ಅಂತರಂಗ
ಪ್ರೇಮ ಪತ್ರ | ನಿಮ್ಮ ನೆನಪುಗಳ ಮೇಲೆ ನನ್ನ ಪ್ರೇಮ ಸವಾರಿ..!

ನಿಮ್ಮ ಆ ಸ್ಮೈಲ್ನಿಂದ ನನ್ ಏನ್ ಮೋಡಿ ಮಾಡ್ತಿರ್ರಿ…! ನೀವ್ ಒಮ್ಮೆ ನಕ್ಕಿದ್ರೆ ಸಾಕು ಅದೆಲ್ಲೊ ಇರೋ ಮೊನಾಲಿಸಾಳ ಕಣ್ಣುಗಳಿಗೂ ಮತ್ಸರ ಬಂದು ಅವಳ ತುಟಿ ಬಿಗಿದು ಬಿಡುತ್ತೆ ! ಇದು ಜೋಕ್ ಅಂತ ತಿಳ್ಕಂಡ್ರ? ಜೋಕ್ ಅಲ್ಲ ಕಂಡ್ರಿ… ನೆಲದಿಂದ ನಾಲ್ಕಿಂಚು ನೀರು ಒಮ್ಮೆಲೆ ನುಗ್ಗಿ ಬರೋ ಥರ ನನ್ ಕಲ್ಲೆದೆಯಿಂದ ಬಂದ ಮಾತಿದು! ಆಕಾಶಕ್ಕೆ ಚಿಮ್ಮೊ ಯಾವ ರಾಕೆಟ್ ಕೂಡ ಕೊರೆಯದ ಈ ನನ್ನ ಎದೆಯನ್ನು ನಿಮ್ಮ ಆ ಸ್ಮೈಲು, ನಿಮ್ಮ ಆ ಲುಕ್ಕು ಸರಕ್ ಎಂದು ಕೊರೆದು ಸುರಂಗ ಮಾಡಿ, ಮಿಣ್ಕಾಡೋ ಸೀರಿಯಲ್ ಸೆಟ್ನ ಸಾಲಾಗಿ ತೂಗಿ ಬಿಟ್ಟಿವೆ. ಹೆಲ್ತಿಯಾಗಿದ್ದ ನನ್ನ ಹೃದಯಕ್ಕೆ ಈಗ ಡಿಜಿಟಲ್ ಸೌಂಡ್ ಫಿಕ್ಸ್ ಆಗಿದೆ. ನೀವ್ ಬಂದ್ರೆ ಕುಣಿಯೋದ್ ಅಷ್ಟೆ ಬಾಕಿ!
ಎಂಥೆಂಥ ವಿಚಾರದಲ್ಲಿ ಸ್ಟ್ರಾಂಗ್ ಆಗಿರುವ ನಾನು ಈ ಪ್ರೀತಿ ಪ್ರೇಮ ಅನ್ನೋ ವಿಚಾರದಲ್ಲಿ ತುಂಬಾ ವೀಕು ಕಂಡ್ರಿ. ನಿಮ್ ಗುಣದ ಬ್ಯೂಟಿ ಮುಂದೆ ನನ್ ತಾಕತ್ತು ಏನೂ ನಡಿಯಕಿಲ್ಲ ಬಿಡಿ. ನಾನ್ ನಿಮ್ನ ರಾಗಿ ಕಾಳಿನಷ್ಟಾದ್ರು ಪ್ರೀತಿಸ್ತಿದಿನಿ ಅಂತ ಹೇಳ್ ಕೊಳ್ಳೋಕೆ ಪತರಗುಡ್ತಿನಿ. ನಿಮ್ ನೋಟಕ್ಕೆ, ಮುಂಗುರುಳಿಗೆ, ಕೋಮಲ ಬೆರಳುಗಳಿಗೆ, ಖುಷಿಯಾದಗ ಒಮ್ಮೊಮ್ಮೆ ಹೊರಾಗ್ ಬಂದು ಒಳಾಗೋಗೊ ನಿಮ್ ನಾಲ್ಗೆಗೆ, ನಿಮ್ ಪುಟ್ ಪುಟ್ ಪಾದಗಳ ವಾಕಿಂಗ್ ಸ್ಟೈಲ್ ಗೆ ನನ್ ಮನ್ಸನ್ನೆ ಗಿರ್ಗಿಟ್ಳೆ ಆಡ್ಸೋ ನವಶಕ್ತಿ ಇದೆ! ನೀವ್ ಏನನ್ನೋ ನೋಡ್ಕಂಡು ಹೆಂಗೆಂಗೊ ಆಡ್ತಿದ್ರೆ… ನಾನ್ ನಿಮ್ಮನ್ ನೋಡ್ಕಂಡು ಹಂಗಂಗೆ ಆಡ್ತಿನಿ ಕಂಡ್ರಿ. ನಿಂತ್ ಜಾಗದಲ್ಲಿ ನಿಲ್ಲಾಕಿಲ್ಲ, ಕುಂತ್ ಜಾಗದಲ್ಲಿ ಕೂರಾಕಿಲ್ಲ, ಮತ್ ಮತ್ತೆ ನಿಮ್ಮನ್ನ ನೋಡೋದ್ ಬಿಡಾಕಿಲ್ಲ!
ನಿಮ್ಮನ್ನು ನೋಡಿದ ಆ ಮೊದಲ ಕ್ಷಣ ನನ್ ಹಾರ್ಟು ಬಲೆಗೆ ಸಿಕ್ಕಿಬಿದ್ದ ಗಿಣಿಮರಿಯ ಹಾರ್ಟಿನಂತೆ ಪಟಪಟನೆ ಪಟಪಟನೆ ನೂರಾರು ಬಾರಿ ಬಡ್ಕಳ್ತಾನೆ ಇತ್ತು! ಆ ಮೊದಲ ಕ್ಷಣ… ನೂರಾದಾಗ ಮುಂಗಾರು ಮಳೆಯ ಹನಿಗಳ ದುನಿಯಾ…! ನೀವು ನವಿಲಂತೆ ನಡೆದು ಹೋಗುವಾಗ ನಿಮ್ಮ ಕಣ್ಣು ರೆಪ್ಪೆಯ ಕೂದಲುಗಳು ಆಗಷ್ಟೆ ಅಂಜಿಕೆಯಿಂದ ಹೊರಸೂಸಿದ್ದ ಆ ವಾರೆನೋಟವು ಥಳಥಳಿಸಿದಾಗ ನನ್ನೆದೆಯಲ್ಲಿ ಒಟ್ಟೊಟ್ಟಿಗೆ ಸೂರ್ಯೋದಯ! ಚಂದ್ರೋದಯ! ಆಗ ನಂಗೊಂದು ಡೌಟ್ ಬಂತು ಕಂಡ್ರಿ… ನೀವು ಸೂರ್ಯ, ಚಂದ್ರ, ನಕ್ಷತ್ರಗಳಿಗೆಲ್ಲ ನಿಮ್ ಮುಖದಲ್ಲಿ ಮೂಡೊ ಬೆಳಕನ್ನ ಬಡ್ಡಿ ಲೆಕ್ಕದಲ್ಲಿ ಸಾಲ ಗೀಲ ಕೊಟ್ಟಿದಿರಾ ಅಂತ!?
