ಭಾವ ಭೈರಾಗಿ
ಪುಸ್ತಕ ವಿಮರ್ಶೆ | ಒಡಲಬೇಗೆಯ ನಡುವೆ ಹೊಳೆವ ‘ಮಡಿಲ ನಕ್ಷತ್ರ’

- ಡಾ.ಎನ್.ಕೆ.ಪದ್ಮನಾಭ
ಕವಿತೆ ಎಂದರೆ ಹಾಗೆಯೇ. ಅದು ಮನಸ್ಸಿಗೆ ಹತ್ತಿರ. ಬುದ್ಧಿ-ಭಾವಗಳ ಎಚ್ಚರದೊಳಗೆ ಸೃಷ್ಟಿಯಾಗುವ ಕೌತುಕ. ಒಂದಷ್ಟು ಖುಷಿ, ಒಂದಷ್ಟು ವಿಷಾದದ ಛಾಯೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಬೆಳಕಿನ ಗಮ್ಯವನ್ನು ಹೊಳೆಸುವ ದಿವ್ಯತ್ವ ಅದಕ್ಕಿರುತ್ತದೆ.
ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಮನುಷ್ಯ ಸ್ವಭಾವ ಆವಾಹಿಸಿಕೊಳ್ಳುತ್ತಲೇ ಇರುವ ಸಂಕೀರ್ಣತೆಯನ್ನು ಅದರ ಎಲ್ಲಾ ನೆಲೆಗಳೊಂದಿಗೆ ಪರೀಕ್ಷಿಸಿ ದಾಖಲಿಸುವ ಚಾರಿತ್ರಿಕ ಎನ್ನಬಹುದಾದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಲೇ ಇರುತ್ತದೆ.
ಓದಿಸಿಕೊಳ್ಳುವ ಮತ್ತು ಹಾಗೆ ಓದಿಸಿಕೊಳ್ಳುತ್ತಲೇ ಆಪ್ತವಾಗಿಬಿಡುವ ಅದರ ವ್ಯಾಕರಣ ಭಿನ್ನವಾಗುತ್ತಲೇ ಇರುತ್ತದೆ. ಹೀಗಾಗಿಯೇ ನಿರ್ದಿಷ್ಟ ಚೌಕಟ್ಟುಗಳಾಚೆಗೆ ಜಿಗಿದು ಹೊಸದೊಂದು ಶೈಲಿಯನ್ನು ಹಾದು ವಿನೂತನ ಅರ್ಥವಿನ್ಯಾಸ ರೂಪಿಸುವಷ್ಟು ಪ್ರಭಾವೀಯಾಗಿರುತ್ತದೆ.
ಮತ್ತೊಂದು ದೇಶಕಾಲದ ಕಾವ್ಯಮಾದರಿಯ ಪ್ರಭಾವ ಜೊತೆಯಾದರಂತೂ ಕವಿತೆಯ ಜೀವಂತಿಕೆಯ ಶಕ್ತಿ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಕನ್ನಡದ ಗಜಲ್ ಮೂಲಕ ಇದು ಸಾಧ್ಯವಾಗುತ್ತಿದೆ.
ಪರ್ಷಿಯಾ ಮೂಲದ ಗಜಲ್ ಕಾವ್ಯಪ್ರಕಾರ ಕನ್ನಡದೊಳಗೆ ಅವತರಿಸಿದ ಪರಿಯೇ ಅನನ್ಯವಾದುದು.
ಹಿಂದಿ, ತರ್ಕಿಷ್, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಶಾಬ್ದಿಕ ಶಕ್ತಿಯೊಂದಿಗಿನ ಗಜಲ್ ಕನ್ನಡತ್ವದ ಸ್ಪರ್ಶ ಪಡೆದು ಹೊಸ ಬಗೆಯ ಕಾವ್ಯಾಸ್ವಾದ ಹೊಮ್ಮಿಸುತ್ತಿದೆ. ನಮ್ಮದಲ್ಲದ ದೇಶದ ಭಾಷಿಕ ಸಂಸ್ಕೃತಿಯ ಪರಿಸರದೊಳಗೆ ರೂಪುಗೊಂಡ ಕಾವ್ಯಾಕೃತಿಯಾಗಿದ್ದ ಗಜಲ್ ಭಾರತದಲ್ಲಿ ಭಿನ್ನ ಸ್ವರೂಪವನ್ನು ತನ್ನದಾಗಿಸಿಕೊಂಡಿದ್ದಕ್ಕೆ ಇಲ್ಲಿಯ ಪ್ರತಿಭಾನ್ವಿತರ ಗ್ರಹಿಕೆ ಮತ್ತು ಅನ್ವಯಿಸುವಿಕೆಯ ಕೌಶಲ್ಯದ ಕಾಣ್ಕೆ ದೊಡ್ಡದು. ಶಾಂತರಸರಿಂದ ಶುರುವಾದ ಈ ಕಾಣ್ಕೆಯ ಯಾನ ಇದೀಗ ಪರಿಪಕ್ವತೆಯ ಪ್ರವರ್ಧಮಾನದ ಆಯಾಮ ಪಡೆದಿದೆ.
