ದಿನದ ಸುದ್ದಿ
ಮೈಸೂರು-ಮಡಿಕೇರಿ ಹೈಸ್ಪೀಡ್ ಎಕ್ಸ್ಪ್ರೆಸ್ ಹೈವೇ ಗೆ ‘ಭೂ ಸ್ವಾಧೀನ’ ಪ್ರಕ್ರಿಯೆ

ಸುದ್ದಿದಿನ, ಬೆಂಗಳೂರು : ಮೈಸೂರು-ಮಡಿಕೇರಿ ಹೈಸ್ಪೀಡ್ ಎಕ್ಸ್ಪ್ರೆಸ್ ಹೈವೇ ಯೋಜನೆಗಾಗಿ ಭೂಮಿ ಸ್ವಾಧೀನ ಕುರಿತು ಪೂರಕ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಕೇಂದ್ರ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಕೈಗೆತ್ತಿಕೊಂಡಿರುವ ಮೈಸೂರು-ಮಡಿಕೇರಿ ಎಕ್ಸ್‍ಪ್ರೆಸ್ ಹೆದ್ದಾರಿ-275 ಯೋಜನೆಗಾಗಿ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಚಾಮರಾಜಪುರಂನ ಗೀತಾ ರಸ್ತೆಯಲ್ಲಿ ವಿಶೇಷ ಭೂಸ್ವಾಧೀನಾ ಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಕಚೇರಿಯನ್ನು ತೆರೆಯಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಪ್ರಸ್ತುತ ಇರುವ ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವದರಿಂದ ಹಾಗೂ ಅಲ್ಲಲ್ಲಿ ಬರುವ ತಾಲೂಕು, ಹೋಬಳಿ ಕೇಂದ್ರಗಳ ಮೇಲೆ ಹಾದುಹೋಗುವ ದರಿಂದ ಇನ್ನಷ್ಟು ವಾಹನ ದಟ್ಟಣೆಯಿಂದಾಗಿ ಮಡಿಕೇರಿ-ಮೈಸೂರು ನಡುವಿನ ಸಂಚಾರ ಸಮಯ ಹೆಚ್ಚಾಗಿದೆ. ಮಡಿಕೇರಿ-ಬೆಂಗಳೂರು ನಡುವೆ ಸಂಚರಿಸು ವವರು ಮೈಸೂರಿನ ಬರದೇ, ನೇರವಾಗಿ ಹೋಗಲು ಅನುವಾಗು ವಂತೆ ಈ ಹೊಸ ಹೆದ್ದಾರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಒಟ್ಟು 116 ಕಿ.ಮೀ. ಉದ್ದ ಹಾಗೂ 14 ಮೀಟರ್ ಅಗಲದ 4 ಪಥದ ಈ ಹೆದ್ದಾರಿಯು ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿ ಮತ್ತು ನಗುವನ ಹಳ್ಳಿ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ತಿರುವು ಪಡೆದು ಹುಣಸೂರು ಸಮೀಪ ಗೋಣಿಕೊಪ್ಪ ಲುವಿಗೆ ಹೋಗುವ ಡೀವಿಯೇಷನ್ ಬಳಿ ಕೂಡುತ್ತದೆ. ಮುಂದೆ ಕಳ್ಳಬೆಟ್ಟ, ಕಂಪಲಾಪುರ, ಬೈಲಕುಪ್ಪೆ, ಕೊಪ್ಪ, ಕುಶಾಲನಗರ, ಸುಂಟಿಕೊಪ್ಪ ಮೂಲಕ ಮಡಿಕೇರಿ ಸಂಪರ್ಕಿಸುತ್ತದೆ. ಮಧ್ಯೆ ಬರುವ ಪಟ್ಟಣಗಳು, ಹೋಬಳಿ ಕೇಂದ್ರಗಳ ಹೊರ ಭಾಗದಲ್ಲಿ ಬೈಪಾಸ್ ರಸ್ತೆಯಾಗುವದರಿಂದ ಯಾವದೇ ಅಡೆ-ತಡೆಯಿಲ್ಲದೆ ವಾಹನಗಳು ಅದೇ ವೇಗದಲ್ಲಿ ಚಲಿಸಬಹುದಾಗಿದೆ ಎಂದು ಹೇಳಿದ್ದಾರೆ ಪ್ರತಾಪ್ ಸಿಂಹ.