ಈ ಹಾರ್ಟು ಮತ್ತು ಫೀಲಿಂಗ್ಸ್ ಮಧ್ಯೆ ಗ್ಯಾಪು ಜಾಸ್ತಿ ಆದಾಗೆಲ್ಲ ಪ್ರ್ಯಾಕ್ಟಿಕಲ್ ಲೈಫು ಹೇಳ್ದೆ ಕೇಳ್ದೆ ಒದ್ಕಂಡು ಬರ್ತದೆ. ನಂಗೆ ಇಂಥದ್ದೆಲ್ಲ ಇಷ್ಟ ಇಲ್ಲ ಕಂಡ್ರಿ. ನನ್ನ ಭಾವನೆಗಳಿಗೆ ನಾನೇ ಪ್ರಭು. ಈ ಹುಡ್ಗೀರ್ಗೆ ಬ್ಯೂಟಿ ಇದ್ರೆ ಬುದ್ಧಿ ಇರಲ್ವಂತೆ! ಬುದ್ಧಿ ಇದ್ರೆ ಚುರುಕ್ತನ ಇರಲ್ವಂತೆ! ಹೌದಾ? ಆದ್ರೆ, ನೀವು ಈ ‘ಇಲ್ಲ’ ಅನ್ನೋ ವ್ಯಾಪ್ತಿಯಿಂದ ನಾಟ್ ರೀಚಬಲ್ ! ನೀವ್ ಒಂದ್ ರೀತಿ ಸಂಕ್ರಾಂತಿ ಎಳ್ಳು-ಬೆಲ್ಲ ಇದ್ದಂಗೆ! ಜಾಸ್ತಿ ತಿಂದ್ರೆ ನೀರ್ ಕುಡಿಸ್ತಿರಿ…! ಕಡಿಮೆ ತಿಂದ್ರೆ, ಇನ್ನು ತಿನ್ನೋ ಹಂಗೆ ಮಾಡ್ತಿರ! ಒಟ್ನಲ್ಲಿ ನನ್ ಕಡೆ ಕದ್ ಕದ್ ನೋಡ್ತಿರಾ… ಸಣ್ ಸಣ್ಕೆ ನಕ್ಕಿ , ತುಟಿ ಮೇಲೆ ಕಾಂತಿ ಮೂಡ್ಸಿ… ಮರೆ ಆಗ್ತಿರ! ಆಗ ಗಿಡದಲ್ಲಿ ಬಿಡೋ ಹೂವಂತೆ ಈ ಹೃದಯ ಪ್ರೇಮಕ್ಕೆ ಪರವಶವಾಗುತ್ತೆ…! ಮೂಗ್ದಾರ ಕಟ್ಟಿ ಎಷ್ಟ್ ಎಳುದ್ರು ಕೂಡ ನಿಮ್ ಕಡೆಗೆ ಬರ್ತಾನೆ ಇರುತ್ತೆ..!
ರೀ.. ನೀವು ಕಾಣದೆ ಹೋದಾಗ ನಿಮ್ಮನ್ನು ಹುಡುಕಾಡುವ ಪರಿ ನನ್ನೊಳಗೆ ವೈಭವದ ಅನುಭವ! ನೀವ್ ಸಿಗ್ಲೇ ಬೇಕು ಅಂತ ನಾನು ನಿಮ್ನ ಪ್ರೀತಿ ಮಾಡ್ತಿಲ್ಲ ! ನೀವ್ ಸಿಕ್ಕಲ್ಲ ಅಂದ್ರೂನು ನಾನ್ ಸುಮ್ನೆ ಇರ್ಲಿಕ್ಕೆ ಪ್ರೀತಿ ಮಾಡ್ತಿಲ್ಲ ! ಆದರೆ ನೀವ್ ನನಗೆ ಸಿಗದೇ ಇದ್ದ ಆ ಮುಂದಿನ ಕ್ಷಣವೊಂದನು ಹೇಗೆ ನೂಕಲಿ ಎಂಬ ಅಧೈರ್ಯ ನನ್ನ ಕಾಡಲೂ ಬಹುದು! ಆಗ ನನ್ನ ಪ್ರೇಮ ಬದುಕಿನತ್ತ ಮುಖಮಾಡಿ ನಿಮ್ಮ ನೆನಪುಗಳ ಮೇಲೆ ಸವಾರಿ ಮಾಡ್ತಾನೇ ಇರುತ್ತೆ…! ಇಬ್ಬರೂ ಸೇರುವ ಬಿಂದುವಿಗಾಗಿ ಕಾಯುತ್ತಲೆ ಇರುತ್ತದೆ…!
– ನಿಮ್ಮ ಪ್ರೀತಿಯ ಗಿರಿ
(ಡಾ. ಗಿರೀಶ್ ಎಂ ಬಿ,ಮೂಗ್ತಿಹಳ್ಳಿ
ಚಿಕ್ಕಮಗಳೂರು,ಮೊಬೈಲ್ – 8867732340)
ಅಂತರಂಗ
ಸ್ತ್ರೀಕುಲದ ಆಕಾಶದಲ್ಲಿ ಸದಾ ಬೆಳಗುವ ಸೂರ್ಯತೇಜೆ ಸಾವಿತ್ರಿಬಾಯಿ ಫುಲೆ..!