ಇದನ್ನು ಸಾಬೀತುಪಡಿಸುವಂತೆಯೇ ರೇಖಾ ಭಟ್ಟ ಹೊನ್ನಗದ್ದೆ ಅವರ ‘ಮಡಿಲ ನಕ್ಷತ್ರ’ ಗಜಲ್ ಸಂಕಲನ ಇದೆ. ಇದನ್ನು ಕೇವಲ ಗಜಲ್ ಸಂಕಲನ ಎನ್ನುವುದಕ್ಕಿಂತ ಗಜಲ್ ಪ್ರಕಾರಕ್ಕೆ ನೂತನ ಆಯಾಮ ದಕ್ಕಿಸಿಕೊಟ್ಟ ಕಲಾಕೃತಿ ಎನ್ನುವುದು ಸೂಕ್ತ. ಪ್ರೀತಿ-ಪ್ರೇಮದ ಭಾವಗಳನ್ನು ತಾತ್ವಿಕತೆಗೆ ತಿರುಗಿಸುವ ಸಾಧ್ಯತೆಯನ್ನು ಮನವರಿಕೆ ಮಾಡಿಕೊಡುವುದರಲ್ಲಿಯೇ ಈ ಕೃತಿಯ ಹೆಗ್ಗಳಿಕೆ ಇದೆ.
ಗಜಲ್‍ನಂಥ ಬೇರೊಂದು ದೇಶದ ಭಾಷಿಕ ಸಂಸ್ಕøತಿಯ ಕಾವ್ಯಾತ್ಮಕ ಭಿತ್ತಿಯನ್ನು ಕನ್ನಡೀಕರಿಸುವ ಮತ್ತು ಆ ಮೂಲಕ ಕನ್ನಡದ ಕಾವ್ಯ ಪರಂಪರೆಯನ್ನು ಪ್ರಖರಗೊಳಿಸುವ ಪ್ರಯತ್ನದಲ್ಲಿ ರೇಖಾ ಅವರು ಯಶಸ್ವಿಯಾಗಿದ್ದಾರೆ. ಈ ಯಶಸ್ಸು ಕೇವಲ ಅವರ ವ್ಯಕ್ತಿಗತ ಕಾವ್ಯಪ್ರತಿಭೆಗಷ್ಟೇ ಸೀಮಿತವಲ್ಲ.
ಈ ಪ್ರಕಾರದಲ್ಲಿ ಕಾರ್ಯನಿರ್ವಹಿಸುವವರೆಲ್ಲರಿಗೂ ಒಂದು ಮಾದರಿಯನ್ನು ರೂಪಿಸಿಕೊಡುವ ನಿಟ್ಟಿನಲ್ಲಿ ಈ ಯಶಸ್ಸಿನ ಶ್ರೇಷ್ಠತೆ ಇದೆ. ಮಾಧುರ್ಯದ ನಿವೇದನೆ ಮತ್ತು ವೇದನೆಯ ಅಭಿವ್ಯಕ್ತಿಯನ್ನೇ ಕೇಂದ್ರವಾಗಿಸಿಕೊಂಡ ಗಜಲ್ ಬದಲಾದ ಕಾಲಘಟ್ಟದಲ್ಲಿ ಮನುಷ್ಯ ಮತ್ತು ಜೀವಜೀವಗಳೊಳಗಿನ ಸಂಕೀರ್ಣ ಸ್ವರೂಪದ ಶೋಧನೆಯ ಕಲಾಪ್ರಕಾರವಾಗಿ ಮಾರ್ಪಡುವ ವಿಸ್ಮಯಕ್ಕೆ ಈ ಕೃತಿಯ ಸಾಲುಗಳು ಸಾಕ್ಷಿ ನುಡಿಯುತ್ತವೆ. ಈ ದೃಷ್ಟಿಯಿಂದ ರೇಖಾ ಅವರ ಗಜಲ್ ಬರವಣಿಗೆಯ ಯಶಸ್ಸು ವ್ಯಕ್ತಿಗತ ಗೆಲುವಿನಾಚೆಗಿನ ಸಾಮುದಾಯಿಕ ಆತ್ಮಶೋಧದ ಎತ್ತರವನ್ನೂ ದಕ್ಕಿಸಿಕೊಂಡುಬಿಡುತ್ತದೆ.
ಪ್ರೀತಿ, ಪ್ರೇಮ, ವಿರಹ, ದುಃಖ-ದುಮ್ಮಾನ, ಅಸಹಾಯಕತೆ – ಇವೆಲ್ಲವೂ ಮನುಷ್ಯ ಸ್ವಭಾವದ ಒಳಗೇ ಸಮ್ಮಿಳಿತಗೊಂಡ ವಿವಿಧ ಭಾವಗಳು. ಇವುಗಳನ್ನು ಹೊರತುಪಡಿಸಿ ಮನುಷ್ಯ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲಾಗದು. ಮನುಷ್ಯ ಸ್ವಭಾವವನ್ನು ಅದರ ಎಲ್ಲ ಇತಿ-ಮಿತಿಗಳ ಜೊತೆಗೆ ಸಮಗ್ರವಾಗಿ ಶೋಧಿಸಿ ಆ ಕ್ಷಣಕ್ಕೆ ಮನದೊಳಗೆ ಭಾವುಕ ಸಂಚಲನವನ್ನು ಕವಿತೆ ಮೂಡಿಸುತ್ತದೆ.
ಚೌಕಟ್ಟುಗಳ ದಿಗ್ಬಂಧನದಿಂದ ವಿಮುಕ್ತಗೊಳ್ಳುವುದಕ್ಕೆ ರಹದಾರಿ ತೋರುತ್ತದೆ. ಈ ಅಂತಃಸತ್ವದೊಂದಿಗೇ ಭಾರತೀಯ ಕಾವ್ಯಪ್ರಕಾರ ವಿವಿಧ ಕಾಲಗಳನ್ನು ಹಾದುಹೋಗಿದೆ. ಆಯಾ ಪ್ರಾದೇಶಿಕ ಭಾಷೆಗಳಲ್ಲಿ ರೂಪುಗೊಳ್ಳುವ ಕಾವ್ಯಪ್ರಕಾರವು ಭಾವಸಂವೇದನೆಯ ಬಹುಮುಖೀ ಪಾತ್ರಗಳೊಂದಿಗೆ ಗುರುತಿಸಿಕೊಂಡಿದೆ.
ಈ ಕಾವ್ಯಪರಂಪರೆಯನ್ನು ಸಮಗ್ರವಾಗಿ ಗ್ರಹಿಸಿಕೊಂಡು ಗಜಲ್‍ನ ವ್ಯಾಕರಣ ಪ್ರಜ್ಞೆ ಮತ್ತು ಆಶಯ ವಿನ್ಯಾಸದ ಮಾದರಿಯ ಆಧಾರದಲ್ಲಿ ಸೃಜನಶೀಲತೆಯನ್ನು ಸಾಬೀತುಪಡಿಸುವ ಶ್ರದ್ಧಾಪೂರ್ವಕ ಪ್ರಯತ್ನ ‘ಮಡಿಲ ನಕ್ಷತ್ರ’ದಂಥ ಕೃತಿಯನ್ನು ರೂಪಿಸುತ್ತದೆ.
