Connect with us

ದಿನದ ಸುದ್ದಿ

ಪರಿಶಿಷ್ಟರ ಕುಂದುಕೊರತೆ ಸಭೆ : ಜಿಲ್ಲೆಯಲ್ಲಿ ಅಸ್ಪೃಷ್ಯತೆ ನಿವಾರಣೆಗೆ ಕ್ರಮ ಕೈಗೊಳ್ಳಲು ಎಸ್.ಪಿ. ಸಿ.ಬಿ. ರಿಷ್ಯಂತ್ ಭರವಸೆ

Published

on

ಸುದ್ದಿದಿನ,ದಾವಣಗೆರೆ : ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಜಾತೀಯತೆ ಇನ್ನೂ ಜೀವಂತವಾಗಿದೆ. ಹಲವು ದೇವಸ್ಥಾನಗಳಲ್ಲಿ ಇಂದಿಗೂ ಪ್ರವೇಶವಿರುವುದಿಲ್ಲ. ಕ್ಷೌರದಂಗಡಿಗಳಲ್ಲಿ ಈ ಜಾತಿಗಳರವರಿಗೆ ಕ್ಷೌರ ಮಾಡಲು ನಿರಾಕರಿಸುತ್ತಾರೆ.

ಹೋಟೆಲ್‍ಗಳಲ್ಲಿ ಸವರ್ಣೀಯರೊಂದಿಗೆ ಟೀ, ಕಾಫಿಯನ್ನು ಕೊಡಲು ನಿರಾಕರಿಸುತ್ತಾರೆ. ದೇವದಾಸಿ ಪದ್ಧತಿ, ಬೇವಿನ ಉಡುಗೆ ಆಚರಣೆಯಂತಹ ಅನಿಷ್ಟ ಪದ್ಧತಿಗಳಿಗೆ ಪರಿಶಿಷ್ಟ ಜಾತಿ ಪಂಗಡದವರು ಇಂದಿಗೂ ಬಲಿಯಾಗುತ್ತಿದ್ದು, ಅವುಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಈ ಜನಾಂಗಗಳ ಪರವಾಗಿ ನಿಲ್ಲಬೇಕೆಂದು ಎಸ್.ಸಿ., ಎಸ್.ಟಿ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರುಗಳು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯಗಳು.

ಜಗಳೂರು ತಾಲ್ಲೂಕಿನ ಮುಖಂಡ ಸತೀಶ್ ಮಾತನಾಡಿ, ತಾಲ್ಲೂಕಿನ ಮಡ್ಡರಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಹಬ್ಬದ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಬೇವಿನುಡಿಗೆ, ನಾಲಿಗೆಗೆ ತಂತಿ ಸಿಕ್ಕಿಸಿಕೊಳ್ಳುವಂತಹ ಆಚರಣೆಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದವರು ಹೆಚ್ಚಾಗಿ ಅನುಸರಿಸುತ್ತಿದ್ದು, ಅವರುಗಳಿಗೆ ಅಧಿಕಾರಿಗಳ ಮಟ್ಟದಲ್ಲಿ ಸೂಕ್ತ ತಿಳುವಳಿಕೆ ನೀಡಿ ಇಂತಹ ಅನಿಷ್ಟ ಪದ್ಧತಿಗಳಿಂದ ಹೊರ ತರಲು ಸರ್ಕಾರ ಪ್ರಯತ್ನಿಸಲಿ.

ಹಾಗೂ ಇಂತಹ ಆಚರಣೆ ಕೈಗೊಳ್ಳಲು ಒತ್ತಾಯಿಸುವವರನ್ನು ಶಿಕ್ಷಿಸಬೇಕು. ಮತ್ತು ಹೊಸಗೆರೆ ಹಾಗೂ ಪಲ್ಲಾಗಟ್ಟೆ ಗ್ರಾಮದಲ್ಲಿರುವ ಬಾರ್ ಅನ್ನು ಬೇರೆ ಕಡೆ ಸ್ಥಳಾಂತರಿಸಬೇಕು. ಎಸ್.ಸಿ ಮತ್ತು ಎಸ್.ಟಿ ಹಾಸ್ಟೆಲ್ ಬಳಿ ದೊಡ್ಡ ಚರಂಡಿ ಹರಿಯುತ್ತಿದ್ದು ಸೊಳ್ಳೆ ಕಾಟ ಹೆಚ್ಚಾಗಿದೆ.

ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹಾಗೂ ಹಾಸ್ಟೆಲ್ ಬಳಿ ಪುಂಡ ಪೋಕರಿಗಳ ಕಾಟ ಹೆಚ್ಚಾಗಿದ್ದು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಎಸ್.ಪಿ. ಸಿ.ಬಿ.ರಿಷ್ಯಂತ್ ಅವರು ಪ್ರತಿಕ್ರಿಯಿಸಿ, ಇಂತಹ ಆಚರಣೆಗಳನ್ನು ತಡೆಯಲು ಕಾನೂನಾತ್ಮಕವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಜಗಳೂರು ಮುಖಂಡ ಹಾಲೇಶ್ ಬಿಳಿಚೋಡು ಮಾತನಾಡಿ, ಮೆದಗಿನಕೆರೆ, ಕೊರಟಿಗೆರೆ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಜೂಜು ಹಾವಳಿ ಹೆಚ್ಚಾಗಿದೆ. ಉಚ್ಚಂಗಿದುರ್ಗ ದೇವಸ್ಥಾನದಲ್ಲಿ ನಡೆಯುವ ಕಾರಹುಣ್ಣಿಮೆ ಹಬ್ಬಕ್ಕೆ ದೇವದಾಸಿಯರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದು, ನಮ್ಮ ಭಾಗದಿಂದ ಹೆಚ್ಚು ಜನ ಹೋಗುತ್ತಿದ್ದಾರೆ. ಇದನ್ನು ತಡೆಯಬೇಕು. ಬಿಳಿಚೋಡು ಗ್ರಾಮದ ಸರ್ಕಲ್ ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಮನವಿ ಮಾಡಿದರು.

ಹರಿಹರ ತಾಲ್ಲೂಕಿನ ಮುಖಂಡರು ಮಾತನಾಡಿ, ತಾಲ್ಲೂಕಿನಲ್ಲಿ ವಾಹನ ಸಂಚಾರ ಹೆಚ್ಚಿದ್ದು ಟ್ರಾಫಿಕ್ ಸ್ಟೇಷನ್ ಆರಂಭಿಸಬೇಕು. ಹಾಗೂ ಅಂಬೇಡ್ಕರ್ ಭವನದಲ್ಲಿ ಕೆಎಎಸ್, ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸ್ಥಾಪಿಸಬೇಕು. ಬಾನುವಳ್ಳಿ ಗ್ರಾಮದಲ್ಲಿ 12 ಜನ ಮಾಜಿ ದೇವದಾಸಿಯರಿದ್ದು, ಅವರಿಗೆ ಮನೆ ಮಂಜೂರಾದರೂ ಇನ್ನೂ ಮನೆ ಕಟ್ಟಿಕೊಟ್ಟಿಲ್ಲ. ಆದಷ್ಟು ಬೇಗ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.

ಎಸ್.ಪಿ ಮಾತನಾಡಿ, ಸಂಚಾರ ಪೊಲೀಸ್ ಠಾಣೆ ಮಂಜೂರಾತಿಗೆ ವಿವಿಧ ಪ್ರಕ್ರಿಯೆಗಳಿರುವುದರಿಂದ ತಡವಾಗುತ್ತದೆ. ಆದ್ದರಿಂದ ಟ್ರಾಫಿಕ್ ಪಾಯಿಂಟ್ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ನ್ಯಾಮತಿ ತಾಲ್ಲೂಕಿನ ಮುಖಂಡ ರಂಗನಾಥ.ಎ.ಕೆ ಮಾತನಾಡಿ, ಒಂದೂವರೆ ಎಕರೆ ಪ್ರದೇಶದಲ್ಲಿ ಹಿಂದು ಸ್ಮಶಾನ ಭೂಮಿ ನಿರ್ಮಿಸಿದ್ದು, ಪರಿಶಿಷ್ಟ ಜಾತಿಯ ಹೆಣ ಸುಡಲು ಸ್ಮಶಾನಕ್ಕೆ ಹೋದರೆ ಸುಡಲು ಅನುಮತಿ ನೀಡುವುದಿಲ್ಲ.