ಎಲ್ಲರಿಗೂ ಅಕ್ಷರದವ್ವನ ಜನುಮ ದಿನಾಚರಣೆಯ ಶುಭಾಶಯಗಳು
- ಸುರೇಶ ಎನ್ ಶಿಕಾರಿಪುರ
ಭಾರತದ ಇತಿಹಾಸದಲ್ಲಿ ಜ್ಯೋತಿಬಾ ಸಾವಿತ್ರಿಬಾಯಿ ಫುಲೆ ದಂಪತಿಗಳದ್ದು ಒಂದು ಅನನ್ಯ ದಾಂಪತ್ಯ. ಅತ್ಯಂತ ಚಿಕ್ಕವಯಸ್ಸಿನ ಹುಡುಗಿ ಸಾವಿತ್ರಿ ಬಾಲ್ಯವಿವಾಹದ ಬಲೆಗೆ ಬಲಿಯಾಗಿ ತನ್ನ ಎಂಟನೇ ವಯಸ್ಸಿನಲ್ಲಿ ಜ್ಯೋತಿಬಾ ಫುಲೆಯವರನ್ನು ಕೈ ಹಿಡಿಯಬೇಕಾಗಿ ಬಂತು. ಬಹುಷಃ ಆಕೆ ಜ್ಯೋತಿಬಾ ಅವರನ್ನಲ್ಲದೇ ಬೇರಾವುದೋ ಪುರುಷನನ್ನು ಮದುವೆಯಾಗಿದ್ದರೆ ಈ ದೇಶದ ಸಂಪ್ರದಾಯವಾದಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಆಕೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿಹೋಗುತ್ತಿದ್ದಳು.
ಆಕೆ ಖಂಡಿತವಾಗಿಯೂ ಕೈ ಹಿಡಿದದ್ದು ತನ್ನನ್ನು ಬೆಳಕಿನೆಡೆಗೆ ಕರೆದೊಯ್ಯುವ ತೇಜಸ್ವೀ ಪುರಷನನ್ನು. ಆರ್ಧ್ರ ಹೃದಯಿಯೂ ಮಾನವೀಯನೂ ವಿವೇಕಿಯೂ ಆಗಿದ್ಧ ಜ್ಯೋತಿಬಾ ಫುಲೆ ಎಂಬ ಪ್ರಬುದ್ಧ ಯುವಕ ತಾನು ಸಂಸಾರವೆಂದರೇನು ದಾಂಪತ್ಯವೆಂದರೇನು ಎಂಬ ಬಗ್ಗೆ ಕಲ್ಪನೆಗಳೇ ಇಲ್ಲದ ಆಡಿ ಕುಣಿದು ಬಾಲ್ಯದ ಸುಖಗಳನ್ನು ಅನುಭವಿಸಬೇಕಾಗಿದ್ದ ಎಳೆಯ ಬಾಲೆಯನ್ನು ತಾನು ಮದುವೆಯಾಗಬೇಕಾಗಿ ಬಂದುದಕ್ಕಾಗಿ ಮಮ್ಮಲ ಮರುಗಿದ್ದ ಚಿಂತೆಗೆ ಬಿದ್ದಿದ್ದ ತಾನು ತಪ್ಪಿತಸ್ಥನಲ್ಲದಿದ್ದರೂ ಈ ಪುರುಷಾಧಿಕ್ಯದ ಪಾಪದ ಕೃತ್ಯಕ್ಕೆ ತಾನೂ ಬಲಿಯಾದವನೆಂಬ ಅರಿವು ಆತನಿಗಿದ್ದೇ ಇತ್ತು.
ತನ್ನ ಮಡದಿಯನ್ನು ಆತ ಸಂಸಾರದ ಕೋಟಲೆಗಳಿಗೆ ದಾಂಪತ್ಯದ ಆಕರ್ಷಣೆಗಳಿ ಬಲಿಹಾಕದೇ ಅವಳ ಉದ್ಧಾರಕ್ಕಾಗಿ ಫಣತೊಟ್ಟ. ತನ್ನ ಮುದ್ದು ಹೆಂಡತಿಗೆ ಸ್ವತಃ ಶಿಕ್ಷಣವನ್ನು ನೀಡತೊಡಗಿದೆ. ಕಲಿಕೆಯಲ್ಲಿ ಗಾಂಭೀರ್ಯ ಕಾರುಣ್ಯ ಪ್ರೇಮ ದೂರದೃಷ್ಟಿ ದಿಟ್ಟ ನಿಲುವು ಎಲ್ಲವೂ ಇದ್ದವು. ಹೆಣ್ಣು ಕಲಿತೇ ಕಲಿತಳು ಕಲಿತು ಕಲಿಸುವವಳಾಗಿ ರೂಪುತಳೆದಳು. ಜ್ಯೋತಿಬಾ ಆಕೆಯನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೇರೇಪಿಸಿದರು. ಸಾವಿತ್ರಿಬಾಯಿ ಮಿಚೆಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕ ತರಭೇತಿ ಶಿಕ್ಷಣವನ್ನೂ ಪಡೆದಳು.
ಭಿಡೆ ಎಂಬುವವರ ಮನೆಯಲ್ಲಿ ಆರಂಭವಾದ ಹೆಣ್ಣುಮಕ್ಕಳ ಶಾಲೆಯಲ್ಲಿ ಆಕೆ ಮುಖ್ಯೋಪಾಧ್ಯಾಯಿನಿ ಆದಳು. ಹೆಣ್ಣೊಬ್ಬಳು ಶಿಕ್ಷಕಿಯಾಗುವುದು ಶಿಕ್ಷಣ ನೀಡುವುದು ಹಾಗೂ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಅಂದಿನ ಪುರುಷ ಪ್ರಧಾನ ಜಾತಿ ವ್ಯವಸ್ಥೆಯಲ್ಲಿ ನಿಷಿದ್ಧ ಮತ್ತು ಮಹಾ ಅಪರಾಧ. ಸಂಪ್ರದಾಯವಾದಿಗಳಿಗೆ ಇದು ಆಗಿಬರಲಿಲ್ಲ. ಜ್ಯೋತಿಬಾಳ ನೆಡೆ ಅವರಿಗೆ ತಮ್ಮ ಸನಾತನ ಧರ್ಮಕ್ಕೇ ಇಟ್ಟ ಕೊಡಲಿಯೇಟಿನಂತೆ ಭಾಸವಾಯಿತು.
ಕಲಿಸಲು ಶಾಲೆಗೆ ಹೋಗುವವಳ ಮೇಲೆ ನಿತ್ಯವೂ ಅಡ್ಡಗಟ್ಟಿ ಕೇರಿಗಳ ಇಕ್ಕೆಲದಲ್ಲಿ ನಿತ್ತು ಅವಾಚ್ಯ ಶಬ್ಧಗಳಿಂದ ಬಯ್ಯುವುದು ಕೆಸರು ರಾಡಿ ಸಗಣಿಗಳು ಎರಚುವುದು ಮಣ್ಣು ತೂರುವುದು ಮೊದಲಾದ ವಿಕೃತ ಮಾರ್ಗಗಳ ಮೂಲಕ ಆಕೆಯನ್ನು ಅತೀವವಾಗಿ ಕಾಡುವುದು ಅವಮಾನಿಸುವುದು ಹಲ್ಲೆಗೆ ನೆಡೆಸುವುದು ಇವೆಲ್ಲವನ್ನೂ ಮಾಡಿದರು. ಆಕೆ ಒಮ್ಮೆ ಧೃತಿಗೆಟ್ಟು ತನ್ನಿಂದ ಇದು ಸಾಧ್ಯವಿಲ್ಲವೆಂದು ಪತಿಯ ಬಳಿ ದುಃಖಿಸುತ್ತಾ ಕುಗ್ಗಿ ಕುಸಿದಾಗ ಆತ ಅವಳಲ್ಲಿ ಭರವಸೆ ತುಂಬಿದ ಪ್ರೇರೇಪಿಸಿದ ಹೆಗಲೆಣೆಯಾಗಿ ಅವಳೊಡನೆ ನಿತ್ತ.