ಕನ್ನಡದ ಕಾವ್ಯ ಮತ್ತು ಕಥನ ಕ್ರಮಗಳೊಳಗೇ ಬುದ್ಧಿ-ಭಾವಗಳ ಜುಗಲ್‍ಬಂದಿಯ ಎಳೆಗಳನ್ನು ಕಾಣಬಹುದು. ಮಹಿಳೆಯಾದ ಕಾರಣಕ್ಕೇ ಅನುಭವಿಸುವ ಎಲ್ಲ ಬಗೆಯ ಸಂಕಟಗಳು ಸಾಹಿತ್ಯದ ಮೂಲಕ ಧ್ವನಿತವಾಗಬೇಕಾದ ಅನಿವಾರ್ಯತೆ ಈಗಲೂ ಇದೆ. ಈ ಅನಿವಾರ್ಯತೆಯನ್ನು ಕನ್ನಡದ ಮಹಿಳಾ ಬರಹಗಾರರು ಕಾಡಿಸಿಕೊಂಡು ಸೃಜನಶೀಲ ಅಭಿವ್ಯಕ್ತಿ ಸಾಧಿಸಿದ್ದಾರೆ ಎನ್ನಬಹುದು.
ಬೌದ್ಧಿಕ ಎಚ್ಚರದೊಳಗೆ ರೂಪುಗೊಂಡ ಕಾವ್ಯ, ಕಥನಗಳು ವಾಸ್ತವದೊಂದಿಗೆ ಮುಖಾಮುಖಿಯಾಗಿ ಬಂಡಾಯದ ಧ್ವನಿಯನ್ನು ಅಣುರಣಿಸಿವೆ. ಪ್ರತಿಭಾ ನಂದಕುಮಾರ್ ಕಾವ್ಯಧ್ವನಿ ಈ ಬಗೆಯದ್ದು. ಸತ್ಯವನ್ನು ಅತ್ಯಂತ ನಿಷ್ಠುರ ಪ್ರಖರತೆಯ ವ್ಯಾಪ್ತಿಯಲ್ಲಿಟ್ಟು ಸಂಕಟಕ್ಕೆ ಕಾರಣವಾದ ವ್ಯವಸ್ಥೆಯನ್ನು ನಿಕಷಕ್ಕೊಡ್ಡುವ ಕ್ರಮ ಅವರ ಕಾವ್ಯದಲ್ಲಿ ಕಾಣುತ್ತೇವೆ. ವೈದೇಹಿ ಅವರ ಅಭಿವ್ಯಕ್ತಿಯು ಈ ರೀತಿಯದ್ದಲ್ಲ.
ಅಂತಃಕರಣದ ಆಪ್ತ ಭಾಷೆಯೊಳಗೆ ಎಲ್ಲ ಸಂಕಟಗಳನ್ನು ಕಾಣಿಸಿ ಸೌಜನ್ಯದ ಧಾಟಿಯಲ್ಲಿ ಪರ್ಯಾಯದ ಹಾದಿ ಹೊಳೆಸುವ ಪ್ರತಿಭೆ ಅವರದ್ದು. ಬುದ್ಧಿ-ಭಾವಗಳೊಂದಿಗಿನ ಈ ಬಗೆಯ ಅಭಿವ್ಯಕ್ತಿ ಮಾದರಿಗಳನ್ನು ಭಿನ್ನವಾಗಿ ಗ್ರಹಿಸಿಕೊಂಡಾಗ ಮಾತ್ರ ಕಾವ್ಯ ಅಥವಾ ಕಥನ ಪ್ರಕಾರಕ್ಕೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ನೂತನ ಆಯಾಮ ನೀಡುವುದಕ್ಕೆ ಸಾಧ್ಯವಾಗುತ್ತದೆ.
ರೇಖಾ ಭಟ್ಟ ಹೊನ್ನಗದ್ದೆ ಅವರ ಗಜಲ್ ಸಂಕಲನ ಈ ಸಾಧ್ಯತೆಯನ್ನು ಕಂಡರಿಸುತ್ತದೆ. ‘ಮಡಿಲ ನಕ್ಷತ್ರ’ ಶೀರ್ಷಿಕೆಯೇ ಹಲವು ಅರ್ಥಗಳನ್ನು ಧ್ವನಿಸುತ್ತದೆ. ಒಡಲೊಳಗೆ ಸಂಕಟಗಳ ಕೆಂಡ ಧಗಧಿಗಿಸುತ್ತಿದ್ದರೂ ಅದು ನೇರವಾಗಿ ಇಲ್ಲಿ ದಾಖಲಾಗದು. ಅದರ ಬದಲು ‘ಮಡಿಲ ನಕ್ಷತ್ರ’ ಹೊಳೆಯುತ್ತದೆ. ಆಕ್ರೋಶ, ಬಂಡಾಯಕ್ಕಿಂತ ಬದಲಾವಣೆಯ ಬೆಳಕಿನೆಡೆಗಿನ ಆಶಾವಾದಿ ನೋಟವನ್ನೇ ರೇಖಾ ಅವರು ಮುಖ್ಯವಾಗಿಸಿಕೊಳ್ಳುತ್ತಾರೆ.
