ. ಈ ಬಗೆಯ ದಾರಿ ತಪ್ಪಿಸುವ ಆಟ ಬಹಳ ದಿವಸಗಳ ಕಾಲ ನಡೆಯುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದ್ದರೂ ನಡೆದಷ್ಟು ದಿವಸ ಮಾಧ್ಯಮಗಳಿಗೆ ಲಾಭ ದಕ್ಕಿದರೆ ಸಾಕಲ್ಲವೇ ಎಂಬ ಭಂಡಧೈರ್ಯದೊಂದಿಗೆ ಇರುತ್ತಾರೆ.
ಪ್ರಶ್ನಿಸಬೇಕು, ದ್ವೇಷಿಸಬಾರದು
ಪ್ರಶ್ನಿಸಬೇಕು, ದ್ವೇಷಿಸಬಾರದು. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದವರನ್ನು ತಾರ್ಕಿಕವಾಗಿ ಪ್ರಶ್ನಿಸಿ ಸರಿಹಾದಿಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಚಿಂತಕರು ನಿರ್ವಹಿಸಬೇಕು. ಯಾರೇ ಅಧಿಕಾರಕ್ಕೆ ಬಂದರೂ ಅವರನ್ನು ಎಚ್ಚರಿಸಬೇಕು. ಜನರು ಸರಿಯಾಗಿ ಆಲೋಚಿಸುವಂತೆ ಪ್ರೇರಣೆ ನೀಡಬೇಕು. ಚಿಂತಕರು ಮುಖ್ಯವಾಗಿ ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿರುವುದಿಲ್ಲ ಎಂಬ ವಿಶ್ವಾಸ ಜನರಲ್ಲಿದೆ. ಆ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಈ ದೇಶದ ಉನ್ನತ ಹುದ್ದೆಯಿಂದ ಕೆಳಹಂತಗಳ ಆಡಳಿತಾತ್ಮಕ ಸಂಸ್ಥೆಗಳನ್ನು ಪ್ರತಿನಿಧಿಸುವ ನಾಯಕರೆನ್ನಿಸಿಕೊಂಡವರೆಲ್ಲರೂ ನಮಗೆ ಮುಖ್ಯ. ಅವರು ಆ ಹುದ್ದೆಗಳನ್ನು ಅಲಂಕರಿಸಿದ ನಂತರ ಅವರ ಹೊಣೆಗಾರಿಕೆ ಹೆಚ್ಚುತ್ತಲೇ ಇರುತ್ತದೆ ಎಂಬುದನ್ನು ಚಿಂತಕರೆನ್ನಿಸಿಕೊಂಡವರು ನೆನಪಿಸುತ್ತಲೇ ಇರಬೇಕು. ಆದರೆ, ಇಂಥ ಜವಾಬ್ದಾರಿಯನ್ನು ಕೆಲವೇ ಕೆಲವು ಬದ್ಧತೆಯುಳ್ಳವರು ನಿರ್ವಹಿಸುತ್ತಿದ್ದಾರೆ. ಉಳಿದ ಅನೇಕರು ಅಧಿಕಾರದಲ್ಲಿರುವವರ ಬಗ್ಗೆ ಅಂಧಾಭಿಮಾನ ಪ್ರದರ್ಶಿಸುತ್ತಿದ್ದಾರೆ. ಇಂಥವರನ್ನೇ ಬಳಸಿಕೊಂಡು ರಾಜಕೀಯ ಪಡೆಗಳು ತಮ್ಮ ರಹಸ್ಯ ಕಾರ್ಯಸೂಚಿಯನ್ನು ಪ್ರಯೋಗಿಸುತ್ತಿವೆ. ಚಿಂತಕರ ಆ ಪಂಥ ಮತ್ತು ಈ ಪಂಥಗಳನ್ನು ಪರಸ್ಪರ ಸಂಘರ್ಷಕ್ಕಿಳಿಸಿ ಇತಿಹಾಸದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿ ತಮ್ಮ ಅಧಿಕಾರದಾಹದ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆ.