ಅದು ಹೂವಿನ ಹಾದಿಯಾಗಿರಲಿಲ್ಲ ಪ್ರತಿ ಹೆಜ್ಜೆಗೆ ವಿಷಜಂತುಗಳು ಎದುರು ನಿಲ್ಲುವ ಕಲ್ಲುಮುಳ್ಳಿನ ಕಠಿಣ ಮಾರ್ಗವಾಗಿತ್ತು. ಹೆಣ್ಣಿಗೆ ಕಾನೂನಿನ ರಕ್ಷಣೆಗಳೇ ಇಲ್ಲದ ಕಾಲದಲ್ಲಿ ಜೀವವನ್ನು ಬೀದಿಯ ದೂರ್ತರ ಎದುರು ನಿತ್ಯವೂ ಸವಾಲಿಗೊಡ್ಡುತ್ತಲೇ ಮತ್ತೆ ಮುನ್ನುಗ್ಗಿದಳು. ದಾರಿಯಲ್ಲಿ ನಿತ್ಯವೂ ಕೆಸರು ಸಗಣಿ ಮಣ್ಣು ಮೆತ್ತಿರುತ್ತಿದ್ದ ಸೀರೆಯನ್ನು ಶಾಲೆಗೆ ಬಂದು ಬಲಾಯಿಸುತ್ತಿದ್ದರು.
ಅದಕ್ಕಾಗೇ ಆಕೆ ಮೊದಲೇ ಮತ್ತೊಂದು ಸೀರೆಯನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಬಂದಿರುತ್ತಿದ್ದಳು. ಸಾವಿತ್ರಿಬಾಯಿ ಫುಲೆಯವರ ಬೆನ್ನಿಗಿದ್ದು ಕಾದವ ಗಂಡ ಜ್ಯೋತಿ ರಾವ್. ಆತನ ನೈತಿಕ ಬಲ ತನ್ನೊಳಗಿನ ದಿವ್ಯತೆ ಎರಡರ ಅಮೃತವಾಹಿನಿಯೇ ಆಕೆಯನ್ನು ಉದ್ಧರಿಸಿತು ಆಕೆಯಿಂದ ಸ್ತ್ರೀಕುಲವೇ ಬಿಡುಗಡೆಯ ಮಾರ್ಗದಲ್ಲಿ ಕ್ರಮಿಸತೊಡಗಿತು. ಆಕೆ ಸ್ತ್ರೀಕುಲದ ಆಕಾಶದಲ್ಲಿ ಸದಾ ಬೆಳಗುವ ಸೂರ್ಯತೇಜೆ.
ಸಂಪ್ರದಾಯವಾದಿಗಳು ದಂಪತಿಗಳನ್ನು ಕೊಂದು ಬರಲು ಕಳುಹಿದ್ದ ಕೊಲೆಗಾರರನ್ನೇ ಮಕ್ಕಳಂತೆ ಕಂಡು ಮನಪರಿವರ್ತಿಸಿ ಕೊಲೆಯ ಮಾರ್ಗದಿಂದ ಮನುಷ್ಯ ಮಾರ್ಗದಲ್ಲಿ ಮುನ್ನೆಡೆಸಿದ ದಾರ್ಶನಿಕ ಜೋಡಿ ಇದು. ಸ್ತ್ರೀ ಮತ್ತು ಪುರುಷರನ್ನು ಪ್ರಕೃತಿ ಜೋಡಿಯಾಗಿಸುವುದು ಯಾತಕ್ಕಾಗಿ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಲೇ ಬೇಕು. ದಂಪತಿಗಳ ಇಲ್ಲಿಗೆ ನಿಲ್ಲುವುದಿಲ್ಲ ಯುವ ಸಮುದಾಯ ಅವರ ಕಥನವನ್ನು ಓದಿ ತಿಳಿಯಬೇಕು. ತಿಳಿದು ಬದುಕನ್ನು ಬದುಕುವ ರೀತಿಯನ್ನು ಕಂಡುಕೊಳ್ಳಬೇಕು. ಜಢ ಸಂಪ್ರದಾಯಗಳ ಸಂಕೋಲೆಯನ್ನು ಕಿತ್ತೆಸೆದು ಪ್ರಗತಿಗಾಮಿ ಜೀವನ ಮಾರ್ಗದಲ್ಲಿ ಮುನ್ನೆಡೆಯಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಪೊಲೀಸ್ ಠಾಣೆಯಲ್ಲಿ ಕಾರಂತಜ್ಜ..!

- ಜಿ.ಎ.ಜಗದೀಶ್, ನಿವೃತ್ತ ಪೊಲೀಸ್ ಅಧೀಕ್ಷಕರು,ದಾವಣಗೆರೆ
ಕಡಲತೀರದ ಭಾರ್ಗವ ಎಂದೇ ಪ್ರಸಿದ್ಧಿಯಾಗಿದ್ದ ಕನ್ನಡದ ಮೇರು ಸಾಹಿತಿ ಕೋಟಾ ಶಿವರಾಮ ಕಾರಂತರವರು ನಮ್ಮನ್ನಗಲಿ ಇದೇ ಡಿಸೆಂಬರ್ 9 ಕ್ಕೆ 23 ವರ್ಷಗಳು ಸಂದಿದೆ. ನಡೆದಾಡುವ ವಿಶ್ವಕೋಶದಂತಿದ್ದ ಕಾರಂತಜ್ಜ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ ಹೀಗೆ ನಾನಾ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಕ್ಷರಲೋಕವನ್ನು ಸಮೃದ್ಧಗೊಳಿಸಿದವರು. ಸಾಹಿತ್ಯ ಕೃಷಿಯಲ್ಲದೆ ಯಕ್ಷಗಾನ, ಪರಿಸರ ಕಾಳಜಿಯೂ ಅವರ ಆಸಕ್ತಿಗಳಾಗಿದ್ದವು. ಅವರ ಪುಣ್ಯಸ್ಮರಣೆಯ ಪ್ರಯುಕ್ತ ಹೀಗೊಂದು ಲೇಖನ.