ಈ ಕೃತಿಯ ಗಜಲ್‍ಗಳು ಅಂತರಾಳದ ಹೊಯ್ದಾಟಗಳಿಗೆ ಕಾರಣವಾಗುವ ವಾಸ್ತವಗಳನ್ನು ನೆಮ್ಮದಿಯ ನಾಳೆಗಳ ಹುಡುಕಾಟದ ಪ್ರಜ್ಞೆಯೊಂದಿಗೇ ರಚಿತವಾಗಿವೆ. ಆಶಾವಾದ ಕಳೆದುಕೊಳ್ಳದೇ ನಿಷ್ಠುರ ನಿರ್ಲಿಪ್ತತೆಯೊಂದಿಗೇ ಒಡಲಾಳದ ಬೇಗೆಯನ್ನು ಸಹಿಸಿಕೊಂಡು ಹೊಸ ಹೆಜ್ಜೆಗಳ ಕಡೆಗೆ ಪಯಣಿಸುವ ಜೀವನೋತ್ಸಾಹವೇ ಇಲ್ಲಿಯ ಗಜಲ್‍ಗಳ ಮುಖ್ಯಗಮ್ಯವಾಗಿದೆ.
ಸಂಕಲನದುದ್ದಕ್ಕೂ ಕಾಣಿಸಿಕೊಳ್ಳುವ ‘ರೇಖೆ’ ಕೇವಲ ಕಾವ್ಯನಾಮವಷ್ಟೇ ಅಲ್ಲ. ಎಲ್ಲ ಬಗೆಯ ಸಂಕುಚಿತ ಗಡಿರೇಖೆಗಳಾಚೆಗೆ ಜಿಗಿದು ಹೊಸ ಪಲ್ಲಟಗಳೊಂದಿಗಿನ ನಕ್ಷತ್ರಪ್ರಭೆಯೊಂದಿಗೆ ಗುರುತಿಸಿಕೊಳ್ಳುವ ಭಾವುಕ ಹಂಬಲದ ಪ್ರತೀಕವಾಗಿಯೂ ಅದನ್ನು ಗ್ರಹಿಸಬಹುದು. ವ್ಯವಸ್ಥೆಯೊಳಗೇ ರೂಪಿತವಾದ ಚೌಕಟ್ಟುಗಳಿಂದ ವಿಮುಕ್ತಗೊಳ್ಳುವ ಆಂತರ್ಯದ ಶೋಧಪ್ರಜ್ಞೆ ಹೊಳೆಸಿಕೊಂಡ ಎಚ್ಚರದ ಪ್ರತಿಮೆಯನ್ನಾಗಿಯೂ ‘ರೇಖೆ’ಯನ್ನು ವಿಶ್ಲೇಷಿಸಬಹುದು. ಇದಕ್ಕೆ ಉದಾಹರಣೆಯಾಗಿ ಈ ಗಜಲ್‍ನ್ನು ಪ್ರಸ್ತಾಪಿಸಬಹುದು;
ನಿರಾಸೆಯ ಮಡಿಲಲ್ಲಿ ಕನಸೊಂದು ತೂಗಿದರೆ ಸೋಲಾಗದು
ಹುತ್ತಗಟ್ಟಿದ ಚಿತ್ತದಿ ಹೊಸಬೆಳಕು ಹೊಕ್ಕರೆ ಮತ್ತೆ ಕತ್ತಲಾಗದು
ಸೂಜಿ ನೂರು ಚೂರುಗಳ ಸೇರಿಸಿ ಹೊಲಿದಾಗ ಹರವು ಕೌದಿ
ಮೊನಚಿಗೆ ಮೈಯೊಡ್ಡಿದರೂ ಖುಷಿಯ ನಡೆಗೆ ನೋವಾಗದು
ಬಿರುಗಾಳಿಯಾಗಿ ಬಂದೆರಗುವ ದುಗುಡಗಳೆಲ್ಲ ಯಾವ ಲೆಕ್ಕ
ಎದೆಗೆ ಬೇರಿಳಿಸಿ ಬೆಳೆದು ನಿಂತಿರುವ ಗಿಡವೆಂದಿಗೂ ಉರುಳದು
ಜೇನುಹುಳ ಅಲೆದಲೆದು ಸಿಹಿಗೂಡನು ಕಟ್ಟುವುದು ತಾನೇ
ಹೊರಗಂಟಿದ ನಂಜಿಗೆ ಅಂತರಂಗದ ಸವಿಯು ಬರಡಾಗದು
ಸಾವಿರ ದಾರಿಗಳು ಕರೆದರೇನು ನನ್ನ ಗುರಿ ನೀನು ಮಾತ್ರ
ಸರಳ ‘ರೇಖೆ’ಯ ಪಯಣವಿದು ಎಂದಿಗೂ ಹಿಮ್ಮರಳದು
ಹೀಗೆ ದುಗುಡ-ದುಮ್ಮಾನದ ನಿವೇದನೆಯಿದ್ದರೂ ಕೊನೆಗೆ ಆಶಾವಾದದ ಧ್ವನಿ ಹೊಮ್ಮಿಸುವಲ್ಲಿಯೇ ಇಲ್ಲಿಯ ಗಜಲ್‍ಗಳ ಭಿನ್ನತೆ ಇದೆ. ಇಲ್ಲಿಯ ಗಜಲ್‍ಗಳು ಪ್ರೀತಿಪೂರ್ವಕ ತಕರಾರು ಎತ್ತುತ್ತವೆ. ನೋಯಿಸಿದ್ದಕ್ಕೆ ಸಿಟ್ಟಿಲ್ಲ, ಆಕ್ರೋಶವಿಲ್ಲ, ದ್ವೇಷದ ಹೊಗೆಯಾಡುವುದಿಲ್ಲ. ಸೌಜನ್ಯದ ಪ್ರತಿಕ್ರಿಯೆಯ ಪದಗಳಲ್ಲಿಯೇ ಬಹುದೊಡ್ಡ ಸವಾಲೆಸೆಯುತ್ತವೆ.
‘ಎದೆಕಾಡ ಬಿದಿರಮೇಳೆ ನಿನಗಾಗಿ ತುಡಿದು ಕೊಳಲಾಗಿತ್ತು, ಒಲವ ನಾದ ಹೊಮ್ಮಿಸದೇ ಮುರಿದುಹೋದೆ ನೀನು’ ಎಂಬ ತಕರಾರು ಕನ್ನಡದ ಗಜಲ್‍ಗೆ ಹೊಸದೊಂದು ಪರಿಭಾಷೆಯನ್ನೇ ನೀಡಿದೆ ಎಂದೆನ್ನಿಸುತ್ತದೆ. ‘ರಕ್ತಬೀಜಾಸುರರು ತಲೆಎತ್ತಿ ಮೆರೆದು ನೆಲವೀಗ ನರಕ, ಸುರಿಸಿದ ಪ್ರೀತಿಮಳೆಯ ಕುರುಹಿರದೆ ಮುಗಿಲು ನರಳಿದೆ’ ಎಂಬ ಸಾಲುಗಳು ಪ್ರಕೃತಿಯ ವಕ್ತಾರಿಕೆ ಪಾತ್ರವನ್ನು ನಿಭಾಯಿಸಿವೆ.
‘ರೇಖೆ’ಯ ಅರೆಗಳಿಗೆ ಬಿಟ್ಟಿರದ ನಿನ್ನದಿಂದು ಅರಿವಿರದ ಬದುಕು, ಕೊನೆಗೂ ತೊರೆದೇ ಹೋದೆಯೆಂದು ದ್ವೇಷಿಸಲಾರೆ ನಿನ್ನನು’ ಎನ್ನುವ ನಿವೇದನೆ ನೋವಿನ ನಡುವೆಯೂ ಮನುಷ್ಯ ಸಕಾರಾತ್ಮಕತೆಯ ಕಡೆಗೆ ಹೊರಳಿಕೊಳ್ಳುವ ಅನಿವಾರ್ಯತೆಯನ್ನು ಮನಗಾಣಿಸುತ್ತದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದೊಂದಿಗೆ ಪ್ರಕಟಿತವಾದ ಈ ಸಂಕಲನ ರೇಖಾ ಭಟ್ಟ ಹೊನ್ನಗದ್ದೆ ಅವರ ಕಾವ್ಯಪ್ರತಿಭೆಯ ವೈಶಿಷ್ಟ್ಯತೆಗೆ ಕನ್ನಡಿ ಹಿಡಿಯುತ್ತದೆ. ಹೊಸ ಕಾಲ ಎದುರುಗೊಳ್ಳಬಹುದಾದ ಸವಾಲು ಮತ್ತು ಆ ಕಾರಣಕ್ಕಾಗಿಯೇ ಅನುಭವಿಸಬಹುದಾದ ಸಂಕಟಗಳನ್ನು ಹಿಡಿದಿಟ್ಟು ಹೊಸ ಪ್ರಜ್ಞೆ ಮೂಡಿಸುವ ಜವಾಬ್ದಾರಿ ಕನ್ನಡ ಕಾವ್ಯ ಹೊತ್ತುಕೊಳ್ಳಬೇಕಿದೆ.
ಸರಕು ಸಂಸ್ಕೃತಿಯೇ ವಿಜೃಂಭಿಸುತ್ತಿರುವ ನಿರ್ಭಾವುಕ ಜಗತ್ತಿನೊಳಗೆ ಭಾವುಕ ಪ್ರಪಂಚದ ಆಶಾವಾದಿ ನೆಲೆಗಳನ್ನು ಕಾಣಿಸುವ ಹೊಸ ಅಭಿವ್ಯಕ್ತಿ ಮಾದರಿಗಳು ಮುನ್ನೆಲೆಗೆ ಬರಬೇಕಿದೆ. ಅಂಥ ವಿರಳ ಅಭಿವ್ಯಕ್ತಿ ಮಾದರಿಯಾಗಿ ರೇಖಾ ಅವರ ಗóಜಲ್ ಶೈಲಿ ವಿಶೇಷವೆನ್ನಿಸುತ್ತದೆ. ಈ ಕಾರಣಕ್ಕಾಗಿಯೇ ಅವರ ಕಾವ್ಯದ ಧಾಟಿ ಆಪ್ತವಾಗುತ್ತದೆ. ಸದ್ಯದ ಜಗತ್ತನ್ನು ಸ್ವಯಂಸ್ಫೂರ್ತಿಯೊಂದಿಗೆ ಎದುರುಗೊಳ್ಳಲು ನೆರವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಚಳಿಗಾಲದ ಎರಡು ಜೀವರಸಗಳು

- ಜಿ. ದೇವೂ ಮಾಕೊಂಡ
ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.
ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!
ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.
ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?
ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?
ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ನಟಿಸುತ್ತೇನೆ ಈ ಚಿತ್ರಶಾಲೆಯಲ್ಲಿ

- ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು
ದುಗುಡದ ದನಿಗಳೆಲ್ಲ
ಹುದುಗಿ ಹೋಗಲಿ
ನನ್ನೊಳಗೆ
ದುಃಖದ ನದಿಗಳೆಲ್ಲ
ಹಾದು ಹೋಗಲಿ..
ನಾನು ಕೂಡ ನಿನ್ನಂತೆ
ನಗೆಯ ನಟಿಸುತ್ತೇನೆ..
ನಿರಾಕಾರ ಕ್ಯಾನ್ವಾಸಿನ ಮೇಲೆ
ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ
ಒಮ್ಮೊಮ್ಮೆ ಬೇಡದ್ದೂ..
ಯಾರ್ಯಾರದ್ದೊ ಇಷ್ಟಾನಿಷ್ಟದಂತೆ!
ಗತದ ಘೋರ ಪಾತಕವನ್ನು
ತರಚು ಗಾಯವೆಂದು ಕರೆದು,
ಹೋದಲ್ಲಿ, ಬಂದಲ್ಲಿ
ಅದನ್ನೇ ಜಪಿಸಿ ತಳವೂರುತ್ತೇನೆ…
ಹುಸಿ ನೆಮ್ಮದಿಯ ನಿಟ್ಟುಸಿರ
ಹೊರಸೂಸಿ..