ಈ ಹಿಂದೆ ಅಂತ್ಯಕ್ರಿಯೆ ಮಾಡಲು ಒಳಗಡೆ ಪ್ರವೇಶಿಸಲು ಅವಕಾಶ ಕೊಡದೆ, ಶವ ಹೊರ ಹಾಕಿರುವ ಘಟನೆ ನಡೆದಿದೆ. ಇದರಿಂದ ಸಾಕಷ್ಟು ಬೇಸತ್ತಿದ್ದೆವೆ ಎಂದು ಅಳಲು ತೋಡಿಕೊಂಡರು.

ಎಸಿ ಮಮತ ಹೊಸಗೌಡರ್ ಮಾತನಾಡಿ, ಮನುಷ್ಯ ಬದುಕಿದ್ದಾಗ ಸಮಾನತೆಯಿಂದ ಬದುಕಲ್ಲ, ಸತ್ತ ಮೇಲಾದರೂ ಸಮಾನತೆಯಿಂದ ಇರಬೇಕು ಎಂಬ ಆಶಯದೊಂದಿಗೆ ಇರುವ ಸುತ್ತೋಲೆ ಮೇರೆಗೆ ಹಿಂದು ರುದ್ರ ಭೂಮಿ ಒದಗಿಸಲಾಗಿದೆ ಎಂದರು. ಎಸ್.ಪಿ ಪ್ರತಿಕ್ರಿಯಿಸಿ ಭೂಮಿ ಒದಗಿಸಿರುವುದು ಅಂತ್ಯಕ್ರಿಯೆ ಮಾಡಲೆಂದು. ಈ ರೀತಿ ಭೇದ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.

ಮಲ್ಲಹಳ್ಳಿ ಗ್ರಾಮದಲ್ಲಿ ಹಬ್ಬ ಹರಿದಿನಗಳಲ್ಲಿ ಪರಿಶಿಷ್ಟರು ಊರ ಒಳಗೆ ಚಪ್ಪಲಿ ಹಾಕಿಕೊಂಡು ಹೋಗುವುದನ್ನು ಅಲ್ಲಿಯ ಗ್ರಾಮಸ್ಥರು ನಿಷೇಧಿಸಿದ್ದು, ಅಪ್ಪಿತಪ್ಪಿ ಒಳ ಹೋದರೆ ಜಾತಿ ನಿಂದನೆ ಮಾಡುತ್ತಾರೆ. ಈ ಗ್ರಾಮದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು, ಐಪಿಎಲ್ ಬೆಟ್ಟಿಂಗ್ ದಂದೆ ಹೆಚ್ಚಾಗಿದೆ. ದಲಿತ ಕುಟುಂಬದ ಮನೆಗೆ ಬೆಂಕಿ ಹಚ್ಚಿದ್ದು, ಸೂಕ್ತ ತನಿಖೆ ನಡೆಸಬೇಕು.

ದಾವಣಗೆರೆ ನಗರಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಕಾಣದಂತೆ ಫ್ಲೆಕ್ಸ್ ಕಟ್ಟಲಾಗುತ್ತಿದ್ದು, ಇದರಿಂದ ಪ್ರತಿಮೆ ಮರೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕು. ಹೀಗೆ ಅನೇಕ ಕುಂದು ಕೊರತೆಗಳನ್ನು ಸ್ಥಳೀಯ ಮುಖಂಡರು ಹೇಳುವ ಮೂಲಕ ತಮ್ಮ ಅಳಲು ತೋಡಿಕೊಂಡರು.
ನೀರ್ಥಡಿ ಗ್ರಾಮದಲ್ಲಿ ಪೌರಾಣಿಕ ಇತಿಹಾಸ ಹೊಂದಿರುವ ರಂಗನಾಥಸ್ವಾಮಿ ದೇವಾಲಯದಲ್ಲಿ ಇಂದಿಗೂ ಮಾದಿಗರನ್ನು ಒಳಗಡೆ ಪ್ರವೇಶಿಸಲು ಬಿಡದೆ ದೌರ್ಜನ್ಯವೆಸಗುತ್ತಿದ್ದು, ಅವರಿಗೆ ರಕ್ಷಣೆ ಒದಗಿಸಬೇಕು.

ತಾನು ಹುಟ್ಟಿದ್ದು ಇಲ್ಲೆ ಆದರೂ ಇದುವರೆಗೂ ದೇವಸ್ಥಾನದ ಒಳಗಡೆ ಪ್ರವೇಶಿಸಲಾಗಿಲ್ಲ ಎಂದು ಮಂಜುನಾಥ್ ಎಂಬುವವರು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಎಸ್.ಪಿ. ಪ್ರತಿಕ್ರಿಯಿಸಿ ಇದು ಸತ್ಯವೇ ಆಗಿದ್ದರೆ, ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಸೂಕ್ರ ಕ್ರಮ ಕೈಗೊಳ್ಳಿ ಎಂದರು.