ಕಾರಂತಜ್ಜನ ಒಡನಾಟದಿಂದ ನಾನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಂತೆ ಅವರಿಗೆ ಮೊದ ಮೊದಲು ಪೊಲೀಸರ ಬಗ್ಗೆ ಒಂದು ಬಗೆಯ ತಾತ್ಸಾರ, ಸಣ್ಣ ಪ್ರಮಾಣದ ಸಿಟ್ಟೂ ಇದ್ದಂತಿತ್ತು. ಅದಕ್ಕೊಂದು ಪುಟ್ಟ ಹಿನ್ನೆಲೆಯೂ ಇದೆ. 1983-84 ರ ಆಸುಪಾಸಿನಲ್ಲಿ ಒಮ್ಮೆ ಶಿವರಾಮ ಕಾರಂತರ ಮನೆಯಲ್ಲಿ ಕಳ್ಳತನವಾಗಿತ್ತಂತೆ. ಸ್ವಲ್ಪ ದುಬಾರಿ ಮೌಲ್ಯದ ಸರುಕುಗಳೇ ಕಾಣೆಯಾಗಿದ್ದವು. ಪೊಲೀಸರಿಗೆ ದೂರನ್ನೂ ಕೊಟ್ಟಿದ್ದರು. ಆದರೆ ಕಳ್ಳತನವನ್ನು ಭೇದಿಸುವಲ್ಲಿ ಪೊಲೀಸರು ಅಷ್ಟೇನು ಮುತುವರ್ಜಿ ತೋರಿಸಿರಲಿಲ್ಲವಂತೆ. ಇದರಿಂದ ಪೊಲೀಸ್ ಇಲಾಖೆಯ ಮೇಲೆಯೇ ಅವರಿಗೆ ಒಂದು ಬಗೆಯ ತಾತ್ಸಾರ ಮಡುಗಟ್ಟಿತ್ತು.
1987 ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಶುಭ ದಿನದಂದು ಕೋಟಾ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಆಗಿ ನಾನು ಚಾರ್ಜ್ ತೆಗೆದುಕೊಂಡಾಗ,ಕನ್ನಡ ಸಾಹಿತ್ಯದ ಕುರಿತು ಅಪಾರ ಅಭಿರುಚಿ ಇರುವ ನನಗೆ ಸಹಜವಾಗಿಯೇ ನಮ್ಮದೇ ಠಾಣಾ ವ್ಯಾಪ್ತಿಯ ಸಾಲಿಗ್ರಾಮದಲ್ಲಿ ನೆಲೆಸಿರುವ ಕಾರಂತಜ್ಜನನ್ನು ಭೇಟಿ ಮಾಡಬೇಕೆಂಬ ಹಂಬಲ ಮೂಡಿತು. ನನ್ನ ಈ ಹುಕಿಯನ್ನು ಅರಿತ ಸಿಬ್ಬಂದಿಗಳು, ಸಾರ್, ಕಾರಂತರಿಗೆ ಪೊಲೀಸರೆಂದರೆ ಅಷ್ಟಕ್ಕಷ್ಟೇ, ಯಾಕೆ ಅವರ ಉಸಾಬರಿಗೆ ಹೋಗಿ ಮುಖಭಂಗ ಮಾಡಿಸಿಕೊಳ್ತೀರಿ ಅನ್ನೋ ಗೀತೋಪದೇಶ ಮಾಡಿದರು. ಆದರೆ ನಾನು ಜಗ್ಗಲಿಲ್ಲ.
ಒಂದು ದಿನ ಕಾರಂತಜ್ಜನ ಮನೆ “ಸುಹಾಸ್” ಮೆಟ್ಟಿಲು ತುಳಿದೇಬಿಟ್ಟೆ. ತುಸು ಅಳುಕಿನಿಂದಲೇ ಒಳನಡೆದೆ. ನಮ್ಮ ಸಿಬ್ಬಂದಿಗಳು ಯಾವ ಪರಿ ಭಯವನ್ನು ನನ್ನಲ್ಲಿ ಮೂಡಿಸಿದ್ದರೆಂದರೆ ನನ್ನ ಮೈಮೇಲಿನ ಸಮವಸ್ತ್ರ ನೋಡುತ್ತಿದ್ದಂತೆಯೇ ಕ್ಯಾಕರಿಸಿ ಉಗಿದು ಕಳಿಸಿಬಿಡುತ್ತಾರೇನೋ ಎಂಬ ಆತಂಕ ನನ್ನಲ್ಲಿತ್ತು. ನಮ್ಮ ಸಿಬ್ಬಂದಿಗಳಷ್ಟೇ ಅಲ್ಲ, ನನಗೆ ಪರಿಚಯವಿದ್ದ ಅದೇ ಸಾಲಿಗ್ರಾಮದ ಅನೇಕರು ಸೂಕ್ಷ್ಮ ಸ್ವಭಾವದ ಕಾರಂತರನ್ನು ಮಾತನಾಡಿಸುವುದಕ್ಕೇ ಹೆದರಿಕೊಳ್ಳುತ್ತಿದ್ದ ಅನುಭವಗಳನ್ನೂ ನಾನು ಕೇಳಿದ್ದೆ.
ಆದರೆ ಅಂತದ್ದೇನೂ ಘಟಿಸಲಿಲ್ಲ. ಮನೆಯಲ್ಲೇ ಇದ್ದ ಅವರು ನನ್ನನ್ನು ಆತ್ಮೀಯತೆಯಿಂದಲೇ ಸ್ವಾಗತಿಸಿದರು. ಅಷ್ಟೇ ತಲ್ಲೀನತೆಯಿಂದ ನನ್ನೊಂದಿಗೆ ಲೋಕಾರೂಢಿ ಹರಟಿದರು. ಅಲ್ಲಿಂದಾಚೆಗೆ ಆಗಾಗ್ಗೆ ಅವರ ಮನೆಗೆ ಭೇಟಿ ನೀಡಿ, ಅವರು ವಿರಾಮದಿಂದಿದ್ದರೆ ಹರಟೆ ಹೊಡೆದು ಬರುವ ಪರಿಪಾಠ ಬೆಳೆಸಿಕೊಂಡೆ.