–ಡಾ.ಎನ್.ಕೆ.ಪದ್ಮನಾಭ
ದಿನದ ಸುದ್ದಿ
ಬೆಂಬಲ ಬೆಲೆ | 185 ಲಕ್ಷ ಟನ್ ಭತ್ತ, 124 ಲಕ್ಷ ಟನ್ ಅಕ್ಕಿ ಸಂಗ್ರಹಿಸುವ ಯೋಜನೆ : ಸಚಿವ ಪ್ರಲ್ಹಾದ್ ಜೋಶಿ
ಸುದ್ದಿದಿನಡೆಸ್ಕ್:ಕೇಂದ್ರ ಸರ್ಕಾರ ಭತ್ತದ ಬೆಂಬಲ ಬೆಲೆ – ಎಂಎಸ್ಪಿ ಹೆಚ್ಚಿಸುವ ಮೂಲಕ ಭತ್ತ ಬೆಳೆಯುವ ರೈತರ ಬೆಂಬಲಕ್ಕೆ ನಿಂತಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ನಿನ್ನೆ ದೆಹಲಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಮಾಹಿತಿ ನೀಡಿದ್ದಾರೆ.
2013-14ರಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ 1 ಸಾವಿರದ 310 ಇದ್ದ ಬೆಂಬಲ ಬೆಲೆಯನ್ನು ಈಗ 2 ಸಾವಿರದ 300 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಆಹಾರ ಇಲಾಖೆ ಮತ್ತು ಭಾರತೀಯ ಆಹಾರ ನಿಗಮವು ಪ್ರಸಕ್ತ ಮುಂಗಾರು ಹಂಗಾಮಿನ 185 ಲಕ್ಷ ಟನ್ ಭತ್ತ ಮತ್ತು 124 ಲಕ್ಷ ಟನ್ ಅಕ್ಕಿ ಸಂಗ್ರಹಕ್ಕೆ ಯೋಜನೆ ಸಹ ಹಾಕಿಕೊಂಡಿದೆ ಎಂದರು. ಭತ್ತದ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಮುಂಗಾರು ಹಂಗಾಮು ಭತ್ತ ಸಂಗ್ರಹಕ್ಕೆ ಸಾಕಷ್ಟು ಸ್ಥಳವಿದೆ. ಪ್ರಸ್ತುತ 14 ಎಲ್ ಎಂಟಿ ಭತ್ತ ಸಂಗ್ರಹಕ್ಕೆ ಸ್ಥಳಾವಕಾಶವಿದೆ. ಪಂಜಾಬಿನಲ್ಲಿ ಸಂಗ್ರಹಿಸಿರುವ ಅಕ್ಕಿಯನ್ನು ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.
ಅಕ್ಟೋಬರ್ 1 ರಿಂದ 2 ಸಾವಿರದ 700 ಮಂಡಿಗಳಲ್ಲಿ ಭತ್ತ ಸಂಗ್ರಹಣೆ ಪ್ರಾರಂಭಿಸಿದ್ದು, ಇಂದಿಗೆ ಒಟ್ಟು 50 ಎಲ್ಎಂಟಿ ಭತ್ತವನ್ನು ಸಂಗ್ರಹಿಸಲಾಗಿದೆ ಎಂದರು. ನಾಮನಿರ್ದೇಶನದ ಆಧಾರದ ಮೇಲೆ ಸಿಡಬ್ಲ್ಯೂಸಿ/ಎಸ್ಡಬ್ಲ್ಯೂಸಿ ಗೋದಾಮುಗಳನ್ನು ಬಾಡಿಗೆಗೆ ತೆಗೆದುಕೊಂಡು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಗೋಧಿ ದಾಸ್ತಾನು ತ್ವರಿತ ಸ್ಥಳಾಂತರ ಜೊತೆಗೆ ಪಿಇಜಿ ಯೋಜನೆಯಡಿ 31 ಎಲ್ಎಂಟಿ ಶೇಖರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಕ್ಕಿ ಗಿರಣಿದಾರರಿಗೆ ದೂರು