ಚನ್ನಗಿರಿಯ ಗೋವಿಂದಪ್ಪ ಮಾತನಾಡಿ, ಮದ್ಯದ ಅಂಗಡಿಗಳನ್ನು ಬೆಳಿಗ್ಗೆ 6 ಗಂಟೆಗೆ ತೆರೆಯುತ್ತಿದ್ದು ಇದರಿಂದ ಮಕ್ಕಳಿಗೆ, ಮಹಿಳೆಯರಿಗೆ, ಸಆರ್ವಜನಿಕರಿಗೆ ತೊಂದರೆಯಾಗುತ್ತಿದ್ದು ನಿಯಮದಂತೆ ಬೆಳಿಗ್ಗೆ 10 ರ ನಂತರ ಮದ್ಯದ ಅಂಗಡಿ ತೆರೆಯಲು ಸೂಚಿಸಬೇಕೆಂದು ಮನವಿ ಮಾಡಿದರು.

ಹರಿಹರದ ಮಹಾಂತೇಶ ಮಾತನಾಡಿ, ಪರಿಶಿಷ್ಟರ ಶವಸಂಸ್ಕಾರಕ್ಕಾಗಿ 24.10 ಯೋಜನೆಯಲ್ಲಿ 5 ಸಾವಿರ ನೀಡಲಾಗುತ್ತಿದ್ದು ಶವ ಸಂಸ್ಕಾರದ ಹಣ ಬರಲು ತಡವಾಗುತಿದೆ ಎಂದರು.

ಉಪವಿಭಾಗಾಧಿಕಾರಿ ಪ್ರತಿಕ್ರಿಯಿಸಿ ಅಂತ್ಯ ಸಂಸ್ಕಾರದ ಹಣ ಸೀನಿಯಾರಿಟಿ ಪ್ರಕಾರ ಬರುತ್ತದೆ. ಹಾಗಾಗಿ ತಡವಾದರು ಬರುತ್ತದೆ ಎಂದರು.

ನ್ಯಾಮತಿಯ ರಂಗನಾಥ ಮಾತನಾಡಿ, ತಾಲ್ಲೂಕಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಹೆಚ್ಚಾಗಿದ್ದು ಇದರಲ್ಲಿ ಭಾಗವಹಿಸುವ ಯುವಕರು ಅನಾಹುತ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಸ್ಪರ್ಧೆ ನಿಲ್ಲಿಸಿ ಎಂದರು.

ಕುಂದುವಾಡ ಮಂಜುನಾಥ್ ಮಾತನಾಡಿ, ಪರಿಶಿಷ್ಟರ ಮೇಲೆ ಮುಂದುವರೆದ ಜನಾಂಗಗಳವರು ಸುಳ್ಳು ದೂರು ನೀಡುತ್ತಾರೆ. ಹಾಗಾಗಿ ತಕ್ಷಣ ಎಫ್‍ಐಆರ್ ಆಗುತ್ತದೆ. ಹಾಗಾಗದಂತೆ ತಡೆಯಿರಿ ಎಂದಾಗ ಎಸ್.ಪಿ ಅವರು ಪ್ರತಿಕ್ರಿಯಿಸಿ ದೂರು ನೀಡಿದ ಮೇಲೆ ಎಫ್.ಐ.ಆರ್ ಮಾಡಲು ಬರುವುದಿಲ್ಲ. ರಾಜಿ ಪಂಚಾಯತಿಗೆ ಅವಕಾಶವಿಲ್ಲ ಎಂದರು.

ಹಿಂಡಸಘಟ್ಟ ಹನುಮಂತಪ್ಪ ಮಾತನಾಡಿ, ಮನೋಜ್ ಎಂಬ ದಲಿತ ಯುವಕ ಅಂತರ್‍ಜಾತಿ ವಿವಾಹ ಮಾಡಿಕೊಂಡಿದ್ದು ಹುಡುಗಿ ಕಡೆಯವರು ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಹುಡುಗ ಹುಡುಗಿ ವಯಸ್ಕರರಾಗಿದ್ದು ದಲಿತ ಯುವಕನಿಗೆ ನ್ಯಾಯ ಒದಗಿಸಿ ಎಂದರು.