ಅತ್ಯಾಸೆಯ ರೆಕ್ಕೆಗಳ
ಮುರಿದುಕೊಳ್ಳುತ್ತೇನೆ
ದಿಗಂತದೆಡೆಗೆ ಹಾರುವ
ಕನಸುಗಳ ಸುಟ್ಟು,
ಅದರ ಬೂದಿಯನ್ನೆ
ವಿಭೂತಿಯಾಗಿ ಬಳಿದು,
ವೈರಾಗ್ಯದ
ಮಾತುಗಳನುದುರಿಸುತ್ತಾ..
ಸುತ್ತಲಿನ ಸತ್ತ ಮೆದುಳುಗಳೊಳಗೆ ನಿರಾಕಾರವಾದವುಗಳೆನೇನೋ ಮೊಳೆತು,
ಬೇರು ಬಿಟ್ಟು, ಆಳಕ್ಕಿಳಿದು
ಕೈಕೊಡಲಿಗಳಾಗಿ
ಕತ್ತು ಕತ್ತರಿಸುವ ಫರ್ಮಾನು
ಹೊರಡಿಸುವಾಗಲೂ
ನಿಶ್ಚಿಂತೆಯ ನಟಿಸುತ್ತೇನೆ!
ಮಹನೀಯನ ಚಿತ್ರಗಳು
ಬೇಕಾದಂತೆ ಬರೆಯಲ್ಪಡುವ,
ಬಿಕರಿಯಾಗುವ, ಚಿತ್ರಶಾಲೆಯಲ್ಲಿ;
ಜೀ..ಹುಜೂರ್..ಉಸುರುತ್ತಾ,
ನಿಂತ ಮೂಢರ ಗುಂಪುಗಳೊಳಗೆ
ಕಾಲ ಸವೆಸುತ್ತೇನೆ. (ಕವಿ:ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅಲರ್ಟ್..!

- ಸುನೀತ ಕುಶಾಲನಗರ
ನದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.
ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .
ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.
ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.
ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು
ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!
ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.
ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಮುಖ್ಯಮಂತ್ರಿ ಪದಕ ; ಮುಖ್ಯ ಪೊಲೀಸ್ ಪೇದೆ ಕೊಟ್ರೇಶ್ ಅಯ್ಕೆ
-
ದಿನದ ಸುದ್ದಿ6 days ago
ದಾವಣಗೆರೆ ವಿ.ವಿ 12ನೇ ಘಟಿಕೋತ್ಸವ | ವಿಶ್ವವಿದ್ಯಾಲಯಗಳಲ್ಲಿ 2500 ಹುದ್ದೆಗಳು ಖಾಲಿ ಇವೆ : ಸಚಿವ ಡಾ.ಎಂ.ಸಿ. ಸುಧಾಕರ್
-
ದಿನದ ಸುದ್ದಿ7 days ago
ಜನಪದ ಕಲೆ ಗ್ರಾಮೀಣ ಜನರ ಜೀವನಾಡಿ : ಪ್ರಾಚಾರ್ಯೆ ಡಾ.ಶಶಿಕಲಾ.ಎಸ್
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂರ ಕಡೆಗಣನೆ, ಆಸ್ತಿ ಹಕ್ಕು ಕಸಿದುಕೊಳ್ಳುವ ಅಸ್ತ್ರ: ಸೈಯದ್ ಖಾಲಿದ್ ಅಹ್ಮದ್
-
ದಿನದ ಸುದ್ದಿ4 days ago
ದಾವಣಗೆರೆ | ನಾಳೆ ಡಾ.ಬಾಬು ಜಗಜೀವನ ರಾಂ 118ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ4 days ago
ಹಂಪಿ ವಿಶ್ವವಿದ್ಯಾಲಯದ 33 ನೇ ನುಡಿಹಬ್ಬ ; ನಾಡೋಜ ಗೌರವ ಪದವಿ ಪ್ರದಾನ
-
ದಿನದ ಸುದ್ದಿ4 days ago
ಮೇ11 ರಂದು ಗ್ರಾಮ ಪಂಚಾಯತಿ ಚುನಾವಣೆ
-
ದಿನದ ಸುದ್ದಿ7 days ago
ದಾವಣಗೆರೆ | ವೃತ್ತಿಪರ ಕೋರ್ಸ್ಗಳಿಗೆ ಅರ್ಜಿ ಆಹ್ವಾನ