ಈ ಯೋಜನೆಗೆ ಸುಮಾರು 516 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಸರಕಾರಿ ಜಮೀನು ಹಾಗೂ ಬಳಸಿಕೊಳ್ಳಬಹುದಾದ ಪ್ರಸ್ತುತ ಹೆದ್ದಾರಿಯನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ರೂ. 6000 ಕೋಟಿಗಳ ಪರಿಹಾರ ಕೊಡಬೇಕಾಗಬಹುದೆಂದು ಅಂದಾಜಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿಯನ್ನು 10 ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುತ್ತಿರು ವದರಿಂದ ಕಣ್ಣೂರು, ಮಡಿಕೇರಿ, ಸುಳ್ಯ, ಹೊಸ ನರಸೀಪುರ ಕಡೆಯಿಂದ ಬೆಂಗಳೂರಿಗೆ ಹೋಗುವವರಿಗೆ ಈ ಹೊಸ ಹೆದ್ದಾರಿಯು ಅನುಕೂಲ ವಾಗಲಿದೆ.
ವಿಶೇಷ ಭೂಸ್ವಾಧೀನಾ ಧಿಕಾರಿ ಎ. ದೇವರಾಜು, ಯೋಜನಾ ನಿರ್ದೇಶಕ ಬಿ.ಟಿ. ಶ್ರೀಧರ್, ವ್ಯವಸ್ಥಾಪಕ ಎನ್. ವೆಂಕಟಾಚಲಪ್ಪ, ಆಯಾ ತಾಲೂಕಿನ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹೆದ್ದಾರಿ ಲೇನ್ ಅಲೈನ್‍ಮೆಂಟ್ ಸಿದ್ಧಪಡಿಸಿ, ಸರಕಾರದಿಂದ ಅನುಮೋದನೆ ಪಡೆದು ನಂತರ ರಸ್ತೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಮತ್ತು ಸಮಗ್ರ ಯೋಜನಾ ವರದಿ ತಯಾರಿಸಿ ಹಣಕಾಸು ಮತ್ತು ತಾಂತ್ರಿಕ ಅನುಮೋದನೆ ಪಡೆದು ಯೋಜನೆಗೆ ಟೆಂಡರ್ ಕರೆಯ ಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ

ಸುದ್ದಿದಿನ,ಬಳ್ಳಾರಿ:ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಆಯವ್ಯಯ ಹಾಗೂ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಸ್ನಾತಕೋತ್ತರ ಪದವೀಧರರಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ ಕಲ್ಪಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಬರವಣಿಗೆಯಲ್ಲಿ ಪರಿಣತಿ ಹೊಂದಿರುವ, ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
2022-23 ಹಾಗೂ 2023-24 ನೇ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ವಿವರ
ಮಹಿಳಾ ಆಯವ್ಯಯದಡಿ 10 ಮಹಿಳೆಯರು, ಪರಿಶಿಷ್ಟ ಜಾತಿ ಉಪಯೋಜನೆಯಡಿ 10 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 4 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಇಂಟರ್ನ್ಶಿಪ್ ಗೆ ಅವಕಾಶ ಕಲ್ಪಿಸಲಾಗುವುದು. ಒಟ್ಟು 24 ಅಭ್ಯರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ ಒದಗಿಸಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಎರಡು ತಂಡಗಳಲ್ಲಿ ಎರಡು ತಿಂಗಳ ಇಂಟರ್ನ್ಶಿಪ್ ಗೆ ಅವಕಾಶ ಕಲ್ಪಿಸಲಾಗುವುದು. ಇಂಟರ್ನ್ಶಿಪ್ ಗೆ ಸಂಸ್ಥೆ ಹಾಗೂ ಸ್ಥಳವನ್ನು ಅಕಾಡೆಮಿಯೇ ನಿಗದಿ ಪಡಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕಾಡೆಮಿ ವತಿಯಿಂದ ಮಾಸಿಕ 20,000/- ರೂ. ಸ್ಟೆöÊಫಂಡ್ ನೀಡಲಾಗುವುದು.