ಪರಿಹಾರಕ್ಕಾಗಿ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದೂ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಅಕ್ಟೋಬರ್ 24ಕ್ಕೆ 34.75 ಎಲ್ಎಂಟಿನ ಅಖಿಲ ಭಾರತ ಚಾಲನಾ ಯೋಜನೆಯಿಂದ ಪಂಜಾಬ್ಗೆ ಸುಮಾರು ಶೇಕಡ 40 ಪಾಲನ್ನು ಹಂಚಲಾಗಿದೆ. ಚಾಲನಾ ಯೋಜನೆ ಮತ್ತು ಶೇಖರಣಾ ಸಾಮರ್ಥ್ಯ ರಚನೆ ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲಾಗಿದೆ. 15 ದಿನಗಳ ಕಾಯುವ ಅವಧಿಯನ್ನು ಮೀರಿ ಗೊತ್ತುಪಡಿಸಿದ ಡಿಪೋಗಳಲ್ಲಿ ಖಾಲಿ ಜಾಗದ ಲಭ್ಯತೆಯಿಲ್ಲದ ಸಂದರ್ಭದಲ್ಲಿ ಹೆಚ್ಚುವರಿ ಸಾರಿಗೆ ಶುಲ್ಕಗಳನ್ನು ಅನುಮತಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಾಯಕೊಂಡ | ಮಳೆಗೆ ಕುಸಿದ ಬಿದ್ದ ಮನೆಗಳು : ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ
ಸುದ್ದಿದಿನ,ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ದಿಂಡದಹಳ್ಳಿ ಮತ್ತು ಕೊಗ್ಗನೂರು ಗ್ರಾಮದಲ್ಲಿ ಸುರಿದ ಮಳೆಯಿಂದ ಕುಸಿದು ಬಿದ್ದಿರುವ ಮನೆಗಳನ್ನು ಪರಿಶೀಲನೆ ನಡೆಸಿದರು. ಈಚೆಗೆ ಸುರಿದ ಮಳೆಗೆ ಕ್ಷೇತ್ರದ ಸಾಕಷ್ಟು ಗ್ರಾಮಗಳಲ್ಲಿ ಮನೆಗಳು ಭಾಗಶಃ ಹಾನಿಯಾಗಿವೆ. ಅಲ್ಲದೇ ಮೆಕ್ಕೆಜೋಳ ಸೇರಿದಂತೆ ಇನ್ನಿತರೆ ಬೆಳೆಗಳು ಕೂಡ ನಿರಂತರ ಮಳೆಗೆ ಕೊಳೆತು ಹೋಗಿವೆ. ಕೃಷಿ ಮತ್ತು ಕಂದಾಯ ಅಧಿಕಾರಿಗಳ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಕಳೆದುಕೊಂಡ ರೈತರಿಗೆ ಮತ್ತು ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪರಿಹಾರ ನೀಡುವ ಜೊತೆಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಕಳಪೆ ಗುಣಮಟ್ಟದಿಂದ ಕೂಡಿದೆ. ನೀರು ಬರುವುದಿಲ್ಲ ಎಂದು ಗ್ರಾಮಸ್ಥರು ಶಾಸಕರ ಬಳಿ ಸಮಸ್ಯೆ ಬಿಚ್ಚಿಟ್ಟರು. ಕಾಮಗಾರಿ ಪರಿಶೀಲಿಸಿದ ಶಾಸಕರು, ಕಳಪೆ ಕಾಮಗಾರಿ ಕಂಡು ಗುತ್ತಿಗೆದಾರರ ವಿರುದ್ಧ ಕೆಂಡಾಮAಡಲರಾದರು. ಕೂಡಲೇ ಗುಣಮಟ್ಟದ ಕಾಮಗಾರಿ ನಡೆಸಿ ಗ್ರಾಮಸ್ಥರಿಗೆ ಸಮಪರ್ಕ ಕುಡಿಯುವ ನೀರು ಪೂರೈಸುವಂತೆ ಸೂಚನೆ ನೀಡಿದರು.
ನಿರಾಶ್ರಿತರಲ್ಲಿ ಆತಂಕ ಬೇಡ
ನಿರಂತರ ಮಳೆ ಸುರಿದು ಕುಸಿದು ಬಿದ್ದಿರುವ ಮನೆಗಳಿಗೆ ಪರಿಹಾರ ಕೊಟ್ಟರೆ, ಮನೆ ಮಂಜೂರು ಆಗುವುದಿಲ್ಲ. ಮನೆ ಬೇಕೋ ಅಥವಾ ಪರಿಹಾರ ಬೇಕೋ ಎಂದು ಅಧಿಕಾರಿಗಳು ಹೇಳುತ್ತಾರೆ ನಿರಾಶ್ರಿತರು ಶಾಸಕರ ಬಳಿ ಪರಿಹಾರ ಮತ್ತು ಮನೆ ಮಂಜೂರು ಮಾಡಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ, ಮಳೆಯಿಂದ ಮನೆಗಳು ಹಾನಿಗೊಳಗಾದ ನಿರಾಶ್ರಿತರಿಗೆ ಸರ್ಕಾರ ಪರಿಹಾರನೂ ಕೊಡುತ್ತದೆ. ಮನೆನೂ ಮಂಜೂರು ಮಾಡುತ್ತದೆ. ಯಾವುದೇ ಕಾರಣಕ್ಕೆ ನಿರಾಶ್ರಿತರು ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪರಶುರಾಮ್, ಗಣೇಶಪ್ಪ, ಹೊನ್ನೂರಪ್ಪ, ಬಸಣ್ಣ, ಶ್ರೀಕಾಂತ್, ಕೆಂಚಪ್ಪ ಹಾಗೂ ಗ್ರಾಮಸ್ಥರು ಇದ್ದರು.
ವಾಲ್ಮೀಕಿ ಜಯಂತಿ: ದಿಂಡದಹಳ್ಳಿ ಗ್ರಾಮದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಕೆ.ಎಸ್.ಬಸವಂತಪ್ಪ, ಮಹರ್ಷ ವಾಲ್ಮೀಕಿಯವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಸತ್ಪçಜೆಗಳನ್ನಾಗಿ ಮಾಡಬೇಕೆಂದು ಕಿವಿಮಾತು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥ್, ನಾಗರಾಜ್, ಗಣೇಶ್, ಪರಶುರಾಮ್, ಬಸಣ್ಣ ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಸಚಿವ ವಿ.ಸೋಮಣ್ಣ
ಸುದ್ದಿದಿನಡೆಸ್ಕ್:ತಿಪಟೂರು ಜನರ ಬಹುದಿನಗಳ ಬೇಡಿಕೆಯಾದ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ ದೊರೆತಿದ್ದು ಮುಂದಿನ ದಿನಗಳಲ್ಲಿ ಮೆಮೋ ರೈಲು ನಿಲುಗಡೆಗೂ ಅನುಮತಿ ನೀಡಲಾಗುವುದು ಎಂದು ತುಮಕೂರು ಸಂಸದ ಹಾಗೂ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ತಿಪಟೂರಿನ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.ಕೊಬ್ಬರಿ ಬೆಲೆ ಹೆಚ್ಚಳ ಮಾಡಿ ಎಲ್ಲಾ ರೈತರಿಗೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ4 days ago
ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್ಬೌನ್ಸ್ ಕೇಸ್ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?
-
ದಿನದ ಸುದ್ದಿ5 days ago
ಚನ್ನಗಿರಿ | ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ; ಬಹುಮಾನ ವಿತರಣೆ
-
ದಿನದ ಸುದ್ದಿ4 days ago
‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!
-
ದಿನದ ಸುದ್ದಿ3 days ago
SC-ST | ರೈತರಿಗೆ ಪಶುಸಂಗೋಪನಾ ಚಟಿವಟಿಕೆಗಳ ತರಬೇತಿ
-
ದಿನದ ಸುದ್ದಿ3 days ago
ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಕರ್ನಾಟಕ ಜಾನಪದ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪ್ರಕಟ
-
ದಿನದ ಸುದ್ದಿ2 days ago
ಹಿ.ಚಿ ಸಂಭ್ರಮದಲ್ಲಿ ನೆಲಮೂಲ ಸಂಸ್ಕೃತಿಯ ಪ್ರತಿಬಿಂಬದ ಪ್ರತಿನಿಧಿಗಳಿಗೆ ಜನಪದ ರಾಜ್ಯೋತ್ಸವ ಪ್ರಶಸ್ತಿ : ಜನಪದ ಸಿರಿಯ ಜರಗನಹಳ್ಳಿ ಕಾಂತರಾಜು
-
ದಿನದ ಸುದ್ದಿ2 days ago
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಜಗಳೂರು ಕಾಟಮ್ಮ ; ಸಾಧನೆಯ ಹೆಗ್ಗುರುತುಗಳು