ಜ್ಯೋತಿಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಐಪಿಎಲ್ ಬೆಟ್ಟಿಂಗ್ ಹಾವಳಿ ಹೆಚ್ಚಾಗಿದ್ದು ನಿಯಂತ್ರಿಸಬೇಕು ಎಂದರು. ಎಸ್.ಪಿ ಅವರು ಪ್ರತಿಕ್ರಿಯಿಸಿ ಈ ಬಗೆಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಜರುಗಿಸಲಾಗುವುದು ಎಂದರು.

ಕೊನೆಯಲ್ಲಿ ಎಸ್.ಪಿ ಅವರು ಮಾತನಾಡಿ, ಯಾವುದೇ ಅಪರಾಧ ಪ್ರಕರಣಗಳು ಕಂಡುಬಂದರೆ ತಕ್ಷಣ 112 ಕ್ಕೆ ಕರೆಮಾಡಿ. ಬೇಕಿದ್ದರೆ ತಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಹೀಗೆ ಕರೆ ಮಾಡುವುದರಿಂದ ಪೊಲೀಸರು ತಕ್ಷಣ ಸ್ಪಂದಿಸುತ್ತಾರೆ ಎಂದರು.

ಹಾಗೂ ಇನ್ನೂ ಮುಂದಿನ ಸಭೆಗಳು ಮೂರು ತಿಂಗಳಿಗೊಮ್ಮೆ ನಾಲ್ಕನೆ ಶನಿವಾರ ಕಡ್ಡಾಯವಾಗಿ ನಡೆಯಲಿದ್ದು ಈ ಕುರಿತು ಪತ್ರಿಕೆ ಹೇಳಿಕೆ ನೀಡಲಾಗುವುದು. ಯಾವುದೇ ಮುಖಂಡರಿಗೆ ಕರೆ ಮಾಡಲಾಗುವುದಿಲ್ಲ. ಹಾಗಾಗಿ ಪತ್ರಿಕೆ ಸುದ್ದಿ ನೋಡಿಕೊಂಡು ಸಭೆಗೆ ಹಾಜರಾಗಿ ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮಾ, ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖ ಅಧಿಕಾರಿ ವಿಜಯ್‍ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ ಪಂಗಡಗಳ ಸಂಘಟನೆ ಮುಖಂಡರಾದ ಗುಮ್ಮನೂರು ಮಲ್ಲಿಕಾರ್ಜುನ, ಹೆಗ್ಗೆರೆ ರಂಗಪ್ಪ, ಆವರಗೆರೆ ವಾಸು, ತಿಮ್ಮಣ್ಣ, ಹನುಮಂತಪ್ಪ, ರುದ್ರೇಶ್, ಹರೀಶ್, ಸೋಮಲಾಪುರ ಹನುಮಂತಪ್ಪ, ಪಂಚಾಕ್ಷರಯ್ಯ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಕೆ.ಎಸ್.ಬಸವಂತಪ್ಪ

Published

on

ಸುದ್ದಿದಿನ,ದಾವಣಗೆರೆ:2024ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಉಚಿತ ಲ್ಯಾಪ್‌ಟಾಪ್ ವಿತರಿಸಿದರು.

ಶಾಸಕ ನಿವಾಸದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಶಾಸಕರು, ಇದೇ ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಎದುರಿಸುವ ಮೂಲಕ ಉತ್ತಮ ಅಂಕಗಳನ್ನು ಪಡೆಯುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಇಸಿಒ ಗೋವಿಂದರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಂವಿವಿ | ಸಂವಹನ ವಿದ್ಯಾರ್ಥಿಗಳಿಂದ ಹೋಳಿ ಸಂಭ್ರಮ

Published

on

ಸುದ್ದಿದಿನ,ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಆಯೋಜಿಸಿದ್ದ ಹೋಳಿ ಹಬ್ಬದ ಅಂಗವಾಗಿ ವಿಭಾಗದ ಮುಂಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಕಲರ್‌ ಹಚ್ಚುವ ಮೂಲಕ ಹೋಳಿ ಸಂಭ್ರಮ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಬಿ ಶೈಲಶ್ರೀರವರು, ಸಂಶೋಧನಾ, ಸ್ನಾತಕೋತ್ತರ ಪ್ರಥಮ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending