ದಿನದ ಸುದ್ದಿ
ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರೀಡಂ ಪಾರ್ಕಿನಲ್ಲಿ ಪಿಂಚಣಿ ವಂಚಿತ ನೌಕರರ ಪ್ರತಿಭಟನೆ
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ಕೂಗು ಒಂದು ಕಡೆಯಾದರೆ ಅದೇ ಶಾಲೆಗಳಲ್ಲಿ ದುಡಿಯುತ್ತಿರುವ ಸುಮಾರು ನಾಲವತ್ತು ಸಾವಿರಕ್ಕೂ ಅಧಿಕ ಶಿಕ್ಷಕರು,ಹಾಗೂ ನೌಕರರಿಗೆ ನಿವೃತ್ತಿ ಜೀವನದ ನಂತರ ದೊರೆಯಬೇಕಾದ ಪಿಂಚಣಿ ಹಾಗೂ ಮತ್ತಿತರ ಪ್ರಮುಖ ಸೌಲಭ್ಯಗಳನ್ನು ನೀಡದೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇತ್ತೀಚೆಗಷ್ಟೇ ವೇತನಾನುದಾನಕ್ಕೊಳಪಟ್ಟಿರುವ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನುದಾನ ರಹಿತ ಅವಧಿಯಲ್ಲಿ ಅನೇಕ ವರ್ಷಗಳ ಕಾಲ ವೇತನವಿಲ್ಲದೆ ದುಡಿದ ಸೇವಾವಧಿಯನ್ನು ಪರಿಗಣಿಸಿ ವೇತನ ನಿಗದಿಗೊಳಿಸುವ ಸಲುವಾಗಿ ವಿಧಾನ ಪರಿಷತ್ತಿನ ಈಗಿನ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಸಮೀತಿ ನೀಡಿರುವ ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿ ಹಾಗೂ ನಿಶ್ಚಿತ ಪಿಂಚಣಿ ಯೋಜನೆ ಜಾರಿಗಾಗಿ ಆಗ್ರಹಿಸಿ ನಗರದ ಪ್ರೀಡಂ ಪಾರ್ಕಿನಲ್ಲಿ ಅನುದಾನಿತ ಪಿಂಚಣಿ ವಂಚಿತ ನೌಕರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿರಿಸಿದೆ.
ಆದರೆ ಸರಕಾರ ಮಾತ್ರ ಇವರ ಕೂಗನ್ನು ಕೇಳಿಯೂ ಕೇಳದಂತೆ ವರ್ತಿಸುತ್ತಿರುವದಕ್ಕೆ ಹೋರಾಟಗಾರರು ತೀವೃ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ 1-4-2006 ನಂತರ ಅನುದಾನಕ್ಕೊಳ್ಪಟ್ಟು ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾ ಸಂಸ್ಥೆಗಳ ಸುಮಾರು ನಾಲವತ್ತು ಸಾವಿರಕ್ಕೂ ಹೆಚ್ಚು ನೌಕರರಿರಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಯಾಗಬೇಕು. ವೇತನಾನುದಾನಕ್ಕೊಳಪಟ್ಟು ಕೇವಲ ಬೆರಳೆಣಿಕೆಯಷ್ಟು ವರ್ಷ ಮಾತ್ರ ವೇತನ ಪಡೆದು ಈಗ ಕೊನೆ ತಿಂಗಳ ಸಂಬಳವನ್ನಷ್ಟೇ ಪಡೆದ ಸಾವಿರಾರು ನೌಕರರು ಬರಿಗೈಲಿ ನಿವೃತ್ತರಾಗಿದ್ದು ಅವರ ಸಂಧ್ಯಾಕಾಲದ ಆಸರಗೆ ಬಿಡಿಗಾಸು ಇಲ್ಲದೇ ಪರದಾಡುತ್ತಿದ್ದಾರೆ.ಅವರ ನಿವೃತ್ತಿ ಜೀವನ ನೆಮ್ಮದಿಯಾಗಿರಬೇಕೆಂದರೆ ಸರ್ಕಾರ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.
ನ್ಯಾಯಯುತವಾಗಿರುವ ನಮ್ಮ ಈ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಗುರುವಾರ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಪ್ರೀಡಂ ಪಾರ್ಕವರೆಗೆ ರಾಜ್ಯದ ಸುಮಾರು 20000 ಸಾವಿರ ಅನುದಾನಿತ ಪಿಂಚಣಿ ವಂಚಿತ ನೌಕರರು ಬೃಹತ್ ರ್ಯಾಲಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಆದರೂ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ ಈ ಕಾರಣದಿಂದ ಈಗಾಗಲೇ ಸಾಕಷ್ಟು ಹೋರಾಟಗಳನ್ನು ಮಾಡಿ ರೋಸಿ ಹೋಗಿರುವ ನಾವು ಅ.15ರಿಂದ ಅನುದಾನಿತ ವಿದ್ಯಾ ಸಂಸ್ಥೆಗಳ ಸಾವಿರಾರು ಶಿಕ್ಷಕರು,ನೌಕರರು ಇದೇ ಪ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹದ ಮಾಡುವುದರ ಜತೆ ಹೋರಾಟವನ್ನು ತೀವೃಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಅನುದಾನಿತ ಪಿಂಚಣಿ ವಂಚಿತ ಸಂಘದ ಪಾದಾಧಿಕಾರಿಗಳು, ಪಿಂಚಣಿ ಹಾಗೂ ಕಾಲ್ಪನಿಕ ವೇತನ ವಂಚಿತ ಸಾವಿರಾರು ಶಿಕ್ಷಕರು,ನೌಕರರು ಪಾಲ್ಗೊಂಡಿದ್ದರು. ನೌಕರರ ಈ ಹೋರಾಟಕ್ಕೆ ರಾಜ್ಯದ ಎನ್‍ಪಿಎಸ್ ನೌಕರರ ಸಂಘಟನೆಯೂ ಸೇರಿದಂತೆ ನಾನಾ ಶಿಕ್ಷಕ,ಹಾಗೂ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿವೆ.

ದಿನದ ಸುದ್ದಿ
ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
ಸುದ್ದಿದಿನ,ದಾವಣಗೆರೆ:ಭಾರತೀಯ ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಹೊಸ ಸೌಲಭ್ಯವನ್ನು ಆಯೋಜಿಸಲಾಗಿದೆ. ಈ ಸೌಲಭ್ಯದಿಂದ ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ಪೀಡ್ ಪೊಸ್ಟ್ , ಪಾರ್ಸಲ್ ಸೇರಿದಂತೆ ವಿವಿಧ ಅಂಚೆ ಸೇವೆಗಳನ್ನು ಮನೆಯಿಂದಲೇ ಬುಕ್ ಮಾಡುವ ಅವಕಾಶವನ್ನು ಪಡೆಯಬಹುದು. ಇದರ ಮೂಲಕ ಅಂಚೆ ಕಚೇರಿಯಲ್ಲಿ ಸಾಲಿನಲ್ಲಿ ನಿಲುವ ಅನಿವಾರ್ಯತೆ ಕಡಿಮೆಯಾಗುತ್ತದೆ ಹಾಗೂ ಸಮಯದ ಉಳಿತಾಯವಾಗುತ್ತದೆ.
ಸೇವೆಯನ್ನು ಈ ಮೂಲಕ https://app.indiapost.gov.in/customer.selfservice/home ಪೂರ್ಣಗೊಳಿಸಿದ ನಂತರ ಸೃಷ್ಟಿಯಾಗುವ ಲೇಬಲ್, ಕ್ಯೂಆರ್ ಅನ್ನು ಮುದ್ರಿಸಿ ಹತ್ತಿರದ ಯಾವುದೇ ಅಂಚೆ ಕಚೇರಿಯಲ್ಲಿ ಸ್ಪೀಡ್ ಫೆÇೀಸ್ಟ್, ಪಾರ್ಸೆಲ್ ಅನ್ನು ಬುಕ್ಕಿಂಗ್ ಸಂಖ್ಯೆಯ ಮೂಲಕ ಹಸ್ತಾಂತರಿಸಬಹುದು. ಸಾರ್ವಜನಿಕರು ಈ ನವೀನ ಡಿಜಿಟಲ್ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಚಂದ್ರಶೇಖರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ 26 ಕೊನೆಯ ದಿನವಾಗಿದೆ.
ವಿಶೇಷ ಘಟಕ ಯೋಜನೆಯಡಿ 12 ತಿಂಗಳ ಅಪ್ರೆಂಟಿಸ್ ತರಬೇತಿಗಾಗಿ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪೂರ್ಣಗೊಳಿಸಿರುವ ಹಾಗೂ ಕಂಪ್ಯೂಟರ್ ಜ್ಞಾನವಿರುವ, ಕನ್ನಡ ಭಾಷೆ ಬಳಸಲು ಪ್ರಬುದ್ಧತೆ ಇರುವ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಅರ್ಜಿ ಲಕೋಟೆಯ ಮೇಲೆ ಕಡ್ಡಾಯವಾಗಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ನೀಡುವ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಎಂದು ನಮೂದಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು. ಆಯ್ಕೆಯಾಗಿ ತರಬೇತಿಗೆ ಹಾಜರಾಗುವ ಸಂದರ್ಭದಲ್ಲಿ ಮೂಲ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಭ್ಯರ್ಥಿಗಳು ಪದವಿಯ ಎಲ್ಲ ವರ್ಷಗಳ ಅಂಕಪಟ್ಟಿಗಳು, ಸ್ನಾತ್ತಕೋತ್ತರ ಪದವಿಯ ಎಲ್ಲ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅಂಕಪಟ್ಟಿಯನ್ನು ನಿರೀಕ್ಷಿಸಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ತರಬೇತಿಯ ಅವಧಿ ವೇಳೆ ಮಾಹೆಯಾನ 15,000 ರೂಗಳ ಶಿಷ್ಯ ವೇತನ ನೀಡಲಾಗುವುದು. ತರಬೇತಿಯು 2026 ರ ಜನವರಿಯಿಂದ ಡಿಸೆಂಬರ್‍ವರೆಗೆ 12 ತಿಂಗಳ ಅವಧಿಯದಾಗಿದ್ದು, ತಾತ್ಕಾಲಿಕವಾಗಿರುತ್ತದೆ. ತರಬೇತಿ ಮುಗಿದ ನಂತರ ಮುಂದುವರೆಸಲು ಅಥವಾ ಖಾಯಂಗೊಳಿಸಲು ಯಾವುದೇ ಅವಕಾಶ ಇರುವುದಿಲ್ಲ.
ತರಬೇತಿಯ ಅವಧಿಯಲ್ಲಿ ತರಬೇತಾರ್ಥಿಗಳು ಬೇರೆ ಉದ್ಯೋಗ ಮಾಡುವಂತಿಲ್ಲ. ತರಬೇತಿಯ ಅವಧಿಯ ಮಧ್ಯದಲ್ಲಿ ಬಿಟ್ಟು ಹೋದರೆ, ಮೂಲ ದಾಖಲಾತಿಗಳನ್ನು ಅವಧಿಗೆ ಮುನ್ನ ಹಿಂದಿರುಗಿಸುವುದಿಲ್ಲ. ಒಮ್ಮೆ ಫಲಾನುಭವಿಯಾದವರನ್ನು ಈ ಯೋಜನೆಯಡಿ ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಅವಕಾಶವಿರುವುದಿಲ್ಲ ಹಾಗೂ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ಇಲ್ಲಿ, ಮೊ.9480841218 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್‌ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400.00 ರಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್‌ಇಎಂಎಲ್ (NEML) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್(FRUITS Portal) ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ6 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
-
ದಿನದ ಸುದ್ದಿ3 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ2 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ2 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 hours agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ

