ದಿನದ ಸುದ್ದಿ
ಕೋಲಾರ ಜಿಲ್ಲೆಯ 134 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ : ಜಿಲ್ಲಾಧಿಕಾರಿ ಜೆ.ಮಂಜುನಾಥ್

ಸುದ್ದಿದಿನ, ಕೋಲಾರ : ಜಿಲ್ಲೆಯಲ್ಲಿ ಅಕ್ಟೋಬರ್‍ನಿಂದ ಇಲ್ಲಿಯವರೆಗೆ 192 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು, ಇವುಗಳಲ್ಲಿ 134 ಗ್ರಾಮಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಿ ಅಥವಾ ಇರುವ ಕೊಳವೆ ಬಾವಿಗಳಿಗೆ ಹೊಸದಾಗಿ ಪಂಪು ಮೋಟಾರ್ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು.
ಇಂದು ಬರ ನಿರ್ವಹಣೆ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿದ್ದ ಪರಿಹಾರ ಕಾರ್ಯಕ್ರಮಗಳನ್ನು ವೀಕ್ಷಿಸಿದ ಅವರು ಮಾತನಾಡಿ ಉಳಿದ 58 ಗ್ರಾಮಗಳಲ್ಲಿ 29 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರನ್ನು ಒದಗಿಸಲಾಗುತ್ತಿದೆ. ಕೋಲಾರದ ಇತಿಹಾಸದಲ್ಲಿ ಅತಿ ಹೆಚ್ಚು ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದಿರುವುದು ಇದೇ ಮೊದಲು ಎಂದು ಅವರು ತಿಳಿಸಿದರು. ಇನ್ನುಳಿದ 29 ಗ್ರಾಮಗಳಿಗೆ ಖಾಸಗಿ ಟ್ಯಾಂಕರ್‍ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋಲಾರದಲ್ಲಿ ಮುಂಗಾರಿನಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಹಿಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ಜಿಲ್ಲೆಯು ತೀವ್ರ ಬರಕ್ಕೆ ತುತ್ತಾಗಿದೆ. ಕೋಲಾರ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ನೀರಿನ ಸಮಸ್ಯೆ ಇದ್ದು, 20 ಖಾಸಗಿ ಟ್ಯಾಂಕರ್‍ಗಳ ಮೂಲಕ ಪ್ರತಿದಿನ 99 ಟ್ರಿಪ್‍ಗಳಲ್ಲಿ ನೀರನ್ನು ಒದಗಿಸಲಾಗುತ್ತಿದೆ ಎಂದರು.
ಹಸಿರು ಮೇವು
ಜಿಲ್ಲೆಯಲ್ಲಿನ 2 ಲಕ್ಷದ 8 ಸಾವಿರ ರಾಸುಗಳಿದ್ದು ಅಗತ್ಯ ಹಸಿರು ಮೇವು ಒದಗಿಸುವ ಸಂಬಂಧ
92 ಸಾವಿರ ಮಿನಿಕಿಟ್‍ಗಳನ್ನು ನೀರು ಲಭ್ಯವಿರುವ ರೈತರು ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಒದಗಿಸಲಾಗಿದೆ. ಪ್ರಸ್ತುತ 82 ಸಾವಿರ ಮೆಟ್ರಿಕ್ ಟನ್ ಹಸಿರು ಮೇವು ಲಭ್ಯವಿದ್ದು, ಇದು 12 ವಾರಗಳಿಗೆ ಸಾಕಾಗುತ್ತದೆ. ಸಿ.ಆರ್.ಎಫ್ ಅನುದಾನದಲ್ಲಿ 20 ಸಾವಿರ ಮಿನಿಕಿಟ್‍ಗಳನ್ನು ವಿತರಿಸಿದ್ದು, ಇವನ್ನು ಫೆಬ್ರವರಿ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದು ಮುಂದಿನ ತಿಂಗಳು ಕಟಾವಣೆಗೆ ಬರುತ್ತದೆ ಎಂದರು.
ಒಣ ಮೇವು
ಟೆಂಡರ್ ಮೂಲಕ ರಾಯಚೂರಿನಿಂದ 49 ಮೆಟ್ರಿಕ್ ಟನ್ ಒಣ ಮೇವನ್ನು ಖರೀದಿಸಿದ್ದು ದಾಸ್ತಾನು ಮಾಡಲಾಗಿದೆ. ಈಗಾಗಲೇ ಶ್ರೀನಿವಾಸಪುರ ಮತ್ತು ಮುಳಬಾಗಿಲಿನಲ್ಲಿನ ಮೇವು ಬ್ಯಾಂಕ್ ತೆರೆÉಯಲಾಗಿದ್ದು, ಉಳಿದ 4 ತಾಲ್ಲೂಕುಗಳಲ್ಲಿಯೂ ಮೇವು ಬ್ಯಾಂಕ್ ತೆರೆಯಲಾಗುವುದು. ಅಗತ್ಯವಿರುವ ರೈತರಿಗೆ ರಿಯಾಯಿತಿ ದರವಾದ ಕೆ.ಜಿ.ಗೆ 2 ರೂ ನಂತೆ ವಿತರಿಸಲಾಗುವುದು ಎಂದು ತಿಳಿಸಿದರು.
ಪ್ರವಾಸ ಕಾರ್ಯಕ್ರಮ
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬರ ನಿರ್ವಹಣೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕೋಲಾರ ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವ ಕುರಿತು ವೀಕ್ಷಣೆ ಮಾಡಿದರು. ನಂತರ ಹನಿಗಾನಹಳ್ಳಿಯ ಮುನಿಸ್ವಾಮಿಗೌಡರ ರೇಷ್ಮೆ ಬೆಳೆ ವೀಕ್ಷಣೆ ಮಾಡಿದರು. ಸದರಿ ರೈತರಿಗೆ ನರೇಗಾ ಯೋಜನೆಯಡಿ ಪ್ರತಿ ಎಕರೆಗೆ 86 ಸಾವಿರ ರೂ.ಗಳಂತೆ 2 ಎಕರೆಗೆ ಪ್ರೋತ್ಸಾಹಧನ ನೀಡಲಾಗಿದ್ದು, ಕೃಷಿ ಹೊಂಡವನ್ನು ಸಹ ನಿರ್ಮಿಸಿ ಕೊಡಲಾಗಿತ್ತು.
ಚಿಕ್ಕ ಅಂಕಂಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ 10 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಚೆಕ್ ಡ್ಯಾಮ್ ಕಾಮಗಾರಿಯನ್ನು ವೀಕ್ಷಿಸಿ ರೈತರಿಂದ ಚೆಕ್ ಡ್ಯಾಂ ನಿರ್ಮಾಣದ ಕುರಿತು ಅಭಿಪ್ರಾಯಗಳನ್ನು ಪಡೆದುಕೊಂಡರು. ಕುಪ್ಪನಹಳ್ಳಿ ಗೇಟ್‍ನಲ್ಲಿ ವಿಜಿಯಮ್ಮ ಅವರ ಜಮೀನಿನಲ್ಲಿ ಬೆಳೆದಿದ್ದ ಮೇವು ಬೆಳೆಯನ್ನು ವೀಕ್ಷಣೆ ಮಾಡಿದರು. ಪಶು ಇಲಾಖೆಯ ವತಿಯಿಂದ 12 ಮಿನಿಕಿಟ್‍ಗಳನ್ನು ಉಚಿತವಾಗಿ ಪಡೆದ ವಿಜಯಮ್ಮ 1 ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆದಿದ್ದಾರೆ.
ಇದೇ ರೀತಿ ಅಕ್ಕಪಕ್ಕದಲ್ಲಿರುವ ರೈತರಿಗೂ ಮಿನಿಕಿಟ್‍ಗಳನ್ನು ನೀಡಲಾಗುವುದು. ನೀರು ಲಭ್ಯವಿರುವ ರೈತರು ವಿಜಯಮ್ಮ ಅವರಿಂದ ಸ್ಪೂರ್ತಿ ಪಡೆದು ಇದೇ ರೀತಿ ಮೇವು ಬೆಳೆಯುವಂತೆ ಆಗಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾಋಇ ಜಿ ಜಗದೀಶ್ ಅವರು ತಿಳಿಸಿದರು.
ಬಂಗಾರಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ 143, 144 ಹಾಗೂ 145 ರ ಸಂಖ್ಯೆಯ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿ ಅಳವಡಿಸಿರುವ ಸೌಲಭ್ಯಗಳಾದ ರ್ಯಾಂಪ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಫ್ಯಾನ್, ಶೌಚಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೂ ಇದೇ ರೀತಿ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.
ಬಂಗಾರಪೇಟೆ ತಾಲ್ಲೂಕಿನ ನಾಗಶೆಟ್ಟಿಹಳ್ಳಿ ಗ್ರಾಮದ ಶುದ್ಧ ನೀರಿನ ಕುಡಿಯುವ ಘಟಕ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನರೇಗಾ ಯೋಜನೆಯಡಿ ನಿರ್ಮಿಸಿರುವ ನೀರಿನ ತೊಟ್ಟಿ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ವೆಂಕಟರಮಣಪ್ಪ ಅವರು ಸಾಕಿದ್ದ 14 ಹಸುಗಳನ್ನು ಪೋಷಿಸಲು ತಗಲುವ ಖರ್ಚು, ಹಾಲು ಮಾರಾಟದಿಂದ ಬರುವ ಆದಾಯದ ಕುರಿತು ಮಾಹಿತಿ ಪಡೆದುಕೊಂಡರು. ಜಾನುವಾರುಗಳಿಗೆ ಮೇವು ಬೆಳೆಯಲು ಮಿನಿಕಿಟ್ ಒದಗಿಸುವಂತೆ ಸ್ಥಳದಲ್ಲಿದ್ದ ಪಶು
ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಖಾಸಗಿ ಬೋರ್‍ವೆಲ್‍ನಿಂದ ಕುಡಿಯುವ ನೀರನ್ನು ಒದಗಿಸುತ್ತಿರುವ ಮುಳಬಾಗಿಲಿನ ಹೊನಗಾನಹಳ್ಳಿ ರೈತರ ಜಮೀನಿಗೆ ಭೇಟಿ ನೀಡಿ ಬರ ಪರಿಸ್ಥಿತಿಯಲ್ಲಿ ಅಗತ್ಯ ನೀರು ಪೂರೈಸುತ್ತಿರುವ ರೈತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗೊಂಡಹಳ್ಳಿ ನಾಗರಾಜ್ ಅವರ ಸೀಬೆ ತೋಟಕ್ಕೆ ಭೇಟಿ ನೀಡಿ ಉತ್ತಮ ವ್ಯವಸಾಯ ಅಭ್ಯಾಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕುದಾಂಡಹಳ್ಳಿಯಲ್ಲಿ ನರೇಗಾ ಯೋಜನೆಯಡಿ 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ವೀಕ್ಷಣೆ ಮಾಡಿದರು. ಬೆಸ್ತರಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ವೀಕ್ಷಿಸಿದರು. ನಂತರ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯಲ್ಲಿ ದಾಸ್ತಾನು ಮಾಡಿರುವ ಒಣ ಮೇವನ್ನು ವೀಕ್ಷಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಜಗದೀಶ್ ಅವರು ಮಾತನಾಡಿ ಕಳೆದ ಸೆಪ್ಟೆಂಬರ್‍ನಲ್ಲಿ ಜಿಲ್ಲೆಯಲ್ಲಿ ಕೇವಲ 8 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿತ್ತು. ನಾನು ಜಿಲ್ಲೆಗೆ ಬಂದ ನಂತರ 6 ತಿಂಗಳಲ್ಲಿ ನರೇಗಾ ಯೋಜನೆಯನ್ನು ಚುರುಕುಗೊಳಿಸಿ ಮಾರ್ಚ್ ಅಂತ್ಯಕ್ಕೆ 40 ಲಕ್ಷ 3 ಸಾವಿರ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಕಳೆದ ವರ್ಷ 22 ಲಕ್ಷ ಮಾನವ ದಿನಗಳನ್ನು ಸೃಜಿಸಿ 70 ಕೋಟಿ ಖರ್ಚು ಮಾಡಲಾಗಿತ್ತು. ಈ ವರ್ಷ 130 ಕೋಟಿಗಳನ್ನು ಖರ್ಚು ಮಾಡಲಾಗಿದ್ದು ಉತ್ತಮ ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ 1000 ಚೆಕ್ ಡ್ಯಾಂಗಳ ನಿರ್ಮಾಣದ ಗುರಿ ಹೊಂದಿದ್ದು, ಅನುಮೋದನೆ ನೀಡಲಾಗಿದೆ.
ಈಗಾಗಲೆ 600 ಚೆಕ್‍ಡ್ಯಾಂಗಳ ನಿರ್ಮಾಣ ಮಾಡಲಾಗಿದೆ. ನರೇಗಾ ಯೋಜನೆಯಡಿ ದನದ ಕೊಟ್ಟಿಗೆ, ಶಾಲಾ ಕಾಂಪೌಂಡ್, ಗೋಕುಂಟೆ, ಅಂಗನವಾಡಿ ಕಟ್ಟಡದ ಜೊತೆಗೆ ಹೆಚ್ಚಾಗಿ ಬಡವರು ಮನೆ ನಿರ್ಮಿಸಿಕೊಳ್ಳಲು ಪ್ರೋತ್ಸಾಹಧನ ಒದಗಿಸಲಾಗಿದೆ ಎಂದರು. ಈ ಬಾರಿ ಹೊಸ ಯೋಜನೆಯಾಗಿ ಪ್ರತಿ ಊರಿಗೆ 1 ಕೆರೆಯನ್ನು ಗುರುತಿಸಿ, ಕೆರೆಯ ಹೂಳನ್ನು ನರೇಗಾ ಯೋಜನೆಯಡಿ ರೈತರಿಂದ ತೆಗೆಸಲಾಗುತ್ತದೆ. ಒಂದು ಮಾನವ ದಿನದ ಕೆಲಸಕ್ಕೆ 1*1 ಮೀಟರ್ ಅಳತೆಯ ಹೂಳನ್ನು ತೆಗೆಯಲು ನೀಡಲಾಗುವುದು. ಒಬ್ಬ ಸಾಮಾನ್ಯ ಮನುಷ್ಯ 3 ಗಂಟೆಯಲ್ಲಿ ಈ ಕೆಲಸವನ್ನು ಮುಗಿಸಿ ನಂತರ ತನ್ನ ಜಮೀನಿನ ಕೆಲಸ ಮಾಡಿಕೊಳ್ಳುವುದರ ಜೊತೆಗೆ 1 ದಿನದ ಕೂಲಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಕ್ರಪಾಣಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರನ್ನು ಒದಗಿಸಲು 106 ಚಟುವಟಿಕೆಗಳನ್ನು ನಿರ್ಮಾಣ ಮಾಡಿ ನೀರನ್ನು ತುಂಬಿಸಲಾಗಿದೆ. ಇದಲ್ಲದೆ ಪ್ರತಿ ತಾಲ್ಲೂಕಿಗೆ 20 ರಂತೆ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು ತುಂಬಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಪ್ರವಾಸದ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ3 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ1 day ago
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