ಸಾಮಾನ್ಯವಾಗಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ನಾಗರಿಕ ಸಮಿತಿ ಸಭೆ ನಡೆಸುವ ಪ್ರತೀತಿ ಇದೆ. ಅಂತೆಯೇ ಕೋಟ ಪೊಲೀಸ್ ಠಾಣಾ ಪ್ರಭಾರ ವಹಿಸಿಕೊಂಡ ನಂತರ ಮೊದಲ ನಾಗರಿಕ ಸಮಿತಿ ಸಭೆಗೆ ಏನಾದರೂ ಮಾಡಿ ಡಾ. ಶಿವರಾಮ ಕಾರಂತರನ್ನು ಕರಸಲೇಬೇಕೆಂದು ಮನಸ್ಸಿನಲ್ಲಿ ಕಾಡುತ್ತಿತ್ತು. ಹಾಗಾಗಿ ನಾಗರಿಕ ಸಮಿತಿಯ ಮೂವತ್ತು ಸದಸ್ಯರ ಪಟ್ಟಿಯನ್ನು ನವೀಕರಿಸಲು ನಿರ್ಧರಿಸಿದೆ.
ಈ ಪಟ್ಟಿಗೆ ಕಾರಂತಜ್ಜರನ್ನು ಸೇರಿಸುವುದು ನನ್ನ ಇರಾದೆಯಾಗಿತ್ತು. ಒಂದು ಸಂಜೆ ಅವರ ಮನೆಗೆ ಹೋಗಿ ಅಳುಕಿನಿಂದಲೆ ಅವರ ಅನುಮತಿ ಕೇಳಿದೆ. ಸಭೆಯ ವಿಚಾರ, ಕಾರ್ಯವೈಖರಿ, ಉದ್ದೇಶ ಮೊದಲಾದವುಗಳನ್ನು ನನ್ನೊಂದಿಗೆ ಚರ್ಚಿಸಿ ನಂತರ ಒಪ್ಪಿಗೆ ಕೊಟ್ಟರು. ನನಗೋ ಎಲ್ಲಿಲ್ಲದ ಖುಷಿ.1987 ರ ನವೆಂಬರ್ ತಿಂಗಳ ಒಂದು ದಿನ ಸಭೆಯ ದಿನಾಂಕ ಗೊತ್ತು ಮಾಡಿ ಎಲ್ಲರಿಗೂ ಸುದ್ದಿ ತಲುಪಿಸುವ ವ್ಯವಸ್ಥೆ ಮಾಡಿದೆ.
ಕಾರಂತಜ್ಜ ಈ ಪೊಲೀಸ್ ಸಭೆಗೆ ಬರುತ್ತಿರೋ ವಿಚಾರ ಕೇಳಿ ಇತರ ಸದಸ್ಯರೆಲ್ಲಾ ಅಚ್ಚರಿ ವ್ಯಕ್ತಪಡಿಸಿದರು. ‘ಇಲ್ಲಾ, ಅವರು ಬರೋಲ್ಲ’ ಬಿಡಿ ಎಂಬ ನಕಾರಾತ್ಮಕ ಮಾತುಗಳನ್ನೇ ಆಡಿದರು. ಆದರೆ ನನಗೆ ವಿಶ್ವಾಸವಿತ್ತು. ಈ ಕೌತುಕ ನೋಡುವುದಕ್ಕೋ ಏನೋ, ಸಭೆಯ ದಿನ ಪಟ್ಟಿಯಲ್ಲಿದ್ದ ಮೂವತ್ತು ಸದಸ್ಯರ ಪೈಕಿ ದಾಖಲೆಯ ಇಪ್ಪತ್ತೇಳು ಜನ ಅವಧಿಗೂ ಮುನ್ನವೆ ಠಾಣೆಯಲ್ಲಿ ಬಂದು ಜಮಾಯಿಸಿದರು.
ಅವರ ಉತ್ಸಾಹ ಕಂಡು ನನಗೂ ಕೊಂಚ ದಿಗಿಲು ಶುರುವಾಯ್ತು. ಕಾರಂತಜ್ಜ ಕೊನೇ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿಬಿಟ್ಟರೆ, ಇವರೆದುರಿಗೆ ಮುಜುಗರ ಅನುಭವಿಸಬೇಕಾಗುತ್ತದಲ್ಲ ಅಂತ ಒಳಗೊಳಗೇ ಗಲಿಬಿಲಿಗೊಂಡೆ. ಕಾರಂತರನ್ನು ಕರೆತರಲು ಒಬ್ಬ ಎ.ಎಸ್.ಐ.ಗೆ ಹೇಳಿ ಕಾರಿನ ವ್ಯವಸ್ಥೆ ಮಾಡಿ ಕಳಿಸಿದೆ.
ಕೊನೆಗೂ ಕಾರಂತರು ಸಭೆಗೆ ಬಂದೇ ಬಿಟ್ಟರು. ಎಲ್ಲರಿಗೂ ಆಶ್ಚರ್ಯ! ನನಗೆ ಮಾತ್ರ ನಿಟ್ಟುಸಿರು!!. ಹಾರ ಹಾಕಿ ಸ್ವಾಗತಿಸಿ ಸಭೆ ಶುರು ಮಾಡಿದೆವು. ಸುಮಾರು ಎರಡು ಗಂಟೆ ಕಾಲ ನಡೆದ ಸಭೆಯುದ್ದಕ್ಕೂ ಉಪಸ್ಥಿತರಿದ್ದ ಕಾರಂತಜ್ಜ ಅಪರಾಧ ತಡೆ, ಸುಗಮ ಸಂಚಾರ ಸುವ್ಯವಸ್ಥೆ ಹಾಗೂ ಸಾಮಾಜಿಕ ಪಿಡುಗುಗಳನ್ನು ಹತ್ತಿಕ್ಕುವ ಬಗ್ಗೆ ಬಹಳಷ್ಟು ಉಪಯುಕ್ತ ಸಲಹೆ ನೀಡಿದರು.
ಕೊನೆಗೆ, ಕಾರಿನಲ್ಲೆ ಅವರನ್ನು ಬೀಳ್ಕೊಡುವ ವ್ಯವಸ್ಥೆ ಮಾಡಿದೆವು. ಅಂತೂ ಕಾರಂತರನ್ನು ಠಾಣೆಗೆ ಕರೆಸಿದ ನನ್ನ ‘ಸಾಹಸ’(!)ವನ್ನು ಎಲ್ಲರು ಅವತ್ತು ಕೊಂಡಾಡಿದ್ದೇ, ಕೊಂಡಾಡಿದ್ದು!! ನಾನೂ ಹಿರಿಹಿರಿ ಹಿಗ್ಗಿ ಹೋದೆ. ಮಾರನೇ ದಿನ ಉದಯವಾಣಿ ಪತ್ರಿಕೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಡಾ.ಶಿವರಾಮ ಕಾರಂತರು ಎನ್ನುವ ಶೀರ್ಷಿಕೆಯಲ್ಲಿ ನಾಗರಿಕ ಸಮಿತಿ ಸಭೆಯ ನಡವಳಿಗಳ ಕುರಿತು ಲೇಖನ ಪ್ರಕಟವಾಗಿತ್ತು.
ನನ್ನ ಪಾಲಿನ ಅತಿದೊಡ್ಡ ದುರದೃಷ್ಟಕರ ಸಂಗತಿಯೆಂದರೆ,ಈ ಖಾಕಿ ಸಮವಸ್ತ್ರದ ಹೊಣೆ ಹೊತ್ತೇ ನಾನು ಅವರ ಅಂತ್ಯಸಂಸ್ಕಾರದ ಬಂದೋಬಸ್ತ್ ಡ್ಯೂಟಿಯನ್ನೂ ಮಾಡಬೇಕಾಗಿ ಬಂದದ್ದು.1997 ರಲ್ಲಿ ನಾನು ಕಾರ್ಕಳದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಡಿಸೆಂಬರ್ 9 ರ ಮುಂಜಾನೆ ಉಡುಪಿಯ ಎಸ್.ಪಿ.ಯವರು ಫೋನ್ ಮಾಡಿ, ‘ಶಿವರಾಮ ಕಾರಂತರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಅವರ ಹುಟ್ಟೂರು ಕೋಟಾದಲ್ಲೆ ಅಂತ್ಯಸಂಸ್ಕಾರ ನಡೆಯಲಿದ್ದು, ಕೂಡಲೇ ಸ್ಥಳಕ್ಕೆ ಹೋಗಿ ಬಂದೋಬಸ್ತ್ ಉಸುವಾರಿ ವಹಿಸಿ’ ಎಂದರು. ಎರಡು ದಿನದ ಹಿಂದಷ್ಟೇ, ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ, ಯೋಗಕ್ಷೇಮ ವಿಚಾರಿಸಲೆಂದು ಬಂದಿದ್ದ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಹಾಗೂ ಸಚಿವರಾಗಿದ್ದ ಅನಂತನಾಗ್ ಅವರ ಸಂಗಡ ನಾನೂ ಹೋಗಿ ಹಾಸಿಗೆ ಮೇಲೆ ಪ್ರಜ್ಞಾಹೀನರಾಗಿ ಮಲಗಿದ್ದ ಕಾರಂತಜ್ಜರನ್ನು ಕಣ್ತುಂಬಿಕೊಂಡು ಬಂದಿದ್ದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂಬ ನನ್ನ ಮನವಿ ದೇವರನ್ನು ತಲುಪುವ ಮೊದಲೇ,ಕಾರಂತರ ಅಗಲಿಕೆಯ ಬೇಸರದ ವಾರ್ತೆ ನನ್ನನ್ನು ದುಃಖಕ್ಕೀಡು ಮಾಡಿತ್ತು.
ಉಡುಪಿ-ಕುಂದಾಪುರ ಮುಖ್ಯರಸ್ತೆಯಲ್ಲಿರುವ ಶ್ರೀ ಶಿವರಾಮ ಕಾರಂತರವರ ಹಳೆಯ ಮನೆ ಬಳಿ ಸೂಕ್ತ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ. ಬೆಳಿಗ್ಗೆ ಸುಮಾರು 11 ಗಂಟೆಗೆ ಡಾ.ಶಿವರಾಮ ಕಾರಂತರ ಪಾರ್ಥಿವ ಶರೀರವು ಆಂಬ್ಯುಲೆನ್ಸ್ ಮೂಲಕ ಬಂದು ತಲುಪಿತು. ಅವತ್ತು ಕಾರಂತಜ್ಜನಿಗೆ ವಿದಾಯ ಹೇಳಲು ಸುಮಾರು ನಾಲ್ಕೈದು ಸಾವಿರ ಜನ ನೆರೆದಿದ್ದರು.
ಸಾರ್ವಜನಿಕ ದರ್ಶನದ ನಂತರ ಸಂಜೆ ಸುಮಾರು 5-30ಕ್ಕೆ ಮನೆಯ ಹಿಂಭಾಗದ ತೋಟದಲ್ಲಿ ಮೊದಲೇ ಸಿದ್ದಪಡಿಸಿದ್ದ ಚಿತೆಯೇರಿದ ಕಾರಂತಜ್ಜನ ಶರೀರ ತನ್ನೆಲ್ಲಾ ಚೇತನವನ್ನು ನಮ್ಮಲ್ಲೇ ಉಳಿಸಿ, ನಿಸರ್ಗದಲ್ಲಿ ಲೀನವಾಯ್ತು. ಇತ್ತ ಚಿತೆಯ ಕೆನ್ನಾಲೆಗಳು ಕಡಲ ಭಾರ್ಗವನನ್ನು ತಬ್ಬಲು ಮುಗಿಲತ್ತ ಮುಖ ಮಾಡಿ ಸ್ಪರ್ಧೆಗಿಳಿದಿದ್ದರೆ, ಅತ್ತ ಪಡುವಣ ದಿಕ್ಕಿನಲ್ಲಿ ನೇಸರ ಕೂಡಾ ಭಾರವಾದ ಮನಸ್ಸಿನಿಂದ ಕಡಲಾಳದಲ್ಲಿ ಲೀನವಾಗುತ್ತಿದ್ದ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಪ್ರೇಮ ವಿರಾಗಿಯ ಕಾತುರದ ಕವಿತೆಗಳು

- ಪರಶುರಾಮ್. ಎ
“ಪ್ರೇಮ ವಿರಾಗಿಯ ನಡುಗತ್ತಲ ಕವಿತೆಗಳು” ಎಮ್.ಜಿ. ಕೃಷ್ಣಮೂರ್ತಿ ಇಂಡ್ಲವಾಡಿಯವರ ಪ್ರೇಮಿಯೊಬ್ಬನ ಕಾತುರದ ಕವಿತೆಗಳು. ಈ ಸಂಕಲನದಲ್ಲಿ ಒಟ್ಟು 53 ಕವನಗಳಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದ ಕೃತಿಯಾಗಿದೆ. ಕೆ.ವೈ. ನಾರಾಯಣಸ್ವಾಮಿಯವರು ಮುನ್ನುಡಿ ಬರೆದು ಕವಿಗೆ ಮುನ್ಸೂಚನೆಯನ್ನು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕವನ ಸಂಕಲನದ ಬಹುತೇಕ ಕವನಗಳು ಹೆಣ್ಣಿನ ಸ್ಪರ್ಶ ಮತ್ತು ದೈಹಿಕ ಸಾಮೀಪ್ಯದಿಂದ ಪ್ರಾಪ್ತವಾಗುವ ರೋಮಾಂಚನ ತಲ್ಲಣ ಮತ್ತು ಅನುಭವಗಳಿಂದ ತಾನು ಪಡೆದ ಹೊಸ ಅರಿವುಗಳನ್ನು ನಿರೂಪಿಸಿರುವ ರಚನೆಗಳೇ ಈ ಸಂಕಲನದ ತುಂಬಾ ತುಂಬಿಕೊಂಡಿವೆ ಎನ್ನುತ್ತಾ, ಪ್ರೇಮಿಯಾಗಿ ಗೆದ್ದಿರುವ ಹಾಗೇ ಕವಿಯಾಗಿ ಗೆಲ್ಲುವ ದಾರಿ ಗುರಿಯನ್ನು ಕ್ರಮಿಸಬೇಕು. ಕವಿಗೆ ತಾನು ಬರೆಯುತ್ತಿರುವ ಮಾತು ಒಂದು ಪರಂಪರೆ ಸಂಸ್ಕೃತಿಯ ಮುಂದುವರಿಕೆ ಎಂಬ ಎಚ್ಚರ ಮತ್ತು ಭಯಗಳಿರಬೇಕು ಎಂಬ ಎಚ್ಚರಿಕೆ ಸಹ ನೀಡಿದ್ದಾರೆ._
ಒಬ್ಬ ಪ್ರೇಮಿಗೆ ಇರಬಹುದಾದ ನೈಜ ಕಾತುರತೆ, ತುಡಿತಗಳು, ಭ್ರಮೆಗಳು, ಹುಚ್ಚುತನವೆಲ್ಲವೂ ಕವಿತೆಗಳ ಮೂಲಕ ಹೊರಹೊಮ್ಮಿದೆ. ಓದುಗರನ್ನು ಒಬ್ಬ ಪ್ರೇಮಿಯಾಗಿಸಲು ಅಣಿಗೊಳಿಸುವಂತಿದೆ ಈ ವಿರಾಗಿಯ ನಡುಗತ್ತಲ ಕವಿತೆಗಳು.
ಅವಳಿಗಾಗಿ one time story ಕವನದಲ್ಲಿ
ಪ್ರೇಮ ನಿವೇದನೆ ಅದೆಷ್ಟು ಕಷ್ಟ
ಮೈನಡುಗಿಸುವುದು
ಅವಳ ನೋಟ, ಮಾತು
ಅಪ್ಪಾ ಇನ್ನೇನು ಯಾವುದೊ ಸಿಡಿಲು
ಬಡಿಯುವ ಭಾಸ
ಇವೆಲ್ಲವುಗಳಿಂದ ಮೈದಡವಿ
ಮೇಲೇಳುವಷ್ಟರಲ್ಲಿ ಬಾಯಿಂದ ಮಾತೇ ಬಾರದು
ಎನ್ನುತ್ತಾ ಎಲ್ಲಾ ಪ್ರೇಮಿಯೊಳಗೆ ಇರಬಹುದಾದ ಹುಚ್ಚು ಭಯ, ಹುಸಿಭರವಸೆಯನ್ನು ನಂಬುತ್ತಲೇ ಕವನ ಬರೆದಿದ್ದಾರೆ. ಸಂಕಲನದ ಒಂದೊಂದು ಕವನದಲ್ಲಿ ಪ್ರೇಮಿಯೊಬ್ಬನ ಆತಂಕ, ತುಮುಲ, ನಗು, ಕಲ್ಪನಾ ಲೋಕದ ವಿಲಾಸಿಯಾಗಿ ತೇಲುವುದು ಕಾಣಬಹುದು.
“ನನ್ನಮ್ಮ” ಕವನದಲ್ಲಿ ತನ್ನ ತಾಯಿ ಕಂಡ ಜೀವನದ ಬೇಗುಧಿಯ ಜೊತೆಗೆ ಬದುಕಿನ ಸಂಘರ್ಷದಲ್ಲಿ ಸೆಣೆಸುತ್ತ ಸಂತಸವ ಲೆಕ್ಕವನ್ನಿಟ್ಟು ಮಕ್ಕಳ ಭವಿಷ್ಯದ ಒಳಿತಿಗಾಗಿ ಕಾಯುವ ತಾಳ್ಮೆ ಎದ್ದು ತೋರುತ್ತದೆ.
ಮನೆಯ ಗುಬ್ಬಿಮರಿಗಳ
ಗಿಡುಗ ಕದ್ದೊಯ್ಯದಂತೆ
ಹದ್ದಾಗಿ ಕಾಯುತ್ತಿರುವುದನ್ನು ಕವಿಯ ಕಣ್ಣಂಚಿನಿಂದಲೆ ಎಲ್ಲವನ್ನೂ ಗ್ರಹಿಸಬಹುದಾಗಿದೆ.
ಪುಸ್ತಕದ ಮುಖಪುಟ ವಿನ್ಯಾಸ ಹಾಗೂ ಒಳಪುಟದಲ್ಲಿನ ಚಂದ್ರು ಕನಸು, ದಿವಾಕರ ಕೆನ್ ರವರ ರೇಖಾಚಿತ್ರ ಕಲೆಗಳು ಪುಸ್ತಕಕ್ಕೆ ಮತ್ತಷ್ಟು ಮೆರುಗನ್ನು ಹೆಚ್ಚಿಸಿದೆ. ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ಕೃಷ್ಣಮೂರ್ತಿಯವರು ಕವಿತೆಗಳಿಂದ ಗೆದ್ದಿದ್ದಾರೆ. ಪ್ರೇಮಿಯೊಬ್ಬ ಕಾಪಿಟ್ಟುಕೊಳ್ಳಲೆ ಬೇಕಾದ ಪುಸ್ತಕವಾಗಿ ಹೊರಹೊಮ್ಮಲಿದೆ ಈ ಪುಸ್ತಕ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
-
ದಿನದ ಸುದ್ದಿ6 days ago
ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ
-
ಲೈಫ್ ಸ್ಟೈಲ್6 days ago
ಪಕ್ಷಿ ಪರಿಚಯ | ಬೆಳ್ಗಣ್ಣ
-
ದಿನದ ಸುದ್ದಿ7 days ago
“ನೀನು ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು..?” : ಸಚಿವ ಈಶ್ವರಪ್ಪ
-
ದಿನದ ಸುದ್ದಿ7 days ago
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
-
ಲೈಫ್ ಸ್ಟೈಲ್6 days ago
ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!
-
ದಿನದ ಸುದ್ದಿ6 days ago
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?
-
ದಿನದ ಸುದ್ದಿ3 days ago
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