ಅಭ್ಯರ್ಥಿಗಳು ತಮ್ಮ ಸ್ವವಿವರ (Curriculum Vitae) ದೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಗೂಗಲ್ ಫಾರ್ಮ್ https://forms.gle/UgNqDcFs1v6akyAD9 ರಲ್ಲಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನ ಅಕಾಡೆಮಿಯ ಸಮಿತಿಯದ್ದೇ ಅಗಿರುತ್ತದೆ.
ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನವಾಗಿದ್ದು, ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕ್ರೀಡಾ ಸಾಮಾಗ್ರಿಗಳ ಸರಬರಾಜಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಯುವ ಚೈತನ್ಯ ಕಾರ್ಯಕ್ರಮದಡಿ ಕ್ರೀಡಾ ಕಿಟ್ಗಳನ್ನು ಸರಬರಾಜು ಮಾಡಲು ಯುವಕ, ಯುವತಿಯರ ಸಂಘಗಳಿಂದ ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ದಾವಣಗೆರೆ ದೂ.ಸಂ: 08192-237480 ನ್ನು ಸಂಪರ್ಕಿಸಲು ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಂಪೈರ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ತೊಡಗಿಸಿ ಮೋಸ : ದೂರು ದಾಖಲು

ಸುದ್ದಿದಿನ,ದಾವಣಗೆರೆ:ದಾವಣಗೆರೆ ನಗರದ ಡಿಸಿಎಂ ಲೇಔಟಿನ ಎಂಎಸ್ಎಂ ಪ್ಲಾಜಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನ್ಲೈನ್ ರಿಂಗ್ ವ್ಯವಹಾರ ನಡೆಸಲು ತೆರೆದಿರುವ ಎಂಪೈರ್ ಟ್ರೇಡಿಂಗ್ ಕಂಪನಿ ತೆರೆದುಕೊಂಡು ಸಾರ್ವಜನಿಕರಿಂದ ಹಣವನ್ನು ಆರೋಪಿತರಾದ ಗಜಾನನ ತಂದೆ ರಾಮಪೂಜಾರಪ್ಪ ಇವರು ತಮ್ಮ ಸ್ನೇಹಿತರೊಂದಿಗೆ ಪಡೆದುಕೊಂಡು ಪ್ರತಿ ತಿಂಗಳು ಶೇಕಡಾ 5 ರಷ್ಟು ಲಾಭಾಂಶವನ್ನು ಕೊಡುವುದಾಗಿ ಹೇಳಿ ಕೆಲವು ತಿಂಗಳು ಕೊಟ್ಟು ನಂತರದ ದಿನಗಳಲ್ಲಿ ಲಾಭಾಂಶವನ್ನು ಮತ್ತು ಅಸಲಿನ ಹಣವನ್ನು ಕೊಡದೇ ಒಟ್ಟು ಸಾರ್ವಜನಿಕರಿಂದ 31.50,000/- ರೂಗಳನ್ನು ಕಟ್ಟಿಸಿಕೊಂಡು 61.62.800/- ರೂ ಲಾಭಾಂಶದ ಹಣವನ್ನು ಜಮಾ ಮಾಡಿದ್ದು ರೂ.37,33,500ಗಳನ್ನು 6 ತಿಂಗಳ ಲಾಭಾಂಶದ ಹಣವನ್ನು ಮತ್ತು ಅಸಲಿನ ಹಣವನ್ನು ಕೊಡದೇ ಮೋಸ ಮಾಡಿರುತ್ತಾರೆ ಎಂದು ಹರೀಶ.ಕೆ ತಂದೆ ಉಮೇಶಪ್ಪ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾರೆ.
ಠೇವಣಿದಾರರು ಎಂಪೈರ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ತೊಡಗಿಸಿ ಮೋಸ ಹೋಗಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ದಾವಣಗೆರೆ ನಗರದ ಸಿಇಎನ್ ಪೊಲೀಸ್ ಠಾಣೆ, ಮೊದಲನೇ ಮಹಡಿ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ರವರ ಬಳಿ ಹೋಗಿ ಮಾಹಿತಿ ನೀಡಬೇಕು. ದೂ.ಸಂ:08192-225119 ನ್ನು ಸಂಪರ್ಕಿಸಲು ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
