Connect with us

ಭಾವ ಭೈರಾಗಿ

ಕವಿತೆ | ಸ್ವತ್ತು ಈ ಹೊತ್ತು

Published

on

  • ಗಂಗಾಧರ ಬಿ ಎಲ್ ನಿಟ್ಟೂರ್

 

ಗತ್ತೋ ಗತ್ತು ಕೊಡಲು ಇ ಸ್ವತ್ತು
ಹೋದಂತೆ ಆಡುವರು ತಮ್ಮಪ್ಪನ ಸ್ವತ್ತು
ದುಡ್ಡು ಕೀಳಲು ನಾನಾ ಮಸಲತ್ತು.

ಕಾಡಿದೆ ಮನುಕುಲಕೆ ಮಾಯಾವಿ ವಿಪತ್ತು
ದುಡಿದವರ ಬಾಯಿಗಿಲ್ಲ ಕೈಗೆ ಬಂದ ತುತ್ತು
ಕುಳಿತಿಹನು ಶ್ರಮಿಕ ಕೈ ಹೊತ್ತು
ನೆತ್ತಿ ಉರಿ ಆಡಳಿತಕ್ಕೇನು ಗೊತ್ತು ?

ವೃಥಾ ಒಡ್ಡಿದರೆ ಆಪತ್ತು ನೌಕರಿಗೆ ಕುತ್ತು
ರೊಚ್ಚಿಗೆಬ್ಬಿಸಲು ಗೂಸಾ ಗ್ಯಾರೆಂಟಿ ಬಿತ್ತು
ರುಚಿಸಬೇಕೇ ನಿಷ್ಠೆಯ ತಾಕತ್ತು !

ಮಧ್ಯ ಪ್ರವೇಶಿಸಲಿ ಇಲಾಖೆ ಎಚ್ಚೆತ್ತು
ತೋರಲಿ ಕಾಳಜಿಯ ಕಸರತ್ತು
ನಾಯಕರ ಕಳಕಳಿಗೆ ತುರ್ತು ಈ ಹೊತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಕವಿತೆ | ನಟಿಸುತ್ತೇನೆ ಈ ಚಿತ್ರಶಾಲೆಯಲ್ಲಿ

Published

on

  • ಉದಯ್ ಕುಮಾ‌ರ್. ಎಂ, ಬಸವನತ್ತೂರು-ಕೊಡಗು

ದುಗುಡದ ದನಿಗಳೆಲ್ಲ
ಹುದುಗಿ ಹೋಗಲಿ
ನನ್ನೊಳಗೆ
ದುಃಖದ ನದಿಗಳೆಲ್ಲ
ಹಾದು ಹೋಗಲಿ..
ನಾನು ಕೂಡ ನಿನ್ನಂತೆ
ನಗೆಯ ನಟಿಸುತ್ತೇನೆ..
ನಿರಾಕಾರ ಕ್ಯಾನ್ವಾಸಿನ ಮೇಲೆ
ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ
ಒಮ್ಮೊಮ್ಮೆ ಬೇಡದ್ದೂ..
ಯಾರ್ಯಾರದ್ದೊ ಇಷ್ಟಾನಿಷ್ಟದಂತೆ!

ಗತದ ಘೋರ ಪಾತಕವನ್ನು
ತರಚು ಗಾಯವೆಂದು ಕರೆದು,
ಹೋದಲ್ಲಿ, ಬಂದಲ್ಲಿ
ಅದನ್ನೇ ಜಪಿಸಿ ತಳವೂರುತ್ತೇನೆ…
ಹುಸಿ ನೆಮ್ಮದಿಯ ನಿಟ್ಟುಸಿರ
ಹೊರಸೂಸಿ..

ಅತ್ಯಾಸೆಯ ರೆಕ್ಕೆಗಳ
ಮುರಿದುಕೊಳ್ಳುತ್ತೇನೆ
ದಿಗಂತದೆಡೆಗೆ ಹಾರುವ
ಕನಸುಗಳ ಸುಟ್ಟು,
ಅದರ ಬೂದಿಯನ್ನೆ
ವಿಭೂತಿಯಾಗಿ ಬಳಿದು,
ವೈರಾಗ್ಯದ
ಮಾತುಗಳನುದುರಿಸುತ್ತಾ..

ಸುತ್ತಲಿನ ಸತ್ತ ಮೆದುಳುಗಳೊಳಗೆ ನಿರಾಕಾರವಾದವುಗಳೆನೇನೋ ಮೊಳೆತು,
ಬೇರು ಬಿಟ್ಟು, ಆಳಕ್ಕಿಳಿದು
ಕೈಕೊಡಲಿಗಳಾಗಿ
ಕತ್ತು ಕತ್ತರಿಸುವ ಫರ್ಮಾನು
ಹೊರಡಿಸುವಾಗಲೂ
ನಿಶ್ಚಿಂತೆಯ ನಟಿಸುತ್ತೇನೆ!

ಮಹನೀಯನ ಚಿತ್ರಗಳು
ಬೇಕಾದಂತೆ ಬರೆಯಲ್ಪಡುವ,
ಬಿಕರಿಯಾಗುವ, ಚಿತ್ರಶಾಲೆಯಲ್ಲಿ;
ಜೀ..ಹುಜೂರ್..ಉಸುರುತ್ತಾ,
ನಿಂತ ಮೂಢರ ಗುಂಪುಗಳೊಳಗೆ
ಕಾಲ ಸವೆಸುತ್ತೇನೆ. (ಕವಿ:ಉದಯ್ ಕುಮಾ‌ರ್. ಎಂ, ಬಸವನತ್ತೂರು-ಕೊಡಗು)

ಉದಯ್ ಕುಮಾ‌ರ್. ಎಂ, ಬಸವನತ್ತೂರು-ಕೊಡಗು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಅಲರ್ಟ್..!

Published

on

  • ಸುನೀತ ಕುಶಾಲನಗರ

ದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.

ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .

ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.

ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.

ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು

ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!

ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.

ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)

ಕವಯಿತ್ರಿ: ಸುನೀತ ಕುಶಾಲನಗರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending